Saturday, October 30, 2010

ಗುಣವಂತನ ಗರುಡ ರೇಖೆ....

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.

ಮನೆ ಬಂದರು ಕವಿತೆಯ ಬಗ್ಗೆ ಯೋಚನೆ ಇನ್ನೂ ಮುಗಿದಿರಲಿಲ್ಲ. ರೀ ನಿಮ್ಮ ಗೆಳೆಯ ಮಾರುತಿ ಯಾವಾಗ ಧಾರವಾಡಕ್ಕೆ ಹೋಗುತ್ತಾನೆ ಎಂದು ಕೇಳಿದಳು. ನಾನು ವಿಜಯನಗರ ಇಲ್ಲ ರಾಗಿ ಗುಡ್ಡಕ್ಕೆ ಹೋಗೋಣ ಎಂದೆ. ಅವಳು ಕೇಳಿದ ಪ್ರಶ್ನೆಗೆ ನಾನು ಹೇಳುತ್ತಿರುವುದಕ್ಕೆ ಒಂದು ಸಂಭಂಧವೇ ಇರಲಿಲ್ಲ. ನನ್ನ ಹೆಂಡತಿಗೆ ರೇಗಿ ಹೋಗಿತ್ತು. ನಾನು ಕವಿತಾ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂದೆ. ಯಾರು ಆ ಕವಿತಾ ಎಂದು ಮತ್ತಷ್ಟು ರೇಗಿದಳು. ಕವನ ಎಂದರೆ ಮತ್ತೆ ತಪ್ಪು ಆದೀತು ಎಂದು ಕವಿತೆ ಎಂದು ಹೇಳಿದೆ. ನಿಮ್ಮ ಲಕ್ಷ್ಯ ಎಲ್ಲಿ? ಇರಬೇಕು. ರಾಣಿ ಹಾಗೆಲ್ಲಾ ಏನು ಇಲ್ಲ. ನೀನು ಯೋಚನೆ ಮಾಡುತ್ತಿರುವದು ಲಕ್ಷದ ಬಗ್ಗೆ ಆದರೆ, ನೀನು ನನಗೆ ಕೋಟಿಗೆ ಸಮ. ಅದಕ್ಕೆಂದೆ ನಿನ್ನೆ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!! ಎಂಬ ಲೇಖನ ಬರೆದಿದ್ದೇನೆ ಎಂದು ಪುಸಲಾಯಿಸಿದೆ. ಆದರೂ ನಿಮ್ಮದು ಬರೀ ಕವಿತೆ-ಲೇಖನ ಅತಿ ಆಯಿತು ಎಂದು ಹೀಯಾಳಿಸಿದಳು. ಅದು ಬೇರೆ ನಿಮಗೆ ನನ್ನ ಹೀಯಾಳಿಸಿ ಬರೆಯದೇ ಇದ್ದರೆ ತಿಂದ ಅನ್ನ ಹೇಗೆ ಅರಗಬೇಕು (ಕರಗಬೇಕು) ಎಂದಳು.

ಕೆಲ ಸಮಯದ ನಂತರ ಪುಸಲಾಯಿಸಿದ್ದರಿಂದ ಹೇಳಿ ಮತ್ತೆ ಏನೇನು? ಬರೆದಿದ್ದೀರ ಎಂದಳು. ನಳ ಪಾಕ್ .... ಮತ್ತು ಸ್ಪೆಶಲ್ ತಿಂಡಿ.... ಎಂಬ ಲೇಖನ ಕೂಡ ಬರೆದಿದ್ದೇನೆ ಎಂದೆ. ಮತ್ತೇನು? ಬಕಾಸುರನಿಗೆ ಅದೇ ಧ್ಯಾನ ಎಂದು ಮತ್ತೆ ಹೀಯಾಳಿಸಿದಳು. ನಾನು ನನ್ನ ಬಗ್ಗೆ ತುಂಬಾ ಕೊಚ್ಚಿಕೊಂಡು ತುಂಬಾ ಮಾತನಾಡಿಕೊಂಡೆ. ನನ್ನ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪಬ್ಲಿಶ್ ಆಗಿದೆ ಎಂದು. "ಓ ಗುಣವಂತ ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ಎಂದು ಹಾಡುತ್ತಾ ಅಡುಗೆ ಮನೆಗೆ ಹೋದಳು. ನಾನು ಹಾಡುತ್ತೇನೆ, ಆದರೆ ನನ್ನದು ಕಾಕ ಕಂಠ. ಆದರೆ ನನ್ನ ಮಡದಿಯದು ಕೋಗಿಲೆ ಕಂಠ. ನಾನು ಅವಳನ್ನು ಹಿಂಬಾಲಿಸಿ ಪದಗಳನ್ನು ಬೇಕಾದರೆ ನಾನು ಹೇಳುತ್ತೇನೆ. ನೀನು ಹೋಗಳುವುದನ್ನು ಮಾಡು ಎಂದೆ. ಮೊದಲು ಹೋಗಿ ಕೈ ಕಾಲು ತೊಳೆದು ಆಮೇಲೆ ಒಳಗಡೆ ಬನ್ನಿ ಎಂದು ಹೋಗಳಿ ಕಳುಹಿಸಿದಳು. ಅದೇಕೋ ಗೊತ್ತಿಲ್ಲ ಅರಳಿದ ಹೂವು ಮತ್ತು ಕೆರಳಿದ ಹೆಣ್ಣು ನೋಡೇಕೆ ತುಂಬಾ ಚೆನ್ನ.

ಕೈ ಕಾಲು ತೊಳೆದು ಬಂದು ಟೀ ಶರ್ಟ್ ಹಾಕಿಕೊಳ್ಳುತಿದ್ದೆ. ಕಾಫೀ ತೆಗೆದುಕೊಂಡು ಬಂದ ನನ್ನ ಮಡದಿ ಜೋರಾಗಿ ನಗುತ್ತಾ ಟೀ ಶರ್ಟ್ ಉಲ್ಟಾ ಹಾಕಿ ಕೊಳ್ಲುತ್ತ ಇದ್ದೀರ ಎಂದು ಅಂದಳು. ಕಾಫೀ ಕಪ್ ಕೊಟ್ಟು ಮತ್ತೆ ಏನು ಬರೆದಿದ್ದೀರಾ ರಾಯರು ಎಂದು ಕೇಳಿದಳು. ಸಿಹಿಮೊಗ್ಗೆ ಬಗ್ಗೆ ಬರೆದಿದ್ದೇನೆ ಎಂದೆ. ಹಾಗೆ ಅಂದರೆ ಎಂದು ನನ್ನ ಮುಖ ನೋಡಿದಳು. ಅದು ಸಿಹಿ ಮೊಗದ ಹುಡುಗಿಯ ಬಗ್ಗೆ ಎಂದು ಸುಮ್ಮನೇ ರೀಲು ಬಿಟ್ಟೆ. ಮತ್ತೆ ಕೋಪಿಸಿಕೊಂಡಳು. ಅದು ಶಿವಮೊಗ್ಗ ಬಗ್ಗೆ ಬರೆದ ಅನುಭವ ಕಥನ ಎಂದು ಹೇಳಿದೆ.

ಅಷ್ಟರಲ್ಲಿ ಪಕ್ಕದ ಮನೆ ಶಾಂತಮ್ಮ ಬಂದು ನಿಮ್ಮ ಯಜಮಾನರು ಇದ್ದಾರಾ ಎಂದು ಕೇಳಿಕೊಂಡು ಬಂದರು. ನಾನು ಇವರು ಏಕೆ ನನ್ನ ಕೇಳಿಕೊಂಡು ಬಂದಿದ್ದಾರೆ ಎಂದು ಆಶ್ಚರ್ಯ. ನಮ್ಮ ಮನೆಗೆ ಹಾವು ಬಂದಿದೆ ಪ್ಲೀಸ್ ಹಿಡಿ ಬನ್ನಿ ಎಂದರು. ಕೈ ನಡುಗಿ ಅರ್ಧ ಕಾಫೀ ಕೆಳಕ್ಕೆ ಉರಳಿತ್ತು. ನಿಮಗೆ ಯಾರು ಹೇಳಿದರು ನಾನು ಹಾವು ಹಿಡಿಯುತ್ತೇನೆ ಎಂದು ಕೇಳಿದೆ. ನಾನೇನು ಹಾವಡಿಗನ ಎಂದು ಕೇಳಿದೆ. ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ನಿಮ್ಮ ಮಡದಿ ಹೇಳಿದ್ದಾರೆ ಪ್ಲೀಸ್ ಬನ್ನಿ ನಮ್ಮನ್ನು ಕಾಪಾಡಿ ಎಂದರು.ನನಗೆ ತುಂಬಾ ಕೋಪ ಬಂದಿತ್ತು. ನಾನು ನನ್ನ ಮಡದಿಯ ಮುಖ ನೋಡಿದೆ. ನಡೀರಿ ಹೋಗೋಣ ಪಾಪ ಎಂದಳು. ಏನೇ ಇದು ನೀನು ಎಂದೆ. ಅವಳನ್ನು ಒಳಗಡೆ ಕರೆದು ನಾನು ಯಾವತ್ತಾದರೂ ನಿನಗೆ ನನ್ನ ಕೈ ಮೇಲೆ ಗರುಡ ರೇಖೆ ಇದೆ ಎಂದು ಹೇಳಿದ್ದೇನಾ? ಎಂದು ಕೇಳಿದೆ.ಇಲ್ಲ ಎಂದಳು. ಮತ್ತೆ ಏಕೆ? ಹೇಳಿದೆ ಎಂದೆ. ಮಂಜಣ್ಣ ಮದುವೆಗೆ ಮುಂಚೆ ನನಗೆ ಹೇಳಿದ್ದರು ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ಅಂದಳು. ಮಂಜ ನಿನಗೆ ಸುಳ್ಳು ಹೇಳಿದ್ದಾನೆ. ಹಿರಿಯರೇ ಹೇಳಿಲ್ಲವೇ, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎಂದು ಅಂದೆ. ಹಾಗಾದರೆ ಮತ್ತೆ ಇನ್ನೂ ಏನು ಸುಳ್ಳು ಹೇಳಿದ್ದೀರಾ? ಎಂದಳು. ಹೊರಗಡೆ ಶಾಂತಮ್ಮ ಒದರುತ್ತ ಇದ್ದರು. ನೋಡಿ ನೀವು ಒಂದು ಕೋಲು ತೆಗೆದುಕೊಂಡು ಹೋಗಿ ಓಡಿಸಲು ಪ್ರಯತ್ನಿಸಿ ಎಂದಳು. ಈಗ ಇಲ್ಲ ಎಂದರೆ ನಮ್ಮ ಮರ್ಯಾದೆನೇ ಹೋಗೋದು ಎಂದಳು. ಹೆಚ್ಚು ಕಡಿಮೆ ಆದರೆ ಜೀವಾ ಹೋಗುತ್ತೆ, ಆಮೇಲೆ ಮರ್ಯಾದೆ ಇಟ್ಟು ಕೊಂಡು ಒಗ್ಗರಣೆ ಹಾಕುತ್ತೀಯಾ? ಎಂದೆ. ನಾನು ನಿಮ್ಮ ಜೊತೆ ಇರುತ್ತೇನೆ ಬನ್ನಿ ಎಂದಳು. ನಡಿ ನೋಡೋಣ ಎಂದು "ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಎಂದು ಹರಳೆಣ್ಣೆ ಕುಡಿದ ಹಾಗೆ ಮುಖ ಮಾಡಿ ಹೊರಟು ನಿಂತೆ.

ಶಾಂತಮ್ಮ ಮನೆ ಕಡೆಗೆ ಹೊರಟು ನಿಂತೆವು. ನಾನು ಚಿಕ್ಕದು ಇದೇನಾ ದೊಡ್ಡದು ಇದೇನಾ ಎಂದು ಕೇಳಿದೆ. ದೊಡ್ಡದು ಎಂದರು. ಯಾವ ಕಲರ್ ಇದೆ ಎಂದು ಕೇಳಿದೆ. ಅದು ನಾಗರ ಹಾವು ಎಂದು ಕಾಣುತ್ತೆ ಕಂದು ಎಂದರು. ಈಗ ಮತ್ತಷ್ಟು ನಡುಕ ಶುರು ಆಯಿತು. ಯಾವಾಗ ಬಂತು ಎಂದು ಕೇಳಿದೆ. ಬಂದು ಅರ್ಧ ಘಂಟೆ ಆಗಿದೆ ಎಂದರು. ನೀವು ಓಡಿಸಲು ಪ್ರಯತ್ನಿಸಲಿಲ್ಲವೇ ಎಂದು ಕೇಳಿದೆ. ನಾನು ಪ್ರಯತ್ನ ಪಟ್ಟೇ ಆದರೆ ಏನು ಪ್ರಯೋಜನ ಆಗಲಿಲ್ಲ ಎಂದರು.

ಶಾಂತಮ್ಮನ ಮನೆ ಪ್ರವೇಶಿಸಿ ಆಗಿತ್ತು. ಮನೆಯಲ್ಲಿ ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಕಪಾಟಿನಲ್ಲಿ ಇದೆ ಎಂದು ಹೇಳಿದರು. ಕೈಯಲ್ಲಿ ಕೋಲು ಹಿಡಿದು ನಡುಗುತ್ತಾ ಹೊರಟೆ. ತಟ್ ಎಂದು ಹಿಂದಿನಿಂದ ಬೆಕ್ಕು ಮೇಲಿಂದ ಜಿಗಿದು ಕಾಲಿನ ಒಳಗಿಂದ ನುಸುಳಿ ಹೋಯಿತು. ಒಂದು ಕ್ಷಣ ಎದೆ ಬಡಿತ ನಿಂತು ಹೋಗಿತ್ತು. ಮತ್ತೆ ಮುಂದೆ ಹೋದೆ. ಕೋಲಿನಿಂದ ಕಟ್ ಕಟ್ ಶಬ್ದ ಮಾಡಿದೆ. ಹಾವು ಅಲುಗಾಡಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋಗಿ ಎಂದರು ಶಾಂತಮ್ಮ. ನನ್ನ ಕೊಲೆ ಮಾಡೋಕೆ ನೋಡುತ್ತಿದ್ದೀರ ಎಂದು ಮನಸಿನಲ್ಲೇ ಅಂದುಕೊಂಡೆ. ಏನೇ ಮಾಡಿದರು ಮುಂದೆ ಹೋಗಲು ಆಗಲಿಲ್ಲ.

ಅಷ್ಟರಲ್ಲಿ ಶಂತಮ್ಮ ಅವರ ಮೊಮ್ಮಗ ಕ್ರಿಕೆಟ್ ಆಡಿ ಮನೆಗೆ ಬಂದ. ಅಜ್ಜಿ ತಡೆದು ನಿಲ್ಲಿಸಿದರು. ಮನೇಲಿ ಹಾವು ಕಣೋ ನಿಲ್ಲು ಎಂದರು. ನಾನು ಕೋಲು ಹಿಡಿದು ಸಾವಕಾಶವಾಗಿ ಅದರ ಹತ್ತಿರ ಹೋಗಿದ್ದೆ. ಅದನ್ನು ನೋಡಿದ ಆ ಹುಡುಗ ಓಡಿ ಬಂದವನೇ ಆ ಹಾವನ್ನು ತೆಗೆದುಕೊಂಡು ಓಡಿ ಹೋಗಿ ಬಿಟ್ಟ. ನನಗಂತು ಎದೆ ಝಲ್ ಎಂದಿತ್ತು. ಅಜ್ಜಿ ಚಿರುತ್ತ ಇತ್ತು. ಪ್ಲೀಸ್ ನೋಡಿ ನನ್ನ ಮೊಮ್ಮಗನನ್ನು ಕಾಪಾಡಿ ಎಂದು ಗೋಗರೆದರು. ನಾನು ಬಚಾವಾದೆ ಎಂದು ಖುಷಿಪಟ್ಟರು. ಆ ಅಜ್ಜಿಯ ಅಳು ನೋಡಲು ಆಗಲಿಲ್ಲ.

ಕಡೆಗೆ ಆ ಹುಡುಗನನ್ನು ಬೆನ್ನು ಅಟ್ಟಿ ಕೊಂಡು ಹೋದೆ. ತುಂಬಾ ಚೂಟಿ ಹುಡುಗ ನಾನು ಬೆನ್ನು ಹತ್ತಿದಷ್ಟು ಜೋರಾಗಿ ಓಡ ಹತ್ತಿದ. ಕಡೆಗೂ ಸಿಕ್ಕಿ ಬಿಟ್ಟ. ಎಸೆ ಅದನ್ನು ಎಂದು ಹೇಳಿದೆ. ಇಲ್ಲ ನನಗೆ ಬೇಕು ಅಂದ. ಎಸೆ ಇಲ್ಲ ಎಂದರೆ ಹೊಡೆಯುತ್ತೇನೆ ಎಂದೆ. ನಾನು ದುಡ್ಡು ಕೊಟ್ಟು ತಂದಿದ್ದು ನಾನು ಎಸೆಯೋಲ್ಲ ಎಂದ. ನಾನು ಏನು ಮಾಡಬೇಕು ಎಂದು ತೋಚದಾಗದೆ ಜೋರಾಗಿ ನಗಹತ್ತಿದೆ. ಕಡೆಗೆ ಆ ಹುಡುಗನನ್ನು ಕೇಳಿದಾಗ ಅದು ರಬ್ಬರ್ ಹಾವು ಜಾತ್ರೆ ಇಂದ ತಂದಿದ್ದು ಎಂದು ಹೇಳಿದ.

ನಾನು ಮತ್ತು ನನ್ನ ಮಡದಿ ಜೋರಾಗಿ ನಗುತ್ತಾ ಇದ್ದೆವು. ಅಜ್ಜಿ ಮೊಮ್ಮಗನಿಗೆ ಬೈಯುತ್ತಾ ಇದ್ದಳು. ಹೇಳಬಾರದ ಮೊದಲೇ ಇದನ್ನು ಎಂದು. ನಾನು ನನ್ನ ಮಡದಿಗೆ ಇನ್ನೊಮ್ಮೆ ಹೀಗೆಲ್ಲ ನನ್ನ ಬಗ್ಗೆ ಜಂಭ ಕೊಚ್ಚಿ ಯಾರ ಮುಂದೆಯೂ ಹೇಳಬೇಡ ಎಂದು ತಾಕೀತ ಮಾಡಿ ಮನೆಗೆ ಬಂದೆವು. ನನ್ನ ಮಡದಿ ಮಾತ್ರ ನಗುವುದನ್ನು ನಿಲ್ಲಿಸಿರಲೇ ಇಲ್ಲ.

Thursday, October 28, 2010

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!!

ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ್ನಿ ಹಾಕಿಸಿಕೊಂಡು ಇಡ್ಲಿ ತಿಂದು ಹೋದ. ನನಗೆ ಆಶ್ಚರ್ಯ ಚಟ್ನಿ ತಿಂದರೆ ಬಾಯಾರಿಕೆ ಹೋಗುತ್ತಾ? ಎಂದು. ಕಡೆಗೆ ಅಲ್ಲೇ ಇದ್ದ ನೀರನ್ನು ಕುಡಿದ. ಮತ್ತೆ ಅವನ ಫೋನ್ ರಿಂಗ್ ಆದ ಹಾಗೆ ಆಯಿತು. "ಹಲ್ಲು" ಎಂದು ಮಾತನಾಡಿದ. ಅಲ್ಲಿಂದ ಉತ್ತರ ಬರಲಿಲ್ಲ. ಅದು ಕರೆ ಆಗಿರದೇ, ಅಲಾರಂ ಆಗಿತ್ತು. ತನ್ನ ಬಳಿ ವಾಚ್ ಇದ್ದರು ನನಗೆ ಟೈಮ್ ಎಷ್ಟು ಎಂದು ಕೇಳಿದ. ಮತ್ತೆ ಅವನಿಗೆ ಒಂದು ಫೋನ್ ಬಂದಿತು. ಅದರಲ್ಲಿ ಯಾವಾಗ ನಾಳೆ ಬರುತ್ತಿಯಾ? ಎಂದು ಕೇಳಿದ. ಬಹುಶಃ ಅವನ ಹೆಂಡತಿಯದು ಎಂದು ಕಾಣುತ್ತೆ. ತಡಬಡಿಸಿ ಹೊರಟು ಹೋದ. ಹೆಂಡತಿ ಅಂದರೆ ಭಯ-ಭಕ್ತಿ ಎಂದು ಕಾಣುತ್ತೆ. ನಾನು ತಿಂಡಿ ತಿಂದು ನನ್ನ ಸ್ಕೂಟರ್ ಏರಿದೆ.

"ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ... ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ " ಕ್ಷಮಿಸಿ ಹಾಳಾದಂತೆ ಎಂದು ಹಾಡುತ್ತಾ ಮನೆ ಕಡೆಗೆ ಹೊರಟೆ. ನನ್ನ ಮಡದಿ ನಗುತ್ತ ಕರೆದರೆ ಏನೋ ಒಂದು ದೊಡ್ಡ ಬಜೆಟ್ ಮಂಡನೆ ಇರುತ್ತೆ ನಮ್ಮ ಮನೇಲಿ ಎಂದು ಅರ್ಥ. ಮನೆ ತಲುಪಿದ್ದೆ. ಮನೆಗೆ ನಮ್ಮ ಎದಿರು ಮನೆ ಶ್ಯಾಮ್ ರಾಯರ ಅಳಿಯನ ಹೆಂಡತಿ ಬಂದಿದ್ದಳು. ತುಂಬಾ ಒಡವೆಗಳನ್ನು ತಂದು ತೋರಿಸುತ್ತಾ ಇದ್ದಳು. ಇದರ ಗೊಡವೆ ಬೇಡ ಎಂದು ನಾನು ಬೇರೆ ರೂಂಗೆ ಹೋದೆ. ರೀsss ಎಂದು ಕರೆದು. ಈ ನೆಕ್ಕ್ಲೆಸ್ ಎಷ್ಟು ಚೆನ್ನಾಗಿ ಇದೆ ಅಲ್ರೀ ಎಂದಳು ನನ್ನ ಮಡದಿ. ತುಂಬಾ ಚೆನ್ನಾಗಿದೆ ಎಂದೆ. ನನಗು ಒಂದು ಇದೆ ತರಹ ಇರುವ ನೆಕ್ಕ್ಲಸ್ ಕೊಡಿಸಿ ಎಂದು ಅರ್ಜಿ ಗುಜರಾಯಿಸಿದಳು. ನಾನು ನೋಡೋಣ ಎಂದು ಹೇಳಿದೆ. ಚಿನ್ನದ ಬೆಲೆ ಗಗನಕ್ಕೆ ಏರಿದೆ ಎಂದು ಗೊತ್ತಿದ್ದರು, ಈ ಹೆಣ್ಣು ಮಕ್ಕಳು ಆಕಾಶಕ್ಕೆ ಏಣಿ ಹಾಕುವುದನ್ನು ಬಿಡುವುದಿಲ್ಲ ಎಂದು ಮನಸಿನಲ್ಲೇ ಅಂದುಕೊಂಡೆ. ನಮ್ಮ ಯಜಮಾನರು ಒಂದು ಕಾಸಿನ ಸರ ಮಾಡಿಸಿದ್ದರು ೬ ವರ್ಷದ ಹಿಂದೆ, ಅದನ್ನು ಪಾಲಿಷ್ ಮಾಡಲು ಕೊಟ್ಟಿದ್ದೇನೆ ಎಂದಳು ನನ್ನ ಮಡದಿ. ಮದುವೆ ಆಗಿ ಇನ್ನೂ ಐದು ವರ್ಷ ಆಗಿಲ್ಲ ಆರು ವರ್ಷದ ಹಿಂದೆ ನಾನು ಏನು? ಕೊಟ್ಟಿದ್ದೆ ಎಂದು ಪೇಚಿಗೆ ಬಿದ್ದೆ. ಏನ್ರೀ ಎರಡು ತಿಂಗಳು ಆಯಿತು ಅದನ್ನು ಕ್ಲೀನ್ ಮಾಡಲು ಕೊಟ್ಟು ತೆಗೆದುಕೊಂಡು ಬನ್ನಿ ಎಂದಳು ನನ್ನ ಮಡದಿ. ಆಯಿತು ಎಂದು ಮತ್ತೆ ಒಳಗಡೆ ಹೋದೆ.

ಮೊಬೈಲ್ ನಲ್ಲಿ ಹಾಡು ಹಚ್ಚಿದೆ. ಈಗ ಟಿ ವಿ ನನಗೆ ಸಿಗುವದು ಕಷ್ಟ ಏಕೆಂದರೆ ತನ್ನ ಗಂಡನ ಎಲ್ಲಾ ಧಾರಾವಾಹಿಗಳನ್ನು ನನ್ನ ಮಡದಿಗೆ ಶ್ಯಾಮ್ ರಾಯರ ಅಳಿಯನ ಹೆಂಡತಿ ತೋರಿಸುತ್ತಾಳೆ. ಅದೇ ನನಗೆ ತುಂಬಾ ಇಷ್ಟವಾದ ಹಾಡು. ಅದ್ಯಾಕೋ ಗೊತ್ತಿಲ್ಲ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಹಾಡು ಎಂದರೆ ನನಗೆ ತುಂಬಾ ಇಷ್ಟ. ಅದನ್ನು ನಾನು ಅರ್ಥ ಮಾಡಿಕೊಳ್ಳುವ ರೀತಿ ಮಾತ್ರ ಬೇರೆ.. ಬೇರೆ ..

ಹೆಂಡತಿ ಯಾವತ್ತೂ ಒಬ್ಬಳೇ ಮನೆಯಲ್ಲಿ ಇರಬೇಕು ಇಲ್ಲ ಎಂದರೆ ಅಧೋಗತಿ. ತಪ್ಪು ತಿಳೀಬೇಡಿ ಅಕ್ಕ ಪಕ್ಕದವರ ಜೊತೆ ಇದ್ದರೆ ಎಂಬ ಅರ್ಥದಲ್ಲಿ ಹೇಳಿದ್ದು. ನೀವೇನೂ ಎರಡು ಮೂರು ಎಂಬ ಅರ್ಥದಲ್ಲಿ ಎಂದು ತಿಳೀದಿರೋ... ಅಲ್ಲಿ ನಡೆಯುವ ಚರ್ಚೆ ಸೀರೆ ಮತ್ತು ಒಡವೆಗಳ ಬಗ್ಗೆ ಇರುತ್ತೆ. ಇಲ್ಲದ ಒಡವೆಗಳನ್ನು ಇದೆ ಎಂದು ಸಾಧಿಸುವ ಮತ್ತು ಒಂದಕ್ಕೆ ಎರಡು ಪಟ್ಟು ರೇಟ್ ಏರಿಸುತ್ತಿರುತ್ತಾರೆ. ಅಕ್ಕ ಪಕ್ಕದವರ ಜೊತೆ ಇದ್ದರೆ ಗಂಡನ ಬಗ್ಗೆ ಇಲ್ಲದ ಗೌರವ ಕೂಡ ಸಿಕ್ಕಿರುತ್ತೆ.

ಹೆಂಡತಿಯೊಬ್ಬಳು ಮನೆಯೊಳಗೆ ಇದ್ದರೆ ಸಾಕು ಇಲ್ಲ ಎಂದರೆ, ಹೆಂಡತಿಯೊಬ್ಬಳು ಮನೆ ಹೊರಗೆ ಇದ್ದರೆ ನನಗದೆ ಕೋಟಿ ರುಪಾಯಿ ಖರ್ಚು. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲಾ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನ್ನ ಗೆಳಯರು ಕೂಡ ಮನೆಗೆ ಬರಲು ಹೆದರುತ್ತಾರೆ. ಬಂದರು ಎಣ್ಣೆ ಪಾರ್ಟೀಗೆ ಮಾತ್ರ ಕರಿಯೋದಿಲ್ಲ. ಮತ್ತು ಸಾಲ ಏನಾದರೂ ಕೊಟ್ಟಿದ್ದರು ಕೇಳುವದಿಲ್ಲ. ಮತ್ತು ನಮ್ಮ ಹತ್ತಿರ ಸಾಲ ಕೇಳುವದಿಲ್ಲ.

ಹಾಡು ಮುಗಿಯುತ್ತಿದ್ದಂತೆ ನನ್ನ ಮೂರು ವರ್ಷದ ಸುಪುತ್ರ ಅಮ್ಮ ಒಂದು ಕ್ಯಾಲ್ಶಿಯಮ್ ಗುಳಿಗೆ ಕೊಡು ಎಂದು ಕೇಳಿದ. ಅಪ್ಪ ರೂಮಿನಲ್ಲಿ ಇದ್ದಾರೆ ಅವರ ಹತ್ತಿರ ಕೇಳು ಎಂದು ಹೇಳಿದಳು. ನನ್ನ ಹತ್ತಿರ ಬಂದು ಕೇಳಿದ ನಾನು ಒಂದು ಗುಳಿಗೆ ಕೊಟ್ಟೆ. ಅಪ್ಪ ಉಲ್ಟಾ ಕೊಡುತ್ತಿದ್ದೀಯಲ್ಲ ಎಂದ. ನಾನು ಇದರಲ್ಲಿ ಉಲ್ಟಾ-ಸೀದಾ ಏನು ಇರುತ್ತೆ ಎಂದು ಕೇಳಿದೆ. ಗುಳಿಗೆಯ ಹೆಸರು ಇದ್ದ ಕಡೆ ಮೇಲೆ ಮಾಡಿ ಕೊಡಬೇಕು ಎಂದು ತಾಕಿತ ಮಾಡಿದ, ಆಯಿತು ಮುಂದಿನ ಬಾರಿ ಸರಿಯಾಗಿ ಕೊಡುತ್ತೇನೆ ಎಂದು ಹೇಳಿದೆ. ಅವನ ತಿಳುವಳಿಕೆಗೆ ನಾನು ಪೇಚು ಬಿದ್ದೆ. ಅಷ್ಟರಲ್ಲಿ ಶ್ಯಾಮ್ ರಾಯರ ಅಳಿಯನ ಹೆಂಡತಿ ಮನೆಗೆ ಹೊರಟು ಹೋದಳು. ರೀss ಎಂದು ನನ್ನ ಹೆಂಡತಿ ಉಲಿದಳು. ನಾನು ನನ್ನ ಜೇಬನ್ನು ಒಮ್ಮೆ ಮುಟ್ಟಿಕೊಂಡೆ. ಅಷ್ಟರಲ್ಲಿ ನನ್ನ ಖಾರದ ಕಾರ್ಡ್ ನನ್ನ ನೋಡಿ ನಗುವ ಹಾಗೆ ಅನ್ನಿಸಿತು

Wednesday, October 27, 2010

ಸಿಹಿ ಮೊಗ್ಗೆ ಅರಳಿದಾಗ ....

ಬಳ್ಳಾರಿ ಸುಮಧುರ ನೆನಪಿನೊಂದಿಗೆ(ಬಳುಕುವ ಬಿಂಕದ ಬಳ್ಳಾರಿ ....) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತುಂಬಾ ದಿನಗಳು ಆಗಿತ್ತು. ಅದನ್ನು ತೆಗೆದು ಕೊಂಡು ಬಂದಿದ್ದರು ಎನೂ ಪ್ರಯೋಜನ ಆಗುತ್ತಿರಲಿಲ್ಲ. ಏಕೆಂದರೆ ಅಷ್ಟು ಸುಮಧುರ ಪರಿಮಳ ಸೂಸುತಿತ್ತು. ಆಗ ತಾನೇ ಬೀಳುತ್ತಿದ್ದ ಮಂಜಿನ ಹನಿಗಳು ಮತ್ತು ಚಿಲಿಪಿಲಿ ಕಲರವ ನನಗೆ ಎಬ್ಬಿಸಿತ್ತು. ಎಚ್ಚರವಾದಾಗ ಶಿವಮೊಗ್ಗ ತಲುಪ್ಪಿದ್ದೆ. ಆ ಮಾಗಿಯ ಚಳಿಗೆ ನಾನು ನಡುಗುತ್ತಾ ಒಂದು ಕಪ್ ಕಾಫಿ ಹಿರಿ ಡೈರಿ ಬಸ್ ಹತ್ತಿದೆ.

ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.

ಸುತ್ತಲೂ ತುಂಬಾ ಗಿಡ,ಮರಗಳು ಇದ್ದವು. ಸುಂದರ ಪ್ರಕೃತಿ, ಆದರೆ ಮನೆಯಲ್ಲಿ ಯಾಕೋ ಸ್ವಲ್ಪ ಕೆಟ್ಟ ವಾಸನೆ ಬರುತಿತ್ತು. ಹರ್ಷ ಕ್ಲೀನ್ ಮಾಡಿ ಎಂದು ಹೇಳಿದೆ. ಹರ್ಷ ಎಲ್ಲಿ? ಇದೆ ಸರ್ ವಾಸನೆ ಎಂದರು. ನನಗೆ ಒಬ್ಬನಿಗೆ ವಾಸನೆ ಬರುತಿತ್ತಾ ಅಥವಾ ಅವರು ಆ ವಾಸನೆಗೆ ಹೊಂದಿಕೊಂಡು ಬಿಟ್ಟಿದ್ದರಾ ತಿಳಿಯಲಿಲ್ಲ. ಕೆಲ ಸಮಯದ ನಂತರ ನಾನು ಕೂಡ ಆ ವಾಸನೆ ಹೊಂದಿಕೊಂಡುಬಿಟ್ಟೆ ಎಂದು ಅನ್ನಿಸುತ್ತದೆ.

ಮರುದಿನ ನಮ್ಮ ಡೈರೆಕ್ಟರ್ ಬರುವವರು ಇದ್ದರು. ನಾವು ಅವರು ಬರುವ ಮುಂಚೆ ಎಲ್ಲಾ ಕೆಲಸ ಮುಗಿಸಬೇಕಿತ್ತು. ನಾವು ಮೊದಲು ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡುವುದಿತ್ತು, ನಿನ್ನೆ ಅದನ್ನು ಮಾಡಿ ಆಗಿತ್ತು. ಆದರೆ ಸೇಲ್ಸ್ ಸ್ಟೇಟ್ಮೆಂಟ್ ಕರೆಕ್ಟ್ ಇಲ್ಲ ಎಂದು ಮಂಜುನಾಥನಿಗೆ ಬೈಯುತ್ತಾ ಇದ್ದರು. ಅದನ್ನು ನಿಮ್ಮ ಕಂಪನೀಯವರೇ ಕೊಡಬೇಕು ಎಂದು ಹೆದರಿಸುತ್ತಾ ಇದ್ದರು. ನಾನು ಹೋಗಿ ಅದನ್ನು ಸರಿಪಡಿಸಿದೆ. ಮಂಜುನಾಥ ತುಂಬಾ ಹೆದರಿದ್ದರು. ಡೇಲೀ ಅಕೌಂಟ್ ಸರಿಪಡಿಸಿದ ಮೇಲೆ ಅಕೌಂಟ್ ಸ್ಟೇಟ್ಮೆಂಟ್ ನಲ್ಲಿ ದುಡ್ಡು ಹೆಚ್ಚಿಗೆ ಬಂದಿತ್ತು. ಅದನ್ನು ನೀವು ನಮಗೆ ಕೊಡಬೇಕು ಎಂದು ನಾನು ದಬಾಯಿಸಿದಾಗ ಸುಮ್ಮನೇ ದಾರಿಗೆ ಬಂದಿದ್ದರು. ಮಂಜುನಾಥ್ ನೌಕರಿ ಬಿಡುವೆ ನನಗೆ ಈ ಜಂಜಾಟ ಸಾಕು ಎಂದು ಮನೆಗೆ ಹೊರಟು ನಿಂತಿದ್ದ. ನಾನು ಅವನಿಗೆ ಇದು ಎಲ್ಲಾ ಸರ್ವೇ ಸಾಮಾನ್ಯ ಎಂದು ಅವನಿಗೆ ತಿಳಿಹೇಳಿದೆ. ಕಡೆಗೆ ಮಂಜುನಾಥ್ ಒಪ್ಪಿಕೊಂಡರು.

ನಾವೆಲ್ಲರೂ ಸೇರಿ ಸಂಜೆಗೆ ಭದ್ರಾವತಿಯಲ್ಲಿ ಇರುವ ಶ್ರೀ ಲಕ್ಷೀ ನರಸಿಂಹ ದೇವಸ್ಥಾನಕ್ಕೆ ಹೋದೆವು. ಬರುವಾಗ ನೀರದೋಸೆ ತಿಂದು ಬಂದೆವು.

ಮರುದಿನ ಬೆಳಿಗ್ಗೆ ನಮ್ಮ ಡೈರೆಕ್ಟರ್ ಬಂದಿದ್ದರು. ಅವರು ನಮಗೆ ಎಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿದೆ ಎಂದು ಕೇಳಿದರು. ನಾವು ಬರಿ ಮಾರ್ಕೆಟಿಂಗ್ ಎಂದಾಗ, ಏನು? ಬರೀ ಮಾರ್ಕೆಟಿಂಗ್ ಮತ್ತೆ ಉಳಿದ ಡಿಪಾರ್ಟ್‌ಮೆಂಟ್ ಎಂದಾಗ. ನಾನು ಅವರು ತಮ್ಮ ಹಳೆಯ ಸಿಸ್ಟಮ್ ಬಿಟ್ಟು ನಮ್ಮ ಸಾಫ್ಟ್‌ವೇರ್ಗೆ ಹೊಂದಿಕೊಳ್ಳುತ್ತಿಲ್ಲ ಎಂದಾಗ. ನೀವು ಅವರಿಗೆ ನಮ್ಮ ಸಾಫ್ಟ್‌ವೇರ್ ರುಚಿ ಹಚ್ಚಿಸಬೇಕು(If you want to eat frog, first put it in water and let it swim, afterwards put fire in the down.) ಎಂದು ಹೇಳಿದರು. ನೀವು ಹೀಗೆ ಆದರೆ ಸಂಡೆ ಕೂಡ ಕೆಲಸ ಮಾಡಬೇಕು ಎಂದರು. ಅದಕ್ಕೆ ಹರ್ಷ ಸಂಡೆ ಸರ್ ಎಂದ. ಅದಕ್ಕೆ ನಮ್ಮ ಕಂಪನೀ ಪಾಲಿಸೀ ಏನು ಗೊತ್ತಾ ನಿಮಗೆ Every day is sunday, But sunday is working day ಎಂದು ಹೇಳಿದರು. ನಾವು ತಿಂಡಿಗೆ ಹೊರಡುತ್ತಲಿದ್ದೆವು, ಆಗ ಡೇರೀ ಮ್ಯಾನೇಜರ್ ಭೇಟಿ ಆಯಿತು. ಅವರ ಕ್ಷೇಮ ಸಮಾಚಾರ ಆದ ಮೇಲೆ ಅವರನ್ನು ತಿಂಡಿಗೆ ಆಹ್ವಾನಿಸಿದೇವು. ಅವರು "ನಾನು ರಾಗಾಡ ಅನ್ನ" ತಿಂದು ಬಂದಿದ್ದೇನೆ ಎಂದು ರಾಗದಲ್ಲಿ ಹೇಳಿದರು. ನನಗೆ ಮತ್ತು ನಮ್ಮ ಡೈರೆಕ್ಟರ್ ಗೆ ಅರ್ಥ ಆಗಲಿಲ್ಲ. ಒಬ್ಬರನ್ನೊಬ್ಬರು ಮುಖ ಮುಖ ನೊಡಿಕೊಂಡೆವು. ಅವರು ಹೋದ ನಂತರ ಹರ್ಷನಿಗೆ ಕೇಳಿದಾಗ ನಮಗೆ ತಿಳಿದಿತ್ತು ಅದು ರಾಗಾಡ ಅಲ್ಲ ರಗಡ(ಬೇಜಾನ) ಎಂದು. ಎಲ್ಲರೂಅದು ಕೇಳಿದ ನಂತರ ನಗೆಯಲ್ಲಿ ತೇಲಿದ್ದೆವು.

ಮೀಟಿಂಗ್ ನಲ್ಲಿ ಒಂದು ತಿಂಗಳಲ್ಲಿ ಎರಡು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಬೇಕು ಎಂದು ಹೇಳಿದರು. ನನ್ನ ಠಿಕಾಣಿ ಇನ್ನೂ ಒಂದು ವಾರ ಹೆಚ್ಚು ಆಯಿತು. ನಮ್ಮ ಡೈರೆಕ್ಟರ್ ಊರಿಗೆ ಹೊರಟು ಹೋದರು. ನಾನು ಹರ್ಷ ಮತ್ತು ಮಂಜನಾಥ ಮಲಗಿ ಕೊಂಡಿದ್ದೆವು. ಏನೋ ಕಟ್ ಕಟ್ ಶಬ್ದ ನಾನು ಸುಮ್ಮನೇ ಹಾಗೆ ಹೆದರಿ ಚಾದರ್ ಹೊದ್ದಿಕೊಂಡು ಮಲಗಿ ಬಿಟ್ಟೆ. ಮುಂಜಾನೆ ಎದ್ದು ಏನು? ಆ ಶಬ್ದ ಎಂದು ಹರ್ಷನಿಗೆ ಕೇಳಿದೆ. ಅದು ಹುಳಗಳು ಸರ್ ಎಂದ.ಮಂಜುನಾಥ ಅಗಲೆ ಎದ್ದು ಆಫೀಸ್ ಹೊರಟು ನಿಂತಿದ್ದರು. ನಾನು ಮತ್ತೆ ಹರ್ಷ ರೆಡೀ ಆಗಿ ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಗೆ ಹೋದೆವು. ಮಂಜುನಾಥ ಅಲ್ಲೇ ಒಂದು ರಿಪೋರ್ಟ್ ಮಾಡುತ್ತಲಿದ್ದರು. ಇವರು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ನಲ್ಲಿ ಕೊಡುವ ಮಜ್ಜಿಗೆ, ಪೇಡ ಅಥವಾ ಮೈಸೂರು ಪಾಕ ಸಲುವಾಗಿ ಎಂದು ತಿಳಿದಿದ್ದೆವು. ಆದರೆ ಅವರು ಅಲ್ಲಿ ಹೋಗುತ್ತಾ ಇದ್ದಿದ್ದು ಒಂದು ಸಿಹಿ ಮೊಗವನ್ನು ಸವಿಯಲು ಎಂದು ಆಮೇಲೆ ತಿಳಿಯಿತು. ಎಲ್ಲಕಿಂತ ಮೊದಲು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿತ್ತು. ಸಿಹಿ ಮೊಗದ ಹಿಂದಿನ ಪವಾಡ ಕೆಲಸ ಮಾಡಿತ್ತು.

ಟೀಮ್ ಲೀಡರ್ ಆದ ನನಗೆ ಇದರಿಂದ ಶಹಭಾಷ್ ಗಿರಿ ಸಿಕ್ಕಿತ್ತು. ಮತ್ತೆ ಪ್ರೊಕ್ಯೂರ್ಮೆಂಟ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿದೆವು. ನಮ್ಮ ಕೆಲಸ ನೋಡಿ ಖುಷಿಯಾದ ಡೇರೀ ಯಲ್ಲಿರುವ ಅಷ್ಟು ಡಿಪಾರ್ಟ್‌ಮೆಂಟ್ ನವರು ನಮ್ಮದು ಮುಂದೆ ತಮ್ಮದು ಮುಂದೆ ಎಂದು ನಮ್ಮ ಮುಂದೆ ಕ್ಯೂ ನಿಂತಿದ್ದರು.ಎರಡೇ ತಿಂಗಳಲ್ಲಿ ಅಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿ ಆಗಿತ್ತು. ಅಷ್ಟರಲ್ಲಿ ಮಂಜುನಾಥ ಬೆಂಗಳೂರು ಬಂದು ಸೇರಿದ. ಕೆಲ ದಿನಗಳು ಆದ ಮೇಲೆ ಸಿಹಿ ಮೊಗದ ಚೆಲುವೆಯನ್ನು ಸೆಕ್ಯೂರಿಟೀ ಆಫೀಸರ್ ಮದುವೆ ಕೊಂಡಿದ್ದ. ಮಂಜುನಾಥನಿಗೆ ಇದನ್ನು ಹೇಳಿದಾಗ ತುಂಬಾ ನೊಂದುಕೊಂಡಿದ್ದ. ಏಕೆಂದರೆ ಅವಳಿಗೆ ಮೊದಲೇ ಮದುವೆ ಫಿಕ್ಸ್ ಆಗಿದೆ ಎಂದು ಅಲ್ಲಿಯೇ ಕೆಲಸ ಮಾಡುವ ಶ್ರೀನಿವಾಸ್ ಹೇಳಿದ್ದ. ಶ್ರೀನಿವಾಸ್ ಮದುವೆ ಫಿಕ್ಸ್ ಆಗಿದೆ ಎಂದು ಎಲ್ಲರಲ್ಲಿಯೂ ಹೇಳಿದ್ದ. ಏಕೆಂದರೆ ಅವನಿಗೆ ಅವಳ ಮೇಲೆ ಮನಸ್ಸಿತ್ತು. ಇದು ಶ್ರೀನಿವಾಸ್ ಮಾಡಿದ ಪ್ಲಾನ್.

ಕೆಲಸ ಮುಗಿದ ಮೇಲೆ ನಾನು ಧಾರವಾಡಕ್ಕೆ ಹೊರಟಿದ್ದೆ. ಆಗ ನನಗೆ ಬಸ್ ಸ್ಟ್ಯಾಂಡ್ ವರೆಗೂ ಕಳುಹಿಸಲು ಹರ್ಷ ಬಂದಿದ್ದರು. ಹರ್ಷಗೇ ನಾನು ಬಸ್ ಹತ್ತಿದ ಮೇಲೆ ಬೈ.. ಬೈ.. ಎಂದೆ. ನನ್ನ ಪಕ್ಕದಲ್ಲಿ ಇದ್ದ ಮನುಷ್ಯ ಕುಡಿದು ಬಂದಿದ್ದ. ರೀ ಕನ್ನಡದಲ್ಲಿ ಮಾತನಾಡಿ ಎಂದು ಅಂದ. ನಾನು ಬಾಯೀ ತಪ್ಪಿ ಸಾರೀ ಎಂದೆ. ಮತ್ತೆ ಸುಧಾರಿಸಿ ಕ್ಷಮಿಸಿ ಎಂದು ಹೇಳುವಷ್ಟರಲ್ಲೇ, ಆಯಿತು ಬಿಡಿ ಸಾರೀ ಹೇಳಿದಿರಲ್ಲ ಎಂದ.

ಕಡೆಗೆ ಇದಾದ ಮೂರೇ ತಿಂಗಳಲ್ಲಿ ನಾನು ಕೂಡ ಬೆಂಗಳೂರು ಸೇರಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು, ತಮಾಷೆಗಳು ಎಲ್ಲವೂ ಮನಸಿಗೆ ಮುದನೀಡುತ್ತವೆ.

Monday, October 11, 2010

ಸೀರೆಯಲ್ಲಿರುವ ನೀರೆ ....

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ) ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ.

ನಾನು ರಾಜ್ಯದ ರಾಜಕೀಯ ವರ್ತಮಾನ ನೋಡುತ್ತಿರಬಹುದು ಎಂದು ಸುಮ್ಮನಿದ್ದೆ. ರೀsss ಬನ್ನಿ ಇಲ್ಲಿ ಎಂದು ಉಲಿದಳು. ನೋಡಿ ಇದು ಏನು ಸಕ್ಕತ್ತಾಗಿದೆ, ಎಂದು ಸೀರೆ ಜಾಹೀರಾತು ತೋರಿಸಿದಳು. ಆಹಾss ಎಂದು ಬಾಯಿ ತೆಗೆದು, ತುಂಬಾ ಸಕ್ಕತ ಆಗಿದ್ದಾಳೆ ಕಣೆ ಎಂದೆ.ರೀ ನಾನು ಹೇಳಿದ್ದು ಸೀರೆ ಬಗ್ಗೆ ಎಂದಳು. ಓsss ನಾನೆಲ್ಲೋ ಸೀರೆಯಲ್ಲಿರುವ ನೀರೆ ಬಗ್ಗೆ ಎಂದುಕೊಂಡೆ ಎಂದೆ. ಸದಾಶಿವನಿಗೆ ಅದೇ ಧ್ಯಾನ ಎಂದು ಅಂದಳು. ನೀವು ನೋಡಿ ತಂದಿದ್ದೀರ ಸೀರೆ, ಈ ತರಹ ಸೀರೆ ಕೊಡಿಸಬೇಕು ಎಂದಳು. ನಾನೇನೋ ತೆಗೆದುಕೊಂಡು ಬರುತ್ತೇನೆ ಕೊಡಲು ಅವಳು ತಯ್ಯಾರ ಇರಬೇಕಲ್ಲ ಎಂದೆ. ಇದೊಂದು ಕಮ್ಮಿ ಆಗಿತ್ತು ನಿಮಗೆ ಎಂದಳು. ರೀ ನಾನೊಂದು ಬ್ಲೌಸ್ ಹೊಲಸಿದ್ದೇನೆ. ಅದಕ್ಕೆ ಮ್ಯಾಚಿಂಗ್ ಒಂದು ಸೀರೆ ಕೊಡಿಸಿ ಎಂದಳು. ಲೇss ನಮ್ಮ ಕಂಪನೀ ಸಂಬಳ ಜೊತೆ ಬೋನಸ್ ಪ್ರತಿ ತಿಂಗಳು ಕೊಟ್ಟರೆ ಗ್ಯಾರಂಟೀ ಕೊಡಿಸುತ್ತೇನೆ ಎಂದೆ. ತುಂಬಾ ಕೋಪ ಮಾಡಿಕೊಂಡು ಬಿಟ್ಟಳು.

ಅದೇನೋ ಗೊತ್ತಿಲ್ಲ, ನನ್ನ ಹೆಂಡತಿ ಮಾತ್ರ ಪ್ರತಿಬಾರಿ ಗಾಂಧಿ ಬಜಾರ್ ಹೋದಾಗ ಸೀರೆ ಅಂಗಡಿಗಳಿಗೆ ಲಗ್ಗೆ ಇಡುತ್ತಾಳೆ. ಆ ಸೀರೆ ಅಂಗಡಿ ಮಾಲೀಕ ಎಷ್ಟು ಪರಿಚಯ ಆಗಿಬಿಟ್ಟಿದ್ದಾನೆ ಎಂದರೆ ದುಡ್ಡು ಇಲ್ಲ ಎಂದರು "ಸರ್ ನಿಮ್ಮ ಉದ್ರೀ ಕಾರ್ಡ್(Credit Card) ಇದೆ ಅಲ್ಲ ಸಾರ್" ಎಂದು ಬಾಯಿತೆಗೆದು ಜೋರಾಗಿ ನಕ್ಕೂ ಸೀರೆ ಕೊಡುತ್ತಾನೆ.

ಮಗ ಟಿವಿ ನೋಡುತ್ತಾ ಕುಳಿತಿದ್ದ. ನನ್ನ ಮಡದಿ ಊರಗೆ ಹೋಗವ ಸಲುವಾಗಿ ಪ್ಯಾಕಿಂಗ್ ನಡೆಸಿದ್ದಳು. ನಾನು ಏನೇ ಇದು ಹೋಗುವದು ನಾಲ್ಕು ದಿವಸಕ್ಕೆ, ಇಷ್ಟೊಂದು ಸೀರೆ ತೆಗೆದುಕೊಂಡು ಹೊರಟಿದ್ದೀಯ? ಎಂದೆ, ರೀ, ಇವು ನಮ್ಮ ಮನೇಲಿ ತೋರಿಸೋಕೆ ಎಂದು ತೆಗೆದುಕೊಂಡು ಹೊರಟಿದ್ದೇನೆ ಎಂದಳು. ನಾನೆಲ್ಲೋ ಒಂದು ಘಂಟೆಗೆ ಒಂದು ಎಂಬ ಲೆಕ್ಕದಲ್ಲಿ ತೆಗೆದುಕೊಂಡು ಹೊರಟಿರುವೆ ಎಂದು ತಿಳಿದುಕೊಂಡಿದ್ದೆ ಎಂದೆ.

ಅಷ್ಟರಲ್ಲಿ ನಮ್ಮ ಮೂರು ವರ್ಷದ ಸುಪುತ್ರ ಎದ್ದು ಬಂದು ಅಪ್ಪ ರಮೇಶ್ - ಸುರೇಶ್ (ಫೈವ್ ಸ್ಟಾರ್) ಜಾಹೀರಾತು ಮಾಡೋಣ ಬಾ ಎಂದ. ನಾನು ರಮೇಶ್ ಎಂದರೆ, ಅವನು ಸುರೇಶ್ ಅನ್ನುತ್ತಾನೆ. ನಾನು ರಮೇಶ್ ಎಂದೆ, ಅವ ತೊದಲಿ ತುರೇಶ್ ಎಂದು ಅಪ್ಪಿಕೊಂಡ. ನನ್ನ ಮಡದಿ ಗಹ ಗಹಿಸಿ ನಗುತ್ತಾ, ತುರೇಶ್ ಅಲ್ಲ ಕಣೋ ಅದು ಸುರೇಶ್ ಎಂದಳು. ಅವಳು ಸುರೇಶ್ ಎಂದರೂ, ನನಗೆ ಅದೇಕೋ "ಸೀರೆ ತಾ" ಅಂದ ಹಾಗೆ ಕೇಳಿಸೋದು.

ಹೋಗುವ ಸಮಯದಲ್ಲಿ "ಬೇರೆ ಬಾಡಿಗೆ ಮನೆ ನೋಡಿ" ಎಂದು ಹೇಳಿದಳು. ಈಗ ಇರುವ ಮನೆಗೆ ಏನು? ಆಗಿದೆಯೇ ಎಂದೆ. ಬಾತ್‌ರೂಮ್ ಮತ್ತು ಟಾಯ್ಲೆಟ್ ಒಂದೇ ಕಡೆ ಇದೆ ಅಲ್ಲ ಎಂದಳು. ಅದಕ್ಕೆನೀಗ ಎಂದೆ. ಎರಡು ಒಂದ ಕಡೆ ಇದ್ದರೆ ತೊಂದರೆ ಆಗುವದಿಲ್ಲವ ಎಂದಳು. ಮತ್ತೆ ವಾಸ್ತು ಚೆನ್ನಾಗಿ ಇದೆಯಲ್ಲ ಎಂದೆ. ವಾಸ್ತು ಇದೆ, ಎಂದು ಮನೆಯಲ್ಲಿ ಇದ್ದರೆ ಮನೆ ಹವಾಮಾನ ಕೆಡುತ್ತೆ ಎಂದಳು. ಇಬ್ಬರು ನಕ್ಕೆವು. ನಮ್ಮಿಬ್ಬರನ್ನೂ ನೋಡಿ ನಮ್ಮ ಮಗ ಕೂಡ ಮುಗುಳ್ನಗೆ ಬೀರಿದ. ಅದೇ ನಮ್ಮ ಊರಲ್ಲಿ ನೋಡಿ ಎಲ್ಲ ಸೆಪರೇಟ್ ..ಸೆಪರೇಟ್.. ಆಗಿ ಇರುತ್ತೆ ಎಂದಳು. ನಿಮ್ಮ ಊರ ಏನು? ದೊಡ್ಡ ಸಿಂಗಪೂರ?, ನಿಮ್ಮ ಊರಲ್ಲಿ ಒಂದು ಹೇರಿಗೆ ಆಸ್ಪತ್ರೆ ಕೂಡ ಇಲ್ಲ ಎಂದೆ. ಯಾಕೆ? ಬೇಕು ಆಸ್ಪತ್ರೆ ನಮ್ಮ ಊರಲ್ಲಿ ರೋಡೇss ಸರಿ ಇಲ್ಲ. ಆಸ್ಪತ್ರೆಗೆ ಹೋಗುತ್ತಾ.. ಹೋಗುತ್ತಾ ..ಎಲ್ಲ ಮುಗಿದೆ ಹೋಗಿರುತ್ತೆ ಎಂದು ಗಹ ಗಹಿಸಿ ನಕ್ಕಳು.

ಅವರನ್ನು ಬಸ್ ಹತ್ತಿಸಿ, ಮನೆಗೆ ಬರುವ ದಾರಿಯಲ್ಲಿ ಬಜ್ಜಿ, ಬೋಂಡ ತಿಂದು, ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಬಂದೆ. ಅವಳು ಇದ್ದರೆ, ಬರಿ ಎಣ್ಣೆ ಪದಾರ್ಥ ತಿನ್ನುತ್ತೀರ ಎಂದು ಬೈದಿರೋಳು. ಮನೆಗೆ ಬಂದೊಡನೆ ಅದೇಕೋ ಮನಸೆಲ್ಲ ಭಾರವಾದ ಹಾಗೆ ಅನ್ನಿಸಿತು. ಮನೆಯಲ್ಲಿ ಮಗನ ಚೀರಾಟ, ತುಂಟಾಟ, ಅವಳ ನಗು,ಮಾತು, ಜಗಳ, ಬೇಸರ ಮತ್ತು ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ, ಘಮ ಘಮಿಸುವ ಅಡುಗೆ ವಾಸನೆ ಎಲ್ಲವೂ ಮಾಯವಾಗಿತ್ತು. ಎಲ್ಲವನ್ನು ಯೋಚಿಸುತ್ತಾ ಒಬ್ಬನೇ ಫ್ರಿಡ್ಜ್ ನಲ್ಲಿ ಇರುವ ಊಟ ಮುಗಿಸಿ ನಿದ್ದೆಗೆ ಜಾರಿದೆ.

ಎದ್ದೊಡನೆ ಲೇ ಕಾಫೀ ಎಂದೆ. ಎಲ್ಲಿ ಬರಬೇಕು ಕಾಫೀ... ಅವಳೇ ಇಲ್ಲ. ಮತ್ತೆ ಫೋನ್ ರಿಂಗ್ ಆಯಿತು. ರೀ ಮನೆಗೆ ಬಂದು ಮುಟ್ಟಿದ್ದೇನೆ ಎಂದಳು. ಮೊನ್ನೆ ಮಾಡಿದ ಕಾಫೀ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಬಿಸಿ ಮಾಡಿ ಕುಡಿಯಿರಿ ಎಂದು ಕುಹಕ ಮಾತಿನೊಂದಿಗೆ ಫೋನ್ ಕಟ್ ಮಾಡಿದಳು. ನಾನೇ ಅಡುಗೆ ಮನೆ ಎಂಬ ಗುಹೆಗೆ ಈ ಬಾರಿ ಬಲಗಾಲಿಟ್ಟು (ಎಡಗಾಲಿಟ್ಟು ಪ್ರವೇಶಿಸಿದಾಗ ಆದ ಪ್ರತಾಪ ನಿಮಗೆ ಗೊತ್ತೇ ಇದೆ.ನಳ ಪಾಕ್ .... :)) ಹೋಗಿ ಕಾಫೀ... ಕ್ಷಮಿಸಿ ಚಹಾ ಮಾಡಿಕೊಂಡು ಬಂದು ಹೀರಿದೆ.

Thursday, October 7, 2010

ತಲೆ ಹರಟೆ ಶ್ಯಾಮ್ ರಾಯರು....

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ, ಅಥವಾ ಬೇರೆ ಮತ್ಯಾರಿಗೋ ಎಂದು ಹಿಂದೆ ನೋಡಿದೆ. ಯಾರು ಇಲ್ಲ. ನಾನೇ ಎಂದು ಖಾತರಿ ಆದ ಮೇಲೆ, ಏನು ಕಾಣಬೇಕಿತ್ತು ರಾಯರೆ ಎಂದೆ. ತುಂಬಾ ತಲೆ ತಿನ್ನೋ ಮನುಷ್ಯ. ಇದೆ ಡೈಲಾಗ್ ಏನಾದರೂ ನನ್ನ ಗೆಳೆಯರ ಸಂಗಡ ಆಗಿದ್ದರೆ, ಸಕ್ಕತ್ ತಮಾಷೆ ಆಗಿರೋದು. ಒಂದು ತರಹ ಕಾಶೀನಾಥ ಫಿಲ್ಮ್ ಡೈಲಾಗ್ ತರಹ. ಬೇಕಾದರೆ ಇನ್ನೊಮ್ಮೆ ಮೊದಲಿನಿಂದ ಓದಿ ನೋಡಿ.

ಮದುವೆ ಆಗಿಲ್ಲ. ಅದಕ್ಕೆ ಇರಬೇಕು ಅಷ್ಟು ಫ್ರೀ ಆಗಿ ಇರುತ್ತಾರೆ. ಯಾರಾದರೂ ಹರಟೆಗೆ ಸಿಕ್ಕರೆ ಸಾಕು ಎನ್ನುವಂತ ಪ್ರಾಣಿ. ಆದರೆ ಹೇಳುವದು ಕೂಡ ಪೂರ್ತಿ ಇರಲ್ಲ. ನಾನು ಸ್ವಲ್ಪ ಫ್ರೀ ಇದ್ದೇ. ಏಕೆಂದರೆ ಮಡದಿ ತವರು ಮನೆಗೆ ಹೋಗಿದ್ದಳು.

ನಿಮಗೆ ನಮ್ಮ ಅಳಿಯ ರೋಹಿತ್ ಗೊತ್ತಾ? ಎಂದರು.
ಇಲ್ಲ ಎಂದೆ.
ಏನು ಡೆಲಿವರೀ ಮಾಡುತ್ತಾನೆ ಗೊತ್ತಾ? ಎಂದರು.
ಓ ಹೇರಿಗೆ ಡಾಕ್ಟರ್ರಾ? ಎಂದೆ.
ಅಲ್ಲ ಕಣ್ರೀ, ಸೀರಿಯಲ್ ಆಕ್ಟರ್. ಏನ್ರೀ ಅವರೇ ಗೊತಿಲ್ಲ ಎಂದರೆ ನಿಮ್ಮ ಜೊತೆ ಮಾತನಾಡುವುದೆ ವೇಸ್ಟ್ ಎಂದರು.
ಸರಿ ಬಿಡಿ ನಾನು ಬರುತ್ತೇನೆ ಎಂದೆ.
ರೀ, ತಡಿರಿ, ಸಕ್ಕತ್ ಡೈಲಾಗ್ ಡೆಲಿವರೀ ಕಣ್ರೀ ಅವನದೂ ಎಂದು ಮಾತಿಗಿಳಿದರು.
ಆಯಿತಾ? ಎಂದು ಕೇಳಿದರು,
ಏನು ಆಯಿತು? ಎಂದು ಹೇಳಬೇಕು ಊಟನ, ತಿಂಡಿನ? ಮತ್ತಿನೇನೋ ತಿಳಿಯಲಿಲ್ಲ.
ಏನಪ್ಪಾ ಆಗಬೇಕು? ಎಂದಾಗ ಮದುವೆ ಎಂದು ಕೇಳಿದರು.

ಆಗಿದೆ ಎಂದು ಹೇಳಿದೆ. ಎಷ್ಟು ಎಂದು ಕೇಳಿಯಾರು? ಎಂದು, ನಾನೇ ಒಂದು ಮದುವೆ, ಒಂದು ಗಂಡು ಮಗು ಇದೆ ಎಂದು ಹೇಳಿದೆ.
ರೀ, ನನ್ನ ಅಳಿಯನಿಗೆ ಒಂದು ನೋಡಬೇಕು ನೀವು ಬರುತ್ತೀರಾ?. ಜೊತೆಯಾಗುತ್ತೆ ಎಂದರು.
ಏನು? ಸರ್ ಎಂದೆ.
ಹೆಣ್ಣು.. ಸರ್ ಹೆಣ್ಣು.. ನೋಡೋಕೆ ಎಂದರು.
ಒಳ್ಳೇ ಬಿಡಲಾರದ ಕರ್ಮ ಆಯಿತಲ್ಲಾ ಎಂದು ಮನಸಿನಲ್ಲೇ ಅಂದುಕೊಂಡೆ.
ನನಗೆ ತುಂಬಾ ಕೆಲಸ ಇದೆ ನನಗೆ ಬರಲು ಆಗುವದಿಲ್ಲ ಎಂದೆ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದರು. ಹೇಗೂ ನನ್ನ ಮಡದಿ ಊರಲ್ಲಿ ಇಲ್ಲ, ತಿಂಡಿ ಬೇರೆ ಮಾಡಿರಲಿಲ್ಲ ಹೀಗಾಗಿ ಬರುತ್ತೇನೆ ಎಂದೆ. ಆದರೆ ಅವರು ಅಲ್ಲಿ ಹೋದಾಗ ಏನು ಮಾತನಾಡುತ್ತಾರೆ ಎಂಬ ಕಸಿವಿಸಿ ಮನಸ್ಸಿನಲ್ಲಿ ಇದ್ದೇ ಇತ್ತು. ಅವರ ಮನೆಗೆ ಹೋದೆವು. ಹುಡುಗಿಯ ಅಣ್ಣ ನಮಗೆ ಕುಡಿಯಲು ನೀರು ತೆಗೆದುಕೊಂಡು ಬಂದ.
ಹುಡುಗಿಯ ಅಪ್ಪ, ಇವನು ನನ್ನ ಗಂಡಸ ಮಗ ರಾಜು ವಿಪ್ರೋನಲ್ಲಿ ಕೆಲಸ ಮಾಡುತ್ತಾನೆ ಎಂದರು.
ಅಷ್ಟರಲ್ಲಿ ಶ್ಯಾಮ್ ರಾಯರು, ಇವನು ಗಂಡಸು ಮಗಾನಾ? ಎಂದು ಬಿಡಬೇಕೆ.
ನನಗೆ ಕುಡಿದ ಗುಟುಕು ನೀರು ನೆತ್ತಿಗೆ ಹತ್ತುವ ಹಾಗೆ ಜೋರಾಗಿ ನಗು ಬಂದು ಬಿಟ್ಟಿತು.

ಹುಡುಗಿಯ ಅಮ್ಮ ನಮಗೆ ಉಪ್ಪಿಟ್ಟು ಮತ್ತು ಜಿಲೇಬಿ ತಂದು ಕೊಟ್ಟರು. ಹುಡುಗಿ ಅಪ್ಪ ತನ್ನ ಮಡದಿಗೆ ಇನ್ನೂ ಸ್ವಲ್ಪ ಜಿಲೇಬಿ ಹಾಕು ಎಂದು ಹೇಳಿದರು. ಜಿಲೇಬಿ ತುಂಬಾ.. ತುಂಬಾ.. ಚೆನ್ನಾಗಿತ್ತು. ಹೇಗಾದರೂ ಹಾಕಿ ಎಂದು ಹೇಳಿದ್ದಾರೆ, ಐದು ಜಿಲೇಬಿನಾದರೂ ತಿನ್ನಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ದೆ. ಜೆಲೇಬಿ ಹಾಕುವಾಗ ನಮ್ಮ ಶ್ಯಾಮ್ ರಾಯರು ನನಗೆ ಬೇಡ... ಬೇಡ... ಎಂದು ಕೈ ಅಡ್ಡ ತಂದರು. ನನಗೆ ಶ್ಯಾಮ್ ರಾಯರ ಮೇಲೆ ಸಕ್ಕತ್ ಕೋಪ ಬಂದಿತ್ತು. ಏಕೆಂದರೆ, ಕೈ ಅಡ್ಡ ತಂದಿದ್ದು ನನ್ನ ಪ್ಲೇಟ್ ಮೇಲೆ. ಶ್ಯಾಮ್ ರಾಯರ ಪ್ಲೇಟ್ ಗೆ ಎರಡು ಜೆಲೇಬಿ ಹಾಕಿ ಹುಡುಗಿ ಅಮ್ಮ ಹೋಗಿಬಿಟ್ಟರು. ಹೇಗಿದ್ದರು ಬೇಡ ಎಂದಿದ್ದಾರೆ. ನನಗೆ ಕೊಡಬಹುದು ಎಂದು ಯೋಚನೆ ಮಾಡುತ್ತಿದ್ದರೆ, ಆಸಾಮಿ ಅದನ್ನು ತಿಂದು, ಜೆಲೇಬಿ ತುಂಬಾ ಚೆನ್ನಾಗಿವೆ ಎಂದು ಹೊಗಳಿ, ಎರಡು ಜೆಲೇಬಿ ಮನೆಗೆ ಕಟ್ಟಿಸಿಕೊಂಡರು.

ಹಾಗೂ ಹೀಗೂ ಎಲ್ಲ ಶಾಸ್ತ್ರ ಮುಗಿಸಿಕೊಂಡು ಮನೆಗೆ ಬಂದೆವು.

ಮತ್ತೆ ಒಂದು ದಿವಸ ಶ್ಯಾಮ್ ರಾಯರು ನಮ್ಮ ಮನೆಗೆ ಬಂದಿದ್ದರು. ನನ್ನ ಮಡದಿ ಊರಿನಿಂದ ಬಂದಿದ್ದಳು. ಪಾಪ ಹಿರಿಯರು ಬಂದಿದ್ದಾರೆ ಎಂದು, ನಾನು ಬಾಳೆ ಹಣ್ಣನ್ನು ಕೊಡಲು ಹೋದೆ. ನಾನು ಯಾವಾಗಲಾದರೂ ಬಾಳೆ ಹಣ್ಣನ್ನು ತಿನ್ನುವದನ್ನು ನೋಡಿದ್ದೀರಾ? ಎಂದರು. ಇದು ಒಳ್ಳೇ ಕರ್ಮ ಆಯಿತಲ್ಲ ನನಗೆ, ಇವರು ಏನು ತಿನ್ನುತ್ತಾರೆ, ಏನು ಇಲ್ಲ ಎಂದು ನೋಡುವುದು ಎಂದು ಮನಸಿನಲ್ಲೇ ಅಂದುಕೊಂಡೆ. ರೀss ನಿಮಗೆ ಬಾಳೆ ಹಣ್ಣು ಇಷ್ಟ ಇಲ್ಲ ಎಂದು ಮೊದಲೇ ಗೊತ್ತಿದ್ದರೆ, ನಾನೇಕೆ ಅದನ್ನು ನಿಮಗೆ ಕೊಡಲು ಬರುತ್ತಿದ್ದೆ ಎಂದು ಹೇಳಬೇಕು ಅಂದು ಕೊಂಡರು ಹೇಳಲಿಲ್ಲ. ಶ್ಯಾಮ್ ರಾಯರು ನನ್ನ ಮಡದಿಗೆ, ನಿಮಗೆ ಗೊತ್ತಾ, ನಿಮ್ಮ ಮನೆಯವರನ್ನೂ ಕರೆದುಕೊಂಡು ಹೆಣ್ಣು ನೋಡಲು ಹೋಗಿದ್ದೆವು ಎಂದರು. ಮುಂದಿನದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ಅವರ ಫೋನ್ ರಿಂಗ್ ಆಯಿತು. ಮಾತನಾಡುತ್ತಾ ಎದ್ದು ಹೋಗಿಬಿಟ್ಟರು. ಮತ್ತೆ ವಾಪಸ್ ಬರಲೇ ಇಲ್ಲ. ನಾನು ನನ್ನ ಹೆಂಡತಿಗೆ ತಿಳಿ ಹೇಳಿದೆ. ಆದರೆ, ಅದನ್ನು ನಾನು ಅವರ ಬಾಯಿಂದನೆ ಕೇಳಿ, ಆಮೇಲೆ ಖಚಿತ ಪಡಿಸಿಕೊಳ್ಳುತ್ತೇನೆ ಎಂದು ಕೋಪ ಮಾಡಿಕೊಂಡು ಮೌನ ಗೌರಿ ಆಗಿದ್ದಳು. ಹಿರಿಯರು ಹೇಳಿದ್ದಾರೆ "ಮೌನಂ ಸಮ್ಮತಿ ಲಕ್ಷಣಂ" ಅಂತ, ಆದರೆ ನಮ್ಮ ಮನೇಲಿ ಮಾತ್ರ "ಮೌನ ಯುದ್ಧಮ್ ನಿರಂತರಂ". ಅವಳನ್ನು ಒಲಿಸುವ ಸಲುವಾಗಿ "ನಿನ್ನಾ ಸವಿನೆನಪೆ ಮನದಲ್ಲಿ ಆರಾಧನೆ.... ಪ್ರೀತಿಯ ಸವಿಮಾತೆ ಉಪಾಸನೆ" ಎಂದು ಹಾಡಿದೆ. ಅವಳು ಅದೇ ರಾಗದಲ್ಲಿ "ಇಂದು ನಿಮಗೂ ಕೂಡ ಉಪವಾಸನೆ..." ಎಂದು ಹಾಡಿದಳು. ವಾತಾವರಣ ತಿಳಿ ಆಗುವ ಯಾವ ಲಕ್ಷಣ ಕೂಡ ಕಾಣಲಿಲ್ಲ. ಇನ್ನೂ, ನನ್ನನ್ನು ಶ್ಯಾಮ್ ರಾಯರೆ ಕಾಪಾಡಬೇಕು ಎಂದು. "ಕಾಪಾಡು ಶ್ರೀ ಸತ್ಯ ನಾರಾಯಣ..." ಎಂದು ಹಾಡುತ್ತಾ ಶ್ಯಾಮ್ ರಾಯರ ಮನೆ ಕಡೆಗೆ ಹೋದೆ. ಶ್ಯಾಮ್ ರಾಯರ ಮನೆ ಎದುರು ಸಕ್ಕತ್ ಜನ ಜಂಗುಳಿ. ನನಗೆ ಏನಪ್ಪಾ ಬಂತು ಕರ್ಮ. ಶ್ಯಾಮ್ ರಾಯರು .... ಛೇ! ಛೇ! ಹಾಗೆಲ್ಲಾ ಆಗಿರಲಿಕ್ಕಿಲ್ಲ ಎಂದು ಅವರ ಮನೆ ಒಳಗೆ ಹೋದೆ. ಶ್ಯಾಮ್ ರಾಯರ ಅಳಿಯನ ಎಂಗೇಜ್ಮೆಂಟ್ ಇದೆ ಎಂದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟೆ. ಶ್ಯಾಮ್ ರಾಯರು ಮನೆಯವರನ್ನ ಕರೆದುಕೊಂಡು ಬನ್ನಿ ಎಂದು ಹೇಳಿದರು. ಸಕ್ಕತ್ ಖುಶಿಯಿಂದ ಮನೆಗೆ ಬಂದು ನೋಡೇsss ನನ್ನ ಮೇಲೆ ಅನುಮಾನ ಪಡುತ್ತಿದ್ದೆ. ಇವತ್ತು ಅವರ ಅಳಿಯನ ಎಂಗೇಜ್ಮೆಂಟ್ ಕರೆಯುತ್ತಲಿದ್ದಾರೆ ಬಾ ಎಂದೆ.

ಹೋದ ಮೇಲೆ ನನ್ನ ಮಡದಿ "ಇವನ ಎಂಗೇಜ್ಮೆಂಟ್ ಗೆ ಕರೆದು ಕೊಂಡು ಹೋಗಿದ್ದೀರಾ ನಮ್ಮ ಮನೆಯವರನ್ನ" ಎಂದು ಕೇಳಿ ತಿಳಿದ ಮೇಲೆ ನನ್ನ ಮೇಲಿನ ಕೋಪಕ್ಕೆ ತಿಲಾಂಜಲಿ ಹಾಡಿದ್ದಳು .