Friday, August 28, 2009

ತರ್ಲೆ ಮಂಜ(ಗ)ನ ಪ್ರೇಮ ಪಾಠ ....

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....

ಸಂದೀಪ ಶಾಂತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಸದಾ ಅವಳ ಗುಂಗಿನಲ್ಲೇ ಇರುತ್ತಿದ್ದ. ಆದರು ಯಾರಿಗೂ ಹೇಳದೆ ಸುಮ್ಮನೆ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದ. ಮಂಜನ ಸಹಾಯ ಬೇಕೆನಿಸಿದರು ಕೇಳಿರಲಿಲ್ಲ. ನನಗೆ ಈ ವಿಷಯ ತಿಳಿದಿತ್ತು. ಶಾಂತಿಯ ಮನೆ ನಮ್ಮ ಮನೆಯ ಸಮೀಪವೇ ಇತ್ತು. ಸದಾ ನಮ್ಮ ಓಣಿಯನ್ನು ಸುತ್ತುತ್ತಿದ್ದ. ನಮ್ಮ ಅಪ್ಪ ಅಥವಾ ಅಮ್ಮ ನೋಡಿದರೆ ಮಾತ್ರ ಗೋಪಾಲನನ್ನು ನೋಡಲು ಬಂದಿದ್ದೆ ಎಂದು ಭೂಸಿ ಬಿಡುತ್ತಿದ್ದ. ಹೀಗೆ ಒಂದು ದಿವಸ ನಾನು ಕೇಳಿಯೇ ಬಿಟ್ಟೆ. ಏನಪ್ಪಾ ಶಾಂತಿ .. ಎಂದು ಕೂಡಲೇ. ಏನಾದರು ಮಾಡಿ ಸಹಾಯ ಮಾಡು ಎಂದು ಗೋಗರಿದ. ನಾನು, ನವೀನ ಶಾಂತಿಯ ಅಕ್ಕಪಕ್ಕದ ಮನೆ ಹುಡುಗರು. ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾವ ಹುಡುಗರನ್ನು ಶಾಂತಿ ಮಾತನಾಡಿಸಿರಲಿಲ್ಲ. ಇವನ ಪ್ರೇಮ್ ಪ್ರಸ್ತಾಪ ಮಾಡಿದ್ದೂ ನಮ್ಮ ಅಪ್ಪನಿಗೇನಾದರೂ ಗೊತ್ತಾದರೆ ನನ್ನನ್ನು ಅಪ್ಪ ಫೋಟೋ ಫ್ರೇಮ್ ಮಾಡುವದು ಗ್ಯಾರಂಟೀ. ಅದ್ದರಿಂದ ನವೀನನಿಗೆ ಕೇಳು ಎಂದು ಹೇಳಿದೆ. ನವೀನ ಒಂಥರಾ ರೇಡಿಯೋ ಇದ್ದ ಹಾಗೆ, ಅವಿನಿಗೆ ಹೇಳಿದರೆ ಊರಿಗೆ ಡಂಗುರ ಸಾರುತ್ತಾನೆ ಎಂದು ಸಂದೀಪ ಹೇಳಿದ. ಮತ್ತೆ ನಮ್ಮಿಬ್ಬರಿಗೂ ಹೊಳೆದಿದ್ದು ದಿ ಗ್ರೇಟ್ ಮಂಜ.

ಮತ್ತೆ ನಾವಿಬ್ಬರು ಮಂಜನ ಹತ್ತಿರ ಹೋಗಿ, ಇವನ ಪ್ರೇಮದ ಬಗ್ಗೆ ತಿಳಿಸಿದೆವು. ಮಂಜ ಬೇರೆ ಯಾವದೇ ವಿಷಯಕ್ಕೆ ಕಾಲೆಳೆಯುತ್ತಿದ್ದ. ಆದರೆ ಪ್ರೀತಿಯ ವಿಷಯದಲ್ಲಿ ಮಾತ್ರ ತನ್ನ ಅಭಯ ಹಸ್ತವನ್ನು ತೋರಿಸುತ್ತಿದ್ದ. ಕೂಡಲೇ ಒಪ್ಪಿಗೆ ಸೂಚಿಸಿದ. ಸಂದೀಪನ ಖುಷಿಗೆ ಪಾರವೇ ಇರಲಿಲ್ಲ.

ಮತ್ತೆ ಸಂಜೆ ನಾನು, ಸಂದೀಪ ಮತ್ತು ಮಂಜ ಅಜಾದ್ ಪಾರ್ಕ್ ನಲ್ಲಿರುವ ಉಪಾಹಾರ ಗ್ರಹದಲ್ಲಿ ಸಂಧಿಸಿದೆವು. ಮಂಜ ಹೇಳಿದ "ನೋಡು ಸಂದೀಪ ಶಾಂತಿನ್ನ ಪಟಾಯಿಸಬೇಕು ಎಂದರೆ ಅವಳ ಜೊತೆ ಇರುತ್ತಾಳಲ್ಲ ನಿಮ್ಮ ಪಕ್ಕದ ಮನಿ ಹುಡುಗಿ ರಾಣಿ ಆಕಿ ಜೊತೆ ಸ್ವಲ್ಪ ಸಲುಗಿಯಿಂದ ಇರು. ಆವಾಗ ಶಾಂತಿಗೆ ಹೊಟ್ಟಿ ಉರ್ಕೊಂಡು ನಿನ್ನ ಹತ್ರ ಓಡಿ ಬರ್ತಾಳ. ನೀನು ಬಾಳ ಚಂದ ಇದ್ದಿ. ನಿನ್ನoತಹ ಹುಡುಗನ್ನ ಯಾರು ಬಿಟ್ಟು ಕೊಡಂಗಿಲ್ಲ ಎಂದ. ಹುಡುಗ್ಯಾರಿಗೆ ಸ್ವಲ್ಪ ಹೊಟ್ಟಿ ಕಿಚ್ಚು ಜ್ಯಾಸ್ತಿ. ಇನ್ನೊಂದು ಹುಡುಗಿಗೆ ಸಿಕ್ಕಿದ್ದು ತಮಗೂ ಸಿಗಬೇಕು ಅಂತ ಅಸೆ ಪಡ್ತಾರ." ತೆಜಾಬ್ ಸಿನಿಮ ನೋಡಿಯಿಲ್ಲ ......? ಅದರೊಳಗ ಮಾಧುರಿ ದಿಕ್ಷಿತ ಪಟಾಯಿಸ್ಲಿಕ್ಕೆ ಮಂದಾಕಿನಿಗೆ ಅನಿಲ್ ಕಪೂರ್ ಗಾಳ ಹಾಕಿದ್ದ. ಹಂಗ ನೀನು ಮಾಡಬೇಕು ಎಂದ.

ಮಂಜ ಈ ಹೇಳಿಕೆಯನ್ನು ವೇದ ವಾಕ್ಯವೆಂದು ತಿಳಿಯುತ್ತೇನೆ ಎಂದು ಹೇಳಿ. ನಮ್ಮಿಬ್ಬರಿಗೂ ಮಸಾಲೆ ದೋಸೆ ಮತ್ತು ಟೀ ಕೊಡಿಸಿ ಬೀಳ್ಕೊಟ್ಟಿದ್ದ.

ಮತ್ತೆ ಶುರು ಆಯಿತು ಸಂದೀಪನ ಸಂದ್ಯರಾಗ...ದಿನವು ರಾಣಿಗೆ ನೋಟ್ಸ್ ಕೇಳುವದು. ತನ್ನ ನೋಟ್ಸ್ ಕೊಡುವದು ಹೀಗೆ.. ದಿನವು ಅವಳನ್ನು ಮಾತನಾಡಿಸುತ್ತಿದ್ದ. ಹೀಗೆ ಒಂದು ತಿಂಗಳು ನಡಿಯಿತು. ಆದರು ಏನು ಪ್ರಯೋಜನವಾಗಲಿಲ್ಲ. ಶಾಂತಿ ಮಾತ್ರ ಇನ್ನು ಶಾಂತವಾಗಿಯೇ ಇದ್ದಳು.

ಮತ್ತೆ ಬಂದು ಮಂಜನಿಗೆ ತನ್ನ ಕಷ್ಟವನ್ನು ಅಲವತ್ತುಕೊಂಡ. ಮಂಜ ಹೇಳಿದ "ಶಾಂತಳ ಮುಂದೆ ರಾಣಿನ್ನ ಹೊಗಳು ಎಂದು ಹೇಳಿದ". ಸಂದೀಪನಿಗೆ ದಿಕ್ಕೇ ತೋಚದಾಗಿತ್ತು. ಆ ಕಪ್ಪು ಕೃಷ್ಣವೇಣಿ, ದಪ್ಪ ನಾಸಿಕ, ಅನಹುತವಾದ ದೇಹ ಧಾರ್ಡ್ಯ ಹೇಗೆ ವರ್ಣಿಸುವದು ಎಂದು. ಕಣ್ಣನ್ನಾದರೂ.. ವರ್ಣಿಸೋಣವೆಂದರೆ ಮೆಳ್ಳಗಣ್ಣು.. ಆಗ ಮಂಜ "ಕುರುಡುಗಣ್ಣಲ್ಲಿ ಮೆಳ್ಳಗಣ್ಣು ಶ್ರೇಷ್ಟ.." ಎಂದು ಬಿಡು ಎಂದ ತಮಾಶೆಯಾಗಿ. ಹಾಗು.. ಹೀಗು.. ಶಾಂತಳೆದುರಿಗೆ ರಾಣಿನ್ನ ಮಹಾರಾಣಿಯ ಹಾಗೆ ವರ್ಣಿಸಿದ್ದ. ಆದರು ಶಾಂತಿಯ ಶಾಂತತೆ ಕೆಡಲಿಲ್ಲ. ರಾಣಿ ಇನ್ನಷ್ಟು ಉಬ್ಬಿ ಹೋಗಿದ್ದಳು. ಎರಡೇ ತಿಂಗಳಲ್ಲಿ 6 Kg ಜ್ಯಾಸ್ತಿ ಆಗಿತ್ತು.

ಶಾಂತಿಗೆ ಗೊತ್ತಾಗುವ ಹಾಗೆ, ಕಡೆಯ ಪ್ರಯತ್ನವಾಗಿ ನೋಟ್ಸ್ ಪುಸ್ತಕದಲ್ಲಿ ಪ್ರೇಮ ಪತ್ರ ರವಾನಿಸಿದ್ದ. ಅದೇ ಕೊನೆ ಕೃಷ್ಣವೇಣಿ ರಾಣಿ ಹಸಿರು ನಿಶಾನೆ ತೋರಿಸಿ, ಮನೆಯವರಿಗೆಲ್ಲ ಪತ್ರ ತೋರಿಸಿ ಅವನನ್ನು ಮದುವೇಯಾಗುವವರೆಗೆ ಬಿಡಲೇ ಇಲ್ಲ. ಶಾಂತ ಸ್ವರೂಪದ ಶಾಂತಿ ಮಾತ್ರ ದಕ್ಕಲೇ ಇಲ್ಲ. ಇದು ಮಂಜ ಮತ್ತೆ ನನಗು ತಿಳಿಯದಾಗಿತ್ತು. ಮಂಜನ ಈ ಐಡಿಯಾ ತಲೆಕೆಳಗಾಗಿತ್ತು.
ಬಾಯಿಬಿಡದೆ ರಾಣಿಯನ್ನು ತೆಪ್ಪಗೆ ಮದುವೆಯಾಗಿದ್ದ. ಮದುವೆಗೆ ಅವನ ಶಾಂತಿನು ಬಂದಿದ್ದಳು.

ಮೊನ್ನೆ ಒಂದು ದಿವಸ ನಾನು, ಮಂಜ ,ಸಂದೀಪ ಮತ್ತು ನವೀನ ಸೇರಿದ್ದವು. ಸಂದೀಪ ತನಗೆ ಗಂಡು ಮಗು ಆಯಿತು ಎಂದು ಸಂದೀಪ ಪಾರ್ಟಿ ಕೊಟ್ಟಿದ್ದ. ಕಂಠ ಪೂರ್ತಿ ಎಲ್ಲರು ಕುಡಿದಿದ್ದೆವು. ಹಾಗೆ ಗಾಂಧಿ ಚೌಕದವರೆಗೆ ಬಂದು ಹರುಟುತ್ತಿದ್ದೆವು. ಆಗ ನವೀನ "ನಿನ್ನೆ ಶಾಂತಿ ಬಂದಿದ್ದಳು" ಎಂದ. ಸಂದೀಪನ ಕಿವಿ ನಿವೀರೆಳಿದ್ದವು. "ಅವಳ ಮದುವೇ ಅಂತೆ ಕಣೋ" ಎಂದ. ಮೊತ್ತೊಂದು ವಿಷಯ "ಅವಳು ಸಂದೀಪನನ್ನು ತುಂಬಾ ಇಷ್ಟ ಪಡುತ್ತಿದ್ದಳು ಅಂತ ಹೇಳಿ, ಅವನು ಮಾತ್ರ ರಾಣಿನ ಪ್ರೀತಿಸಿದ ಎಂದು ಕಣ್ಣೀರಿಟ್ಟು ಬಿಟ್ಟಳು." ಎಂದು ಬಿಟ್ಟ.

ಸಂದೀಪ ನನ್ನನ್ನು ಮತ್ತು ಮಂಜನನ್ನು ಕೆಟ್ಟ ಕೋಪದಿಂದ ನೋಡಿ, ಏನು ಮಾಡಬೇಕೋ ತಿಳಿಯದೆ ತನ್ನ ಚಪ್ಪಲ ತೆಗೆದು "ರಪ.. ರಪ.. " ನೆ ತನ್ನ ತಲೆಗೆ ಹೊಡೆದುಕೊಂಡು ಸಂದಿಗೊಂದಿಯಿಂದ ಮನೆ ಸೇರಿಕೊಂಡಿದ್ದ.

ನಾನು ಮಂಜನಿಗೆ "ಲೇ ತೆಜ್ಯಾಬ್ , ಗಿಜ್ಯಾಬ್ ಅಂತ ಹೇಳಿ ತಲಿ ಕೆಡಿಸಿ " ಅವನ ಪ್ರೀತಿ ಹಾಳು ಮಾಡಿಬಿಟ್ಟಿಯಲ್ಲೋ ಸೀದಾ ಶಾಂತಿಗೆ ಹೋಗಿ ಹೇಳಿದ್ರ ಆಗುತಿತ್ತು ಎಂದೆ. ಅದಕ್ಕೆ ಮಂಜ "ನೋಡು "ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಅವನ ಹಣಿ ಮೇಲೆ ರಾಣಿ ಅಂತ ಬರೆದಿತ್ತು ಅಂತ ಕಾಣಿಸ್ತದ ಅದಕ ' ಶಾಂತಿನ ಬಿಟ್ಟು ವಾಂತಿನ ಕಟ್ಗೊಂಡ ' ನಾವೇನು ಮಾಡಬೇಕು" ಎಂದ. ನಾವಿಬ್ಬರು ನಕ್ಕಿದ್ದೆ.. ನಕ್ಕಿದ್ದು... ನವೀನನಿಗೆ ಮಾತ್ರ ಏನು ಅರ್ಥ ಆಗದೆ ಪೆಕರನಂತೆ ನೋಡುತ್ತಿದ್ದ.
ಮಂಜನ ಇನ್ನಷ್ಟು ತರಲೆಗಳು ಬರಲಿವೆ ನಿರೀಕ್ಷಿಸಿ ....

No comments:

Post a Comment