Friday, December 18, 2009

ಮುಡಿ ಕೊಡುತ್ತಾರಾ....

ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ, ಚಹಾ, ಕಾಫಿ ಮತ್ತು ಆಟಕ್ಕೆ ಕ್ಷಮಿಸಿ.... ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ. ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ, ಅಪ್ಪಿ ತಪ್ಪಿ ಬಂದರು ಇವರ ಧಡೂತಿ ಹೊಟ್ಟೆ ಇವರನ್ನು ಆಡಲು ಬಿಡುವದಿಲ್ಲ . ಇವರೆನಿದ್ದರು ತಿನ್ನಲು ಕುಡಿಯಲು ಯೋಗ್ಯ ಎಂದು.

140 ಜನ ಕೆಲಸ ಮಾಡುವ ಕಂಪನಿಯಲ್ಲಿ ಸುಮಾರು 20 ಜನ ಮಾತ್ರ ಕನ್ನಡಿಗರು. ಹೋಟೆಲ್ ಹೋಗುವ ಸಮಯದಲ್ಲಿ ನಟರಾಜ್ ಮಾತು ಶುರು ಹಚ್ಚಿ ಕೊಂಡರು. ನಾನು ದಿನ ಮುಂಜಾನೆ ಸುಪ್ರಭಾತ ಕೇಳುತ್ತೇನೋ ಇಲ್ಲವೋ, ಆದರೆ ದಿನ ಮುಂಜಾನೆ "ನಲ್ಲ ಇರಕ", "ಸಾಪಟಿಯ" ಎಂಬ ಶಬ್ದಗಳು ಘಂಟಾಘೋಷವಾಗಿ ನನ್ನ ಕಿವಿಗೆ ಬಂದು ಒರಗುತ್ತವೆ. ಅದ್ಯಾವ ಜನ್ಮದ ಪಾಪದ ಫಲವೋ ನಾ ಕಾಣೆ. ನಾನು ಕೆಲವೊಂದು ಸಾರಿ ಬೆಂಗಳೂರಿನಲ್ಲೇ ಇದ್ದೆನಾ?. ಎಂಬ ಸಂದೇಹ ಬಂದಿದ್ದು ಉಂಟು. ನನ್ನ ಲೀಡರ್ ಕೂಡ ಅವರೇ. ಇದಲ್ಲದೆ ನನ್ನ ಕೈ ಕೆಳಗೆ ಕೆಲಸ ಮಾಡುವ ಸಹ ಕೆಲಸಗಾರರು ಇಬ್ಬರು ಕೂಡ ಅವರೇ. ಇದಿಷ್ಟೇ ಇದ್ದಿದ್ದರೆ ಪರವಾಗಿಲ್ಲ, ಅವರು ಏನಾದರು ಕೆಲಸದ ವಿಷಯ ಮಾತನಾಡುವ ಸಮಯದಲ್ಲಿ ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಿದರೆ ಎಷ್ಟು ಕೋಪ ಬರಬೇಡ. ಆ ಸಮಯದಲ್ಲಿ ಯಾರಾದರು "ನಲ್ಲ ಇರಕ" ಎಂದರೆ ಇರಿದು ಅಲ್ಲೇ ಕೊಂದು ಬಿಡುವಷ್ಟು ಕೋಪ ಬರುತ್ತೆ.

"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಡಾ|| ರಾಜ ಹಾಡು ಕೇಳಿ ಬೆಳೆದವ ನಾನು. ಕನ್ನಡದ ಬಗ್ಗೆ ಅಪಾರ ಪ್ರೀತಿ ಎಂದ.ಆಗ ನಾವೆಲ್ಲರೂ ಅವರನ್ನು ಸಮಾಧಾನ ಮಾಡಿದೆವು.

ಜನರನ್ನು ಒಗ್ಗೂಡಿಸುವ ಒಂದು ಒಳ್ಳೆ ಕೆಲಸ ನಟರಾಜ್ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಇವರನ್ನು ಎಂ ಎಲ್ ಎ ಅನ್ನೋದು. ಈ ಸಾರಿ ಕೂಡ ಊಟಕ್ಕೆ ಬನ್ನಿ ಎಂದರು. ನಾನು ಒಲ್ಲೇ ಒಲ್ಲೇ ಎಂದೇ. ನನ್ನದು ಏನಿದ್ದರು "ವಂದೇ ಮಾತರಂ" ಎಂದು ಹೊರಟು ಹೋದರು. ಇದೇನು ವಂದೇ ಮಾತರಂ ಎಂದು ಕೇಳಿದಾಗ ತಿಳಿಯಿತು ಒಂದೇ ಮಾತು ಎಂದು ತಿಳಿಯಿತು.

ಕಡೆಗೆ ಆಯಿತು ಎಂದು ಒಪ್ಪಿಕೊಂಡ ಮೇಲೆ ಎಲ್ಲರು ಹೋಟೆಲ್ ಯಾವುದೆಂದು ತೀರ್ಮಾನ ಮಾಡಿ ಹೊರಟೆವು. ನಮ್ಮ 7 ಜನರಲ್ಲಿ ಒಬ್ಬ ಸುವೆಂದು ಆಚಾರ್ಯ ಎಂಬ ಒಬ್ಬ ಒರಿಸ್ಸಾ ಹುಡುಗ ಕೂಡ ಬಂದಿದ್ದ. ಅವನಿಗೆ ಗೊತ್ತಿದದ್ದು ಹಿಂದಿ ಮತ್ತೆ ಒರಿಸ್ಸಾ ಈಗ ಅವನು ಸ್ವಲ್ಪ ಸ್ವಲ್ಪ ಕನ್ನಡ ಕಲಿಯಲು ಶುರು ಹಚ್ಚಿಕೊಂಡಿದ್ದಾನೆ. ಅದು ಏಕೆಂದರೆ ಒಂದೆರಡು ಕನ್ನಡದ ಹುಡುಗಿಯರು ನಮ್ಮ ಕಂಪನಿಗೆ ಸೇರಿದ ಮೇಲೆ.

ಎಲ್ಲರು ಹೋಟೆಲ್ ಒಳಗೆ ಕಾಲಿಟ್ಟೆವು. ಅವನು ಮಾತ್ರ ಹುಡುಗಿಯರನ್ನು ಅತ್ತಿತ್ತ ನೋಡುತ್ತಾ ಕಾಲಿಟ್ಟ. ಅಲ್ಲಿ ಒಂದು ಹುಡುಗಿ ಪ್ಲೇಟ್ ನೋಡಿದವನೇ. ಏನೋ ತಿಳಿದವನಂತೆ "ಇಲ್ಲಿ ಮುಡಿ ಕೊಡುತ್ತಾರಾ?" ಎಂದು ಕೇಳಿದ. ನಮ್ಮೆಲ್ಲರಿಗೂ ಆಶ್ಚರ್ಯ ಆಯಿತು ಏನಿದು ಇದೇನು ತಿರುಪತಿ ನಾ ಎಂದು ಕೇಳಿದೆ. ಮತ್ತೆ ಆ ಹುಡುಗಿ ಪ್ಲೇಟ್ ತೋರಿಸಿ ಕೇಳಿದಾಗ ತಿಳಿಯಿತು ಅದು "ಕಳೆ ಪುರಿ"(ಚುರ ಮುರಿ) ಎಂದು. ನಾವೆಲ್ಲರೂ ನಕ್ಕೂ ಒಳಗೆ ಹೋದೆವು.

ಊಟಕ್ಕೆ ಆರ್ಡರ್ ಮಾಡಿದೆವು. ಊಟಕ್ಕೆ ಸಂಜೀವ್ ಬಂದಿರಲಿಲ್ಲ. ಸಂಜೀವ್ ಸುವೆಂದು ಟೀಂ ಲೀಡರ್. ಊಟ ಬಂತು. ನಾನು ಊಟಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿದೆ. ಆಗ ಸುವೆಂದು "ಲೇ ಊಟಕ್ಕೆ ಮೊದಲು ನೀರಾ" ಎಂದ . ಅದು ನೀರಾ ಅಲ್ಲ ನೀರು ಎಂದೇ. ಮತ್ತೆ ನಾನು ಅವನಿಗೆ ಊಟಕ್ಕೆ ಮೊದಲು ನೀರು ಕುಡಿದರೆ ಊಟಕ್ಕೆ ಚೆನ್ನಾಗಿ ಹೋಗುತ್ತೆ ಎಂದೇ. ಆಗ ನೋಡ ನೋಡುತ್ತಲೇ ಒಂದು ಜಗ್ ನೀರು ಕುಡಿದು ಬಿಟ್ಟ. ಲೇ ಒಂದು ಗ್ಲಾಸ್ ಅಂತ ಹೇಳಿದ್ದು ನೀನು ಒಂದು ಜಗ್ ಕುಡಿದೆಯಾ ಎಂದು ಹೇಳಿದೆ.

ಊಟದಲ್ಲಿ ನುಗ್ಗೆ ಕಾಯಿ ಸಾರು ಮಾಡಿದ್ದರು. ಆಗ ಸುವೆಂದು ನನಗೆ ನಗ್ಗೆ ಕಾಯಿ ಬೇಡ ಎಂದ. ಸದ್ಯ ಸೀಗೆ ಕಾಯಿ ಅನ್ನಲಿಲ್ಲ. ಊಟ ಮುಗಿದ ಮೇಲೆ ಎಲ್ಲರಿಗೆ ಏಳಲು ಬರಲಾರದಷ್ಟು ಹೊಟ್ಟೆ ತುಂಬಿತ್ತು. ಸುವೆಂದು ಹೊಟ್ಟೆ ಮಾತ್ರ ನೀರಿನಿಂದ ಕೊಳ್ಳ ಕೊಳ್ಳ ಎನ್ನುತಿತ್ತು. ಆಗ ಸರ್ವರ್ ಬಂದು "ಊಟ ಫಸ್ಟ್ ಟೈಮ್ ಮಾಡುತ್ತ ಇರುವದ ಎಂದು ಕೇಳಿದ". ಅದಕ್ಕೆ ನಮ್ಮ ನಟರಾಜ "ಇಲ್ಲಿ ಮೊದಲ ಬಾರಿ" ಎಂದ. ಆಗ ಸುವೆಂದು ಮಾತ್ರ ತುಂಬಾ ಅವಸರ ಮಾಡುತಿದ್ದ. ಏಕೆಂದರೆ ಅವನಿಗೆ ಒಂದು ಅರ್ಜೆಂಟ್ ಕೆಲಸ ಹೇಳಿದ್ದರು ಸಂಜೀವ್. ನಾವು ಇಂತಹ ಊಟಕ್ಕೆ ಸಂಜೀವನನ್ನು ಕರೆದು ಕೊಂಡು ಬಂದಿದ್ದರೆ ನಿನಗೆ ಕೆಲಸ ಮಾಡದಿದ್ದರೂ ನಡೆಯುತ್ತಿತ್ತು ಎಂದು ಹಾಸ್ಯ ಮಾಡುತ್ತ ಹೋಟೆಲ್ ನಿಂದ ಹೊರನಡೆದೆವು.

ಸುವೆಂದು ಅರ್ಧ ಮರ್ಧ ಕನ್ನಡದ ಜೊತೆಗೆ ಊಟ ಕೂಡ ತುಂಬಾ ಚೆನ್ನಾಗಿತ್ತು,

Wednesday, December 16, 2009

ತರ್ಲೆ ಮಂಜ(ಗ)ನ ಬಾರ್ ಪುರಾಣ!!!!

ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು.

ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ ಮಂಜ ತನ್ನ ಮಾತಿನ ವರಸೆ ಶುರು ಹಚ್ಚಿಕೊಂಡ.

ಅತ್ಯಂತ ಪ್ರಾಚೀನ ಪುರಾಣಕ್ಕೆ ಸೇರಿದ್ದು ಈ ಬಾರ್ ಪುರಾಣ. ಇದಕ್ಕೆ ಇದು.. ಇದೆ ಪುರಾಣ ಇಷ್ಟನೇ ಅಧ್ಯಾಯದಲ್ಲಿ ಇರಬಹುದೆದೆಂದು ಊಹಿಸಲು ಅಸಾದ್ಯವಾದಷ್ಟು ಪ್ರಾಚೀನ ಪುರಾಣ. ಒಂದಾನೊಂದು ಕಾಲದಲ್ಲಿ ರಣಧೀರ ಎಂಬ ರಾಜ ಇದ್ದ. ಒಂದು ದಿವಸ ತನ್ನ ಮಹಾರಾಣಿಯ ಜೊತೆಗೆ ಜಗಳವಾಡಿದ. ಅವನ ಹೆಂಡತಿ ರಾಜನ ಮೇಲೆ ತುಂಬಾ ಕೋಪಗೊಂಡು ತವರುಮನೆಗೆ ಹೊರಟುಹೋದಳು. ಆಗ ರಾಜ ಅವಳ ಯೋಚನೆಯಲ್ಲೇ ಕಾಲ ಕಳೆಯುತ್ತಾ ಹುಚ್ಚನ ಹಾಗೆ ಅಲೆದಾಡುತ್ತ ಇದ್ದಾಗ... ಅವನ ಮಂತ್ರಿ ರಾಜನ ದುಃಖ ನೋಡಲಾರದೆ. ಅವನ ವೈದ್ಯ ನವೀನಚಂದ್ರನಿಗೆ ಅದನ್ನು ಅರುಹಿದ. ಆಗ ಆ ವೈದ್ಯ ಮನಸಿನ ನೋವನ್ನು ಮರೆಯುವ ಒಂದು ಔಷಧ ತಯಾರಿಸಿ ತಂದು ಮಂತ್ರಿಗೆ ಕೊಟ್ಟ. ಮಂತ್ರಿ ಖುಷಿಯಾಗಿ ಅವನಿಗೆ 100 ವರಾಹ ಕೊಟ್ಟು ಕಳುಹಿಸಿದ. ಅದನ್ನು ರಾಜನಿಗೆ ಕುಡಿಸಿದಾಗ... ರಾಜ ತುಂಬಾ ಮನೋಲ್ಲಾಸಗೊಂಡು ಮಂತ್ರಿಗೆ.. ಕಂತ್ರಿ ಕಂತ್ರಿ ಎಂದು ಹೇಳಲಾರಂಬಿಸಿದ. ಅದೇ ಶಬ್ದ ಬಾಯಿಂದ ಬಾಯಿಗೆ ಹರಿದು "ಕ೦ಟ್ರಿ" ಪಾನ ಆಯಿತು.

ರಾಜ ಪಾನವಿಲ್ಲದೆ ಬದುಕಲು ಅಸಾಧ್ಯವಾಯಿತು. ದಿನ ನಿತ್ಯ ಮುಂಜಾನೆ ಇಂದ ಸಂಜೆವರೆಗೆ ಪಾನ ಮತ್ತನಾಗಿ ಇರುತ್ತಿದ್ದ. ಇದು ಅವನ ಹೆಂಡತಿಗೆ ತಿಳಿಯಿತು. ಮಹಾರಾಣಿ ಮತ್ತೆ ತನ್ನ ಗಂಡನ ಅರಮನೆಗೆ ಹಿಂತಿರುಗಿದಳು. ಆಗ ಮಹಾರಾಜ ಅದನ್ನು ಸಾವಕಾಶವಾಗಿ ಬಿಡಲು ಆರಂಬಿಸಿದ.


ರಾಜ ಹೆಂಡತಿ ಬಂದ ಮೇಲೆ ಅದನ್ನು ಬಿಟ್ಟದ್ದರಿಂದ ಮತ್ತು ಅದು ಹೆಂಡತಿ ಇಲ್ಲದಿದ್ದಾಗ ಸವತಿಯ ಹಾಗೆ ಕೆಲಸ ಮಾಡಿದ್ದರಿಂದ ಹೆಂಡ ಎಂಬ ಮತ್ತೊಂದು ನಾಮಾಂಕಿತ ಪಡೆದು ಪ್ರಸಿದ್ದಿಪಡೆಯಿತು. ರಾಜ ಅದನ್ನು ಮೊದಲು ಸೇವಿಸಿದ್ದರಿಂದ ಅದೇ ಹೆಸರಿನ ಪೇಯ ಇಗಲೂ ತುಂಬಾ ಪ್ರಸಿದ್ದಿ ಪಡೆದಿದೆ.


ಮುಂದೆ ಆ ವೈದ್ಯ ಈ ಪೇಯದಿಂದ ತುಂಬಾ ಪ್ರಸಿದ್ದಿ ಪಡೆದ. ಮತ್ತು ಅದನ್ನು ಇನ್ನಷ್ಟು ವಿನ್ಯಾಸಗೊಳಿಸಿದ. ಆಗ ಮಂತ್ರಿ ಅವನಿಗೆ ಅವನ ಉದ್ಯೋಗವಾದ "ವೈದ್ಯ" ಮತ್ತೆ ಅವನ ಹೆಸರಿನ(ನವೀನಚಂದ್ರ) ಮೊದಲ ಅಕ್ಷರ ಸೇರಿಸಿ "ವೈನ" ಎಂದು ನಾಮಕರಣ ಮಾಡಿ ಮಾರುಕಟ್ಟೆಗೆ ಬಿಟ್ಟ. ಅದು ತುಂಬಾ ಪ್ರಸಿದ್ದಿ ಪಡೆಯಿತು.

ಅದಕ್ಕೆ ನಮ್ಮ ಮನೋಜ ಹೌದು ಹೌದು ಎಂದು ಗೋಣು ಅಲ್ಲಾಡಿಸುತ್ತ ಕುಳಿತಿದ್ದ.

ನಾನು ಸಾಕು ಬಿಡಪ್ಪ ನಿನ್ನ ಬಾರ್ ಪುರಾಣ ಎಂದೆ. ಆದರು ಮಂಜ ಕೇಳಲಿಲ್ಲ ನನಗೆ ಕಿವಿಗಳಿಗೆ ಬರೆ ಕೊಡುವ ಹಾಗೆ ತನ್ನ ಪುರಾಣ ಶುರು ಹಚ್ಚಿ ಕೊಂಡ.

ಲೇ ಇದಕ್ಕೆ ಶೆರೆ ಅಂತ ಏಕೆ? ಅಂತಾರೆ ಗೊತ್ತೇನು ಎಂದ. ನಾನು ಇಲ್ಲ ಎಂದೆ. ಶೇರ್ ಎಂದರೆ ಹಂಚಿಕೋ ಅಂತ ಅರ್ಥ ಎಂದ..

ಹೌದೌದು ಎಂದು ಮನೋಜ ಅವನ ಎ೦ಜಲದ ಗ್ಲಾಸ್ ಎತ್ತಿ ಕುಡಿಯುತ್ತಿದ್ದ. .

ಆಗ ನಾನು ತಿಳಿಯಿತು ಬಿಡು ಎಂದೆ.

ಲೇ ಅದಲ್ಲ ಕಣೋ, ನಮ್ಮ ಮನಸಿನ ಭಾವನೆಗಳನ್ನು ಹಂಚ್ಕೊಳ್ಳಲು ಒಂದು ವೇದಿಕೆ ಕಣೋ ಎಂದ. ಇಲ್ಲಿ ನಿಜವಾಗಿಯೂ ಚರ್ಚೆ ಆಗುವದು ನಮ್ಮ ಹೆಂಡತಿಯರ ಬಗ್ಗೆ ಅದಕ್ಕೆ ಶೇರ್ ಗೆ ಸ್ತ್ರೀಲಿಂಗ ಸೇರಿಸಿ ಶೆರೆ ಅಂತ ಕರೆದಿದ್ದಾರೆ ಹಿರಿಯರು ಎಂದ.

ನೀನು ಬೀರ್ ಕುಡಿ ಬೀರಬಲ್ಲ ತರಹ ಶ್ಯಾಣ್ಯ ಆಗುತ್ತೀಯ ಎಂದ.

ಹೆಂಡತಿ ಜಗಳವಾಡಿ ತವರುಮನೆಗೆ ಹೋದಾಗ "ಬಾರ" "ಬಾರ" ಎನ್ನುವ ಬದಲು ಬಾರಿಗೆ ಬಾ ಎಲ್ಲ ಮರೆಯುತ್ತೆ ಎಂದ.

ಅಷ್ಟೊತ್ಟಿಗಾಗಲೆ ಹೆಂಡತಿ ಫೋನ್ ಬಂತು ಖಾರವಾಗಿ ಎಷ್ಟೊತ್ತು ಮನೆಗೆ ಬರೋದು ಎಂದಳು.

ಅವರೀಬ್ಬರಿಗೂ ಬೇಗೆನೆ ಬೈ ಹೇಳಿ ಹೊರಟು ಹೋದೆ. ಇಲ್ಲದೇ ಇದ್ದರೆ ಎನ್ನು ಏನೇನೋ ಪುರಾಣ ಕೇಳುವ ಪರಿಸ್ತಿತಿ ಬರುತಿತ್ತು.

Monday, December 7, 2009

ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....

ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹೋಗದೇ ಆ ಸಂಜೆ ನೀಲಾಕಾಶ ನೋಡುತ್ತಾ ಕುಳಿತು ಬಿಟ್ಟೆ. ಆ ಸಂಜೆ ಆಕಾಶದ ಮೇಲೆ ಮೂಡಿರುವ ಛಾಯಾ ಚಿತ್ತಾರ ಅದೇನೋ ಒಂದು ಸುಮಧುರವಾದಂತ ಭಾವನೆಯನ್ನು ಮೂಡಿಸುತ್ತಿತ್ತು. ನೀಲಾಕಾಶದಲ್ಲಿ ಬರೆದಿರುವ ಬಿಳಿ ರಂಗೋಲಿ ಮನಸಿಗೆ ತುಂಬಾ ಮುದ ನೀಡುತಿತ್ತು. ಆ ಬಿಳಿ ಮೋಡಗಳ ಹಿಂದೆ ದೇವರು ಇರಬಹುದಾ? ಎಂಬ ಭಾವನೆ ಆಗಾಗ ಮೂಡುತ್ತಿತ್ತು. ದೇವರದೇ ಒಂದು ಸಾಮ್ರಾಜ್ಯ ಇರಬಹುದಾ?. ನಾವು ಓದಿರುವ ರಾಜ ಮಹಾರಾಜರ ಕಥೆಯ ಹಾಗೆ ತನ್ನದು ಒಂದು ಆಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿರಬಹುದಾ?. ಎಂಬ ಪ್ರಶ್ನೆಗಳನ್ನು ಮೆಲಕು ಹಾಕುತ್ತ ಕುಳಿತ್ತಿದ್ದೆ. ಸಂಜೆಯಾಗುತ್ತಲೇ ಆಗ ತಾನೆ ಇಣುಕುತ್ತಿರುವ ತಾರೆಗಳನ್ನು ವೀಕ್ಷಿಸುತ್ತಿದ್ದರೆ ಅದೇನೋ ಒಂದು ಮಹದಾನಂದ. ನಾನು ಇಷ್ಟೊಂದು ಆಳವಾಗಿ ಯೋಚಿಸಿಯೇ ಇರಲಿಲ್ಲ. ಆಗ ದೇವರು ಮುಂದೆ ಪ್ರತಕ್ಷ್ಯವಾದರೆ ಏನು ವರ ಕೇಳುವದು ಎಂಬ ಪ್ರಶ್ನೆಗೆ ನನ್ನ ನೇರವಾದ ದಿಟವಾದ ಉತ್ತರ "ಶಾಲೆ ಎಂಬುದೇ ಇರಬಾರದು" ಹಾಗೆ ಮಾಡು ಎಂದು.

ಆಗ ದೇವರು ಪ್ರತ್ಯಕ್ಷವಾಗಲಿಲ್ಲವಾದರೂ ಪ್ರತ್ಯಕ್ಷವಾಗಿದ್ದು ಮಂಜ ಮತ್ತೆ ಮನೋಜ. ಮಂಜನ ಮುಖದಲ್ಲಿ ಏನೋ ಕಸಿವಿಸಿ. ಮನೋಜ ಬಂದವನೇ "ಲೇ ಇವತ್ತು ಒಬ್ಬ ಹೊಸ ವಿದ್ಯಾರ್ಥಿ ನಮ್ಮ ಶಾಲೆಗೆ ಸೇರಿದ್ದಾನೆ ಕಣೋ" ಎಂದ. ಅವನ ಹೆಸರು ವಿಳಾಸ ಎಂದ.

ಅದಕ್ಕೆ ನಾನು ಮತ್ತೆ ಮಂಜ ಜೋರಾಗಿ ನಕ್ಕೆವು.

ಲೇ ಅದು ವಿಳಾಸ ಅಲ್ಲ ಕಣೋ ವಿಲಾಸ ಎಂದ ಮಂಜ.

ಏನೇ ಆಗಲಿ ಮಗ ಅವನಿಗೆ ಸರಿಸಾಟಿ ಯಾರು ಇಲ್ಲ ಎಂದು ಮನೋಜ ಹೊಗಳುತಿದ್ದ. ಅವ ಎಲ್ಲದರಲ್ಲೂ ನ೦ ೧ ಎಂದ . ಮಾಸ್ಟರ್‌ಗೆ ಪ್ರಶ್ನೆಹಾಕಿ ಪೇಚಿಗೆ ಬೀಳಿಸಿದ್ದ ಕಣೋ. ಮತ್ತೆ ಗೋಳಿ ಆಟದಲ್ಲೂ ಎಕ್ಸ್‌ಪರ್ಟ್ ಎಂದ.

ಅವನ ವರ್ಣನೆ ಕೇಳಿ ಮಂಜ ಮಾತ್ರ ಉರಿದುಬೀಳುವ ಹಾಗೆ ಮುಖ ಮಾಡಿದ್ದ.

ಆಗ ನಾನು ಹೌದೆನೋ ಮಂಜ ಎಂದು ಕೇಳಿದೆ.

ಅದಕ್ಕೆ ಮಂಜ ಈಗ ಮೊದಲನೆ ದಿವಸ ಮುಂದೆ ನೋಡೋಣ ಇವನ ಪ್ರತಾಪ ಎಂದ.

ಅದಕ್ಕೆ ಮನೋಜ "ಲೇ ಸುಮ್ನೇ ಹೊಟ್ಟೆ ಉರ್ಕೋ ಬೇಡ" ಅವ ಭಾಳ ಶ್ಯಾಣ್ಯ ಎಂದ.

ಇರಲಿ ಇರಲಿ ಎಂದು ಮಂಜ ಮನೆಗೆ ಹೋಗಿಬಿಟ್ಟ . ಮನೋಜ ಮಾತ್ರ ರಾತ್ರಿ ಪೂರ್ತಿ ಅವನ ವರ್ಣನೆ ಮಾಡಿದ್ದ. ನನಗು ಮರುದಿನ ಅವನನ್ನು ನೋಡುವ ಮತ್ತೆ ಗೆಳೆತನ ಬೆಳೆಸುವ ಆಸೆಯಾಗಿತ್ತು.

ಮರುದಿನ ಶಾಲೆಗೆ ಯಾವದೆ ತಕರಾರು ಇಲ್ಲದೇ ಶಾಲೆಗೆ ಹೊರಟು ನಿಂತಿದ್ದು ನೋಡಿ ಅಪ್ಪ ನನ್ನನ್ನು ನೋಡಿ ನಕ್ಕೂ ಆಶ್ಚರ್ಯದಿಂದ "ಏನ ರಾಜ ಮತ್ತೆ ಹೇಗಿದೆ? ನಿನ್ನ ಹೊಟ್ಟೆ ನೋವು ಎಂದು" ಕೇಳಿದರು.

ನಾನು ಇಲ್ಲ ಎಂದು ಗೋಣು ಆಡಿಸಿ ಶಾಲೆಗೆ ಹೋದೆ. ಮತ್ತೆ ನಾನು ಮನೋಜ ಎಲ್ಲರೂ ಮಂಜನ ಹಿಂದೆ ಬಿಟ್ಟು ವಿಲಾಸ್ ಹಿಂದೆ ಬಿದ್ದೆವು. ಮಂಜ ಮಾತ್ರ ಒಬ್ಬನೇ ಆಗಿಬಿಟ್ಟ. ಮಂಜ ಒಬ್ಬನೇ ಆದರೂ ವಿಲಾಸ್ ಬಗ್ಗೆ ತಿಳಿದು ಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದ. ಅದು ನಮಗೆ ಕಂಡರು ನಾವು ಸುಮ್ಮನೇ ಇದ್ದೆವು. ಒಂದು ದಿನ ಮಂಜ ವಿಲಾಸನನ್ನು ಹಿಂಬಾಲಿಸುತ್ತಿದ್ದ. ಆಗ ವಿಲಾಸನಿಗೆ ಒಂದು ಹಾವು ಸಿಕ್ಕಿದೆ ಅದನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ಹೆದರಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದ. ನಾವೆಲ್ಲರೂ ತುಂಬಾ ಹೆದರಿದ್ದೆವು. ಮಂಜ ಅವನನ್ನು ಮನೆಯವರಿಗೂ ಹಿಂಬಾಲಿಸಿದ. ಆಗ ಆ ಹಾವು ಹಿಂದೆ ತಿರುಗಿ ವಿಳಾಸನ ಹೆಬ್ಬರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು. ವಿಳಾಸ ಎಷ್ಟೇ ತಡಕಾಡಿದರು ಕೈ ಬಿಡಲಿಲ್ಲ.

ಆಗ ಇದೆ ಅವಕಾಶ ಕಾಯುತಿದ್ದ ಮಂಜ ಅವನಿಗೆ ಕಡೆ ಹೋಗಿ "ನಾನು ಬಿಡಿಸುತ್ತೇನೆ" ಎಂದು ಹೇಳಿ ಅವನನ್ನು ಪೂರ್ತಿ ಶಾಲೆಯಲ್ಲಾ ತಿರುಗಿಸಿ ಅವನ ಪ್ರತಾಪವನ್ನು ಎಲ್ಲರಿಗೂ ತೋರಿಸಿಬಿಟ್ಟಿದ್ದ.

ಆಗ ನಮ್ಮ ಮಾಸ್ಟರ್‌ ಇವನಿಗೆ "ಲೇ ಒಂದು ವರ್ಷ ಫೈಲಾಗಿ ಇಲ್ಲಿ ಬಂದು ಮತ್ತೆ ಅದೇ ವರ್ಸೆ ಹಚ್ಚಿ ಕೊನ್ಡಿದ್ದಿಯ ಎಂದು" ಉಗಿದಿದ್ದರು.

ಕಡೆಗೆ ಮಂಜ ಒಬ್ಬ ಹವಾಡಿಗನ ಹತ್ತಿರ ಕರೆದುಕೊಂಡು ಹೋಗಿ ಅವನನ್ನು ಹಾವಿನಿಂದ ಮುಕ್ತ ಗೊಳಿಸಿದ್ದ. ಮಂಜನಿಗೆ ಎಲ್ಲಿಲ್ಲದ ದಿಗ್ವಿಜಯ ಸಾಧಿಸಿದ ಹಾಗೆ ಹಿರಿ ಹಿರಿ ಹಿಗ್ಗಿದ್ದ. ಮತ್ತೆ ನಾವೆಲ್ಲರೂ ಸಾವಕಾಶವಾಗಿ ಮಂಜನಿಗೆ ಹತ್ತಿರವಾಗ ತೊಡಗಿದೆವು.

ಇಷ್ಟೆಲ್ಲಾ ಆದರೂ ತನ್ನ ಹೆರೆತನದ ಬುದ್ಧಿಮಾತ್ರ ಬಿಟ್ಟಿರಲಿಲ್ಲ ವಿಲಾಸ. ಮತ್ತೊಂದು ದಿನ ಒಬ್ಬ ಪೋಲೀಸ್ ಇನ್‌ಸ್ಪೆಕ್ಟರ್ ಬೈಕ್ ಕೆಟ್ಟಿತ್ತು. ಆ ಉರಿಬಿಸಿಲಲ್ಲಿ ಎಷ್ಟೇ ಕಿಕ್ ಹೊಡೆದರೂ ಗಾಡಿ ಶುರುವಾಗಲಿಲ್ಲ. ಪೂರ್ತಿ ಮೈಯಲ್ಲ ಬೆವರಿಸಿತ್ತು. ಇನ್‌ಸ್ಪೆಕ್ಟರ್ ಹಾಗೆ ಕಿಕ್ ಹೊಡೆಯುವಾಗ ನಾವೆಲ್ಲರೂ ಹೆದರಿ ಹಿಂದೆ ನಿಂತು ನೋಡುತ್ತಿದ್ದೆವು.

ಆದರೆ ವಿಲಾಸ್ ಅವರ ಬಳಿ ಹೋಗಿ ಹಿರೇ ಮನುಷ್ಯರ ಹಾಗೆ ಹಿಂದೆ ಕೈಕಟ್ಟಿ ನೋಡುತ್ತಾ ನಿಂತ ಆನಂತರ ಸ್ವಲ್ಪ ಸಮಯದ ನಂತರ "ಏನ ಸರ್ ಬೈಕ್ ಶುರು ಆಗವಲ್ಲದ?" ಎಂದು ಕೇಳಿದ . ಆಗ ಇನ್‌ಸ್ಪೆಕ್ಟರ್ ಗೆ ಮೊದಲೇ ಕಿಕ್ ಹೊಡೆದು ಹೊಡೆದು ತಲೆ ಕೆಟ್ಟಿತ್ತು. ಇವನನ್ನು ನೋಡಿ "ಸುಮ್ಮನೇ ಹೋಗುವೆಯೋ ಅಥವಾ ಬೇಕೋ ಕಪಾಳಕ್ಕೆ ಎರಡು?" ಎಂದು ಗದರಿಸಿ ಅವನ ಮೇಲೆ ಕೈ ಎತ್ತಿದಾಗ ನಾವೆಲ್ಲರೂ ನಕ್ಕ್ಕಿದ್ದೆ ನಕ್ಕಿದ್ದು.

ಆನಂತರ ಒಂದೇ ವರ್ಷದಲ್ಲಿ ಮತ್ತೆ ವಿಲಾಸ ಬೇರೆ ವಿಳಾಸಕ್ಕೆ ವರ್ಗಾಯಿಸಿಕೊಂಡು ಹೋಗಿಬಿಟ್ಟಿದ್ದ.

Tuesday, November 24, 2009

2012 ರ ಸುಬ್ಬನ ಫ್ಲೈಟ್....

ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.

ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.

ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ ಸಹಿತ ಬುಕ್ ಮಾಡಿಲ್ಲ ಎಂದ.

ಏನು ಹನಿಮೂನಾ ಮಜಾ ಮಾಡು. ಏನು ದುಡ್ಡು ಗಿಡ್ಡು ಬೇಕೇನು? ಎಂದು ಮತ್ತೆ ಕೇಳಿದ ಮಂಜ.

ಇಲ್ಲ ಎಂದ ಪೇಲು ಮುಖದಿಂದ ಸುಬ್ಬ.

ಏನಪ್ಪಾ ಮತ್ತೆ ನಿನ್ನ ಸಮಸ್ಯೆ , ಏನಾದರು ನಿನ್ನ ಹೆಂಡತಿನ ಆ ಫ್ಲ್ಯೆಟ ನವರಿಗೆ ತೋರಿಸಿದ್ದೀಯ ಎಂದು ಕೇಳಿದ ಮಂಜ.

ನಾನು ಅದೇ ಇರಬೇಕು ನಿನ್ನ ಹೆಂಡತಿ(ಅವಳ ಧಡೂತಿ ದೇಹ...) ನೋಡಿ ಫ್ಲ್ಯೆಟ ಕ್ಯಾನ್ಸಲ್ ಮಾಡಿರಬೇಕು ಎಂದೇ.

ಸುಬ್ಬನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ನಿಮ್ಮಿಬ್ಬರಿಗೂ ನನ್ನನ್ನ ಕಂಡ್ರೆ ಅಷ್ಟೇ ಮಕ್ಳ. ನಿಮಗೆ ಇದೆ ಜಾತ್ರೆ ಬರಲಿ 2012 ಅವಾಗ ನಿಮಗ ಗೊತ್ತು ಆಗ್ತದ ಎಂದ.

ಏನಪ್ಪಾ ಗೊತ್ತಾಗೋದು ಹೇಳು ಎಂದು ಇಬ್ಬರು ಕೇಳಿದೆವು.

ಆಗ ಸುಬ್ಬ 2012 Dec 21 ಎಲ್ಲರು ಪ್ರಳಯ ಆಗಿ ಸಾಯಿತರಲ್ಲ ಅವಾಗ ನೀವೇ ಮೊದಲು ಸಾಯೋದು ಮೊದಲು, ನನ್ನ ಹಾಗೆ ಎಷ್ಟು ಜನ ನಿಮ್ಮ ಮೇಲೆ ಶಾಪ ಹಾಕಿರ್ತಾರೆ. ಬರಿ ಜನರನ್ನು ಪಿಡಿಸೋದೆ ನಿಮ್ಮ ಕೆಲಸ ಎಂದ ಸುಬ್ಬ.

ಮಂಜ ಆಯಿತಪ್ಪ ನಾವೇ ಸಾಯಿತಿವಿ ನಿನ್ನ ಸಮಸ್ಯೆ ಏನು?. ನೀನು ಹೋಗೋ ಊರಿಗೆ ಫ್ಲ್ಯೆಟ ಇಲ್ಲ ಏನು ಮತ್ತೆ. ಇದನ್ನು .ಅರೇಂಜ್ ಮಾಡು ಎಂದರೇ ನಮ್ಮ ಕಡೆ ಆಗುದಿಲ್ಲ ನೋಡು ಮತ್ತೆ ಎಂದ.

ನಾನು ಗಗನ ಸಖಿಯರು ಇಲ್ಲವೇನೋ ಆ ಫ್ಲ್ಯೆಟ ಅಲ್ಲಿ ಎಂದೇ.

ನಿಮಗೆ ಹೇಳೋದು ಒಂದೇ "ಆನಿಗೆ ಚಡ್ಡಿ ಹೊಲಸೋದು ಒಂದೇ" ಎಂದು ಎದ್ದು ಮನೆಗೆ ಹೋಗಲು ಅಣಿಯಾದ.

ಹೊ ಹಂಗೆ ಏನು ರೆಡೀಮೇಡ್ ತೆಗೆದುಕೊಳ್ಳುವದಿಲ್ಲ ಎಂದ ಮಂಜ. ಮತ್ತೆ ನೀನು ಒಂಟೆ ಮಹಾರಾಜ ಹೊಲಸಿಕೊಳ್ಳುತ್ತೀಯೋ ಇಲ್ಲವಾ ರೆಡೀಮೇಡೋ.... ಎಂದ ಮಂಜ.

ಆಗ ಸುಬ್ಬ ಹೌದು ಕಣ್ರೋ ನನ್ನ ಹೆಂಡತಿ ಸ್ವಲ್ಪ ದಪ್ಪ ಅದಕ್ಕೆ ಅವಳನ್ನ ಆನೆ ಅಂತ ಇದ್ದೀರ ಎಂದ. ನಾವೆಲ್ಲಿ ಅಂದೆವು ನೀನೆ ತಾನೇ ಆನೆಗೆ ಚಡ್ಡಿ ಹೋಲಿಸೋ ಮಾತು ಆಡಿದ್ದು ಎಂದ ಮಂಜ.

ನಾನು ಒಳಗೊಳಗೆ ನಗುತ್ತಿದ್ದೆ.

ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಬೇರೆದೆ ಚಿಂತೆ ...ಹಾಗಾಯಿತು ನಿಮ್ಮದು ಎಂದ ಸುಬ್ಬ.

ಆಯಿತು ಈಗ ನಿನ್ನ ಸಮಸ್ಯೆ ಏನು ಹೇಳು ಎಂದೆ.

ಆಗ ಸುಬ್ಬ ೨೦೧೨ ಕ್ಕೆ ಎಲ್ಲರೂ ಸತ್ತು ಹೋಗುತ್ತೇವೆ ಕಣೋ. ಇನ್ನೂ ಒಂದು ಫ್ಲೈಟ್ ಅಥವಾ ಮನೆ ಸಹಿತ ಮಾಡ್ಲಿಕ್ಕೆ ಆಗಲಿಲ್ಲ ಎಂದ ಸುಬ್ಬ.

ಆಗ ನಮ್ಮಿಬ್ಬರಿಗೂ ನಗು ತಡಯಲಿಕ್ಕೆ ಆಗದೆ ಜೋರಾಗಿ ನಕ್ಕೆವು. ಅದು ಫ್ಲೈಟ್ ಅಲ್ಲ ಕಣೋ ಸುಬ್ಬ ಅದು ಫ್ಲಾಟ್ ಎಂದು ಎಂದೆ.

ಆಗ ಮಂಜ ಸುಮ್ಮನಿರಲಾರದೇ ಹಾಗೇನೂ ಆಗುವದಿಲ್ಲ ಅದೆಲ್ಲ ಸುಮ್ನೇ ಹಬ್ಬಿಸಿದ್ದಾರೆ. "ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ" ಹಾಗಾಯಿತು ನಿನ್ನ ಕತೆ ಅಷ್ಟು ನಮ್ಮ ಕೈ ಮೀರಿ ಆಯಿತು ಎಂದರೆ. ನಿನಗೆ ಬೇಕಾಗುವದು ಫ್ಲೈಟ್ ಮತ್ತೆ ಫ್ಲಾಟ್ ಅಲ್ಲ ಕಣೋ ಸುಬ್ಬ 6 X 3 ನಿನ್ನ ಹೆಂಡತಿಗೆ ಸ್ವಲ್ಪ ಜ್ಯಾಸ್ತಿ .... ಎನ್ನುವಷ್ಟರಲ್ಲೇ ಸುಬ್ಬ ಕೋಪದಿಂದ ಮಂಜನನ್ನು ಬೈದು ಮನೆಗೆ ಸೇರಿದ.

ಹೀಗೆ ನಮ್ಮ ಸುಬ್ಬ ಬೇರೆ ಬೇರೆ ವಿಷಯ ತಲೆಯಲ್ಲಿ ಹುಳ ಬಿಟ್ಟು ಕೊಳ್ಳುವ ಸ್ವಭಾವ. ಒಂದು ದಿವಸ ಅಕೌಂಟ್ಸ್ ಟ್ಯಾಲೀ ಆಗಿದ್ದಿಲ್ಲ. ಹಾಗೆ ಯೋಚನೆ ಮಾಡುತ್ತಾ ಆಫೀಸದಿಂದ ಮನೆಗೆ ಬಂದ. ಹೆಂಡತಿ ಪೇಟೆಗೆ ಕರೆದುಕೊಂಡು ಹೋಗು ಎಂದು ಹೇಳಿದಳು. ಅವನು ಅದೇ ಗುಂಗಿನಲ್ಲಿ ಅವಳನ್ನು ಕರೆದು ಕೊಂಡು ಹೋಗಿದ್ದ. ಅವಳು ಸಾಮಾನು ತರಲು ಬೇರೆ ಅಂಗಡಿ ಹೋದಾಗ, ಏನೋ ವಿಚಾರ ಹೊಳೆದಿದೆ. ಕೂಡಲೇ ಆಫೀಸಗೆ ಹೋಗಿ ಅಕೌಂಟ್ಸ್ ಟ್ಯಾಲೀ ಮಾಡುತ್ತಾ ಕುಳಿತು ಬಿಟ್ಟಿದ್ದ. ಅನಂತರ ಹೆಂಡತಿಯ ನೆನಪಾಗಿ ಪೇಟೆ ಪೂರ್ತಿ ಸುತ್ತಿ ಬಂದಿದ್ದ. ಹೆಂಡತಿಗೆ ಕೋಪ ಬಂದು ಇವನ ಸಹವಾಸವೇ ಬೇಡ ಎಂದು ತವರು ಮನೆಗೆ ಹೋಗಿಬಿಟ್ಟಿದ್ದಳು. ಮತ್ತೆ ಸಮಜಾಯಿಸಿ ಮನೆಗೆ ಕರೆದುಕೊಂಡು ಬಂದಿದ್ದ.

ಇಷ್ಟೇ ಅಲ್ಲ ಅವನು ಕಂಪ್ಯೂಟರ್ ನಲ್ಲಿ ಲೆಕ್ಕ ಸರಿಯಾಗಿ ಇದೆಯೋ ಇಲ್ಲವೋ ಎಂದು ತಾಳೆ ಹಾಕುವದಕ್ಕೆ ಕ್ಯಾಲ್ಕ್ಯುಲೇಟರ್ ಬಳುಸುತ್ತಾನೆ.

ಸುಬ್ಬನ ಫ್ಲೈಟ್ ರಾತ್ರಿ ಪೂರ್ತಿ ನಮ್ಮ ತಲೆಯಲ್ಲಿ....ಹಾರಾಡುತಿತ್ತು ಲ್ಯಾಂಡಿಂಗ್ ಆಗದೆ.

Tuesday, November 10, 2009

ರಾಹು ಕೇತು ಮನೋಜ ಮನೆಗೆ ಹೋದಾಗ....

ನಾನು ಮತ್ತೆ ಮಂಜ ಒಂದು ದಿವಸ ಮನೋಜನ ಮನೆಗೆ ಹೋಗಬೇಕೆಂದು ನಿರ್ಧರಿಸಿದೆವು. ಮನೋಜನಿಗೆ ಮೊದಲೇ ಫೋನ್ ಮಾಡಿ ಅವನ ಹೆಂಡತಿಯ ನಮ್ಮ ಮೇಲೆ ಇರುವ ಕೋಪದ ಬಗ್ಗೆ ಕೇಳಿ ತಿಳಿದುಕೊಂಡು ಆನಂತರನೇ ಅವನ ಮನೆಗೆ ಹೋಗುವುದೆಂದು ನಿರ್ಧಾರ ಮಾಡಿದೆವು. ಮನೋಜನ ಮನೆ ಸಮೀಪ ಒಂದು ದೊಡ್ಡದಾದ ಕ್ಯು ಇತ್ತು, ಅದು ಯಾವುದು ನೀರಿನ ಅಥವಾ ಸಿಮೇಯೆಣ್ಣೆ ಕ್ಯು ಇರಬೇಕೆಂದು ನಾವು ಗೇಟ್ ಮುಂದೆ ಹೋಗುತ್ತಿದ್ದಾಗ ಗೊತ್ತಾಯಿತು ಅದು ಶಾಸ್ತ್ರ ಕೇಳಲು ಬಂದ ಜನರ ಸಾಲು ಎಂದು. ಒಬ್ಬ ಹಿರಿಯರು "ರೀ ಸಾಲಿನಲ್ಲಿ ಬನ್ನಿರಿ ಎಂದರು". ಅವರ ಮಾತು ಕೇಳಿ ನಾವು ಮನೋಜನ ಗೆಳೆಯರು ಎಂದು ಹೇಳಿದೆವು. ಆದರು ನಮ್ಮನ್ನು ಒಳಗೆ ಬಿಡಲಿಲ್ಲ. ಆಗ ಆ ಹಿರಿಯರು ನಾನು ಅವರ ಸಂಭಂದಿನೆ ಸಾಲಿನಲ್ಲಿ ಬರುತ್ತಿಲ್ಲವಾ? ಎಂದು ವ್ಯಂಗ್ಯವಾಗಿ ನುಡಿದರು. ಮತ್ತೆ ಸಾಲಿನಲ್ಲಿ ಇದ್ದ ಎಲ್ಲ ಜನರು ನಮ್ಮನ್ನು ಗದರಿಸಿ ಸಾಲಿನಲ್ಲಿ ಬರಬೇಕೆಂದು ಆಜ್ಞೆ ಮಾಡಿದರು. ಮತ್ತೆ ಅವರ ಸೆಕ್ಯೂರಿಟಿ ಗಾರ್ಡ್ ಕೂಡ ನಮ್ಮನ್ನು ಸಾಲಿನಲ್ಲಿ ತಂದು ನಿಲ್ಲಿಸಿದ. ನಮ್ಮಿಬ್ಬರಿಗೂ ಏನು ಮಾಡಬೇಕೆಂಬುದೇ ತೋಚದಾಗಿತ್ತು. ಆಗ ಮಂಜ ಮನೋಜನ ಮೊಬೈಲ್ ಫೋನ್ ಮಾಡಿದ ಆದರೆ ಅದು ಸ್ವಿಚ್ ಆಫ್ ಆಗಿತ್ತು. ಆಗ ತಾನೆ ಬಿಸಿಲಿನ ಬೇಗೆ ಏರುತಿತ್ತು. ನಾನು ಮತ್ತೆ ಮಂಜ ಬೆವರಿನಿಂದ ಸ್ನಾನ ಮಾಡಿದ ಹಾಗೆ ಆಗಿತ್ತು. ಮುಂದೆ ಇರುವ ವ್ಯಕ್ತಿ ಬೇಗನೆ ಎದ್ದು ಹಳ್ಳಿಯಿಂದ ಇಲ್ಲಿಗೆ ಬಂದಿದ್ದ. ಅವನು ಸ್ನಾನ ಮಾಡಿರಲಿಲ್ಲವಾದ್ದರಿಂದ ಬೆವರಿನ ವಾಸನೆ ಇಂದ ಕೆಟ್ಟದಾಗಿ ನಾರುತಿದ್ದ. ಮತ್ತೆ ನಮಗೆ ಹೇಳಿದ "ಸ್ವಾಮಿ ಈ ಜ್ಯೋತಿಷಿಗಳು ತುಂಬ ಶ್ಯಾಣ್ಯಾ ರೀ" ಎಂದ. ನಾನು ನೋಡಿರಿ ಹಳ್ಳಿಯಿಂದ ಬಂದು ಇಲ್ಲೇ ಶಾಸ್ತ್ರ ಕೇಳೋದು ಎಂದ. ಅವನ ಬಾಯಿ ವಾಸನೆ ಇಂದ ನಮಗೆ ವಾಂತಿ ಬರುವುದೊಂದೇ ಬಾಕಿ. ಮಂಜ ಸುಮ್ಮನಿರದೆ ಏನು ಶಾಸ್ತ್ರ ಕೇಳುವುದಕ್ಕೆ ಬಂದಿದ್ದಿರಾ? ಎಂದು ಕೇಳಿದ. ಅದಕ್ಕೆ ಆ ಮನುಷ್ಯ ಏನಿಲ್ಲ ಶಾನೆ ದಿವಸದಿಂದ ಹೊಟ್ಟೆ ನೋವು ಅದಕ್ಕೆ ಎಂದ. ರೀ ನಿಮಗೆ ಬೇಕಾಗಿರೋದು ಶಾಸ್ತ್ರ ಅಲ್ಲರಿ ಶಸ್ತ್ರ ಚಿಕಿತ್ಸೆ ಹೋಗಿ ಯಾವುದಾದರೂ ಡಾಕ್ಟರ ಬಳಿ ಚಿಕಿತ್ಸೆ ಪಡಿರಿ ಎಂದ ಮಂಜ. ಆಗ ಆ ಮನುಷ್ಯ ರೀ ಸುಮ್ನಿರಿ ರಾಯರ ಬಗ್ಗೆ ಹಂಗೆಲ್ಲ ಮಾತನಾಡಬೇಡಿ. ಅವರು ತುಂಬಾ ಜಾಣರು. ಡಾಕ್ಟರ ಕಡೆ ಹೋದ್ರ ಇದ್ದಿರೋ ದುಡ್ಡು ಮತ್ತೆ ಹೊಟ್ಟಿ ಒಳಗಿನ ಸಾಮಾನು ಎಲ್ಲ ತೋಗೊತಾರ. ಆ ಮನುಷ್ಯ ಪ್ರತಿ ಬಾರಿ ಮಾತನಾಡುವಾಗಲು ಅವನ ಬಾಯಿಯಿಂದ ವಾಸನೆ ಬರುತಿತ್ತು. ಮತ್ತೆ ನಮ್ಮಿಬ್ಬರ ಮೇಲೆ ಆ ಉರಿಬಿಸಿಲಲ್ಲೂ ಮುಂಗಾರು ಮಳೆ (ಉಗಳಿನ ಹನಿಗಳು). ನಾನು ಸುಮ್ಮನೆ ಇರು ಎಂದರು ಮಂಜ ಕೇಳದೆ ನಿನ್ನ ಒಳಗ ಏನು ಸಾಮಾನು ಅದ ಹೇಳು? ಎಂದ. ಛಿ ನನಗ ನಾಚಿಗಿ ಆಗ್ತೈತ್ರಿ ಎಂದ. ಏನು ಹೇಳು ನಾಚಿಗಿ ಯಾಕ ಎಂದು ಹುರುದುಂಬಿಸಿದ ಮೇಲೆ. ಅದು ಅದು ಕಿಡ್ನಿ ಎಂದ. ನಾವಿಬ್ಬರು ಹಾಗೆ ಮುಗುಳ್ನಕ್ಕೆವು. ಆದರು ಸುಮ್ಮನೆ ಬಿಡದೆ ನಮ್ಮ ತಲೆ ತಿನ್ನ ಹತ್ತಿದ ಆ ಮನುಷ್ಯ. ಆಗ ನಾನು ಹೇಳಿದೆ ಲೇ ಇನ್ನೊ ಸ್ವಲ್ಪ ಬೇಗನೆ ಬರಬಹುದಿತ್ತು ಇವನ ಕಾಟನಾದರೂ ತಪ್ಪುತ್ತಿತ್ತು. ನಾನು ಆಟೋಕೆ ಹೋಗೋಣ ಎಂದೆ ನೀನು ಬೇಡ ಅಂದೇ ನೋಡು ಈಗ ಪರಿಸ್ಥಿತಿ ಎಂದೆ. ಆಗ ಮಂಜ ನನಗೇನು ಗೋತ್ತಾಪ್ಪ ಈ ಮಹರಾಯ ಇಷ್ಟು ಬ್ಯುಸಿ ಮನುಷ್ಯ ಎಂದು ಅಂದ.

ಏನು ಮಾಡಲಾರದೆ ಉರಿಬಿಸಿಲಲ್ಲಿ ಎರಡು ಘಂಟೆ ಕ್ಯುನಲ್ಲಿ ನಿಂತು ಒಳಗಡೆ ಹೋದೆವು.

ಮನೋಜನ ಥೇಟ ಸ್ವಾಮೀಜಿಯಂತೆ ವೇಷ ಧರಿಸಿದ್ದ. ಮನೆ ತುಂಬ ದೇವರ ಫೋಟೋಗಳು. ಯಾವದೋ ಒಂದು ಮಠಕ್ಕೆ ಹೋದ ಹಾಗೆ ಅನ್ನಿಸಿತು. ನಮ್ಮನ್ನು ನೋಡಿ ಮನೋಜ "ಲೇ ಯಾವಾಗ ಬಂದಿರೋ ಎಂದು ಕೇಳಿದ". ನನಗೆ ಮತ್ತೆ ಮಂಜನಿಗೆ ತುಂಬ ಕೋಪ ಬಂದಿತ್ತು ಬಂದು ಎರಡು ಘಂಟೆ ಆಯಿತು. ನಿನ್ನ ಕ್ಯು ನಲ್ಲಿ ಬರುವ ಹೊತ್ತಿಗೆ ಇಷ್ಟೊತ್ತು ಆಯಿತು ಎಂದೆ.ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಇಷ್ಟು ಕಷ್ಟ ಪಟ್ಟಿರಲಿಲ್ಲ ಎಂದ ಮಂಜ. ಆಗ ಮನೋಜ ಸಾರೀ ಕಣ್ರೋ ನಾನು ನನ್ನ ಸೆಕ್ಯೂರಿಟಿಯವನಿಗೆ ಹೇಳುವುದನ್ನು ಮರೆತೆ ಅದಕ್ಕೆ ನಿಮಗೆ ಅವ ಒಳಗೆ ಬಿಡಲಿಲ್ಲ ಎಂದು ತಾನೆ ಹೋಗಿ ಎರಡು ಕಪ್ ಕಾಫಿ ತೆಗೆದು ಕೊಂಡು ಬಂದ. ಆಗ ನಾನು ಮತ್ತೆ ಮಂಜ ನಮಗೆ ಸ್ವಲ್ಪ ಕೈ ಕಾಲು ತೊಳೆದು ಬರಬೇಕೆಂದು ಹೋಗಿ ಪೂರ್ತಿ ಬಕೆಟ್ ತಣ್ಣೀರು ಮೈಯಲ್ಲ ಸುರಿದು ಕೊಂಡು ಬಂದೆವು. ಕಾಫಿ ಆಗಲೇ ತಂಪಾಗಿತ್ತು ಆದರು ಅದನ್ನೇ ಹೀರಿದೆವು. ಮತ್ತೆ ಹೇಗೆ ಬಂದಿರಿ ಎಂದ ಮನೋಜ. ಆಗ ಮಂಜ ಬಸ್ನಲ್ಲಿ ಎಂದಾ. ನೆರೆ ಸಂತ್ರಸ್ತರ ನಿಧಿಗೆ ಚೆಕ್ ಏನಾದರು ಕೊಡುವೆಯ ಎಂದು ಕೇಳಿದ ಮಂಜ. ಆಗ ಮೊನೋಜ ನಾನು ಆಗಲೇ ಕೊಟ್ಟಿದ್ದೇನೆ ನೋಡಿ ಇಲ್ಲಿದೆ ಬ್ಯಾಂಕ್ ಸ್ಟೇಟ್ಮೆಂಟ್ ಎಂದು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿದ. ಆಗ ಮನೋಜ "ಲೇ ನೀವು ಆಟೋ ನಲ್ಲೆ ಬರಬೇಕಿತ್ತು" ಬೇಗ ಬರುತ್ತಿದ್ದಿರಿ ಎಂದ. ನಾನು ಹೇಳಿದೆ ಮಂಜ ಕೇಳಲಿಲ್ಲ ಎಂದೆ. ಆಗ ಮಂಜ ಯಾಕಪ್ಪ ಅಷ್ಟು ದುಡ್ಡು ವೇಸ್ಟ್ ಎಂದ. ಅದಕ್ಕೆ ಮನೋಜ ಎಲ್ಲರು ನಿನ್ನ ಹಾಗೆ ಯೋಚನೆ ಮಾಡ್ತಾ ಹೋದರೆ ಈ ಆಟೋನವರು ಹೇಗೆ ಬದುಕಬೇಕೋ ಎಂದು ನಮಗೆ ಬುದ್ಧಿವಾದ ಹೇಳಿದ. ಆಗಲೇ ನಮಗೆ ಗೊತ್ತಾಗಿತ್ತು ಇವನ ೨೦ ಜನರಲ್ಲಿ ೧೨ ರಷ್ಟು ಬರಿ ಆಟೋ ಚಾಲಕರೆ ಇದ್ದರು. ಇವನು ಹೇಳಿದ್ದು ತನ್ನ ವ್ಯವಹಾರ ಚೆನ್ನಾಗಿರಲೆಂದು ಎಂದು ತಿಳಿಯಿತು. ಮನೋಜ ಇನ್ನು ಇಬ್ಬರು ಇದ್ದಾರೆ ಮುಗಿಸಿ ಬಿಡುತ್ತೇನೆ ಎಂದ. ನಾವು ಆಯಿತು ಎಂದು ಅಲ್ಲೇ ಮನೆ ಮುಂದೆ ಇರುವ ಚೇರ್ ಮೇಲೆ ಕುಳಿತೆವು. ಆಗ ಒಬ್ಬ ಮನುಷ್ಯ ಬಂದು ನಮಗೆ ಕಾಲು ಬಿದ್ದು ತನ್ನ ಸಮಸ್ಯೆ ಹೇಳಲಾರಮ್ಬಿಸಿದ. ನಾವು ಏನು ತೋಚದೆ ಅವನಿಗೆ ಒಳಗೆ ಹೋಗಪ್ಪ ನಿಮ್ಮ ಸ್ವಾಮೀಜಿ ಇದ್ದಾರೆ ಎಂದು ಕಳುಹಿಸಿದೆವು.

ಆಗ ಹೋಗುತ್ತಲೇ ಆ ಮನುಷ್ಯನ ಜಾತಕ ನೋಡಿ .. ಮನೋಜ

ನಿನಗೆ ಗ್ರಹಗಳು ಚೆನ್ನಾಗಿಲ್ಲ.. ನೀನು ಬುಧ , ಶನಿ ಮತ್ತೆ ಗುರು ಶಾಂತಿ ಮಾಡಿಸಬೇಕು ಎಂದು ಹೇಳಿದ.
ಅದನ್ನು ಮಾಡಿಸಿ ನೀನು ಧರ್ಮಸ್ಥಳಕ್ಕೆ ಹೋಗಿ ನಿನ್ನ ಅಳತೆಯಷ್ಟು ಅಕ್ಕಿ ಕೊಡಬೇಕು ಎಂದ. ಮತ್ತೆ ಮಂತ್ರಾಲಯಕ್ಕೆ ಹೋಗಿ ಅಲ್ಲಿ ಒಬ್ಬ ಆಚಾರ್ಯರಿದ್ದಾರೆ ಅವರ ಹತ್ತಿರ ಒಂದು ವಿಶೇಷ ಪೂಜೆ ಮಾಡಿಸುತ್ತಾರೆ ಬರೀ 10000 ಅಷ್ಟೇ ಎಂದ. ಎಲ್ಲ ಒಳ್ಳೆಯದಾಗುತ್ತೆ ಎಂದ. ಆಗ ಮನುಷ್ಯ ಸರ್ ಇದು ನನ್ನ ಜಾತಕ ಅಲ್ಲ ಇದು ನನ್ನ ಮಾವನವರ ಜಾತಕ ಅವರಿಗೆ ತುಂಬಾ ಹಣವಿದೆ ಅವರು ಯಾವಾಗ ಶಿವನ ಪಾದ ಸೇರುತ್ತಾರೆ ನೋಡಿ ಹೇಳಿ ಎಂದ. ಮೊದಲೇ ಹೇಳಬಾರದ ಎಂದು ಕೋಪಗೊಂಡ ಮನೋಜ. ಯಾಕಪ್ಪ ನಿನ್ನ ಮಾವನ್ನ ಸಾಯಿಸಬೇಕು ಎಂಬ ವಿಚಾರ ಎಂದ. ಅವರ ಆಸ್ತಿ ಎಲ್ಲ ನಂದೇ ಆಗುತ್ತಲ್ಲ ಅದಕ್ಕೆ ...ಎಂದ. ಅದಕ್ಕೆ ಮನೋಜ ಇಂತಹ ಕೆಲಸಕ್ಕೆ ಬೇರೆಯವರನ್ನು ಕೇಳು ನಾನು ಇಂತಹ ಕೀಳು ಕೆಲಸ ಮಾಡುವುದಿಲ್ಲ ಎಂದು ಬೈದು ಕಳುಹಿಸಿದ.


ಇಬ್ಬರನ್ನು ಶಾಸ್ತ್ರ ಹೇಳಿ ಮುಗಿಸಿವಷ್ಟರಲ್ಲಿ ಒಂದು ಘಂಟೆ ಆಗಿತ್ತು. ಮತ್ತೆ ಮನೋಜ ಇಲ್ಲಿಯೇ ಊಟ ಮಾಡಿ ಹೋಗಿ ಎಂದು ಹೇಳಿದ. ನಮಗೂ ಮನೆ ಬಿಟ್ಟು ತುಂಬ ಸಮಯವಾಗಿದ್ದರಿಂದ. ನಾವು ಆಯಿತು ಎಂದು ಹೇಳಿದೆವು. ಆಗ ನಮಗೆ ತಿಳಿಯಿತು ಅವನ ಹೆಂಡತಿನೇ ಅವನ ಗುರು ಎಂದು. ಅಂದರೆ ಊಟ ಹಾಕುವದನ್ನು ಗುಣಿಸಿ ಭಾಗಿಸಿ ಲೆಕ್ಕಾಚಾರ ಹಾಕಿ ನಮಗೆ ಊಟ ಬಡಿಸಿದಳು . ನಮಗೆ ಅನ್ನಿಸಿತು ನಾವಿಬ್ಬರು ಏನು ರಾಹು ಕೇತುಗಳ ಎಂದು. ಕಡೆಗೆ ಮನೆಯ ದಾರಿ ಹಿಡಿದೆವು. ಮನೆ ಸಮೀಪಿಸುತ್ತಿದ್ದಂತೆ ಮತ್ತೆ ಹೊಟ್ಟೆ ಚುರುಗುಡುತಿತ್ತು. ಅನಂತನ ಹೋಟೆಲ್ಗೆ ಹೋಗಿ ಬೆಣ್ಣೆ ದೋಸೆ ತಿಂದು ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದು ಗೂಡು ಸೇರಿಕೊಂಡೆವು.

Monday, October 12, 2009

ನಾ ಕಷ್ಟ ಪಟ್ಟೆ....

ಮೊನ್ನೆ ಮನೋಜ್ (ಪಂಚಾಮೃತ ಮನ್ಯ) ಭೇಟಿಯಾಗಿದ್ದ. ಅವನನ್ನು ನೋಡಿ ನನಗೆ ಗುರುತು ಹಿಡಿಯಲಾಗಲಿಲ್ಲ. ಏಕೆಂದರೆ, ಮೊದಲು ಅವನು ಹರಕು ಬಟ್ಟೆ ಮತ್ತೆ ಹವಾಯಿ ಚಪ್ಪಲ ಮೇಲೆ ಇರುತ್ತಿದ್ದ. ಈವಾಗ ಅವನ ರೂಪು ರೇಷೆ ಎಲ್ಲವು ಬದಲಾಗಿತ್ತು. ಅವನು ಸೂಟ್ ಮೇಲೆ ಮತ್ತೆ ಒಂದು ಹೊಸ ಕಾರ್ ನೊಳಗಿಂದ ಇಳಿದು ಬಂದು ನನ್ನನ್ನು ಮಾತನಾಡಿಸಿದ. ಹಾಗೆ ಕಾಫಿ ಕುಡಿದ ನಮ್ಮ ಕ್ಷೇಮ ಸಂಚಾರಗಳನ್ನು ಮಾತನಾಡುತ್ತ ಇದ್ದೆವು.

ನಾನು: ಏನು ಸಮಾಚಾರ?

ಮನೋಜ್: ಏನು ಅಂತಹ ವಿಶೇಷ ಇಲ್ಲ ಎಂದ.


ಸ್ವಲ್ಪ ಸಮಯದ ನಂತರ ಮನೋಜ ಶುರು ಹಚ್ಚಿಕೊಂಡ ನಾನು ತುಂಬಾ ಕಷ್ಟ ಪಟ್ಟೆ. ಮನೆಯಲ್ಲಿ ಬೇಗನೆ ಮದುವೆ ಬೇರೆ ಮಾಡಿಬಿಟ್ಟರು ಅವಳ ಜವಾಬ್ದಾರಿ. ಮತ್ತು ತಂಗಿಯ ಮದುವೆ ಜವಾಬ್ದಾರಿ ಕೂಡ ನಿಭಾಯಿಸಿದೆ . ಎಂದೆಲ್ಲ ಹೇಳುತ್ತಿದ್ದ. ಅಷ್ಟರಲ್ಲೇ ನಮ್ಮ ಮಂಜ ಬಂದ.

ನಾನು ತುಂಬಾ ಕಷ್ಟ ಪಟ್ಟೆ ಎಂಬ ಮನ್ಯಾನ ಉದ್ಗಾರ ಮಾತ್ರ ನಿಲ್ಲಲಿಲ್ಲ.

ಮದುವೆ ಆದ ಮೇಲು ತುಂಬಾ ಕಷ್ಟ ಎಂದ. ಅಮ್ಮ ಮೊಮ್ಮಕ್ಕಳು ಬೇಕು ಎಂದು ಹಠ ಹಿಡಿದಳು. ನಾನು ಏನು ಮಾಡಲಿ ತುಂಬಾ ಕಷ್ಟ. ಯಾರು ಸಹಾಯಕ್ಕೆ ಬರಲಿಲ್ಲ ಎಂದ.

ಮಂಜನಿಗೆ ಮತ್ತು ನನಗೆ ತುಂಬಾ ಗಾಬರಿ ಆಯಿತು..

ಯಾರ ಬರಬೇಕಿತ್ತು ಸಹಾಯಕ್ಕೆ.... ಎಂದು ಕೇಳಿದ ಮಂಜ.

ನನ್ನ ಹೆಂಡತಿ ಕಡೆ ಯಾರು ಹೆರಿಗೆ ಸಮಯದಲ್ಲಿ ಸಹಾಯಕ್ಕೆ ಬರಿಲಿಲ್ಲ ಎಂದಾಗ. ನಾನು ಮತ್ತು ಮಂಜ ನಿಟ್ಟುಸಿರು ಬಿಟ್ಟೆವು.

ಮತ್ತೆ ಮನೋಜ ಗುಡಿಗೆ ಹೋಗೋಣವೆ ಎಂದು ಕರೆದ...

ದಾರಿಯುದ್ದಕ್ಕೂ ಇವನ ಕಷ್ಟ ಕೇಳಿ ಕೇಳಿ ನಮ್ಮ ಕಿವಿ Burst ಆಗುವದೊಂದೇ ಬಾಕಿ ಉಳಿದಿತ್ತು.

ಮಂದಿರ ಪ್ರವೇಶಿಸಿದೆವು... ಮಂಗಳಾರತಿ ಮುಗಿದ ಮೇಲೆ ಗರಿ ಗರಿ ಯಾದ 500 ರೂಪಾಯಿಗಳ ನೋಟನ್ನು ಸ್ವಾಮೀಜಿಗೆ ಕೊಟ್ಟ.ಮಂದಿರದಿಂದ ಹೊರಗೆ ಬಂದೆವು.

ಮತ್ತೆ ನಮ್ಮ ಸಂಭಾಷಣೆ ಉತ್ತರ ಕರ್ನಾಟಕದಲ್ಲಿ ನಡೆದ ಭೀಕರ ಜಲ ಪ್ರಳಯದ ಬಗ್ಗೆ ಶುರು ಆಯಿತು.ಮನೋಜ ಮತ್ತೆ ಕಷ್ಟ ಕಷ್ಟ ....ಎಂದು ಎಷ್ಟು ಜನ ನಿರಾಶ್ರಿತರಾಗಿದ್ದಾರೆ. ಅವರಿಗೆ ಊಟ ವಸತಿ ಕಲ್ಪಿಸುವ ಕೆಲಸ ನಾವು ಮಾಡಬೇಕು ಎಂದಲ್ಲ ಬೊಗಳೆ ಬಿಟ್ಟ...

ನಮ್ಮ ಆಫೀಸ್ನಲ್ಲಿ ನಾವು ಫಂಡ್ collect ಮಾಡ್ತಾ ಇದ್ದೇವಿ. ನೀನು ಕೊಡು ಎಂದು ಮನೋಜನಿಗೆ ಕೇಳಿದ ಮಂಜ.


ಅದಕ್ಕೆ ಮನೋಜ ಕಷ್ಟ ಕಷ್ಟ ಕೊಟ್ಟಿದ್ದೆಲ್ಲ, ಏನು ಅವರಿಗೆ ಸೇರುತ್ತೇನೋ...ಅದೆಲ್ಲ ಬೇರೆ ಬೇರೆಯವರು ತಿಂದು ಬಿಡುತ್ತಾರೆ ಎಂದ.


ಅದಕ್ಕೆ ಮಂಜನಿಗೆ ಕೆಟ್ಟ ಕೋಪ ಬಂದಿತ್ತು. ಸ್ವಾಮಿಜಿಗೆ ಕೊಡೋಕೆ 500 ರೂಪಾಯಿ. ಆದರೆ ಇಂತಹ ಸಹಾಯ ಕಾರ್ಯಗಳಿಗೆ ಸುಮ್ಮನೆ ಬೊಗಳೆ ಎಂದು. ಏನ ಲೇ "ಮನ್ಯಾ ನೀನು ಏನಾದರು ತಿಂದೆ ಅಂದರೆ ಅದೆಲ್ಲ ಏನು ಜೀರ್ಣವಾಗುತ್ತ. ಸ್ವಲ್ಪ ...ಏನು... 70% ಹೊರಗೆ ಬರುತ್ತೆ ತಾನೆ ಎಂದ ಮಂಜ.

ಆಯಿತು ಬನ್ನಿ ಕೊಡೋಣ ಎಂದ. ಪಂಚಾಮೃತ ಏನರ ಕುಡಿಯೋಣವೇ ಎಂದು ಕೇಳಿದ ನಮ್ಮ ಮನೋಜ. ಆಯಿತು ಎಂದು ನಾವೆಲ್ಲರೂ ಬಾರ್ ಪ್ರವೇಶಿಸಿದೆವು. ಮತ್ತೆ ನಾವೆಲ್ಲರೂ ಆರ್ಡರ್ ಮಾಡಿದೆವು. ವೈಟರ್ ಬರುವದು ಲೇಟ್ ಆದರು ಕಷ್ಟ ಕಷ್ಟ ಎಂಬ ಉದ್ಗಾರ..ನಾನು ಮಾತ್ರ ನನಗೆ ಪಂಚಾಮೃತ ಬೇಡ ಎಂದು ನನಗೆ ಕೋಕ್ ಹೇಳಿದೆ.


ಮತ್ತೆ ಮಾತನಾಡುತ್ತ ಏನಪ್ಪಾ ಏನು ಕೆಲಸ ಮಾಡುತ್ತ ಇದ್ದೀಯ ಎಂದ ನಮ್ಮ ಮಂಜ ಮನೋಜನಿಗೆ.

ಅಯ್ಯೋ ಅದು ಏನು ಕೇಳುತ್ತೀಯ ಎಂದ ಮನೋಜ.

ಹಾಗಾದರೆ ಬಿಡು ಹೇಳಬೇಡ ಎಂದು ನಾನು ಹೇಳಿದೆ.

ಅಷ್ಟಕ್ಕೆ ಬಿಟ್ಟಾನೆ ಇವನು "ಕಷ್ಟ ಕಷ್ಟ ಕಣೋ" ಮೊದಲು ನಾನು ಒಂದು ಇಲೆಕ್ಟ್ರಾನಿಕ್ ಶಾಪ್ ನಲ್ಲಿ ಸಲೆಸ್ಮನ್ ಆಗಿ ಇದ್ದೆ. ಆಗ ಅಲ್ಲಿಂದ ಅನ್ಯಾಯವಾಗಿ ಹೊರ ಬರಬೇಕಾಯಿತು ಎಂದ. ಅಂತ ಕೆಲಸ ಏನು ಮಾಡಿದಿಯೋ ಮಹಾರಾಯ ಎಂದಾಗ.


ಒಮ್ಮೆ ಒಬ್ಬ ಕಸ್ಟಮರ್ ಬಂದಿದ್ದರು..

ಅವರು ನನಗೆ ಯಾವುದಾದರು ಒಳ್ಳೆಯ ಟಿವಿ ತೋರಿಸಿ ಎಂದರು. ನಾನು ಆಗ ಒಂದು ಚೆನ್ನಾಗಿರೋ ಟಿವಿ ಎಂದು ಹಚ್ಚಿ ತೋರಿಸಿದೆ. ಅನಂತರ ಬೇರೆ ಬೇರೆ ಚಾನೆಲ್ ಹಚ್ಚಿ ತೋರಿಸಿದೆ ಅಷ್ಟಕ್ಕೆ ಅವರು ಕೋಪ ಮಾಡಿಕೊಂಡು ಹೋಗಿಬಿಟ್ಟರು ಎಂದ.


ಅಷ್ಟಕ್ಕೆ ಕೋಪ ಹೇಗಪ್ಪ ಮಾಡ್ಕೊತಾರೆ ನೀನೆ ಏನೋ ಮಾಡಿರಬೇಕು ಎಂದ ಮಂಜ. ಅವರ ಜೊತಿ ಹುಡುಗಿ-ಗಿಡುಗಿ ಬಂದಿದ್ಲೇನು.

"ಲೇ ಛೆ ಛೆ ಹಾಗಲ್ಲ" ಅದು ನನ್ನ ದುರದೃಷ್ಟ ಕಣೋ ಎಂದು ತಲೆ ತಿನ್ನ ಹತ್ತಿದ ಮನೋಜ.

ಮಂಜನಿಗೆ ಕೆಟ್ಟ ಸಿಟ್ಟು ಬಂದಿತ್ತು "ಲೇ ಕುಡುಕ ನನ್ನ ಮಗನೆ" ಏನಾಯಿತು ಹೇಳಲೇ.

ಮತ್ತೆ "ಕಷ್ಟ.. ಕಷ್ಟ.." ಅವತ್ತು ನನ್ನ ಗ್ರಹಚಾರಕ್ಕೆ ಅದೇ ಬ್ರಾಂಡ್ ಟಿವಿ Advirtisement ತೋರಿಸುತ್ತಾ ಇದ್ದರು ಎಂದ.


ಮಂಜನಿಗೆ ಮತ್ತೆ ಪಿತ್ತ ನೆತ್ತಿಗೇರಿತ್ತು. ಇನ್ನೇನು ಚೆನ್ನಾಗೆ ಆಯಿತಲ್ಲ ಮತ್ತೆ ಏಕೆ? ಕೋಪ ಮಾಡಿಕೊಂಡರು ಎಂದ ಮಂಜ ಕೋಪದಿಂದ.

ಅದು ನಾನು ತೋರಿಸಿದ ಟಿವಿಯಲ್ಲಿ ಅದೇ ಟಿವಿ Advirtisement ಚೆನ್ನಾಗಿ ಬರುತ್ತಾ ಇರಲಿಲ್ಲ. ಆದರೆ ಅದು ಬೇರೆ ಬ್ರಾಂಡ್ ಟಿವಿ ಯಲ್ಲಿ ಚೆನ್ನಾಗಿ ಕಾಣಿಸುತ್ತ ಇತ್ತು ಎಂದಾಗ. ನನ್ನ ಬಾಯಿಯಲ್ಲಿ ಇದ್ದ ಕೋಕ್ ಪೂರ್ತಿ ಮೊನೋಜನ ಮುಖದ ಮೇಲೆ..... ಏಕೆಂದರೆ ಅಷ್ಟು ಜೋರಾಗಿ ನಗು ಬರುತ್ತಾ ಇತ್ತು.

ಮತ್ತೆ ಮನೋಜ ಇನ್ನೊಂದು ಪೆಗ್ ಅಂದ. ಮಂಜ ಬೇಡ.. ಬೇಡ.. ಅಂದರು ಕೇಳಲಿಲ್ಲ. ಈ ನನ್ನ ಮಗ ನನಗೆ ಕೋಕ್ ಸ್ನಾನ ಮಾಡಿಸಿ ನಶೆ ಇಳಿಸಿಬಿಟ್ಟ ಎಂದ.

ಮತ್ತೆ ಶುರು ಹಚ್ಚಿ ಕೊಂಡ, ತುಂಬ ಕಷ್ಟ ಕಣೋ... ಹೇಳಿ ಇದರಲ್ಲಿ ನನ್ನದೇನೂ ತಪ್ಪು... ಆ ಮ್ಯಾನೇಜೆರ ಗೂಬೆ ನನಗೆ ಚೆನ್ನಾಗಿ ಬೈದಿದ್ದ ಎಂದ...

ಮತ್ತೆ ಒಂದು ದಿವಸ ಇನ್ನೊಬ್ಬ ಕಸ್ಟಮರ್ ಬಂದಿದ್ದರು. ಅವರಿಗೆ ನಾನು ಚೆನ್ನಾಗಿ ಡೆಮೋ ಕೊಟ್ಟೆ ... ಎಂದ.

ಆಗ ನಮ್ಮ ಮ್ಯಾನೇಜರ್ ನನ್ನ ಕರೆದು ಕಸ್ಟಮರ್ ಉದ್ದೇಶಿಸಿ "ಸರ್ ಗೆ ಒಂದು ಕೋಲ್ಡ್ ಡ್ರಿಂಕ್ಸ್ ಕೊಡು" ಎಂದ.

ಆಗ ಕಸ್ಟಮರ್ ನನಗೆ ಮೇಲೆ ಇಡಪ್ಪ ಕೋಲ್ಡ್ ಇರಬೇಕು ಎಂದರು......ಕಸ್ಟಮರ್ ಇಸ್ ಗಾಡ್ ಎಂಬ ಮ್ಯಾನೇಜರ್ ಹೇಳಿಕೆಯನ್ನು ಶಿರಸಾ ಪಾಲಿಸುವಂತವನು ನಾನು.

ನಾನು ಗೊತ್ತಾಗದೆ ಕೋಕ್ ಅನ್ನು ಫ್ರಿಜ್ ಮೇಲೆ ಇರುವ ಮೈಕ್ರೋ-ಓವನ್ ಒಳಗೆ ಇಟ್ಟು ಬಿಟ್ಟೆ... ಅಷ್ಟೆ......ಕೆಲವೇ ಕ್ಷಣ ಗಳಲ್ಲಿ "ಡುಂ ಡುಂ" ಶಬ್ದ... ಕಸ್ಟಮರ್ ಮತ್ತು ಎಲ್ಲ ಆಫೀಸ್ ಸಿಬ್ಬಂದಿ ಸಹಿತವಾಗಿ ಎಲ್ಲರು ಮಾಯವಾಗಿದ್ದರು... ಅದಕ್ಕೂ ನನ್ನ ಗೂಬೆ ಮ್ಯಾನೇಜರ್ ನನಗೆ ಬೈದ.

ಇದರಲ್ಲಿ ನನ್ನದೇನು ತಪ್ಪು ನೀನೆ ಹೇಳು ಆ ಕಸ್ಟಮರ್ ತಾನೆ ಹೇಳಿದ್ದು ಮೇಲೆ ಇಡು ಅಂತ. ತುಂಬ ಕಷ್ಟ ಕಣೋ ಈ ಕಸ್ಟಮರ್ ಗಳ ಜೊತೆ ಹೆಣಗಾಡೋದು ....

ಮತ್ತೆ ಇನ್ನೊಂದು ದಿವಸ ವಾಶಿಂಗ್ ಮೆಶಿನ್ ನೋಡಲು ಬಂದಿದ್ದರು ಅದಕ್ಕೆ ಒಂದು ವಾಶಿಂಗ್ ಮೆಶಿನ್ ತೊಗೊಂಡರೆ ಇನ್ನೊಂದು ಫ್ರೀ ಇತ್ತು. ನಾನು ಈ ಸಾರಿ ತುಂಬ ಜಾಗ್ರತೆವಹಿಸಿದ್ದೆ. ಆದರು ಅನಾಹುತ ನಡೆದೇ ಹೋಯಿತು ಎಂದ.

ಏನಪ್ಪಾ ಅನಾಹುತ ಎಂದಾಗ ಮನೋಜ ಕಸ್ಟಮರ್ ಡೆಮೋ ತೋರಿಸಬೇಕಾದರೆ ಅವರ ಕರ ವಸ್ತ್ರ ತೊಗೊಂಡು ಅದರೊಳಗೆ ಹಾಕಿದೆ ಆಗ ಅದು ಕ್ಲೀನ್ ಆಗಿ ಎರಡು ಪೀಸ್ ಆಗಿ ಹೊರಬಂದಿತ್ತು. ಅದಕ್ಕೆ ಆ ಕಸ್ಟಮರ್ ನನಗೆ ಈದೇನಾ.... ಒಂದು ತೊಗೊಂಡರೆ ಮತ್ತೊಂದು ಫ್ರೀ ಎಂದು ಹಿಯಾಳಿಸುವದೆ.

ಆಗಲಾದರೂ ನಿನ್ನನ್ನ ಕೆಲಸದಿಂದ ಹೊರಗೆ ಹಾಕಿರಬೇಕು ಎಂದು ಕೇಳಿದ ಮಂಜ.

"ಲೇ ಈ ಗೂಬೆ ಮ್ಯಾನೇಜರ್ ಜೊತೆ ಹೆಣಗುವದು ಬೇಡವಾಗಿ" ನಾನೆ ಕಷ್ಟ ಅಂತ ನೌಕರಿ ಬಿಟ್ಟು ಬಂದೆ ಎಂದ.
ಈಗ ಏನೋ ಮಾಡುತ್ತ ಇದ್ದಿ ಎಂದು ಕೇಳಿದಾಗ ನಾನು ಈಗ ಜ್ಯೋತಿಷ್ಯ ಶಾಸ್ತ್ರ ಪಾರಾಯಣ ಮಾಡಿ ಜ್ಯೋತಿಷ್ಯ ಹೇಳುತ್ತಿದ್ದೇನೆ ಎಂದ.

ಹಾಗಾದರೆ ಈ ಗೋಪಾಲ್ ನ ಬಗ್ಗೆ ಹೇಳು ನೋಡೋಣ ಎಂದ ಮಂಜ. ಹೇಳುವದಕ್ಕೆ ಬಾಯಿ ತೆಗೆದ ಆ ಕೆಟ್ಟ ಬೀರ್ ವಾಸನೆ ಹೊಡೆಯುತ್ತಿತ್ತು. ಹೇಳುವದಕ್ಕೆ ಎಲ್ಲಿಂದ ಬರಬೇಕು ಬಂತು ನೋಡಿ "ಒಅಕ್ ಒಅಕ್" ಎಂದು ತಿನ್ದಿದೆಲ್ಲ ನನ್ನ ಮೈಮೇಲೆ ಹಾಕಿಬಿಟ್ಟ.

ಆಗ ಮಂಜ ಸುಮ್ಮನಿರಲಾರದೆ ಇದೆ ನೋಡು ನಿನ್ನ ಭವಿಷ್ಯ ಎಂದು ಗಹ ಗಹಿಸಿ ನಕ್ಕ . ಅವನು ನಗುತ್ತಿದ್ದಾಗ ನಾನು ಸ್ವಲ್ಪ ದೂರ ನಿಂತೆ. ಎಲ್ಲಿ ಇವನೂ ವಾಂತಿ ಮಾಡಿಕೊಂಡರೆ ಕಷ್ಟ ಅಂತ. ಮತ್ತೆ ಬಿಲ್ಲು ಸಹ ನಾನೆ ಕೊಟ್ಟು ಬರಬೇಕಾಯಿತು.

ಮತ್ತೆ ಅವನನ್ನು ಕರೆದು ಕೊಂಡು ಹೋಗಿ ಮನೆ ಮುಟ್ಟಿಸಿದೇವು... ಅಷ್ಟಾದರೂ ಬಿಟ್ಟಿತೆ...? ನಮ್ಮ ಕಷ್ಟ. ಅವನ ಹೆಂಡತಿ ಮತ್ತೆ ನಮಗೆ ಉಗಿಯುವದೆ, ನೀವೇ ಕುಡಿಸಿ ಕರೆದು ಕೊಂಡು ಬಂದಿದ್ದೀರಾ ಅಂತ.

ಅಯ್ಯೋ ಕಷ್ಟ ಕಷ್ಟ ಅವನಿಗೆ ಪರಿಹಾರದ ದುಡ್ಡು ಕೇಳುವದೆ ಮರೆತು ಹೋಗಿತ್ತು....

Tuesday, October 6, 2009

ತರ್ಲೆ ಮಂಜ(ಗ)ನಿಗೆ ದೇವರನಾಮ ....

ನಮ್ಮ ಶಾಲೆಗೆ ಶಂಭು ಎಂಬ ವಿದ್ಯಾರ್ಥಿ ಸೇರಿ ಕೊಂಡಿದ್ದ. ಶಂಭು ತನ್ನ ಬಗ್ಗೆ ಕೊಚ್ಚಿ ಕೊಳ್ಳುತ್ತಾ ತಿರುಗುತ್ತಿದ್ದ. ಅವನು ಬಾಯಿ ಎತ್ತಿದರೆ ಸಾಕು ಬರಿ ಬೈಗುಳಗಳು. ಒಂದು ದಿವಸ ನನಗೆ , ನಿಮ್ಮ ತಂದೆಗೂ ನನ್ನ ತಂದೇನೆ ಸಂಬಳ ಕೊಡುವುದು ಎಂದು ಬೂಸಿ ಬಿಟ್ಟಿದ್ದ. ನಾನು ಇದನ್ನೇ ಹೋಗಿ ನನ್ನ ತಂದೆಗೆ ಕೇಳಿದಾಗ, ನನ್ನ ತಂದೆ ಜೋರಾಗಿ ಬಿದ್ದು ಬಿದ್ದು ನಕ್ಕು ಬಿಟ್ಟಿದ್ದರು.

ಶಂಭು ಒಂದು ದಿವಸ ಆಟದ ಸಮಯದಲ್ಲಿ ಮಂಜನ ಜೊತೆ ಜಗಳ ಆಡಿ, ಅವನಿಗೆ ಕೆಟ್ಟ ಅವಾಚ್ಯ ಶಬ್ದಗಳಿಂದ ಚೆನ್ನಾಗಿ ಬೈದಿದ್ದ. ಅಷ್ಟರಲ್ಲಿ ಅವರ ಜಗಳ ನೋಡಿ ಮಾಸ್ತರ್ ಅವರಿಬ್ಬರನ್ನು ಕೇಳಿದಾಗ. ಮಂಜ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದ. ಆದರೆ ಶಂಭು ಏನು ಇಲ್ಲ? ಸರ್ ದೇವರನಾಮ ಹೇಳುತ್ತಿದ್ದೇನೆ ಎಂದು ಬಿಟ್ಟ. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ಒಂದು ದಿವಸ ಶಾಲೆಯಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮ ಇತ್ತು. ಅದರ ನಿರ್ವಹಣೆಯ ಕಾರ್ಯ ನಮ್ಮ ಮಂಜನದು. ಮಂಜನಿಗೆ ಮೊದಲೇ ಶಂಭು ಮೇಲೆ ಸಿಟ್ಟು ಇತ್ತು. ಕಾರ್ಯಕ್ರಮದಲ್ಲಿ ಅವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಮ್ಮೆಲ್ಲರಿಗೂ ಒಂದು ಐಡಿಯಾ ಹೇಳಿದ.

ಮತ್ತೆ ಕಾರ್ಯಕ್ರಮ ಶುರು ಆಯಿತು. ಮಂಜ ಆರಂಭಿಕ ಭಾಷಣ ಮುಗಿದ ಮೇಲೆ. "ಈಗ ಶಂಭು ಅವರಿಂದ ದೇವರನಾಮ" ಎಂದು ಬಿಟ್ಟ. ಶಂಭು ಮಾತ್ರ ತನ್ನ ಸೀಟ್ ಮೇಲಿಂದ ಏಳಲಿಲ್ಲ. ಮತ್ತೆ ಇನ್ನೊಂದು ಸಾರಿ ಮೈಕ್ ಮೇಲೆ ಕೂಗಿದ "ಶ್ರೀ ಶಂಭು ಅವರಿಂದ ದೇವರನಾಮ" ಎಂದು. ಶ್ರೀ ಶಂಬು ಎಂದಾಗ ನಾವೆಲ್ಲರೂ ಗೊಳ್ ಎಂದು ನಕ್ಕುಬಿಟ್ಟೆವು. ನಮ್ಮ ಪ್ಲಾನ್ ಪ್ರಕಾರ ನಾವೆಲ್ಲರೂ ಶಂಭುನ ತಲೆಯ ಮೇಲೆ ಹೊತ್ತುಕೊಂಡು. ಶಂಭು ಅವರಿಗೆ ಜಯವಾಗಲಿ ಎಂದು ಜೈಕಾರ ಹಾಕುತ್ತ ಬಂದು ಸಭಾಂಗಣದ ಮೈಕ್ ಮುಂದೆ ಬಿಟ್ಟು ಹೋದೆವು. ಶಂಭು ನಡುಗುತ್ತ ನಿಂತಿದ್ದ ಪೂರ್ತಿ ಮೈಯಲ್ಲ ಸ್ನಾನ ಮಾಡಿದ ಹಾಗೆ ಬೆವತು ಬಿಟ್ಟಿತ್ತು. ಏನು ತಿಳಿಯದೆ ಮಂಜನನ್ನು ಒಮ್ಮೆ ನೋಡಿದ. ಮಂಜ ಹಾಗೆ ಸುಮ್ಮನೆ ಬಿಟ್ಟಾನೆ ಬೈದು ದೇವರನಾಮ ಅನ್ನುವಷ್ಟು ಸೋಕ್ಕಲ್ಲ ನಿನಗೆ ಈಗ ಹೇಳು ದೇವರನಾಮ ಎಂದು ಹೇಳಿದ. ಕಡೆಗೆ ಶಂಭು ಕಾಪಾಡು ಎಂದು ಮಂಜನಿಗೆ ಬೇಡಿಕೊಂಡ. ಆಗ ಮಂಜ ಶಂಭುನಿಗೆ ಒಂದು ಸಿನಿಮ ಹಾಡು ಹಾಡು ಎಂದು ಸೂಚಿಸಿದ. ಮತ್ತೆ ಅದರ ಸಾಹಿತ್ಯ ಬರೆದು ಕೊಂಡು ಬಂದಿರುವೆ ತೆಗೆದುಕೋ ಎಂದು ಪೇಪರ್ ಅವನ ಕೈಯಲ್ಲಿ ಇಟ್ಟ. ಆನಂತರ ಮೈಕ್ ನಲ್ಲಿ ಹೇಳಿದ ಶಂಭು ಅವ್ರಿಗೆ ದೇವರನಾಮ ಹೇಳಲು ಮೂಡಿಲ್ಲ ಆದ್ದರಿಂದ ಅವರು ಸಿನಿಮ ಹಾಡು ಹಾಡಲಿದ್ದಾರೆ ಎಂದು. ಶಂಭು ಸಾವಕಾಶವಾಗಿ ನಡುಗುತ್ತ ಪೇಪರ್ ತೆಗೆದು ಹಾಡಲು ಶುರು ಹಚ್ಚಿಕೊಂಡ. "ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ.. ಗುರುಗಳು ಹೇಳಿದ ಮಾತುಗಳೆಲ್ಲ ಎಂದು ನಿಜವಲ್ಲ" ಎಂದು. ಅಲ್ಲಿ ಸಭೆಯಲ್ಲಿ ಕುಳಿತಿದ್ದ ಗುರುಗಳಿಗೆಲ್ಲ ಪಿತ್ತ ನೆತ್ತಿಗೇರಿತ್ತು. ನಾವೆಲ್ಲರೂ ಹಿಂದೆ ಕುಳಿತು ಶಿಳ್ಳೆ ಹೊಡಿದಿದ್ದೆ ಹೊಡದಿದ್ದು. ಪೂರ್ತಿ ಸಭಾಂಗಣ ಕೇಕೆ ಹಾಕುತಿತ್ತು. ಮತ್ತೆ ಕೆಲವರು ಡಾನ್ಸ್ ಸಹ ಮಾಡಲು ಶುರು ಮಾಡಿದ್ದರು. ಶಂಭು ತುಂಬ ಹುರುಪಿನಿಂದ ತಾನು ಡಾನ್ಸ್ ಮಾಡುತ್ತ ಹಾಡಿದ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರು ಶಂಭುನ ಹೊಗಳಿದ್ದ ಹೊಗಳಿದ್ದು... ಶಂಭು ಹಿರಿ ಹಿರಿ ಹಿಗ್ಗಿದ್ದ.

ಮರು ದಿನ ಶಂಭುನಿಗೆ ಅಟೆಂಡರ ಕರೆದು, ಮಾಸ್ತರ ಕರೆಯುತ್ತಿದ್ದಾರೆ ಎಂದು ಹೇಳಿದ. ಮಂಜ ಶಂಭುವಿಗೆ ಹುರುದುಂಬಿಸಿ ನಿನಗೆ ಬಹುಮಾನ ಕೊಡಬಹುದು ನೀನು ತುಂಬ ಚೆನ್ನಾಗಿ ಹಾಡಿದೆ. ಬೇಗ ಹೋಗು ಎಂದು ಹೇಳಿದ . ಶಂಭು ತುಂಬಾ ಖುಷಿಯಾಗಿ ಸ್ಟಾಫ್ ರೂಮಿಗೆ ಹೋದ. ತಕ್ಷಣ ಎಲ್ಲಾ ಮಾಸ್ತರರು ಸೇರಿ ಶಂಭುನಿಗೆ ಸಹಸ್ರನಾಮ, ಅಷ್ಟೋತ್ತರ ಹೀಗೆ. ಎಲ್ಲ ದೇವರನಾಮವನ್ನು ಕೇಳಿಸಿ ಬಿಟ್ಟಿದ್ದರು. ಮತ್ತೆ ಅವನಿಗೆ ನಿನ್ನ ತಂದೆಯನ್ನು ಕರೆದುಕೊಂಡು ಶಾಲೆಗೆ ಬಾ ಎಂದು ತಾಕಿತ್ ಮಾಡಿದ್ದರು. ಶಂಭುನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆದರು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ....ಅಳುತ್ತ ಬಂದು ಕುಳಿತ.

ಶಂಭು ತನ್ನ ತಂದೆಗೆ ಹೇಗೆ ಹೇಳುವದೆಂದು ಯೋಚಿಸಿ. ಅವರ ತಂದೆ ತುಂಬಾ ಕೋಪಿಷ್ಠ ಹೀಗಾಗಿ ಕಡೆಗೆ ಮಂಜನ ಸಹಾಯ ಕೇಳಿದ. ಮಂಜ ತನ್ನ ಅತ್ತೆಯ ಮಗನನ್ನು ಕರೆದು ತಂದು ಇವ ನಿನ್ನ ಅಣ್ಣ ಎಂದು ಹೇಳು ಎಂದು ಹೇಳಿದ. ಶಂಭು ಅವನನ್ನು ಕರೆದು ಕೊಂಡು ಹೋದ. ಮಾಸ್ತರ ಮುಂದೆ ಕೆನ್ನೆ ಕೆಂಪಾಗುವ ಹಾಗೆ ಸಿಕ್ಕಿದ್ದೇ ಚಾನ್ಸ್ ಎಂದು ಮಂಜನ ಅತ್ತೆ ಮಗ ಬಾರಿಸಿದ್ದ. ಮತ್ತೆ ಶಂಭು ಅವರಿಬ್ಬರಿಗೂ ಹೋಟೆಲ್ ನಲ್ಲಿ ಪಾರ್ಟಿ ಕೊಡಿಸಿದ.

ನಾವೆಲ್ಲರೂ ಅವನಿಗೆ ಶಿಕಾರಿ ಶಂಭು, ಶಂಭು ಮಹಾರಾಜ ಮತ್ತು ತೊಗರಿ ತಿಪ್ಪ ಎಂದೆಲ್ಲ ನಾಮಾಂಕಿತ ಮಾಡಿದ್ದೆವು. ಅವನು ಮತ್ತೆ ಯಾವತ್ತು ಬೂಸಿ ಬಿಡುವ ಗೋಜಿಗೆ ಹೋಗಲಿಲ್ಲ....ಮತ್ತೆ ತನ್ನ ಭಾಷಾ ಪ್ರಯೋಗ ಕೂಡ ಸುಧಾರಿಸಿ ಕೊಂಡಿದ್ದ.

Monday, September 28, 2009

ತರ್ಲೆ ಮಂಜ(ಗ)ನ ಐಡಿಯಾಗಳು ....

ಒಂದು ದಿವಸ ಶಾಲೆಯಲ್ಲಿ ಕೆಮಿಸ್ಟ್ರಿ ಕ್ಲಾಸ್ ಮುಗಿದ ಮೇಲೆ ಮಾಸ್ತರ ಪ್ರಯೋಗಗಳನ್ನು ತೋರಿಸಲು ಪ್ರಯೋಗಾಲಯಕ್ಕೆ ಕರೆದು ಕೊಂಡು ಹೋಗಿದ್ದರು. ಅವರು ಪ್ರಯೋಗಗಳನ್ನು ತೋರಿಸುತ್ತಿದ್ದರು, ಸುಬ್ಬನಿಗೆ ಮಾತ್ರ ಬೇರೆ ಕಡೆಗೆ ಲಕ್ಷ್ಯವಿತ್ತು. ಅವನು ಎಲ್ಲ ಬಣ್ಣ ಬಣ್ಣದ ಬಾಟಲಿಗಳನ್ನು ನೋಡುತ್ತಾ ನಿಂತಿದ್ದ. ಆಮೇಲೆ ಸುಮ್ಮನಿರದೆ ಒಂದು ಬಾಟಲಿಯ ಮುಚ್ಚಳವನ್ನು ತೆಗೆದ. ಆಗ ಬಾಟಲಿಯಿಂದ ಹೊಗೆ ಬರಲು ಆರಂಭಿಸಿತು. ಅದನ್ನು ನೋಡಿದ ಸುಬ್ಬ ತುಂಬಾ ಗಲಿಬಿಲಿಗೊಂಡ. ಎಲ್ಲಿ ಮಾಸ್ತರ್ ಅದನ್ನು ನೋಡಿ ಬೈಯುತ್ತಾರೆ ಎಂದು. ಎಲ್ಲಿ ಲ್ಯಾಬ್ ತುಂಬಾ ಹೊಗೆ ಬಂದರೆ ಕಷ್ಟ ಎಂದು ಮುಂದೆ ನಿಂತಿರುವ ಮಂಜನಿಗೆ ಇದನ್ನು ಹೇಳಿದ. ಮಂಜ ಅದನ್ನು ನೋಡಿ ಲೇ ಅದು "ಬಿಸಿಯಾಗಿರಬೇಕು" ಅದಕ್ಕೆ ಸ್ವಲ್ಪ ನೀರು ಸುರಿ ಎಂದು ಐಡಿಯಾ ಕೊಟ್ಟ. ಆನಂತರ ನಮ್ಮ ಸುಬ್ಬ ಸುಮ್ಮನಿರದೆ ಅದಕ್ಕೆ ನೀರು ಸುರಿದು ಬಿಟ್ಟ. ನೋಡ ನೋಡುತ್ತಲೇ ಎರಡೇ ಸೆಕೆಂಡಿನಲ್ಲಿ "ಪಟ ಪಟ " ಎಂಬ ಶಬ್ದ ಬಂದು ಬಾಟಲಿ ಚೂರು ಚೂರು ಆಗಿ ಸುಬ್ಬ ಮತ್ತು ಅವನ ಸಂಗಡ ನಿಂತ ವಿನಯ ಆಸ್ಪತ್ರೆ ಸೇರುವ ಹಾಗೆ ಆಗಿತ್ತು. ಆನಂತರ ಗೊತ್ತಾಗಿತ್ತು ಅದು sulpuric acid ಎಂದು. ಅದಕ್ಕೆ ಯಾವತ್ತು ನೀರು ಹಾಕಬಾರದು ಎಂದು ಅನಂತರ ಕ್ಲಾಸಿನಲ್ಲಿ ಮಾಸ್ತರ್ ಹೇಳಿದ್ದರು.

ಮತ್ತೊಂದು ದಿನ biology ಮಾಸ್ತರ ನಾಳೆ ಲ್ಯಾಬ್ ಇದೆ ಎಲ್ಲರು ಒಂದು ಕಪ್ಪೆ ಹಿಡಿದು ತನ್ನಿರಿ ಎಂದು ಹೇಳಿದರು. ನಾನು ಮತ್ತೆ ಮಂಜ ಕಪ್ಪೆ ಹಿಡಿಯೋಣವೆಂದು ಸಂಜೆ ಮಳೆಯಲ್ಲಿ ಗ್ರೌಂಡ್ಗೆ ಹೋದೆವು. ಎಲ್ಲಿ ಕಪ್ಪೆಗಳು ವಟಗುಡುವಿಕೆ ಕೇಳಿಸುವದೋ ಅಲ್ಲಿ ಟಾರ್ಚ್ ಹಿಡಿದು ಹಿಡಿಯುವ ಹುನ್ನಾರ ನಡಿಸಿದೆವು. ಆದರೆ ಒಂದು ಕಪ್ಪೆ ನಮ್ಮ ಕೈಗೆ ಸಿಗಲೇ ಇಲ್ಲ. ಮತ್ತೆ ಸ್ವಲ್ಪ ಮುಂದೆ ಹೋಗೋಣ ಎಂದು ಮಂಜ ಹೇಳಿದ, ಹಾಗೆಯೇ ಮುಂದೆ ಹೋದೆವು. ಅಷ್ಟರಲ್ಲೇ ತುಂಬಾ ರಭಸದಿಂದ ಚರಂಡಿ ನೀರು ನುಗ್ಗಿ ಬಂದಿತ್ತು. ಮೊಣ ಕಾಲುವರೆಗೆ ಚರಂಡಿ ನೀರು ಇತ್ತು. ಅಷ್ಟರಲ್ಲೇ ಒಂದು ಕಪ್ಪೆ ಕಾಣಿಸಿತು ನಾನು ಹಿಡಿಯೋಣ ಎಂದು ಕ್ರಿಕೆಟ್ ಚಾಂಪಿಯನ್ ಹಾಗೆ ಜಂಪ್ ಮಾಡಿ ಕ್ಯಾಚ್ ಹಿಡಿದ ಹಾಗೆ ಹಿಡಿಯಲು ಹೋದೆ. ದಪ ಎಂದು ಬಿದ್ದು ಬಿಟ್ಟು ಮೊಣ ಕಾಲು ಕೆತಿತ್ತು ರಕ್ತ ಸುರಿಯುತ್ತಿತ್ತು. ಅದನ್ನು ನೋಡಿ ಮಂಜ ನನ್ನನ್ನು ಎಬ್ಬಿಸದೆ ಬಿದ್ದು ಬಿದ್ದು ಗಹ ಗಹಿಸಿ ನಗಹತ್ತಿದ್ದ. ಚರಂಡಿ ನೀರು ಮೈಯಲ್ಲ ಆವರಿಸಿತ್ತು. ನನ್ನಷ್ಟಕ್ಕೇ ನನಗೆ ಹೇಸಿಗೆ ಬರುವಷ್ಟು ಕೆಟ್ಟ ವಾಸನೆ ಹೊಡೆಯುತ್ತಿತ್ತು. ನಾನು ಕೋಪದಿಂದ ಮಂಜನಿಗೆ ಬೈದು ಮತ್ತೆ ನಮ್ಮ ಬೇಟೆಗೆ ಹೋದೆವಾದರು ಪ್ರಯತ್ನ ಮಾತ್ರ ಸಫಲವಾಗಲಿಲ್ಲ.

ಈ ರೂಪದಿಂದ ಮನೆಗೆ ಹೋಗುವದು ಅಸಾಧ್ಯವಾಗಿತ್ತು. ಇಬ್ಬರು ಮಂಜನ ಮನೆಗೆ ಹೋದೆವು ನಾನು ಕೈ ಕಾಲು ತೊಳೆದು ಕೊಳ್ಳಲು ಮಂಜನ ಮನೆಯ ಹಿತ್ತಲಕ್ಕೆ ಹೋದೆ. ನನಗೆ ಅಲ್ಲಿಯ ದೃಶ್ಯ ನೋಡಿ ಮಂಜನನ್ನು ಕೊಲೆ ಮಾಡುವಷ್ಟು ಕೋಪ ಬಂದಿತ್ತು. ಏಕೆಂದರೆ ಅವನ ಮನೆಯ ಹಿತ್ತಲಲ್ಲಿ 10-15 ಕಪ್ಪೆಗಳು ಇದ್ದವು. ನಾನು ಕೈ ಕಾಲು ತೊಳೆಯದೇ ಸೀದಾ ಬಂದು ಮಂಜನ ಮೇಲೆ ಏಗರಾಡಿದೆ. ಮಂಜ ಮುಂಜಾನೆ ಒಂದು ಇದ್ದಿರಲಿಲ್ಲ ಈಗ ಹೇಗೆ ಬಂದವು ನನಗೆ ಆಶ್ಚರ್ಯ ಎಂದ. ಮತ್ತೆ ಇಬ್ಬರು ಹೋಗಿ 8 ಕಪ್ಪೆ ಹಿಡಿದೆವು. ಅನಂತರ ಕೈ ಕಾಲು ತೊಳೆದು ಮನೆಗೆ ಹೋದೆ.

ಮರು ದಿವಸ ಮತ್ತೆ ಕೆಲವರಿಗೆ ನಾವೇ ಕಪ್ಪೆ ಹಂಚಿದೆವು. Biology ಲ್ಯಾಬ್ ಕನ್ನಡ ಕ್ಲಾಸ್ ಆದ ಮೇಲೆ ಇತ್ತು. ಸುಬ್ಬ ಕೂಡ ಒಂದು ಕಪ್ಪೆ ಹಿಡಿದು ತಂದಿದ್ದ. ಅವನ ಪ್ಲಾಸ್ಟಿಕ್ ಚೀಲದಲ್ಲಿ ಅದು ಸೂಸು ಮಾಡಿ ಅದರಲ್ಲೇ ಈಜಾಡುತಿತ್ತು. ಸ್ವಲ್ಪ ಸಮಯದ ನಂತರ ಅದರ ವಾಸನೆ ಎಲ್ಲಡೆ ಹರಡಿತ್ತು. ಅದನ್ನು ನೋಡಿ ಮಂಜ ಲೇ ಪ್ಲಾಸ್ಟಿಕ್ ಚೀಲಕ್ಕೆ ಒಂದು ತೂತು(Hole) ಮಾಡಿ ಅದರ ಸೂಸು ಹೊರಗೆ ಚೆಲ್ಲು ಎಂದು ಸುಬ್ಬನಿಗೆ ಹೇಳಿದ. ಸುಬ್ಬ ಅದನ್ನು ಕತ್ತರಿಯಿಂದ ಕಟ್ ಮಾಡಿದ. ಚೀಲವನ್ನು ದೊಡ್ಡದಾಗಿ ಕತ್ತರಿಸಿ ಬಿಟ್ಟಿದ್ದ. ಅದರಿಂದ ಕಪ್ಪೆ ಟುಂಗನೆ ಜಿಗಿದು ಬಿಟ್ಟಿತ್ತು. ಅಲ್ಲೇ ಕುಳಿತು ಕೊಂಡಿದ್ದ ಹುಡುಗಿಯರೆಲ್ಲ ಎದ್ದು ಡಾನ್ಸ್ ಮಾಡಲು ಶುರು ಹಚ್ಚಿ ಕೊಂಡಿದ್ದರು.

ಅಷ್ಟರಲ್ಲೇ ಕನ್ನಡ ಮಾಸ್ತರ್ ಆಗಮಿಸಿ ಈ ದೃಶ್ಯ ನೋಡಿ ಕೋಪದಿಂದ ಸುಬ್ಬನಿಗೆ ಅದನ್ನು ಹಿಡಿದು ತೆಗೆದುಕೊಂಡು ಹೋಗಿ ಕ್ಲಾಸ್ ಆಗುವವರಿಗೆ ಹೊರಗೆ ನಿಲ್ಲು ಎಂದು ಆಜ್ಞೆ ಮಾಡಿದ್ದರು.

ಮತ್ತೊಂದು ದಿವಸ ಜೇನಿನ ಗೂಡಿಗೆ ಯಾರೋ ಕಲ್ಲು ಎಸೆದಿದ್ದರು. ನಾನು,ಮಂಜ ಮತ್ತೆ ಸುಧೀರ ಲೈಬ್ರರಿ ಹೋಗಲು ಬರುತ್ತಿದ್ದೆವು. ಜೇನು ಎದ್ದಿದ್ದು ನೋಡಿ ಮಂಜ "ಲೇ ಓಡಿರಿ ಜೇನು ಎಂದು ಬಿಟ್ಟ". ನಾನು,ಮಂಜ ಮತ್ತೆ ಸುಧೀರ ಎದ್ದು ಬಿದ್ದು ಓಡಲು ಶುರು ಮಾಡಿದೆವು. ಜೇನುಗಳು ನಮ್ಮನ್ನು ಅಟ್ಟಿಸಿಕೊಂಡು ಕಡಿಯಲಾರಂಬಿಸಿದವು. ನನಗೆ ಮಂಜ ಒಂದು ದಿವಸ ಪ್ರವಚನ ಮಾಡಿದ್ದ "ಜೇನು ಬೆನ್ನು ಹತ್ತಿದರೆ ಹುಲ್ಲಿನಲ್ಲಿ ಉಸಿರಾಡದೆ ಮಲೆಗಿದರೆ ಹಾಗೆ ಹೋಗುತ್ತವೆ ಎಂದು". ನಾನು ಮತ್ತೆ ಮಂಜ ಹಾಗೆ ಮಾಡಿದೆವು. ನಮಗೆ ಒಂದೆರಡು ಕಡಿದಿದ್ದವು. ಆದರೆ ಸುಧಿರನನ್ನ ಜೇನುಗಳು ಪೂರ್ತಿ ಶಾಲೆ ಓಡಾಡಿಸಿ ಕಡಿದಿದ್ದವು. ಇವನು ಸುಮ್ಮನೆ ಇರಲಾರೆದೆ ಹಾಸ್ಟೆಲ್ ನಲ್ಲಿ ಒಣಗಲು ಹಾಕಿದ ಟಾವೆಲ್ ಅವುಗಳ ಮೇಲೆ ಎಸೆದಿದ್ದ. ಅವು ಮತ್ತಷ್ಟು ಕೋಪಗೋಂಡು ಪೂರ್ತಿ ಮುಖಕ್ಕೆ ಕಡೆದಿದ್ದವು. ಅನಂತರ ಹಾಸ್ಟೆಲ್ ಹುಡುಗರು ಕಂಬಳಿ ಹೊದಿಸಿ ಸುಧಿರನನ್ನು ಕಾಪಾಡಿದ್ದರು. ಸುಧೀರ ನಾಲ್ಕು ದಿನ ಜ್ವರ ಬಂದು ಹಾಸಿಗೆ ಹಿಡಿದಿದ್ದ.

ಮತ್ತೆ ಒಂದು ದಿವಸ ಕಾಲೇಜ್ ನಲ್ಲಿ ಶೇವಿಂಗ್ ಮಾಡದೇ ಬಂದರೆ ಫೈನ್ ಹಾಕುತಿದ್ದರು. ಆಗ ಸಂಜೀವನಿಗೆ ತುಂಬಾ ಮೊಡವೆಗಳು ಇದ್ದವು. ಅದಕ್ಕೆ ಶೇವಿಂಗ್ ಮಾಡುವಾಗ ತುಂಬಾ ರಕ್ತ ಬರುತಿತ್ತು. ಅದಕ್ಕೆ ನಮ್ಮ ಮಂಜ ಅವನಿಗೆ ನೀನು ಒಂದು ಹೇರ್ ರಿಮೂವರ್ ಹಾಕಿ ಕೋ ಎಂದು ಐಡಿಯಾ ಕೊಟ್ಟ. ಹೇರ್ ರಿಮೂವರ್ ಹಾಕಿ ಎರಡು ಘಂಟೆ ಹಾಗೆ ಬಿಟ್ಟ ನಮ್ಮ ಸಂಜೀವ. ಅನಂತರ ಮುಖ ತೊಳೆದು ಕೊಂಡಾಗ ಕೂದಲು ಜೊತೆ ಚರ್ಮ ಕೂಡ ಕಿತ್ತು ಬಂದು ಒಳಗಿನ ಮಾಂಸ ಕೂಡ ಕಾಣಿಸಲು ಶುರು ಮಾಡಿತ್ತು. ಅವನಿಗೆ ಮಂಜನ ಮೇಲೆ ಕೆಟ್ಟ ಕೋಪ ಬಂದಿತ್ತು. ಮಂಜನಿಗೆ ಕೇಳಿದರೆ ಅವನ ಮುಖ ನೋಡಿ ಬಿದ್ದು ಬಿದ್ದು ನಕ್ಕಿದ್ದ. ಮತ್ತೆ "ಎರಡು ಘಂಟೆ" ಯಾಕೆ ಹಾಕಿಕೊಂಡೆ ಎರಡು ನಿಮಿಷ ಸಾಕು ಎಂದು ಹೇಳಿದ. ಅನಂತರ ಹೇರ್ ರಿಮೂವರ್ ಸಾಹಸಕ್ಕೆ ಹೋಗಲಿಲ್ಲ ಪಾಪ ಸಂಜೀವ. ಮತ್ತೆ ಹುಡುಗಿಯರ ಮಧ್ಯ ಕೂಡ ಸಂಜೀವ ಮುಖ ಮುಚ್ಚಿ ಹೋಗುವ ಪರಿಸ್ತಿತಿ ನಿರ್ಮಾಣವಾಗಿತ್ತು.

ಮತ್ತೊಂದು ದಿವಸ ನಾವೆಲ್ಲರೂ ಟೂರ್ ಗೆ ಹೋಗಿದ್ದೆವು ನಾನು ಅವತ್ತು ಟೂಥ್ ಪೇಸ್ಟ್ ತೆಗೆದು ಕೊಂಡು ಬಂದಿರಲಿಲ್ಲ. ಅದ್ದರಿಂದ ಮಂಜನಿಗೆ ಟೂಥ್ ಪೇಸ್ಟ್ ಕೇಳಿದ್ದೆ ತಪ್ಪಾಯಿತು ಎನ್ನುವ ಹಾಗೆ ಮಾಡಿದ್ದ. ಟೂಥ್ ಪೇಸ್ಟ್ ಬದಲು ತನ್ನ ಶವಿಂಗ್ ಕ್ರೀಂ ಹಚ್ಚಿ ಬಚ್ಚಲಿನಲ್ಲಿದ್ದ ನನಗೆ ಕೊಟ್ಟಿದ್ದ. ನಾನು ಹಾಗೆ ತಿಕ್ಕಿ ಕೊಳ್ಳುತ್ತಿದ್ದಾಗ ಅದರ ನೊರೆ ಮತ್ತೆ ವಾಸನೆ ಇಂದ ಗೊತ್ತಯಿತಾದರು, ಎರಡು ದಿನ ಮಾತ್ರ ಅದರ ವಾಸನೆ ನನ್ನ ಬಾಯಿಯಿಂದ ಹೋಗಲಿಲ್ಲ.

ತರ್ಲೆ ಮಂಜನ ಐಡಿಯಾಗಳು ಮತ್ತೆ ತರ್ಲೆ ಕೆಲಸಗಳು ಇನ್ನು ಬಹಳಷ್ಟು ಇವೆ.....

Thursday, September 24, 2009

ತರ್ಲೆ ಮಂಜ(ಗ)ನ ಓದುವ ಹವ್ಯಾಸ ....

ಮೊನ್ನೆ ನಾನು ಮತ್ತು ಮಂಜ ಸುಮ್ಮನೆ ಪೇಟೆಯಲ್ಲಿ ಸುತ್ತುತ್ತಿದ್ದಾಗ ಮಂಜ ಒಮ್ಮೆಲೇ "ಅವರಪ್ಪನ" ಎಂದ. ಅದು ಯಾರಿಗೆ ಅಂದ ಎಂದು ನಾನು ನೋಡಿದಾಗ ಅದು "ಆವಾರಾಪನ" ಎಂಬ ಚಲನ ಚಿತ್ರದ ಪೋಸ್ಟರ್ ಆಗಿತ್ತು. ಹೀಗೆ ಬೇರೆ ಬೇರೆ ಭಾಷೆಯ ಬೋರ್ಡ್ ಮತ್ತು ಚಿತ್ರಗಳನ್ನೂ ಕೆಟ್ಟದಾಗಿ ಓದುವ ಹವ್ಯಾಸ ನಮ್ಮ ಮಂಜನಿಗೆ.

ಹೀಗೆ ಅವ ಯಾವುದಾದರು tolet ಎಂಬ ನೋಡಿದ ಅಂದರೆ ಅನ್ನುವದು toilet ಅಂತ. ಮತ್ತೆ ಒಂದು "ಕಸ್ತೂರಿ ಕಿರಾಣಿ" ಅಂಗಡಿ ಇತ್ತು. ಅವ ಎಲ್ಲ ರೇಟ್ ಜ್ಯಾಸ್ತಿ ಇರುತಿತ್ತು ಅದಕ್ಕೆ ಇವ ಅವನಿಗೆ ಹಜಾಮರ ಅಂಗಡಿ ಅಥವಾ ಕಷ್ಟ ಮಾಡಿಸಿ ಕೊಳ್ಳಲಿಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿತ್ತಿದ್ದ. ಅದು ಏಕೆ ಎಂದು ಕೇಳಿದಾಗ ಕಸ್ತೂರಿನ (ಕಷ್ಟರಿ ಮಾಡಿದ್ದ ಕಷ್ಟ ಎಂದರೆ ಹಜಾಮತಿ ಎಂಬ ಅರ್ಥ) ಎಂದು ಮಾಡಿದ್ದ.

ಮೆತ್ತೆ ಒಂದು ದಿವಸ "ಹೆತ ಹೆತ ಹೋಗಯ್ಯ" ಎಂದು ಓದಿ ಬಿಟ್ಟ. ಅದು ಹೊತೆ ಹೊತೆ ಹೋಗಯಾ ಎಂಬ ಹಿಂದಿ ಧಾರವಾಹಿ ಇತ್ತು.

ಮತ್ತೆ ಒಂದು ದಿವಸ ಹಿಂದಿ ಹುಡುಗಿ ಚೇತನ ನಮ್ಮ ಶಾಲೆಗೆ ಸೇರಿಕೊಂಡಿದ್ದಳು. ಅವಳ ಹಿಂದೆ ತುಂಬಾ ಹುಡುಗರು ಬಿದಿದ್ದರು. ಅವಳು ಮಾತ್ರ ರಾಜೀವನನ್ನು ಬಿಟ್ಟು ಬೇರೆ ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ರಾಜೀವನಿಗೆ ಹಿಂದಿ ಬರುತ್ತಿರಲಿಲ್ಲ. ನಮ್ಮ ಮಂಜನಿಗೆ ಹಿಂದಿ ಚೆನ್ನಾಗಿ ಬರುತಿತ್ತು. ಅವಳು ಬರೆದು ಕೊಡುವ ಹಿಂದಿ ಪ್ರೇಮ ಪತ್ರ ನಮ್ಮ ಮಂಜ ಓದಿ ರಾಜೀವನಿಗೆ ಹೇಳುತ್ತಿದ್ದ.

ಒಂದು ದಿವಸ ಅವಳ ಪ್ರೇಂ ಪತ್ರ ಬಂದಿತ್ತು. ಅವಳು ಹೀಗೆ ಬರೆದಿದ್ದಳು.

ಮೈ ತುಮ್ಸೆ ಬಹುತ್ ಪ್ಯಾರ ಕರತಿ ಹು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಮಂಜ ಓದಿ ಹೇಳಿದ. ಹಾಲಾ ಕಿ ಹಮಾರಾ ಜಾತ ಅಲಗ್ ಅಲಗ್ ಹೈ ಫಿರ್ ಭಿ ತುಮ್ಸೆ ಶಾದಿ ಕರುಂಗಿ. ಎಂದರೆ ನೀನು ನಾಳೆ ಹಳದಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಮತ್ತೆ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಮತ್ತೆ ಮೀಸೆ ಬೋಳಿಸಿ, ಕಿವಿಯಲ್ಲಿ ರಿಂಗ್ ಹಾಕಿಕೊಂಡು ಬಂದರೆ ಮಾತ್ರ ಮದುವೆ ಆಗುತ್ತೇನೆ ಎಂದು ಮಂಜ ಹೇಳಿದ.

ಹಾಗೆ ನಮ್ಮ ರಾಜೀವ ಮರುದಿವಸ ಅದೇ ವೇಷದಲ್ಲಿ ಶಾಲೆಗೆ ಹಾಜರ ಆಗಿದ್ದ. ಅದನ್ನು ನೋಡಿ ನಾವಲ್ಲದೆ ಚೇತನನು ಬಿದ್ದು ಬಿದ್ದು ನಕ್ಕಿದ್ದಳು.

ಆನಂತರ ನಮ್ಮ ಮಂಜನ ಜೊತೆ ದೊಡ್ಡ ಜಗಳ ಮಾಡಿದ್ದ ರಾಜೀವ. ಅನಂತರ ನಮ್ಮ ರಾಜೀವ ಹಿಂದಿ ಕಲಿಯುವ ಪುಸ್ತಕ ತಂದು ಒಂದೇ ತಿಂಗಳಲ್ಲಿ ಹಿಂದಿ ಕಲೆತಿದ್ದ.

ಮಂಜನಿಗೆ ಹಿಂದಿ ಹೇಗೆ ಬರುತಿತ್ತು ಎಂದರೆ ಮಂಜ ಒಂದು ವರ್ಷ ಮಧ್ಯಪ್ರದೇಶದಲ್ಲಿ ಕಲೆತಿದ್ದ. ಮಧ್ಯಪ್ರದೇಶದಲ್ಲಿ ಮಂಜ ಇದ್ದಾಗ, ಪರೀಕ್ಷೆ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಪ್ರಬಂಧ ಕೇಳಿಯೇ ಕೇಳುತ್ತಿದ್ದರು. ಮಂಜ ಎಲ್ಲ ಪ್ರಬಂಧ ಓದಿ ಕೊಂಡು ಹೋಗಿದ್ದ. ಆದರೆ ಪರೀಕ್ಷೆಯಲ್ಲಿ ಅವನು ಓದಿದ ಪ್ರಬಂಧ ಬಿಟ್ಟು ಬೇರೆ ಗಾಯ( गाय ಅಂದರೆ ಆಕಳು) ಬಗ್ಗೆ ಪುಟಕ್ಕೆ ಮೀರದಂತೆ ಬರೆಯಿರಿ ಎಂದು ಬಂದಿತ್ತು. ಮಂಜನಿಗೆ ಎಷ್ಟೇ ಯೋಚಿಸಿದರು ಏನು ಹೋಳಿಲೆ ಇಲ್ಲ. ಆಗ ಹೀಗೆ ಬರೆದ ನಮ್ಮ ತರ್ಲೆ ಮಂಜ....

गाय मेरा माता है - ಗಾಯ್ ಮೇರಾ ಮಾತಾ ಹೈ (ಆಕಳು ನನ್ನ ಮಾತೆ)
आगे कुछ नहीं आता है - ಆಗೇ ಕುಚ್ ನಹಿ ಆತಾ ಹೈ (ಮುಂದೆ ಬೇರೇನೂ ಗೊತ್ತಿಲ್ಲ)

ಅದನ್ನು ನೋಡಿದ ನಮ್ಮ ಮಾಸ್ತರಿಗೆ ಕೋಪ ಬಂದಿತ್ತು. ಅವರು ಹೀಗೆ ಬರೆದರು...

भैस मेरा बाप है - ಭೈಸ್ ಮೇರಾ ಬಾಪ್ ಹೈ (ಕೋಣ ನನ್ನ ಅಪ್ಪ)
अंक देना पाप है - ಅಂಕ ದೇನಾ ಪಾಪ ಹೈ (ಅಂಕ ಕೊಡುವದು ತಪ್ಪು)

ಮತ್ತೆ ಒಂದು ದಿವಸ ಪಕ್ಕದ ಮನೆ ನಾರಾಯಣ ಮೂರ್ತಿಗಳಿಗೆ ಒಂದು ಪತ್ರ ಬಂದಿತ್ತು. ಅದನ್ನು ನಮ್ಮ ಮಂಜ ತೆಗೆದುಕೊಂಡು ಹೋಗಿ ಅವರ ಮನೆಗೆ ಕೊಟ್ಟು ನೋಡಿ ಸರ್ ರಮಾ ಎನ್ನುವವರ ಪತ್ರ ಬಂದಿದೆ ಎಂದು ಅವರ ಮಡದಿಯ ಮುಂದೆ ಹೇಳಿ ಕೊಟ್ಟು ಬಿಟ್ಟ. ಎರಡು ದಿನ ಅವರ ಮನೆಯಲ್ಲಿ ರಸ್ತೆ ಬೀದಿಗೆ ಕೇಳುವ ಹಾಗೆ ಜಗಳವೋ ಜಗಳ ... ಅನಂತರ ಗೊತ್ತಾಗಿದ್ದು ಅದು ರಮಾ(rama) ಅಲ್ಲ ರಾಮ(rama) ಅವರಿಂದ ಬಂದ ಪತ್ರ.

ಏನೇ ಆದರು ನಮ್ಮ ಮಂಜ ಮಾತ್ರ ಈಗಲೂ ಸಹ ಓದುವ ಹವ್ಯಾಸ ಮಾತ್ರ ಬಿಟ್ಟಿಲ್ಲ.

Wednesday, September 23, 2009

ಮೇರಾ ಭಾರತ ಮಹಾನ ....

ಈ ಚಿತ್ರ ನನ್ನ ಗೆಳೆಯ ನರೇಂದ್ರ ತೆಗೆದಿದ್ದು. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಎಲ್ಲಿಯೂ eraser ಉಪಯೋಗಿಸಿಲ್ಲ. "ಮೇರಾ ಭಾರತ ಮಹಾನ"

ತರ್ಲೆ ಮಂಜ(ಗ)ನ ಮರನ(ಣ) ಪತ್ರ....

ನಮ್ಮ ಶಾಲೆಯಲ್ಲಿ ಗಿರೀಶನೆಂಬ ತೊದಲು ಮಾತನಾಡುವ ಸಹಪಾಠಿ ಇದ್ದ. ಅವನಿಗೆ ನಾವೆಲ್ಲರೂ "ತೊತಲೇ" ಎಂದೇ ಕರೆಯುತ್ತಿದ್ದೆವು. ಈ ಹೆಸರು ಅವನಿಗೆ ಬಳುವಳಿಯಾಗಿ ಬಂದಿದ್ದು ಅವರ ಮನೆಯವರಿಂದಲೇ. ಇವ ತುಂಬಾ ಜಿಪುಣ(ಜುಗ್ಗ) ಒಂದು ನಯಾ ಪೈಸೇನು ಯಾರಿಗೂ ಕೊಡುತ್ತಿರಲಿಲ್ಲ. ಅದಕ್ಕೆ ಕೆಲವರು ಇವನಿಗೆ "ಜುಗ್ಗ ತೋತಲ್ಯಾ" ಎಂದು ಕರೆಯುವದು ಉಂಟು. ಅವರ ಮನೆಯವರು (ಅಪ್ಪ, ತಾತ) ಎಲ್ಲರು ತುಂಬಾ ಜಿಪುಣರು. ಮಾತನಾಡಿಸಿದರೆ ಮೈಮೇಲೆ ಬರುವುದು(ಎಲ್ಲಿ ದುಡ್ಡು ಕಿಳುತ್ತಾರೆ ಜನ ಎಂದು) ಎಂದು ಮಾತು ಸ್ವಲ್ಪ ಕಡಿಮೇನೆ. ಆದರೆ ಗಿರೀಶ ಮಾತ್ರ ತೊದಲು ಮಾತಿನ ಬಂಟ. ಅವನು ಚಿಕ್ಕವನಿದ್ದಾಗ ಅವನ ತಾತನ(ಅಜ್ಜ) ಹತ್ತಿರ ಅಡಿಕೆ ಕೇಳಿ ಪಡೆದು ತಿನ್ನುತ್ತಿದ್ದನಾದ್ದರಿಂದ ಇವನ ಮಾತು ತೊದಲುತಿತ್ತು.

ಒಂದು ದಿವಸ ಶಾಲೆಯಲ್ಲಿ ಕಾರ್ಯಕ್ರಮ ಏರ್ಪಾಟು ಮಾಡಿದ್ದೆವು. ಅದು ಕುರುಡು ಮಕ್ಕಳಿಗೆ ಹಣ ಸಹಾಯ ಮಾಡಲು ಮಾಡಿರುವ ಕಾರ್ಯಕ್ರಮ. ಶಾಲೆಯಲ್ಲಿ ಎಲ್ಲರು ಹಣ ನೀಡಿದ್ದರು, ಆದರೆ ಈ ಗಿರೀಶ ಮಾತ್ರ ಏನು ಕೊಟ್ಟಿರಲಿಲ್ಲ. ಅದಕ್ಕೆ ನಮ್ಮ ಮಂಜ ಏನಾದರು ಮಾಡಿ ಇವನ ಹತ್ತಿರ ಹಣ ಕೀಳ ಬೇಕು ಎಂದು ತುಂಬಾ ಪ್ರಯತ್ನ ಪಟ್ಟ. ಆದರೆ ಏನು ಸಹಾಯವಾಗಲಿಲ್ಲ.

ಒಂದು ದಿವಸ ನನ್ನ ಬಳಿ ಬಂದ ಮಂಜ "ಲೇ ಇವತ್ತು ಗ್ಯಾರಂಟೀ ಗಿರೀಶ ಹತ್ತಿರ ದುಡ್ಡು ವಸೂಲಿ ಮಾಡುತ್ತೇನೆ" ಎಂದ. ನೀನು ನನ್ನ ಜೊತಿ ಬಾ ಎಂದ. ನಾನು ಮತ್ತೆ ಮಂಜ ಗಿರೀಶನ ಮನೆಗೆ ಹೋದೆವು. ನಾನು ಮತ್ತು ಮಂಜ ಮನೆಗೆ ಬಂದು ಘ೦ಟೆ ಆದರು ನೀರು ಸಹ ಬೇಕು ಎಂದು ಕೇಳಿರಲಿಲ್ಲ ಗಿರೀಶ. ನಾನು ಮತ್ತೆ ಮಂಜ ದುಡ್ಡಿಗೆ ಪೀಡಿಸುತ್ತಲೇ ಇದ್ದೆವು. ಮತ್ತೆ ಅವನಿಗೆ ಕೆರಳಿಸಿ ನಿನಗೆ ನಿಜವಾಗಿಯು ದುಡ್ಡು ಕೊಡಲು ಇಷ್ಟ ಇಲ್ಲ ಎಂದರೆ ಈ ಸರ್ಟಿಫಿಕೇಟ್ ನೀನು ಮಾಡಿಸು ಸಾಕು ಎಂದ. ಅದೇನು ದೊಡ್ಡ ಮಹಾ ವಿಷಯ ನಾನು ಮಾಡಿಸುತ್ತೇನೆ ಎಂದ. ಮಾಡಿಸಲಿಲ್ಲ ಅಂದರೆ ನೀನು ನನಗೆ 300 ರೂಪಾಯಿ ಕೊಡಬೇಕು. ಇಲ್ಲದಿದ್ದರೆ ನಾನು ನಿನಗೆ ಕೊಡುತ್ತೇನೆ ಎಂದ ಮಂಜ. ನೀನು ತೋರಿಸು ಎಂದ ಗಿರೀಶ. ಆನಂತರ ಇಬ್ಬರು ಒಪ್ಪಂದಕ್ಕೆ ಒಪ್ಪಿಕೊಂಡರು. ಮಂಜ ಅದನ್ನು ತೋರಿಸಲೇ ಇಲ್ಲ. ಅವನು ಗಿರೀಶನ ತಾತ ಬರುವ ಸಮಯ ಕಾಯುತ್ತಿದ್ದ. ಗಿರೀಶನ ತಾತ ಬಂದೊಡನೆಯೇ ತೆಗೆದು ಕೋ ಮಾಡಿಸು ಈ ಸರ್ಟಿಫಿಕೇಟ್ ನಿನಗೆ ನಿಜವಾಗಿಯು ಸಾಮರ್ಥ್ಯ ಇದ್ದರೆ ಎಂದ. ಅದೇನು ಮಹಾ ದುಡ್ಡು ಕೊಡದೆ ಹೋದರೆ ಸಾಕು ಏನು ಬೇಕಾದರು ಮಾಡಿಸುವೆ ಎಂದು ಗಿರೀಶ ಮಂಜನ ಕೈನಲ್ಲಿ ಇರುವ ಸರ್ಟಿಫಿಕೇಟ್ ತೆಗೆದು ಕೊಂಡು ನೋಡ ಹತ್ತಿದ. ಅದು ಮಂಜನ ತಾತನ ಮರಣ ಪತ್ರ ಆಗಿತ್ತು. ಗಿರೀಶನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಅಷ್ಟರಲ್ಲೇ ಗಿರೀಶನ ತಾತ ಬಂದು ಏನು ಅದು ಎಂದಾಗ. ಅದು.. ಅದು.. ಎಂದು ತೊದಲುತ್ತ ಗಿರೀಶ ಮರನ ಪತ್ರ ಎಂದ. ಅವರ ತಾತನಿಗೆ ತಿಳಿಯಲಿಲ್ಲ. ಆಗ ಮಂಜ ಅವನನ್ನು ತಡೆದು ಇದು ಮರಗಳನ್ನು ಕಡೆಯುವದನ್ನು ತಡೆಯುವದಕ್ಕಾಗಿ ಮಾಡಿರುವ ಪತ್ರ ಎಂದು ಸುಧಾರಿಸಿದ. ಗಿರೀಶ ಮೊದಲೇ ಪ್ರಾಮಿಸ್ ಮಾಡಿದ್ದರಿಂದ ಸುಮ್ಮನೆ ದೊಡ್ದು ಕೊಟ್ಟ.

ಮತ್ತೆ ಅನಂತರ ನಮ್ಮ ಮಂಜ ಸುಮ್ಮನಿರದೆ ಗಿರೀಶನನ್ನು ಅವನ ತಾತನ ಮುಂದೆ ತುಂಬಾ ಹೊಗಳಿದ. ತುಂಬಾ ಚೆನ್ನಾಗಿ ಹಾಡುತ್ತಾನೆ ತಾತ ನಿಮ್ಮ ಗಿರೀಶ ಅವನದು ಒಂದು ಸಂಗೀತ ಕಾರ್ಯಕ್ರಮ ಇದೆ. ಅವನದು ಕೋಗಿಲೆ ಕಂಠ ಎಂದ. ನಾನು ಒಳಗೊಳಗೇ ನಗುತ್ತಿದ್ದೆ. ನೀವು ಬನ್ನಿ ಎಂದು ಆಹ್ವಾನ ಕೊಟ್ಟ. ಅವನ ತಾತನಿಗು ಗೊತ್ತು ಇವ ತೊತಲೇ ಅಂತ ಅದಕ್ಕೆ ಅವರ ತಾತ ಹಾಗಾ ಆದರು ನನಗೆ ತುಂಬಾ ಕೆಲಸ ಇವೆ ಅದಕ್ಕೆ ಬರಲು ಆಗುವದಿಲ್ಲ ಎಂದ. ಇವನ ಮೊಮ್ಮಗನ ಹೊಗಳಿಕೆ ಇಂದ ನಮಗೆ ಕಾಫಿ ಲಭಿಸಿತು.

ಅನಂತರ ನನಗೆ ಮತ್ತೆ ಮಂಜನಿಗೆ ಗಿರೀಶ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ಕೊಡು ಎಂದು ಪೀಡಿಸಲು ಆರಂಬಿಸಿದ. ನಾವು ಎಷ್ಟೇ ಹೇಳಿದರು ಕೇಳಲಿಲ್ಲ. ನಾನು ಹಾಡೇ ಹಾಡುತ್ತೇನೆ ಇಲ್ಲ ಅಂದರೆ ನನ್ನ ದುಡ್ಡು ನನಗೆ ವಾಪಸ ಕೊಡು ಎಂದು ಪೀಡಿಸ ಹತ್ತಿದ. ಕೊನೆಗೆ ಬೇರೆ ದಾರಿ ಇಲ್ಲದೆ ಒಪ್ಪಿಕೊಂಡೆವು.

ಕಾರ್ಯಕ್ರಮ ಶುರು ಆಯಿತು. ಗಿರೀಶ ತನ್ನ ಹೊಸ ಡ್ರೆಸ್ ಹಾಕಿಕೊಂಡು ಸ್ಟೇಜ್ ಮೇಲೆ ಬಂದು ನಿಂತ. ಮತ್ತೆ ಮೈಕ್ ಹಿಡಿದು ಶುರು ಮಾಡಿದ.

"ಬಿಸಿಲಾದೆಲೆ ಏನು ಮಲೆ ಆದರೇನು.." ಎಂದು ಹಾಡಲು ಶುರು ಮಾಡಿದ. ಎಲ್ಲರು ನಕ್ಕಿದ್ದೆ ನಕ್ಕಿದ್ದು.

ಒಂದಕ್ಕೆ ಮುಕ್ತಾಯವಗಿದ್ದರೆ ಸರಿ ಇತ್ತು.

"ಬಾಲು ಬೇಲಕಾಯಿತು.. "

ಹೀಗೆ ಇವನ ಹಾಡುಗಲು(ಳು) ಪೂರ್ತಿ ನಗೆಯ ಅಲೆ ಎಬ್ಬಿಸಿಬಿಟ್ಟಿದ್ದವು. ಕಾರ್ಯಕ್ರಮ ಮುಗಿದರು ತುಂಬಾ ದಿನಗಳವರೆಗೆ ನಮ್ಮ ಗಿರೀಶನ ಹಾಡುಗಳನ್ನು ತುಂಬಾ ಜನರು ಮೆಲಕು ಹಾಕುತ್ತಿದ್ದರು.

Monday, September 14, 2009

ತರ್ಲೆ ಮಂಜ(ಗ)ನ ಜಾಹಿರಾತು....

ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಆಗ ನಮ್ಮ ಮಂಜ ಮನೆಗೆ ಹೆಂಡತಿಯೊಂದಿಗೆ ಹಾಜರ ಆದ. ಮತ್ತೆ ಸ್ನೇಹ ಸಮಾಚಾರಗಳು ಆದ ಮೇಲೆ, ಕಾಫಿ ಹೀರುತ್ತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆವು. ನಮ್ಮ ಮಂಜ ಹಾಗೆ ಚೇಷ್ಟೆ ಮಾಡುತ್ತ ಕುಳಿತಿದ್ದ. ಮಂಜನಿಗೆ ಇನ್ನೊಂದು ಚಟ ಎಂದರೆ ಎಲ್ಲಾ ಜಾಹಿರಾತು ಮತ್ತು ಕಾರ್ಯಕ್ರಮಗಳನ್ನು ಜೋರಾಗಿ ಎಲ್ಲರಿಗು ಕೇಳಿಸುವ ಹಾಗೆ ಓದುವ ಹವ್ಯಾಸ. ಅವನ ಜೊತೆ ಚಲನಚಿತ್ರಕ್ಕೆ ಹೋದರೂ, ಚಿತ್ರ ಮಾತ್ರ ನಾವು ವೀಕ್ಷಿಸುತ್ತಿದ್ದೆವು. ಉಳಿದೆಲ್ಲ ಸೌಂಡ್ ಮಾತ್ರ ನಮ್ಮ ಮಂಜನದೆ.

ಆಗಲೇ ಒಂದು ಜಾಹಿರಾತು ತೋರಿಸುತ್ತಿದ್ದರು. ಅದನ್ನು ನಮ್ಮ ಮಂಜ "ಗಂಡಸು ನೀರನ್ನು ಮೃದುವಾಗಿಸುತ್ತೆ." ಎಂದು ಓದಿಬಿಟ್ಟ. ಅದು "ಗಡಸು ನೀರು" ಆಗಿತ್ತು. ಆಗ ನನ್ನ ಹೆಂಡತಿ ಸುಮ್ಮನಿರದೆ "ಹಾಗಾದರೆ ಮನೆ ಕೆಲಸ ಎಲ್ಲ ನಿಮ್ಮದೇ ಎಂದಾಯಿತು". ಎಂದಳು ತಮಾಶೆಯಾಗಿ. ಆಗ ಮಂಜ "ನಾವು ನಮ್ಮ ವಿಷಯ ಹೇಳುತ್ತಾ ಇಲ್ಲ. ನಿಮ್ಮ ಮನೆಯವರ ವಿಚಾರನೇ" ಎಂದ. ನನ್ನ ಹೆಂಡತಿ ಏನು ಮಾತನಾಡದೆ ಸುಮ್ಮನಾಗಿ ಬಿಟ್ಟಳು. ಅವಳಿಗೂ ಗೊತ್ತು ಇವ ತರ್ಲೆ ಅಂತ.

ಈ ಜಾಹಿರಾತು ವಿಷಯ ಬಂದ ಮೇಲೆ ಹಳೆಯ ಒಂದು ಮಂಜನ ವಿಚಾರನ ಹೇಳೋಕ್ಕೆ ಇಷ್ಟ ಪಡುತ್ತೇನೆ. ಒಂದು ದಿವಸ ಶಾಲೆಯಲ್ಲಿ Annual Function ಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡಬೇಕೆಂದು ಮಾಸ್ತರ್ ಹೇಳಿದ್ದರು.

ಮಂಜ ಒಂದು ಜಾಹಿರಾತು ಮಾಡುತ್ತೇನೆ ಎಂದು ಹೇಳಿ ಮಾಸ್ತರ್ ಒಪ್ಪಿಸಿದ್ದ. ನಾನು ಮತ್ತೆ ಮಂಜ ಜಾಹಿರಾತು ಪ್ರಾಕ್ಟೀಸ್ ಮಾಡುತ್ತಿದ್ದಾಗ, ಸುಬ್ಬ ಬಂದು ಮಂಜನಿಗೆ ನನಗು ಏನಾದರು ಹೇಳು ಮಾಡುತ್ತೇನೆ ಎಂದ. ಮಂಜ ಅವನಿಗೆ ನೀನು ಹಿಂದಿನಿಂದ ಅಂಡರ್ ವೆರ್ ಧರಿಸಿ ಒಂದು ಕ್ಯಾಟ್ ವಾಕ್ ಮಾಡಿದರೆ ಸಾಕು ಎಂದ. ಅದಕ್ಕೆ ನಮ್ಮ ಸುಬ್ಬ ಸುತರಾಂ ಒಪ್ಪಲಿಲ್ಲ. ಆಯಿತು ನೀನು ಪ್ಯಾಂಟ್ ಮೇಲೆ ಆದರು ಧರಿಸಿ ಕ್ಯಾಟ್ ವಾಕ್ ಮಾಡು ಎಂದ. ಅದು ಹೇಗೆ ಸಾಧ್ಯ ಅದು ಹುಡುಗಿಯರ ಎದುರಿಗೆ ಎಂದು ಖ್ಯಾತೆ ತೆಗೆದ. ಅದಕ್ಕೆ ನಮ್ಮ ಮಂಜ ನೋಡು ಫ್ಯಾಂಟಮ್,ಸೂಪರ್ ಮ್ಯಾನ್ , ಹಿ ಮ್ಯಾನ್ ನೋಡಿದ್ದಿಯಲ್ಲ. ಅವರೆಲ್ಲ ಹಾಗೆ ಧರಿಸಿ ಹೇಗೆ ಹೀರೋ ತರಹ ಕಾಣಿಸುತ್ತಾರೆ. ನೀನು ಹಾಗೆ ಧರಿಸು ನೀನು ಹೀರೋ ಆಗುತ್ತೀಯ. ಎಲ್ಲಾ ಹುಡುಗಿಯರು ನಿನ್ನ ಹಿಂದೆ ಬೀಳುತ್ತಾರೆ ಎಂದ. ಅದಕ್ಕೆ ಸುಬ್ಬ "ಆ ಚೇತನಾ" ಎಂದ. ಅದಕ್ಕೆ ಮಂಜ "ಓ ಅವಳು ಕೂಡ" ಎಂದ. ಅದಕ್ಕೆ ಸುಬ್ಬ ಒಪ್ಪಿದ.

ಕಾರ್ಯಕ್ರಮಗಳ ಮಧ್ಯ ನಡುವೆ ನಮ್ಮದೊಂದು ಜಾಹೀರಾತು ಇತ್ತು. ಆಗ ತಾನೆ ಮಂಜ ಸುಬ್ಬನಿಗೆ ಒಂದು designer ಅಂಡರ್ ವೆರ್ ತಂದು ಕೊಟ್ಟಿದ್ದ. ಅದು ಥೇಟ ಪಟ್ಟಿ ಪಟ್ಟಿಯಾಗಿ ಹುಲಿಯ ಚರ್ಮದ ಹಾಗೆ ಇತ್ತು.

ರೇಡಿಯೋದಲ್ಲಿ ಬರುವ ಒಂದು ಜಾಹಿರಾತನ್ನು ಚೇಂಜ್ ಮಾಡಿ ಹೀಗೆ ಮಾಡಿದ್ದ. ನಮ್ಮ ಜಾಹೀರಾತು ಹೀಗೆ ಇತ್ತು.

ನಾನು: ಏನ್ ಶಂಕ್ರಣ್ಣ ಇಷ್ಟೊಂದು ಆಳವಾಗಿ ಯೋಚಿಸ್ತಾ ಇದ್ದೀಯ?.
ಮಂಜ(ಶಂಕ್ರಣ್ಣ ): ಏನಿಲ್ಲ ಮಕ್ಕಳಿಗೆ ಮತ್ತೆ ಮೊಮ್ಮಕ್ಕಳಿಗೆ ಯಾವ ಅಂಡರ್ ವೆರ್ ತೊಗೋಬೇಕು ಅಂತ ಯೋಚಿಸ್ತಾ ಇದ್ದೀನಿ.
ನಾನು: ಅದಕ್ಕೆ ಯಾಕ ಯೋಚಿಸಬೇಕು?. ಸುರ ಅಂಡರ್ ವೆರ್ ತೋಗೊಂಡ್ರ ಆಯಿತು. ನಮ್ಮಜ್ಜನ ಕಾಲದಾಗ ತೋಗೊಂಡಿದ್ವು ಇನ್ನು ಗಟ್ಟಿ ಮುಟ್ಟಿ ಅದಾವ ನೋಡು.

ಆಗ ನಮ್ಮ ಸುಬ್ಬ ಹಿಂದಿನಿಂದ ಪಟ್ಟಿ ಪಟ್ಟಿ ಅಂಡರ್ ವೆರ್ ಪ್ಯಾಂಟ್ ಮೇಲೆ ಧರಿಸಿ ಕ್ಯಾಟ್ ವಾಕ್ ಮಾಡುತ್ತ ಬಂದ. ಅಂಡರ್ ವೆರ್ ಎಲ್ಲಡೆ ಹರಿದು ಹೋಗಿತ್ತು. ಆ ಹರಿದಿರೋ ಅಂಡರ್ ವೆರ್ ನೋಡಿ ಎಲ್ಲರು ನಗಲು ಶುರು ಮಾಡಿಬಿಟ್ಟರು. ನನಗು ಮತ್ತೆ ಮಂಜನಿಗೆ ಕೂಡ ನಗು ತಡಿಯಲಾಗಲಿಲ್ಲ. ಜೋರಾಗಿ ನಕ್ಕು ಬಿಟ್ಟೆವು. ಆನಂತರ ಗೊತ್ತಾಯಿತು ಮಂಜ ಕೊಡಿಸಿದ ಅಂಡರ್ ವೆರ್ ನ ಇಲಿಗಳು ಕಚ್ಚಿ ತಿನ್ದಿದ್ದವು.

ಆಗಿನಿಂದ ನಮ್ಮ ಸುಬ್ಬನಿಗೆ ನಾವು ಎಲ್ಲರು "ಆರಾಮಾಗಿ ಇದ್ದೀಯ" ಅಥವಾ "ಚೆನ್ನಾಗಿ ಇದ್ದೀಯ ಅನ್ನುವ ಬದಲು "ಗಟ್ಟಿ ಮುಟ್ಟಿ ಇದ್ದೀಯ" ಎಂದು ಕೇಳುತ್ತಿದ್ದೆವು.

ಒಂದು ದಿವಸ ಸುಬ್ಬನಿಗೆ ಮಂಜ ಫೋನ್ ಮಾಡಿದ್ದ. ಫೋನ್ ಯಾರು ಎತ್ತಿದ್ದಾರೆ ಎಂದು ಯೋಚಿಸದೆ. "ಎನಲೇ ಗಟ್ಟಿ ಮುಟ್ಟಿ ಇದ್ದಿಯೇನೋ" ಎಂದು ಕೇಳಿದ್ದ. ಫೋನ್ ಎತ್ತಿದ್ದು ಅವನ ಹೆಂಡತಿ. ಅವಳು ಇವನಿಗೆ "ಮುಟ್ಟ ಆಗ್ಯಾನ ಸಿರಿ ತೆಗೆದುಕೊಂಡ ಬಾ" ಎಂದು ತರಾಟೆಗೆ ತೆಗೆದುಕೊಂಡಿದ್ದಳು. ಏಕೆಂದರೆ ಸುಬ್ಬನಿಗೆ ಒಂದು ಚಿಕ್ಕ Accident ಅಗತ್ತು.

ಆಗಿನಿಂದ ನಾವೆಲ್ಲರೂ ಅವನಿಗೆ "ಆರಾಮಾಗಿ ಇದ್ದೀಯ" ಅಥವಾ "ಚೆನ್ನಾಗಿ ಇದ್ದೀಯ" ಎಂದೇ ಕೇಳಲು ಶುರು ಮಾಡಿದೆವು.

Sunday, September 13, 2009

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ...

ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಈ ಕಾರ್ಯಕ್ರಮವನ್ನು ನಾನು ಶುರು ಆದಾಗಿನಿಂದ ನೋಡುತ್ತಾ ಬಂದಿದ್ದೇನೆ. ಆ ಚಿಕ್ಕ ಪುಟಾಣಿಗಳನ್ನೂ ನೋಡಿದಾಗ, ನನಗೆ ತುಂಬಾ ಖುಷಿಯಾಗುತ್ತಿತ್ತು. ಅದಕ್ಕಿಂತಲೂ ಮತ್ತೊಂದು ವಿಶೇಷ ಎಂದರೆ ಜನಪ್ರಿಯ ಸಂಗೀತ ದಿಗ್ಗಜ ಮಹಾನ ಸಂಗೀತ ನಿರ್ದೇಶಕ "ಹಂಸಲೇಖ" ಮಹಾ ಗುರು ಆಗಿದ್ದು. ಅವರು ನನಗೆ ತುಂಬಾ ಇಷ್ಟವಾಗುವ ಮ್ಯೂಸಿಕ್ ಕಂಪೋಸರ್. ಮತ್ತೆ ನನಗೆ ಮನಸ್ಸಿಗೆ ಹಿಡಿಸಿದ ಒಂದು ವಿಷಯ ಎಂದರೆ ಅವರ ನಗು. ಅವರ ನಗು ನೋಡಿದಾಗ ಹೂವು ಅರಳಿದ ಹಾಗೆ ಅನ್ನಿಸುತಿತ್ತು. ನಿಜವಾಗಿಯೂ ಅವರ ಹಾಡುಗಳು ತುಂಬ ಸುಮಧುರವಾಗಿವೆ....

1. ಹುಟ್ಟೊದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ
2. ಈ ಭೂಮಿ ಬಣ್ಣದ ಬುಗುರಿ
3. ಓ ಗುಲಾಬಿಯೇ! ಓಹೋ ಗುಲಾಬಿಯೇ ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ? ಓಹೋ!
4. ಯಾಹು ಯಾಹೂ!! ಇಂದು ಬಾನಿಗೆಲ್ಲ ಹಬ್ಬ

ಮತ್ತೆ ಪ್ರೇಮಲೋಕದ ಹಾಡುಗಳು ...ವರ್ಣಿಸೋದಕ್ಕೆ ಆಗುವದಿಲ್ಲ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ ಎಂಬುದು ಸಂತೋಷದ ವಿಷಯ.

ಅವರು ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಹಲವಾರು.

ಅವರಿಗೆ ನನ್ನದೊಂದು ಸಾಷ್ಟಾಂಗ ನಮಸ್ಕಾರ.

ಚಿತ್ರ ಕೃಪೆ: ಅಂತರ್ಜಾಲ.

Monday, September 7, 2009

ಮೂಢನಂಬಿಕೆ ....

ಒಂದು ದಿವಸ ಸುಬ್ಬನಿಗೆ ಟೀ ಪೌಡರ್ ತರಲು ಹೇಳಿದ್ದಾಗ ಹಾಗೆ ೫ ನೇ ಕ್ರಾಸ್ನಲ್ಲಿ ತಿರುಗಾಡುತ್ತ ಇದ್ದ. ಮಂಜನಿಗೆ ಟೀ ಕುಡಿಯದೆ ಪ್ರಾತಃ ಕಾಲದ ಕೆಲಸಗಳು ಆಗುವದಿಲ್ಲವಾದ್ದರಿಂದ ಅವನೇ ಹೋಗಿ ನೋಡಿದಾಗ , ಅವನು ಹಾಗೆ ತಿರುಗಾಡುತ್ತ ಇದ್ದದ್ದನ್ನು ನೋಡಿದ, ಆಗಲೇ ಎದುರಿಗಿನ ಮನೆ ಆಂಟಿನು ಹೊರಗಡೆ ಬಂದಿದ್ದನ್ನು ನೋಡಿ ಮಂಜ ಅವನಿಗೆ ಏನೋ? ಆಂಟಿಗೆ ಲೈನ್ ಹೋಡಿತ ಇದ್ದೀಯ ಟೀ ಪೌಡರ್ ತರುವದು ಬಿಟ್ಟು ಎಂದು ಗದರಿಸಿದ್ದ. ಅನಂತರ ಸುಬ್ಬ ಬೆಕ್ಕು ಅಡ್ಡ ಹೋಯಿತು ಅದಕ್ಕೆ 3 ಜನ ದಾಟಿ ಹೋದ ಮೇಲೆ ತರಬೇಕೆಂದು ಕಾಯುತ್ತಿದ್ದೆ ಎಂದು ಹೇಳಿದರು ಕೂಡ ಮಂಜ ಮಾತ್ರ ಅವನನ್ನು ಪೀಡಿಸುವದು ಬಿಡಲಿಲ್ಲ.

ಸುಬ್ಬ ಮೂಡನಂಬಿಕೆ, ಗೊಡ್ಡು ಸಾಂಪ್ರದಾಯಗಳ ಒಂದು ಆಗರವೇ ಆಗಿದ್ದಾನೆ. ಹೀಗೆ ಒಂದು ದಿವಸ ಬೆಕ್ಕಿಗೆ ಅವರ ಮನೆ ಹಾಲು ಕುಡಿಯುತ್ತಿದ್ದಾಗ ಜೋರಾಗಿ ಹೊಡೆದಿದ್ದಾನೆ ಅದು ಮೂರ್ಚೆ ಹೋಗಿದೆ. ಅಪ್ಪ ಹೇಳಿದ ವೇದಾಂತ ನೆನಪಾಗಿದೆ "ಬೆಕ್ಕನ್ನ ಸಾಯಿಸಿದರೆ ಬಂಗಾರದ ಬೆಕ್ಕು ಮಾಡಿಕೊಟ್ಟರು ಪಾಪ ಹೋಗುವದಿಲ್ಲ" ವೆಂದು. ಹೆದರಿ ಅಳುತ್ತ ಕುಳಿತಿದ್ದ. ಅಷ್ಟರಲ್ಲೇ ಬೆಕ್ಕು ಮೂರ್ಚೆಯಿಂದ ಎಚ್ಹೆತ್ತು ಅವನ ಕಾಲಿಗೆ ಅದರ ಉಗುರಿನಿಂದ ಚೂರಿ(ಜೆಬರಿ) ಓಡಿ ಹೋಗಿತ್ತು .

ಸುಬ್ಬನಿಗೆ ಒಂದು ದಿವಸ ತುಂಬ ಅರ್ಜೆಂಟ್ ಸಂಡಾಸ ಬಂದಿತ್ತು ಬೆಕ್ಕು ಅಡ್ಡ ಬಂತು ಅಂತ ಸಂಡಾಸ ಮಾಡದೇ ಬೇರೆ ಮೂರೂ ಜನ ಹೋದ ಮೇಲೆ ಹೋಗುವೆ ಎಂದು ಹಾಗೆ ನಿಂತಿದ್ದ ಆಮೇಲೆ ಚಡ್ಡಿಯಲ್ಲಿಯೇ ಎಲ್ಲವನ್ನು ಮುಗಿಸಿದ್ದ.

ಈಗ ಸುಬ್ಬ "ಬ್ಲೂ ಸಫಾಯರ" ಉಂಗುರವನ್ನು ಮಾಡಿಸಿದ್ದಾನೆ. ಏನಾದರು ಕೇಳಿದರೆ ದೊಡ್ಡ ದೊಡ್ಡ ಸ್ಟಾರ್ ಗಳು ಹಾಕಿಕೊಳ್ಳುತ್ತಾರೆ ಅದಕ್ಕೆ ಹಾಕಿಕೊಂಡಿದ್ದೇನೆ ಎಂದು ಬೀಗುತ್ತಾನೆ. ಮತ್ತೆ ಒಂದು ದಿವಸ ಬ್ಲೂ ಸಫಾಯರ ತೆಗೆದು "ಪಚ್ಚೆ" ಉಂಗುರ ಹಾಕಿಕೊಂಡಿದ್ದ. ಕೇಳಿದಾಗ ಒಬ್ಬ ಮಹಾನ ಜ್ಯೋತಿಷಿಗಳು ಹೇಳಿದ್ದಾರೆ ಎಂದ. ಸ್ವಲ್ಪೇ ದಿವಸದಲ್ಲಿ ಅದನ್ನು ತೆಗೆದು ಮತ್ತೆ ಬ್ಲೂ ಸಫಾಯರ ಹಾಕಿಕೊಂಡಿದ್ದ. ಅನಾಮತ್ತಾಗಿ 6೦೦೦/- ರೂಪಾಯಿಗಳನ್ನು ಇದಕ್ಕೆ ಖರ್ಚು ಮಾಡಿದ್ದ.

ಏ ಸುಬ್ಬ ಇದನ್ನೆಲ್ಲಾ ನಂಬ ಬಾರದೋ ಎಂದು ಮಂಜ ಗಳಗನಾಥ್ ಆಚರ್ಯರರ ಕಾಗೆ ಶಾಂತಿ ಕಥೆ ಹೇಳಲು ಪ್ರಾರಂಬಿಸಿದ.

ಹೀಗೆ ನನ್ನ ಮನೆಯ ಸಮೀಪವಿರುವ ಗಳಗನಾಥ ಆಚಾರ್ಯರು ಮಗನಿಗೆ ಅವರ ಅಮ್ಮನ ಪಿಂಡವನ್ನು ಕಾಗೆಗೆ ಇಡಲು ಹೇಳಿದ್ದರು. ಯಾವದೇ ಕಾಗೆ ಅದನ್ನು ಮುಟ್ಟಲಿಲ್ಲ. ಆಗ ಜಯೇಂದ್ರ ಕಾಗೆಯನ್ನು ಹಿಡಿದು ತಂದು ಅವರಜ್ಜಿ ಪಿಂಡದ ಮುಂದೆ ಕಟ್ಟಿ ಹಾಕಿದ್ದ. ಕಾಗೆಯ ಚೀರಾಟದಿಂದ ತುಂಬ ಕಾಗೆಗಳು ಗಳಗನಾಥ್ ಆಚಾರ್ಯರರ ಮನೆಯ ಮುಂದೆ ಜಮಾಯಿಸಿದ್ದವು. ಅವುಗಳ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ಮಗ ಜಯೇಂದ್ರ ಪಿಂಡವನ್ನು ಕಾಗೆಗೆ ತಿನ್ನಿಸಲು ಪ್ರಯತ್ನಿಸುತ್ತಿದ್ದ. ಅದನ್ನು ನೋಡಿದ ಗಳಗನಾಥ ಆಚಾರ್ಯರು ಜಯೇಂದ್ರನಿಗೆ ಉಗಿದು ಕಾಗೆ ಶಾಂತಿ ಮಾಡಿಸಿದ್ದರು. ಕಾಗೆಗಳು ಮಾತ್ರ ಪಿಂಡವನ್ನು ಮುಟ್ಟಲಿಲ್ಲ.

ವಾಸ್ತು ಪ್ರಕಾರ ಒಂದು ಚಿಕ್ಕದಾದ ಮೀನ ತಂದು ಇಟ್ಟಿದ್ದ ಗಳಗನಾಥ ಆಚಾರ್ಯರ ಮಗ ಜಯೇಂದ್ರ. ಕಣ್ಣು ಕಾಣದ ಅವನ ಅಜ್ಜಿ ಅದನ್ನು ಸಾರಿಗೆ ಹಾಕಿ ಮೀನಿನ ಸಾರನ್ನು ಮಾಡಿದ್ದಳು.

ನಾನು ಮತ್ತು ನನ್ನ ಗೆಳೆಯ ಶಿವಮೊಗ್ಗ ದಲ್ಲಿ ಇದ್ದಾಗ ತುಂಬ ಹಲ್ಲಿಗಳು ಇದ್ದವು ಅವು ದಿನವು ನಮ್ಮ ಮೇಲೆ ಬೀಳುತ್ತಿದ್ದವು ಎಂದು ಹೇಳಿದ. ಇವೆಲ್ಲ ಮೂಡ ನಂಬಿಕೆಗಳು ನಂಬಬಾರದು

ನಿನಗೆ ಗೊತ್ತ ಚೀನಾ ದೇಶದಲ್ಲಿ ಚೈನೀಸ್ಗಳು ಬೆಕ್ಕು ಮತ್ತು ಕೊತೀನ ತಿನ್ನುತ್ತಾರೆ ಎಂದು ಹೇಳಿದ.

ಅದಕ್ಕೆ ಸೊಪ್ಪು ಹಾಕಿದಂತೆ ನಾನು ಶುರು ಹಚ್ಚಿಕೊಂಡೆ ನೋಡು ಸುಬ್ಬ ವಿವೇಕಾನಂದ ಅವರು ಹೇಳಿದಂತೆ "Strength is Life Weekness is death". ಯಾವತ್ತು ನಮ್ಮ ಮನಸ್ಸಿಗೆ ಇಂತಹ ವಿಚಾರಗಳನ್ನು ಎಡೆ ಮಾಡಿ ಕೊಡಬಾರದು ಎಂದು.

ಹೀಗೆ ಒಂದು ದಿವಸ ಕಪ್ಪೆ ಮದುವೆ ಮಾಡಿಸಿದರೆ ಮಳೆಯಾಗುತ್ತೆ ಎಂದು ನಮ್ಮ ರೈತರು ಕಪ್ಪೆಯನ್ನು ಹಿಡಿಯಲು ಹೋಗಿ ಎಷ್ಟು ಕಪ್ಪೆ ಸಾಯ್ಸಿದ್ದರೋ ಏನೋ. ಕಡೆಗೂ ಹಿಡಿದು ಮದುವೆಯಾದ ಮೇಲೆ ಗೊತ್ತಾಗಿತ್ತು ಅವೆರಡು ಗಂಡು ಕಪ್ಪೆಗಳು ಅಂತ.

ನೋಡು ಸುಬ್ಬ ಜೀವನ ದೇವರು ನಡೆಸಿದ ಹಾಗೆ ಆಗುತ್ತೆ ಅದಕ್ಕೆ ಅಂತ ನಾವು ತೆಲೆಯಲ್ಲಿ ಏನೇನೋ ಗೊಡ್ಡು ಸಂಪ್ರದಾಯಗಳನ್ನ ಹಾಕಿ ಕೊಳ್ಳಬಾರದು.

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ


ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು....

ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ
ಯಾರು ಇಂದು ಬಲ್ಲವರು

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು....

ಕಾನನ ಬರಲಿ ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ
ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ
ನಿಲ್ಲದ ಈ ಪಯಣದ ಗುರಿಯ
ಯಾರು ಇಂದು ಕಂಡವರು

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ಚಿ ಉದಯ್ ಶಂಕರ್ ಅವರ ಈ ಹಾಡು ಎಷ್ಟು ಸಮಂಜಸ ಎಂದು ಹೇಳಿದೆ. ದೇವರು ಯಾವತ್ತು ವಿಶಾಲವಾದಂತ ಹೃದಯವಿದ್ದವನು ಅವನು ಎಲ್ಲರಿಗು ಒಳ್ಳೆಯದನ್ನು ಮಾಡುತ್ತಾನೆ. ಎಲ್ಲವು ದೇವರೇ ಆಗಿದ್ದಾನೆ ಈ ಪುರುಂದರ ದಾಸರ ಹಾಡು ನೆನಪಿಸಿಕೋ ಎಂದಾದರೂ ಇಂತಹ ವಿಚಾರಗಳು ಬಂದಾಗ ಎಂದು ಹೇಳಿದೆ.

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ಪ

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ೧

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ೨

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರ ವಿಟ್ಟಲನೆ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ೩

ನಮ್ಮ ಪ್ರಖ್ಯಾತ ಕವಿ ಕೆ. ಎಸ್. ನರಸಿಂಹಸ್ವಾಮಿ ಗಳು ಇದನ್ನೇ ಹೇಳಿದ್ದು.

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ,
ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ಇರಲಿ ಏಕ

ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಆಗೊಂದು ಸಿಡಿಲು
ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಕಡಲೂ ನಿನ್ನದೆ,ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಮತ್ತೆ ಈ ಹಿಂದಿ ಹಾಡಿನಲ್ಲಿ ಹೀಗೆ ಹೇಳಿದ್ದಾರೆ.
जिसका जितना हो आंचल यहां पर उसको सौगात उतनी मिलेगी

ಮತ್ತೆ ಸಂಸ್ಕೃತದಲ್ಲಿ ಹೀಗೆ ಹೇಳಿದ್ದಾರೆ.
ತೇನ ವಿನಾ ತೃಣಮಪಿ ನ ಚಲತಿ - ಅವನಿಲ್ಲದೆ(ಭಗವಂತನಿಲ್ಲದೆ) ಒಂದು ಹುಲ್ಲುಕಡ್ಡಿಯೂ ಅಲುಗಾಡದು.

ಎಂದು ಅವನನ್ನು ತಿಳಿಹೇಳಿದಾಗ ಅವನು ಸ್ವಲ್ಪ ಸುಧಾರಿಸಿದ್ದಾನೆ. ಮತ್ತೆ ಬೆಕ್ಕು ಅಡ್ಡ ಬರದಿರಲಿ ಎಂದು ಆಶಿಸೋಣ....

Sunday, September 6, 2009

ತರ್ಲೆ ಮಂಜ(ಗ) ಮತ್ತು ಸೀದಾ ಸಾದಾ ಸುಬ್ಬ ....

ಒಂದು ದಿವಸ ನಮ್ಮ ಶಾಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. ಗೋವಾ ತಲುಪಿ ಅಲ್ಲಿ ಬೀಚ್ ನೋಡಲು ಕರೆದುಕೊಂಡು ಹೋಗಿದ್ದರು. ಅಲ್ಲಿ ಬೀಚ್ ನೋಡಿ ಬರುವಾಗ ನಮ್ಮ ಮಂಜನ ಕೈಯಲ್ಲಿ ಫೌಂಟೆನ್ ಪೆನ್ ಇತ್ತು. ಅದನ್ನು ನೋಡಿ ನಮ್ಮ ಸುಬ್ಬ ಎಲ್ಲಿಂದ ತೆಗೆದುಕೊಂಡೆ ಎಂದು ಕೇಳಿದ. ನಿನಗೂ ಬೇಕಾದರೆ ಹೇಳುವೆ ಯಾರಿಗೂ ಹೇಳಬೇಡ ಎಂದ.

ಅನಂತರ ಸ್ವಲ್ಪ ಮುಂದೆ ಹೋದ ಮೇಲೆ ಸುಬ್ಬ ಒಬ್ಬ ಬಿಳುಪು(ತೊನ್ನು) ಹತ್ತಿದ ಹುಡುಗಿಗೆ ಏನೋ ಹೇಳಲು ಹೋಗಿ ಹೊಡೆತ ತಿಂದಿದ್ದ. ಏನು ಆಯಿತು ಎಂದು ಕೇಳಿದಾಗ ಆ ಹುಡುಗಿ ಧಾರವಾಡದವಳೇ ಆಗಿದ್ದಳು. ಅವಳಿಗೆ ಇವನು ಕೆಟ್ಟ ಧಾರವಾಡದ ಶಬ್ದಗಳಿಂದ ಬೈದಿದ್ದ. ಟೀಚರ್ ಚೆನ್ನಾಗಿ ಏಟುಗಳು ಕೊಟ್ಟು ಬಿಟ್ಟಿದ್ದರು.

ಆನಂತರ ಸಂಜೆ ಸುಬ್ಬ ಮಂಜನೊಂದಿಗೆ ಜಗಳ ಶುರು ಮಾಡಿಕೊಂಡಿದ್ದ. ಏನು ಆಯಿತು? ಎಂದು ನಾವು ಜಗಳ ಬಿಡಿಸಿ ಕೇಳಿದಾಗ. ಸುಬ್ಬ ತೊದಲುತ್ತ ಇವನ ಕಡೆ ಒಂದು ಫೌಂಟೆನ್ ಪೆನ್ ಇತ್ತು. ಅದು ಹೇಗೆ ಬಂತು ಎಂದು ಕೇಳಿದೆ ಅದಕ್ಕೆ ಇವ.. ಇವ.. ಎಂದು ಬಿಕ್ಕಿ ಬಿಕ್ಕಿ ಅಳಲಾರಂಬಿಸಿದ. ಲೇ ನಾ ಹೇಳುತ್ತೇನೆ ಎಂದ ಮಂಜ ಬೀಚಿನಲ್ಲಿ ಇರೋ ಅರೆ ಬೆತ್ತೆಲೆ ಫಾರಿನ್ ಹುಡುಗಿಯರನ್ನು ನೋಡಿ ನಾನು ಧಾರವಾಡ ಭಾಷಾದಾಗ ಬೈದೆ ಅವ್ರಿಗೆ ಏನು ತಿಳಿತೋ ನನಗೆ ಗೊತ್ತಿಲ್ಲ ಅವರು ನನಗೆ ಈ ಫೌಂಟೆನ್ ಪೆನ್ ಕೊಟ್ಟರು. ಅದನ್ನು ಇವನಿಗೆ ಹೇಳಿದೆ ಇವ ಹೋಗಿ ಹೋಗಿ .. ಫಾರಿನ್ ಹುಡುಗಿ ಅಂತ ತಿಳ್ಕೊಂಡು ಧಾರವಾಡದ ಬಿಳುಪು (ತೊನ್ನು) ಹತ್ತಿದ ಹುಡುಗಿ ಮ್ಯಾಲೆ ಪ್ರಯೋಗ ಮಾಡ್ಯಾನ... ಲೇ ಮೊದಲು ಅವರು ಬೆತ್ತಲೆ ಇದ್ದಾರೋ ಇಲ್ಲೋ ನೋಡ್ಬೇಕು ಆಮೇಲೆ ಬೈಬೇಕು. ಎಂದಾಗ ನಾವೆಲ್ಲರೂ ನಕ್ಕಿದ್ದೆ ನಕ್ಕಿದ್ದು.

ನಮ್ಮ ಸೀದ ಸಾದಾ ಸುಬ್ಬನಿಗೆ ಎಷ್ಟೇ ತೊಂದರೆಯಾದರು.. ನಮ್ಮ ತರ್ಲೆ ಮಂಜನ ಪಾಠ ಪ್ರವಚನ ಕೇಳುವದು ಬಿಟ್ಟಿಲ್ಲ. ಹೀಗೆ ಒಂದು ದಿವಸ ಕೆಮೆಸ್ಟ್ರಿ ಮಾಸ್ತರರು ಒಂದು ದಿವಸ ನಾಳೆ Alcohol ತಯಾರಿಸುವ ಪ್ರಾಕ್ಟಿಕಲ್ ತೋರಿಸುತ್ತೇನೆ. ಎಲ್ಲರು ಒಂದು ನ್ಯಾಪ್ಕಿನ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಲೇ "ಪಂಚಾಮೃತ ಮನ್ಯಾ" ನೀನು ಮುಂದ ಇರೋ.. ಎಂದು ಕೂಗಿ ಕೆಮೆಸ್ಟ್ರಿ ಮಾಸ್ತರರು ಹೇಳಿದ್ದರು. ಸುಬ್ಬ ನಿದ್ದೆಗಣ್ಣಲ್ಲಿ ಇದ್ದ. ಅವರು ಏನು ಹೇಳಿದ್ದರು ಎಂದು ತಿಳಿಯಲಿಲ್ಲ.

ಅನಂತರ ಸುಬ್ಬ ನಮ್ಮ ತರೆಲೆ ಮಂಜನಿಗೆ ಕೇಳಿದ್ದಾನೆ. ಅವನು ಏನು ಇಲ್ಲ ಕಣೋ ನ್ಯಾಪ್ಕಿನ್ ತೊಗೊಂಡು ಬಾ ಎಂದು ಹೇಳಿದ್ದಾರೆ ಎಂದ. "ಹಾಗೆ ಎಂದರೆ" ಎಂದು ಕೇಳಿದ. ಅಷ್ಟೇ ಬೇಕಾಗಿತ್ತು ನಮ್ಮ ಮಂಜನಿಗೆ ಏನು ಇಲ್ಲ ಲೇ ಹೋಗಿ Medical Shop ನ್ಯಾಗ ಕೇಳು ಕೊಡ್ತಾರ ಎಂದಿದ್ದಾನೆ.

ಮರುದಿನ ಮಾಸ್ತರ ಎಲ್ಲರು "ನ್ಯಾಪ್ಕಿನ್ ತಂದಿರೆನೋ" ಎಂದು ಕೇಳಿದರು. ಎಲ್ಲರು ನ್ಯಾಪ್ಕಿನ್ ತೋರಿಸಿದರು ಆದರೆ ಸುಬ್ಬನ ಕೈನಲ್ಲಿ ಇದ್ದ ಹಸಿರು ಪ್ಯಾಕೆಟ ನೋಡಿ ಮಾಸ್ತರರಿಗೆ ಮೈಯಲ್ಲ ಮುಳ್ಳು ಬಂದಿತ್ತು. ಅದು ಹುಡುಗಿಯರ ಎದುರಿಗೆ ಇದೇನು ತೆಗೆದು ಕೊಂಡು ಬಂದಿದ್ದಾನೆ ಎಂದು. ಮಾಸ್ತರ ಹುಣಿಸೆ ಬರಲು ತೆಗೆದು ಬಾರಿಸಲು ಶುರು ಮಾಡಿದ್ದಾರೆ. ಆಗ ಸುಬ್ಬ ಸರ್.. ಸರ್ .. ನನಗೆ ಏನು ಗೊತ್ತಿಲ್ಲ ಸರ್ .. ಎಂದ. ಮತ್ಯಾರಿಗೆ ಗೊತ್ತ ನಮ್ಮಪ್ಪ ಗೊತ್ತೇನೆ. ನಾಳೆ ನಿಮ್ಮ ಅಪ್ಪನ ಕರ್ಕೊಂಡು ಬಾ .. ಎಂದು ಮಾಸ್ತರ ಹೇಳಿದ್ದಾರೆ. ಆಗ ಮಂಜನೆ ಹೇಳಿದ್ದು ಎಂದು ಹೇಳಿದ್ದಾನೆ. ಆಗ ಮಾಸ್ತರ ತುಂಬಾ ಸಿಟ್ಟಿಗೆದ್ದು ಮಾಸ್ತರ ಮಂಜನ ಕಡೆಗೆ ಬಂದು ಏನು ಕೇಳದೆ ಬಾರಿಸಲು ಶುರು ಮಾಡಿ ಬಿಟ್ಟರು. ನೀನು ಯಾವಾಗಲೇ ಕೆಮೆಸ್ಟ್ರಿ ಹೇಳಲಿಕ್ಕೆ ಶುರು ಮಾಡಿದೆ. ಲೇ .. ಎಂದು. ಆಗ ಮಂಜ ಇಲ್ಲ.. ಇಲ್ಲ... ಸರ್ ನಾನೇನು ಹೇಳಿಲ್ಲ ನೋಡ್ರಿ ಬೇಕಾರ ನಾನು ಕರವಸ್ತ್ರ ತೊಗೊಂಡು ಬಂದೇನಿ. ಅವ ಸುಳ್ಳ ಹೇಳಾ ಕತ್ತ್ಯಾನ ಸರ್ ಎಂದು ಗೊಳೋ ಅಂತ ಅಳಲಾರಂಬಿಸಿದ. ಮಾಸ್ತರ ಮಂಜನ ಕೈ ಯಲ್ಲಿ ವಸ್ತ್ರ ನೋಡಿ. ಮಂಜನ ಬಿಟ್ಟು ಮತ್ತೆ ಸುಬ್ಬನ ಕಡೆ ಹೋಗಿ "ಸುಳ್ಳು ಹೇಳ್ತಿ ಮಗನ" ಎಂದು ಚೆನ್ನಾಗಿ ಬಾರಿಸಿ. ಪ್ರಾಕ್ಟಿಕಲ್ ಹೇಳದೆ staff ರೂಂ ಹೋಗಿ ಬಿಟ್ಟರು. ಅನಂತರ ಸುಬ್ಬನನ್ನು ಕರೆದು ಹೀಗೆಲ್ಲ ಮಾಡಬಾರದು ಎಂದು ತಿಳಿ ಹೇಳಿದ್ದರು.

Friday, August 28, 2009

ಬಳುಕುವ ಬಿಂಕದ ಬಳ್ಳಾರಿ ....

ನನ್ನ ಟೀಂ ಲೀಡರ್ ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ (ಏಕೆ ಎಂದು ತಿಳಿಯಬೇಕಾದರೆ ಓದಿ ಮನಸೂರೆಗೊಳ್ಳುವ ಮೈಸೂರು.... ) ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ ವಿಲನ್ ಉದ್ಗಾರ. ಇಲ್ಲವೊ ಬಳ್ಳಾರಿ ಜೈಲಿಗೆ ಕಳುಹಿಸಿಬಿಡುತ್ತೇನೆ ಎಂದು ವಿಲನ್ ಪೋಲಿಸ್ ಹೇಳುವ ಪರಿ ಸಿನಿಮಾದಲ್ಲಿ ನೋಡಿದ್ದೇ. ಇಲ್ಲಿ ನನ್ನ ತಪ್ಪು ಮಾತ್ರ ನನಗೆ ಅರಿವಾಗಿರಲಿಲ್ಲ. ಆದರು ಬಳ್ಳಾರಿಯಲ್ಲಿ ಇದ್ದೆ. ಗುಡ್ಡದ ಕೆಳಗೆ ಬಸ್ ಸ್ಟ್ಯಾಂಡ್. ಆಗಿನ್ನೂ 8.00 ಘಂಟೆ ಉರಿಬಿಸಿಲಿನಿಂದ ಮಧ್ಯಾಹ್ನ 11.00 ಘಂಟೆ ಆದ ಹಾಗೆ ಅನ್ನಿಸಿತು. ಇಳಿದ ಮೇಲೆ ಅಲ್ಲೇ ಇದ್ದ ಬೇಕರಿಗೆ ಹೋಗಿ "ಟೀ ಕೊಡಿ ಸ್ವಾಮಿ" ಎಂಬ ಸವಿನಯದಿಂದ ಕೇಳಿದೆ. ಟೀ ಅದ ಮೇಲೆ "ಎ ಟೀ ತಗೋ" ಎಂದು ಒರಟು ಭಾಷೆಯಿಂದ ಹೇಳಿದ. ಆದು ತುಂಬಾ ಚೆನ್ನಾಗಿರುವ "ಇರಾನಿ ಟೀ" ಅಂತಹ ಟೀ ನಾನು ಜೀವನದಲ್ಲೇ ಸವಿದಿರಲಿಲ್ಲ. ಅನಂತರನೇ ಗೊತ್ತಾಗಿದ್ದು ಇದು ಧಾರವಾಡದ ಭಾಷೆ ಹಾಗೇನೇ ಎಂದು ಆದರೆ ಅದಕ್ಕಿಂತಲೂ ತುಂಬ ಒರಟು ಭಾಷೆ.

ಆಟೋ ಹಿಡಿದು ಅಡ್ರೆಸ್ ದಾರಿಹೋಕರನ್ನು ಕೇಳಿ ತಿಳಿದು ಮನೆ ತಲುಪಿದೆ. ಅದು ಮನೆ ಹಾಗಿರದೆ ಒಂದು ಚಿಕ್ಕದಾದ ಕೋಣೆ. ಒಬ್ಬರು ಮಾತ್ರ ಇರಬಹುದಾಗಿತ್ತು. ಅರ್ಧ ಘಂಟೆ ಹಾಗೆ ವಿಶ್ರಾಂತಿ ತೆಗೆದುಕೊಂಡು ನಿತ್ಯಕರ್ಮಗಳನ್ನು ಮುಗಿಸಿ ಆಫೀಸ್ ತಲುಪಿದೆ. ಗೇಟಿನಲ್ಲಿ ಸೆಕ್ಯೂರಿಟಿ ಕೇಳಿದ ಯಾರು ಬೇಕು ಎಂದು "ನಾನು ನಿದ್ದೆಗಣ್ಣಲ್ಲಿ" ಡೈರಿ ಎಂದೆ. ಹೌದು ಡೈರಿನೆ ಹಾಲು ಬೇಕಾದರೆ ಆ ಕೌಂಟರ್ ಗೆ ಹೋಗಿ ಕೈ ಮಾಡಿ ಕೌಂಟರ್ ತೋರಿಸಿದ. ನಾನು ಅನಂತರ ಸಾಫ್ಟವೇರ್ Implementation ಗೆ ಬಂದಿದ್ದೇನೆ ಎಂದು ಹೇಳಿದಾಗ ಒಳಗಡೆ ಬಿಟ್ಟ.

ನಾನು ಮೈಸೂರಿನಲ್ಲಿ ಪ್ರತಿದಿನವು ಶ್ರೀರಾಮ ಮಂದಿರಕ್ಕೆ ಹೋಗುತ್ತಿದ್ದೆ. ಇಲ್ಲಿ ಏನು ಗೊತ್ತಿಲ್ಲವಾದ್ದರಿಂದ. ಹಾಗೆ ಬಂದಿದ್ದೆ. ಏನು ಆಘಾತ ಕಾದಿದೆ ಎಂದು ಮನದಲ್ಲೇ ಶ್ರೀರಾಮನನ್ನು ನೆನೆದು ಒಳಗಡೆ ಕಾಲಿಟ್ಟೆ. ಒಳಗಡೆ ಒಂದು ಆಕಳು ನಿಂತಿತ್ತು. ತುಂಬಾ ಖುಷಿ ಆಯಿತು. "ಗೋ ಮಾತೆ ತಾಯಿ" ಎಂದು ಹೋಗಿ ಅದನ್ನು ಹಿಂದಿನಿಂದ ನಮಸ್ಕರಿಸಿದೆ. ಆಗಲೇ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು "ಸರ್, ಏನಾದ್ರು ಮಾಡಿ ನನ್ನ ಆಕಳಿಗೆ ಹಾಲು ಬರುವ ಹಾಗೆ ಮಾಡಿ" ಎಂದು ಕಾಲಿಗೆ ಬಿದ್ದ. ನೋಡುವಷ್ಟರಲ್ಲೇ ಗೊಳೋ ಎಂದು ಅಳಲಾರಂಬಿಸಿದ. ನನಗೆ ದಿಕ್ಕೇ ತೋಚದಾಗಿತ್ತು. ನಾನು ಏನು ಇದೆಲ್ಲ? ನನ್ನ ಕಾಲುಬಿಡು ಎಂದೆ. ಇಲ್ಲ ನಾನು ಕಾಲು ಬಿಡುವದಿಲ್ಲ. ನೀವು ಸಹಾಯ ಮಾಡುತ್ತೇನೆ ಎಂದರೆ ಮಾತ್ರ ಬಿಡುತ್ತೇನೆ ಎಂದ. ನಾನು ....ನಾನು ಎಂದು ತಡವರಿಸಿದೆ. ಡಾಕ್ಟರೆ ಏನಾದರು ಮಾಡಿ ಹಾಲು ಬರಿಸಿ ಎಂದು ಹೇಳಿದ. ಆಗ ನನಗೆ ತಿಳಿಯಿತು. ನಾನು ಡಾಕ್ಟರ ಅಲ್ಲ ಎಂದೆ. ಮತ್ತೆ ನೀವು ಡಾಕ್ಟರ ಅಲ್ಲವಾ? ಎಂದ. ಇಲ್ಲ ನಾನು ಕಂಪ್ಯೂಟರ್ ನವನು ಎಂದು ಹೇಳಿದೆ. ಓ ಕಂಪ್ಯೂಟರಾ... ಎಂದು ರಾಗವೆಳೆದು. ನನ್ನನ್ನು ಓರೆಗಣ್ಣಿಂದ ನೋಡಿ. ಮೊದಲೇ ಹೇಳಬಾರದ ಎಂದು ನನ್ನನ್ನು ಜಬರಿಸಿ. ಮತ್ತೆ ಹೋಗಿ ಮರದ ಕೆಳೆಗೆ ಕುಳಿತ. ಹೇಳಿಕೊಳ್ಳಲು ಬಿಟ್ಟಿದ್ದೆಲ್ಲಿ ಎಂದು ನಾನು ಮನದಲ್ಲೇ ಅಂದುಕೊಂಡೆ. ಆಗ ಅನ್ನಿಸಿತು ಬಿಳಿ ಅಂಗಿ ಹಾಕಿಕೊಂಡು ಬರಬಾರದಿತ್ತೆಂದು.
ಮತ್ತೆ ಹೆದರಿಕೆಯಿಂದಲೇ ಒಳಗಡೆ ಕಾಲಿಟ್ಟ ಕೂಡಲೇ ಒಬ್ಬ ಮನುಷ್ಯ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ. ನನಗೆ ಈಗ ಪೂರ್ತಿ ಭಯ ಶುರು ಆಗಿತ್ತು. ನನಗೆ ಆ ಸೆಕ್ಯೂರಿಟಿ ಗಾರ್ಡ್ ಮೇಲೆ ಡೌಟ್ ಬಂತು. ಎಲ್ಲಿ ಡೈರಿ ಅಂತ ಹೇಳಿ ಹುಚ್ಚರ ಆಸ್ಪತ್ರೆ ಒಳಗಡೆ ಬಿಟ್ಟಿದ್ದಾನೋ ಎಂದು. ಸ್ವಲ್ಪ ಹೊತ್ತು ಕಾದ ಮೇಲೆ ಕಂಪ್ಯೂಟರ್ ಡಿಪಾರ್ಟ್ಮೆಂಟ್ ಹೆಡ್ ಆದ ಹೆಗಡೆ ಬಂದರು ತಾವಯಿಗೆಯೇ ನನ್ನನ್ನು ಪರಿಚಯ ಮಾಡಿಕೊಂಡರು. ತುಂಬ ಒಳ್ಳೆಯ ಮನುಷ್ಯ. ಅನಂತರ ಎಲ್ಲ ಡಿಪಾರ್ಟ್ಮೆಂಟ್ ಪರಿಚಯಿಸಲು ಕರೆದು ಕೊಂಡು ಹೋದರು.ಮ್ಯಾನೇಜರ್ ರೂಂ ಪ್ರವೇಶಿಸಿದೊಡನೆ ಮತ್ತೊಂದು ಆಘಾತ ಕಾದಿತ್ತು. ಮ್ಯಾನೇಜರ್ ತನ್ನ ತಲೆಯ ಕೂದಲನ್ನು ಕಿತ್ತಿ ಕೊಳ್ಳುತ್ತಿದ್ದರು. ಪರಿಚಯ ವಾದ ಮೇಲೆ ಹೊರಗೆ ಬಂದೊಡನೆ ಹೆಗಡೆ ನನಗೆ ಹೇಳಿದರು ಇವರೆಲ್ಲ ಹೀಗೆ ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು. ತಲೆ ಕೆಡಿಸಿ ಕೊಳ್ಳಲು ತಲೆಯಲ್ಲಿ ಏನು ಉಳಿದಿದೆ ಎಂದು ಕೇಳಬೇಕೆಂದೆ ಆದರೆ ಕೇಳಲಿಲ್ಲ... ಅನಂತರ ಭೇಟಿಯಾಗಿದ್ದು ಆ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ ವ್ಯಕ್ತಿ ಅವರು ಮಿಲ್ಕ್ ಬಿಲ್ ಆಫೀಸರ್ ಎಂದು ಆಗಲೇ ತಿಳಿದಿದ್ದು. ಅವರಿಗೆ ಬಿಲ್ ಬೇಕು ಎಂದು ಮ್ಯಾನೇಜರ್ ಪೀಡಿಸಿದ್ದರು ಕಾರಣ ಆ ಆಸಾಮಿ ತಲೆ ಚಚ್ಚಿ ಕೊಳ್ಳುತಿದ್ದ. ಹಾಗು ಹೀಗು ಎಲ್ಲರ ಪರಿಚಯವಾದ ಮೇಲೆ ಕ್ಯಾಬಿನ್ನಿನಲ್ಲಿ ಬಂದು ಕುಳಿತೆ. ಅಷ್ಟರಲ್ಲೇ ಫೈನಾನ್ಸ್ ಆಫೀಸರ್ ಗಳು ನನಗೆ ಕಾಯುತ್ತಿದ್ದರು ಅವರಿಗೆ ಮಿಲ್ಕ್ ಬಿಲ್ ಬ್ಯಾಲೆನ್ಸ್ ಶೀಟ್ ಬೇಕಾಗಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತಯಾರಾಗಿತ್ತು. ಹಾಗು ಹೀಗು ಅವರಿಗೆ ಓಪನಿಂಗ್ ಬ್ಯಾಲೆನ್ಸ್ ಎಂಟ್ರಿ ಮಾಡಲು ಹೇಳಿ. ಮರುದಿವಸ ಬ್ಯಾಲೆನ್ಸ್ ಶೀಟ್ ರೆಡಿ ಮಾಡಿ ಕೊಟ್ಟಿದ್ದೆ.

ಗುಡ್ಡದ ಕೆಳಗೆ ಚಿಕ್ಕ ಕೋಣೆ. ತುಂಬ ಉರಿಬಿಸಿಲು ಒಬ್ಬನೇ ಹೇಗೆ ಕಾಲ ಕಳೆಯುವದು ಒಂದು ದೊಡ್ಡ ಪ್ರಶ್ನೆ ಯಾಗಿತ್ತು. ಆಗ ನನಗೆ ಪುಸ್ತಕ ಓದುವ ಹವ್ಯಾಸ ಹತ್ತಿಕೊಂಡಿತ್ತು. ಮತ್ತೆ ಸಮಯ ಸಿಕ್ಕಾಗ ಶ್ರೀ ರಾಮ ನಾಮವನ್ನು ಬರೆಯುವದು. ತುಂಬಾ ಒಳ್ಳೊಳ್ಳೆ ವಿಷಯಗಳನ್ನು ಅರಿತಿದ್ದೆ. ಅದಕ್ಕೆ ಹೇಳಿರಬೇಕು ಹಿರಿಯರು "ದೇಶ ಸುತ್ತು ಇಲ್ಲ ಕೋಶ ಓದು" ಎಂದು. ನನಗೆ ಅಕಸ್ಮಾತ್ತಾಗಿ ಎರಡು ಸದಾವಕಾಶಗಳು ದೊರೆತಿದ್ದವು. ನನಗೆ ನಿಜವಾಗಿಯು ಬಳ್ಳಾರಿ ಸಿನಿಮಾದಲ್ಲಿ ತೋರಿಸುವ ಹಾಗೆ ಅನ್ನಿಸಲೇ ಇಲ್ಲ. ಅಲ್ಲಿಯ ಖಾರವಾಗಿರುವ ರೋಟಿ ಊಟ. ಈಗಲೂ ಬಾಯಿಗೆ ಚಪಲತೆ ನೆನಪಿಸುತ್ತದೆ. ಮತ್ತೆ "ತುಂಗಾ ಪಾನ ಗಂಗಾ ಸ್ನಾನ" ಎಂದು ಹಿರಿಯರು ಹೇಳಿದ ಹಾಗೆ ತುಂಗೆಯ ನೀರನ್ನು ಸವಿಯುವ ಅವಕಾಶ ದೊರೆತಿತ್ತು. ತುಂಬಾ ಒಳ್ಳೆಯ ಸಿಹಿ ನೀರು.
ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ ಆದರೆ 4 ತಿಂಗಳಿಗೆ ಪಾಂಡುರಂಗನಿಗೆ ಬೇರೆ ನೌಕರಿ ಸಿಕ್ಕಿತ್ತು. ಎಲ್ಲ ಜವಾಬ್ದಾರಿ ನನ್ನ ತಲೆಯ ಮೇಲೆ ಹೇರಿ ಹೋಗಿದ್ದರು ಇದು ರಾಮ ನಾಮದ ಫಲವೋ ಗೊತ್ತಿಲ್ಲ. ನಾನು ಮೊದಲ ಬಾರಿ ಟೀಂ ಲೀಡರ್ ಆಗಿದ್ದೆ. ಅದನ್ನು ನಿಭಾಯಿಸುವ ಪರಿಪಕ್ವತೆ ನನಗೆ ಬಂದಿತ್ತು. ಹೀಗೆ ಬಳ್ಳಾರಿ ನನಗೆ ತುಂಬ ಪಾಠ ಕಲಿಸಿತ್ತು. ಅಲ್ಲಿಯ ಫೈನಾನ್ಸ್ ಆಫೀಸರ್ ಗಳಾದ ಹಯವದನ ಆಚರ್ಯರಿಂದ ತುಂಬಾ ಕಲಿತ್ತಿದ್ದೆ. ಮತ್ತೆ ನನಗೆ ಹೆಗಡೆಯವರ ಸಹಾಯದಿಂದ 4 department computerise ಮಾಡಿದ್ದೆ.

ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ. ನಮ್ಮ MD ನನಗೆ ಫೋನ್ ಮಾಡಿ ನೀನು ನಾಳೆ ಶಿವಮೊಗ್ಗಕ್ಕೆ ಬರಬೇಕು ಮೀಟಿಂಗ್ ಇದೆ ಎಂದಾಗ ಯಾಕಾದರೂ ಟೀಂ ಲೀಡರ್ ಆದೆ ಎಂದು ಮನಸಿನಲ್ಲಿ ಅನ್ನಿಸಿತ್ತು. ಆದರೂ ಬೇಡದ ಮನಸಿನಿಂದ ಶಿವಮೊಗ್ಗ ಬಸ್ ಹತ್ತಿದ್ದೆ.

ಬಳ್ಳಾರಿಯಲ್ಲೇ ಇದ್ದಾಗ ಒಮ್ಮೆ ಮಂತ್ರಾಲಯಕ್ಕೆ ಹೋಗಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ ಬಂದಿದ್ದೆ. ಮತ್ತೆ ಒಂದು ದಿನ ಕರ್ನಾಟಕ ಇತಿಹಾಸದಲ್ಲೇ ಅತ್ಯುನ್ನತವಾದ ವಿಜಯನಗರ ಸಮ್ರಾಜ್ಯವಾದ ಹಂಪಿಯನ್ನು. ಆದರೆ ಅದನ್ನು ಹಾಳು ಮಾಡಿದ್ದೂ ನೋಡಿದರೆ ಮನ ಕಲುಕುತಿತ್ತು.

ಬಳ್ಳಾರಿ ನನಗೆ ನಿಜವಾಗಿಯು ಬಳುಕುವ ಬಿಂಕದ ಸಿಂಗಾರಿ ಇದ್ದ ಹಾಗೆ. ಅಲ್ಲಿ ಕಳೆದ 4 ತಿಂಗಳು ನನಗೆ ಜೀವನದ ಪ್ರತಿ ಕ್ಷಣವನ್ನು ಹೇಗೆ ಸವಿಯಬೇಕು ಎಂದು ಕಲಿಸಿದ ಊರು. ಅದಕ್ಕೆ ನಾನು ಹೇಳುವದು ಅದು ಬಳುಕುವ ಬಿಂಕದ ಸಿಂಗಾರಿ ನನ್ನ ಪ್ರೀತಿಯ ಬಳ್ಳಾರಿ ಎಂದು ......

ತರ್ಲೆ ಮಂಜ(ಗ)ನ ಎದಿರೇಟು....

ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.


ಒಂದು ದಿವಸ ಕ್ರಿಕೆಟ್ ಆಡುತ್ತಿದ್ದಾಗ ಮನೋಜನ ಟೀಂ, ಮಂಜನ ಟೀಂ ಮೊದಲ ಬಾರಿ ಸೋಲಿಸಿ ಬಿಟ್ಟಿತ್ತು. ಆಟದ ನಡುವೆ ಸ್ವಲ್ಪ ಜಿದ್ದಾ - ಜಿದ್ದಿನಿಂದ ಮಂಜನ ಜೊತೆ ಜಗಳ ಆಯಿತು .. ಮನೋಜನ ಗೆಲುವಿನ ಖುಷಿಗೆ ಪಾರವೇ ಇರಲಿಲ್ಲ. ತಮ್ಮ ಟೀಂ ಫೋಟೋ ತಗಿಸಿ ನೋಟೀಸ್ ಬೋರ್ಡ್ ಗೆ ಅಂಟಿಸಿದ್ದ. ಮಂಜನಿಗೆ ಎಲ್ಲಿಲ್ಲದ ಕೋಪ ಉಕ್ಕಿ ಹರಿದಿತ್ತು. ಇವನನ್ನು ಹೇಗಾದರೂ ಮಾಡಿ ಎದಿರೇಟು ಕೊಡಬೇಕಾಗಿತ್ತು. ಮನೋಜ ಆನಂತರ ಕ್ಷಮೇ ಕೇಳಿದನಾದರೂ ಪ್ರಯೋಜನವಾಗಿರಲಿಲ್ಲ....
6 ತಿಂಗಳ ಪರೀಕ್ಷೆಯ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಮಂಜ ಮತ್ತು ಮನೋಜನ ಸೀಟ್ ಹಿಂದೆ ಮುಂದೆಯೇ ಬರುತಿತ್ತು. ಮನೋಜನಿಗೆ ಪಾಸಾಗಲು ಸಹಾಯ ಮಾಡುವ ಏಕೈಕ ವೈಕ್ತಿ ನಮ್ಮ ಮಂಜ. ಅವನೇ ಕೈಕೊಟ್ಟಿದ್ದರಿಂದ ಮನೋಜನಿಗೆ ಪಾಸಾಗುವದು ಸಾಧ್ಯವೇ ಇರಲಿಲ್ಲ.


ಆವತ್ತು ವಿಜ್ಞಾನ ಪರೀಕ್ಷೆ ಇತ್ತು. ಮಂಜ ನಮ್ಮ ಹತ್ತಿರ ಬಂದು. "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಬೀಗಿದ. ಏನು ಮಾಡಿದೆ? ಎಂದು ನಾವೆಲ್ಲರೂ ಕೇಳಿದರು ಮಂಜ ಹೇಳಲಿಲ್ಲ. ರಿಸಲ್ಟ್ ಬರಲಿ ನಿನಗೆ ಗೊತ್ತಾಗುತ್ತೆ ಎಂದ. ಏನು ಮಾಡಿದ್ದ ಎಂದು ಯಾರಿಗೂ ತಿಳಿಯದಾಗಿತ್ತು.


ಮರುದಿನ ಕನ್ನಡ ಪೇಪರ್ ಇತ್ತು. ಮನೋಜ ಮಂಜನ ಕಾಲಿಗೆ ಬಿದ್ದು ಕ್ಷಮೇ ಕೇಳಿದ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು. ಕಡೆಗೆ ಮಂಜ ಮನೋಜನಿಗೆ ಸಹಾಯ ಮಾಡಲು ಒಪ್ಪಿದ. ಪರೀಕ್ಷೆಯ ಮುಂಚೆ ಮನೋಜನಿಗೆ ಮಂಜ "ಸೀದಾ ಸೀದಾ ನನ್ನ ಪೇಪರ್ ಕಾಪಿ ಮಾಡಬೇಡ ಸ್ವಲ್ಪ ತಿರುಚಿ ಬರಿ" ಎಂದು ತಕೀತ ಮಾಡಿದ್ದ .


ಪರೀಕ್ಷೆಯಲ್ಲಿ ನಿಜವಾಗಿಯು ಮಂಜ ಸಹಾಯ ಮಾಡಿದ್ದ. ಮನೋಜನಿಗೆ ತನ್ನ ತಪ್ಪಿನ ಅರಿವಾಗಿತ್ತು.


ಒಂದು ವಾರದ ನಂತರ ಎಲ್ಲರು ನೋಟೀಸ್ ಬೋರ್ಡ್ ಕಡೆಗೆ ಜಮಾಯಿಸಿದ್ದರು. ನೋಡಿದರೆ ಮನೋಜನ ವಿಜ್ಞಾನ ಪೇಪರ್ ನೇತಾಡುತಿತ್ತು. Alcohol ತಯಾರಿಸುವ ಹೊಸ ವಿಧಾನ ಕಂಡು ಹಿಡಿದವರು ಮನೋಜ್ ಎಂದು ಬರೆದಿತ್ತು. Alcohol ತಯಾರಿಸಲು ಬೇಕಾದ ಸಾಮಾನು ಏಲಕ್ಕಿ ಬಾಳೆ ಹಣ್ಣು, ಸಕ್ಕರೆ , ಹಾಲು, ಏಲಕ್ಕಿ, ತುಪ್ಪ ಮತ್ತು ಜೇನು ತುಪ್ಪ. ಎಲ್ಲ ಸಾಮಾನುಗಳ ಮಿಶ್ರಣ ಮಾಡಿ. ಅದನ್ನು ಒಂದು ಬಾಟಲಿಯಲ್ಲಿ ಹಾಕಿ ಅನಂತರ ಅದನ್ನು ನೆಲದಲ್ಲಿ ಮೂರೂ ದಿವಸ ಹುಗಿದು ಇಡಿ ಎಂದು ಬರೆದಿತ್ತು. ಮತ್ತೆ ಅವುಗಳ ಚಿತ್ರ ಬೇರೆ ಬರೆದಿತ್ತು.


ರಾಜಣ್ಣ ಮಾಸ್ತರ ಆಗಲೇ ಬಂದು "ಎಲ್ಲಿ ಮನ್ಯಾ ಎಂದು ಕೂಗಲಾರಮ್ಬಿಸಿದರು". "Alcohol ತಯಾರಿಸುವ ವಿಧಾನ ಬರೆಯಿರಿ ಎಂದರೆ ಪಂಚಾಮೃತ ಮಾಡ್ಯಾನ ಎಂದು" ಮನೋಜನಿಗೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.
ಅನಂತರ ತಿಳಿಯಿತು ಇದರಲ್ಲಿ ಮಂಜನ ಕೈವಾಡ ಇದೆ ಎಂದು. ಪರೀಕ್ಷೆಯ ದಿವಸ ಮನೋಜ ಮಂಜನಿಗೆ ಭೇಟಿಯಾಗಿ "ನೀನು ಪೇಪರ್ ತೋರಿಸದಿದ್ದರೂ ಪರವಾಗಿಲ್ಲ. ಯಾವ ಯಾವ ಪ್ರಶ್ನೆ ಬೀಳುತ್ತವೆ ಅದನ್ನಾದರೂ ಹೇಳು" ಎಂದು ಕೇಳಿದ್ದ . ಅದಕ್ಕೆ ಮಂಜ Alcohol ತಯಾರಿಸುವ ವಿಧಾನ ಗ್ಯಾರಂಟೀ ಬಿಳುತ್ತೆ ಎಂದು ಹೇಳಿದ್ದ. "ಅದು ಹೇಗೆ ಅಷ್ಟು ಖಚಿತವಾಗಿ ಹೇಳುತ್ತಿ?" ಎಂದು ಮನೋಜ ಕೇಳಿದಾಗ. ಮಂಜ ರಾಜಣ್ಣ ಮಾಸ್ತರ್ ನ ನಿನ್ನೆ ಶೆರೆ ಅಂಗಡಿ ಒಳಗೆ ನೋಡಿದೆ. ಅವರು ಗ್ಯಾರಂಟೀ ಅದನ್ನೇ ಕೊಡುತ್ತಾರೆ ಎಂದ. ಅದಕ್ಕೆ ಅದರ ತಯಾರಿಸುವ ವಿಧಾನವನ್ನು ಹೇಳು ಎಂದಾಗ. ಮಂಜ ಈ ತರ್ಲೆ ಮಾಡಿದ್ದ. ಅದಕ್ಕೆ ನಮಗೆ "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಹೇಳಿದ್ದು.


ಮತ್ತೆ ಮರುದಿನ ಕನ್ನಡ ಮಾಸ್ತರ ಬಂದು ಎಲ್ಲಿ ಆ "ಪಂಚಾಮೃತ ಮನ್ಯಾ". ಎಂದು ಎಲ್ಲರೆದುರು ಕೇಳಿದರು. ಮನೋಜನಿಗೆ ಅಳು ಉಕ್ಕಿ ಬಂದಿತ್ತು. ಮನೋಜನನ್ನು staff ರೂಮಿಗೆ ಕರೆದು ಕೊಂಡು ಹೋಗಿ ಮಾಸ್ತರ "ನೋಡು ಮನೋಜ ನೀನು ಹೊಸದಾಗಿ ತಯಾರಿಸಿರೋ Alcohol ನನಗೆ ಬೇಕು" ಎಂದು ಹೇಳಿದರು "ಇಲ್ಲ ಅಂದರೆ ನಿನ್ನ ಕನ್ನಡ ಪೇಪರ್ ನು ನೋಟೀಸ್ ಬೋರ್ಡ್ ಮ್ಯಾಲೆ ಇರ್ತದ" ಎಂದರು. ಅನಂತರ ಎಲ್ಲರು ಮನೋಜನನ್ನು "ಪಂಚಾಮೃತ ಮನ್ಯಾ" ಎಂದು ಅಂಕಿತ ನಾಮ ಕೊಟ್ಟು ಬಿಟ್ಟಿದ್ದರು.


ಮನೋಜನಿಗೆ ಅರ್ಥವೇ ಆಗಿರಲಿಲ್ಲ. ನಾನು ಕಾಪಿ ಹೊಡೆದದ್ದು ಮಂಜಂದು ಪೇಪರ್ ಅದು ಹೆಂಗ ತಪ್ಪು ಇರಲಿಕ್ಕೆ ಸಾಧ್ಯ? ಎಂದು ಪಂಚಾಮೃತ ತರದೇ ಸುಮ್ಮನೆ ಇದ್ದುಬಿಟ್ಟ.


ಮರುದಿವಸ ಮತ್ತೆ ಕನ್ನಡ ಪೇಪರ್ ನೋಟೀಸ್ ಬೋರ್ಡ್ ಮೇಲೆ. ಮನೋಜ ತಿರುಚಿ ಉತ್ತರ ಬರಿ ಎಂದು ಹೇಳಿದ್ದಕ್ಕೆ ಈ ವಾಕ್ಯವನ್ನು " ಭಾರತಿಗೆ ಮದುವೆ ಆಯಿತು. ಅನಂತರ 2 ಮಕ್ಕಳು ಜನಿಸಿದವು" ಎಂದು ಬರೆಯುವ ಬದಲು "ಭಾರತಿಗೆ ಮಕ್ಕಳು ಜನಿಸಿದವು. ಅನಂತರ 2 ಮದುವೆ ಆಯಿತು." ಎಂದು ತಿರುಚಿ ಬರೆದು ಬಿಟ್ಟಿದ್ದ. ಮತ್ತೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.


ಹೀಗೆ ಮಂಜ ತನ್ನ ಸೇಡನ್ನು ತಿರಿಸಿಕೊಂಡಿದ್ದ. ಅನಂತರ ಮನೋಜ ಯಾವತ್ತು ಮಂಜನ ತಂಟೆಗೆ ಹೋಗಲಿಲ್ಲ. ಮಂಜನ ಪಕ್ಕ ಭಂಟನಾಗಿ ಹೋದ....

ತರ್ಲೆ ಮಂಜ(ಗ)ನ ಪ್ರೇಮ ಪಾಠ ....

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....

ಸಂದೀಪ ಶಾಂತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಸದಾ ಅವಳ ಗುಂಗಿನಲ್ಲೇ ಇರುತ್ತಿದ್ದ. ಆದರು ಯಾರಿಗೂ ಹೇಳದೆ ಸುಮ್ಮನೆ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದ. ಮಂಜನ ಸಹಾಯ ಬೇಕೆನಿಸಿದರು ಕೇಳಿರಲಿಲ್ಲ. ನನಗೆ ಈ ವಿಷಯ ತಿಳಿದಿತ್ತು. ಶಾಂತಿಯ ಮನೆ ನಮ್ಮ ಮನೆಯ ಸಮೀಪವೇ ಇತ್ತು. ಸದಾ ನಮ್ಮ ಓಣಿಯನ್ನು ಸುತ್ತುತ್ತಿದ್ದ. ನಮ್ಮ ಅಪ್ಪ ಅಥವಾ ಅಮ್ಮ ನೋಡಿದರೆ ಮಾತ್ರ ಗೋಪಾಲನನ್ನು ನೋಡಲು ಬಂದಿದ್ದೆ ಎಂದು ಭೂಸಿ ಬಿಡುತ್ತಿದ್ದ. ಹೀಗೆ ಒಂದು ದಿವಸ ನಾನು ಕೇಳಿಯೇ ಬಿಟ್ಟೆ. ಏನಪ್ಪಾ ಶಾಂತಿ .. ಎಂದು ಕೂಡಲೇ. ಏನಾದರು ಮಾಡಿ ಸಹಾಯ ಮಾಡು ಎಂದು ಗೋಗರಿದ. ನಾನು, ನವೀನ ಶಾಂತಿಯ ಅಕ್ಕಪಕ್ಕದ ಮನೆ ಹುಡುಗರು. ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾವ ಹುಡುಗರನ್ನು ಶಾಂತಿ ಮಾತನಾಡಿಸಿರಲಿಲ್ಲ. ಇವನ ಪ್ರೇಮ್ ಪ್ರಸ್ತಾಪ ಮಾಡಿದ್ದೂ ನಮ್ಮ ಅಪ್ಪನಿಗೇನಾದರೂ ಗೊತ್ತಾದರೆ ನನ್ನನ್ನು ಅಪ್ಪ ಫೋಟೋ ಫ್ರೇಮ್ ಮಾಡುವದು ಗ್ಯಾರಂಟೀ. ಅದ್ದರಿಂದ ನವೀನನಿಗೆ ಕೇಳು ಎಂದು ಹೇಳಿದೆ. ನವೀನ ಒಂಥರಾ ರೇಡಿಯೋ ಇದ್ದ ಹಾಗೆ, ಅವಿನಿಗೆ ಹೇಳಿದರೆ ಊರಿಗೆ ಡಂಗುರ ಸಾರುತ್ತಾನೆ ಎಂದು ಸಂದೀಪ ಹೇಳಿದ. ಮತ್ತೆ ನಮ್ಮಿಬ್ಬರಿಗೂ ಹೊಳೆದಿದ್ದು ದಿ ಗ್ರೇಟ್ ಮಂಜ.

ಮತ್ತೆ ನಾವಿಬ್ಬರು ಮಂಜನ ಹತ್ತಿರ ಹೋಗಿ, ಇವನ ಪ್ರೇಮದ ಬಗ್ಗೆ ತಿಳಿಸಿದೆವು. ಮಂಜ ಬೇರೆ ಯಾವದೇ ವಿಷಯಕ್ಕೆ ಕಾಲೆಳೆಯುತ್ತಿದ್ದ. ಆದರೆ ಪ್ರೀತಿಯ ವಿಷಯದಲ್ಲಿ ಮಾತ್ರ ತನ್ನ ಅಭಯ ಹಸ್ತವನ್ನು ತೋರಿಸುತ್ತಿದ್ದ. ಕೂಡಲೇ ಒಪ್ಪಿಗೆ ಸೂಚಿಸಿದ. ಸಂದೀಪನ ಖುಷಿಗೆ ಪಾರವೇ ಇರಲಿಲ್ಲ.

ಮತ್ತೆ ಸಂಜೆ ನಾನು, ಸಂದೀಪ ಮತ್ತು ಮಂಜ ಅಜಾದ್ ಪಾರ್ಕ್ ನಲ್ಲಿರುವ ಉಪಾಹಾರ ಗ್ರಹದಲ್ಲಿ ಸಂಧಿಸಿದೆವು. ಮಂಜ ಹೇಳಿದ "ನೋಡು ಸಂದೀಪ ಶಾಂತಿನ್ನ ಪಟಾಯಿಸಬೇಕು ಎಂದರೆ ಅವಳ ಜೊತೆ ಇರುತ್ತಾಳಲ್ಲ ನಿಮ್ಮ ಪಕ್ಕದ ಮನಿ ಹುಡುಗಿ ರಾಣಿ ಆಕಿ ಜೊತೆ ಸ್ವಲ್ಪ ಸಲುಗಿಯಿಂದ ಇರು. ಆವಾಗ ಶಾಂತಿಗೆ ಹೊಟ್ಟಿ ಉರ್ಕೊಂಡು ನಿನ್ನ ಹತ್ರ ಓಡಿ ಬರ್ತಾಳ. ನೀನು ಬಾಳ ಚಂದ ಇದ್ದಿ. ನಿನ್ನoತಹ ಹುಡುಗನ್ನ ಯಾರು ಬಿಟ್ಟು ಕೊಡಂಗಿಲ್ಲ ಎಂದ. ಹುಡುಗ್ಯಾರಿಗೆ ಸ್ವಲ್ಪ ಹೊಟ್ಟಿ ಕಿಚ್ಚು ಜ್ಯಾಸ್ತಿ. ಇನ್ನೊಂದು ಹುಡುಗಿಗೆ ಸಿಕ್ಕಿದ್ದು ತಮಗೂ ಸಿಗಬೇಕು ಅಂತ ಅಸೆ ಪಡ್ತಾರ." ತೆಜಾಬ್ ಸಿನಿಮ ನೋಡಿಯಿಲ್ಲ ......? ಅದರೊಳಗ ಮಾಧುರಿ ದಿಕ್ಷಿತ ಪಟಾಯಿಸ್ಲಿಕ್ಕೆ ಮಂದಾಕಿನಿಗೆ ಅನಿಲ್ ಕಪೂರ್ ಗಾಳ ಹಾಕಿದ್ದ. ಹಂಗ ನೀನು ಮಾಡಬೇಕು ಎಂದ.

ಮಂಜ ಈ ಹೇಳಿಕೆಯನ್ನು ವೇದ ವಾಕ್ಯವೆಂದು ತಿಳಿಯುತ್ತೇನೆ ಎಂದು ಹೇಳಿ. ನಮ್ಮಿಬ್ಬರಿಗೂ ಮಸಾಲೆ ದೋಸೆ ಮತ್ತು ಟೀ ಕೊಡಿಸಿ ಬೀಳ್ಕೊಟ್ಟಿದ್ದ.

ಮತ್ತೆ ಶುರು ಆಯಿತು ಸಂದೀಪನ ಸಂದ್ಯರಾಗ...ದಿನವು ರಾಣಿಗೆ ನೋಟ್ಸ್ ಕೇಳುವದು. ತನ್ನ ನೋಟ್ಸ್ ಕೊಡುವದು ಹೀಗೆ.. ದಿನವು ಅವಳನ್ನು ಮಾತನಾಡಿಸುತ್ತಿದ್ದ. ಹೀಗೆ ಒಂದು ತಿಂಗಳು ನಡಿಯಿತು. ಆದರು ಏನು ಪ್ರಯೋಜನವಾಗಲಿಲ್ಲ. ಶಾಂತಿ ಮಾತ್ರ ಇನ್ನು ಶಾಂತವಾಗಿಯೇ ಇದ್ದಳು.

ಮತ್ತೆ ಬಂದು ಮಂಜನಿಗೆ ತನ್ನ ಕಷ್ಟವನ್ನು ಅಲವತ್ತುಕೊಂಡ. ಮಂಜ ಹೇಳಿದ "ಶಾಂತಳ ಮುಂದೆ ರಾಣಿನ್ನ ಹೊಗಳು ಎಂದು ಹೇಳಿದ". ಸಂದೀಪನಿಗೆ ದಿಕ್ಕೇ ತೋಚದಾಗಿತ್ತು. ಆ ಕಪ್ಪು ಕೃಷ್ಣವೇಣಿ, ದಪ್ಪ ನಾಸಿಕ, ಅನಹುತವಾದ ದೇಹ ಧಾರ್ಡ್ಯ ಹೇಗೆ ವರ್ಣಿಸುವದು ಎಂದು. ಕಣ್ಣನ್ನಾದರೂ.. ವರ್ಣಿಸೋಣವೆಂದರೆ ಮೆಳ್ಳಗಣ್ಣು.. ಆಗ ಮಂಜ "ಕುರುಡುಗಣ್ಣಲ್ಲಿ ಮೆಳ್ಳಗಣ್ಣು ಶ್ರೇಷ್ಟ.." ಎಂದು ಬಿಡು ಎಂದ ತಮಾಶೆಯಾಗಿ. ಹಾಗು.. ಹೀಗು.. ಶಾಂತಳೆದುರಿಗೆ ರಾಣಿನ್ನ ಮಹಾರಾಣಿಯ ಹಾಗೆ ವರ್ಣಿಸಿದ್ದ. ಆದರು ಶಾಂತಿಯ ಶಾಂತತೆ ಕೆಡಲಿಲ್ಲ. ರಾಣಿ ಇನ್ನಷ್ಟು ಉಬ್ಬಿ ಹೋಗಿದ್ದಳು. ಎರಡೇ ತಿಂಗಳಲ್ಲಿ 6 Kg ಜ್ಯಾಸ್ತಿ ಆಗಿತ್ತು.

ಶಾಂತಿಗೆ ಗೊತ್ತಾಗುವ ಹಾಗೆ, ಕಡೆಯ ಪ್ರಯತ್ನವಾಗಿ ನೋಟ್ಸ್ ಪುಸ್ತಕದಲ್ಲಿ ಪ್ರೇಮ ಪತ್ರ ರವಾನಿಸಿದ್ದ. ಅದೇ ಕೊನೆ ಕೃಷ್ಣವೇಣಿ ರಾಣಿ ಹಸಿರು ನಿಶಾನೆ ತೋರಿಸಿ, ಮನೆಯವರಿಗೆಲ್ಲ ಪತ್ರ ತೋರಿಸಿ ಅವನನ್ನು ಮದುವೇಯಾಗುವವರೆಗೆ ಬಿಡಲೇ ಇಲ್ಲ. ಶಾಂತ ಸ್ವರೂಪದ ಶಾಂತಿ ಮಾತ್ರ ದಕ್ಕಲೇ ಇಲ್ಲ. ಇದು ಮಂಜ ಮತ್ತೆ ನನಗು ತಿಳಿಯದಾಗಿತ್ತು. ಮಂಜನ ಈ ಐಡಿಯಾ ತಲೆಕೆಳಗಾಗಿತ್ತು.
ಬಾಯಿಬಿಡದೆ ರಾಣಿಯನ್ನು ತೆಪ್ಪಗೆ ಮದುವೆಯಾಗಿದ್ದ. ಮದುವೆಗೆ ಅವನ ಶಾಂತಿನು ಬಂದಿದ್ದಳು.

ಮೊನ್ನೆ ಒಂದು ದಿವಸ ನಾನು, ಮಂಜ ,ಸಂದೀಪ ಮತ್ತು ನವೀನ ಸೇರಿದ್ದವು. ಸಂದೀಪ ತನಗೆ ಗಂಡು ಮಗು ಆಯಿತು ಎಂದು ಸಂದೀಪ ಪಾರ್ಟಿ ಕೊಟ್ಟಿದ್ದ. ಕಂಠ ಪೂರ್ತಿ ಎಲ್ಲರು ಕುಡಿದಿದ್ದೆವು. ಹಾಗೆ ಗಾಂಧಿ ಚೌಕದವರೆಗೆ ಬಂದು ಹರುಟುತ್ತಿದ್ದೆವು. ಆಗ ನವೀನ "ನಿನ್ನೆ ಶಾಂತಿ ಬಂದಿದ್ದಳು" ಎಂದ. ಸಂದೀಪನ ಕಿವಿ ನಿವೀರೆಳಿದ್ದವು. "ಅವಳ ಮದುವೇ ಅಂತೆ ಕಣೋ" ಎಂದ. ಮೊತ್ತೊಂದು ವಿಷಯ "ಅವಳು ಸಂದೀಪನನ್ನು ತುಂಬಾ ಇಷ್ಟ ಪಡುತ್ತಿದ್ದಳು ಅಂತ ಹೇಳಿ, ಅವನು ಮಾತ್ರ ರಾಣಿನ ಪ್ರೀತಿಸಿದ ಎಂದು ಕಣ್ಣೀರಿಟ್ಟು ಬಿಟ್ಟಳು." ಎಂದು ಬಿಟ್ಟ.

ಸಂದೀಪ ನನ್ನನ್ನು ಮತ್ತು ಮಂಜನನ್ನು ಕೆಟ್ಟ ಕೋಪದಿಂದ ನೋಡಿ, ಏನು ಮಾಡಬೇಕೋ ತಿಳಿಯದೆ ತನ್ನ ಚಪ್ಪಲ ತೆಗೆದು "ರಪ.. ರಪ.. " ನೆ ತನ್ನ ತಲೆಗೆ ಹೊಡೆದುಕೊಂಡು ಸಂದಿಗೊಂದಿಯಿಂದ ಮನೆ ಸೇರಿಕೊಂಡಿದ್ದ.

ನಾನು ಮಂಜನಿಗೆ "ಲೇ ತೆಜ್ಯಾಬ್ , ಗಿಜ್ಯಾಬ್ ಅಂತ ಹೇಳಿ ತಲಿ ಕೆಡಿಸಿ " ಅವನ ಪ್ರೀತಿ ಹಾಳು ಮಾಡಿಬಿಟ್ಟಿಯಲ್ಲೋ ಸೀದಾ ಶಾಂತಿಗೆ ಹೋಗಿ ಹೇಳಿದ್ರ ಆಗುತಿತ್ತು ಎಂದೆ. ಅದಕ್ಕೆ ಮಂಜ "ನೋಡು "ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಅವನ ಹಣಿ ಮೇಲೆ ರಾಣಿ ಅಂತ ಬರೆದಿತ್ತು ಅಂತ ಕಾಣಿಸ್ತದ ಅದಕ ' ಶಾಂತಿನ ಬಿಟ್ಟು ವಾಂತಿನ ಕಟ್ಗೊಂಡ ' ನಾವೇನು ಮಾಡಬೇಕು" ಎಂದ. ನಾವಿಬ್ಬರು ನಕ್ಕಿದ್ದೆ.. ನಕ್ಕಿದ್ದು... ನವೀನನಿಗೆ ಮಾತ್ರ ಏನು ಅರ್ಥ ಆಗದೆ ಪೆಕರನಂತೆ ನೋಡುತ್ತಿದ್ದ.
ಮಂಜನ ಇನ್ನಷ್ಟು ತರಲೆಗಳು ಬರಲಿವೆ ನಿರೀಕ್ಷಿಸಿ ....

ತರ್ಲೆ ಮಂಜ(ಗ) ನಾಟ....

ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.

ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.

ಹೀಗೆ ಮತ್ತೊಂದು ಬಸ್ ಬರುವವರೆಗೆ ಕಾಯುತ್ತಾ ಇದ್ದಾಗ ಒಂದು ಹುಡುಗಿ ನಮ್ಮ ಸಮೀಪ ಬಂದು ನಿಂತಳು. ಅವಳನ್ನು ನೋಡಿ ಹಲ್ಲು ಕಿರಿದ ಮಂಜ. ಇವನನ್ನು ನೋಡಿ ಹೆದರಿ ಆ ಹುಡುಗಿ ಬೇರೆ ಕಡೆಗೆ ಹೋಗಿ ನಿಂತು ಬಿಟ್ಟಳು. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆಗಲೇ ಬೇರೊಂದು ಬಸ್ ಬಂತು. ನಾವು ಅದೇ ಬಸ್ ಹತ್ತಿದರೂ ಸಿಟ್ ಸಿಕ್ಕಲಿಲ್ಲ. ಆ ಹುಡುಗಿಯೂ ಅದೇ ಬುಸ್ ಹತ್ತಿದಳು. ಆದರೆ ಅವಳಿಗೆ ಸೀಟ್ ಸಿಕ್ಕಿತ್ತು. ಮಂಜ ನನಗೆ ಒಂದು ಸೀಟ್ ಕೊಡಿಸುವೆ ಎಂದು ಹೇಳಿದ ನಾನು ಬೇಡ ಎಂದೆ. ಇವನು ಮೊದಲೇ ದೊಡ್ಡ ತರ್ಲೆ ಏನು ಮಹಾಪ್ರಲಾಪ ಮಾಡುತ್ತಾನೋ ಎಂದು. ಕಡೆಗೂ ತನ್ನ ಪಾಠ ಪುರಾಣಗಳಿಂದ ಒಪ್ಪಿಸಿಯೇ ಬಿಟ್ಟ.

ಮೆಲ್ಲನೆ ಆ ಹುಡುಗಿಯ ಸೀಟ್ ಹತ್ತಿರ ಹೋಗಿ ನಿಂತ. ಮತ್ತೆ ಎಲ್ಲಿ ತರ್ಲೆ ಮಾಡುತ್ತಾನೋ ಎಂದು ತುಂಬಾ ಹೆದರಿದ್ದೆ. ಹೋದವನೇ ಹುಡುಗಿಗೆ ನಾನು "Dr ಮಂಜುನಾಥ ಅಂತ" ಎಂದ. ನೀವು ಹೀಗೆ ಕುಳಿತು ಕೊಳ್ಳಬೇಡಿ ಮುಖಕ್ಕೆ ಏನಾದರು ಧರಿಸಿ ಎಂದು "H1N1" ಬಗ್ಗೆ ದೊಡ್ಡದಾದ ಲೆಕ್ಚರ್ ಕೊಟ್ಟ. ಮತ್ತೆ ರೋಗ ತಡೆಹಿಡಿಯುವ Homeopathic ಔಷಧಿ - Gelsemium 30 ( one dram ) for one week (5+5) ಎಂದು ಅವಳಿಗೆ ಹೇಳಿದ. ಮತ್ತೆ ದಿನವೂ ಮುಂಜಾನೆ ಎದ್ದಮೇಲೆ ಒಂದು ತುಳಸಿ ದಳ ತಿನ್ನಿರಿ ಎಂದು ಅಭಯವನ್ನಿತ್ತ. ಆ ಹುಡುಗಿ ಮುಖಕ್ಕೆ ತನ್ನ ಕರ್ಚಿಫ್ ಸುತ್ತಿಕೊಂಡಳು. ಚೆನ್ನಾಗಿ ಹಚ್ಚಿದ್ದ ಲಿಪ್ಸ್ಟಿಕ್ ವೇಸ್ಟ್ ಆಗಿತ್ತು. ಅಷ್ಟರಲ್ಲೇ ನನ್ನನ್ನು ತೋರಿಸಿ "ಈವ ನನ್ನ ಗೆಳೆಯ" ಎಂದು ಪರಿಚಯ ಮಾಡಿ ಕೊಟ್ಟ. ಆ ಹುಡುಗಿ ನನ್ನ ನೋಡಿ ನಮಸ್ಕರಿಸಿತು. ಇವನಿಗೆ ಸ್ವಲ್ಪ ನೆಗಡಿ ಎಲ್ಲಿ "H1N1" ಇದೆಯೋ ಅಂತ ಸ್ವಲ್ಪ ಪರೀಕ್ಷೆ ಮಾಡಿಸಲು ಕರೆದು ಕೊಂಡು ಹೊರಟಿದ್ದೇನೆ ಪ್ಲೀಸ್ ಸ್ವಲ್ಪ ಕೆಟಕಿ ಸೀಟ್ ಬಿಟ್ಟು ಕೊಡುತ್ತೀರಾ ಎಂದು ಅಂದು ಬಿಟ್ಟ. ಎಲ್ಲರು ಒಮ್ಮೆ ನನ್ನ ಹುಚ್ಚನಂತೆ ನೋಡಿದ್ದರು. ನಾನು ಖುದ್ದಾಗಿ ಹೋಗಿ ನಿಮ್ಹಾನ್ಸ್ ಸೇರುವದೊಂದೇ ಬಾಕಿ. ಆನಂತರ ಡ್ರೈವರ್ ಮತ್ತು ಕಂಡಕ್ಟರ್ ಸಮೇತ ಪೂರ್ತಿ ಬಸ್ ಖಾಲಿ ಆಗಿ ಬಿಟ್ಟಿತ್ತು. ಬಸ್ನಲ್ಲಿ ಇದ್ದದ್ದು ನಾನು ಮತ್ತು ಮಂಜು ಮಾತ್ರ. ಒಬ್ಬರನೊಬ್ಬರು ಮುಖ ಮುಖ ನೋಡಿಕೊಂಡು ನಗು ತಡಿಯಲಾರದೆ ಜೋರಾಗಿ ನಕ್ಕು ಬಿಟ್ಟೆವು. ಮತ್ತೆ ಬಸ್ನಿಂದ ಇಳಿದು ಆಟೋ ಹತ್ತಿ ಗೂಡು ಸೇರಿಕೊಂಡೆವು.

ಈ ಗದ್ದಲದಲ್ಲಿ ಪಾನಿಪುರಿ ಮತ್ತು ಮಿರ್ಚಿ ನೆನಪು ಹಾರಿ ಹೋಗಿತ್ತು. ಆದರೆ ಮಂಜನ ತರ್ಲೆಗಳು ಮಾತ್ರ ತಲೆಯಲ್ಲಿ ಗುನುಗುಡುತಿತ್ತು.

ಒಂದು ದಿವಸ ಮಂಜ ರಾಜಣ್ಣ ಮಾಸ್ತರ ಮನೆಗೆ ಹೋಗಿದ್ದ. ಅವರು ಆಗಲೇ ದಾಡಿ ಮಾಡಿಕೊಳ್ಳಲು ನೊರೆ ಮುಖಕ್ಕೆ ಹಚ್ಚಿಕೊಂಡು ಶೇವಿಂಗ್ ಮಾಡಲು ರೆಡಿ ಆಗಿದ್ದರು. ಆಗಲೇ ಈ ಮಂಜ "ಸರ್ ಹೆಡ್ ಮಾಸ್ತರ್ ಕರಿತಿದ್ದಾರೆ ತುಂಬಾ ಅರ್ಜೆಂಟ್ " ಎಂದ. ಮಾಸ್ತರರು ಏನು ಮಾಡಬೇಕೆಂದು ತಿಳಿಯದೆ ಮುಖಕ್ಕೆ ಹಚ್ಚಿದ ಶೇವಿಂಗ್ ಕ್ರೀಂ ಟೊವೆಲ್ನಿಂದ ಒರಿಸಿ ಹೆಡ್ ಮಾಸ್ತರ್ ಮನೆಗೆ ಹೋದರು.

ಹೆಡ್ ಮಾಸ್ತರು ಹೆಂಡತಿಯೊಂದಿಗೆ ಜಗಳವಾಡಿದ್ದರು. ಅವರೇ ತಮ್ಮ ಬಟ್ಟೆ ಮತ್ತು ಹೆಂಡತಿಯ ಸೀರೆಯನ್ನು ತೊಳೆಯುತ್ತಿದ್ದರು. ಹೆಡ್ ಮಾಸ್ತರರನ್ನು ಹುಡುಕುತ್ತ ಪೂರ್ತಿ ಮನೆಯಲ್ಲ ಜಾಲಾಡಿ ಹಿತ್ತಲ ಮನೆಗೆ ಕಾಲಿಟ್ಟು "ಏನ್ ಸರ್ ಅರ್ಜೆಂಟ್ ಕರೆದಿರಲ್ಲ" ಎಂದು ಕೇಳಿದರು. ಮೊದಲೇ ಕೆಂಡ ಮಂಡಲಾಗಿದ್ದ ಹೆಡ್ ಮಾಸ್ತರ್ ಹೆಂಡತಿ ಸೀರೆ ಬೇರೆ ನೋಡಿಬಿಟ್ಟ ಎಂಬ ಕೋಪದಿಂದ. ಯಾರು ರೀ ನಿಮಗೆ ಕರೆದಿದ್ದು ಎಂದು ಕೋಪಿಸಿಕೊಂಡು, ಅಷ್ಟು ಬಟ್ಟೆ ರಾಜಣ್ಣ ಮಾಸ್ತರ ಕಡೆ ಒಗಿಯಿಸಿ ಕಳುಸಿದ್ದರು. ಮನೆಗೆ ಬರುವ ದಾರಿಯಲ್ಲಿ ಈ ಮಂಜ "ಏಪ್ರಿಲ್ ಫೂಲ್ ಸರ್" ಎಂದು ಬಿಟ್ಟ. ಮೊದಲೇ ಉರಿದು ಹೋಗಿದ್ದ ಮಾಸ್ತರರಿಗೆ ಕೆಟ್ಟ ಕೋಪ ಬಂದು ಹುಣಿಸಿ ಬರಲು ತೆಗೆದು ಬಾಸುಂಡೆ ಬರುವ ಹಾಗೆ ಬಾರಿಸಿದ್ದರು.

ಹೀಗೆ ಒಂದು ದಿವಸ ಟ್ರೈನಿನಲ್ಲು ತುಂಬಾ ಜನ ಜಂಗುಳಿ ಇತ್ತು. ಮಂಜನಿಗೆ ಮಲಗಲು ಜಾಗ ಬೇಕಾಗಿತ್ತು. ಆಗ ಮಂಜ "ಹಾವು... ಹಾವು.... " ಎಂದು ಚೀರಿದ. ಒಂದೇ ನಿಮಿಷದಲ್ಲಿ ಪೂರ್ತಿ ಟ್ರೈನ್ ಖಾಲಿಯಾಗಿತ್ತು. ಮಂಜ ಮತ್ತು ರಾಜು ಸಿಟಿನಲ್ಲಿ ಮಲಗಿ ಬಿಟ್ಟರು. ಮರುದಿನ ಎದ್ದು ನೋಡಿದಾಗ ಇಬ್ಬರು ಅದೇ ಊರಲ್ಲಿ ಇದ್ದರು. ಆನಂತರ ಕೇಳಿದಾಗ ಗೊತ್ತಾಯಿತು ಹಾವು ಇದ್ದಿದ್ದರಿಂದ ಅದೊಂದು ಭೋಗಿ ಬಿಟ್ಟು ಟ್ರೈನ್ ಹೊರಟು ಹೋಗಿದೆ ಎಂದು.

ಅದಕ್ಕೆ ಇವನಿಗೆ ನಾವೆಲ್ಲರೂ ಕರೆಯುವದು ತರ್ಲೆ ಮಂಜ(ಗ) ಅಂತ....ಇವನ ಪಾಠ ಪ್ರವಚನಗಳು ಇನ್ನೂ ತುಂಬಾ ಇವೆ.
(ಇವನ ಕಾಲ ಸೆಂಟರ್ ಪ್ರವಚನನು ಓದಿ).

ಕಾಲ್ ಸೆಂಟರ್ ....

ನಿನ್ನ ಜನ್ಮದಲ್ಲಿ ನೀನು PUC ಪಾಸಾಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು ಕೂಡ ಕೈ ಕೊಟ್ಟಿತ್ತು. ಇಲ್ಲಿಯೇ ಏನಾದರು ನೌಕರಿ ಮಾಡು ಎಂದು ಅವನ ಅಪ್ಪ ತಾಕಿತ ಮಾಡಿದ್ದರು. ಸುಬ್ಬನಿಗೆ ಊರಲ್ಲಿ ಯಾರಿಗೂ ಮುಖ ತೋರಿಸುವ ಮನಸಿರಲಿಲ್ಲ. ತಂದೆಯ ಮಾತನ್ನು ಮೀರುವಂತಿಲ್ಲ.

ಹೀಗಿರುವಾಗ ಬೆಂಗಳೂರಿಂದ ಪಕ್ಕದ ಮನೆ ಪಚ್ಚು(ಪ್ರಶಾಂತ) ಬಂದಿದ್ದ. ತನ್ನ ಗೋಳನ್ನು ಪಚ್ಚು ಮುಂದೆ ಗೊಗರಿದ. ಆಯಿತು ನಾನು ಬೆಂಗಳೂರಿಗೆ ಹೋದ ಮೇಲೆ ನಿನಗೆ ಒಂದು ಕೆಲಸ ಹುಡುಕಿ ನಿನಗೆ ತಿಳಿಸುವೆ ಎಂದು ಹೇಳಿ ಬೆಂಗಳೂರು ಬಸ್ ಹತ್ತಿದ್ದ ಪಚ್ಚು.

ಕೆಲ ದಿನಗಳ ನಂತರ ಪಚ್ಚು ಫೋನ್ ಮಾಡಿ, ನಿನಗೆ ಒಂದು ಒಳ್ಳೆಯ ಕೆಲಸ ಹುಡುಕಿದ್ದೇನೆ. ತಿಂಗಳಿಗೆ 15000 ಸಂಬಳ. "ಕಾಲ್ ಸೆಂಟರ್" ನಲ್ಲಿ ಕೆಲಸ ಎಂದು ಹೇಳಿ. ಬೆಂಗಳೂರಿಗೆ ಬರುವ ವ್ಯವಸ್ಥೆ ಮಾಡಿಕೋ ಎಂದು ಹೇಳಿದ್ದ. ಪಚ್ಚು ಸಂಬಳದ ವಿಷಯ ಕೇಳಿದ ಮೇಲೆ ಬೇರೆ ಏನನ್ನು ಅಷ್ಟು ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಆದರೆ ನನ್ನ ರೂಮಿನಲ್ಲಿ ಮಾತ್ರ ಜಾಗ ಇಲ್ಲ. ಮಂಜು ಮತ್ತು ಗೋಪಾಲ್ ರೂಂ ಗೆ ಹೋಗು ಎಂದು ಹೇಳಿದ್ದ.

ನನಗೆ ಕೆಲಸ ಸಿಕ್ಕಿದೆ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿ ನನಗೆ ಮತ್ತೆ ಮಂಜುಗೆ ಫೋನ್ ಮಾಡಿ ಹೇಳಿ ಬೆಂಗಳೂರು ಬಸ್ ಹತ್ತಿದ್ದ ಸುಬ್ಬ.

ಬೆಂಗಳೂರು ಬಂದೊಡನೆಯೇ ಖುಷಿಯ ಭರದಲ್ಲಿ ಬಸವನಗುಡಿ ಬಸ್ ಹತ್ತುವ ಬದಲು ಬಾನಸ್ವಾಡಿ ಬಸ್ ಹತ್ತಿ, ಬಾನಸ್ವಾಡಿ ಬಸ್ ಸ್ಟಾಪ್ ನಿಂದ ನನಗೆ ಫೋನ್ ಮಾಡಿ ಎಲ್ಲಿ ಬರಬೇಕು? ಎಂದು ಕೇಳಿದ. ಪೂರ್ತಿ ವಿಷಯ ತಿಳಿದ ಮೇಲೆ ಉಗಿದು ಆಟೋ ಮಾಡಿ ಕೊಂಡು ಬಾ ಎಂದು ಹೇಳಿ, ಅಡ್ರೆಸ್ ಆಟೋ ಡ್ರೈವರ್ ಗೆ ಹೇಳಿದ್ದೆ.

ಹಾಗು ಹೀಗು ಮನೆ ತಲುಪಿದ ನಮ್ಮ ಸುಬ್ಬ. ಮತ್ತೆ ಏನೋ ವಿಷಯ ಮನೆಯವರ ಯೋಗಕ್ಷೇಮ ವಿಚಾರಿಸಿ, ಟೀ ಕುಡಿದು ಮುಂದಿನ ಸಮಾಚಾರವೇನು ಸುಬ್ಬ ಎಂದು ಕೇಳಿದೆವು. ಪಚ್ಚು ನೌಕರಿ ಕೊಡಿಸ್ತಾನಂತೆ ಕಣೋ ಎಂದ. ತಿಂಗಳಿಗೆ 15000 ಸಾವಿರ ಸಂಬಳ ಎಂದ. ಮಂಜು ಎಲ್ಲಿಯಪ್ಪ ನೌಕರಿ ಎಂದು ಕೇಳಿದ. ಅದು.. ಅದು ..ಎಂದು ಸ್ವಲ್ಪ ನೆನಪು ಮಾಡಿ ಕೊಂಡು "ಕಾರ್ ಸೆಂಟರ್" ಎಂದ. ಯಾವದೋ ಅದು ಕಾರ್ ಸೆಂಟರ್ ಗ್ಯಾರೆಜ ಏನೋ?. ಗೊತ್ತಿಲ್ಲಪ ನೀನೆ ಪಚ್ಚು ಗೆ ಫೋನ್ ಮಾಡು ಎಂದ.

ಪಚ್ಚುಗೆ ಫೋನ್ ಮಾಡಿದಮೇಲೆ ತಿಳಿಯಿತು ಅದು "ಕಾಲ್ ಸೆಂಟರ್" ಎಂದು. ಇವತ್ತೇ ಇಂಟರ್ವ್ಯೂ ನಾನು ಹೋಗಬೇಕು ಎಂದು ತಡಬಡಿಸಿ ಸ್ನಾನ ಮುಗಿಸಿ ಇಂಟರ್ವ್ಯೂ ಗೆ ಹೋದ.

ಮಂಜು ಯಾವತ್ತು ತಮಾಷೆಯ ಹುಡುಗ. ಅವನು ಎಲ್ಲರೊಂದಿಗೆ ತಮಾಷೆ ಮಾಡುತ್ತ ಇರುವದು ಅವನ ಚಟ. ಸಂಜೆ ಇಂಟರ್ವ್ಯೂ ಮುಗಿಸಿ ಬಂದ ಮೇಲೆ ಸುಬ್ಬನಿಗೆ ಮಂಜು ಏನಪ್ಪಾ ಏನಾಯಿತು ನಿನ್ನ ಗ್ಯಾರೆಜ ಇಂಟರ್ವ್ಯೂ? ಎಂದ. ನನಗೆ ನೌಕರಿ ಸಿಕ್ಕಿದೆ ಕಣ್ರೋ 15000 ನೆ ಸಂಬಳ ಎಂದ. ಅವನ ಖುಷಿಗೆ ಪಾರವೇ ಇರಲಿಲ್ಲ. ಮಂಜು ನಿನಗೆ ಕಾಲ್ ಸೆಂಟರ್ ಬಗ್ಗೆ ಪೂರ್ತಿ ಮಾಹಿತಿ ಕೊಡುತ್ತೇನೆ ಎಂದು ಸುಬ್ಬನಿಗೆ ಹೇಳಿದ. ನನಗೆ ಗೊತ್ತು ಈ ಮಂಜ ಏನೋ ಮಸಲತ್ತು ನಡಿಸಿದ್ದಾನೆ ಎಂದು. ಮಂಜ ಶುರು ಹಚ್ಚಿ ಕೊಂಡ "ಕಾಲ್ ಸೆಂಟರ್" ಎಂದರೆ ಕಾಲಗಳನ್ನೂ X-Ray ಮಾಡುವ ಸೆಂಟರ್ ಎಂದ. ನಾನು ಒಳಗೊಳಗೇ ನಗುತ್ತಿದೆ. ಅಂದರೆ X-Ray Technician ತರಹ ಎಂದ. ಆದರೆ ...ಆದರೆ ... ನನಗೆ ಎಲ್ಲಿ ಬರುತ್ತೆ X-Ray ಮಾಡಲು ನಾನು ಬೇರೆ PUC ಫೇಲ್ ಎಂದ ಸುಬ್ಬ. ಅದಕ್ಕೆ ನಿನ್ನ ದಡ್ಡ(ಗುಬಾಲ್) ಅನ್ನೋದು ಎಂದ ಮಂಜು. ಯಾರು ಕಾಲಿನ ಮತ್ತು ಬೆವರಿನ ಕೆಟ್ಟ ವಾಸನೆ ತಡೆದುಕೊಳ್ಳುತ್ತಾರೋ ಅಂತವರನ್ನೇ ಸೆಲೆಕ್ಟ್ ಮಾಡುತ್ತಾರೆ ಎಂದ. ಹೌದಾ ಅದಕ್ಕೆ ಇರಬೇಕೆ ನನ್ನ ಇಂಟರ್ವ್ಯೂ ಮಾಡುತಿದ್ದವ ತನ್ನ ಶೂ ತೆಗೆದಾಗ ಕೆಟ್ಟ ವಾಸನೆ ಬರುತಿತ್ತು. ಆದರು ತಡೆದು ಕೊಂಡೆ ಎಂದ. ಅದಕ್ಕೆ ಕಣೋ ನಿನ್ನನ್ನು ಸೆಲೆಕ್ಟ್ ಮಾಡಿದ್ದೂ ದಡ್ಡ. ಹುಡಿಗಿಯರ ಕಾಲ ಬಗ್ಗೆ ಹುಶಾರಪ್ಪ ಅವರು ಸ್ಯಾಂಡಲ್ ನಂಬರ್ ಕೆನ್ನೆ ಮೇಲೆ ಮುಡಿದರೆ ಕಷ್ಟ ಎಂಬ ವೇದಾಂತ ಬೇರೆ ಹೇಳಿಕೊಟ್ಟ.

ಮೊದಲನೇ ದಿನದ ಕೆಲಸ ಮುಗಿಸಿಕೊಂಡು ಬಂದಾಗ ಸುಬ್ಬ ತುಂಬಾ ಸಂತೋಷದಿಂದ ಇದ್ದ. ಮತ್ತೆ ನಮ್ಮಿಬ್ಬರಿಗೂ ಎಂಥ ಚೆನ್ನಾಗಿದೆ ಕಣೋ ಆಫೀಸು ಕಾಫಿ,ಟೀ ಎಲ್ಲದಕ್ಕೂ ಮೆಶಿನ್. ಅಮ್ಮನಿಗೆ ಎರಡು ಸರಿ ಕೇಳಿದರೆ ಕಾಫಿ ಕೊಡುವದಿಲ್ಲ. ಆದರೆ ಆಫೀಸಿನಲ್ಲಿ ಎಷ್ಟು ಸರಿ ಬೇಕಾದರು ಕುಡಿಯಬಹುದು ಎಂದ. ಮಂಜ ಸುಮ್ಮನಿರದೆ ಮತ್ತೆ ಊಟಕ್ಕು ಮೆಶಿನ್ ಇದೆನಾ?. ಇಲ್ಲ ಮಾಡಿಸೋದಕ್ಕು ಮೆಶಿನ್ ಇದೆ ಎಂದು ಹೇಳಿ ಸಿಟ್ಟಿನಿಂದ ಸುಬ್ಬ ಮಂಜನನ್ನು ನೋಡಿದ್ದ.

ಎರಡನೇ ದಿನ ಸುಬ್ಬ ಬಂದವನೇ ಎಲ್ಲಿ ಆ "ಕಳ್ಳ ಮಂಜ" ಎಂದು ಕೂಗಲಾರಂಬಿಸಿದ. ಏಕೆ? ಏನಾಯಿತೋ? ಎಂದು ನಾನು ಕೇಳಿದಾಗ ಆ ನನ್ನ ಮಗ ಮಾಡಿದ್ದ ಅವಾಂತರದಿಂದ ನನ್ನ ಮಾನ ಮರ್ಯಾದೆ ಎಲ್ಲ ಹೋಯಿತು ಎಂದು ಗೊಳಡಿದ ಅದು ಹುಡುಗಿಯರ ಮುಂದೆ ಕೂಡ ಎಂದ. ಅಷ್ಟರಲ್ಲೇ bathroom ನಿಂದ ಬಂದ ಮಂಜ ನೀನು ಮೊದಲೇ ಹೇಳಬಾರದೆ ಹುಡುಗಿಯರು ಇದ್ದಾರೆ ಅಂತ ಮತ್ತೆ ಬೇರೆಯಾವುದಾದರು ಐಡಿಯಾ ಕೊಡುತ್ತಿದ್ದೆ ಎಂದ. ಜಗಳ ಮಾಡಬೇಡಿ ಏನು ಆಯಿತು ಹೇಳೋ ಸುಬ್ಬ ಎನ್ದೆ. ಇವತ್ತು ಟ್ರೇನಿಂಗನಲ್ಲಿ ನಮ್ಮ ಪ್ರಾಜೆಕ್ಟ್ ಲೀಡರ್ ಕಾಲ್ ಸೆಂಟರ್ ಅಂದರೆ ಏನು? ಎಂದು ಕೇಳಿದ. ಅದಕ್ಕೆ ಈ ಕಳ್ಳ ಮಂಜ ಕೊಟ್ಟಿದ್ದ ಭಾಷಣ ಬಿಗಿದು ಉಗಿಸಿಕೊಂಡು ಬಂದೆ ಎಂದ. ಮತ್ತೆ ಮಂಜ ಕೈ ಸೆಂಟರ್ ಬಗ್ಗೆ ನು ಹೇಳಬೇಕಿತ್ತು ಅದನ್ನು ಹೇಳಿಲ್ಲ ಅದಕ್ಕೆ ಉಗಿದಿರಬೇಕು ಎಂದ.

ಹಾಗು ಹೀಗು ಇಬ್ಬರಿಗೂ ಒಪ್ಪಂದ ಮಾಡಿಸಿದೆ. ಈ ಮಂಜನನ್ನ ಹೀಗೆ ಮಾಡುವಾಗ ಯಾರಾದರು ತಡೆದರೆ ಅವರಿಗೂ ಏನಾದರು ತಂದು ಇಟ್ಟು ಬಿಡುತ್ತಾನೆ. ಹೀಗೆ ಒಂದು ದಿವಸ ನನ್ನ ಸ್ಕೂಲ್ ಬಾಗ್ನಲ್ಲಿ ಗಣೇಶ್ ಬಿಡಿ ಇಟ್ಟು ನನ್ನ ಮನೆಯಲ್ಲಿ ಬೈಯುವ ಹಾಗೆ ಮಾಡಿದ್ದ.

ಮತ್ತೆ ಒಂದು ದಿವಸ ಸುಬ್ಬ ತುಂಬಾ ಬೇಜಾರಾಗಿ ಮನೆಗೆ ಬಂದಿದ್ದ. ಏನಾಯಿತು ಎಂದು ಕೇಳಿದಾಗ ನಾನು ನೌಕರಿ ಬಿಡುತ್ತೇನೆ ಎಂದು ಹೇಳಿದ. ಏನಾಯಿತು ಪೂರ್ತಿ ವಿವರಿಸು ಎಂದಾಗ. ಈ ನೌಕರಿಯಲ್ಲಿ ಕಿಮ್ಮತ್ತೆ ಇಲ್ಲ ಕಣೋ ಫೋನ್ ಮಾಡಿದ ವ್ಯಕ್ತಿಗಳೆಲ್ಲರು ಹೊರ ದೇಶದವರು ನನ್ನ ಹೆಸರನ್ನು ಹೇಗೆ ಹೇಗೋ ಉಚ್ಚರಿಸುತ್ತಾರೆ. ಒಬ್ಬ ನನ್ನನ್ನ ಡಬ್ಬ, ಇನ್ನೊಬ್ಬ ಮಬ್ಬ, ಇವತ್ತು ಒಬ್ಬ ಫೋನ್ ಮಾಡಿ ನನ್ನ ಗಬ್ಬ ಎಂದು ಬಿಟ್ಟ ಎಂದು ಗೊಳೋ ಅಂತ ಅತ್ತು ಬಿಟ್ಟ. ಮತ್ತೆ ತಿಂದು ..ತಿಂದು.. ಗಬ್ಬ ಆದವರೇ ತರಹನೆ ಆನೆ ಮರಿ ಆಗಿ ಅದಕ್ಕೆ ಅಂದಿರಬೇಕು ಎಂದ ಮಂಜ. ಮಂಜ ಸುಮ್ಮನಿರದೆ ಚಂಬು ಅಂತ ಯಾರು ಅನ್ನಲಿಲ್ಲ ವೇನೋ ಎಂದು ಕೇಳಿದ. ಮತ್ತೆ ಶುರು ಆಯಿತು ಇವರಿಬ್ಬರ ಮಹಾಭಾರತ.

ಎಲ್ಲ ತಣ್ಣಗಾದ ಮೇಲೆ ಇದಕ್ಕೆ ಒಂದು ಪರಿಹಾರ ನಾನು ಕೊಡುತ್ತೇನೆ ಎಂದು ಮಂಜ ಹೇಳಿದ. ನೀನು ನಿನ್ನ ಹೆಸರನ್ನ ಶಾರ್ಟ್ ಆಗಿ ಬೇರೆ ಹೆಸರು ಇಟ್ಟುಕೋ ಎಂದು ಹೇಳಿದ. ಅದಕ್ಕೆ ನೀನೆ ಏನಾದರು ಹೇಳೋ ? ಎಂದ. ಮತ್ತೆ ತಮಾಷೆಗೆ ಪಬ್ ಸುಬ್ಬ ಅದನ್ನೇ ....ಮತ್ತೆ ಸುದಾರಿಸಿ ಸಾರೀ... ಸಾರೀ ...ಅಂತ ಹೇಳಿ ಸ್ಯಾಮ ಅಂತ ಇಟ್ಟುಕೋ ಎಂದು ಹೇಳಿದ. ರಾಮಕೃಷ್ಣನಿಗು ನಾನೆ ಹೆಸರು ಇಟ್ಟಿದ್ದು ರಾಕಿ ಅಂತ ನೋಡು ಎಷ್ಟು ಫೇಮಸ್ ಆಗಿದ್ದಾನೆ ಎಂದ. ಕಡೆಗೆ ಹಾಗು ಹೀಗು 5 ವರ್ಷ ಅದೇ ನೌಕರಿಯಲ್ಲಿ ಹೆಣಗಾಡಿ.

ಈಗ ಸಾಫ್ಟವೇರ್ ಫೀಲ್ಡ್ ಗೆ ಬಂದಿದ್ದಾನೆ. ಈಗಲೂ ಮಂಜನ ಪಾಠ ಪ್ರವಚನಗಳು ಮುಗಿದಿಲ್ಲ ......

ಮನಸೂರೆಗೊಳ್ಳುವ ಮೈಸೂರು....

ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವಾಗಿತ್ತು. ಅಷ್ಟರಲ್ಲೇ ಒಂದು ನೌಕರಿಗೆ ಆಹ್ವಾನ ಬಂದಿತ್ತು. ಆದರೆ ಕೆಲಸ ಮಾತ್ರ ಮೈಸೂರಿನಲ್ಲಿ. "ಪಾಲಿಗೆ ಬಂದದ್ದು ಪಂಚಾಮೃತ" ವೆಂದು ತಿಳಿದು ಮೈಸೂರು ಬಸ್ ಹತ್ತಿದೆ.

ಮೈಸೂರು ಬಂದರು ಇನ್ನು ಮಲಗಿಯೇ ಇದ್ದೆ. ಕಂಡಕ್ಟರ್ ಬಂದು ಎಬ್ಬಿಸಿ ಚಾಮರಾಜನಗರಕ್ಕೆ ಹೋಗಬೇಕೆ? ಎಂದು ಕೇಳಿದರು. ಇಲ್ಲ ಮೈಸೂರು ಎಂದೆ. ಇದೇ ಮೈಸೂರು ಇಳಿದುಕೊಳ್ಳಿ ಎಂದರು. ತಡಬಡಿಸಿ ಕೆಳಗೆ ಇಳಿದೆ.

ನಾನು ಯಾವದೇ ಊರಿಗೆ ಹೋಗುವ ಮೊದಲೇ ಅದರ ಒಂದು ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿರುತ್ತದೆ. ಅದು ಯಾವತ್ತು ನಿಜವಾಗಿಲ್ಲವಾದರೂ. ಆದರೆ ಹೀಗೆ ಇರಬಹುದೆಂದು ಉಹಿಸುವದು ಮಾತ್ರ ಬಿಟ್ಟಿಲ್ಲ. ಇಲ್ಲೂ ಆಗಿದ್ದು ಹಾಗೇನೆ. ನನ್ನ ಮನಸ್ಸಿನಲ್ಲಿದ್ದ ಮೈಸೂರು ಬೇರೆ ಯಾವುದೋ ಊರು ಆಗಿತ್ತು ...

ನನ್ನ Team Leader ಗೆ ಫೋನು ಹಾಯಿಸಿ ಹೇಗೆ ಬರಬೇಕು ಎಂದು ತಿಳಿದು. ನಜರಬಾದ ಕ್ಕೆ ಹೋಗಬೇಕು ಎಂದು ಆಟೋ ಏರಿದೆ. ನಜರಬಾದದ ನಜಾರ ತುಂಬಾನೇ ಚೆನ್ನಾಗಿತ್ತು. ಎದುರಿಗೆ ಕಾಣುವ ಮನೋಹರವಾದ ಚಾಮುಂಡಿ ಬೆಟ್ಟ. ಕಾಲುನಡಿಗೆಯಲ್ಲಿ ತಲುಪುವ ಮೈಸೂರು ಅರಮನೆ, ಕಾರಂಜಿ ಕೆರೆ, ಪ್ರಾಣಿಸಂಗ್ರಹಾಲಯ.....ಹೀಗೆ ಹಲವಾರು.

ನಮ್ಮದು ಹಾಲಿನ ಡೈರಿ ಪ್ರಾಜೆಕ್ಟ್. ಆಗ ತಾನೆ ಬಂದಿದ್ದರಿಂದ ಸ್ವಲ್ಪ ವಿಶ್ರಾಂತಿ ತೊಗೊಂಡು ಆಫೀಸಿಗೆ "ಬಾ" ಎಂದು, ನನ್ನ ಟೀಂ ಲೀಡರ್ ಪಾಂಡುರಂಗ ಆಫೀಸ್ ಹೊರಟರು. ನಾನು ಆಫೀಸ್ ವಿಳಾಸವನ್ನು ಹಿಡಿದು ಒಬ್ಬ ದಾರಿಹೋಕನನ್ನು ಕೇಳಿದೆ. "ಇದು ಎಲ್ಲಿ ಬರತದ" ಎಂದು. ಅವನಿಗೆ ಅರ್ಥವಾಗಲಿಲ್ಲ. ಮತ್ತೆ ಸುದಾರಿಸಿ ಧಾರವಾಡ ಭಾಷೆ ಬಿಟ್ಟು ಮೈಸೂರು ಭಾಷೆಯಲ್ಲಿ "ಇದು ಎಲ್ಲಿದೆ ಸರ್ " ಎಂದು ಕೇಳಿದಾಗ. ಸರಿಯಾದ ದಾರಿಯನ್ನು ತೋರಿಸಿದ್ದ.

ಹಾಲಿನ ಡೈರಿ ಒಳಗೆ ಕಾಲು ಇಡುತಿದ್ದಂತೆ ಒಂದು ಎಮ್ಮೆ ನನ್ನ ಕಡೆಗೆ ಅಟ್ಟಿಸಿಕೊಂಡು ಬಂತು. ಹೆದರಿ ಅದರ ದಾರಿಯಿಂದ ಸರಿದು "ಎ ನಿನಗೆ ನಿನ್ನ ಎಮ್ಮೆ ನೋಡ್ಕೊಲಿಕ್ಕೆ ಬರುದಿಲ್ಲ ಏನು" ಎಂದು ಎಮ್ಮೆಯ ಹಿಂದೆ ಬಂದ ಮನುಷ್ಯನನ್ನು ಉಗಿದು ಆಫೀಸ್ ಒಳಗಡೆ ಹೋದೆ.

ಪಾಂಡುರಂಗ ತುಂಬಾ ಬ್ಯುಸಿಯಾಗಿ ಇದ್ದರು. ಆದರು ನನ್ನನ್ನು ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿಸಲು ಕರೆದೊಯ್ದರು. ಎಲ್ಲಾ ಅಧಿಕಾರಿಗಳನ್ನು ಭೇಟಿಯಾದ ಮೇಲೆ ಮ್ಯಾನೇಜರ್ ಭೇಟಿಯಾಗಬೇಕಿತ್ತು. ತುಂಬಾ ಜನಗಳು ಅವರ ಕ್ಯಾಬಿನ್ ಬಳಿ ನಿಂತಿದ್ದರು. ಆದರು ಸೆಕ್ಯೂರಿಟಿ ಗಾರ್ಡ್ ಪಾಂಡುರಂಗ ಮತ್ತು ನನ್ನನ್ನು ಮೊದಲು ಒಳಗಡೆ ಕಳುಹಿಸಿದ. ಎದುರಿಗೆ ಒಂದು ಆಘಾತ ಕಾದಿತ್ತು. ಅದೇ ಎಮ್ಮೆ ಹಿಂದೆ ಇದ್ದ ಮನುಷ್ಯ ಎದುರುಗಡೆ ಮ್ಯಾನೇಜರ್ ಕುರ್ಚಿಯ ಮೇಲೆ ಕುಳಿತಿದ್ದರು. ನನಗೆ ಒಳಗೊಳಗೇ ಭಯ ಶುರುವಾಗಿತ್ತು. ಎಲ್ಲಿ ನನ್ನನ್ನು ನೋಡಿ ಉಗಿಯುತ್ತಾನೋ ಎಂದು. ಆದರೆ ಮನುಷ್ಯ ತುಂಬಾ ಒಳ್ಳೆಯವ ಆದರದಿಂದ ಮಾತನಾಡಿ ಚಹಾ ಕುಡಿಸಿ "ನಾನು ಎಮ್ಮೆ ಕಾಯುವವನಲ್ಲ Veternary ಡಾಕ್ಟರ" ಎಂದು ಹೇಳಿ ಈ ಗೋವುಗಳ ಪಾಲ (ಯಾನಿ ಗೋಪಾಲ)ನನ್ನು ಕಳುಹಿಸಿದ್ದ. ಹೀಗೆ ಭೇಟಿ ಮಾಡುತ್ತ Production Departmentಗೆ ಹೋದೆವು ಅಲ್ಲಿ ಎಲ್ಲರ ಪರಿಚಯವಾದ ಮೇಲೆ ತಿನ್ನಲು ಪೇಡ, ಮೈಸೂರು ಪಾಕ ತಂದು ಇಟ್ಟರು. ನಾನು ಬರಿ ಪೇಡ ತಿಂದೆ. ಆಗ ಪಾಂಡುರಂಗ ಇದು ಮೈಸೂರು Special ಮೈಸೂರು ಪಾಕ ತಿನ್ನಿ ಗೋಪಾಲ್ ಎಂದರು. ಧಾರವಾಡದಲ್ಲಿ ಸಿಗುವ ಮೈಸೂರು ಪಾಕ ಪಾಕದಂತೆ ಇರದೇ ರಾಕ್ ದಂತೆ ಗಟ್ಟಿ ಇರುತ್ತದೆ ಅದರಿಂದ ಅದನ್ನು ತಿಂದಿರಲಿಲ್ಲ. ಅದನ್ನು ತಿಂದ ಮೇಲೆ ಬಾಯಲ್ಲಿ ನೀರುರಿತ್ತು. ತುಂಬಾ ಚೆನ್ನಾಗಿತ್ತು ಮೈಸೂರು ಪಾಕ.
ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು. ಮುದ್ದೆ ನೋಡಿದ್ದೇ ಅವಾಗ. ಒಂದು ಮುದ್ದೆ ಹಾಕಿಸಿಕೊಂಡೆ. ಅದನ್ನು ಬಾಯಿಯಿಂದ ಜಗಿಯಲಾರoಬಿಸಿದಾಗ ಹಲ್ಲುಗಳಿಗೆ ಮುದ್ದೆ ಅಂಟಿಕೊಂಡಿತ್ತು. ಅದನ್ನು ಜಗಿಯದೆ ಹಾಗೆ ನುಂಗಬೇಕು ಎಂದು ಪಾಂಡುರಂಗ ಹೇಳಿದರು. ಅದರ ಸಹವಾಸ ಸಾಕೆಂದು ಅದನ್ನು ಬಳಿಗಿಟ್ಟು, ಅನ್ನ ಹಾಕಿಸಿಕೊಂಡು ತಿಂದು ಮುಗಿಸಿದ್ದೆ.ಹಾಗು ಹೀಗು ಸಂಜೆವರೆಗೆ ಕಾಲ ಕಳೆದು ಮನೆ ಹಾದಿ ಹಿಡಿದಿದ್ದೆ. ಬರಿ ಅನ್ನ ತಿಂದಿದ್ದರಿಂದ ಹೊಟ್ಟೆ ಚಿರಗುಡುತಿತ್ತು. ಬಿಸಿ ಬಿಸಿ ಯಾಗಿ ಬಜ್ಜಿ ಮಾಡುವದನ್ನು ನೋಡಿ, ಅಲ್ಲಿಗೆ ಹೋಗಿ ಮೈಸೂರು ಬಜ್ಜಿ ಕೊಡಿ ಎಂದೆ.ಏನು? ಎಂದ ಅಂಗಡಿಯವ. ಎಲ್ಲರು ನನ್ನನ್ನು ಮಂಗನಂತೆ ನೋಡಿದರು. ನಂತರ ಕೈ ಮಾಡಿ ತೋರಿಸಿ "ಮೈಸೂರು ಬಜ್ಜಿ" ಕೊಡಿ ಎಂದೆ. "ಓ" ಅದಾ "ಮಂಗಳೂರು ಬಜ್ಜಿ" ಎಂದು ಕೊಟ್ಟ.ಧಾರವಾಡದಲ್ಲಿ ಇದನ್ನ ಮೈಸೂರು ಬಜ್ಜಿ ಅಂತಾನೆ ಅನ್ನೋದು. ಇಲ್ಲಿ ನೋಡಿದರೆ ಇದನ್ನ ಮಂಗಳೂರು ಬಜ್ಜಿ ಅಂತಾರೆ. ಇನ್ನು ಮಂಗಳೂರುನಲ್ಲಿ ಏನೆಂದು ಕರೆಯುತ್ತಾರೋ ಆ ದೇವರೇ ಬಲ್ಲ.

ಮನೆಗೆ ಹೋಗುವದರಷ್ಟರಲ್ಲಿಯೇ ಮನೆಯಲ್ಲಿ ಮುಕುಂದ ಬಂದಿದ್ದ ಅವನು ಮಂಡ್ಯ ಪ್ರಾಜೆಕ್ಟ್ ನೋಡುತಿದ್ದ. ಹಾಗೇ ಪರಸ್ಪರ ಪರಿಚಯ ಮಾಡಿಕೊಂಡೆವು. ರಾತ್ರಿ 9 ಆದರು ಪಾಂಡುರಂಗನ ಸುದ್ದಿ ಇಲ್ಲ. ಹೊಟ್ಟೆ ಹಸಿದಿದ್ದರಿಂದ ಮುಕುಂದನಿಗೆ ನಾನು ಮತ್ತು ಶಿವಾಜಿ ಊಟ ಮಾಡೋಣವೆ ಎಂದು ಕೇಳಿದೆವು. ಸಿಟ್ಟಿನಿಂದ ನಮ್ಮಿಬ್ಬರನ್ನು ದುರುಗುಟ್ಟಿ, ನೀವು ಬೇಕಾದರೆ ಮಾಡಿ ಎಂದ. ನಾನು ಪಾಂಡುರಂಗ ಬರುವವರೆಗೆ ಕಾಯುವೆ ಎಂದು ಓದುತ್ತ ಕುಳಿತ .

ಹೊಟ್ಟೆ ಹಸಿದಿದ್ದರು ನಾವು ಹಾಗೇ ಸುಮ್ಮನೆ ಕುಳಿತೆವು. 10 ಘಂಟೆಗೆ ಪಾಂಡುರಂಗ ಬಂದರು. ಊಟ ಮುಗಿದಮೇಲೆ ಎಲ್ಲರಿಗೂ ನಮ್ಮ ಪ್ರಾಜೆಕ್ಟ್ ಬಗ್ಗೆ ಪ್ರವಚನ ಆಯಿತು. ಮರುದಿನ ರಜೆ ಇದ್ದದ್ದರಿಂದ ಎಲ್ಲರು ಹಾಗೇ ಹರಟಿ ಹಾಸಿಗೆ ಮೇಲೆ ಒರಗಿಕೊಂಡೆವು. ಮರುದಿನ ಪಾಂಡುರಂಗ ಬೆಳಿಗ್ಗೆ ಎದ್ದು ಕಟಿಂಗ ಮಾಡಿಸಲು ಹೋಗಿದ್ದರು. ಇರುವ ನಾಲ್ಕು ಕೂದಲಿಗೆ ೩೦ ರುಪಾಯಿ ದಂಡ ಎಂದು ನಾನು ಮುಕುಂದ ನಕ್ಕಿದ್ದೆವು.

ಊರಿಗೆ ಹೋಗಿದ್ದ ಹೃಷಿಕೇಶ ಅವತ್ತು ಬಂದಿದ್ದ ಎಲ್ಲರು ಮೈಲಾರಿ ಹೋಟೆಲ್ಗೆ ಹೋಗಿ ದೋಸೆ ತಿಂದೆವು. ಅದು ತುಂಬಾ ಫೇಮಸ್ ಹೋಟೆಲ್.

ನನಗೆ ಒಂತರಹ ಹೊಸ ಅನುಭವ ಹೊಸ ಹೊಸ ಗೆಳೆಯರು...ಹೊಸ ಭಾಷೆ ತುಂಬಾ ಎಂಜಾಯ್ ಮಾಡ್ತಾ ಇದ್ದೆ....
ಒಂದು ಸಂಜೆ ಮಂಡ್ಯ ದಿಂದ ಹೃಷಿಕೇಶ ಮತ್ತು ಮುಕುಂದ ಬೇಗನೆ ಬಂದಿದ್ದರು. ಹೃಷಿಕೇಶ ಮಲಗಿದ್ದ ಅವನು ಟೆನ್ಶನ್ ಆಗಿ Low BP ಆಗಿತ್ತು. ಮರುದಿನದಿಂದ ಮುಕುಂದನ ಜೊತೆ ಮಂಡ್ಯಕ್ಕೆ ಹೋಗುವ ಕೆಲಸ ನನಗೆ ಬಿದ್ದಿತ್ತು.ಮಂಡ್ಯಕ್ಕೆ ಹೋದೊಡನೆಯೆ ಮತ್ತೆ ಎಲ್ಲರ ಪರಿಚಯ, ಎಲ್ಲರು ಅರ್ಧ-ಅರ್ಧ ಘಂಟೆ ಮಾತನಾಡಿಸಿ ತಲೆ ತಿಂದಿದ್ದರು. ಮತ್ತೆ ಅಲ್ಲಿಯ MIS ಆಫೀಸರ್ ನಿಮ್ಮ software ನಲ್ಲಿ ತುಂಬಾ debugs ಇವೆ ಎನ್ನಬೇಕೆ ನಕ್ಕು ನಕ್ಕು ಸಾಕಾಗಿತ್ತು. ಮತ್ತೆ ಎಲ್ಲ ಮಾತಿನ ನಂತರ ಲೆಕ್ಕಾಚಾರ ಎನ್ನುವ ಪದ ಬೇರೆ. ಇನ್ನು Marketing ನಲ್ಲಿ ಇರುವ ಮ್ಯಾನೇಜರ್ ಎಲ್ಲದ್ದಕ್ಕೂ ಅಲ್ವೇನ್ರಿ ಎನ್ನುವ ಪದ....ತಲೆ ಕೆಟ್ಟು ಹೋಗಿತ್ತು ಆಗಲೇ ಗೊತ್ತಾಗಿದ್ದು ಹೃಷಿಕೇಶ ನಿಗೆ Low BP ಏಕೆ ಬಂದಿತ್ತೆಂದು. ನನಗೆ ಮಾತ್ರ BP ಪೂರ್ತಿ ಏರಿ High BP ಬಂದಿತ್ತು.
ಹೃಷಿಕೇಶನನ್ನು ಬಳ್ಳಾರಿ ಪ್ರಾಜೆಕ್ಟ್ಗೆ ಕಳುಹಿಸಲಾಯಿತು. ಹಾಗು ಹೀಗು ಹೆಣಗಾಡಿ ಒಂದೆರಡು ಡಿಪಾರ್ಟ್ಮೆಂಟ್ computerise ಮಾಡಿದೆವು. ಆರು ತಿಂಗಳುಗಳು ಹೇಗೆ ಕಳೆದವು ಎನ್ನುವದೇ ನನಗೆ ಯಕ್ಷ ಪ್ರಶ್ನೆ ಅಗತ್ತು. ತುಂಬಾ ಒಳ್ಳೆಯ ಗೆಳೆಯರು.

ಅಷ್ಟೊತ್ತಿಗಾಗಲೇ ಹೃಷಿಕೇಶ ಬಳ್ಳಾರಿ ಬಿಟ್ಟು ಬೆಂಗಳೂರು ಸೇರಿದ. ಬಳ್ಳಾರಿ ಪ್ರಾಜೆಕ್ಟ್ ಗೆ ನಾನು ಹೋಗ ಬೇಕೆಂದು ಪಾಂಡುರಂಗ ಆಜ್ಞೆ ಮಾಡಿದರು. ಅದು ನನಗೆ ನುಂಗಲಾರದ ತುತ್ತಾಗಿತ್ತು. ಒಲ್ಲದ ಮನಸ್ಸಿನಿಂದ ಹೋಗುವೆ ಎಂದು ಹೇಳಿದೆ.

ಬಳ್ಳಾರಿ - ಮೈಸೂರು ಬಸ್ಸಿನಲ್ಲಿ ಕುಳಿತರು ಮೈಸೂರು ನೆನಪು ಮಾತ್ರ ಕಾಡುತಿತ್ತು.. ಮತ್ತೆ ಒಬ್ಬನೇ ಇರುವದು ಹೇಗೆ? ಎನ್ನುವ ಯೋಚನೆ ಬೇರೆ. ಆಗಲೇ ರಾತ್ರಿ 2 ಆಗಿತ್ತು. ನಿದ್ದೆ ಕಣ್ಣಲ್ಲಿದ್ದರು ನಿದ್ದೆ ಮಾಡಿ ನನ್ನ ಸವಿ ನೆನಪುಗಳ ಬೈ ಹೇಳುವ ಮನಸಿರಲಿಲ್ಲ. ಹಾಗೇ ಮೆಲಕು ಹಾಕುತ್ತಿದ್ದಾಗ .. ಆಗಲೇ "ಫಟ" ಎಂಬ ಶಬ್ದ. ಎದುರಿಗೆ ಕುಳಿತ ಒಬ್ಬನಿಗೆ ಮುಂದೆ ಇರುವ ಆಂಟಿ ಕಪಾಳಕ್ಕೆ ಬಾರಿಸಿದ್ದಳು. ಅದು ಏನು ಮಾಡಿದ್ದನೋ ಆ ಮಹಾಶಯ ಬಸಿನ್ನಲ್ಲಿ ಗದ್ದಲದ ವಾತಾವರಣ ಸೃಷ್ಟಿ ಯಾಗಿತ್ತು. ಹೀಗು ಹಾಗು ಬಳ್ಳಾರಿ ತಲುಪಿದೆ ನಿದ್ದೆ ಮಾಡಲಾರದೆ ....

ಮೈಸೂರು ಮಾತ್ರ ನನಗೆ ಮನಸೂರೆಗೊಳ್ಳುವ ಮೆರೆಯಲಾರದ ಮರೀಚಿಕೆಯ ಹಾಗೆ ಸ್ವಲ್ಪು ದಿವಸ ಕಾಡಿತ್ತು...

ಭಾವ ಬಂಧನದ ಬೆಸುಗೆ ........

"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದುಕು ಜಟಕಾ ಬಂಡಿ" ಮತ್ತು "ಇದು ಕಥೆಯಲ್ಲ ಜೀವನ" ದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಈ ಸಂಶಯ ನನ್ನ ಮನಸಿನಲ್ಲಿ ಮನೆ ಮಾಡಿದೆ. ಗಂಡಸು ತನ್ನ ಇಚ್ಛೆಯಂತೆ 2-3 ಮದುವೆಯಾಗಿರುವದು ನೋಡಿ ತುಂಬಾ ಅಸಹ್ಯವೆನಿಸುತ್ತದೆ ಮತ್ತು ಅವನು ಕೊಡುವ ಕಿರುಕಳ ನೋಡಿ ಇವನ್ಯಾರೋ ಉತ್ತರ ಕುಮಾರನೇ ಇರಬೇಕು. ಗಂಡಸೊಂದಿಗೆ ಜಗಳವಾಡಲು ಬರಲಾರದೆಂಬ ವಿಷಯ ಅರಿತು ಹೆಂಡತಿಯೊಂದಿಗೆ ಯುಧ್ಧ ಸಾರುವ ಹುನ್ನಾರ. ಒಂದು ಮದುವೆ ಮೊದಲೇ ಆಗಿದ್ದರು ಎರಡು ಹೆಂಡತಿ ನನಗೆ ಬೇಕು ಎನ್ನುವ ಇಂತಹ ಗಂಡಸಿನ ಕ್ಷುಲ್ಲಕ ಬುದ್ಧಿಗೆ ಏನು ಹೇಳುವದು. ಈ ಜೀವನದಲ್ಲಿ ಸಿಗುವ ಎಲ್ಲ ಭೋಗಗಳು ಇವನ ಸೊತ್ತೋ ಗೊತ್ತಿಲ್ಲ?. ನಮ್ಮ ಜೀವನದ ನಿಜವಾದ ಸಾರ್ಥಕತೆ ಏನು? ನಾವು ಹುಟ್ಟಿರುವದು ಏತಕೆ? ಎಂಬುದನ್ನು ಯಾರು ವಿಚಾರ ಮಾಡಲು ಹೋಗುವದಿಲ್ಲ. ನನ್ನ ಅಹಂ ಮತ್ತು ನನ್ನ ಸುಖ ಎರಡೇ ಜೀವನದಲ್ಲಿ ಎಂಬ ಕತ್ತಲೆಯಲ್ಲಿ ಬದುಕುವ ಜನ ತುಂಬಾ ಇದ್ದಾರೆ.
ಹೋಗಲಿ ಬಿಡಿ ಇದೆಲ್ಲ ನಮಗ್ಯಾಕೆ ನಮ್ಮದೇನಿದ್ದರೂ ಬ್ಲಾಗ್ ಬಳಗವೆಂಬ ಪುಟ್ಟ ಪ್ರಂಪಚದಲ್ಲಿ ನಮ್ಮ ಸುಖ,ದುಖ ಎಲ್ಲವನ್ನು ನಾವು ಹಂಚಿಕೊಂಡು ಆನಂದದಿಂದ ಇರುವದು. ಅದೇ ನಮ್ಮ ಸೌಭಾಗ್ಯ.


ಭಾವ, ಬಂಧನ, ಬೆಸುಗೆ ಅಂತೆಲ್ಲ ಬರೆದು ತುಂಬಾ ತಲೆ ಕೊರಿತ ಇದ್ದಾನಲ್ಲಪ್ಪ ಅಂದ್ಕೋಬೇಡಿ. ನಿಜವಾಗಿಯೂ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ.ನನ್ನ ಗೆಳೆಯ Engineering 4 Semester ಇದ್ದಾಗಲೇ ಮನೆ ಎದುರಿಗೆ ಇರುವ ಹುಡುಗಿಯನ್ನು ಪ್ರೀತಿಸಿ ಹೆತ್ತವರನ್ನು ಕಡೆಗಣಿಸಿ ಮದುವೆಯಾಗಿದ್ದ. ಅವನ ಜೊತೆ ಅವನ ಹೆಂಡತಿಯನ್ನು ಸಾಕುವ ಕಷ್ಟ ಅವರ ಅಮ್ಮನಿಗೆ ಬಿದ್ದಿತ್ತು.


ಈ ಪ್ರಿತಿಯೇ೦ದರೆನೆ ಹೀಗೆ ಕಣ್ರೀ ಯಾರು? ಯಾರನ್ನ? ಯಾವಾಗ? ಪ್ರೀತಿಸುತ್ತಾರೆ ಅಂತ ಹೇಳೋಕಾಗೋದಿಲ್ಲ.ನಾನು ಪ್ರೀತಿಸಿದ್ದೆ ಆದರೆ ಅ೦ಜಪುಕಲ ಹೇಳಲಾಗದೆ, ಮನಸಿನಲ್ಲಿಯೇ ಅವಳನ್ನು ಆರಾಧಿಸಿದ್ದೆ. ಹೋಗಲಿ ಅದೆಲ್ಲ ಹಳೆಯ ಅಳಿದು ಉಳಿದ ಮಾತು. ಈಗೇನಿದ್ದರೂ ನನ್ನ ಹೆಂಡತಿನೇ ನನಗೆ ಸರ್ವಸ್ವ.


ಹೀಗೆ ನನ್ನ ಒಬ್ಬ ಗೆಳೆಯ ಶ್ರೀಧರ ಸವಿತಾಳಿಗೆ ಗಾಳ ಹಾಕಿದ್ದ. ಅವಳೋ ಮುಂಬಯಿಯಲ್ಲಿ ಬೆಳೆದವಳು ಇವನೋ ಧಾರವಾಡ - ಹುಬಳ್ಳಿ ಬಿಟ್ಟು ಬೇರೇನೂ ನೋಡದ ಹುಡುಗ. ಅದೇನೋ ಪ್ರತಾಪ ಮಾಡಿ ತೋರಿಸಿದ್ದನೋ ಗೊತ್ತಿಲ್ಲ. ಕನ್ನಡ ಬರದ ಸವಿತಾಳಿಗೆ ಕನಕಾಂಬರಿ ತೊಡಿಸಲು ಸಿದ್ದವಾಗಿದ್ದ. ಜೋಡಿನು ಪಸಂದಾಗೆ ಇತ್ತು. ಲೋರ್ರೆಲ್ ಹಾರ್ಡಿ ತರಹ(ಬಡಕಲು ಶ್ರೀಧರ, ಡುಮ್ಮಿ ಸವಿತಾ).


ಆಗ ತಾನೆ ನಮ್ಮ ಮದುವೆಯಾಗಿತ್ತು . ನನ್ನ ಹೆಂಡತಿಯನ್ನ ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೆಂದು ಅಕ್ಕ ಪಕ್ಕದವರು ಪೀಡಿಸುತ್ತಿದ್ದರು. ಅವಳಿಗೂ ಒಡುಪುಗಳ ಸಂಭ್ರಮ. ತನ್ನ ಎಲ್ಲ ಗೆಳತಿಯರು ಮತ್ತು ಸಂಭoದಿಕರಿಂದ ಕೇಳಿ ಒಡುಪುಗಳನ್ನು ಮನನ ಮಾಡಿ ಸುಂದರವಾಗಿ ಹೇಳುತ್ತಿದ್ದಳು.


* ಸರಸ್ವತಿಯ ವಾಹನ ನವಿಲು. _______ರಾಯರ ಹೆಸರು ಹೇಳುವೆನು ಇದೆ ಮೊದಲು.

* ಸಕಲ ಮಂಗಳ ಕಾರ್ಯಕ್ಕೂ ಗಜಾನನೇ ಪೂಜ್ಯ, ಭಕ್ತರು ಯುಕ್ತಿಯಿಂದ ಪೂಜೆ ಮಾಡಲು ಒಲಿದು ಕೊಡುವನು ಇಷ್ಟ ಸ್ವರಾಜ್ಯ.________ ರಾಯರ ಪಾದ ಸೇವೆಯ ಸೌಭಾಗ್ಯವೆ ನನಗೆ ಪರಮ ಪೂಜ್ಯ.

* ವಸಂತ ಮಾಸದಲ್ಲಿಚಿಗಿಯುವುದು ಮಾವಿನ ಮುಗುಳು. .________ ರಾಯರ ಹೆಸರು ಹೇಳುವೆನು ________ರವರ ಮಗಳು.

* ಈಶ್ವರನಿಗೆ ಏರಿಸುವದು ಮೂರುದಳದ ಪತ್ರಿ .________ ರಾಯರ ಹೆಸರು ಹೇಳುವೆನು .________ ಅವರ ಪುತ್ರಿ.

* ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದು ಯುಕ್ತಿಯಿಂದ .________ ರಾಯರ ಹೆಸರು ಹೇಳುವೆನು ಭಕ್ತಿಯಿಂದ.

* ರುಕ್ಮಿಣಿಯು ಶ್ರೀಕೃಷ್ಣನಿಗೆ ಓಲೆ ಬರೆಯುವಾಗ ಮುತ್ತು ಸುತ್ತು ಮಾಡಿದಳು ಮಸಿ. _________ರಾಯರ ಹೆಸರು ಹೇಳುವೆನು _______ಅವರ ಸೊಸಿ.

* ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯ. _________ರಾಯರು ಪತಿಯಾಗಿ ದೊರೆತದ್ದು ನನ್ನ ಪೂರ್ವ ಜನ್ಮದ ಪುಣ್ಯ.

* ಸಖಿ ಸಖಿಯರಲ್ಲಿ ಸಖಿಯಾದ _________ ಮಗಳಾದೆ _______ರಾಯರ ಕೈ ಹಿಡಿದು _______ಅವರ ಸೊಸೆಯಾದೇ.

* ಕೈಯಲ್ಲಿ ಕೈಕೊಟ್ಟು ಸಪ್ತಪದಿಯಲ್ಲಿ ನಿಂತೆ, ಹಿಂದೆ ಸಾಗುವೆ ನಿಮ್ಮ ನೆರಳಿನಂತೆ. _________ರಾಯರೆ ನನ್ನನ್ನು ಕೈ ಹಿಡಿದು ನಡಿಸಿರಿ ನಾಲ್ಕು ಜನ ನಮ್ಮನ್ನು ಹೊಗಳುವಂತೆ.

* ರಾಮ ಲಕ್ಷ್ಮಣರು ಶೃಂಗವೇರಪುರಕ್ಕೆ ಬಂದ ಮೇಲೆ ಆಯಿತು ಗುಹನ ಸ್ನೇಹ, ನನಗೆ ಸದಾ ಇರಲಿ _________ರಾಯರ ಸ್ನೇಹ.

* ಶ್ರೀಕೃಷ್ಣನು ಗೋವರ್ಧನ ಗಿರಿಯಲ್ಲಿ ಗೋಪಿಯರೊಡಗೂಡಿ ಸೂರೆ ಮಾಡಿದನು ಹಾಲು ಮೊಸರು, ಇವತ್ತು ಪ್ರೀತಿಯಿಂದ ಹೇಳುವೆನು ನಾನು _________ ರಾಯರ ಹೆಸರು.

* ಲಗ್ನಕ್ಕೆ ಮೊದಲು ಮಾಡುವರು ಯಾದಿ, _________ರಾಯರ ಹೆಸರು ಹೇಳುವೆನು ಬಿಡಿರಿ ಹಾದಿ.

* ತವರಿಂದ ದೂರಾದೆ ಹೊಸಮರಕೆ ಬೇರಾದೆ _________ರಾಯರ ಕೈ ಹಿಡಿದು ಧನ್ಯಳಾದೆ.

* ಒಂದೊಂದು ಉ೦ಗುರಕ್ಕೂ ಒಂದೊಂದು ಹರಳು ಅದರಿಂದ ಶೋಭಿಸುವದು ಕೈ ಬೆರಳು _______ರಾಯರೇ ನನ್ನ ಮಾoಗಲ್ಯದ ಹರಳು.

* ಸಿರಿತನವಿರಲಿ ಬಡತನವಿರಲಿ _________ರಾಯರ ಪಾದಸೇವೆ ಕೊನೆತನಕವಿರಲಿ.

* ನೋಡಲ್ಲಿ ವಿಶ್ವದಾ ಮರದಡೆಯಲ್ಲಿ ತೂಗುತಿದೆ ಉಯ್ಯಾಲೆ ಅದರಲ್ಲಿ ನಡೆಯುತಿದೆ ಮಾನವನ ಜೀವನದ ಜೋಕಾಲೆ ______ ರಾಯರ ಕೈ ಹಿಡಿದು ನಾನಾದೆ ಸುಮಂಗಲೆ

* ಹತ್ತಾವತಾರದಲಿ ಮೊದಲನೇ ಅವತಾರವೇ ಮತ್ಸ್ಯ. ______ರಾಯರ ಹೆಸರು ಹೇಳುವೆನು ಕನ್ನಡದಲ್ಲಿ ಸ್ವಚ್ಚ.

* ನದಿಗಳು ಎಷ್ಟೇ ಹರಿದರು ಕೊನೆಗೆ ಸೇರುವದು ಸಮುದ್ರವನ್ನ. ನನ್ನ ಮನವು ಸೇರುವದು _____ ರಾಯರ ಹೃದಯವನ್ನ.

* ಕಲ್ಲಾಗಿ ಬಿದ್ದಿದ್ದ ಅಹಲ್ಯಯನ್ನ ಉಧಾರ ಮಾಡಿದ ಶ್ರೀರಾಮ ತನ್ನ ಪಾದ ಸ್ಪರ್ಶದಿಂದ _______ರಾಯರ ಹೆಸರು ಹೇಳುವೆನು ಪ್ರೇಮ ಭಾವದಿಂದ.

* ಶ್ರೀ ಕೃಷ್ಣನು ಶೇಷಶಯನದ ಮೇಲೆ ಮಲಗಿರುವಾಗ ಬ್ರುಗು ಮುನಿಯು ತಾಡಣನ ಮಾಡಿದ್ದೂ ವೃಕ್ಷ ಸ್ಥಳ ________ ರಾಯರ ಚರಣ ಸೇವೆಯೇ ನನ್ನ ಮೋಕ್ಷ ಸ್ಥಳ.

* ಸಿರಿವಂತರ ಸೊಬಗು ಧನದಿಂದ ________ರಾಯರನ್ನು ಪೂಜಿಸುವೆನು ತನು ಮನದಿಂದ.

* ಸೂರ್ಯ ನಾರಾಯಣನಿಂದಲೇ ಲೋಕಕ್ಕೆ ಆರೋಗ್ಯ ______ ರಾಯರಿಂದಲೇ ಸಕಲ ಸೌಭಾಗ್ಯ.

* ಬ್ರಾಹ್ಮಣರಿಗೆ ಪವಿತ್ರ ಜನಿವಾರ ________ ರಾಯರೇ ನನ್ನ ಜೀವನದ ಆಧಾರ.

* ಆಕಾಶಕ್ಕೆ ಶೋಭಿಸುವದು ನಕ್ಷತ್ರವಲ್ಲಿ ಅಂಗಳಕ್ಕೆ ಶೋಭಿಸುವದು ರಂಗವಲ್ಲಿ ______ ರಾಯರ ಹೆಸರು ಹೇಳುವೆನು ಗುರು-ಹಿರಿಯರ ಸಮ್ಮುಖದಲ್ಲಿ.

* ಗಾಂಧೀಜಿಯವರು ಸತ್ಯಾಗ್ರಹ ಮಾಡಿದ್ದೂ ಲೋಕಕಲ್ಯಾಣಕ್ಕಾಗಿ _______ರಾಯರ ಹೆಸರು ಹೇಳುವೆನು ಕೇಳಿದ ಕಾರಣಕ್ಕಾಗಿ.

* ಕಣ್ಣಿಗೆ ಕಾಡಿಗೆ ಆಸೆ, ಹೆಣ್ಣಿಗೆ ಗಂಡಿನ ಆಸೆ ______ರಾಯರ ಹೆಸರು ಗೊತ್ತಿದ್ದರೂ ನಿಮಗೆಲ್ಲರಿಗೂ ಕೇಳುವ ಆಸೆ.
ಒಂದೊಂದು ಒಡಪುಗಳು ಮತ್ತೊಂದನ್ನು ಮೀರಿಸುವಂತವು. ಇನ್ನು ಊಟಮಾಡುವಾಗ, ನಮಸ್ಕರಿಸುವಾಗ ಬೇರೆ ಬೇರೆ ಒಡಪುಗಳು.
* ಉಡುಪಿಯಲ್ಲಿ ಇರುವದು ಕನಕನ ಕಿಂಡಿ _________ರಾಯರಿಗೆ ತಿನಿಸುವೇನು ಉಂಡಿ.
ಉಂಡಿ ಒಂದೇ ಇದ್ದರೆ ಪರವಾಗಿಲ್ಲ, ಎರಡೆರಡು ಉಂಡಿ ಇದ್ದರೆ ಬೇರೆ ಬೇರೆ ಒಡಪು ಹಾಕಿಯೇ ಹೇಳಬೇಕು. ಮತ್ತೆ ಕೇಳಿಯೇ ಬಿಟ್ಟರು
* ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ __________ರಾಯರಿಗೆ ತಿನಿಸುವೇನು ಉಂಡಿ.
ಹೀಗೆ ನಮಸ್ಕರಿಸುವಾಗ .....ಒಲವೆ ಜೀವನ ಸಾಕ್ಷಾತ್ಕಾರ ________ರಾಯರಿಗೆ ಮಾಡುವೆನು ನಮಸ್ಕಾರ.


ಇದು ಸವಿತಾನಿಗು ಬಿಡದ ಕರ್ಮ. ಅವಳು ಮದುವೆಯಾದ ಮೇಲೆ ಒಡಪು ಹೇಳಲೇಬೇಕು. ಅದಕ್ಕೆ ನನ್ನ ಹೆಂಡತಿಗೆ ಗಂಟು ಬಿದ್ದಳು ಹೇಳಿ ಕೊಡು ಎಂದು. ಅವುಗಳನ್ನು ಹಿಂದಿಯಲ್ಲಿ ಬರೆದು ಕೊಡುವ ಕೆಲಸ ನನ್ನದಾಗಿತ್ತು. ನನ್ನ ಹೆಂಡತಿ ಎಲ್ಲಿ _____ ಇದೆ ಅಲ್ಲಿ ಗಂಡ ಹೆಸರು ಹೇಳಬೇಕು ಎಂದು ತಾಕಿತ ಮಾಡಿದ್ದಳು. ಮತ್ತೆ ಎರಡು _____ ಇದ್ದರೆ ಅಪ್ಪನ ಹೆಸರೋ, ಅತ್ತೆ ಯವರ ಹೆಸರು ಇರುತ್ತದೆ ಎಂದು ಹೇಳಿದ್ದಳು. ಹಾಗು ಹೀಗು ಮನನ ಮಾಡಿದ್ದಳು ಸವಿತಾ.

ಮದುವೆಯಾದ ಮೇಲೆ ಒಂದೊಂದಾಗಿ ಒಡಪು ಹೇಳಲು ಶುರುಮಾಡಿದಳು. ಎಲ್ಲ ಹೆಂಗಸರು "ವಾಹ್ ವಾಹ್" ಎಂದು ಬೆನ್ನುತಟ್ಟಿದರು. ಈ ಹಿಂದಿ ಹುಡುಗಿ ಎಷ್ಟು ಚೆನ್ನಾಗಿ ಒಡಪು ಹೇಳುತ್ತಾಳೆ ಅಂತ. ಸವಿತಾಳಿಗೆ ಆನಂದದ ಪರಿವೆ ಇಲ್ಲದ ಹಾಗೆ ಆಕಾಶಕ್ಕೆ ಏಣಿ ಹಾಕ್ಕಿದ್ದಳು. ಆಮೇಲೆ ಖುಷಿಯಿಂದ ಶ್ರೀಧರರಾಯರ ಎನ್ನುವ ಬದಲು ಗೋಪಾಲರಾಯರ ಎಂದು ಬಿಡಬೇಕೇ. ನನ್ನ ಗೆಳೆಯ ಶ್ರೀಧರ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಕೊಲ್ಲುವ ಹಾಗೆ ದುರುಗುಟ್ಟಿದ್ದ. ಸಾರೀ.... ಸಾರೀ..... ಎಂದು ಮತ್ತೆ ತಿದ್ದಿ ಶುರು ಹಚ್ಚಿ ಕೊಂಡಳು.


ಇನ್ನೇನು ಆಗಲಿಕ್ಕಿಲ್ಲ ಎಂದುಕೊಂಡ ನಾನು ಮತ್ತು ನನ್ನ ಹೆಂಡತಿ ಅಂದುಕೊಂಡಾಗಲೇ ಶ್ರೀಧರರಾಯರ ಮಗಳು ಎಂದು ಬಿಟ್ಟಿದ್ದಳು. ನಾವು ಕಲಿಸಿದ ಗಿಳಿಪಾಠ ಕೈ ಕೊಟ್ಟಿತ್ತು. ಇನ್ನು ಮುಗಿದಿರಲಿಲ್ಲ ನನ್ನ ಗೆಳೆಯನ ಮಡದಿಯ ಪ್ರತಾಪ. ಊಟಕ್ಕೆ ಕುಳಿತಾಗ "ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ ಶ್ರೀಧರರಾಯರಿಗೆ ತಿನಿಸುವೇನು ಹಿಂಡಿ". ಹಿಂಡಿ ತಿನ್ನಿಸಿದಳೋ ಅಥವಾ ಉಂಡಿ ತಿನ್ನಿಸಿದಳೋ ಗೊತ್ತಿಲ್ಲ. ಕಿವಿ ಹಿಂಡಿ ನನ್ನ ಗೆಳೆಯನನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡು. ಒಡಪು ಹೇಳಿ ಓಡಿಸಿಕೊಂಡು ಹೋಗಿದ್ದಾಳೆ. ಏನೇ ಇರಲಿ ಮದುವೆ ಮಾತ್ರ ಜನುಮ ಜನುಮದ ಅನುಭಂದ ಅನ್ನುವದು ಮಾತ್ರ ನಿಜ.
ನನಗೆ ರವಿಚಂದ್ರನ/ಹಂಸಲೇಖ ಜೋಡಿ ಚಿತ್ರದ ಈ ಹಾಡು ನೆನಪಿಸುತ್ತದೆ.


"ಯಾರ ಯಾರ ಚೆಲುವೆ ಎಲ್ಲಿಹಳೋ

ಯಾರ ಯಾರ ಒಲವು ಎಲ್ಲಿಹದೋ

ಒಂದೊಂದು ಕಾಳಿನ ಅನ್ನದಲು ತಿನ್ನೋರ ಹೆಸರು ಕೆತ್ತಿಹದೋ "


ತನ್ನ ಒಡಪುಗಳಿಂದ ನನ್ನ ಮನ ಸೆರೆ ಹಿಡಿದ ನನ್ನ ಮಡದಿ ನನ್ನ ಪ್ರೀತಿಯ ಮನೆ ಒಡತಿ.

ಯಾವ ಹೂವು... ಯಾರ ಮುಡಿಗೋ..? ಯಾರ ಒಲವು.. ಯಾರ ಕಡೆಗೋ? ಎಂಬುದಂತೂ ನಿಜ.............

ಅಡ್ಡ ಹೆಸರು ಪ್ಲೀಸ್ ...............

ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನೆಗಳನ್ನು ನೋಡಿ ಹಾಗೆ ಅoದಿರಬಹುದು. ಮನಸ್ಸು ಆಗಲೇ ಧಾರವಾಡಕ್ಕೆ ಹೋಗಿತ್ತು. ಧಾರವಾಡದಲ್ಲಿ ಅಡ್ಡ ಹೆಸರುಗಳು ಅಂದರೆ Surnameಗಳು ತುಂಬ ವಿಚಿತ್ರವಾಗಿ ಇರುತ್ತವೆ. ಹಂಚಿನಮನಿ,ಮೇಲಿನಮನಿ, ಕಡೆಮನಿ, ಹಿತ್ತಲಮನಿ ಹೀಗೆ etc etc ...


ಒಮ್ಮೆ ಸುಂದರರಾವ್ ಎನ್ನುವ ಪೋಸ್ಟ್ ಮ್ಯಾನ್ ಬೆಂಗಳೂರಿನಿಂದ ಧಾರವಾಡಕ್ಕೆ Transfer ಆಗಿ ಬಂದಿದ್ದರು. ಅವರಿಗೆ ಮೊದಲು ಅಂಗಡಿ ಶರಣಪ್ಪ ಎನ್ನುವವರಿಗೆ ಪತ್ರ ಕೊಡಬೇಕಿತ್ತು. ಅದನ್ನು ತೆಗೆದು ಕೊಂಡು ಹೋಗಿ ಒಬ್ಬ ದಾರಿಹೋಕನನ್ನು ಕೇಳಿದರು. ಅವನು ಸಿಡುಕ ಮೂತಿ ಸಿಂಗಾರಪ್ಪನೆ ಇದ್ದಿರಬೇಕು. ಹೆಂಡತಿಯಿಂದ ಬೈಸಿಕೊಂಡಿದ್ದನೋ ಗೊತ್ತಿಲ್ಲ. ಸುಂದರರಾಯರು ಕೇಳಿದರು ಸರ್ ಅಂಗಡಿ ಎಲ್ಲಿ ಎಂದು. ಆಗ ಆ ಮನುಷ್ಯ "ಇಲ್ಲಿ ಎಲ್ಲಿತ್ತ ಅಂಗಡಿ ಮುಂದ ಹೋಗ" ಇಲ್ಲಿ ಇದ್ದದ್ದು ಈ ಹಾಳ ಮನಿ ಮಾತ್ರ ಎಂದು ತನ್ನ ಮನೆಯನ್ನು ತೋರಿಸಿದನು. ಅನಂತರ ರಾಯರು ಪೂರ್ತಿ ಹೆಸರನ್ನೇ ಹೇಳಿ ಮನೆಯ ವಿಳಾಸವನ್ನು ಪಡೆದು ಪತ್ರ ತಲುಪಿಸಿದ್ದರು.


ಹೀಗೆ ಸುಂದರ ರಾವ್ ಅವರ ಮಡದಿ ದಿನಸಿ ಅಂಗಡಿಗೆ ಹೋಗಿ ಒಂದು ದಿವಸ ಅಕ್ಕಿ ಇಲ್ವಾ ಎಂದು ಕೇಳಿದಳು. ಆಗ ಅಂಗಡಿಯವ "ಈಗ ಹೋದನಲ್ಲ" ಎನ್ನಬೇಕೆ. ಆ ಅಂಗಡಿಯವನಿಗೆ ಅಕ್ಕಿ ಎಂಬ ಗೆಳೆಯನಿದ್ದ ಅವನು ಆಗಲೇ ಅವನ ಜೊತೆ ಮಾತನಾಡಿ ಮನೆಯ ಕಡೆಗೆ ಹೊರಟಿದ್ದ. ಆಗ ತಿನ್ನುವ ಅಕ್ಕಿ ಬೇಕು ಎಂದು ಕೇಳಿ ಕೊಂಡು ಬಂದಳು.


ಹೀಗೆ ಒಂದು ದಿವಸ ಕಡ್ಲೆ ಕಾಯಿ ಅಂದಾಗ ಅಂಗಡಿಯವ ಕಡ್ಲೆ ಕೊಟ್ಟಿದ್ದ. ಮತ್ತೆ ಎಲ್ಲಿ ವಾಪಾಸ್ ಕೇಳುವದು ಅಂತ ಸುಮ್ಮನಾಗಿದ್ದರು. ಹೀಗೆ ಸುಂದರ್ ರಾಯರು ಮತ್ತು ಅವನ ಹೆಂಡತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. (ಕೊತಂಬರಿ ಬೀಜ, ಕಡ್ಲೆ ಪುರಿ etc etc....).


ಮತ್ತೊಂದು ದಿವಸ ತುಂಬ ರುಚಿಯಾಗಿದೆ ಎಂದು ಮಿರ್ಚಿ ಮತ್ತು ಗಿರಮಿಟ್ಟ ತುಂಬ ತಿಂದಿದ್ದರು. ಆನಂತರ ನೋಡಬೇಕು ಅವರ ಅವಸ್ಥೆ.


ಇನ್ನು ಒಂದು ದಿವಸ ಸುಂದರರಾಯರು ನನಗೆ ಪತ್ರದ ವಿಳಾಸವನ್ನು ಕೇಳಿದರು. ಪತ್ರದ ವಿಳಾಸ ನೋಡಿ ತುಂಬಾ ನಕ್ಕಿದ್ದೆ. ಪತ್ರದ ಮೇಲೆ ನಾರಾಯಣ ಶ್ವಾನಭೋಗ ಎಂದು ಬರೆದಿರಬೇಕೆ. ಪಕ್ಕಾ ಬ್ರಾಹ್ಮಣ ನಮ್ಮ ಕಾಕಾ ನಾರಾಯಣ ಶಾನಭೋಗರು ಯಾವಾಗ ನಾಯಿಗಳನ್ನು(ಶ್ವಾನಗಳನ್ನ) ಭೋಗಿಸಲು (ತಿನ್ನಲು) ಕಲಿತಿದ್ದಾರೆ ಎಂದು ಯೋಚಿಸಿದೆ.


ನಮ್ಮ ಊರಲ್ಲಿ ತುಂಬಾ ಶ್ರೀಮಂತವಾದ ಪಾಟೀಲ ಕುಟುಂಬ ಇದೆ. ಆದರೆ ಮನೆ ಮುಂದೆ, ಹಿಂದೆ ಮಾತ್ರ ಸಗಣಿ ಇರುತಿತ್ತು. ಅದಕ್ಕೆ ಅವರಿಗೆ ಸಗಣಿಯವರ ಮನೆಯೆಂದು ಅಡ್ಡ ಹೆಸರು ಬಿತ್ತು. ಆಗ ಅವರ ಮನೆಯವರು ತಮನ್ನು ಸಗಣಿಯವರ ಮನೆಯೆಂದು ಅಡ್ಡ ಹೆಸರಿನಿಂದ ಕರೆಯಬಾರದೆಂದು ಊರಿಗೆಲ್ಲ ಹೋಳಿಗೆ ಮಾಡಿಸಿ ಊಟಕ್ಕೆ ಹಾಕಿದ್ದರು. ಆಗ ನಾನು ಮತ್ತು ರಂಗಣ್ಣ ಊಟ ಮಾಡಿ ಬರುತ್ತಿದ್ದಾಗ ದಾರಿಯಲ್ಲಿ ಬಸಪ್ಪ ಭೇಟಿಯಾದ. ಎಲ್ಲಿ ಹೋಗಿದ್ದಿರಿ ಎಂದು ನಮನ್ನು ಕೇಳಿದ. ನಾನು ಹೇಳುವದಕ್ಕೆ ಮುಂಚೆನೇ ರಂಗಣ್ಣ ತಟ್ಟನೆ ನಾವು "ಸಗಣಿಯವರ ಮನೆಗೆ ಊಟಕ್ಕೆ ಹೋಗಿದ್ದೆವು" ಎಂದು ಬಿಡಬೇಕೇ. ಇನ್ನು ಬಾಯಿಯಲ್ಲಿಯ ಬೀಡ ಮುಗಿದಿರಲಿಲ್ಲ.

ನನಗೆ ಒಬ್ಬ ಗೆಳಯನಿದ್ದಾನೆ ಅವನ ಹೆಸರು ರವಿ ಧರ್ಮಣ್ಣವರ ಅಂತ. ಅವನು ನನ್ನ ಜೊತೆನೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು Design Engineer, ಅಂದರೆ Machine ಗಳನ್ನು ಕಂಪ್ಯೂಟರ್ ನಲ್ಲಿ ಚಿತ್ರಿಸುವುದೇ ಅವನ ಕೆಲಸ. ನನ್ನದು ಅವನದು ತುಂಬ ಸಲಿಗೆ. ಹೀಗೆ ಸಲಿಗೆಯಿಂದ ಒಂದು ದಿವಸ ನಾನು "ರವಿ ಧರ್ಮಣ್ಣ ಕುಂಚದ ಕಲೆ ಬಲೆ ಸಾಕಾಗಿತೋ.." ಅಂತ ಚೇಷ್ಟೆಯಿಂದ ಹಾಡುತ್ತ ಅವನನ್ನು ಊಟಕ್ಕೆ ಕರೆಯಲು ಹೋದೆ. ಅವನಿಗೆ ಕೆಟ್ಟ ಕೋಪ ಬಂದಿತ್ತು. ಏಕೆಂದರೆ ಅವನು ಡಿಸೈನ್ ಮಾಡಿದ ಡ್ರಾಯಿಂಗ್ನಲ್ಲಿ ಏನೋ ತಪ್ಪು ಇತ್ತು ಅಂತ ಅವನ ಬಾಸ್ ಅವನಿಗೆ ಮಂಗಳಾರತಿ ಮಾಡಿದ್ದರು.

ಹೀಗೆ ನಮ್ಮೂರ ಭಾಷೆ ತುಂಬ ಅಪರೂಪದ ಹಾಸ್ಯ ಭಾಷೆ. ನಮ್ಮಲ್ಲಿಯ ಅಡ್ಡಹೆಸರುಗಳು ತುಂಬ ಹಾಸ್ಯಕರವಾಗಿ ಇರುತ್ತವೆ. ಉಳ್ಳಗಡ್ಡಿ , ಬೆಳ್ಳುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಕೊತಂಬರಿ, ಅಕ್ಕಿ, ಕಡ್ಲಿ etc etc.
ಇನ್ನು ಕೆಲವು ಇರುತ್ತವೆ ಕರಡಿ,ತಿಪ್ಪೆಗುಂಡಿ ಅಂತ. ಲಕ್ಕುಂಡಿ, ಮುಕ್ಕುಂಡಿ ....

ಹೀಗೆ ನನ್ನ ಒಬ್ಬ ಗೆಳೆಯನ ಅಡ್ಡ ಹೆಸರು ಪ್ರದೀಪ್ ಯತ್ತಿನಗುಡ್ಡ ಅಂತ. ಅದು ಅಪಾರ್ಥವಾಗಬಾರದೆಂದು ಪ್ರದೀಪ್. ವಾಯ ಅಂತ ಬರೆದರೆ ಏನೋ ಹೇಳುವದೋ ನೀವೇ ಹೇಳಿ.


ನಾವು ಮಾತುನಾಡುವಾಗ ಎಲ್ಲರಿಗೂ "ಯಾ" ಹಚ್ಚಿಯೇ ಮಾತನಾಡುವದು ಪ್ರದೀಪನಿಗೆ ....ಪದ್ಯ, ರಮೇಶ್ ನಿಗೆ ..ರಮ್ಯ ಹೀಗೇನೆ... ರಮ್ಯ ಎಂದರೆ ಹುಡುಗಿ ಎಂದು ತಿಳಿದುಕೊಂಡರೆ ಕಷ್ಟ.


ನನ್ನ ಪ್ರಯಾಣ ಮುಗಿದಿತ್ತು ನನ್ನ ಧಾರವಾಡದ ನೆನಪುಗಳೊಂದಿಗೆ. ಏನೇ ಇರಲಿ ನಮ್ಮ ಭಾಷೆ ನಮಗೆ ನಿಜವಾಗಿಯೂ ಅಂದದ.. ಚಂದದ.. ಸುಂದರ.. ಆಡು ಭಾಷೆ.

ಬಾಲ್ಯದ ಆಟ ಆ ಹುಡುಗಾಟ .....

ಮೊನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರವಾಗುತಿತ್ತು. ಮುಗ್ಧ ಮನಸ್ಸಿನ ಮಕ್ಕಳ ಸುಮಧುರವಾದ ಸಂಗೀತವನ್ನು ಕೇಳಿ ಮನಸ್ಸಿಗೆ ಮಹದಾನಂದ ಆಗಿತ್ತು. ಮಕ್ಕಳ ವಯಸ್ಸು ಸುಮಾರು ೮ ರಿಂದ ೧೨ ರವರೆಗೆ ಇತ್ತು. ನನಗೀಗ ವಯಸ್ಸು ೩೩. ಆದರು ಹೇಳಿಕೊಳ್ಳುವಂತಹ ಸಾಹಸವೇನು ಮಾಡಲಿಲ್ಲವೆಂಬ ಭಾವನೆ ಮನಸ್ಸಿನ ಮೂಲೆಯಲ್ಲಿ ಮನೆ ಮಾಡಿದೆ. ನಿಜವಾಗಿಯೂ ಹೇಳಬೇಕೆಂದರೆ ನನಗೆ ಓದಲು, ಬರೆಯಲು ಬಂದಿದ್ದೆ ೯ ನೇ ವಯಸಿನಲ್ಲಿ ಅದು ಕರಜಗಿ ಮಾಸ್ತರರು ಬಾಸುಂಡೆ ಬರುವ ಹಾಗೆ ಬಾರಿಸಿದಾಗ ಅಮ್ಮನಿಂದ ಓದಲು, ಬರೆಯಲು ಕಲಿತುಕೊಂಡಿದ್ದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಬುದ್ಧತೆ ಇದೆ ಎಂಬ ಸೂಕ್ಷ್ಮತೆ ಅರಿತಾಗ ಮನಸ್ಸಿಗೆ ಕಸಿವಿಸಿಯಾಗಿತ್ತು. ಆಗಲೇ ಮನಸ್ಸು ನಾನು ಆಡಿರುವ ಬಾಲ್ಯದ ಆಟಗಳಿಗೆ ಒಂದು ಇಣುಕು ನೋಟ ಬೀರಿತ್ತು.

ನನ್ನ ಕ್ಲಾಸಿನಲ್ಲಿ ಹೆಗ್ಗಡೆ ಎಂಬ ನನ್ನ ಸಹಪಾಠಿ ಇದ್ದ. ಅವನಿಗೆ ನಾನು ಮತ್ತು ನನ್ನ ಗೆಳೆಯ ಮಂಜು "ಹೆಗ್ಗಣ" ಎಂದು ಸಂಭೋದಿಸುತ್ತಿದ್ದೆವು. ಅವನಿಗೆ ಒಂದು ದಿವಸ ಕೋಪ ಬಂದು ಅವರ ತಂದೆಗೆ ಹೇಳಿ ನಮಗೆ ತಕ್ಕ ಶಾಸ್ತಿ ಮಾಡಿದ್ದ.
ಇನ್ನು ಒಂದು ದಿವಸ ಪಾರ್ವತಮ್ಮ ತನ್ನ ಮಾವನವರ ಶ್ರಾದ್ಧದ ಪಿಂಡ ಇಡುತ್ತಿದ್ದರು. ನಾನು ಅಲ್ಲೇ ಅಂಗಡಿಯಲ್ಲಿ ಪಾಪಡಿ ಕೊಂಡು ತಿನ್ನುತ್ತಾ ನಿಂತಿದ್ದೆ. ಕಾಗೆ ಪಿಂಡವನ್ನು ತಿನ್ನಲ್ಲು ಬಂದಾಗ ಅದು ನನ್ನ ಪಾಪಡಿಗೆ ಕಣ್ಣು ಹಾಕುತ್ತಿದೆ ಎಂದು ಯೋಚಿಸಿ ಅದನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದೆ. ಪಾರ್ವತಮ್ಮನ ಪಿಂಡಕ್ಕೆ ಮಣ್ಣು ಬಿದ್ದಿತ್ತು. ಪಾರ್ವತಮ್ಮ ದೊಡ್ಡದಾದ ರಗಳೇನೆ ಮಾಡಿದ್ದಳು.ಅಷ್ಟರಲ್ಲಿ ನಾಯಿ ಬಂದು ಪಿಂಡವನ್ನು ಅಸ್ವಾದಿಸಿತ್ತು. ಕಾಗೆ ಪಿಂಡದ ಬದಲು ನಾಯಿ ಪಿಂಡವಾಗಿತ್ತು. ಪಾಪಡಿ ಕಾಗೆ ಪಿಂಡ ಆಗಿತ್ತು.

ಇನ್ನು ಒಂದು ದಿವಸ ಸ್ಕೂಲಿಗೆ ಬೆಲ್ಲ ಕಿಸೆಯಲ್ಲಿ ಇಟ್ಟು ಕೊಂಡು ಹೋಗಿದ್ದೆ. ನನ್ನ ಪಕ್ಕದ ಹುಡುಗ ಮಿಸ್ ಹೇಳುವ ಪಾಠವನ್ನು ಬಿಟ್ಟು ನನ್ನ ಕಿಸೆ ನೋಡುತ್ತಾ ಕುಳಿತಿದ್ದ. ಕಿಸೆಯಲ್ಲಿರುವ ಬೆಲ್ಲ ನೋಡಿ ಮಿಸ್ ಕೋಪದಿಂದ ಕ್ಲಾಸ್ ಹೊರಗಡೆ ನಿಲ್ಲಿಸಿದ್ದರು.
ಅಪ್ಪ ಮನೆಯಲ್ಲಿ ಒಂದು ದಿವಸ ಮಾವಿನ ಹಣ್ಣನ್ನು ತಂದು ಇಟ್ಟಿದ್ದಾಗ. ಅಪ್ಪ, ಅಮ್ಮ ಇಲ್ಲದ ಸಮಯದಲ್ಲಿ 1/2 ಡಜನ್ ಮಾವಿನ ಹಣ್ಣನ್ನು ಮುಗಿಸಿದ್ದೆ. ಮತ್ತೊಂದು ದಿವಸ 1/4 Kg ತುಪ್ಪ.

ಅಪ್ಪ ಒಂದು ದಿವಸ ಹೊಸ ಟೇಪ್ ರೆಕಾರ್ಡರ್ ತಂದಿದ್ದರು. "ದಾಸರ ಪದಗಳು","ಸುಪ್ರಭಾತ" ಎಲ್ಲವು ಚೆನ್ನಾಗಿ ಬರುತಿತ್ತು. ನಾನು ಕಿಶೋರ್ ಕುಮಾರ ಹಾಡುಗಳ ಕ್ಯಾಸೆಟ್ ಮನೆಗೆ ಕೊಂಡು ಬಂದಿದ್ದೆ. ಒಂದು ದಿವಸ ಕಿಶೋರ್ ಕುಮಾರ ಅಳಲಾರಂಬಿಸಿದ್ದ(ಕ್ಯಾಸೆಟ್ ಸಿಕ್ಕಿಕೊಂಡಿತ್ತು). ನನಗೆ ಕ್ಯಾಸೆಟ್ ತಿರುಗಿಸುವ ಗಾಲಿಗಳ ವೇಗ ಸ್ವಲ್ಪ ಕಡಿಮೆಯಾಗಿದೆ ಎಂದು ಅನಿಸಿತ್ತು. ನಾನು ಅದರ ವೇಗ ಜ್ಯಾಸ್ತಿ ಮಾಡಲು ಸ್ಕ್ರೂ ಡ್ರೈವರ್(Screw Driver)ನಿಂದ ತಿರುಗಿಸಿದ್ದೆ ಆದರು ಉಪಯೋಗವಾಗಲಿಲ್ಲ. ಆಗಲೇ ನನಗೆ ನೆನಪು ಬಂದಿದ್ದು ನನ್ನ ಗೆಳೆಯ ಹೇಳಿದ ಒಂದು ಮಾತು "ನಮ್ಮಪ್ಪ ಎಣ್ಣೆ ಹಾಕಿದಾಗ ತುಂಬ ವೇಗವಾಗಿ ಮಿಲಿಟರಿ ಸೈನಿಕನ ಹಾಗೆ ಪರೇಡ ಮಾಡಿ ಬರುತ್ತಾರೆ" ಎಂದು. ನಾನು ಒಂದು ದಿವಸ ಅವರ ನಡಿಗೆಯನ್ನು ನೋಡಿದ್ದೇ. ಆಗ ನನಗೆ ಎಣ್ಣೆ ಎಂದರೆ ಗೊತ್ತಿದದ್ದು ಕೊಬ್ಬರಿ ಎಣ್ಣೆ, ಚುಮಣಿ ಎಣ್ಣೆ ಇನ್ನೊಂದು ಅಡುಗೆ ಎಣ್ಣೆ. ಅಡುಗೆ ಎಣ್ಣೆ ಏನಾದರು ಹಿಡಿದರೆ ಅಮ್ಮನಿಗೆ ಗೊತ್ತಾದರೆ ನನಗೆ ಕಾಡಿಗೆ ಅಟ್ಟುತ್ತಾಳೆ ಎಂದು ಅದರ ಸಹವಾಸಕ್ಕೆ ಹೋಗಲಿಲ್ಲ. ಇನ್ನು ಚುಮಣಿ ಎಣ್ಣೆಯ ಅನುಭವವಿತ್ತು. ಒಂದು ದಿವಸ ನನ್ನ ತಂಗಿ ಚುಮಣಿ ಎಣ್ಣೆಯನ್ನು ಕುಡಿದು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದಳು. ಅದಕ್ಕೆ ಚುಮಣಿ ಎಣ್ಣೆ ಏನಾದರು ಹಾಕಿದರೆ ಇದಕ್ಕೂ ಹಾಸ್ಪಿಟಲ್ ಗ್ಯಾರಂಟೀ. ಇನ್ನು ಉಳಿದಿದ್ದು ಕೊಬ್ಬರಿ ಎಣ್ಣೆ ಮಾತ್ರ. ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಯನ್ನು ಟೇಪ್ ರೆಕಾರ್ಡರ್ ವ್ಹೀಲ್ ಗೆ ಸುರಿದಾಗ ಬೆಸುರವಾಗಿದ್ದ ಕಿಶೋರ್ ಕುಮಾರ್ ಸುರದಿಂದ ಹಾಡಿದ್ದ. ಹೀಗೆ ನಡಿಯಿತು ನನ್ನ ಎಣ್ಣೆ ಪ್ರಯೋಗ. ನನಗೆ ಏನೋ ಒಂದು ಹೊಸದಾದ ವಿಷಯವನ್ನು ಕಂಡು ಹಿಡಿದಷ್ಟು ಸಂತೋಷ. ಅಪ್ಪನಿಗೆ ಆಶ್ಚರ್ಯ ೧ ವಾರದಲ್ಲಿ 200 ML ಕೊಬ್ಬರಿ ಎಣ್ಣೆ ಖಾಲಿ. ಮತ್ತೆ ಒಂದು ದಿವಸ ಎಣ್ಣೆ ಸುರಿದಾಗ ಟೇಪ್ ರೆಕಾರ್ಡರ್ "ಪಟ್ಟ" ಎಂದು ವೈರ್ ಹರಿದು ಬಿದಿತ್ತು. ಮನೆಯಲ್ಲಿನ ಕರೆಂಟ್ ಢಮಾರ್ .... ಅನಂತರ ಗೊತ್ತಾಗಿದ್ದು ಮೇನ್ ಟ್ರನ್ಸ್ಫೊರ್ಮೆರ (Transformer)ನೆ ಢಮಾರ್ ಆಗಿದೆ ಎಂದು. ನಮ್ಮ ಅಪ್ಪ ಟೇಪ್ ರೆಕಾರ್ಡರ್ ಸರ್ವಿಸ್ಗೆ ಅಂತ ತೆಗೆದುಕೊಂಡು ಹೋದಾಗ. ಅಂಗಡಿಯವ ನಿಮ್ಮದು ಎಣ್ಣೆ ಗಿರಿಣಿ ಇದೆಯಾ ಎಂದು ಕೇಳಿದ್ದ ಅಪ್ಪನಿಗೆ. ಅಪ್ಪನಿಗೆ ಕೆಟ್ಟ ಕೋಪ ಬಂದು 200 ML ಎಣ್ಣೆ ಹಚ್ಚುವ ಹಾಗೆ ಬಾಸುಂಡೆ ಕೊಟ್ಟಿದ್ದರು.

ಅನಂತರ ಯಾವದೇ ಇಲೆಕ್ಟ್ರಾನಿಕ್ ಸಾಮಾನುಗಳಿಂದ ಸ್ವಲ್ಪ ದೂರವಿದ್ದೆ. ನನ್ನ ಗೆಳೆಯನು ತನ್ನನ್ನು ತಾನೆ ಆಲ್ಬರ್ಟ್ ಐನ್ಸ್ಟೈನ್, ತೋಮಸ್ ಅಲ್ವ ಎಡಿಸನ್ ಅಂದು ಕೊಂಡಿದ್ದನೋ ಗೊತ್ತಿಲ್ಲ. ಹೀಗೆ ಒಂದು ದಿವಸ ಗುಜರಿ ಅಂಗಡಿಯಿಂದ ತಂದ Circuit ನ್ನು ಹಚ್ಚಿ ಮನೆಯಲ್ಲಿಯ ಕರೆಂಟ್ ಢಮಾರ್.

ಒಂದು ದಿವಸ "ಸ್ಪೈಡರ್ ಮ್ಯಾನ್" ಧಾರವಾಹಿ ನೋಡಿ ಸ್ಪೈಡರ್ ಮ್ಯಾನ್ ತರಹನೆ ಮನೆಯ ಮುಂದೆ ಕಟ್ಟಿರುವ ತೋರಣದ ಧಾರಕ್ಕೆ ಜೋತು ಬಿದ್ದು ಕೆಳಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕ್ಕೊಂಡಿದ್ದೆ.

ಚಿಣ್ಣಿ -ದಾಂಡು ಎಂದರೆ ನನಗೆ ತುಂಬ ಇಷ್ಟ. ಒಂದು ದಿವಸ ಅಪ್ಪ ಆಫೀಸ್ ನಿಂದ ಮನೆಗೆ ಬಂದಿರಲಿಲ್ಲ ಅವರನ್ನು ಕರೆದುಕೊಂಡು ಬರಬೇಕೆಂದು ನಾನೆ ಖುದ್ದಾಗಿ ಅವರ ಆಫೀಸ್ ದಾರಿ ಹಿಡಿದಿದ್ದೆ. ಅದು ಸ್ಮಶಾನದ ದಾರಿಯಿಂದನೆ ಹೋಗಬೇಕು. ಆಗ ನನಗೆ ಒಂದು ಚೆನ್ನಾಗಿರೋ ಚಿಣ್ಣಿ ಸಿಕ್ಕಿತು ಅದನ್ನು ಹಿಡಿದುಕೊಂಡು ಹೊರಟಿದ್ದೆ. ಅಷ್ಟರಲ್ಲೇ ಅಪ್ಪ ಸೈಕಲ್ ಏರಿ ಬರುವದನ್ನು ಕಂಡು "ಅಪ್ಪ" ಎಂದು ಕೂಗಿದಾಗ. ಅಪ್ಪ ಏನೋ ಎಲ್ಲಿ ಹೊರಟಿದ್ದಿಯ ಎಂದು ಕೇಳಿದಾಗ ನಿನ್ನನ್ನೇ ಕರೆದುಕೊಂಡು ಬರಬೇಕೆಂದು ಹೊರಟಿದ್ದೆ ಎಂದೆ. ಏನೋ ಇದು ಕೈನಲ್ಲಿ ಎಂದಾಗ ಚಿಣ್ಣಿ ಎಂದೆ. ನಿನ್ನ ಚಿಣ್ಣಿ ಮನೆ ಹಾಳಾಗ ಎಂದು ಎಲಬು(ಎಲವು) ಕಣೋ ಎಂದು ಅದನ್ನು ಕಿತ್ತು ಎಸೆದಿದ್ದರು.

ಮತ್ತೆ ಒಂದು ದಿವಸ ನನಗೆ ವಿಪರಿತ ಹೊಟ್ಟೆ ನೋವು ಕಾಣಿಸಿದ ಹಾಗೆ ಆಯಿತು. ಅಪ್ಪನನ್ನು ಎಬ್ಬಿಸಿ ರಾತ್ರಿ ೩.೦೦ ಘಂಟೆಗೆ ಹಾಸ್ಪಿಟಲ್ ಗೆ ಹೊರಟಿದ್ದೆವು. ಅದೇನೋ ಗೊತ್ತಿಲ್ಲ ಲಕ್ಷ್ಮಿ ನಾರಾಯಣ ಗುಡಿಯ ಸಮೀಪಿಸುತ್ತಿದ್ದಂತೆ ಹೊಟ್ಟೆ ನೋವು ಮಾಯಾವಾಗಿತ್ತು. ಮತ್ತೆ ಮನೆಗೆ ವಾಪಾಸ್ ಆದೆವು.

ನಮ್ಮ ಮನೆಯಲಿ ಇದ್ದದ್ದು ನಮ್ಮ ಅಜ್ಜಿ ಕೊಡಿಸಿದ ರೇಡಿಯೋ. ಅದರಲ್ಲಿ ಬುಧವಾರ ರಾತ್ರಿ ವಾರದ ನಾಟಕ ಪ್ರಸಾರವಾಗುತಿತ್ತು. ಅದನ್ನು ಕೇಳುವದೆಂದರೆ ನಮ್ಮ ಮನೆಯವರಿಗೆಲ್ಲ ಖುಷಿ. ಹಾಗೆ ಒಂದು ದಿವಸ ಒಂದು ನಾಟಕದಲ್ಲಿ ಒಂದು ಡೈಲಾಗ್ ಇತ್ತು ಅದೇನೆಂದರೆ "ಒಂಟಿ ಕಾಲಿನ ವೈದ್ಯ ಸಕ್ಕರಿ ತುಪ್ಪ ನೈವೇದ್ಯ" ಎಂದು. ಅದನ್ನು ಕೇಳಿ ಮರು ದಿನ ಅದೇ ನನ್ನ ಡೈಲಾಗ್ ಆಗಿತ್ತು. ಹೀಗೆ ಒಂಟಿ ಕಾಲಿನಲ್ಲಿ ನಡೆಯುವದು ನಾನು ಮತ್ತು ನನ್ನ ಗೆಳೆಯ ಮಂಜು ಮಾಡುತ್ತಿದ್ದಾಗ ಒಂದು ಮುದುಕಿ ಎದುರಿಗೆ ಬಂದಳು ಬ್ಯಾಲೆನ್ಸ್ ತಪ್ಪಿ ಅವಳ ಮೇಲೆ ಬಿದ್ದಾಗ. ಅವಳು ವೈದ್ಯರ ಬಳಿ ಹೋಗುವ ಹಾಗಾಯಿತು. ಸಕ್ಕರಿ ತುಪ್ಪ ನೈವೇದ್ಯ ಅಪ್ಪ ಮಾಡಿದ್ದರು. ಮತ್ತೆ ಒಂದು ದಿವಸ Cylon ಸ್ಟೇಷನ್ ಹಚ್ಚುವ ಭರದಲ್ಲಿ ರೇಡಿಯೋ ಟ್ಯೂನ್ ಮಾಡಿ ಮಾಡಿ ಅದನ್ನು ಮೂಲೆಗುoಪಾಗಿಸಿದ್ದೆ.

ನಾನೇನಿದ್ದರು ಯಾವತ್ತು "ಘಜನಿ" ನೆ. ಎಂದರೆ ಓದಿದ್ದನ್ನು ಆಗಲೇ ಮರೆಯುವ ಅಭ್ಯಾಸ. ಇನ್ನು ನನ್ನ ಗೆಳೆಯರು ಇದೆ ಜಾತಿಯವರು. ಅವರೆಲ್ಲರೂ ಘಜನಿಯ ಹಾಗೆ ಮೈತುಂಬ ಬರೆದು ಕೊಂಡು ಪರೀಕ್ಷೆಗೆ ಬರುತ್ತಿದ್ದರು. ಒಂದು ದಿವಸ ಪಕ್ಯ ನು ಹೀಗೆ ಬರೆದು ಕೊಂಡು ಬಂದಿದ್ದ. ಅವನು ಬಾರಿ ಬಾರಿ ತನ್ನ ಅಂಗಿ ಎತ್ತುವದನ್ನು ನೋಡಿ ನಮ್ಮ ಮೇಸ್ಟ್ರು ಅವನನ್ನು ಬುದ್ಧನ ಹಾಗೆ ಮಾಡಿ ನೀರಿನ ಅಭಿಷೇಕ ಮಾಡಿದ್ದರು.

ಗಾಳಕ್ಕೆ ಸಿಕ್ಕಿದ ನೆನಪುಗಳು ಮಾತ್ರ ಬರಿ ಇಷ್ಟು.ಬಾಲ್ಯದಲ್ಲಿ ಆಡಿರುವ ಆಟಗಳು ಮಾತ್ರ ನೂರಾರು....

(ಈ ಬರಹದಿಂದ ಯಾರಿಗಾದರೂ ತಮ್ಮ ಬಾಲ್ಯದ ನೆನಪು ತರಿಸಿದಲ್ಲಿ ಈ ಬರಹ ಸಾರ್ಥಕ.)

ಜವಾನಿ ಜಾನೆ ಮನ ಮೇರಾ ಜೀನ್ಸ್ ....

ರೀ... ನಿಮಗೆ ಫ್ಯಾಷನ್ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತೀರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿದೆ.


ಒಂದು ದಿವಸ ಅರಿವೆ ಅಂಗಡಿಗೆ ಹೋದಾಗ ಜೀನ್ಸ್ ತೊಗೊ ಬೇಕು ಎಂದು ಹಠ ಹಿಡಿದಳು. ಮಗನು ಜೀನ್ಸ್ ಎಂಬ ಉದ್ಗಾರವೆತ್ತಿದಾಗ, ಆಯಿತು ಎಂದು ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳುವ ಅಂತ ನಿರ್ಧರಿಸಿದೆ. ನಾನು ಯಾವತ್ತು ಜೀನ್ಸ್ ಪ್ಯಾಂಟ್ ಧರಿಸಿದವನಲ್ಲ. ನಾನು ಏನಿದ್ದರು ಧರಿಸುವದು ಟೈಲರ್ ಬಳಿ ಹೋಗಿ ಅಳತೆ ಕೊಟ್ಟು ಆನಂತರನೆ ಪ್ಯಾಂಟ್ ಹೋಲಿಸೋದು. ಅಂಗಡಿಯವನಿಗೆ ಜೀನ್ಸ್ ತೋರಿಸು ಎಂದು ಹೇಳಿದೆವು. ಮತ್ತೆ ಪ್ಯಾಂಟ್ ಯಾವ ಸೈಜ್ ಬೇಕೆಂದು ಕೇಳಿದ ಆಗ ನಾನು ನನ್ನ ಟೈಲರ್ ಕೇಳಿ ಬರುತ್ತೇನೆ ಎಂದು ಅಂಗಡಿಯಿಂದ ಹೊರಗೆ ಹೊರಟೆ. ಅಂಗಡಿಯವ ತಡೆದು, ಅವನ ಟೈಲರ್ ಗೆ ಅಳತೆ ತೆಗೆದುಕೊ ಎಂದು ಹೇಳಿದ. ಅವನ ಟೈಲರ್ ಒಂದು ಹುಡುಗಿಯ ಅಳತೆ ತೆಗೆದು ಕೊಳ್ಳುತ್ತಿದ್ದ. ಒಮ್ಮೆಲೇ ನನ್ನ ಅಳತೆ ತೆಗೆದುಕೊ ಅಂದಾಗ ಅವನಿಗೆ ನುಂಗಲಾರದ ತುತ್ತಾಗಿತ್ತು. ರಂಭೆಯಂತಿರುವ ಹುಡುಗಿಯ ಅಳತೆ ಬಿಟ್ಟು ಈ ಕೋತಿಯ ಅಳತೆ ತೋಗೊ ಬೇಕಲ್ಲ ಅಂದು ಕೊಂಡು ನನ್ನ ಕಡೆ ಧಾವಿಸಿ ಹಾಗೆ ಹೀಗೆ ನಿನ್ನ ನಡ ಹೊಳ್ಳಿಸಿ, ಒಂದು ಟೇಪ್ ತಂದು ನನ್ನ ನಡುವಿನ ಸುತ್ತಳತೆ ತೆಗೆದು ೩೨ ಎಂದು ಹೇಳಿದ. ಆಗ ಅಂಗಡಿಯವ ಯಾವ ಬ್ರಾಂಡ್ ಬೇಕು ಎಂದು ಕೇಳಿದ. ನನಗೆ ಬ್ರಾಂಡ್ ಗಳ ಬಗ್ಗೆ ಪರಿಚಯವಿಲ್ಲದ್ದರಿಂದ ಯಾವದಾದರು ಬ್ರಾಂಡ್ ತೋರಿಸಿ ಎಂದೆ. ಅವನು ಒಂದು Reputed ಬ್ರಾಂಡ್ ಅಂತ ಹೇಳಿ ಪ್ಯಾಂಟ್ ಗಳನ್ನು ತೋರಿಸಲಾರoಬಿಸಿದ. ಪ್ಯಾಂಟ್ ಗಳ ಕಲರ್ ನೋಡಿ ಏನೇ ಇದು ಪಂಚರಂಗಿ ಕಲರ್ ಹಾಕಿದ್ದಾರೆ ಎಂದೆ ತಮಾಷೆಯಾಗಿ. ಆ ಪ್ಯಾಂಟ್ ಗಳ ರೇಟ್ ನೋಡಿ ತಲೆ ಸುತ್ತು ಬಂದಿತ್ತು. ಒಂದೊಂದು ಪ್ಯಾಂಟ್ ಬೆಲೆ ೧೦೦೦/- ದಿಂದ ೩೦೦೦/- ರೂಪಾಯಿಗಳ ಹತ್ತಹತ್ತಿರ ಇತ್ತು. ನಾನು ತಂದಿದ್ದು ೮೦೦/- ರುಪಾಯಿಗಳು ಮಾತ್ರ ಎಲ್ಲವನ್ನು ಇಲ್ಲೇ ಕೊಟ್ಟರೆ. ನನ್ನ ಗಾಡಿಯನ್ನ ತಳ್ಳಿ ಕೊಂಡು ಹೋಗಬೇಕಾಗುತ್ತದೆ ಎಂದು ಬೇಡವೆಂದೆ(ಪೆಟ್ರೋಲ್ ವಿಲ್ಲದ್ದರಿಂದ). ಪೆಟ್ರೋಲ್ ಇಲ್ಲದ ಗಾಡಿ ಯಾರಾದರು ಕಂಡು ಹಿಡಿದಿದ್ದರೆ ಎಷ್ಟು ಚೆನ್ನ ಎಂದು ಮನಸ್ಸಿನಲ್ಲೇ ಅಂದು ಕೊಂಡಿದ್ದೆ. ಆ ಅಂಗಡಿಯವನಿಗೆ ನನ್ನ ಮುಖ ನೋಡಿ ಏನು ತಿಳಿಯಿತೋ ಇನ್ನು ಕಡಿಮೆ ಬೆಲೆ ಇರುವದು ಇದೆ ತೋರಿಸುತ್ತೇನೆ ಎಂದು ೫೦೦/- ರೂಪಾಯಿಯ ಪ್ಯಾಂಟ್ ಗಳ್ಳನ್ನು ತೋರಿಸಲಾರoಬಿಸಿದ. ಅವನಿಗೂ ಅನ್ನಿಸಿರಬೇಕು ಈ ನನ್ನ ಮಗ ಜೀವನದಲ್ಲಿ ಜೀನ್ಸ್ ನೋಡಿದವನಲ್ಲ ಅಂತ. ಕಡೆಗೆ ಒಂದು ೪೫೦ ರೂಪಾಯಿಗಳ ಪ್ಯಾಂಟ್ ತೆಗೆದುಕೊoಡು ಬಂದೆವು.


ಮರುದಿನ ನಾನು ಜೀನ್ಸ್ ಪ್ಯಾಂಟ್ ಧರಿಸಿ ಆಫೀಸ್ ಗೆ ಹೋದೆ. ಜೀನ್ಸ್ ಮೇಲೆ ಟೀ ಶರ್ಟ್ ಹಾಕಿಕೊಂಡಿದ್ದೆ. ಟೀ ಶರ್ಟ್ ಗೆ ಕಿಸೆ ಇರಲಿಲ್ಲ ಹೀಗಾಗಿ ನನ್ನ Mobile ಮತ್ತು Purseನ್ನು ಬ್ಯಾಗಿನಲ್ಲಿ ಇಟ್ಟು ಕೊಂಡು ಹೋಗಿದ್ದೆ . ಹಾಗೇ mobile ತೆಗೆದುಕೊಳ್ಳುವದನ್ನು ಮರೆತಿದ್ದೆ . ನನ್ನ ಹೆಂಡತಿ ಅನಾಮತ್ತಾಗಿ 12 missed call ಕೊಟ್ಟಿದ್ದಳು . ಆಮೇಲೆ ಫೋನ್ ಮಾಡಿದಾಗ ಸಹಸ್ರನಾಮಾವಳಿ ಶುರು ಮಾಡಿದ್ದಳು. ಆಗ ಅನ್ನಿಸಿತ್ತು ಶರ್ಟ್ ,ಪ್ಯಾಂಟ್ ಧರಿಸಿದ್ದರೆ ಈ ಗತಿ ಬರುತ್ತಿರಲಿಲ್ಲವೆಂದು . ನಾನು ಗಾಡಿ ಹೊಡೆಯುವಾಗ ಸ್ವಲ್ಪ ತೊಂದರೆ ಅನ್ನಿಸಿತು. ಅನಂತರ ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಲು ಕೆರೆತ ಶುರು ಆಯಿತು. ಸ್ವಲ್ಪ ಕೆರೆದೆ, ಆದರೆ ಕೆರೆತ ಮಾತ್ರ ಕಡಿಮೆಯಾಗಲಿಲ್ಲ. ನನ್ನ ಉಗುರುಗಳು ಜೀನ್ಸ್ ಒಳಗಡೆ ಹೋಗುವದು ಸ್ವಲ್ಪ ಕಷ್ಟವೇ ಆಗಿತ್ತು. ಜೀನ್ಸ್ ಮೇಲೆ ಎತ್ತಿ ಪಬ್ಲಿಕ್ ನಲ್ಲಿ ಕೆರೆಯಲು ಸಾಧ್ಯವಿರಲಿಲ್ಲ. ಹೀಗೆ ತುಂಬ ಕೆರೆತ ಮುoದುವರೆದಾಗ ಗಾಡಿ ನಿಲ್ಲಿಸದೆ ಬೇರೆ ದಾರಿಯೇ ಇರಲಿಲ್ಲ. ಗಾಡಿ ನಿಲ್ಲಿಸಿ ಕೈ ಇಂದ ಜೋರಾಗಿ ಕೆರೆದೆ ಆದರು ಸಮಾಧಾನವಾಗಲಿಲ್ಲ. ಕಡೆಗೆ ಟೂಲ್ ಕಿಟ್(Tool Kit) ನಲ್ಲಿರುವ ಸ್ಕ್ರೂ ಡ್ರೈವರ್(Screw Driver) ತೆಗೆದು ಕೆರೆದಾಗ ಮನಸಿಗೆ ಹಿತವಾಗಿತ್ತು.


ಆಫೀಸ್ ಪ್ರವೇಶಿಸಿದೆ ಎಲ್ಲರು ನನ್ನನ್ನು ನೋಡಿ ಏನಪ್ಪಾ ಏನು ವಿಶೇಷ ಎಂದು ಕೇಳಿದರು. ಜೀನ್ಸ್ ಧರಿಸಿದ್ದಕ್ಕೆ ಪಾರ್ಟಿ ಬೇರೆ ಕೇಳಿದರು ಕೆಲವು ಗೆಳೆಯರು. ಅವರಿಗೇನು ಗೊತ್ತು ಹಾಸಿ ಮಲಗುವ ತಟ್ಟ (ಗೋಣಿ ಚೀಲ) ನೆ ಪ್ಯಾಂಟ್ ಮಾಡಿ ಹಾಕಿ ಕೊಂಡು ಬಂದ ಹಾಗೆ ಆಗಿತ್ತು. ನಿಲ್ಲುವದು, ಕುಳಿತುಕೊಳ್ಳುವದು, ಕೆರೆತ ಎಲ್ಲವೂ ಹರೋ ಹರ. ಇನ್ನು ಟಾಯ್ಲೆಟ್ ಗೆ ಏನಾದರು ಹೋದರೆ ಅಧೋ ಗತಿ.......


ಮತ್ತೆ ಒಬ್ಬ ಗೆಳೆಯ ನನಗೆ ಜೀನ್ಸ್ ಪ್ಯಾಂಟ್ ನ್ನು ಗಣಿಗಾರಿಕೆಯಲ್ಲಿ ಕೆಲಸಮಾಡುವವರು ಧರಿಸುತ್ತಿದ್ದರು ಎಂದು ಹೇಳಿದ ಹಾಗಿತ್ತು. ಈಗ ಅದನ್ನು ಧರಿಸುವವರೇ ಧನ್ಯ ಎಂದು ತಿಳಿದುಕೊಳ್ಳುತ್ತಾರೆ. ಈಗ ಅದೇ ಫ್ಯಾಷನ್.


ಇದನ್ನು ಬೆಸಿಗೆ ಕಾಲದಲ್ಲಿ ಧರಿಸಲು ಹೇಳಿದರೆ ಇದಕ್ಕೆ ಒಂದು A/c ಫಿಟ್ ಮಾಡಿ ಕೊಟ್ಟರೆ ಮಾತ್ರ ಅದನ್ನು ಧರಿಸುವೆ ಎಂದು ಖಡಾ ಖಂಡಿತವಾಗಿ ಹೇಳುತ್ತೇನೆ.


ಈಗ ನನ್ನ ಗೆಳೆಯರೆಲ್ಲರೂ ಜೀನ್ಸ್ ಧರಿಸುವವರೇ. ಎಂದೂ ಜೀನ್ಸ್ ಧರಿಸದ ನನ್ನ ಒಬ್ಬ ಗೆಳೆಯ ಕೂಡ ಜೀನ್ಸ್ ಧರಿಸಿ ಮೇಲೆ ಜುಬ್ಬಾ ಹಾಕಿಕೊಂಡು ಬಂದಿದ್ದ . ಆ ಜುಬ್ಬಾ ಹುಡುಗಿಯರ ಚೂಡಿ ಟಾಪ್ ಹಾಗೇ ಕಾಣಿಸುತ್ತಿತ್ತು .


ಹೀಗೆ ಏನೋ ದಿನ ಕಳೆದು ಮನೆ ತಲುಪಿದೆ. ಆಗಲೇ ನನ್ನ ಗೆಳೆಯ ಫೋನ್ ಮಾಡಿ ಮನೆಗೆ ತನ್ನ ಮಗನ ಹುಟ್ಟಿದ ಹಬ್ಬಕ್ಕೆ ಕರೆದ. ಇರಲಿ ಇಷ್ಟೊತ್ತು ಕಳೆದೆ ಇನ್ನು ಒಂದೆರಡು ಘಂಟೆ ತಾನೆ ಎಂದು. ಅದನ್ನೇ ಸಿಕ್ಕಿಸಿಕೊಂಡು ಹೋದೆ. ಏನೋ Buffet ಡಿನ್ನರ್ ಇರಬಹುದೆಂದರೆ ಅವರು ಊಟಕ್ಕೆ ಬಾಳೆ ಎಲೆ ಹಾಕಿ ಕೆಳಗೆ ಕೂಡಿಸುವ ವ್ಯವಸ್ಥೆ ಮಾಡಿದ್ದರು. ಏನೋ ಕಷ್ಟ ಪಟ್ಟು ಕೆಳಗೆ ಕೂತು ಊಟ ಮುಗಿಸುವಷ್ಟಕ್ಕೆ ಸಾಕು ಸಾಕಾಗಿ ಹೋಗಿತ್ತು. ಊಟಕಿಂತ ನನ್ನ ಜೀನ್ಸ್ ಮೇಲೆ ನನ್ನ ಕಣ್ಣು.


ಆಗ ಅನ್ನಿಸಿತು ಕಾಟನ್ ಜಿನ್ ನಲ್ಲಿ ಉಳಿದಿರೋ ಕಾಟನ್ ತೊಗೊಂಡು ಈ ಜೀನ್ಸ್ ಮಾಡಿರಬೇಕೆಂದು. ಜೀನ್ಸ್ ಕಂಡು ಹಿಡಿದ ಆ ಮಹಾಶಯನಿಗೆ ದೊಡ್ಡದೊಂದು ನಮಸ್ಕಾರ ಹೊಡೆದು. ಮನೆಗೆ ಹೋಗಿ ಲುಂಗಿ ಧರಿಸಿ ಆನಂದದಿಂದ ನಿದ್ದೆಗೆ ಹೋದೆನು..ಮತ್ತೆ ನಾಳೆ ಜೀನ್ಸ್ ಇಲ್ಲ ಏಕೆಂದರೆ ನನ್ನ ಬಳಿ ಇರುವದು ಒಂದೇ ಜೀನ್ಸ್.


ಕೈ ಕೆಸರಾದರೆ ಬಾಯಿ ಮೊಸರು. ಕಾಲು ಕೆರತವಾದರೆ ಅದೇ ಫ್ಯಾಷನ್. ಆದರು ಜೀನ್ಸ್ ಚೆನ್ನಾಗೆ ಕಾಣುತಿತ್ತು.