ಮೊನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರವಾಗುತಿತ್ತು. ಮುಗ್ಧ ಮನಸ್ಸಿನ ಮಕ್ಕಳ ಸುಮಧುರವಾದ ಸಂಗೀತವನ್ನು ಕೇಳಿ ಮನಸ್ಸಿಗೆ ಮಹದಾನಂದ ಆಗಿತ್ತು. ಮಕ್ಕಳ ವಯಸ್ಸು ಸುಮಾರು ೮ ರಿಂದ ೧೨ ರವರೆಗೆ ಇತ್ತು. ನನಗೀಗ ವಯಸ್ಸು ೩೩. ಆದರು ಹೇಳಿಕೊಳ್ಳುವಂತಹ ಸಾಹಸವೇನು ಮಾಡಲಿಲ್ಲವೆಂಬ ಭಾವನೆ ಮನಸ್ಸಿನ ಮೂಲೆಯಲ್ಲಿ ಮನೆ ಮಾಡಿದೆ. ನಿಜವಾಗಿಯೂ ಹೇಳಬೇಕೆಂದರೆ ನನಗೆ ಓದಲು, ಬರೆಯಲು ಬಂದಿದ್ದೆ ೯ ನೇ ವಯಸಿನಲ್ಲಿ ಅದು ಕರಜಗಿ ಮಾಸ್ತರರು ಬಾಸುಂಡೆ ಬರುವ ಹಾಗೆ ಬಾರಿಸಿದಾಗ ಅಮ್ಮನಿಂದ ಓದಲು, ಬರೆಯಲು ಕಲಿತುಕೊಂಡಿದ್ದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಬುದ್ಧತೆ ಇದೆ ಎಂಬ ಸೂಕ್ಷ್ಮತೆ ಅರಿತಾಗ ಮನಸ್ಸಿಗೆ ಕಸಿವಿಸಿಯಾಗಿತ್ತು. ಆಗಲೇ ಮನಸ್ಸು ನಾನು ಆಡಿರುವ ಬಾಲ್ಯದ ಆಟಗಳಿಗೆ ಒಂದು ಇಣುಕು ನೋಟ ಬೀರಿತ್ತು.
ನನ್ನ ಕ್ಲಾಸಿನಲ್ಲಿ ಹೆಗ್ಗಡೆ ಎಂಬ ನನ್ನ ಸಹಪಾಠಿ ಇದ್ದ. ಅವನಿಗೆ ನಾನು ಮತ್ತು ನನ್ನ ಗೆಳೆಯ ಮಂಜು "ಹೆಗ್ಗಣ" ಎಂದು ಸಂಭೋದಿಸುತ್ತಿದ್ದೆವು. ಅವನಿಗೆ ಒಂದು ದಿವಸ ಕೋಪ ಬಂದು ಅವರ ತಂದೆಗೆ ಹೇಳಿ ನಮಗೆ ತಕ್ಕ ಶಾಸ್ತಿ ಮಾಡಿದ್ದ.
ಇನ್ನು ಒಂದು ದಿವಸ ಪಾರ್ವತಮ್ಮ ತನ್ನ ಮಾವನವರ ಶ್ರಾದ್ಧದ ಪಿಂಡ ಇಡುತ್ತಿದ್ದರು. ನಾನು ಅಲ್ಲೇ ಅಂಗಡಿಯಲ್ಲಿ ಪಾಪಡಿ ಕೊಂಡು ತಿನ್ನುತ್ತಾ ನಿಂತಿದ್ದೆ. ಕಾಗೆ ಪಿಂಡವನ್ನು ತಿನ್ನಲ್ಲು ಬಂದಾಗ ಅದು ನನ್ನ ಪಾಪಡಿಗೆ ಕಣ್ಣು ಹಾಕುತ್ತಿದೆ ಎಂದು ಯೋಚಿಸಿ ಅದನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದೆ. ಪಾರ್ವತಮ್ಮನ ಪಿಂಡಕ್ಕೆ ಮಣ್ಣು ಬಿದ್ದಿತ್ತು. ಪಾರ್ವತಮ್ಮ ದೊಡ್ಡದಾದ ರಗಳೇನೆ ಮಾಡಿದ್ದಳು.ಅಷ್ಟರಲ್ಲಿ ನಾಯಿ ಬಂದು ಪಿಂಡವನ್ನು ಅಸ್ವಾದಿಸಿತ್ತು. ಕಾಗೆ ಪಿಂಡದ ಬದಲು ನಾಯಿ ಪಿಂಡವಾಗಿತ್ತು. ಪಾಪಡಿ ಕಾಗೆ ಪಿಂಡ ಆಗಿತ್ತು.
ಇನ್ನು ಒಂದು ದಿವಸ ಸ್ಕೂಲಿಗೆ ಬೆಲ್ಲ ಕಿಸೆಯಲ್ಲಿ ಇಟ್ಟು ಕೊಂಡು ಹೋಗಿದ್ದೆ. ನನ್ನ ಪಕ್ಕದ ಹುಡುಗ ಮಿಸ್ ಹೇಳುವ ಪಾಠವನ್ನು ಬಿಟ್ಟು ನನ್ನ ಕಿಸೆ ನೋಡುತ್ತಾ ಕುಳಿತಿದ್ದ. ಕಿಸೆಯಲ್ಲಿರುವ ಬೆಲ್ಲ ನೋಡಿ ಮಿಸ್ ಕೋಪದಿಂದ ಕ್ಲಾಸ್ ಹೊರಗಡೆ ನಿಲ್ಲಿಸಿದ್ದರು.
ಅಪ್ಪ ಮನೆಯಲ್ಲಿ ಒಂದು ದಿವಸ ಮಾವಿನ ಹಣ್ಣನ್ನು ತಂದು ಇಟ್ಟಿದ್ದಾಗ. ಅಪ್ಪ, ಅಮ್ಮ ಇಲ್ಲದ ಸಮಯದಲ್ಲಿ 1/2 ಡಜನ್ ಮಾವಿನ ಹಣ್ಣನ್ನು ಮುಗಿಸಿದ್ದೆ. ಮತ್ತೊಂದು ದಿವಸ 1/4 Kg ತುಪ್ಪ.
ಅಪ್ಪ ಒಂದು ದಿವಸ ಹೊಸ ಟೇಪ್ ರೆಕಾರ್ಡರ್ ತಂದಿದ್ದರು. "ದಾಸರ ಪದಗಳು","ಸುಪ್ರಭಾತ" ಎಲ್ಲವು ಚೆನ್ನಾಗಿ ಬರುತಿತ್ತು. ನಾನು ಕಿಶೋರ್ ಕುಮಾರ ಹಾಡುಗಳ ಕ್ಯಾಸೆಟ್ ಮನೆಗೆ ಕೊಂಡು ಬಂದಿದ್ದೆ. ಒಂದು ದಿವಸ ಕಿಶೋರ್ ಕುಮಾರ ಅಳಲಾರಂಬಿಸಿದ್ದ(ಕ್ಯಾಸೆಟ್ ಸಿಕ್ಕಿಕೊಂಡಿತ್ತು). ನನಗೆ ಕ್ಯಾಸೆಟ್ ತಿರುಗಿಸುವ ಗಾಲಿಗಳ ವೇಗ ಸ್ವಲ್ಪ ಕಡಿಮೆಯಾಗಿದೆ ಎಂದು ಅನಿಸಿತ್ತು. ನಾನು ಅದರ ವೇಗ ಜ್ಯಾಸ್ತಿ ಮಾಡಲು ಸ್ಕ್ರೂ ಡ್ರೈವರ್(Screw Driver)ನಿಂದ ತಿರುಗಿಸಿದ್ದೆ ಆದರು ಉಪಯೋಗವಾಗಲಿಲ್ಲ. ಆಗಲೇ ನನಗೆ ನೆನಪು ಬಂದಿದ್ದು ನನ್ನ ಗೆಳೆಯ ಹೇಳಿದ ಒಂದು ಮಾತು "ನಮ್ಮಪ್ಪ ಎಣ್ಣೆ ಹಾಕಿದಾಗ ತುಂಬ ವೇಗವಾಗಿ ಮಿಲಿಟರಿ ಸೈನಿಕನ ಹಾಗೆ ಪರೇಡ ಮಾಡಿ ಬರುತ್ತಾರೆ" ಎಂದು. ನಾನು ಒಂದು ದಿವಸ ಅವರ ನಡಿಗೆಯನ್ನು ನೋಡಿದ್ದೇ. ಆಗ ನನಗೆ ಎಣ್ಣೆ ಎಂದರೆ ಗೊತ್ತಿದದ್ದು ಕೊಬ್ಬರಿ ಎಣ್ಣೆ, ಚುಮಣಿ ಎಣ್ಣೆ ಇನ್ನೊಂದು ಅಡುಗೆ ಎಣ್ಣೆ. ಅಡುಗೆ ಎಣ್ಣೆ ಏನಾದರು ಹಿಡಿದರೆ ಅಮ್ಮನಿಗೆ ಗೊತ್ತಾದರೆ ನನಗೆ ಕಾಡಿಗೆ ಅಟ್ಟುತ್ತಾಳೆ ಎಂದು ಅದರ ಸಹವಾಸಕ್ಕೆ ಹೋಗಲಿಲ್ಲ. ಇನ್ನು ಚುಮಣಿ ಎಣ್ಣೆಯ ಅನುಭವವಿತ್ತು. ಒಂದು ದಿವಸ ನನ್ನ ತಂಗಿ ಚುಮಣಿ ಎಣ್ಣೆಯನ್ನು ಕುಡಿದು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದಳು. ಅದಕ್ಕೆ ಚುಮಣಿ ಎಣ್ಣೆ ಏನಾದರು ಹಾಕಿದರೆ ಇದಕ್ಕೂ ಹಾಸ್ಪಿಟಲ್ ಗ್ಯಾರಂಟೀ. ಇನ್ನು ಉಳಿದಿದ್ದು ಕೊಬ್ಬರಿ ಎಣ್ಣೆ ಮಾತ್ರ. ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಯನ್ನು ಟೇಪ್ ರೆಕಾರ್ಡರ್ ವ್ಹೀಲ್ ಗೆ ಸುರಿದಾಗ ಬೆಸುರವಾಗಿದ್ದ ಕಿಶೋರ್ ಕುಮಾರ್ ಸುರದಿಂದ ಹಾಡಿದ್ದ. ಹೀಗೆ ನಡಿಯಿತು ನನ್ನ ಎಣ್ಣೆ ಪ್ರಯೋಗ. ನನಗೆ ಏನೋ ಒಂದು ಹೊಸದಾದ ವಿಷಯವನ್ನು ಕಂಡು ಹಿಡಿದಷ್ಟು ಸಂತೋಷ. ಅಪ್ಪನಿಗೆ ಆಶ್ಚರ್ಯ ೧ ವಾರದಲ್ಲಿ 200 ML ಕೊಬ್ಬರಿ ಎಣ್ಣೆ ಖಾಲಿ. ಮತ್ತೆ ಒಂದು ದಿವಸ ಎಣ್ಣೆ ಸುರಿದಾಗ ಟೇಪ್ ರೆಕಾರ್ಡರ್ "ಪಟ್ಟ" ಎಂದು ವೈರ್ ಹರಿದು ಬಿದಿತ್ತು. ಮನೆಯಲ್ಲಿನ ಕರೆಂಟ್ ಢಮಾರ್ .... ಅನಂತರ ಗೊತ್ತಾಗಿದ್ದು ಮೇನ್ ಟ್ರನ್ಸ್ಫೊರ್ಮೆರ (Transformer)ನೆ ಢಮಾರ್ ಆಗಿದೆ ಎಂದು. ನಮ್ಮ ಅಪ್ಪ ಟೇಪ್ ರೆಕಾರ್ಡರ್ ಸರ್ವಿಸ್ಗೆ ಅಂತ ತೆಗೆದುಕೊಂಡು ಹೋದಾಗ. ಅಂಗಡಿಯವ ನಿಮ್ಮದು ಎಣ್ಣೆ ಗಿರಿಣಿ ಇದೆಯಾ ಎಂದು ಕೇಳಿದ್ದ ಅಪ್ಪನಿಗೆ. ಅಪ್ಪನಿಗೆ ಕೆಟ್ಟ ಕೋಪ ಬಂದು 200 ML ಎಣ್ಣೆ ಹಚ್ಚುವ ಹಾಗೆ ಬಾಸುಂಡೆ ಕೊಟ್ಟಿದ್ದರು.
ಅನಂತರ ಯಾವದೇ ಇಲೆಕ್ಟ್ರಾನಿಕ್ ಸಾಮಾನುಗಳಿಂದ ಸ್ವಲ್ಪ ದೂರವಿದ್ದೆ. ನನ್ನ ಗೆಳೆಯನು ತನ್ನನ್ನು ತಾನೆ ಆಲ್ಬರ್ಟ್ ಐನ್ಸ್ಟೈನ್, ತೋಮಸ್ ಅಲ್ವ ಎಡಿಸನ್ ಅಂದು ಕೊಂಡಿದ್ದನೋ ಗೊತ್ತಿಲ್ಲ. ಹೀಗೆ ಒಂದು ದಿವಸ ಗುಜರಿ ಅಂಗಡಿಯಿಂದ ತಂದ Circuit ನ್ನು ಹಚ್ಚಿ ಮನೆಯಲ್ಲಿಯ ಕರೆಂಟ್ ಢಮಾರ್.
ಒಂದು ದಿವಸ "ಸ್ಪೈಡರ್ ಮ್ಯಾನ್" ಧಾರವಾಹಿ ನೋಡಿ ಸ್ಪೈಡರ್ ಮ್ಯಾನ್ ತರಹನೆ ಮನೆಯ ಮುಂದೆ ಕಟ್ಟಿರುವ ತೋರಣದ ಧಾರಕ್ಕೆ ಜೋತು ಬಿದ್ದು ಕೆಳಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕ್ಕೊಂಡಿದ್ದೆ.
ಚಿಣ್ಣಿ -ದಾಂಡು ಎಂದರೆ ನನಗೆ ತುಂಬ ಇಷ್ಟ. ಒಂದು ದಿವಸ ಅಪ್ಪ ಆಫೀಸ್ ನಿಂದ ಮನೆಗೆ ಬಂದಿರಲಿಲ್ಲ ಅವರನ್ನು ಕರೆದುಕೊಂಡು ಬರಬೇಕೆಂದು ನಾನೆ ಖುದ್ದಾಗಿ ಅವರ ಆಫೀಸ್ ದಾರಿ ಹಿಡಿದಿದ್ದೆ. ಅದು ಸ್ಮಶಾನದ ದಾರಿಯಿಂದನೆ ಹೋಗಬೇಕು. ಆಗ ನನಗೆ ಒಂದು ಚೆನ್ನಾಗಿರೋ ಚಿಣ್ಣಿ ಸಿಕ್ಕಿತು ಅದನ್ನು ಹಿಡಿದುಕೊಂಡು ಹೊರಟಿದ್ದೆ. ಅಷ್ಟರಲ್ಲೇ ಅಪ್ಪ ಸೈಕಲ್ ಏರಿ ಬರುವದನ್ನು ಕಂಡು "ಅಪ್ಪ" ಎಂದು ಕೂಗಿದಾಗ. ಅಪ್ಪ ಏನೋ ಎಲ್ಲಿ ಹೊರಟಿದ್ದಿಯ ಎಂದು ಕೇಳಿದಾಗ ನಿನ್ನನ್ನೇ ಕರೆದುಕೊಂಡು ಬರಬೇಕೆಂದು ಹೊರಟಿದ್ದೆ ಎಂದೆ. ಏನೋ ಇದು ಕೈನಲ್ಲಿ ಎಂದಾಗ ಚಿಣ್ಣಿ ಎಂದೆ. ನಿನ್ನ ಚಿಣ್ಣಿ ಮನೆ ಹಾಳಾಗ ಎಂದು ಎಲಬು(ಎಲವು) ಕಣೋ ಎಂದು ಅದನ್ನು ಕಿತ್ತು ಎಸೆದಿದ್ದರು.
ಮತ್ತೆ ಒಂದು ದಿವಸ ನನಗೆ ವಿಪರಿತ ಹೊಟ್ಟೆ ನೋವು ಕಾಣಿಸಿದ ಹಾಗೆ ಆಯಿತು. ಅಪ್ಪನನ್ನು ಎಬ್ಬಿಸಿ ರಾತ್ರಿ ೩.೦೦ ಘಂಟೆಗೆ ಹಾಸ್ಪಿಟಲ್ ಗೆ ಹೊರಟಿದ್ದೆವು. ಅದೇನೋ ಗೊತ್ತಿಲ್ಲ ಲಕ್ಷ್ಮಿ ನಾರಾಯಣ ಗುಡಿಯ ಸಮೀಪಿಸುತ್ತಿದ್ದಂತೆ ಹೊಟ್ಟೆ ನೋವು ಮಾಯಾವಾಗಿತ್ತು. ಮತ್ತೆ ಮನೆಗೆ ವಾಪಾಸ್ ಆದೆವು.
ನಮ್ಮ ಮನೆಯಲಿ ಇದ್ದದ್ದು ನಮ್ಮ ಅಜ್ಜಿ ಕೊಡಿಸಿದ ರೇಡಿಯೋ. ಅದರಲ್ಲಿ ಬುಧವಾರ ರಾತ್ರಿ ವಾರದ ನಾಟಕ ಪ್ರಸಾರವಾಗುತಿತ್ತು. ಅದನ್ನು ಕೇಳುವದೆಂದರೆ ನಮ್ಮ ಮನೆಯವರಿಗೆಲ್ಲ ಖುಷಿ. ಹಾಗೆ ಒಂದು ದಿವಸ ಒಂದು ನಾಟಕದಲ್ಲಿ ಒಂದು ಡೈಲಾಗ್ ಇತ್ತು ಅದೇನೆಂದರೆ "ಒಂಟಿ ಕಾಲಿನ ವೈದ್ಯ ಸಕ್ಕರಿ ತುಪ್ಪ ನೈವೇದ್ಯ" ಎಂದು. ಅದನ್ನು ಕೇಳಿ ಮರು ದಿನ ಅದೇ ನನ್ನ ಡೈಲಾಗ್ ಆಗಿತ್ತು. ಹೀಗೆ ಒಂಟಿ ಕಾಲಿನಲ್ಲಿ ನಡೆಯುವದು ನಾನು ಮತ್ತು ನನ್ನ ಗೆಳೆಯ ಮಂಜು ಮಾಡುತ್ತಿದ್ದಾಗ ಒಂದು ಮುದುಕಿ ಎದುರಿಗೆ ಬಂದಳು ಬ್ಯಾಲೆನ್ಸ್ ತಪ್ಪಿ ಅವಳ ಮೇಲೆ ಬಿದ್ದಾಗ. ಅವಳು ವೈದ್ಯರ ಬಳಿ ಹೋಗುವ ಹಾಗಾಯಿತು. ಸಕ್ಕರಿ ತುಪ್ಪ ನೈವೇದ್ಯ ಅಪ್ಪ ಮಾಡಿದ್ದರು. ಮತ್ತೆ ಒಂದು ದಿವಸ Cylon ಸ್ಟೇಷನ್ ಹಚ್ಚುವ ಭರದಲ್ಲಿ ರೇಡಿಯೋ ಟ್ಯೂನ್ ಮಾಡಿ ಮಾಡಿ ಅದನ್ನು ಮೂಲೆಗುoಪಾಗಿಸಿದ್ದೆ.
ನಾನೇನಿದ್ದರು ಯಾವತ್ತು "ಘಜನಿ" ನೆ. ಎಂದರೆ ಓದಿದ್ದನ್ನು ಆಗಲೇ ಮರೆಯುವ ಅಭ್ಯಾಸ. ಇನ್ನು ನನ್ನ ಗೆಳೆಯರು ಇದೆ ಜಾತಿಯವರು. ಅವರೆಲ್ಲರೂ ಘಜನಿಯ ಹಾಗೆ ಮೈತುಂಬ ಬರೆದು ಕೊಂಡು ಪರೀಕ್ಷೆಗೆ ಬರುತ್ತಿದ್ದರು. ಒಂದು ದಿವಸ ಪಕ್ಯ ನು ಹೀಗೆ ಬರೆದು ಕೊಂಡು ಬಂದಿದ್ದ. ಅವನು ಬಾರಿ ಬಾರಿ ತನ್ನ ಅಂಗಿ ಎತ್ತುವದನ್ನು ನೋಡಿ ನಮ್ಮ ಮೇಸ್ಟ್ರು ಅವನನ್ನು ಬುದ್ಧನ ಹಾಗೆ ಮಾಡಿ ನೀರಿನ ಅಭಿಷೇಕ ಮಾಡಿದ್ದರು.
ಗಾಳಕ್ಕೆ ಸಿಕ್ಕಿದ ನೆನಪುಗಳು ಮಾತ್ರ ಬರಿ ಇಷ್ಟು.ಬಾಲ್ಯದಲ್ಲಿ ಆಡಿರುವ ಆಟಗಳು ಮಾತ್ರ ನೂರಾರು....
(ಈ ಬರಹದಿಂದ ಯಾರಿಗಾದರೂ ತಮ್ಮ ಬಾಲ್ಯದ ನೆನಪು ತರಿಸಿದಲ್ಲಿ ಈ ಬರಹ ಸಾರ್ಥಕ.)
No comments:
Post a Comment