Thursday, June 21, 2012

ಕೋಟಿ ಕೊಟ್ಟರು ಸಿಗದ ಲಕ್ಷ್ಯ ....

ಏನು? ಎಂದು ಮಡದಿಗೆ ಕೇಳಿದೆ. ಅವಳು ಮತ್ತೆ ನನಗೆ ಏನು? ಎಂದು ಕೇಳಿದಳು. ಏನೋ ಅಂದ ಹಾಗೆ ಇತ್ತು ಎಂದೆ. ನಿಮ್ಮ ಪೂರ್ವಜರು ವಿಜಾಪುರದವರ ಎಂದು ಕೇಳಿದೆ ಎಂದಳು. ಏಕೆ? ಎಂದು ಕೇಳಿದೆ. ನಿಮಗೆ ಪ್ರತಿಧ್ವನಿ ಕೇಳುವವರೆಗೂ ಉತ್ತರಿಸುವುದಲ್ಲ ಎಂದು ಕುಹಕವಾಡಿದಳು. ನಿನ್ನೆ ಆಡಿದ ಮಾತು ಇವತ್ತು ಕೇಳಿಸಿದೆ ನಾನು ಸುಮ್ಮನೆ ಇದ್ದರು, ಕರೆದ ಹಾಗೆ ಆಯಿತು ಎಂದರೆ ಏನು ಹೇಳುವುದು ಎಂದಳು. ನಿನ್ನೆ ಅವಳು ಏನೋ ಹೇಳಲು ಬಂದಾಗ ನನ್ನ ಲಕ್ಷ್ಯ ಬೇರೆಲ್ಲೋ ಇತ್ತು. ಹೀಗಾಗಿ ಅವಳಿಗೆ ಉತ್ತರಸಲಿಲ್ಲ. ಹೀಗಾಗಿ ಮತ್ತೊಮ್ಮೆ ಏನು? ಎಂದು ಕೇಳಿದಾಗ ಏನು ಇಲ್ಲ ಎಂದು ಮುನಿಸಿಕೊಂಡಿದ್ದಳು.

ಒಮ್ಮೆ ಮೈಸೂರಿಗೆ ನಮ್ಮ ನಿರ್ದೇಶಕರು ಬ೦ದಿದ್ದರು. ಅವರು ಸ್ನಾನ ಮಾಡುತ್ತೇನೆ ಎ೦ದು ನನಗೆ ಹೇಳಿ ಹೋಗುತ್ತಿದ್ದಾಗ, ನಾನು ಏನೋ? ಯೋಚನೆ ಮಾಡುತ್ತ ಸ್ನಾನಕ್ಕೆ ಹೋಗು ಎಂದು ಹಾಗೆ ಅನ್ನಿಸಿ, ನಾನು ಸ್ನಾನಕ್ಕೆ ಹೊರಟುಹೋದೆ. ಪಾಪ ನಮ್ಮ ನಿರ್ದೇಶಕರು ನನ್ನ ಸ್ನಾನ ಮುಗಿಯುವರಗೆ ಟಾವೆಲ್ ಮೇಲೆ ಹಾಗೆ ನಿಂತಿದ್ದರು. ನಮ್ಮ ಆಫೀಸ್ ಡ್ರೈವರ್ ನಮ್ಮ ನಿರ್ದೇಶಕರ ಪರಿಸ್ತಿತಿ ನೋಡಿ ಒಳಗೊಳಗೇ ನಗುತ್ತಿದ್ದ.

ಒಮ್ಮೆ ಹಾಗೆ ನಾನು ನನ್ನ ಮಗನಿಗೆ ನಿದ್ದೆಯಿಂದ ಎದ್ದು ಬಂದ ಮೇಲೆ, ಏ ಪುಟ್ಟ ಬಾತ್ ರೂಂ ನಲ್ಲಿಯ ಫ್ಯಾನ್ ಬಂದ್ ಮಾಡು ಎಂದೆ. ನನ್ನ ಹೆಂಡತಿ ಮತ್ತು ಮಗ ಇಬ್ಬರು ನಗಲು ಶುರು ಮಾಡಿದರು. ನಿಮ್ಮಪ್ಪ ಲಕ್ಷ್ಯ ಅಷ್ಟೇ ಎಂದಳು. ಕೆಲವೊಮ್ಮೆ ಬೈಕ್ ಹೊಡೆಯುತ್ತ ಪ್ಯಾಂಟಿನಲ್ಲಿ ಬೈಕ್ ಕೀ ಎಲ್ಲಿ ಎಂದು ತಡಕಾಡಿದ್ದು ಇದೆ.

ಒಮ್ಮೆ ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮ ಲಕ್ಷ್ಯ ಬೇರೆ ಎಲ್ಲೋ ಇಟ್ಟು, ನನಗೆ "ಊಟ ಆದಮೇಲೆ ಊಟ ಮಾಡು" ಎಂದು ಹೇಳಿದ್ದಾಗ ನಮ್ಮ ಮನೆಯಲ್ಲಿಯ ಎಲ್ಲರು ನಗೆ ಗಡಲಿನಲ್ಲಿ ತೇಲಿ ಹೋಗಿದ್ದೆವು. ನಾನು ಇಷ್ಟು ಲೇಖನ ಬೇರೆಯುವುದಕ್ಕೆ ಅವಳೇ ಕಾರಣ. ಅವಳು ಅವತ್ತು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರೆ ನನಗೆ ಏನು? ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ನಾನು ಒಮ್ಮೆ ಸುಬ್ಬನ ಮನೆಗೆ ಹೋಗಿದ್ದೆ. ಅಲ್ಲೇ ಕುಳಿತಿದ್ದ ಸುಬ್ಬನ ಅಮ್ಮ ನನ್ನನ್ನು ಎಲ್ಲಿ ನಿಮ್ಮ ಸಾಥಿ ಎಂದು ಮಂಜನನ್ನು ವಿಚಾರಿಸಿದರು. ನಾನು ಮಂಜ ಮೋರಿಗೆ ಹೋಗಿದ್ದಾನೆ ಎಂದೆ. ಇಲ್ಲಿ ಯಾವ ಮೋರಿ ಯಾವಾಗ ತೆರೆದಿರುತ್ತೆ ತಿಳಿಯೋಲ್ಲ.. ಪಾಪ ಮಂಜ ಏನಾಯಿತೋ ಏನು? ಎಂದು ಬೈಯಲು ಶುರು ಮಾಡಿದರು. ನಾನು ಅದು ಒಂದು ಅಂಗಡಿಯ ಹೆಸರು ಎಂದು ಹೇಳಿದ ಮೇಲೆ, ನಿಟ್ಟುಸಿರು ಬಿಟ್ಟು ,ಅದೇನು ಅಂತ ಹೆಸರು ಇಡುತ್ತರೋ ಏನೋ? ಎಂದು ಅಂದರು. ನಮ್ಮ ಸುಬ್ಬ ನಮ್ಮ ಅಮ್ಮನ ಲಕ್ಷ್ಯ ಅಷ್ಟೇ... ಅವಳು ಏನೋ ಯೋಚನೆ ಮಾಡುತ್ತಿರುತ್ತಾರೆ. ನಮ್ಮ ಮಾತಿನ ಬಗ್ಗೆ ಲಕ್ಷ್ಯ ಇರುವುದಿಲ್ಲ ಎಂದ. ಅದಕ್ಕೆ ಅವರ ಅಮ್ಮ ಮತ್ತ್ಯಾರ ಬಗ್ಗೆ ಯೋಚಿಸಲಿ ನಿನ್ನ ಬಗ್ಗೆನೇ ಎಂದರು. ನಮ್ಮ ಬಗ್ಗೆ ಯೋಚನೆ ಮಾಡುತ್ತ , ನಮ್ಮ ಮಾತಿಗೆ ಅಲಕ್ಷ್ಯ ಮಾಡುತ್ತಿ ಎಂದು ಸುಬ್ಬ ನಕ್ಕ.

ಒಮ್ಮೆ ಹಾಗೆ ಹೋಗುತ್ತಿದ್ದಾಗ ಮಂಜನನ್ನು ನೋಡಲಿಲ್ಲ. ನಮ್ಮ ಮಂಜ ನನ್ನನ್ನು ಲಕ್ಷ್ಯಾದಿಪತಿಗಳೇ ಎಂದು ತಡೆದು, ಲಕ್ಷ್ಯದ ಬಗ್ಗೆ ಭಾಷಣ ಶುರು ಮಾಡಿದ. ಮಂಜ ನನಗೆ ಈ ಲಕ್ಷ್ಯ ಎನ್ನುವುದು ತುಂಬಾ ಮುಖ್ಯವಾದುದು. ನಾನು ತುಂಬಾ ಸಾರಿ ನೋಡಿದ್ದೇನೆ ನಿನ್ನ ಲಕ್ಷ್ಯ ನಿನ್ನ ಬಳಿ ಇರುವುದಿಲ್ಲ ಎಂದು ಹೇಳಿದ. ನಾವು ಅರೋಗ್ಯವನ್ನು ಅಲಕ್ಷ್ಯ ಮಾಡಿದರೆ ಅಷ್ಟೇ. ಮಾತುಗಳು ಅಷ್ಟೇ ಲಕ್ಷ್ಯವಿಟ್ಟು ಮಾತನಾಡಬೇಕು. ನಿನ್ನ ಲೇಖನಗಳಿಗೆ ಎಂದು ಲಲಿತ ಪ್ರಬಂದ ಎಂದು ಹಾಕಬೇಡ. ಏಕೆಂದರೆ ಲಲಿತ ಎಂಬ ಹೆಸರಿನ ವ್ಯಕ್ತಿ ಬಂದು ಅದು ನನ್ನ ಪ್ರಬಂದ ಎಂದರೆ ಕಷ್ಟ. ಆಮೇಲೆ ನೀನು ಕೋರ್ಟಿಗೆ ಹೋದರು ಪ್ರಯೋಜನ ಇಲ್ಲ. ಏಕೆಂದರೆ ಮೊದಲೇ ಕೋಟಿ-ಕೋಟಿ ಕೇಸ್ ಗಳ ನಡುವೆ ನಿನ್ನ ಕೇಸ್ ನಿರ್ಲಕ್ಷ್ಯ ಆಗುತ್ತೆ ಎಂದು ವ್ಯಂಗ್ಯವಾಡಿದ. ಮತ್ತೆ ನಿನಗೆ ಗೊತ್ತ ಮಹಾಲಕ್ಷ್ಮಿ ಬಳಿ ಹೋಗಿ ಕೋತಿ ಹಾಗೆ ಕೋಟಿ ಕೇಳುವ ನಾವು ಲಕ್ ಮತ್ತು ಲಕ್ಷ್ಯ ಕೇಳುವುದು ಸೂಕ್ತ. ಯಾವತ್ತು ಚೆನ್ನಾಗಿರುವವರನ್ನು ಎಷ್ಟು ಲಕ್ಷಣವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅದೇ ಚೆನ್ನಾಗಿ ಇರದವರನ್ನು ಕೋಟಿಯ ಉಪಮೆಯವಾದ ಕೋತಿ ಹಾಗೆ ಇದ್ದಾನೆ ಎಂದು ಹೇಳುವುದ ಉಂಟು. ಈ ಲಕ್ಷ್ಯ ಎನ್ನುವುದು ಕೋಟಿ ಕೊಟ್ಟರು ಸಿಗುವುದಿಲ್ಲ ತಿಳಿಯಿತಾ? ಎಂದು ಭಾಷಣ ಬಿಗಿದ.ಯಾವತ್ತು ಮನುಷ್ಯನ ಮನಸು ಮಗುವಾಗಿ ಇರಬೇಕು. ನಾವು ದೊಡ್ಡವರಾದಂತೆ ದಡ್ದರಾಗುತ್ತೇವೆ. ನಮ್ಮ ಲಕ್ಷ್ಯ ಲಕ್ಷ-ಕೋಟಿ ಕಡೆ ಹೊರಳಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ಮತ್ತೆ ನಾವು ಎಂತಹ ಜನ ಎಂದರೆ ನಿದ್ದೆ ನಿದ್ದೆ ಎಂದು ಸಾಯುತ್ತೇವೆ, ಸಾವು ಬಂದರೆ ಓಡುತ್ತೇವೆ ಎಂದ.

ಅಷ್ಟರಲ್ಲಿ ಮಂಜನ ಮಡದಿ ಕೋಪದಿಂದ ಬಂದು ಮಂಜನ ಬಳಿ ಇದ್ದ ಚೀಲವನ್ನು ಕಸಿದುಕೊಂಡು ಹೊರಟು ಹೋದಳು. ಮಂಜ "ನಿನ್ನ ಜೊತೆ ಮಾತನಾಡುತ್ತ ನಾನು ಹಾಲು ತರುವುದನ್ನೇ ಮರೆತಿದ್ದೆ. ಮಗನಿಗೆ ಸ್ಕೂಲ್ ಗೆ ಲೇಟ್ ಆಗುತ್ತೆ " ಎಂದು ಹೇಳಿ ಮಡದಿಯನ್ನು ಹಿಂಬಾಲಿಸುತ್ತಾ ಹೊರಟು ಹೋದ.