Monday, September 28, 2009

ತರ್ಲೆ ಮಂಜ(ಗ)ನ ಐಡಿಯಾಗಳು ....

ಒಂದು ದಿವಸ ಶಾಲೆಯಲ್ಲಿ ಕೆಮಿಸ್ಟ್ರಿ ಕ್ಲಾಸ್ ಮುಗಿದ ಮೇಲೆ ಮಾಸ್ತರ ಪ್ರಯೋಗಗಳನ್ನು ತೋರಿಸಲು ಪ್ರಯೋಗಾಲಯಕ್ಕೆ ಕರೆದು ಕೊಂಡು ಹೋಗಿದ್ದರು. ಅವರು ಪ್ರಯೋಗಗಳನ್ನು ತೋರಿಸುತ್ತಿದ್ದರು, ಸುಬ್ಬನಿಗೆ ಮಾತ್ರ ಬೇರೆ ಕಡೆಗೆ ಲಕ್ಷ್ಯವಿತ್ತು. ಅವನು ಎಲ್ಲ ಬಣ್ಣ ಬಣ್ಣದ ಬಾಟಲಿಗಳನ್ನು ನೋಡುತ್ತಾ ನಿಂತಿದ್ದ. ಆಮೇಲೆ ಸುಮ್ಮನಿರದೆ ಒಂದು ಬಾಟಲಿಯ ಮುಚ್ಚಳವನ್ನು ತೆಗೆದ. ಆಗ ಬಾಟಲಿಯಿಂದ ಹೊಗೆ ಬರಲು ಆರಂಭಿಸಿತು. ಅದನ್ನು ನೋಡಿದ ಸುಬ್ಬ ತುಂಬಾ ಗಲಿಬಿಲಿಗೊಂಡ. ಎಲ್ಲಿ ಮಾಸ್ತರ್ ಅದನ್ನು ನೋಡಿ ಬೈಯುತ್ತಾರೆ ಎಂದು. ಎಲ್ಲಿ ಲ್ಯಾಬ್ ತುಂಬಾ ಹೊಗೆ ಬಂದರೆ ಕಷ್ಟ ಎಂದು ಮುಂದೆ ನಿಂತಿರುವ ಮಂಜನಿಗೆ ಇದನ್ನು ಹೇಳಿದ. ಮಂಜ ಅದನ್ನು ನೋಡಿ ಲೇ ಅದು "ಬಿಸಿಯಾಗಿರಬೇಕು" ಅದಕ್ಕೆ ಸ್ವಲ್ಪ ನೀರು ಸುರಿ ಎಂದು ಐಡಿಯಾ ಕೊಟ್ಟ. ಆನಂತರ ನಮ್ಮ ಸುಬ್ಬ ಸುಮ್ಮನಿರದೆ ಅದಕ್ಕೆ ನೀರು ಸುರಿದು ಬಿಟ್ಟ. ನೋಡ ನೋಡುತ್ತಲೇ ಎರಡೇ ಸೆಕೆಂಡಿನಲ್ಲಿ "ಪಟ ಪಟ " ಎಂಬ ಶಬ್ದ ಬಂದು ಬಾಟಲಿ ಚೂರು ಚೂರು ಆಗಿ ಸುಬ್ಬ ಮತ್ತು ಅವನ ಸಂಗಡ ನಿಂತ ವಿನಯ ಆಸ್ಪತ್ರೆ ಸೇರುವ ಹಾಗೆ ಆಗಿತ್ತು. ಆನಂತರ ಗೊತ್ತಾಗಿತ್ತು ಅದು sulpuric acid ಎಂದು. ಅದಕ್ಕೆ ಯಾವತ್ತು ನೀರು ಹಾಕಬಾರದು ಎಂದು ಅನಂತರ ಕ್ಲಾಸಿನಲ್ಲಿ ಮಾಸ್ತರ್ ಹೇಳಿದ್ದರು.

ಮತ್ತೊಂದು ದಿನ biology ಮಾಸ್ತರ ನಾಳೆ ಲ್ಯಾಬ್ ಇದೆ ಎಲ್ಲರು ಒಂದು ಕಪ್ಪೆ ಹಿಡಿದು ತನ್ನಿರಿ ಎಂದು ಹೇಳಿದರು. ನಾನು ಮತ್ತೆ ಮಂಜ ಕಪ್ಪೆ ಹಿಡಿಯೋಣವೆಂದು ಸಂಜೆ ಮಳೆಯಲ್ಲಿ ಗ್ರೌಂಡ್ಗೆ ಹೋದೆವು. ಎಲ್ಲಿ ಕಪ್ಪೆಗಳು ವಟಗುಡುವಿಕೆ ಕೇಳಿಸುವದೋ ಅಲ್ಲಿ ಟಾರ್ಚ್ ಹಿಡಿದು ಹಿಡಿಯುವ ಹುನ್ನಾರ ನಡಿಸಿದೆವು. ಆದರೆ ಒಂದು ಕಪ್ಪೆ ನಮ್ಮ ಕೈಗೆ ಸಿಗಲೇ ಇಲ್ಲ. ಮತ್ತೆ ಸ್ವಲ್ಪ ಮುಂದೆ ಹೋಗೋಣ ಎಂದು ಮಂಜ ಹೇಳಿದ, ಹಾಗೆಯೇ ಮುಂದೆ ಹೋದೆವು. ಅಷ್ಟರಲ್ಲೇ ತುಂಬಾ ರಭಸದಿಂದ ಚರಂಡಿ ನೀರು ನುಗ್ಗಿ ಬಂದಿತ್ತು. ಮೊಣ ಕಾಲುವರೆಗೆ ಚರಂಡಿ ನೀರು ಇತ್ತು. ಅಷ್ಟರಲ್ಲೇ ಒಂದು ಕಪ್ಪೆ ಕಾಣಿಸಿತು ನಾನು ಹಿಡಿಯೋಣ ಎಂದು ಕ್ರಿಕೆಟ್ ಚಾಂಪಿಯನ್ ಹಾಗೆ ಜಂಪ್ ಮಾಡಿ ಕ್ಯಾಚ್ ಹಿಡಿದ ಹಾಗೆ ಹಿಡಿಯಲು ಹೋದೆ. ದಪ ಎಂದು ಬಿದ್ದು ಬಿಟ್ಟು ಮೊಣ ಕಾಲು ಕೆತಿತ್ತು ರಕ್ತ ಸುರಿಯುತ್ತಿತ್ತು. ಅದನ್ನು ನೋಡಿ ಮಂಜ ನನ್ನನ್ನು ಎಬ್ಬಿಸದೆ ಬಿದ್ದು ಬಿದ್ದು ಗಹ ಗಹಿಸಿ ನಗಹತ್ತಿದ್ದ. ಚರಂಡಿ ನೀರು ಮೈಯಲ್ಲ ಆವರಿಸಿತ್ತು. ನನ್ನಷ್ಟಕ್ಕೇ ನನಗೆ ಹೇಸಿಗೆ ಬರುವಷ್ಟು ಕೆಟ್ಟ ವಾಸನೆ ಹೊಡೆಯುತ್ತಿತ್ತು. ನಾನು ಕೋಪದಿಂದ ಮಂಜನಿಗೆ ಬೈದು ಮತ್ತೆ ನಮ್ಮ ಬೇಟೆಗೆ ಹೋದೆವಾದರು ಪ್ರಯತ್ನ ಮಾತ್ರ ಸಫಲವಾಗಲಿಲ್ಲ.

ಈ ರೂಪದಿಂದ ಮನೆಗೆ ಹೋಗುವದು ಅಸಾಧ್ಯವಾಗಿತ್ತು. ಇಬ್ಬರು ಮಂಜನ ಮನೆಗೆ ಹೋದೆವು ನಾನು ಕೈ ಕಾಲು ತೊಳೆದು ಕೊಳ್ಳಲು ಮಂಜನ ಮನೆಯ ಹಿತ್ತಲಕ್ಕೆ ಹೋದೆ. ನನಗೆ ಅಲ್ಲಿಯ ದೃಶ್ಯ ನೋಡಿ ಮಂಜನನ್ನು ಕೊಲೆ ಮಾಡುವಷ್ಟು ಕೋಪ ಬಂದಿತ್ತು. ಏಕೆಂದರೆ ಅವನ ಮನೆಯ ಹಿತ್ತಲಲ್ಲಿ 10-15 ಕಪ್ಪೆಗಳು ಇದ್ದವು. ನಾನು ಕೈ ಕಾಲು ತೊಳೆಯದೇ ಸೀದಾ ಬಂದು ಮಂಜನ ಮೇಲೆ ಏಗರಾಡಿದೆ. ಮಂಜ ಮುಂಜಾನೆ ಒಂದು ಇದ್ದಿರಲಿಲ್ಲ ಈಗ ಹೇಗೆ ಬಂದವು ನನಗೆ ಆಶ್ಚರ್ಯ ಎಂದ. ಮತ್ತೆ ಇಬ್ಬರು ಹೋಗಿ 8 ಕಪ್ಪೆ ಹಿಡಿದೆವು. ಅನಂತರ ಕೈ ಕಾಲು ತೊಳೆದು ಮನೆಗೆ ಹೋದೆ.

ಮರು ದಿವಸ ಮತ್ತೆ ಕೆಲವರಿಗೆ ನಾವೇ ಕಪ್ಪೆ ಹಂಚಿದೆವು. Biology ಲ್ಯಾಬ್ ಕನ್ನಡ ಕ್ಲಾಸ್ ಆದ ಮೇಲೆ ಇತ್ತು. ಸುಬ್ಬ ಕೂಡ ಒಂದು ಕಪ್ಪೆ ಹಿಡಿದು ತಂದಿದ್ದ. ಅವನ ಪ್ಲಾಸ್ಟಿಕ್ ಚೀಲದಲ್ಲಿ ಅದು ಸೂಸು ಮಾಡಿ ಅದರಲ್ಲೇ ಈಜಾಡುತಿತ್ತು. ಸ್ವಲ್ಪ ಸಮಯದ ನಂತರ ಅದರ ವಾಸನೆ ಎಲ್ಲಡೆ ಹರಡಿತ್ತು. ಅದನ್ನು ನೋಡಿ ಮಂಜ ಲೇ ಪ್ಲಾಸ್ಟಿಕ್ ಚೀಲಕ್ಕೆ ಒಂದು ತೂತು(Hole) ಮಾಡಿ ಅದರ ಸೂಸು ಹೊರಗೆ ಚೆಲ್ಲು ಎಂದು ಸುಬ್ಬನಿಗೆ ಹೇಳಿದ. ಸುಬ್ಬ ಅದನ್ನು ಕತ್ತರಿಯಿಂದ ಕಟ್ ಮಾಡಿದ. ಚೀಲವನ್ನು ದೊಡ್ಡದಾಗಿ ಕತ್ತರಿಸಿ ಬಿಟ್ಟಿದ್ದ. ಅದರಿಂದ ಕಪ್ಪೆ ಟುಂಗನೆ ಜಿಗಿದು ಬಿಟ್ಟಿತ್ತು. ಅಲ್ಲೇ ಕುಳಿತು ಕೊಂಡಿದ್ದ ಹುಡುಗಿಯರೆಲ್ಲ ಎದ್ದು ಡಾನ್ಸ್ ಮಾಡಲು ಶುರು ಹಚ್ಚಿ ಕೊಂಡಿದ್ದರು.

ಅಷ್ಟರಲ್ಲೇ ಕನ್ನಡ ಮಾಸ್ತರ್ ಆಗಮಿಸಿ ಈ ದೃಶ್ಯ ನೋಡಿ ಕೋಪದಿಂದ ಸುಬ್ಬನಿಗೆ ಅದನ್ನು ಹಿಡಿದು ತೆಗೆದುಕೊಂಡು ಹೋಗಿ ಕ್ಲಾಸ್ ಆಗುವವರಿಗೆ ಹೊರಗೆ ನಿಲ್ಲು ಎಂದು ಆಜ್ಞೆ ಮಾಡಿದ್ದರು.

ಮತ್ತೊಂದು ದಿವಸ ಜೇನಿನ ಗೂಡಿಗೆ ಯಾರೋ ಕಲ್ಲು ಎಸೆದಿದ್ದರು. ನಾನು,ಮಂಜ ಮತ್ತೆ ಸುಧೀರ ಲೈಬ್ರರಿ ಹೋಗಲು ಬರುತ್ತಿದ್ದೆವು. ಜೇನು ಎದ್ದಿದ್ದು ನೋಡಿ ಮಂಜ "ಲೇ ಓಡಿರಿ ಜೇನು ಎಂದು ಬಿಟ್ಟ". ನಾನು,ಮಂಜ ಮತ್ತೆ ಸುಧೀರ ಎದ್ದು ಬಿದ್ದು ಓಡಲು ಶುರು ಮಾಡಿದೆವು. ಜೇನುಗಳು ನಮ್ಮನ್ನು ಅಟ್ಟಿಸಿಕೊಂಡು ಕಡಿಯಲಾರಂಬಿಸಿದವು. ನನಗೆ ಮಂಜ ಒಂದು ದಿವಸ ಪ್ರವಚನ ಮಾಡಿದ್ದ "ಜೇನು ಬೆನ್ನು ಹತ್ತಿದರೆ ಹುಲ್ಲಿನಲ್ಲಿ ಉಸಿರಾಡದೆ ಮಲೆಗಿದರೆ ಹಾಗೆ ಹೋಗುತ್ತವೆ ಎಂದು". ನಾನು ಮತ್ತೆ ಮಂಜ ಹಾಗೆ ಮಾಡಿದೆವು. ನಮಗೆ ಒಂದೆರಡು ಕಡಿದಿದ್ದವು. ಆದರೆ ಸುಧಿರನನ್ನ ಜೇನುಗಳು ಪೂರ್ತಿ ಶಾಲೆ ಓಡಾಡಿಸಿ ಕಡಿದಿದ್ದವು. ಇವನು ಸುಮ್ಮನೆ ಇರಲಾರೆದೆ ಹಾಸ್ಟೆಲ್ ನಲ್ಲಿ ಒಣಗಲು ಹಾಕಿದ ಟಾವೆಲ್ ಅವುಗಳ ಮೇಲೆ ಎಸೆದಿದ್ದ. ಅವು ಮತ್ತಷ್ಟು ಕೋಪಗೋಂಡು ಪೂರ್ತಿ ಮುಖಕ್ಕೆ ಕಡೆದಿದ್ದವು. ಅನಂತರ ಹಾಸ್ಟೆಲ್ ಹುಡುಗರು ಕಂಬಳಿ ಹೊದಿಸಿ ಸುಧಿರನನ್ನು ಕಾಪಾಡಿದ್ದರು. ಸುಧೀರ ನಾಲ್ಕು ದಿನ ಜ್ವರ ಬಂದು ಹಾಸಿಗೆ ಹಿಡಿದಿದ್ದ.

ಮತ್ತೆ ಒಂದು ದಿವಸ ಕಾಲೇಜ್ ನಲ್ಲಿ ಶೇವಿಂಗ್ ಮಾಡದೇ ಬಂದರೆ ಫೈನ್ ಹಾಕುತಿದ್ದರು. ಆಗ ಸಂಜೀವನಿಗೆ ತುಂಬಾ ಮೊಡವೆಗಳು ಇದ್ದವು. ಅದಕ್ಕೆ ಶೇವಿಂಗ್ ಮಾಡುವಾಗ ತುಂಬಾ ರಕ್ತ ಬರುತಿತ್ತು. ಅದಕ್ಕೆ ನಮ್ಮ ಮಂಜ ಅವನಿಗೆ ನೀನು ಒಂದು ಹೇರ್ ರಿಮೂವರ್ ಹಾಕಿ ಕೋ ಎಂದು ಐಡಿಯಾ ಕೊಟ್ಟ. ಹೇರ್ ರಿಮೂವರ್ ಹಾಕಿ ಎರಡು ಘಂಟೆ ಹಾಗೆ ಬಿಟ್ಟ ನಮ್ಮ ಸಂಜೀವ. ಅನಂತರ ಮುಖ ತೊಳೆದು ಕೊಂಡಾಗ ಕೂದಲು ಜೊತೆ ಚರ್ಮ ಕೂಡ ಕಿತ್ತು ಬಂದು ಒಳಗಿನ ಮಾಂಸ ಕೂಡ ಕಾಣಿಸಲು ಶುರು ಮಾಡಿತ್ತು. ಅವನಿಗೆ ಮಂಜನ ಮೇಲೆ ಕೆಟ್ಟ ಕೋಪ ಬಂದಿತ್ತು. ಮಂಜನಿಗೆ ಕೇಳಿದರೆ ಅವನ ಮುಖ ನೋಡಿ ಬಿದ್ದು ಬಿದ್ದು ನಕ್ಕಿದ್ದ. ಮತ್ತೆ "ಎರಡು ಘಂಟೆ" ಯಾಕೆ ಹಾಕಿಕೊಂಡೆ ಎರಡು ನಿಮಿಷ ಸಾಕು ಎಂದು ಹೇಳಿದ. ಅನಂತರ ಹೇರ್ ರಿಮೂವರ್ ಸಾಹಸಕ್ಕೆ ಹೋಗಲಿಲ್ಲ ಪಾಪ ಸಂಜೀವ. ಮತ್ತೆ ಹುಡುಗಿಯರ ಮಧ್ಯ ಕೂಡ ಸಂಜೀವ ಮುಖ ಮುಚ್ಚಿ ಹೋಗುವ ಪರಿಸ್ತಿತಿ ನಿರ್ಮಾಣವಾಗಿತ್ತು.

ಮತ್ತೊಂದು ದಿವಸ ನಾವೆಲ್ಲರೂ ಟೂರ್ ಗೆ ಹೋಗಿದ್ದೆವು ನಾನು ಅವತ್ತು ಟೂಥ್ ಪೇಸ್ಟ್ ತೆಗೆದು ಕೊಂಡು ಬಂದಿರಲಿಲ್ಲ. ಅದ್ದರಿಂದ ಮಂಜನಿಗೆ ಟೂಥ್ ಪೇಸ್ಟ್ ಕೇಳಿದ್ದೆ ತಪ್ಪಾಯಿತು ಎನ್ನುವ ಹಾಗೆ ಮಾಡಿದ್ದ. ಟೂಥ್ ಪೇಸ್ಟ್ ಬದಲು ತನ್ನ ಶವಿಂಗ್ ಕ್ರೀಂ ಹಚ್ಚಿ ಬಚ್ಚಲಿನಲ್ಲಿದ್ದ ನನಗೆ ಕೊಟ್ಟಿದ್ದ. ನಾನು ಹಾಗೆ ತಿಕ್ಕಿ ಕೊಳ್ಳುತ್ತಿದ್ದಾಗ ಅದರ ನೊರೆ ಮತ್ತೆ ವಾಸನೆ ಇಂದ ಗೊತ್ತಯಿತಾದರು, ಎರಡು ದಿನ ಮಾತ್ರ ಅದರ ವಾಸನೆ ನನ್ನ ಬಾಯಿಯಿಂದ ಹೋಗಲಿಲ್ಲ.

ತರ್ಲೆ ಮಂಜನ ಐಡಿಯಾಗಳು ಮತ್ತೆ ತರ್ಲೆ ಕೆಲಸಗಳು ಇನ್ನು ಬಹಳಷ್ಟು ಇವೆ.....

4 comments:

 1. ಗೋಪಾಲ್‍ರವರೆ...

  ನಿಮ್ಮ ತರ್ಲೆ ಮಂಜ ಬಹಳ ಇಷ್ಟವಾಗಿಬಿಟ್ಟ...
  ನಿಮ್ಮ ಬರವಣಿಗೆಯೂ ಚೆನ್ನಾಗಿದೆ...

  ನಿಮ್ಮ ಹಳೆಯ ಲೇಖನಗಳನ್ನೂ ಒಟ್ಟಿಗೆ ಓದಿ ಮುಗಿಸಿದೆ...
  ಇನ್ನಷ್ಟು ಬರೆಯಿರಿ...

  ಚಂದದ ಲೇಖನಗಳಿಗಾಗಿ
  ನಮ್ಮನ್ನು ನಗಿಸಿದ್ದಕ್ಕಾಗಿ..
  ಅಭಿನಂದನೆಗಳು..

  ReplyDelete
 2. ನಮ್ಮ ಮನೆಗೆ ಬಂದು ದೇವರ ಮನೆ ಕಟ್ಟಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು( ಪ್ರತಿಕ್ರಿಯೆಗೆ ಧನ್ಯವಾದಗಳು). ಹೀಗೆ ಆಗಾಗ ಬರುತ್ತಿರಿ

  ReplyDelete
 3. ಗೋಪಾಲರೆ,

  ಮಂಜನ ಆಟ ಜೋರಾಗಿದೆ.
  ನನ್ನ ಪಿ.ಯು.ಸಿ. ಕೆಮಿಸ್ಟ್ರಿ ಲ್ಯಾಬ್ ಜ್ಞಾಪಕ ಬರ್ತಾ ಇತ್ತು. ಸದ್ಯ ಮಂಜನ ಹಾಗೆ ನನ್ನ ಜೊತೆಗೆ ಯಾರೂ ಇರ್ಲಿಲ್ಲಾ. ಆದರೂ ನನ್ನ ಕೆಮಿಸ್ಟ್ರಿ ಲ್ಯಾಬ್ ಜವಾನರು ಇದ್ರೂ, ಹೆಸರು ಜ್ಞಾಪಕ ಬರ್ತಿಲ್ಲಾ...ಮಾತ್ರ ಬಾರೀ...ಹೇಗೆ ಅಂದ್ರೆ ಕೆಮಿಸ್ಟ್ರಿ ಲ್ಯಾಬ್ ಅಂದ್ರೆ ಪ್ರಿನ್ಸಿಪಾಲ್ ಕೂಡ ಇವ್ನ ಪರ್ಮಿಶನ್ ಕೇಳಿ ಒಳಗೆ ಬರಬೇಕು ಅನ್ನೋ ಹಾಗೆ.

  ಉತ್ತಮ ಬರಹಕ್ಕೆ ಅಭಿನಂದನೆಗಳು.

  ReplyDelete
 4. ತುಂಬಾ ಧನ್ಯವಾದಗಳು ಆತ್ಮೀಯ ಲೋದ್ಯಾಶಿಯವರೇ ...
  ಜವಾನನ ಇಲ್ಲ ಪೈಲವನಾನ?..:)

  ReplyDelete