Monday, September 28, 2009

ತರ್ಲೆ ಮಂಜ(ಗ)ನ ಐಡಿಯಾಗಳು ....

ಒಂದು ದಿವಸ ಶಾಲೆಯಲ್ಲಿ ಕೆಮಿಸ್ಟ್ರಿ ಕ್ಲಾಸ್ ಮುಗಿದ ಮೇಲೆ ಮಾಸ್ತರ ಪ್ರಯೋಗಗಳನ್ನು ತೋರಿಸಲು ಪ್ರಯೋಗಾಲಯಕ್ಕೆ ಕರೆದು ಕೊಂಡು ಹೋಗಿದ್ದರು. ಅವರು ಪ್ರಯೋಗಗಳನ್ನು ತೋರಿಸುತ್ತಿದ್ದರು, ಸುಬ್ಬನಿಗೆ ಮಾತ್ರ ಬೇರೆ ಕಡೆಗೆ ಲಕ್ಷ್ಯವಿತ್ತು. ಅವನು ಎಲ್ಲ ಬಣ್ಣ ಬಣ್ಣದ ಬಾಟಲಿಗಳನ್ನು ನೋಡುತ್ತಾ ನಿಂತಿದ್ದ. ಆಮೇಲೆ ಸುಮ್ಮನಿರದೆ ಒಂದು ಬಾಟಲಿಯ ಮುಚ್ಚಳವನ್ನು ತೆಗೆದ. ಆಗ ಬಾಟಲಿಯಿಂದ ಹೊಗೆ ಬರಲು ಆರಂಭಿಸಿತು. ಅದನ್ನು ನೋಡಿದ ಸುಬ್ಬ ತುಂಬಾ ಗಲಿಬಿಲಿಗೊಂಡ. ಎಲ್ಲಿ ಮಾಸ್ತರ್ ಅದನ್ನು ನೋಡಿ ಬೈಯುತ್ತಾರೆ ಎಂದು. ಎಲ್ಲಿ ಲ್ಯಾಬ್ ತುಂಬಾ ಹೊಗೆ ಬಂದರೆ ಕಷ್ಟ ಎಂದು ಮುಂದೆ ನಿಂತಿರುವ ಮಂಜನಿಗೆ ಇದನ್ನು ಹೇಳಿದ. ಮಂಜ ಅದನ್ನು ನೋಡಿ ಲೇ ಅದು "ಬಿಸಿಯಾಗಿರಬೇಕು" ಅದಕ್ಕೆ ಸ್ವಲ್ಪ ನೀರು ಸುರಿ ಎಂದು ಐಡಿಯಾ ಕೊಟ್ಟ. ಆನಂತರ ನಮ್ಮ ಸುಬ್ಬ ಸುಮ್ಮನಿರದೆ ಅದಕ್ಕೆ ನೀರು ಸುರಿದು ಬಿಟ್ಟ. ನೋಡ ನೋಡುತ್ತಲೇ ಎರಡೇ ಸೆಕೆಂಡಿನಲ್ಲಿ "ಪಟ ಪಟ " ಎಂಬ ಶಬ್ದ ಬಂದು ಬಾಟಲಿ ಚೂರು ಚೂರು ಆಗಿ ಸುಬ್ಬ ಮತ್ತು ಅವನ ಸಂಗಡ ನಿಂತ ವಿನಯ ಆಸ್ಪತ್ರೆ ಸೇರುವ ಹಾಗೆ ಆಗಿತ್ತು. ಆನಂತರ ಗೊತ್ತಾಗಿತ್ತು ಅದು sulpuric acid ಎಂದು. ಅದಕ್ಕೆ ಯಾವತ್ತು ನೀರು ಹಾಕಬಾರದು ಎಂದು ಅನಂತರ ಕ್ಲಾಸಿನಲ್ಲಿ ಮಾಸ್ತರ್ ಹೇಳಿದ್ದರು.

ಮತ್ತೊಂದು ದಿನ biology ಮಾಸ್ತರ ನಾಳೆ ಲ್ಯಾಬ್ ಇದೆ ಎಲ್ಲರು ಒಂದು ಕಪ್ಪೆ ಹಿಡಿದು ತನ್ನಿರಿ ಎಂದು ಹೇಳಿದರು. ನಾನು ಮತ್ತೆ ಮಂಜ ಕಪ್ಪೆ ಹಿಡಿಯೋಣವೆಂದು ಸಂಜೆ ಮಳೆಯಲ್ಲಿ ಗ್ರೌಂಡ್ಗೆ ಹೋದೆವು. ಎಲ್ಲಿ ಕಪ್ಪೆಗಳು ವಟಗುಡುವಿಕೆ ಕೇಳಿಸುವದೋ ಅಲ್ಲಿ ಟಾರ್ಚ್ ಹಿಡಿದು ಹಿಡಿಯುವ ಹುನ್ನಾರ ನಡಿಸಿದೆವು. ಆದರೆ ಒಂದು ಕಪ್ಪೆ ನಮ್ಮ ಕೈಗೆ ಸಿಗಲೇ ಇಲ್ಲ. ಮತ್ತೆ ಸ್ವಲ್ಪ ಮುಂದೆ ಹೋಗೋಣ ಎಂದು ಮಂಜ ಹೇಳಿದ, ಹಾಗೆಯೇ ಮುಂದೆ ಹೋದೆವು. ಅಷ್ಟರಲ್ಲೇ ತುಂಬಾ ರಭಸದಿಂದ ಚರಂಡಿ ನೀರು ನುಗ್ಗಿ ಬಂದಿತ್ತು. ಮೊಣ ಕಾಲುವರೆಗೆ ಚರಂಡಿ ನೀರು ಇತ್ತು. ಅಷ್ಟರಲ್ಲೇ ಒಂದು ಕಪ್ಪೆ ಕಾಣಿಸಿತು ನಾನು ಹಿಡಿಯೋಣ ಎಂದು ಕ್ರಿಕೆಟ್ ಚಾಂಪಿಯನ್ ಹಾಗೆ ಜಂಪ್ ಮಾಡಿ ಕ್ಯಾಚ್ ಹಿಡಿದ ಹಾಗೆ ಹಿಡಿಯಲು ಹೋದೆ. ದಪ ಎಂದು ಬಿದ್ದು ಬಿಟ್ಟು ಮೊಣ ಕಾಲು ಕೆತಿತ್ತು ರಕ್ತ ಸುರಿಯುತ್ತಿತ್ತು. ಅದನ್ನು ನೋಡಿ ಮಂಜ ನನ್ನನ್ನು ಎಬ್ಬಿಸದೆ ಬಿದ್ದು ಬಿದ್ದು ಗಹ ಗಹಿಸಿ ನಗಹತ್ತಿದ್ದ. ಚರಂಡಿ ನೀರು ಮೈಯಲ್ಲ ಆವರಿಸಿತ್ತು. ನನ್ನಷ್ಟಕ್ಕೇ ನನಗೆ ಹೇಸಿಗೆ ಬರುವಷ್ಟು ಕೆಟ್ಟ ವಾಸನೆ ಹೊಡೆಯುತ್ತಿತ್ತು. ನಾನು ಕೋಪದಿಂದ ಮಂಜನಿಗೆ ಬೈದು ಮತ್ತೆ ನಮ್ಮ ಬೇಟೆಗೆ ಹೋದೆವಾದರು ಪ್ರಯತ್ನ ಮಾತ್ರ ಸಫಲವಾಗಲಿಲ್ಲ.

ಈ ರೂಪದಿಂದ ಮನೆಗೆ ಹೋಗುವದು ಅಸಾಧ್ಯವಾಗಿತ್ತು. ಇಬ್ಬರು ಮಂಜನ ಮನೆಗೆ ಹೋದೆವು ನಾನು ಕೈ ಕಾಲು ತೊಳೆದು ಕೊಳ್ಳಲು ಮಂಜನ ಮನೆಯ ಹಿತ್ತಲಕ್ಕೆ ಹೋದೆ. ನನಗೆ ಅಲ್ಲಿಯ ದೃಶ್ಯ ನೋಡಿ ಮಂಜನನ್ನು ಕೊಲೆ ಮಾಡುವಷ್ಟು ಕೋಪ ಬಂದಿತ್ತು. ಏಕೆಂದರೆ ಅವನ ಮನೆಯ ಹಿತ್ತಲಲ್ಲಿ 10-15 ಕಪ್ಪೆಗಳು ಇದ್ದವು. ನಾನು ಕೈ ಕಾಲು ತೊಳೆಯದೇ ಸೀದಾ ಬಂದು ಮಂಜನ ಮೇಲೆ ಏಗರಾಡಿದೆ. ಮಂಜ ಮುಂಜಾನೆ ಒಂದು ಇದ್ದಿರಲಿಲ್ಲ ಈಗ ಹೇಗೆ ಬಂದವು ನನಗೆ ಆಶ್ಚರ್ಯ ಎಂದ. ಮತ್ತೆ ಇಬ್ಬರು ಹೋಗಿ 8 ಕಪ್ಪೆ ಹಿಡಿದೆವು. ಅನಂತರ ಕೈ ಕಾಲು ತೊಳೆದು ಮನೆಗೆ ಹೋದೆ.

ಮರು ದಿವಸ ಮತ್ತೆ ಕೆಲವರಿಗೆ ನಾವೇ ಕಪ್ಪೆ ಹಂಚಿದೆವು. Biology ಲ್ಯಾಬ್ ಕನ್ನಡ ಕ್ಲಾಸ್ ಆದ ಮೇಲೆ ಇತ್ತು. ಸುಬ್ಬ ಕೂಡ ಒಂದು ಕಪ್ಪೆ ಹಿಡಿದು ತಂದಿದ್ದ. ಅವನ ಪ್ಲಾಸ್ಟಿಕ್ ಚೀಲದಲ್ಲಿ ಅದು ಸೂಸು ಮಾಡಿ ಅದರಲ್ಲೇ ಈಜಾಡುತಿತ್ತು. ಸ್ವಲ್ಪ ಸಮಯದ ನಂತರ ಅದರ ವಾಸನೆ ಎಲ್ಲಡೆ ಹರಡಿತ್ತು. ಅದನ್ನು ನೋಡಿ ಮಂಜ ಲೇ ಪ್ಲಾಸ್ಟಿಕ್ ಚೀಲಕ್ಕೆ ಒಂದು ತೂತು(Hole) ಮಾಡಿ ಅದರ ಸೂಸು ಹೊರಗೆ ಚೆಲ್ಲು ಎಂದು ಸುಬ್ಬನಿಗೆ ಹೇಳಿದ. ಸುಬ್ಬ ಅದನ್ನು ಕತ್ತರಿಯಿಂದ ಕಟ್ ಮಾಡಿದ. ಚೀಲವನ್ನು ದೊಡ್ಡದಾಗಿ ಕತ್ತರಿಸಿ ಬಿಟ್ಟಿದ್ದ. ಅದರಿಂದ ಕಪ್ಪೆ ಟುಂಗನೆ ಜಿಗಿದು ಬಿಟ್ಟಿತ್ತು. ಅಲ್ಲೇ ಕುಳಿತು ಕೊಂಡಿದ್ದ ಹುಡುಗಿಯರೆಲ್ಲ ಎದ್ದು ಡಾನ್ಸ್ ಮಾಡಲು ಶುರು ಹಚ್ಚಿ ಕೊಂಡಿದ್ದರು.

ಅಷ್ಟರಲ್ಲೇ ಕನ್ನಡ ಮಾಸ್ತರ್ ಆಗಮಿಸಿ ಈ ದೃಶ್ಯ ನೋಡಿ ಕೋಪದಿಂದ ಸುಬ್ಬನಿಗೆ ಅದನ್ನು ಹಿಡಿದು ತೆಗೆದುಕೊಂಡು ಹೋಗಿ ಕ್ಲಾಸ್ ಆಗುವವರಿಗೆ ಹೊರಗೆ ನಿಲ್ಲು ಎಂದು ಆಜ್ಞೆ ಮಾಡಿದ್ದರು.

ಮತ್ತೊಂದು ದಿವಸ ಜೇನಿನ ಗೂಡಿಗೆ ಯಾರೋ ಕಲ್ಲು ಎಸೆದಿದ್ದರು. ನಾನು,ಮಂಜ ಮತ್ತೆ ಸುಧೀರ ಲೈಬ್ರರಿ ಹೋಗಲು ಬರುತ್ತಿದ್ದೆವು. ಜೇನು ಎದ್ದಿದ್ದು ನೋಡಿ ಮಂಜ "ಲೇ ಓಡಿರಿ ಜೇನು ಎಂದು ಬಿಟ್ಟ". ನಾನು,ಮಂಜ ಮತ್ತೆ ಸುಧೀರ ಎದ್ದು ಬಿದ್ದು ಓಡಲು ಶುರು ಮಾಡಿದೆವು. ಜೇನುಗಳು ನಮ್ಮನ್ನು ಅಟ್ಟಿಸಿಕೊಂಡು ಕಡಿಯಲಾರಂಬಿಸಿದವು. ನನಗೆ ಮಂಜ ಒಂದು ದಿವಸ ಪ್ರವಚನ ಮಾಡಿದ್ದ "ಜೇನು ಬೆನ್ನು ಹತ್ತಿದರೆ ಹುಲ್ಲಿನಲ್ಲಿ ಉಸಿರಾಡದೆ ಮಲೆಗಿದರೆ ಹಾಗೆ ಹೋಗುತ್ತವೆ ಎಂದು". ನಾನು ಮತ್ತೆ ಮಂಜ ಹಾಗೆ ಮಾಡಿದೆವು. ನಮಗೆ ಒಂದೆರಡು ಕಡಿದಿದ್ದವು. ಆದರೆ ಸುಧಿರನನ್ನ ಜೇನುಗಳು ಪೂರ್ತಿ ಶಾಲೆ ಓಡಾಡಿಸಿ ಕಡಿದಿದ್ದವು. ಇವನು ಸುಮ್ಮನೆ ಇರಲಾರೆದೆ ಹಾಸ್ಟೆಲ್ ನಲ್ಲಿ ಒಣಗಲು ಹಾಕಿದ ಟಾವೆಲ್ ಅವುಗಳ ಮೇಲೆ ಎಸೆದಿದ್ದ. ಅವು ಮತ್ತಷ್ಟು ಕೋಪಗೋಂಡು ಪೂರ್ತಿ ಮುಖಕ್ಕೆ ಕಡೆದಿದ್ದವು. ಅನಂತರ ಹಾಸ್ಟೆಲ್ ಹುಡುಗರು ಕಂಬಳಿ ಹೊದಿಸಿ ಸುಧಿರನನ್ನು ಕಾಪಾಡಿದ್ದರು. ಸುಧೀರ ನಾಲ್ಕು ದಿನ ಜ್ವರ ಬಂದು ಹಾಸಿಗೆ ಹಿಡಿದಿದ್ದ.

ಮತ್ತೆ ಒಂದು ದಿವಸ ಕಾಲೇಜ್ ನಲ್ಲಿ ಶೇವಿಂಗ್ ಮಾಡದೇ ಬಂದರೆ ಫೈನ್ ಹಾಕುತಿದ್ದರು. ಆಗ ಸಂಜೀವನಿಗೆ ತುಂಬಾ ಮೊಡವೆಗಳು ಇದ್ದವು. ಅದಕ್ಕೆ ಶೇವಿಂಗ್ ಮಾಡುವಾಗ ತುಂಬಾ ರಕ್ತ ಬರುತಿತ್ತು. ಅದಕ್ಕೆ ನಮ್ಮ ಮಂಜ ಅವನಿಗೆ ನೀನು ಒಂದು ಹೇರ್ ರಿಮೂವರ್ ಹಾಕಿ ಕೋ ಎಂದು ಐಡಿಯಾ ಕೊಟ್ಟ. ಹೇರ್ ರಿಮೂವರ್ ಹಾಕಿ ಎರಡು ಘಂಟೆ ಹಾಗೆ ಬಿಟ್ಟ ನಮ್ಮ ಸಂಜೀವ. ಅನಂತರ ಮುಖ ತೊಳೆದು ಕೊಂಡಾಗ ಕೂದಲು ಜೊತೆ ಚರ್ಮ ಕೂಡ ಕಿತ್ತು ಬಂದು ಒಳಗಿನ ಮಾಂಸ ಕೂಡ ಕಾಣಿಸಲು ಶುರು ಮಾಡಿತ್ತು. ಅವನಿಗೆ ಮಂಜನ ಮೇಲೆ ಕೆಟ್ಟ ಕೋಪ ಬಂದಿತ್ತು. ಮಂಜನಿಗೆ ಕೇಳಿದರೆ ಅವನ ಮುಖ ನೋಡಿ ಬಿದ್ದು ಬಿದ್ದು ನಕ್ಕಿದ್ದ. ಮತ್ತೆ "ಎರಡು ಘಂಟೆ" ಯಾಕೆ ಹಾಕಿಕೊಂಡೆ ಎರಡು ನಿಮಿಷ ಸಾಕು ಎಂದು ಹೇಳಿದ. ಅನಂತರ ಹೇರ್ ರಿಮೂವರ್ ಸಾಹಸಕ್ಕೆ ಹೋಗಲಿಲ್ಲ ಪಾಪ ಸಂಜೀವ. ಮತ್ತೆ ಹುಡುಗಿಯರ ಮಧ್ಯ ಕೂಡ ಸಂಜೀವ ಮುಖ ಮುಚ್ಚಿ ಹೋಗುವ ಪರಿಸ್ತಿತಿ ನಿರ್ಮಾಣವಾಗಿತ್ತು.

ಮತ್ತೊಂದು ದಿವಸ ನಾವೆಲ್ಲರೂ ಟೂರ್ ಗೆ ಹೋಗಿದ್ದೆವು ನಾನು ಅವತ್ತು ಟೂಥ್ ಪೇಸ್ಟ್ ತೆಗೆದು ಕೊಂಡು ಬಂದಿರಲಿಲ್ಲ. ಅದ್ದರಿಂದ ಮಂಜನಿಗೆ ಟೂಥ್ ಪೇಸ್ಟ್ ಕೇಳಿದ್ದೆ ತಪ್ಪಾಯಿತು ಎನ್ನುವ ಹಾಗೆ ಮಾಡಿದ್ದ. ಟೂಥ್ ಪೇಸ್ಟ್ ಬದಲು ತನ್ನ ಶವಿಂಗ್ ಕ್ರೀಂ ಹಚ್ಚಿ ಬಚ್ಚಲಿನಲ್ಲಿದ್ದ ನನಗೆ ಕೊಟ್ಟಿದ್ದ. ನಾನು ಹಾಗೆ ತಿಕ್ಕಿ ಕೊಳ್ಳುತ್ತಿದ್ದಾಗ ಅದರ ನೊರೆ ಮತ್ತೆ ವಾಸನೆ ಇಂದ ಗೊತ್ತಯಿತಾದರು, ಎರಡು ದಿನ ಮಾತ್ರ ಅದರ ವಾಸನೆ ನನ್ನ ಬಾಯಿಯಿಂದ ಹೋಗಲಿಲ್ಲ.

ತರ್ಲೆ ಮಂಜನ ಐಡಿಯಾಗಳು ಮತ್ತೆ ತರ್ಲೆ ಕೆಲಸಗಳು ಇನ್ನು ಬಹಳಷ್ಟು ಇವೆ.....

Thursday, September 24, 2009

ತರ್ಲೆ ಮಂಜ(ಗ)ನ ಓದುವ ಹವ್ಯಾಸ ....

ಮೊನ್ನೆ ನಾನು ಮತ್ತು ಮಂಜ ಸುಮ್ಮನೆ ಪೇಟೆಯಲ್ಲಿ ಸುತ್ತುತ್ತಿದ್ದಾಗ ಮಂಜ ಒಮ್ಮೆಲೇ "ಅವರಪ್ಪನ" ಎಂದ. ಅದು ಯಾರಿಗೆ ಅಂದ ಎಂದು ನಾನು ನೋಡಿದಾಗ ಅದು "ಆವಾರಾಪನ" ಎಂಬ ಚಲನ ಚಿತ್ರದ ಪೋಸ್ಟರ್ ಆಗಿತ್ತು. ಹೀಗೆ ಬೇರೆ ಬೇರೆ ಭಾಷೆಯ ಬೋರ್ಡ್ ಮತ್ತು ಚಿತ್ರಗಳನ್ನೂ ಕೆಟ್ಟದಾಗಿ ಓದುವ ಹವ್ಯಾಸ ನಮ್ಮ ಮಂಜನಿಗೆ.

ಹೀಗೆ ಅವ ಯಾವುದಾದರು tolet ಎಂಬ ನೋಡಿದ ಅಂದರೆ ಅನ್ನುವದು toilet ಅಂತ. ಮತ್ತೆ ಒಂದು "ಕಸ್ತೂರಿ ಕಿರಾಣಿ" ಅಂಗಡಿ ಇತ್ತು. ಅವ ಎಲ್ಲ ರೇಟ್ ಜ್ಯಾಸ್ತಿ ಇರುತಿತ್ತು ಅದಕ್ಕೆ ಇವ ಅವನಿಗೆ ಹಜಾಮರ ಅಂಗಡಿ ಅಥವಾ ಕಷ್ಟ ಮಾಡಿಸಿ ಕೊಳ್ಳಲಿಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿತ್ತಿದ್ದ. ಅದು ಏಕೆ ಎಂದು ಕೇಳಿದಾಗ ಕಸ್ತೂರಿನ (ಕಷ್ಟರಿ ಮಾಡಿದ್ದ ಕಷ್ಟ ಎಂದರೆ ಹಜಾಮತಿ ಎಂಬ ಅರ್ಥ) ಎಂದು ಮಾಡಿದ್ದ.

ಮೆತ್ತೆ ಒಂದು ದಿವಸ "ಹೆತ ಹೆತ ಹೋಗಯ್ಯ" ಎಂದು ಓದಿ ಬಿಟ್ಟ. ಅದು ಹೊತೆ ಹೊತೆ ಹೋಗಯಾ ಎಂಬ ಹಿಂದಿ ಧಾರವಾಹಿ ಇತ್ತು.

ಮತ್ತೆ ಒಂದು ದಿವಸ ಹಿಂದಿ ಹುಡುಗಿ ಚೇತನ ನಮ್ಮ ಶಾಲೆಗೆ ಸೇರಿಕೊಂಡಿದ್ದಳು. ಅವಳ ಹಿಂದೆ ತುಂಬಾ ಹುಡುಗರು ಬಿದಿದ್ದರು. ಅವಳು ಮಾತ್ರ ರಾಜೀವನನ್ನು ಬಿಟ್ಟು ಬೇರೆ ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ರಾಜೀವನಿಗೆ ಹಿಂದಿ ಬರುತ್ತಿರಲಿಲ್ಲ. ನಮ್ಮ ಮಂಜನಿಗೆ ಹಿಂದಿ ಚೆನ್ನಾಗಿ ಬರುತಿತ್ತು. ಅವಳು ಬರೆದು ಕೊಡುವ ಹಿಂದಿ ಪ್ರೇಮ ಪತ್ರ ನಮ್ಮ ಮಂಜ ಓದಿ ರಾಜೀವನಿಗೆ ಹೇಳುತ್ತಿದ್ದ.

ಒಂದು ದಿವಸ ಅವಳ ಪ್ರೇಂ ಪತ್ರ ಬಂದಿತ್ತು. ಅವಳು ಹೀಗೆ ಬರೆದಿದ್ದಳು.

ಮೈ ತುಮ್ಸೆ ಬಹುತ್ ಪ್ಯಾರ ಕರತಿ ಹು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಮಂಜ ಓದಿ ಹೇಳಿದ. ಹಾಲಾ ಕಿ ಹಮಾರಾ ಜಾತ ಅಲಗ್ ಅಲಗ್ ಹೈ ಫಿರ್ ಭಿ ತುಮ್ಸೆ ಶಾದಿ ಕರುಂಗಿ. ಎಂದರೆ ನೀನು ನಾಳೆ ಹಳದಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಮತ್ತೆ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಮತ್ತೆ ಮೀಸೆ ಬೋಳಿಸಿ, ಕಿವಿಯಲ್ಲಿ ರಿಂಗ್ ಹಾಕಿಕೊಂಡು ಬಂದರೆ ಮಾತ್ರ ಮದುವೆ ಆಗುತ್ತೇನೆ ಎಂದು ಮಂಜ ಹೇಳಿದ.

ಹಾಗೆ ನಮ್ಮ ರಾಜೀವ ಮರುದಿವಸ ಅದೇ ವೇಷದಲ್ಲಿ ಶಾಲೆಗೆ ಹಾಜರ ಆಗಿದ್ದ. ಅದನ್ನು ನೋಡಿ ನಾವಲ್ಲದೆ ಚೇತನನು ಬಿದ್ದು ಬಿದ್ದು ನಕ್ಕಿದ್ದಳು.

ಆನಂತರ ನಮ್ಮ ಮಂಜನ ಜೊತೆ ದೊಡ್ಡ ಜಗಳ ಮಾಡಿದ್ದ ರಾಜೀವ. ಅನಂತರ ನಮ್ಮ ರಾಜೀವ ಹಿಂದಿ ಕಲಿಯುವ ಪುಸ್ತಕ ತಂದು ಒಂದೇ ತಿಂಗಳಲ್ಲಿ ಹಿಂದಿ ಕಲೆತಿದ್ದ.

ಮಂಜನಿಗೆ ಹಿಂದಿ ಹೇಗೆ ಬರುತಿತ್ತು ಎಂದರೆ ಮಂಜ ಒಂದು ವರ್ಷ ಮಧ್ಯಪ್ರದೇಶದಲ್ಲಿ ಕಲೆತಿದ್ದ. ಮಧ್ಯಪ್ರದೇಶದಲ್ಲಿ ಮಂಜ ಇದ್ದಾಗ, ಪರೀಕ್ಷೆ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಪ್ರಬಂಧ ಕೇಳಿಯೇ ಕೇಳುತ್ತಿದ್ದರು. ಮಂಜ ಎಲ್ಲ ಪ್ರಬಂಧ ಓದಿ ಕೊಂಡು ಹೋಗಿದ್ದ. ಆದರೆ ಪರೀಕ್ಷೆಯಲ್ಲಿ ಅವನು ಓದಿದ ಪ್ರಬಂಧ ಬಿಟ್ಟು ಬೇರೆ ಗಾಯ( गाय ಅಂದರೆ ಆಕಳು) ಬಗ್ಗೆ ಪುಟಕ್ಕೆ ಮೀರದಂತೆ ಬರೆಯಿರಿ ಎಂದು ಬಂದಿತ್ತು. ಮಂಜನಿಗೆ ಎಷ್ಟೇ ಯೋಚಿಸಿದರು ಏನು ಹೋಳಿಲೆ ಇಲ್ಲ. ಆಗ ಹೀಗೆ ಬರೆದ ನಮ್ಮ ತರ್ಲೆ ಮಂಜ....

गाय मेरा माता है - ಗಾಯ್ ಮೇರಾ ಮಾತಾ ಹೈ (ಆಕಳು ನನ್ನ ಮಾತೆ)
आगे कुछ नहीं आता है - ಆಗೇ ಕುಚ್ ನಹಿ ಆತಾ ಹೈ (ಮುಂದೆ ಬೇರೇನೂ ಗೊತ್ತಿಲ್ಲ)

ಅದನ್ನು ನೋಡಿದ ನಮ್ಮ ಮಾಸ್ತರಿಗೆ ಕೋಪ ಬಂದಿತ್ತು. ಅವರು ಹೀಗೆ ಬರೆದರು...

भैस मेरा बाप है - ಭೈಸ್ ಮೇರಾ ಬಾಪ್ ಹೈ (ಕೋಣ ನನ್ನ ಅಪ್ಪ)
अंक देना पाप है - ಅಂಕ ದೇನಾ ಪಾಪ ಹೈ (ಅಂಕ ಕೊಡುವದು ತಪ್ಪು)

ಮತ್ತೆ ಒಂದು ದಿವಸ ಪಕ್ಕದ ಮನೆ ನಾರಾಯಣ ಮೂರ್ತಿಗಳಿಗೆ ಒಂದು ಪತ್ರ ಬಂದಿತ್ತು. ಅದನ್ನು ನಮ್ಮ ಮಂಜ ತೆಗೆದುಕೊಂಡು ಹೋಗಿ ಅವರ ಮನೆಗೆ ಕೊಟ್ಟು ನೋಡಿ ಸರ್ ರಮಾ ಎನ್ನುವವರ ಪತ್ರ ಬಂದಿದೆ ಎಂದು ಅವರ ಮಡದಿಯ ಮುಂದೆ ಹೇಳಿ ಕೊಟ್ಟು ಬಿಟ್ಟ. ಎರಡು ದಿನ ಅವರ ಮನೆಯಲ್ಲಿ ರಸ್ತೆ ಬೀದಿಗೆ ಕೇಳುವ ಹಾಗೆ ಜಗಳವೋ ಜಗಳ ... ಅನಂತರ ಗೊತ್ತಾಗಿದ್ದು ಅದು ರಮಾ(rama) ಅಲ್ಲ ರಾಮ(rama) ಅವರಿಂದ ಬಂದ ಪತ್ರ.

ಏನೇ ಆದರು ನಮ್ಮ ಮಂಜ ಮಾತ್ರ ಈಗಲೂ ಸಹ ಓದುವ ಹವ್ಯಾಸ ಮಾತ್ರ ಬಿಟ್ಟಿಲ್ಲ.

Wednesday, September 23, 2009

ಮೇರಾ ಭಾರತ ಮಹಾನ ....

ಈ ಚಿತ್ರ ನನ್ನ ಗೆಳೆಯ ನರೇಂದ್ರ ತೆಗೆದಿದ್ದು. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಎಲ್ಲಿಯೂ eraser ಉಪಯೋಗಿಸಿಲ್ಲ. "ಮೇರಾ ಭಾರತ ಮಹಾನ"

ತರ್ಲೆ ಮಂಜ(ಗ)ನ ಮರನ(ಣ) ಪತ್ರ....

ನಮ್ಮ ಶಾಲೆಯಲ್ಲಿ ಗಿರೀಶನೆಂಬ ತೊದಲು ಮಾತನಾಡುವ ಸಹಪಾಠಿ ಇದ್ದ. ಅವನಿಗೆ ನಾವೆಲ್ಲರೂ "ತೊತಲೇ" ಎಂದೇ ಕರೆಯುತ್ತಿದ್ದೆವು. ಈ ಹೆಸರು ಅವನಿಗೆ ಬಳುವಳಿಯಾಗಿ ಬಂದಿದ್ದು ಅವರ ಮನೆಯವರಿಂದಲೇ. ಇವ ತುಂಬಾ ಜಿಪುಣ(ಜುಗ್ಗ) ಒಂದು ನಯಾ ಪೈಸೇನು ಯಾರಿಗೂ ಕೊಡುತ್ತಿರಲಿಲ್ಲ. ಅದಕ್ಕೆ ಕೆಲವರು ಇವನಿಗೆ "ಜುಗ್ಗ ತೋತಲ್ಯಾ" ಎಂದು ಕರೆಯುವದು ಉಂಟು. ಅವರ ಮನೆಯವರು (ಅಪ್ಪ, ತಾತ) ಎಲ್ಲರು ತುಂಬಾ ಜಿಪುಣರು. ಮಾತನಾಡಿಸಿದರೆ ಮೈಮೇಲೆ ಬರುವುದು(ಎಲ್ಲಿ ದುಡ್ಡು ಕಿಳುತ್ತಾರೆ ಜನ ಎಂದು) ಎಂದು ಮಾತು ಸ್ವಲ್ಪ ಕಡಿಮೇನೆ. ಆದರೆ ಗಿರೀಶ ಮಾತ್ರ ತೊದಲು ಮಾತಿನ ಬಂಟ. ಅವನು ಚಿಕ್ಕವನಿದ್ದಾಗ ಅವನ ತಾತನ(ಅಜ್ಜ) ಹತ್ತಿರ ಅಡಿಕೆ ಕೇಳಿ ಪಡೆದು ತಿನ್ನುತ್ತಿದ್ದನಾದ್ದರಿಂದ ಇವನ ಮಾತು ತೊದಲುತಿತ್ತು.

ಒಂದು ದಿವಸ ಶಾಲೆಯಲ್ಲಿ ಕಾರ್ಯಕ್ರಮ ಏರ್ಪಾಟು ಮಾಡಿದ್ದೆವು. ಅದು ಕುರುಡು ಮಕ್ಕಳಿಗೆ ಹಣ ಸಹಾಯ ಮಾಡಲು ಮಾಡಿರುವ ಕಾರ್ಯಕ್ರಮ. ಶಾಲೆಯಲ್ಲಿ ಎಲ್ಲರು ಹಣ ನೀಡಿದ್ದರು, ಆದರೆ ಈ ಗಿರೀಶ ಮಾತ್ರ ಏನು ಕೊಟ್ಟಿರಲಿಲ್ಲ. ಅದಕ್ಕೆ ನಮ್ಮ ಮಂಜ ಏನಾದರು ಮಾಡಿ ಇವನ ಹತ್ತಿರ ಹಣ ಕೀಳ ಬೇಕು ಎಂದು ತುಂಬಾ ಪ್ರಯತ್ನ ಪಟ್ಟ. ಆದರೆ ಏನು ಸಹಾಯವಾಗಲಿಲ್ಲ.

ಒಂದು ದಿವಸ ನನ್ನ ಬಳಿ ಬಂದ ಮಂಜ "ಲೇ ಇವತ್ತು ಗ್ಯಾರಂಟೀ ಗಿರೀಶ ಹತ್ತಿರ ದುಡ್ಡು ವಸೂಲಿ ಮಾಡುತ್ತೇನೆ" ಎಂದ. ನೀನು ನನ್ನ ಜೊತಿ ಬಾ ಎಂದ. ನಾನು ಮತ್ತೆ ಮಂಜ ಗಿರೀಶನ ಮನೆಗೆ ಹೋದೆವು. ನಾನು ಮತ್ತು ಮಂಜ ಮನೆಗೆ ಬಂದು ಘ೦ಟೆ ಆದರು ನೀರು ಸಹ ಬೇಕು ಎಂದು ಕೇಳಿರಲಿಲ್ಲ ಗಿರೀಶ. ನಾನು ಮತ್ತೆ ಮಂಜ ದುಡ್ಡಿಗೆ ಪೀಡಿಸುತ್ತಲೇ ಇದ್ದೆವು. ಮತ್ತೆ ಅವನಿಗೆ ಕೆರಳಿಸಿ ನಿನಗೆ ನಿಜವಾಗಿಯು ದುಡ್ಡು ಕೊಡಲು ಇಷ್ಟ ಇಲ್ಲ ಎಂದರೆ ಈ ಸರ್ಟಿಫಿಕೇಟ್ ನೀನು ಮಾಡಿಸು ಸಾಕು ಎಂದ. ಅದೇನು ದೊಡ್ಡ ಮಹಾ ವಿಷಯ ನಾನು ಮಾಡಿಸುತ್ತೇನೆ ಎಂದ. ಮಾಡಿಸಲಿಲ್ಲ ಅಂದರೆ ನೀನು ನನಗೆ 300 ರೂಪಾಯಿ ಕೊಡಬೇಕು. ಇಲ್ಲದಿದ್ದರೆ ನಾನು ನಿನಗೆ ಕೊಡುತ್ತೇನೆ ಎಂದ ಮಂಜ. ನೀನು ತೋರಿಸು ಎಂದ ಗಿರೀಶ. ಆನಂತರ ಇಬ್ಬರು ಒಪ್ಪಂದಕ್ಕೆ ಒಪ್ಪಿಕೊಂಡರು. ಮಂಜ ಅದನ್ನು ತೋರಿಸಲೇ ಇಲ್ಲ. ಅವನು ಗಿರೀಶನ ತಾತ ಬರುವ ಸಮಯ ಕಾಯುತ್ತಿದ್ದ. ಗಿರೀಶನ ತಾತ ಬಂದೊಡನೆಯೇ ತೆಗೆದು ಕೋ ಮಾಡಿಸು ಈ ಸರ್ಟಿಫಿಕೇಟ್ ನಿನಗೆ ನಿಜವಾಗಿಯು ಸಾಮರ್ಥ್ಯ ಇದ್ದರೆ ಎಂದ. ಅದೇನು ಮಹಾ ದುಡ್ಡು ಕೊಡದೆ ಹೋದರೆ ಸಾಕು ಏನು ಬೇಕಾದರು ಮಾಡಿಸುವೆ ಎಂದು ಗಿರೀಶ ಮಂಜನ ಕೈನಲ್ಲಿ ಇರುವ ಸರ್ಟಿಫಿಕೇಟ್ ತೆಗೆದು ಕೊಂಡು ನೋಡ ಹತ್ತಿದ. ಅದು ಮಂಜನ ತಾತನ ಮರಣ ಪತ್ರ ಆಗಿತ್ತು. ಗಿರೀಶನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಅಷ್ಟರಲ್ಲೇ ಗಿರೀಶನ ತಾತ ಬಂದು ಏನು ಅದು ಎಂದಾಗ. ಅದು.. ಅದು.. ಎಂದು ತೊದಲುತ್ತ ಗಿರೀಶ ಮರನ ಪತ್ರ ಎಂದ. ಅವರ ತಾತನಿಗೆ ತಿಳಿಯಲಿಲ್ಲ. ಆಗ ಮಂಜ ಅವನನ್ನು ತಡೆದು ಇದು ಮರಗಳನ್ನು ಕಡೆಯುವದನ್ನು ತಡೆಯುವದಕ್ಕಾಗಿ ಮಾಡಿರುವ ಪತ್ರ ಎಂದು ಸುಧಾರಿಸಿದ. ಗಿರೀಶ ಮೊದಲೇ ಪ್ರಾಮಿಸ್ ಮಾಡಿದ್ದರಿಂದ ಸುಮ್ಮನೆ ದೊಡ್ದು ಕೊಟ್ಟ.

ಮತ್ತೆ ಅನಂತರ ನಮ್ಮ ಮಂಜ ಸುಮ್ಮನಿರದೆ ಗಿರೀಶನನ್ನು ಅವನ ತಾತನ ಮುಂದೆ ತುಂಬಾ ಹೊಗಳಿದ. ತುಂಬಾ ಚೆನ್ನಾಗಿ ಹಾಡುತ್ತಾನೆ ತಾತ ನಿಮ್ಮ ಗಿರೀಶ ಅವನದು ಒಂದು ಸಂಗೀತ ಕಾರ್ಯಕ್ರಮ ಇದೆ. ಅವನದು ಕೋಗಿಲೆ ಕಂಠ ಎಂದ. ನಾನು ಒಳಗೊಳಗೇ ನಗುತ್ತಿದ್ದೆ. ನೀವು ಬನ್ನಿ ಎಂದು ಆಹ್ವಾನ ಕೊಟ್ಟ. ಅವನ ತಾತನಿಗು ಗೊತ್ತು ಇವ ತೊತಲೇ ಅಂತ ಅದಕ್ಕೆ ಅವರ ತಾತ ಹಾಗಾ ಆದರು ನನಗೆ ತುಂಬಾ ಕೆಲಸ ಇವೆ ಅದಕ್ಕೆ ಬರಲು ಆಗುವದಿಲ್ಲ ಎಂದ. ಇವನ ಮೊಮ್ಮಗನ ಹೊಗಳಿಕೆ ಇಂದ ನಮಗೆ ಕಾಫಿ ಲಭಿಸಿತು.

ಅನಂತರ ನನಗೆ ಮತ್ತೆ ಮಂಜನಿಗೆ ಗಿರೀಶ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ಕೊಡು ಎಂದು ಪೀಡಿಸಲು ಆರಂಬಿಸಿದ. ನಾವು ಎಷ್ಟೇ ಹೇಳಿದರು ಕೇಳಲಿಲ್ಲ. ನಾನು ಹಾಡೇ ಹಾಡುತ್ತೇನೆ ಇಲ್ಲ ಅಂದರೆ ನನ್ನ ದುಡ್ಡು ನನಗೆ ವಾಪಸ ಕೊಡು ಎಂದು ಪೀಡಿಸ ಹತ್ತಿದ. ಕೊನೆಗೆ ಬೇರೆ ದಾರಿ ಇಲ್ಲದೆ ಒಪ್ಪಿಕೊಂಡೆವು.

ಕಾರ್ಯಕ್ರಮ ಶುರು ಆಯಿತು. ಗಿರೀಶ ತನ್ನ ಹೊಸ ಡ್ರೆಸ್ ಹಾಕಿಕೊಂಡು ಸ್ಟೇಜ್ ಮೇಲೆ ಬಂದು ನಿಂತ. ಮತ್ತೆ ಮೈಕ್ ಹಿಡಿದು ಶುರು ಮಾಡಿದ.

"ಬಿಸಿಲಾದೆಲೆ ಏನು ಮಲೆ ಆದರೇನು.." ಎಂದು ಹಾಡಲು ಶುರು ಮಾಡಿದ. ಎಲ್ಲರು ನಕ್ಕಿದ್ದೆ ನಕ್ಕಿದ್ದು.

ಒಂದಕ್ಕೆ ಮುಕ್ತಾಯವಗಿದ್ದರೆ ಸರಿ ಇತ್ತು.

"ಬಾಲು ಬೇಲಕಾಯಿತು.. "

ಹೀಗೆ ಇವನ ಹಾಡುಗಲು(ಳು) ಪೂರ್ತಿ ನಗೆಯ ಅಲೆ ಎಬ್ಬಿಸಿಬಿಟ್ಟಿದ್ದವು. ಕಾರ್ಯಕ್ರಮ ಮುಗಿದರು ತುಂಬಾ ದಿನಗಳವರೆಗೆ ನಮ್ಮ ಗಿರೀಶನ ಹಾಡುಗಳನ್ನು ತುಂಬಾ ಜನರು ಮೆಲಕು ಹಾಕುತ್ತಿದ್ದರು.

Monday, September 14, 2009

ತರ್ಲೆ ಮಂಜ(ಗ)ನ ಜಾಹಿರಾತು....

ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಆಗ ನಮ್ಮ ಮಂಜ ಮನೆಗೆ ಹೆಂಡತಿಯೊಂದಿಗೆ ಹಾಜರ ಆದ. ಮತ್ತೆ ಸ್ನೇಹ ಸಮಾಚಾರಗಳು ಆದ ಮೇಲೆ, ಕಾಫಿ ಹೀರುತ್ತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆವು. ನಮ್ಮ ಮಂಜ ಹಾಗೆ ಚೇಷ್ಟೆ ಮಾಡುತ್ತ ಕುಳಿತಿದ್ದ. ಮಂಜನಿಗೆ ಇನ್ನೊಂದು ಚಟ ಎಂದರೆ ಎಲ್ಲಾ ಜಾಹಿರಾತು ಮತ್ತು ಕಾರ್ಯಕ್ರಮಗಳನ್ನು ಜೋರಾಗಿ ಎಲ್ಲರಿಗು ಕೇಳಿಸುವ ಹಾಗೆ ಓದುವ ಹವ್ಯಾಸ. ಅವನ ಜೊತೆ ಚಲನಚಿತ್ರಕ್ಕೆ ಹೋದರೂ, ಚಿತ್ರ ಮಾತ್ರ ನಾವು ವೀಕ್ಷಿಸುತ್ತಿದ್ದೆವು. ಉಳಿದೆಲ್ಲ ಸೌಂಡ್ ಮಾತ್ರ ನಮ್ಮ ಮಂಜನದೆ.

ಆಗಲೇ ಒಂದು ಜಾಹಿರಾತು ತೋರಿಸುತ್ತಿದ್ದರು. ಅದನ್ನು ನಮ್ಮ ಮಂಜ "ಗಂಡಸು ನೀರನ್ನು ಮೃದುವಾಗಿಸುತ್ತೆ." ಎಂದು ಓದಿಬಿಟ್ಟ. ಅದು "ಗಡಸು ನೀರು" ಆಗಿತ್ತು. ಆಗ ನನ್ನ ಹೆಂಡತಿ ಸುಮ್ಮನಿರದೆ "ಹಾಗಾದರೆ ಮನೆ ಕೆಲಸ ಎಲ್ಲ ನಿಮ್ಮದೇ ಎಂದಾಯಿತು". ಎಂದಳು ತಮಾಶೆಯಾಗಿ. ಆಗ ಮಂಜ "ನಾವು ನಮ್ಮ ವಿಷಯ ಹೇಳುತ್ತಾ ಇಲ್ಲ. ನಿಮ್ಮ ಮನೆಯವರ ವಿಚಾರನೇ" ಎಂದ. ನನ್ನ ಹೆಂಡತಿ ಏನು ಮಾತನಾಡದೆ ಸುಮ್ಮನಾಗಿ ಬಿಟ್ಟಳು. ಅವಳಿಗೂ ಗೊತ್ತು ಇವ ತರ್ಲೆ ಅಂತ.

ಈ ಜಾಹಿರಾತು ವಿಷಯ ಬಂದ ಮೇಲೆ ಹಳೆಯ ಒಂದು ಮಂಜನ ವಿಚಾರನ ಹೇಳೋಕ್ಕೆ ಇಷ್ಟ ಪಡುತ್ತೇನೆ. ಒಂದು ದಿವಸ ಶಾಲೆಯಲ್ಲಿ Annual Function ಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡಬೇಕೆಂದು ಮಾಸ್ತರ್ ಹೇಳಿದ್ದರು.

ಮಂಜ ಒಂದು ಜಾಹಿರಾತು ಮಾಡುತ್ತೇನೆ ಎಂದು ಹೇಳಿ ಮಾಸ್ತರ್ ಒಪ್ಪಿಸಿದ್ದ. ನಾನು ಮತ್ತೆ ಮಂಜ ಜಾಹಿರಾತು ಪ್ರಾಕ್ಟೀಸ್ ಮಾಡುತ್ತಿದ್ದಾಗ, ಸುಬ್ಬ ಬಂದು ಮಂಜನಿಗೆ ನನಗು ಏನಾದರು ಹೇಳು ಮಾಡುತ್ತೇನೆ ಎಂದ. ಮಂಜ ಅವನಿಗೆ ನೀನು ಹಿಂದಿನಿಂದ ಅಂಡರ್ ವೆರ್ ಧರಿಸಿ ಒಂದು ಕ್ಯಾಟ್ ವಾಕ್ ಮಾಡಿದರೆ ಸಾಕು ಎಂದ. ಅದಕ್ಕೆ ನಮ್ಮ ಸುಬ್ಬ ಸುತರಾಂ ಒಪ್ಪಲಿಲ್ಲ. ಆಯಿತು ನೀನು ಪ್ಯಾಂಟ್ ಮೇಲೆ ಆದರು ಧರಿಸಿ ಕ್ಯಾಟ್ ವಾಕ್ ಮಾಡು ಎಂದ. ಅದು ಹೇಗೆ ಸಾಧ್ಯ ಅದು ಹುಡುಗಿಯರ ಎದುರಿಗೆ ಎಂದು ಖ್ಯಾತೆ ತೆಗೆದ. ಅದಕ್ಕೆ ನಮ್ಮ ಮಂಜ ನೋಡು ಫ್ಯಾಂಟಮ್,ಸೂಪರ್ ಮ್ಯಾನ್ , ಹಿ ಮ್ಯಾನ್ ನೋಡಿದ್ದಿಯಲ್ಲ. ಅವರೆಲ್ಲ ಹಾಗೆ ಧರಿಸಿ ಹೇಗೆ ಹೀರೋ ತರಹ ಕಾಣಿಸುತ್ತಾರೆ. ನೀನು ಹಾಗೆ ಧರಿಸು ನೀನು ಹೀರೋ ಆಗುತ್ತೀಯ. ಎಲ್ಲಾ ಹುಡುಗಿಯರು ನಿನ್ನ ಹಿಂದೆ ಬೀಳುತ್ತಾರೆ ಎಂದ. ಅದಕ್ಕೆ ಸುಬ್ಬ "ಆ ಚೇತನಾ" ಎಂದ. ಅದಕ್ಕೆ ಮಂಜ "ಓ ಅವಳು ಕೂಡ" ಎಂದ. ಅದಕ್ಕೆ ಸುಬ್ಬ ಒಪ್ಪಿದ.

ಕಾರ್ಯಕ್ರಮಗಳ ಮಧ್ಯ ನಡುವೆ ನಮ್ಮದೊಂದು ಜಾಹೀರಾತು ಇತ್ತು. ಆಗ ತಾನೆ ಮಂಜ ಸುಬ್ಬನಿಗೆ ಒಂದು designer ಅಂಡರ್ ವೆರ್ ತಂದು ಕೊಟ್ಟಿದ್ದ. ಅದು ಥೇಟ ಪಟ್ಟಿ ಪಟ್ಟಿಯಾಗಿ ಹುಲಿಯ ಚರ್ಮದ ಹಾಗೆ ಇತ್ತು.

ರೇಡಿಯೋದಲ್ಲಿ ಬರುವ ಒಂದು ಜಾಹಿರಾತನ್ನು ಚೇಂಜ್ ಮಾಡಿ ಹೀಗೆ ಮಾಡಿದ್ದ. ನಮ್ಮ ಜಾಹೀರಾತು ಹೀಗೆ ಇತ್ತು.

ನಾನು: ಏನ್ ಶಂಕ್ರಣ್ಣ ಇಷ್ಟೊಂದು ಆಳವಾಗಿ ಯೋಚಿಸ್ತಾ ಇದ್ದೀಯ?.
ಮಂಜ(ಶಂಕ್ರಣ್ಣ ): ಏನಿಲ್ಲ ಮಕ್ಕಳಿಗೆ ಮತ್ತೆ ಮೊಮ್ಮಕ್ಕಳಿಗೆ ಯಾವ ಅಂಡರ್ ವೆರ್ ತೊಗೋಬೇಕು ಅಂತ ಯೋಚಿಸ್ತಾ ಇದ್ದೀನಿ.
ನಾನು: ಅದಕ್ಕೆ ಯಾಕ ಯೋಚಿಸಬೇಕು?. ಸುರ ಅಂಡರ್ ವೆರ್ ತೋಗೊಂಡ್ರ ಆಯಿತು. ನಮ್ಮಜ್ಜನ ಕಾಲದಾಗ ತೋಗೊಂಡಿದ್ವು ಇನ್ನು ಗಟ್ಟಿ ಮುಟ್ಟಿ ಅದಾವ ನೋಡು.

ಆಗ ನಮ್ಮ ಸುಬ್ಬ ಹಿಂದಿನಿಂದ ಪಟ್ಟಿ ಪಟ್ಟಿ ಅಂಡರ್ ವೆರ್ ಪ್ಯಾಂಟ್ ಮೇಲೆ ಧರಿಸಿ ಕ್ಯಾಟ್ ವಾಕ್ ಮಾಡುತ್ತ ಬಂದ. ಅಂಡರ್ ವೆರ್ ಎಲ್ಲಡೆ ಹರಿದು ಹೋಗಿತ್ತು. ಆ ಹರಿದಿರೋ ಅಂಡರ್ ವೆರ್ ನೋಡಿ ಎಲ್ಲರು ನಗಲು ಶುರು ಮಾಡಿಬಿಟ್ಟರು. ನನಗು ಮತ್ತೆ ಮಂಜನಿಗೆ ಕೂಡ ನಗು ತಡಿಯಲಾಗಲಿಲ್ಲ. ಜೋರಾಗಿ ನಕ್ಕು ಬಿಟ್ಟೆವು. ಆನಂತರ ಗೊತ್ತಾಯಿತು ಮಂಜ ಕೊಡಿಸಿದ ಅಂಡರ್ ವೆರ್ ನ ಇಲಿಗಳು ಕಚ್ಚಿ ತಿನ್ದಿದ್ದವು.

ಆಗಿನಿಂದ ನಮ್ಮ ಸುಬ್ಬನಿಗೆ ನಾವು ಎಲ್ಲರು "ಆರಾಮಾಗಿ ಇದ್ದೀಯ" ಅಥವಾ "ಚೆನ್ನಾಗಿ ಇದ್ದೀಯ ಅನ್ನುವ ಬದಲು "ಗಟ್ಟಿ ಮುಟ್ಟಿ ಇದ್ದೀಯ" ಎಂದು ಕೇಳುತ್ತಿದ್ದೆವು.

ಒಂದು ದಿವಸ ಸುಬ್ಬನಿಗೆ ಮಂಜ ಫೋನ್ ಮಾಡಿದ್ದ. ಫೋನ್ ಯಾರು ಎತ್ತಿದ್ದಾರೆ ಎಂದು ಯೋಚಿಸದೆ. "ಎನಲೇ ಗಟ್ಟಿ ಮುಟ್ಟಿ ಇದ್ದಿಯೇನೋ" ಎಂದು ಕೇಳಿದ್ದ. ಫೋನ್ ಎತ್ತಿದ್ದು ಅವನ ಹೆಂಡತಿ. ಅವಳು ಇವನಿಗೆ "ಮುಟ್ಟ ಆಗ್ಯಾನ ಸಿರಿ ತೆಗೆದುಕೊಂಡ ಬಾ" ಎಂದು ತರಾಟೆಗೆ ತೆಗೆದುಕೊಂಡಿದ್ದಳು. ಏಕೆಂದರೆ ಸುಬ್ಬನಿಗೆ ಒಂದು ಚಿಕ್ಕ Accident ಅಗತ್ತು.

ಆಗಿನಿಂದ ನಾವೆಲ್ಲರೂ ಅವನಿಗೆ "ಆರಾಮಾಗಿ ಇದ್ದೀಯ" ಅಥವಾ "ಚೆನ್ನಾಗಿ ಇದ್ದೀಯ" ಎಂದೇ ಕೇಳಲು ಶುರು ಮಾಡಿದೆವು.

Sunday, September 13, 2009

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ...

ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಈ ಕಾರ್ಯಕ್ರಮವನ್ನು ನಾನು ಶುರು ಆದಾಗಿನಿಂದ ನೋಡುತ್ತಾ ಬಂದಿದ್ದೇನೆ. ಆ ಚಿಕ್ಕ ಪುಟಾಣಿಗಳನ್ನೂ ನೋಡಿದಾಗ, ನನಗೆ ತುಂಬಾ ಖುಷಿಯಾಗುತ್ತಿತ್ತು. ಅದಕ್ಕಿಂತಲೂ ಮತ್ತೊಂದು ವಿಶೇಷ ಎಂದರೆ ಜನಪ್ರಿಯ ಸಂಗೀತ ದಿಗ್ಗಜ ಮಹಾನ ಸಂಗೀತ ನಿರ್ದೇಶಕ "ಹಂಸಲೇಖ" ಮಹಾ ಗುರು ಆಗಿದ್ದು. ಅವರು ನನಗೆ ತುಂಬಾ ಇಷ್ಟವಾಗುವ ಮ್ಯೂಸಿಕ್ ಕಂಪೋಸರ್. ಮತ್ತೆ ನನಗೆ ಮನಸ್ಸಿಗೆ ಹಿಡಿಸಿದ ಒಂದು ವಿಷಯ ಎಂದರೆ ಅವರ ನಗು. ಅವರ ನಗು ನೋಡಿದಾಗ ಹೂವು ಅರಳಿದ ಹಾಗೆ ಅನ್ನಿಸುತಿತ್ತು. ನಿಜವಾಗಿಯೂ ಅವರ ಹಾಡುಗಳು ತುಂಬ ಸುಮಧುರವಾಗಿವೆ....

1. ಹುಟ್ಟೊದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ
2. ಈ ಭೂಮಿ ಬಣ್ಣದ ಬುಗುರಿ
3. ಓ ಗುಲಾಬಿಯೇ! ಓಹೋ ಗುಲಾಬಿಯೇ ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ? ಓಹೋ!
4. ಯಾಹು ಯಾಹೂ!! ಇಂದು ಬಾನಿಗೆಲ್ಲ ಹಬ್ಬ

ಮತ್ತೆ ಪ್ರೇಮಲೋಕದ ಹಾಡುಗಳು ...ವರ್ಣಿಸೋದಕ್ಕೆ ಆಗುವದಿಲ್ಲ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ ಎಂಬುದು ಸಂತೋಷದ ವಿಷಯ.

ಅವರು ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಹಲವಾರು.

ಅವರಿಗೆ ನನ್ನದೊಂದು ಸಾಷ್ಟಾಂಗ ನಮಸ್ಕಾರ.

ಚಿತ್ರ ಕೃಪೆ: ಅಂತರ್ಜಾಲ.

Monday, September 7, 2009

ಮೂಢನಂಬಿಕೆ ....

ಒಂದು ದಿವಸ ಸುಬ್ಬನಿಗೆ ಟೀ ಪೌಡರ್ ತರಲು ಹೇಳಿದ್ದಾಗ ಹಾಗೆ ೫ ನೇ ಕ್ರಾಸ್ನಲ್ಲಿ ತಿರುಗಾಡುತ್ತ ಇದ್ದ. ಮಂಜನಿಗೆ ಟೀ ಕುಡಿಯದೆ ಪ್ರಾತಃ ಕಾಲದ ಕೆಲಸಗಳು ಆಗುವದಿಲ್ಲವಾದ್ದರಿಂದ ಅವನೇ ಹೋಗಿ ನೋಡಿದಾಗ , ಅವನು ಹಾಗೆ ತಿರುಗಾಡುತ್ತ ಇದ್ದದ್ದನ್ನು ನೋಡಿದ, ಆಗಲೇ ಎದುರಿಗಿನ ಮನೆ ಆಂಟಿನು ಹೊರಗಡೆ ಬಂದಿದ್ದನ್ನು ನೋಡಿ ಮಂಜ ಅವನಿಗೆ ಏನೋ? ಆಂಟಿಗೆ ಲೈನ್ ಹೋಡಿತ ಇದ್ದೀಯ ಟೀ ಪೌಡರ್ ತರುವದು ಬಿಟ್ಟು ಎಂದು ಗದರಿಸಿದ್ದ. ಅನಂತರ ಸುಬ್ಬ ಬೆಕ್ಕು ಅಡ್ಡ ಹೋಯಿತು ಅದಕ್ಕೆ 3 ಜನ ದಾಟಿ ಹೋದ ಮೇಲೆ ತರಬೇಕೆಂದು ಕಾಯುತ್ತಿದ್ದೆ ಎಂದು ಹೇಳಿದರು ಕೂಡ ಮಂಜ ಮಾತ್ರ ಅವನನ್ನು ಪೀಡಿಸುವದು ಬಿಡಲಿಲ್ಲ.

ಸುಬ್ಬ ಮೂಡನಂಬಿಕೆ, ಗೊಡ್ಡು ಸಾಂಪ್ರದಾಯಗಳ ಒಂದು ಆಗರವೇ ಆಗಿದ್ದಾನೆ. ಹೀಗೆ ಒಂದು ದಿವಸ ಬೆಕ್ಕಿಗೆ ಅವರ ಮನೆ ಹಾಲು ಕುಡಿಯುತ್ತಿದ್ದಾಗ ಜೋರಾಗಿ ಹೊಡೆದಿದ್ದಾನೆ ಅದು ಮೂರ್ಚೆ ಹೋಗಿದೆ. ಅಪ್ಪ ಹೇಳಿದ ವೇದಾಂತ ನೆನಪಾಗಿದೆ "ಬೆಕ್ಕನ್ನ ಸಾಯಿಸಿದರೆ ಬಂಗಾರದ ಬೆಕ್ಕು ಮಾಡಿಕೊಟ್ಟರು ಪಾಪ ಹೋಗುವದಿಲ್ಲ" ವೆಂದು. ಹೆದರಿ ಅಳುತ್ತ ಕುಳಿತಿದ್ದ. ಅಷ್ಟರಲ್ಲೇ ಬೆಕ್ಕು ಮೂರ್ಚೆಯಿಂದ ಎಚ್ಹೆತ್ತು ಅವನ ಕಾಲಿಗೆ ಅದರ ಉಗುರಿನಿಂದ ಚೂರಿ(ಜೆಬರಿ) ಓಡಿ ಹೋಗಿತ್ತು .

ಸುಬ್ಬನಿಗೆ ಒಂದು ದಿವಸ ತುಂಬ ಅರ್ಜೆಂಟ್ ಸಂಡಾಸ ಬಂದಿತ್ತು ಬೆಕ್ಕು ಅಡ್ಡ ಬಂತು ಅಂತ ಸಂಡಾಸ ಮಾಡದೇ ಬೇರೆ ಮೂರೂ ಜನ ಹೋದ ಮೇಲೆ ಹೋಗುವೆ ಎಂದು ಹಾಗೆ ನಿಂತಿದ್ದ ಆಮೇಲೆ ಚಡ್ಡಿಯಲ್ಲಿಯೇ ಎಲ್ಲವನ್ನು ಮುಗಿಸಿದ್ದ.

ಈಗ ಸುಬ್ಬ "ಬ್ಲೂ ಸಫಾಯರ" ಉಂಗುರವನ್ನು ಮಾಡಿಸಿದ್ದಾನೆ. ಏನಾದರು ಕೇಳಿದರೆ ದೊಡ್ಡ ದೊಡ್ಡ ಸ್ಟಾರ್ ಗಳು ಹಾಕಿಕೊಳ್ಳುತ್ತಾರೆ ಅದಕ್ಕೆ ಹಾಕಿಕೊಂಡಿದ್ದೇನೆ ಎಂದು ಬೀಗುತ್ತಾನೆ. ಮತ್ತೆ ಒಂದು ದಿವಸ ಬ್ಲೂ ಸಫಾಯರ ತೆಗೆದು "ಪಚ್ಚೆ" ಉಂಗುರ ಹಾಕಿಕೊಂಡಿದ್ದ. ಕೇಳಿದಾಗ ಒಬ್ಬ ಮಹಾನ ಜ್ಯೋತಿಷಿಗಳು ಹೇಳಿದ್ದಾರೆ ಎಂದ. ಸ್ವಲ್ಪೇ ದಿವಸದಲ್ಲಿ ಅದನ್ನು ತೆಗೆದು ಮತ್ತೆ ಬ್ಲೂ ಸಫಾಯರ ಹಾಕಿಕೊಂಡಿದ್ದ. ಅನಾಮತ್ತಾಗಿ 6೦೦೦/- ರೂಪಾಯಿಗಳನ್ನು ಇದಕ್ಕೆ ಖರ್ಚು ಮಾಡಿದ್ದ.

ಏ ಸುಬ್ಬ ಇದನ್ನೆಲ್ಲಾ ನಂಬ ಬಾರದೋ ಎಂದು ಮಂಜ ಗಳಗನಾಥ್ ಆಚರ್ಯರರ ಕಾಗೆ ಶಾಂತಿ ಕಥೆ ಹೇಳಲು ಪ್ರಾರಂಬಿಸಿದ.

ಹೀಗೆ ನನ್ನ ಮನೆಯ ಸಮೀಪವಿರುವ ಗಳಗನಾಥ ಆಚಾರ್ಯರು ಮಗನಿಗೆ ಅವರ ಅಮ್ಮನ ಪಿಂಡವನ್ನು ಕಾಗೆಗೆ ಇಡಲು ಹೇಳಿದ್ದರು. ಯಾವದೇ ಕಾಗೆ ಅದನ್ನು ಮುಟ್ಟಲಿಲ್ಲ. ಆಗ ಜಯೇಂದ್ರ ಕಾಗೆಯನ್ನು ಹಿಡಿದು ತಂದು ಅವರಜ್ಜಿ ಪಿಂಡದ ಮುಂದೆ ಕಟ್ಟಿ ಹಾಕಿದ್ದ. ಕಾಗೆಯ ಚೀರಾಟದಿಂದ ತುಂಬ ಕಾಗೆಗಳು ಗಳಗನಾಥ್ ಆಚಾರ್ಯರರ ಮನೆಯ ಮುಂದೆ ಜಮಾಯಿಸಿದ್ದವು. ಅವುಗಳ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ಮಗ ಜಯೇಂದ್ರ ಪಿಂಡವನ್ನು ಕಾಗೆಗೆ ತಿನ್ನಿಸಲು ಪ್ರಯತ್ನಿಸುತ್ತಿದ್ದ. ಅದನ್ನು ನೋಡಿದ ಗಳಗನಾಥ ಆಚಾರ್ಯರು ಜಯೇಂದ್ರನಿಗೆ ಉಗಿದು ಕಾಗೆ ಶಾಂತಿ ಮಾಡಿಸಿದ್ದರು. ಕಾಗೆಗಳು ಮಾತ್ರ ಪಿಂಡವನ್ನು ಮುಟ್ಟಲಿಲ್ಲ.

ವಾಸ್ತು ಪ್ರಕಾರ ಒಂದು ಚಿಕ್ಕದಾದ ಮೀನ ತಂದು ಇಟ್ಟಿದ್ದ ಗಳಗನಾಥ ಆಚಾರ್ಯರ ಮಗ ಜಯೇಂದ್ರ. ಕಣ್ಣು ಕಾಣದ ಅವನ ಅಜ್ಜಿ ಅದನ್ನು ಸಾರಿಗೆ ಹಾಕಿ ಮೀನಿನ ಸಾರನ್ನು ಮಾಡಿದ್ದಳು.

ನಾನು ಮತ್ತು ನನ್ನ ಗೆಳೆಯ ಶಿವಮೊಗ್ಗ ದಲ್ಲಿ ಇದ್ದಾಗ ತುಂಬ ಹಲ್ಲಿಗಳು ಇದ್ದವು ಅವು ದಿನವು ನಮ್ಮ ಮೇಲೆ ಬೀಳುತ್ತಿದ್ದವು ಎಂದು ಹೇಳಿದ. ಇವೆಲ್ಲ ಮೂಡ ನಂಬಿಕೆಗಳು ನಂಬಬಾರದು

ನಿನಗೆ ಗೊತ್ತ ಚೀನಾ ದೇಶದಲ್ಲಿ ಚೈನೀಸ್ಗಳು ಬೆಕ್ಕು ಮತ್ತು ಕೊತೀನ ತಿನ್ನುತ್ತಾರೆ ಎಂದು ಹೇಳಿದ.

ಅದಕ್ಕೆ ಸೊಪ್ಪು ಹಾಕಿದಂತೆ ನಾನು ಶುರು ಹಚ್ಚಿಕೊಂಡೆ ನೋಡು ಸುಬ್ಬ ವಿವೇಕಾನಂದ ಅವರು ಹೇಳಿದಂತೆ "Strength is Life Weekness is death". ಯಾವತ್ತು ನಮ್ಮ ಮನಸ್ಸಿಗೆ ಇಂತಹ ವಿಚಾರಗಳನ್ನು ಎಡೆ ಮಾಡಿ ಕೊಡಬಾರದು ಎಂದು.

ಹೀಗೆ ಒಂದು ದಿವಸ ಕಪ್ಪೆ ಮದುವೆ ಮಾಡಿಸಿದರೆ ಮಳೆಯಾಗುತ್ತೆ ಎಂದು ನಮ್ಮ ರೈತರು ಕಪ್ಪೆಯನ್ನು ಹಿಡಿಯಲು ಹೋಗಿ ಎಷ್ಟು ಕಪ್ಪೆ ಸಾಯ್ಸಿದ್ದರೋ ಏನೋ. ಕಡೆಗೂ ಹಿಡಿದು ಮದುವೆಯಾದ ಮೇಲೆ ಗೊತ್ತಾಗಿತ್ತು ಅವೆರಡು ಗಂಡು ಕಪ್ಪೆಗಳು ಅಂತ.

ನೋಡು ಸುಬ್ಬ ಜೀವನ ದೇವರು ನಡೆಸಿದ ಹಾಗೆ ಆಗುತ್ತೆ ಅದಕ್ಕೆ ಅಂತ ನಾವು ತೆಲೆಯಲ್ಲಿ ಏನೇನೋ ಗೊಡ್ಡು ಸಂಪ್ರದಾಯಗಳನ್ನ ಹಾಕಿ ಕೊಳ್ಳಬಾರದು.

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ


ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು....

ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ
ಯಾರು ಇಂದು ಬಲ್ಲವರು

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು....

ಕಾನನ ಬರಲಿ ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ
ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ
ನಿಲ್ಲದ ಈ ಪಯಣದ ಗುರಿಯ
ಯಾರು ಇಂದು ಕಂಡವರು

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ಚಿ ಉದಯ್ ಶಂಕರ್ ಅವರ ಈ ಹಾಡು ಎಷ್ಟು ಸಮಂಜಸ ಎಂದು ಹೇಳಿದೆ. ದೇವರು ಯಾವತ್ತು ವಿಶಾಲವಾದಂತ ಹೃದಯವಿದ್ದವನು ಅವನು ಎಲ್ಲರಿಗು ಒಳ್ಳೆಯದನ್ನು ಮಾಡುತ್ತಾನೆ. ಎಲ್ಲವು ದೇವರೇ ಆಗಿದ್ದಾನೆ ಈ ಪುರುಂದರ ದಾಸರ ಹಾಡು ನೆನಪಿಸಿಕೋ ಎಂದಾದರೂ ಇಂತಹ ವಿಚಾರಗಳು ಬಂದಾಗ ಎಂದು ಹೇಳಿದೆ.

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ಪ

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ೧

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ೨

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರ ವಿಟ್ಟಲನೆ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ೩

ನಮ್ಮ ಪ್ರಖ್ಯಾತ ಕವಿ ಕೆ. ಎಸ್. ನರಸಿಂಹಸ್ವಾಮಿ ಗಳು ಇದನ್ನೇ ಹೇಳಿದ್ದು.

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ,
ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ಇರಲಿ ಏಕ

ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಆಗೊಂದು ಸಿಡಿಲು
ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಕಡಲೂ ನಿನ್ನದೆ,ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಮತ್ತೆ ಈ ಹಿಂದಿ ಹಾಡಿನಲ್ಲಿ ಹೀಗೆ ಹೇಳಿದ್ದಾರೆ.
जिसका जितना हो आंचल यहां पर उसको सौगात उतनी मिलेगी

ಮತ್ತೆ ಸಂಸ್ಕೃತದಲ್ಲಿ ಹೀಗೆ ಹೇಳಿದ್ದಾರೆ.
ತೇನ ವಿನಾ ತೃಣಮಪಿ ನ ಚಲತಿ - ಅವನಿಲ್ಲದೆ(ಭಗವಂತನಿಲ್ಲದೆ) ಒಂದು ಹುಲ್ಲುಕಡ್ಡಿಯೂ ಅಲುಗಾಡದು.

ಎಂದು ಅವನನ್ನು ತಿಳಿಹೇಳಿದಾಗ ಅವನು ಸ್ವಲ್ಪ ಸುಧಾರಿಸಿದ್ದಾನೆ. ಮತ್ತೆ ಬೆಕ್ಕು ಅಡ್ಡ ಬರದಿರಲಿ ಎಂದು ಆಶಿಸೋಣ....

Sunday, September 6, 2009

ತರ್ಲೆ ಮಂಜ(ಗ) ಮತ್ತು ಸೀದಾ ಸಾದಾ ಸುಬ್ಬ ....

ಒಂದು ದಿವಸ ನಮ್ಮ ಶಾಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. ಗೋವಾ ತಲುಪಿ ಅಲ್ಲಿ ಬೀಚ್ ನೋಡಲು ಕರೆದುಕೊಂಡು ಹೋಗಿದ್ದರು. ಅಲ್ಲಿ ಬೀಚ್ ನೋಡಿ ಬರುವಾಗ ನಮ್ಮ ಮಂಜನ ಕೈಯಲ್ಲಿ ಫೌಂಟೆನ್ ಪೆನ್ ಇತ್ತು. ಅದನ್ನು ನೋಡಿ ನಮ್ಮ ಸುಬ್ಬ ಎಲ್ಲಿಂದ ತೆಗೆದುಕೊಂಡೆ ಎಂದು ಕೇಳಿದ. ನಿನಗೂ ಬೇಕಾದರೆ ಹೇಳುವೆ ಯಾರಿಗೂ ಹೇಳಬೇಡ ಎಂದ.

ಅನಂತರ ಸ್ವಲ್ಪ ಮುಂದೆ ಹೋದ ಮೇಲೆ ಸುಬ್ಬ ಒಬ್ಬ ಬಿಳುಪು(ತೊನ್ನು) ಹತ್ತಿದ ಹುಡುಗಿಗೆ ಏನೋ ಹೇಳಲು ಹೋಗಿ ಹೊಡೆತ ತಿಂದಿದ್ದ. ಏನು ಆಯಿತು ಎಂದು ಕೇಳಿದಾಗ ಆ ಹುಡುಗಿ ಧಾರವಾಡದವಳೇ ಆಗಿದ್ದಳು. ಅವಳಿಗೆ ಇವನು ಕೆಟ್ಟ ಧಾರವಾಡದ ಶಬ್ದಗಳಿಂದ ಬೈದಿದ್ದ. ಟೀಚರ್ ಚೆನ್ನಾಗಿ ಏಟುಗಳು ಕೊಟ್ಟು ಬಿಟ್ಟಿದ್ದರು.

ಆನಂತರ ಸಂಜೆ ಸುಬ್ಬ ಮಂಜನೊಂದಿಗೆ ಜಗಳ ಶುರು ಮಾಡಿಕೊಂಡಿದ್ದ. ಏನು ಆಯಿತು? ಎಂದು ನಾವು ಜಗಳ ಬಿಡಿಸಿ ಕೇಳಿದಾಗ. ಸುಬ್ಬ ತೊದಲುತ್ತ ಇವನ ಕಡೆ ಒಂದು ಫೌಂಟೆನ್ ಪೆನ್ ಇತ್ತು. ಅದು ಹೇಗೆ ಬಂತು ಎಂದು ಕೇಳಿದೆ ಅದಕ್ಕೆ ಇವ.. ಇವ.. ಎಂದು ಬಿಕ್ಕಿ ಬಿಕ್ಕಿ ಅಳಲಾರಂಬಿಸಿದ. ಲೇ ನಾ ಹೇಳುತ್ತೇನೆ ಎಂದ ಮಂಜ ಬೀಚಿನಲ್ಲಿ ಇರೋ ಅರೆ ಬೆತ್ತೆಲೆ ಫಾರಿನ್ ಹುಡುಗಿಯರನ್ನು ನೋಡಿ ನಾನು ಧಾರವಾಡ ಭಾಷಾದಾಗ ಬೈದೆ ಅವ್ರಿಗೆ ಏನು ತಿಳಿತೋ ನನಗೆ ಗೊತ್ತಿಲ್ಲ ಅವರು ನನಗೆ ಈ ಫೌಂಟೆನ್ ಪೆನ್ ಕೊಟ್ಟರು. ಅದನ್ನು ಇವನಿಗೆ ಹೇಳಿದೆ ಇವ ಹೋಗಿ ಹೋಗಿ .. ಫಾರಿನ್ ಹುಡುಗಿ ಅಂತ ತಿಳ್ಕೊಂಡು ಧಾರವಾಡದ ಬಿಳುಪು (ತೊನ್ನು) ಹತ್ತಿದ ಹುಡುಗಿ ಮ್ಯಾಲೆ ಪ್ರಯೋಗ ಮಾಡ್ಯಾನ... ಲೇ ಮೊದಲು ಅವರು ಬೆತ್ತಲೆ ಇದ್ದಾರೋ ಇಲ್ಲೋ ನೋಡ್ಬೇಕು ಆಮೇಲೆ ಬೈಬೇಕು. ಎಂದಾಗ ನಾವೆಲ್ಲರೂ ನಕ್ಕಿದ್ದೆ ನಕ್ಕಿದ್ದು.

ನಮ್ಮ ಸೀದ ಸಾದಾ ಸುಬ್ಬನಿಗೆ ಎಷ್ಟೇ ತೊಂದರೆಯಾದರು.. ನಮ್ಮ ತರ್ಲೆ ಮಂಜನ ಪಾಠ ಪ್ರವಚನ ಕೇಳುವದು ಬಿಟ್ಟಿಲ್ಲ. ಹೀಗೆ ಒಂದು ದಿವಸ ಕೆಮೆಸ್ಟ್ರಿ ಮಾಸ್ತರರು ಒಂದು ದಿವಸ ನಾಳೆ Alcohol ತಯಾರಿಸುವ ಪ್ರಾಕ್ಟಿಕಲ್ ತೋರಿಸುತ್ತೇನೆ. ಎಲ್ಲರು ಒಂದು ನ್ಯಾಪ್ಕಿನ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಲೇ "ಪಂಚಾಮೃತ ಮನ್ಯಾ" ನೀನು ಮುಂದ ಇರೋ.. ಎಂದು ಕೂಗಿ ಕೆಮೆಸ್ಟ್ರಿ ಮಾಸ್ತರರು ಹೇಳಿದ್ದರು. ಸುಬ್ಬ ನಿದ್ದೆಗಣ್ಣಲ್ಲಿ ಇದ್ದ. ಅವರು ಏನು ಹೇಳಿದ್ದರು ಎಂದು ತಿಳಿಯಲಿಲ್ಲ.

ಅನಂತರ ಸುಬ್ಬ ನಮ್ಮ ತರೆಲೆ ಮಂಜನಿಗೆ ಕೇಳಿದ್ದಾನೆ. ಅವನು ಏನು ಇಲ್ಲ ಕಣೋ ನ್ಯಾಪ್ಕಿನ್ ತೊಗೊಂಡು ಬಾ ಎಂದು ಹೇಳಿದ್ದಾರೆ ಎಂದ. "ಹಾಗೆ ಎಂದರೆ" ಎಂದು ಕೇಳಿದ. ಅಷ್ಟೇ ಬೇಕಾಗಿತ್ತು ನಮ್ಮ ಮಂಜನಿಗೆ ಏನು ಇಲ್ಲ ಲೇ ಹೋಗಿ Medical Shop ನ್ಯಾಗ ಕೇಳು ಕೊಡ್ತಾರ ಎಂದಿದ್ದಾನೆ.

ಮರುದಿನ ಮಾಸ್ತರ ಎಲ್ಲರು "ನ್ಯಾಪ್ಕಿನ್ ತಂದಿರೆನೋ" ಎಂದು ಕೇಳಿದರು. ಎಲ್ಲರು ನ್ಯಾಪ್ಕಿನ್ ತೋರಿಸಿದರು ಆದರೆ ಸುಬ್ಬನ ಕೈನಲ್ಲಿ ಇದ್ದ ಹಸಿರು ಪ್ಯಾಕೆಟ ನೋಡಿ ಮಾಸ್ತರರಿಗೆ ಮೈಯಲ್ಲ ಮುಳ್ಳು ಬಂದಿತ್ತು. ಅದು ಹುಡುಗಿಯರ ಎದುರಿಗೆ ಇದೇನು ತೆಗೆದು ಕೊಂಡು ಬಂದಿದ್ದಾನೆ ಎಂದು. ಮಾಸ್ತರ ಹುಣಿಸೆ ಬರಲು ತೆಗೆದು ಬಾರಿಸಲು ಶುರು ಮಾಡಿದ್ದಾರೆ. ಆಗ ಸುಬ್ಬ ಸರ್.. ಸರ್ .. ನನಗೆ ಏನು ಗೊತ್ತಿಲ್ಲ ಸರ್ .. ಎಂದ. ಮತ್ಯಾರಿಗೆ ಗೊತ್ತ ನಮ್ಮಪ್ಪ ಗೊತ್ತೇನೆ. ನಾಳೆ ನಿಮ್ಮ ಅಪ್ಪನ ಕರ್ಕೊಂಡು ಬಾ .. ಎಂದು ಮಾಸ್ತರ ಹೇಳಿದ್ದಾರೆ. ಆಗ ಮಂಜನೆ ಹೇಳಿದ್ದು ಎಂದು ಹೇಳಿದ್ದಾನೆ. ಆಗ ಮಾಸ್ತರ ತುಂಬಾ ಸಿಟ್ಟಿಗೆದ್ದು ಮಾಸ್ತರ ಮಂಜನ ಕಡೆಗೆ ಬಂದು ಏನು ಕೇಳದೆ ಬಾರಿಸಲು ಶುರು ಮಾಡಿ ಬಿಟ್ಟರು. ನೀನು ಯಾವಾಗಲೇ ಕೆಮೆಸ್ಟ್ರಿ ಹೇಳಲಿಕ್ಕೆ ಶುರು ಮಾಡಿದೆ. ಲೇ .. ಎಂದು. ಆಗ ಮಂಜ ಇಲ್ಲ.. ಇಲ್ಲ... ಸರ್ ನಾನೇನು ಹೇಳಿಲ್ಲ ನೋಡ್ರಿ ಬೇಕಾರ ನಾನು ಕರವಸ್ತ್ರ ತೊಗೊಂಡು ಬಂದೇನಿ. ಅವ ಸುಳ್ಳ ಹೇಳಾ ಕತ್ತ್ಯಾನ ಸರ್ ಎಂದು ಗೊಳೋ ಅಂತ ಅಳಲಾರಂಬಿಸಿದ. ಮಾಸ್ತರ ಮಂಜನ ಕೈ ಯಲ್ಲಿ ವಸ್ತ್ರ ನೋಡಿ. ಮಂಜನ ಬಿಟ್ಟು ಮತ್ತೆ ಸುಬ್ಬನ ಕಡೆ ಹೋಗಿ "ಸುಳ್ಳು ಹೇಳ್ತಿ ಮಗನ" ಎಂದು ಚೆನ್ನಾಗಿ ಬಾರಿಸಿ. ಪ್ರಾಕ್ಟಿಕಲ್ ಹೇಳದೆ staff ರೂಂ ಹೋಗಿ ಬಿಟ್ಟರು. ಅನಂತರ ಸುಬ್ಬನನ್ನು ಕರೆದು ಹೀಗೆಲ್ಲ ಮಾಡಬಾರದು ಎಂದು ತಿಳಿ ಹೇಳಿದ್ದರು.