Wednesday, July 28, 2010

ಸುಬ್ಬನ ಹನಿ...(ಹಣಿ...) ಮೂನ್

ಈ ಜನಗಳಿಗೆ ಬುದ್ದೀನೇ ಇಲ್ಲ? ಎಂದು ಬೈದು ಕೊಳ್ಳುತ್ತ ನಿಂತಿದ್ದ ನಮ್ಮ ಸುಬ್ಬ. ಏನು? ಯಾರು ಏನು ಕೇಳಿದರು ಎಂದು ಕೇಳಿದೆ.ಈ ಜನಗಳಿಗೆ ಮದುವೆ ಅಂದ್ರೆ ತಮಾಷೆಯಾಗಿಬಿಟ್ಟಿದೆ. ಯಾರೇ ಇರಲಿ ಭೇಟಿಯಾದ ಮೇಲೆ ಕೇಳುವ ಮೊದಲನೆ ಪ್ರಶ್ನೆ ಮದುವೆ ಆಯಿತಾ?. ಅದು ಆದ ಮೇಲೆ ಎರಡನೆ ಪ್ರಶ್ನೆ ಮಕ್ಕಳು ಎಷ್ಟು? ಎಂದು. ಏನು ಮಕ್ಕಳ ಎಂದರೆ... ಮಕ್ಕಳ ಆಟವ? ಎಂದು ಕೇಳಿದ ಸುಬ್ಬ. ಆ ಹೌದು ಮಕ್ಕಳು ಏಕೆ? ಆಗಿಲ್ಲ ನಿನಗೆ,ಮಕ್ಕಳಾಗಿಲ್ಲ ಎಂದು ಹೋಗಿ ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜನ್ನಾದರೂ ಕೇಳೋ ಎಂದು ಹೇಳಿದ ನಮ್ಮ ಮಂಜ. ಲೇ ಎಂದು ಕೆಕ್ಕರಿಸಿ ಮಂಜನನ್ನು ನೋಡಿದ. ಏಕೆ? ಎಂದಿರೋ, ಮದುವೆ ಆಗಿ ಒಂದು ವಾರ ಆಗಿಲ್ಲ ಕೂಡ. ಅಗಲೆ ಮಕ್ಕಳು ಎಲ್ಲಿಂದ ಬರಬೇಕು ನಮ್ಮ ಸುಬ್ಬನಿಗೆ. ಇನ್ನೂ ಅಕ್ಕ-ಪಕ್ಕದ ಮನೆ ಮಕ್ಕಳನ್ನು ತನ್ನ ಮಕ್ಕಳು ಎಂದು ಹೇಳಬೇಕಷ್ಟೆ.

ಸುಬ್ಬ ಮೊದಲೇ ತಲೆ ತುಂಬಾ ಬಿಸಿ ಮಾಡಿಕೊಂಡಿದ್ದ. ಅವನ ಮಾವ ಅವನಿಗೆ ವರೋಪಚಾರದಲ್ಲಿ ಸ್ವಲ್ಪ ಕಡಿಮೆ ಮಾಡಿದ ಎಂದು. ಮತ್ತೆ ನೀನೆ ಹೋಗಿ ಕೇಳು ಎಂದು ಹೇಳಿದ ಮಂಜ. ಕೇಳಿದ್ದೆ. ಆದರೆ ಬಂಗಾರದಂತ ಹೆಂಡತಿ ನಿನಗೆ ಕರುಣಿಸಿದ್ದೇನೆ. ಮತ್ತೆ ಏನು ಬೇಕು ನಿನಗೆ ಎಂದು ದಬಾಯಿಸಿ ಕಳುಹಿಸಿದ ಎಂದ ಸುಬ್ಬ. ಮತ್ತೆ ಒಂದು ದಿನ ಹೋಟೆಲ್‍ಗೆ ಉಟಕ್ಕೆ ಕರೆದುಕೊಂಡು ಹೋಗಿದ್ದರು. ಬೇಗ ಬೇಗ ಊಟ ಮುಗಿಸಿ ೧೦ ನಿಮಿಷ ಅಲ್ಲೇ ನಿದ್ದೆ ಮಾಡುತ್ತಿದ್ದರು ನಿದ್ದೆ ಬಡಕ ನನ್ನ ಮಾವ. ಬಿಲ್ ಬಂತು, ನಾನೇ ಕೊಡುತ್ತೇನೆ ಎಂದು ತಿಳಿದುಕೊಂಡು ಸುಮ್ಮನೇ ನಿದ್ದೆಯಲ್ಲಿದ್ದರು. ನಾನು ಮಾವ.. ಮಾವ.. ಎಂದು ಕೂಗಿ ಬಿಲ್ ಎಂದೆ. ಬಿಲ್ ಕೂಲ್ ಏಳಲಿಲ್ಲ. ಮತ್ತೆ ಬಡಿದು ನನ್ನ ಮಡದಿ ಎಬ್ಬಿಸಿದಳು. ಮನಸ್ಸಿಲ್ಲದೇ ಮನಸ್ಸಿನಿಂದ ತಮ್ಮ ಕ್ರೆಡಿಟ್ ಕಾರ್ಡ್ ಕೊಟ್ಟರು. ಅವರ ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ನಮ್ಮ ಮಾವನಿಗೆ ಹೇಳದೇ ೫೦ ರೂಪಾಯಿ ಎಕ್ಸ್‌ಟ್ರಾ ಟಿಪ್ಸ್ ಎಂದು ಕಟ್ ಮಾಡಿದ್ದರು. ನಿದ್ದೆಗಣ್ಣಲ್ಲಿ ನೋಡದೇ ಹಾಗೆ ಬಂದು ಬಿಟ್ಟಿದ್ದರು. ಮತ್ತೆ ಎರಡು ದಿವಸ ಆದ ಮೇಲೆ, ನಮ್ಮ ಮಾವ ನನ್ನನ್ನು ಕರೆದುಕೊಂಡು ಹೋಗಿ ಜಗಳ ಮಾಡಿ ಹೊಟೆಲ್ ನವರಿಂದ ದುಡ್ಡು ವಸುಲ್ ಮಾಡಿದ್ದರು ಎಂದ ಸುಬ್ಬ. ನನಗೆ ತುಂಬಾ ಅವಮಾನ ಆಗಿತ್ತು ಎಂದ ಸುಬ್ಬ. ನಾನು ತುಂಬಾ ಕೇಳಿದ್ದಕ್ಕೆ ಹನಿಮೂನ್ ಟಿಕೆಟ್ ಮಾಡಿ ಕೊಡುತ್ತೇನೆ ಮಾತ್ರ ಎಂದು ಹೇಳುತ್ತಿದ್ದಾರೆ. ನಾನು ಅದು ಬೇಡ ಎಂದು ಹೇಳಿ ಬಂದೆ ಎಂದ ಸುಬ್ಬ. ಆಗ ಮಂಜ ಬೇಡ ಏಕೆ ಅಂದೆ. ಈಗ ಫೋನ್ ಮಾಡಿ ಟಿಕೆಟ್ ಮಾಡಿಸಿ ಎಂದು ಹೇಳು ಅಂದ. ಸುಬ್ಬ ಫೋನ್ ಮಾಡಿದ ಆದರೆ ಟಿಕೆಟ್ ಈಗ ಸಿಗೋಲ್ಲ ವೇಟಿಂಗ್ ಲಿಸ್ಟ್ ೭೦ ಇದೆ ಎಂದರು ನಮ್ಮ ಸುಬ್ಬನ ಮಾವ.

ಆಗ ನಮ್ಮ ಮಂಜ ಕೆಲ ಹೊತ್ತು ಯೋಚಿಸಿ, ನಾನು ನಿನಗೆ ಒಂದು ಐಡಿಯಾ ಕೊಡುತ್ತೇನೆ ಎಂದು ಹೇಳಿದ. ನಿಮ್ಮ ಮಾವನಿಗೆ ತತ್ಕಾಲ್ ಬುಕ್ ಮಾಡಿಸು ಎಂದು ಹೇಳು ಎಂದ ಮಂಜ. ನೀನು ನಿಮ್ಮ ಮಾವ ಎಷ್ಟಾದರೂ ನಿದ್ದೆ ಬಡಕ ಎಂದು ಹೇಳಿರುವೆ. ಅವರ ಜೊತೆ ನೀನು ಹೋಗು ಎಂದ. ಅವರು ಮಲಗಿಕೊಂಡಾಗ ಒಂದಿಷ್ಟು ದುಡ್ಡು ಜೇಬಿನಿಂದ ಎತ್ತು ಎಂದ. ಎಷ್ಟಾದರೂ ನಿನ್ನ ಮಾವ ನಿನ್ನ ಬಗ್ಗೆ ಸಂಶಯ ಪಡುವದಿಲ್ಲ ಎಂದ. ಸುಬ್ಬ ಆಯಿತು ಎಂದ.

ಸುಬ್ಬ ಮತ್ತೆ ಮಾವ ಎರಡು ದಿನ ಮೊದಲು ಹೋಗಿ ರಿಸರ್ವೇಶನ್ ಕ್ಯೂ ನಲ್ಲಿ ೪ ಘಂಟೆಗೆ ನಿಂತರು. ಸುಬ್ಬ ಮಾವ ಮಲಗಿಕೊಳ್ಳುವದೆ ಕಾಯುತ್ತಾ ಇದ್ದ. ಆಗ ಇನ್ನೂ ಕತ್ತಿಲು, ಮಾವ ಮಲಗಿಕೊಂಡ ಮೇಲೆ ನಿಧಾನವಾಗಿ ಅವರ ಜೇಬಿನಿಂದ ಅವರ ಪ್ಯಾಕೆಟ್ ತೆಗೆದುಕೊಂಡು ತನ್ನ ಜೇಬಿನಲ್ಲಿ ಇಟ್ಟು ಕೊಂಡ.

ನಾನು ಮತ್ತೆ ಮಂಜ ಮುಂಜಾನೆ ವಾಕಿಂಗ್ ಗೆ ಬಂದಿದ್ದೆವು. ಸುಬ್ಬನನ್ನು ವಿಚಾರಿಸಲು ಬಿ ಡಿ ಎ ಕಾಂಪ್ಲೆಕ್ಸ್ ಗೆ ಬಂದೆವು. ಮಂಜ ತನ್ನ ನಾಯಿಯನ್ನು ತನ್ನ ಜೊತೆಗೆ ಕರೆದುಕೊಂಡು ಬಂದಿದ್ದ. ಸುಬ್ಬ ತುಂಬಾ ಖುಷಿಯಲ್ಲಿ ಇದ್ದ. ಕೆಲಸ ಆಗಿದೆಯಾ ಎಂದು ಕೇಳಿದ ಮಂಜ. ಸಕ್ಸಸ್ ಎಂದ ಸುಬ್ಬ. ಎಷ್ಟು ದುಡ್ಡು ಇಟ್ಟಿದ್ದಾರೆ ನೋಡು ನಿಮ್ಮ ಮಾವ ಎಂದ. ಸುಬ್ಬ ಸಾವಕಾಶವಾಗಿ ತನ್ನ ಜೇಬಿನಿಂದ ತೆಗೆದ. ಆದರೆ ಅದು ಮಾವನ ಪರ್ಸ್ ಆಗಿರದೇ ಸಿಗರೇಟ್ ಪ್ಯಾಕೆಟ್ ಆಗಿತ್ತು.ಕತ್ತಲಲ್ಲಿ ಸುಬ್ಬನಿಗೆ ಗೊತ್ತೇ ಆಗಿರಲಿಲ್ಲ. ಲೇ....ಎಂದು ಮಂಜ ಸುಬ್ಬನನ್ನು ಕೆಕ್ಕರಿಸಿ ನೋಡಿದ್ದ. ಸುಬ್ಬನ ಮಾವ ಬಾಯಿ ತೆಗೆದು ಇನ್ನೂ ಮಲಗಿಯೇ ಇದ್ದರು.

ಸುಬ್ಬ ಸಾವಕಾಶವಾಗಿ ಸಿಗರೇಟ್ ಪ್ಯಾಕೆಟ್ ವಾಪಸ್ ಇಡಲು ಅನುವಾದ. ಅಷ್ಟರಲ್ಲಿ ಒಂದು ದೊಡ್ಡ ಅನಾಹುತ ಆಗಿ ಬಿಟ್ಟಿತ್ತು. ಮಂಜನ ನಾಯಿ ಸುಬ್ಬನ ಮಾವನ ಮೇಲೆ ಸೂಸು ಮಾಡಿಬಿಟ್ಟಿತ್ತು. ಆಗ ಸುಬ್ಬನ ಮಾವ ಎದ್ದು, ಅಳಿಯಂದಿರೆ ನಿಮಗೆ ಸಿಗರೇಟ್ ಬೇಕು ಎಂದಿದ್ದರೆ ನಾನೇ ಕೊಡುತ್ತಿದ್ದೇನಲ್ಲ ಎಂದರು. ಅದು... ಅದು... ಎಂದು ಸುಬ್ಬ ತಡವರಿಸುತ್ತಾ, ನಮ್ಮ ಮಂಜನಿಗೆ ಬೇಕು ಅದಕ್ಕೆ ಎಂದ. ಆನಂತರ ಸುಬ್ಬನ ಮಾವ ಮಲಗಿಕೊಳ್ಳಲಿಲ್ಲ.ಮಂಜ ಸುಖವಾಗಿ ಒಂದು ಸಿಗರೇಟ್ ಸೇದಿದ.

ರಿಸರ್ವೇಶನ್ ನಲ್ಲಿ ಸುಬ್ಬನ ಸರದಿ ಬಂದಿತ್ತು. ಆಗ ಸುಬ್ಬನ ಮಾವ ದುಡ್ಡನ್ನು ಕೊಡಬೇಕೆಂದು ತಮ್ಮ ಪಂಚೆ ಎತ್ತಿದರು. ಅಳಿಯಂದಿರೆ ದೊಡ್ಡ ಅನಾಹುತ ಎಂದರು. ನಾನು ಮುಂಜಾನೆ ಬೇಗ ಎದ್ದು ಟಾಯ್ಲೆಟ್ ಹೋದೆ ಅಲ್ವಾ, ಅಲ್ಲೇ ನನ್ನ ಅಂಡರ್ ವೇರ ಹಾಕಿಕೊಳ್ಳಲಾರದೇ ಬಂದು ಬಿಟ್ಟೆ. ಅದರ ಜೇಬ್ ನಲ್ಲಿ ದುಡ್ಡು ಇಟ್ಟಿದ್ದೆ ಎಂದರು. ಕಡೆಗೆ ನಮ್ಮ ಸುಬ್ಬನೇ ತನ್ನ ದುಡ್ಡು ಕೊಟ್ಟು ಹನಿಮೂನ್ ಟಿಕೆಟ್ ಬುಕ್ ಮಾಡಿದ. ಮನೆಗೆ ಬಂದರು ಸಹ ಸುಬ್ಬನ ದುಡ್ಡು ವಾಪಸ್ ಬರಲಿಲ್ಲ.

ಸುಬ್ಬ ಕಡೆಗೆ ತನ್ನ ದುಡ್ಡಿನಿಂದಲೇ ಹನಿಮೂನ್ ಗೆ ಹೋದ. ನಾನು ಸುಬ್ಬನಿಗೆ ಒಂದು ದಿವಸ ಫೋನ್ ಮಾಡಿದ್ದೆ ಹೇಗಿದೆ ಹನೀ ಮೂನ್ ಎಂದು. ಆಗ ಸುಬ್ಬನ ಹೆಂಡತಿ ಬಗ್ಗೆ ಕೇಳಿದಾಗ ವಾಂತಿ ಮಾಡುತ್ತಿದ್ದಾಳೆ ಎಂದ. ಲೇ ...ಹೋಗಿ ಇನ್ನೂ ಎರಡು ದಿವಸ ಆಗಿಲ್ಲ ಎಂದೆ. ಲೇ ನಾವು ಬಸ್ ನಲ್ಲಿ ಇದ್ದೇವೆ. ಅವಳಿಗೆ ಬಸ್ ಎಂದರೆ ಅಲರ್ಜೀ ಎಂದ.

ಮತ್ತೆ ಎರಡು ವಾರ ಆದ ಮೇಲೆ ಸುಬ್ಬ ಹನಿಮೂನ್ ಮುಗಿಸಿ ಬಂದಿದ್ದ. ನಾನು ಮತ್ತೆ ಮಂಜ ಕೇಳಿದೆವು ಹೇಗೆ ಇತ್ತು ನಿನ್ನ ಹನಿಮೂನ್ ಎಂದು. ಆಗ ನಮ್ಮ ಸುಬ್ಬ ಹಣಿ ... ಹಣಿ..ಗಟ್ಟಿಸಿಕೊಂಡು, ಹೋದ ಕೂಡಲೇ ನನಗೆ ಡೆನ್ಗ್ಯು ಜ್ವರ ಬಂದಿದ್ದು ಇನ್ನೂ ಇಳಿದಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡ....ನಾವು ಕೂಡ ಅವನ ಪರಿಸ್ತಿತಿ ನೋಡಿ ಮಲ ಮಲ ಮರಗಿದೆವು .

Friday, July 23, 2010

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....

ವಿಚಿತ್ರ ಸಂಗತಿಗಳಿಗೂ ನನಗು ಏನೋ ನಂಟು. ನನ್ನನ್ನೇ ಹುಡುಕಿ ಗಂಟು ಬೀಳುತ್ತವೆ. ಐದು ವರ್ಷದ ಹಿಂದೆ ನಾನು ಕೆಲಸ ಮಾಡುವ ಕಚೇರಿಯಲ್ಲಿ, ನನ್ನ ಹೆಸರಿನ ಮತ್ತೊಬ್ಬ ಆಸಾಮಿ ಗೋಪಾಲ್ ಕೃಷ್ಣ ಬೆಳ್ಳುಳ್ಳಿ ಎಂಬ ಹುಡುಗ ಸೇರಿಕೊಂಡ. ನನಗೆ ಅಲ್ಲಿಂದ ಶುರು ಆಯಿತು ಪೇಚಾಟ. ಎಲ್ಲಿ ಅವನು ತೆಗೆದುಕೊಂಡ ರಜೆಗಳು, ನನ್ನ ರಜೆ ಖಾತೆಯಿಂದ ಕಳೆದು ಬಿಡುತ್ತಾರೋ, ಅವನು ಊಟ ಮಾಡಿದ ದುಡ್ಡನ್ನು ನನ್ನ ಸಂಬಳದಲ್ಲಿ ಎಲ್ಲಿ ಹಿಡಿಯುತ್ತಾರೋ, ಅಥವಾ ಅವನು ಮಾಡಿದ ತಪ್ಪನ್ನು ನನ್ನ ಮೇಲೆ ಹೇರುತ್ತರೋ ಎಂಬ ಅಭೂತಪೂರ್ವ ಹೋರಾಟ ತಲೆಯಲ್ಲಿ ಹೊಳೆದಾಡಹತ್ತಿತ್ತು. ಅದಕ್ಕೆ ಪುಷ್ಟಿ ನೀಡಲು ನನ್ನದೇ ಅಡ್ಡ ಹೆಸರಿನ ಮತ್ತೊಬ್ಬ ಹುಡುಗ ಸಂದೀಪ್ ಕುಲಕರ್ಣಿ ಎಂಬ ಹುಡುಗ ಬೇರೆ ಸೇರ್ಪಡೆಯಾಗಿ ಬಿಟ್ಟ. ಆಗ ಶುರು ಆಗಿದ್ದು ನನ್ನ ತಲೆಯಲ್ಲಿ ಮಹಾಯುದ್ದವೇ. ಗೋಪಾಲ್ ಕೃಷ್ಣ ತುಂಬಾ ಚೆನ್ನಾಗಿ ಸವಿವರವಾಗಿ ಕಥೆ ಹೇಳುತ್ತಿದ್ದ. ಮತ್ತು ಸಿನೇಮಾ ಅಂದರೆ ಅವನಿಗೆ ಪಂಚಪ್ರಾಣ. ಅವನು ಸಿನೇಮಾ ಕಥೆಗಳನ್ನ ಬರೆದು ತನ್ನ ಪರೀಕ್ಷೆಗಳನ್ನ ಪಾಸಾದೆ ಎಂದು ಹೇಳುತ್ತಿದ್ದ. ಅದು ಹೇಗೆ ಎಂದು ನಾನು ಕೆಲವು ಬಾರಿ, ಅವನ ಜೊತೆ ವಾದಿಸಿದ್ದು ಇದೆ.

ನಾನು ಬೆಂಗಳೂರಿಗೆ ಬಂದು ಸೇರಿದೆ. ನನ್ನ ರಜೆ ದುಡ್ಡು ನನಗೆ ಬಂತು. ಮನಸಿಗೂ ಸ್ವಲ್ಪ ಸಮಾಧಾನ ದಕ್ಕಿತ್ತು. ತುಂಬಾ ಖುಷಿ ಪಟ್ಟೆ. ಹಾಗೆ ಮೊನ್ನೆ ಒಮ್ಮೆ ಗಾಂಧಿ ಬಜಾರ್ ನಲ್ಲಿ ಹೊರಟಿದ್ದಾಗ ವಿಚಿತ್ರ ಎಂಬಂತೆ, ಒಂದು ಪರಿಚಯದ ಸಚಿತ್ರ ಪ್ರಾಣಿ ನನ್ನ ಕಣ್ಣ ಮುಂದೆ ಬಂದು ನಿಂತಿತು. ಯಾರು? ಎಂದು ಸ್ವಲ್ಪ ಸಮಯ ಹೊಳೆಯಲಿಲ್ಲ. ಅದೇ ಗೋಪಾಲ್ ಕೃಷ್ಣ. ನಾನು ಗುರುತು ಹಿಡಿದೆ, ಅವನು ಮಾತ್ರ ನನ್ನ ಗುರುತು ಹಿಡಿಯಲಿಲ್ಲ. ಮೊನ್ನೆ ಬಂದ ನನ್ನ ಅಕ್ಕನಿಗೆ ನಾನು ಗುರುತು ಹಿಡಿಯಲಾರದಷ್ಟು ಬದಲಾಗಿದ್ದೀಯ ಎಂದು ಹೇಳಿದ್ದಳು. ಇನ್ನು ಇವನು ಕಂಡುಹಿಡಿಯುವುದು ಅಸಾಧ್ಯದ ಮಾತು. ನಾನೇ ಅವನಿಗೆ ಮಾತನಾಡಿಸಿ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ಮನೆಗೆ ಕರೆದುಕೊಂಡು ಹೋದೆ. ಅವನು ನನ್ನ ತಲೆಯ ಬಗ್ಗೆ ವಿಚಾರಿಸಿದಾಗ, ಎಲ್ಲವು ಬೆಳ್ಳಗೆ ಇರುವುದು ಬೇಕು.. ಬೇಕು.. ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ. ಹೆಂಡತಿ, ವಾಚ್, ಕಾರು...ಇದು ಅದರ ಪರಿಣಾಮ ಎಂದು ಒಗಟಿನ ಹಾಗೆ ಹೇಳಿದೆ. ಅರ್ಥ ಆಗಲಿಲ್ಲ. ಏನು? ಹಾಗೆಂದರೆ ಎಂದು ಕೇಳಿದ. ಅವನಿಗೆ ಅವನ ಸಿನೀಮಿಯ ಭಾಷೆಯಲ್ಲೇ ಹೇಳಿದರೆ ಚೆನ್ನ ಎಂದು ಶುರು ಮಾಡಿದೆ.

ಒಂದು ದಿನ "ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ "ಕಟ್... ಕಟ್.... " ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. "ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ". ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ.

ಯಾರು ಎಂದು ಕೇಳಿದಳು ನನ್ನ ಮಡದಿ. ಅದೇ ಪ್ರಿಯ ಪೇಪರ್ ನವನಿಗೆ ಹೇಳಬೇಕಂತೆ ಎಂದೆ. ಮನದಲ್ಲಿ ಮತ್ತೆ ಅದೇ ಯೋಚನೆ... ಅಂಕಲ್ ....?. ಹೋಗಿ ಕನ್ನಡಿ ಮುಂದೆ ನಿಂತೆ. ಪೂರ್ತಿಯಾಗಿ ಎಲ್ಲಡೆ ಕಣ್ಣು ಹಾಯಿಸಿ ನೋಡಿದೆ. ತಲೆ ಒಂದು ಬಿಟ್ಟು ಎಲ್ಲವೂ ಸರಿ ಇತ್ತು(ಕೂದಲು ಸರ್ ಮತ್ತೆ ನಿಮಾನ್ಸ್ ಗೆ ಹೇಳಿ ಬಿಟ್ಟೀರ? :) ). ಈ ಕೂದಲಿಗೆ ಏನು ಮಾಡುವದು ಎಂದು ಯೋಚಿಸುತ್ತಿದ್ದೆ. ಅಲ್ಲೇ ಬಿದ್ದ ಏಶಿಯನ್ ಕರಿ ಪೈಂಟ್ ನನ್ನ ನೋಡಿ "ಬಣ್ಣ ನನ್ನ ಒಲವಿನ ಬಣ್ಣ" ಎಂದು ಹಾಡುತ್ತಿದ್ದ ಹಾಗೇ ಅನ್ನಿಸಿತು. ಪೈಂಟ್ ಡಬ್ಬಿ ತೆಗೆದೆ ಸೀಮೆ ಎಣ್ಣೆ ವಾಸನೆ. ಒಯಿಕ... ಒಯಿಕ... ಎಂದು ಎರಡು ಸಾರಿ ಹೊಟ್ಟೆ ತೊಳಿಸುವ ಹಾಗೆ ಅನ್ನಿಸಿತು. ಎತ್ತಿ ಪಕ್ಕಕ್ಕೆ ಇಟ್ಟೆ. ನೀರು ಕಾಯಿಸಲು ಹೋದಾಗ ಇದ್ದಿಲು ಕಾಣಿಸಿತು. ಆ "ಯುರೇಕಾ....." ಎಂದು ಕಿರುಚೋಣ ಎಂದು ಕೊಂಡೆ. ಮಗ ಇನ್ನೂ ಎದ್ದಿರಲಿಲ್ಲ. ಕಿರುಚಿದರೆ ಅಷ್ಟೇ ನನ್ನ ಮಡದಿ ಪರಚಿ ಬಿಡುತ್ತಾಳೆ ಎಂದು ಸುಮ್ಮನಾದೆ. ಆದರೆ ಇದನ್ನು ಹಚ್ಚಿಕೊಂಡರೆ ಮಳೆ ಬಂದರೆ ಕಷ್ಟ. ಮತ್ತೆ ಆ ಐಡಿಯಾ ಕೂಡ ತಲೆ ಕೆಳಗಾಯಿತು.

ಸ್ನಾನ ಮುಗಿಸಿ ಬಂದ ಕೂಡಲೇ ... ಕಾಣಿಸಿದ್ದು ಕಾಡಿಗೆ ಡಬ್ಬಿ. ತೆಗೆದೆ ಅದು ಪೂರ್ತಿ ಖಾಲಿ ಆಗಿತ್ತು. ಮತ್ತೆ ನಿರಾಸೆಯ ಅಲೆಯಲ್ಲಿ ತೇಲುತ್ತ ತಿಂಡಿ ತಿಂದು ಆಫೀಸ್ ಹೋಗಲು ಅನುವಾದೆ. ಬೂಟ್ ಹಾಕಿಕೊಳ್ಳುವಾಗ ಕಾಣಿಸಿತು ನೋಡಿ. ನನ್ನ ಬೂಟ್ ಪಾಲಿಷ್. ಅದನ್ನೇ ಹಚ್ಚಿ ಕೊಳ್ಳೋಣ ಎಂದು ಬ್ರಶ್ ಎತ್ತಿದೆ. ನನ್ನ ಮಡದಿ ಒಳಗಿನಿಂದ ಬಂದು ರೀ ಹಾಲು ಕುಡಿದು ಹೋಗಿ ಎಂದಳು. ಮೊದಲೇ ಆ ಬಿಳಿ ಬಣ್ಣದ ಮೇಲೆ ಕೋಪವಿದ್ದಿದರಿಂದ. ಇವತ್ತು ನನಗೆ ಹಾಲುಬೇಡ ಕಣೆ ಎಂದೆ. ಏನು ಮಾಡುತ್ತಾ ಇದ್ದೀರ? ಎಂದು ಕೇಳಿದಳು ಮಡದಿ. ಏನು ಇಲ್ಲ, ಕಣೆ ಬೂಟ್ ಪಾಲಿಷ್ ಮಾಡುತ್ತಾ ಇದ್ದೇನೆ ಎಂದೆ. ಬೂಟ್ ತೆಗೆದು ಕೊಂಡೆ. ರೀ ನಾನು ಆಗಲೇ ಪಾಲಿಷ್ ಮಾಡಿ ಆಗಿದೆ ಎಂದಳು. ನೋಡು ಎಷ್ಟು ಕೊಳೆಯಾಗಿದೆ ಎಂದು ಪಾಲಿಷ್ ಮಾಡಲು ಅನುವಾದೆ. ನೋಡಿ ನನ್ನನ್ನು ಜೋರಾಗಿ ಕುಹಕವಾಡಿ ನಗಲು ಶುರು ಹಚ್ಚಿಕೊಂಡಳು. ನಾನು ಅರಿವಿಲ್ಲದೇ ಏಕೆ? ಎಂದು ದಬಾಯಿಸಿ ಕೇಳಿದಾಗ. ಮತ್ತೆ ಏನು ಬ್ರೌನ್ ಬೂಟ್ ಗೆ ಕರಿ ಪಾಲಿಷ್ ಎಂದು ಕುಹಕವಾಡಿದಳು. ನಾನು ಅದನ್ನು ನೋಡಿ ನನ್ನ ಬುದ್ದಿಗೆ ಮಲ.. ಮಲ.. ಮರಗಿ, ಅವಳು ಪಾಲಿಷ್ ಮಾಡಿದ ಕರಿ ಬೂಟ್ ಹಾಕಿಕೊಂಡು ಆಫೀಸ್ ಹೋಗಲು ಬಸ್ ಸ್ಟಾಪ್ಗೆ ಹೋದೆ. ಅಷ್ಟರಲ್ಲಿ ಒಬ್ಬ ಶಾಲೆಗೆ ಹೋಗುತ್ತಿದ್ದ ಒಂದು ಹುಡುಗಿ "ಅಂಕಲ್ ಟೈಮ್ ಎಷ್ಟು" ಎಂದು ಕೇಳಿದಳು. ಅವಳಿಗೆ ಟೈಮ್ ಹೇಳಿ ನಿಂತ ಎರಡೇ ನಿಮಿಷದಲ್ಲಿ ಬಸ್ ಬಂತು.

ಬಸ್ನಲ್ಲಿ ತುಂಬಾ ಜನ ಜಂಗುಳಿ ಇತ್ತು. ಮುಂದೆ ಹೋಗಿ ನಿಂತೆ. ಅಷ್ಟರಲ್ಲಿ ಒಬ್ಬ ಹುಡುಗ ಅಂಕಲ್ ನೀವು ಕುಳಿತು ಕೊಳ್ಳಿ ಎಂದು ತನ್ನ ಸೀಟ್ ನನಗೆ ಬಿಟ್ಟು ಕೊಟ್ಟ. ಮತ್ತೊಮ್ಮೆ ಅಂಕಲ್ ಎಂಬ ಶಬ್ದ ಕೇಳಿ, ಯಾರೋ ಕಲ್ಲಿನಿಂದ ಕಿವಿಗೆ ಬಂದು ಹೊಡೆದ ಹಾಗೆ ಆಯಿತು. ತಲೆಯಲ್ಲಿ ಅಂಕಲ್ ಎಂಬ ಶಬ್ದ ತುಂಬಾ ಗಾಯ ಮಾಡಿತ್ತು. ಕಡೆಗೆ ಶತಾಯುಗತಾಯ ಈ ಬಿಳಿ ಕೂದಲಿಗೆ ಏನಾದರೂ ಪರಿಹಾರ ಹುಡುಕಲೆ ಬೇಕು ಎಂದು ಆಫೀಸ್ ಹೋಗಿ ರಜೆ ಹಾಕಿ ಡಾಕ್ಟರ್ ಹುಡುಕಲು ಹೊರಟೆ. ಹೋದ ಕೂಡಲೇ ಸಿಗಬೇಕಲ್ಲ. ಒಂದೆರಡು ತಾಸು ತಿರುಗಿದ ಮೇಲೆ ಒಬ್ಬ ಡಾಕ್ಟರ್ ಕ್ಲಿನಿಕ್ ಸಿಕ್ಕಿತು. ಡಾಕ್ಟರ್ ಹೆಸರು ಕರಿಯಪ್ಪ. ತಕ್ಕ ಹೆಸರು ಎಂದು ಅಂದು ಕೊಂಡು ಕುಳಿತೆ. ಡಾಕ್ಟರ್ ಬಂದರು. ಆದರೆ ಡಾಕ್ಟರ್ ಕೂದಲು ಮಾತ್ರ ಪೂರ್ತಿ ಸಿಲ್ವರ್ ಕಲರ್. ಬೇಡ ಎಂದು ಎದ್ದು ಹೋಗಲು ಅನುವಾದೆ. ರೀ ಒಳಗೆ ಹೋಗಿ ಎಂದರು. ಏಕೆಂದರೆ ನಾನೇ ಮೊದಲನೆ ಪೇಶೆಂಟ್. ಮನಸ್ಸಿಲ್ಲದೆ ಒಳಗೆ ಹೋದೆ. ಏನು ಸಮಸ್ಯೆ ಎಂದರು ಡಾಕ್ಟರ್. ಸರ್ ನನ್ನ ತಲೆ .... ಎಂದೆ. ನಾನು ಸ್ಕಿನ್ ಸ್ಪೆಶಲಿಸ್ಟ್. ನಿಮ್ಮ ತಲೆ ನೋಡೋಕೆ ಬೇಕಾದರೆ ನಿಮಾನ್ಸ್ ಗೆ ಹೋಗಿ ಎಂದರು. ಸರ್ ಅದು ನನ್ನ ತಲೆಯಲ್ಲಿ ತುಂಬಾ ಬಿಳಿ ಕೂದಲು ಏನಾದರೂ ಔಷಧಿ ಕೊಟ್ಟು ಕರಿ ಮಾಡಿ ಎಂದೆ. ಸರ್ ನಿಮಗೆ ಬೇಕಾಗೋದು ಹಜಾಮತಿ ಅಂಗಡಿ. ಕಾರ್ನರ್ ಬಳಿ ಇದೆ ನೋಡಿ ಎಂದರು. ಸರ್ ನಾನು ಮೊದಲು ಅಲ್ಲೇ ಹೇರ್ ಡೈ ಮಾಡಿಸುತ್ತಾ ಇದ್ದೇ. ಆಗ ನನ್ನ ಕೂದಲು ಎರಡೋ ಮೂರೋ ಬಿಳಿ ಇದ್ದವು ಈಗ ನೋಡಿ ಎಂದೆ. ನನ್ನದು ಅದೇ ಕತೆ ಮಹಾರಾಯ ಎಂದರು ಡಾಕ್ಟರ್. ನಾನು ನಿಮಗೆ ಇನ್ನೊಬ್ಬ ಡಾಕ್ಟರ್ ಅಡ್ರೆಸ್ ಕೂಡುತ್ತೇನೆ. ಅವರು ನಾಟಿ ಔಷಧಿ ಕೊಡುತ್ತಾರೆ ಹೋಗಿ ಎಂದು ಹೇಳಿದರು.

ಆ ನಾಟಿ ಔಷಧಿ ಡಾಕ್ಟರ್ ಅಡ್ರೆಸ್ ಹುಡುಕಿ... ಹುಡುಕಿ... ಅರ್ಧ ಬೆಂಗಳೂರು ತಿರುಗಿದ್ದೆ. ಏಕೆಂದರೆ ಆ ಆಸಾಮಿ ತನ್ನ ಔಷಧಿ ಅಂಗಡಿಯನ್ನು ಒಂದು ಜಾಗದಲ್ಲಿ ಇಡುವದಿಲ್ಲ ಎಂದು ಎಲ್ಲರೂ ಹೇಳಿದರು. ಕಡೆಗೆ ಮನೆಗೆ ಹೋಗುವ ಮನಸಿಲ್ಲದೇ ಕಡೆಯ ಪ್ರಯತ್ನ ಎಂದು ಒಬ್ಬರು ಹೇಳಿದ ಅಡ್ರೆಸ್ ಬಳಿ ಹೋದೆ. ಆಸಾಮಿ ಸಿಕ್ಕೇ ಬಿಟ್ಟ. ಸರ್ ... ಎಂದು ಒಳಗೆ ಹೋದ ಕೂಡಲೇ ನಿಮ್ಮ ಸಮಸ್ಯೆ ಏನು ಎಂದು ಕೇಳದೇ. ಒಂದಿಷ್ಟ ಎಣ್ಣೆ ಕೈಗೆ ಕೊಟ್ಟ. ಸರ್ ಇದು ಏನು?. ಎಂದೆ. ನಿಮ್ಮ ತಲೆ ನೋಡಿ ಗೊತ್ತಾಗುತ್ತೆ?. ನೀವು ಏತಕ್ಕೆ ಬಂದಿದ್ದೀರಿ ಎಂದ. ಸರ್ ನೀವು ದೇವರು ಎಂದು ಹೇಳಿ. ಹೇಗಾದರೂ ಮಾಡಿ ಈ ಬಿಳಿ ಕೂದಲಿಗೆ ಅಂತ್ಯ ಕಾಣಿಸಿ ಎಂದೆ. ಡಾಕ್ಟರ್ ತಲೆ ಕೆರೆದು ಕೊಳ್ಳಲು ಶುರು ಮಾಡಿದರು. ಪಾಪ ಏನೋ ಸಮಾಧಾನ ಆಗಲಿಲ್ಲ ಅಂತ ಕಾಣುತ್ತೆ. ನೋಡ.. ನೋಡುತ್ತಲೇ.. ವೀಗ್ ತೆಗೆದು ಕೆರೆದುಕೊಂಡರು. ನಾನು ಘಾಬರಿ. ಏನು ಹೆದರ ಬೇಡಿ ಎಂದು ಹೇಳಿದರು. ಕೂದಲು ನನಗೆ ಹುಟ್ಟಾ ಇಲ್ಲ ಎಂದರು. ಅದಕ್ಕೆ ಇರಬೇಕು ಇಷ್ಟು ಜಾಣ ಡಾಕ್ಟರ್ ಎಂದು ಮನದಲ್ಲೇ ಅಂದು ಕೊಳ್ಳುತ್ತಿದ್ದಾಗ, ಒಬ್ಬ ವೀಗ್ ವ್ಯಾಪಾರ ಮಾಡುವ ಆಸಾಮಿ ಬಂದು, ಸರ್ ಎಷ್ಟು ವೀಗ್ ಕೊಡಲಿ ಎಂದು ಡಾಕ್ಟರ್ ನ್ನು ಕೇಳಿದ. ಮತ್ತೆ ಡಾಕ್ಟರ್ ನನಗೆ ಸಮಾಧಾನ ಮಾಡಿ ಅದು ನಿಮಗೆ ಅಲ್ಲ ಎಂದು ಹೇಳಿ. ನನಗೆ ಫೀಸ್ ಕೊಡಿ ಎಂದು ಹೇಳಿದರು. ಎಷ್ಟು ಎಂದು ಕೇಳಿದಾಗ. ಬರಿ ೨೦೦೦ ರೂಪಾಯಿ ಮಾತ್ರ ಎಂದರು.

ವಿಧಿ ಇಲ್ಲದೇ ಕೊಟ್ಟು ಮನೆಗೆ ಬಂದೆ. ದಿನವೂ ಔಷಧ ಲೇಪನ ಶುರು ಹಚ್ಚಿ ಕೊಂಡೆ. ನನ್ನ ಮಡದಿ ರೀ... ನಿಮ್ಮ ತಲೆ ವಾಸನೆ ಗೋಮೂತ್ರ ಹಾಗೆ ಬರುತ್ತೆ ಎಂದಳು. ಲೇ ಅದು ಫೇಮಸ್ ಡಾಕ್ಟರ್ ಕೊಟ್ಟ ಔಷಧಿ ಎಂದು ಹೇಳಿ ಸಮಾಧಾನ ಮಾಡಿದೆ. ಅಪ್ಪ ನೀನು ಹೊರಗೆ ಬಿದ್ದುಕೊ ಎಂದು ಮಗ ತಾಕಿತ ಮಾಡಿದ. ವಿಧಿ ಇಲ್ಲ ಎಂದು ಹೊರಗೆ ಮಲಗಿ ಕೊಂಡೆ. ಹತ್ತು ದಿನ ಹಾಗೆ ಲೇಪನ ಮಾಡಿದ್ದೆ ಮಾಡಿದ್ದು. ಮಡದಿ ಎಂದಳು ರೀ... ಮೇಹಂದಿ ಹಚ್ಚಿಕೊಳ್ಳಬಾರದೇ ಎಂದು ಹೇಳಿದರು ಕೇಳಲಿಲ್ಲ . ಒಂದು ತಿಂಗಳು ಆದರೂ ಒಂದು ಕೂದಲು ಕರಿ ಆಗಲಿಲ್ಲ.

ಕಡೆಗೆ ಒಂದು ದಿನ ನನ್ನ ಗೆಳೆಯ ಕೇಶವ್ ಕುಲ್ಕರ್ಣಿ ಕರೆ ಮಾಡಿದ್ದ. ನನ್ನ ಸಮಸ್ಯೆ ಹೇಳಿದೆ. ಅವನು ನೋಡು ಗೋಪಿ ದಿನಾಲೂ ರಾಗಿ ಹಿಟ್ಟು ಹಚ್ಚು ಎಂದು ಹೇಳಿದ. ಕಡೆಗೆ ದಿನವೂ ರಾಗಿ ಹಿಟ್ಟು. ಒಂದು ದಿನ ರಾಗಿ ಹಿಟ್ಟು ಹಚ್ಚಿ ಮಲಗಿ ಕೊಂಡಾಗ. ತಲೆಯಲ್ಲ ಕೆರೆತ ಮತ್ತು ಉರಿ ಎದ್ದು ನೋಡುತ್ತೇನೆ. ತಲೆ ತುಂಬಾ ಇರುವೆ. ನನ್ನ ಮಡದಿ ಸಿಹಿ ತಿಂಡಿಗೆ ಮಾಡಿದ ಸಿಹಿ ರಾಗಿ ಬಳೆದುಕೊಂಡಿದ್ದೆ.

ಮತ್ತೊಂದು ತಿಂಗಳು ಕಳೆಯಿತೇ ಹೊರತು. ಬಿಳಿ ಕೂದಲು ಕರಿ ಆಗಲಿಲ್ಲ. ಮತ್ತೆ ಅದೇ ನಾಟಿ ಡಾಕ್ಟರ್ ಹುಡುಕಿ ಹೋದೆ. ಮತ್ತೆ ಒಂದು ಸಾವಿರ ರೂಪಾಯಿ ಕೊಟ್ಟು ಮತ್ತೊಂದು ಔಷಧ ತಂದೆ. ಮತ್ತೆ ದಿನವೂ ಅದನ್ನು ಹಚ್ಚಿಕೊಂಡು ಮಲಗಿದೆ. ಒಂದೇ ತಿಂಗಳ ಪ್ರಯೋಗದ ನಂತರ ನನ್ನ ತಲೆಯಲ್ಲಿ ಎಲ್ಲ ಕೂದಲು ಕರಿ.... :-) ಆದರೆ ಇದ್ದ ಬಿಳಿ ಕೂದಲು ಎಲ್ಲವೂ ಬಿದ್ದು ಹೋಗಿದ್ದವು... :-(. ಈಗ ನನ್ನ ತಲೆ ನೋಡಿದರೆ ಬೆಂಗಳೂರಿನಿಂದ ಧಾರವಾಡದ ನಡುವೆ ಸಿಗುವ ಸ್ಟಾಪ್ ಗಳ ಹಾಗೆ ೨೦-೩೦ ಕಿಲೋ ಮೀಟರ್ ದೂರ..ದೂರ ಇವೆ.

ಈಗ ನಾನು ಯಾರಾದರೂ ಮತ್ತೆ ಕೂದಲು ಬರುವ ಹಾಗೇ ಮಾಡುವ ವೈದ್ಯರನ್ನು ಹುಡುಕುತ್ತಾ ಇದ್ದೇನೆ. ಬಿಳಿ ಕೂದಲು ಆದರೂ ಪರವಾಗಿಲ್ಲ. ಏಳು ಬಣ್ಣ ಸೇರಿ ತಾನೇ ಬಿಳಿ ಬಣ್ಣ ಆಗುವದು, ಎಂದು ಹೇಳಿ ಮುಗಿಸಿದ ಮೇಲೆ ಮನೆ ತುಂಬಾ ಹಾಸ್ಯದ ಹೊನಲು ಹರಿದಿತ್ತು.

ಕಡೆಗೆ ಊಟ ಮಾಡುತ್ತ ಇದ್ದಾಗ, ನಿನಗೆ ಯಾರಾದರು ವೈಧ್ಯರು ಗೊತ್ತ? ಎಂದು ಕೇಳಿದೆ. ಅದಕ್ಕೆ ಅವನು ನನಗೆ ಒಬ್ಬ ನಾಟಿ ವೈಧ್ಯರು ಗೊತ್ತು ಎಂದ. ಆ ನಾಟಿ ವೈಧ್ಯರು ನನ್ನ ಕೂದಲುಗಳನ್ನು ನಾಟಿ ಮಾಡುತ್ತಾರೋ? ಅಥವಾ ಇದ್ದಿರೋ ತಲೆಯನ್ನು ತೆಗೆದು ಬಿಡುತ್ತಾರೋ ಎಂದೆ. ಅವನು ನಗುತ್ತ, ಮಾಡುತ್ತಾರೆ ಕಣೋ? ಎಂದ. ಮತ್ತೆ ಇದು ನಿನ್ನ ತಪ್ಪಲ್ಲ, ನಿನ್ನ ಪೂರ್ವಿಕರು ಮಾಡಿದ ತಪ್ಪು. ನಿಮ್ಮ ಹೆಸರಿಗೂ ಮತ್ತು ನಿನ್ನ ಕೂದಲಿಗೂ ಅನ್ವರ್ಥಕವಾಗಿ ಇಟ್ಟಿದ್ದಾರೆ ಅಷ್ಟೇ ಎಂದ. ನಿನ್ನ ಹೆಸರು ಅದೇ ತಾನೇ ಎಂದೇ ಅದಕ್ಕೆ ನಾನು ಗೋಪಾಲ್ ಕೃಷ್ಣ....ಬರೀ ಗೋಪಾಲ್ ಅಲ್ಲ ಎಂದು ನಗುತ್ತ, ಕಡೆಗೆ ನಮ್ಮನ್ನು ಮನೆಗೆ ಆಹ್ವಾನಿಸಿ ತನ್ನ ಮನೆಗೆ ನಡೆದ.

Thursday, July 22, 2010

ತರ್ಲೆ ಮಂ(ಗ)ಜನ ಸಂಗೀತ ಸಾಂಗತ್ಯ....

ಮಂಜನಿಗೆ ಆಗ ಸುಮಾರು ೮ ವರ್ಷ ಇರಬೇಕು. ನಮ್ಮ ಮಂಜನ ಮನೆಗೆ ಬಾಡಿಗೆಗೆ ರಂಗಣ್ಣ ಶಾಸ್ತ್ರಿ ಬಂದಿದ್ದರು. ತುಂಬಾ ದಿನಗಳಿಂದಲೂ ಮನೆ ಖಾಲಿ ಇತ್ತು. ಮನೆಯ ಕೀಲಿ ಕೈ ಕೊಟ್ಟು ಬಾ ಎಂದು ಮಂಜನ ತಂದೆ ಮಂಜನಿಗೆ ಹೇಳಿದ್ದರು. ಮಂಜ ರಂಗಣ್ಣ ಶಾಸ್ತ್ರಿಯವರ ಮನೆಗೆ ಹೋದ. ಅಲ್ಲಿ ಅವರನ್ನು ನೋಡಿ ಘಾಬರಿಯಾಗಿ ಅವರ ಕೈಗೆ ಕೀಲಿ ಕೈ ಕೊಟ್ಟ. ಅದನ್ನು ಕೆಳಗೆ ಇಟ್ಟರು. ಮಂಜ ಘಾಬರಿಯಿಂದ ಮನೆಗೆ ಬಂದು ಒಂದು ಈರುಳ್ಳಿ ತೆಗೆಂದುಕೊಂಡು ಶಾಸ್ತ್ರಿಗಳ ಮನೆಗೆ ಓಡಿದ. ಮಂಜನ ಅಪ್ಪ ಏನು ಆಯಿತು ನೋಡು ಅವನು ಏಕೆ? ಹೀಗೆ ಓಡುತ್ತಿದ್ದಾನೆ ಎಂದು ಹೆಂಡತಿಗೆ ಕೇಳಿದರು. ಅಷ್ಟರಲ್ಲಿ ಮಂಜ ಈರುಳ್ಳಿ ತೆಗೆದು ಅವರ ಮೂಗಿಗೆ ಹಿಡಿದ. ರಂಗಣ್ಣ ಶಾಸ್ತ್ರಿಗಳು "ಅಕ್ಷಿ ಅಕ್ಷಿ .. ಎಂದು ಸೀನುತ್ತ, ಮಂಜನಿಗೆ ಎರಡು ಹೊಡೆಯುತ್ತಾ ಇದ್ದರು. ಅಷ್ಟರಲ್ಲಿ ಮಂಜನ ತಾಯಿ ಬಂದು ಏಕೆ? ಏನು ಆಯಿತು. ಎಂದು ಕೇಳಿದರು. ನಿಮ್ಮ ಮಂಜ ನಾನು ನಿದ್ರೆ ಮಾಡುತ್ತಿದ್ದಾಗ ಬಂದು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತಿದ್ದಾನೆ ಎಂದರು. ಆಗ ಮಂಜನ ಅಮ್ಮ ಗದರಿಸಿ ಮಂಜನಿಗೆ ಏಕೆ? ಹೀಗೆ ಮಾಡಿದೆ ಎಂದು ಕೇಳಿದರು. ನನಗೆ ಏನು ಗೊತ್ತಮ್ಮ ಮೊನ್ನೆ ಶಾಲೆಯಿಂದ ಬರುವ ಸಮಯದಲ್ಲಿ ಒಬ್ಬ ಮನುಷ್ಯ ಇವರ ಹಾಗೆ ಮಾಡುತ್ತಿದ್ದ, ಇವರ ಹಾಗೆ ಬಾಯಿಂದ ಜೊಲ್ಲು ಬರುತಿತ್ತು ಎಂದ. ಆಗ ರಂಗಣ್ಣ ಶಾಸ್ತ್ರಿಗಳು ತಮ್ಮ ಎಲೆ ಅಡಿಕೆ ಬಾಯಿಂದ ಬರುತ್ತಿದ್ದ ಜೊಲ್ಲನ್ನು ಒರಿಸಿಕೊಂಡರು. ಅದಕ್ಕೆ ಅವನಿಗೆ ಕೀಲಿ ಕೈ ಕೈಯಲ್ಲಿ ಕೊಟ್ಟು ಮತ್ತೆ ಈರುಳ್ಳಿ ಮೂಸುತ್ತಿದ್ದರು. ಅವನಿಗೆ ಪಿಡ್ಸ್ ಅಂತೆ ಅಮ್ಮ. ಅದಕ್ಕೆ ಇವರಿಗೂ ಹಾಗೆ ಆಗಿರಬಹುದು ಎಂದು ನಾನು ಮಾಡಿದೆ ಎಂದ. ಆಗ ಅವರ ಅಮ್ಮ ಏನೋ? ತಪ್ಪು ನಡೆಯಿತು ಕ್ಷಮಿಸಿ ಎಂದು ಹೇಳಿ ಮನೆಗೆ ಕರೆದುಕೊಂಡು ಹೋದರು.

ಮಂಜನಿಗೆ ಅವರ ಅಪ್ಪ ಬೈದು ಅವರು ನಿನ್ನ ಸಂಗೀತದ ಮೇಸ್ಟ್ರು ಕಣೋ ಎಂದು ಉಗಿದು ಬುದ್ದಿ ಹೇಳಿದ್ದರು. ಮಂಜ ಆಶ್ಚರ್ಯ ಚಕಿತನಾಗಿದ್ದ. ಅವರ ಸಂಗೀತ ಕಛೇರಿಗೆ ಮಂಜನನ್ನು ಕರೆದು ಕೊಂಡು ಹೋಗುತ್ತಿದ್ದರು. ಒಂದು ದಿವಸ ಮಂಜ "ಅಪ್ಪ ಅವರು ಅಷ್ಟು ಕೆಟ್ಟು ಮುಖ ಮಾಡಿ ಏಕೆ ಹಾಡುತ್ತಾರೆ ಎಂದು ಕೇಳಿದ್ದ". ಎ ಸುಮ್ಮನಿರೋ ಹಾಗೆಲ್ಲಾ ಹೇಳ ಬಾರದು ಸಂಗೀತದಲ್ಲಿ ಅವರ ಮುಖ ಅಲ್ಲ ಅವರ ಧ್ವನಿ ಮಾತ್ರ ಆಲಿಸಬೇಕು ಎಂದು ಉಗಿದಿದ್ದರು. ನೀನು ಸಂಗೀತ ಕಲಿಬೇಕು ದೊಡ್ಡ ಸಂಗೀತ ವಿದ್ವಾಂಸ ಆಗಬೇಕು ಎಂದು ಹೇಳಿ ಅವನನ್ನು ಅವರ ಬಳಿ ಸೇರಿಸಿದ್ದರು. ಅವರಪ್ಪ ಮಂಜ ಸಂಗೀತ ಬೇಡ ಎಂದು ಎಷ್ಟು ಕೇಳಿಕೊಂಡರು ಬಿಡಲಿಲ್ಲ. ಕಡೆಗೆ ಮಂಜ ಸಂಗೀತ ಶಾಲೆಗೆ ಸೇರಬೇಕಾಯಿತು. ಅಪ್ಪ ರಂಗಣ್ಣ ಸರ್ ಬಳಿ ಬೇಡ ಎಂದ ಮಂಜ. ಬೇರೆ ಎಲ್ಲಿ ಆದರೂ ಹಾಕು ಎಂದ. ಆದರೂ ಅವನ ಮಾತು ಕೇಳದೇ ಅಲ್ಲೇ ಸಂಗೀತ ಶಾಲೆಗೆ ಸೇರಿಸಿದರು. ರಂಗಣ್ಣ ಶಾಸ್ತ್ರಿಗಳು ಚೆನ್ನಾಗಿ ಸಂಗೀತ ಹೇಳಿ ಕೊಡುತ್ತಿದ್ದರು. ಆದರೆ ಮಂಜ ಸರ್ ನನಗೆ ಯಾವುದಾದರೂ ಫಿಲ್ಮ್ ಸಾಂಗ್ ಹೇಳಿ ಕೊಡಿ ಎಂದು ದಿನವೂ ಪೀಡಿಸುತ್ತಿದ್ದ. ಹೀಗಾಗಿ ಕಡೆಗೆ ಇವನ ಕಾಟ ತಾಳಲಾರದೇ, ತುಂಬಾ ಹೊಡೆಯಲು ಪ್ರಾರಂಬಿಸಿದರು. ಮಂಜ ಹೇಗಾದರೂ ಮಾಡಿ ಅದನ್ನು ತಪ್ಪಿಸಿಕೊಳ್ಳಲು, ದಿನ ಮುಂಜಾನೆ ಬೇಗನೆ ಎದ್ದು ಸಂಗೀತ ಪ್ರಾಕ್ಟಿಸ್ ಎಂದು ಹೇಳಿ ಕತ್ತೆ ಹಾಗೆ ಕಿರುಚಿತ್ತ ಇದ್ದ. ಕಡೆಗೆ ಅಕ್ಕ- ಪಕ್ಕದ ಜನಗಳೆಲ್ಲ ಇವನ ಮೇಲೆ ಕಂಪ್ಲೇಂಟ್ ಮಾಡಿದರು. ಕಡೆಗೆ ಅವರ ತಂದೆ ಇದು ಇವನಗೆ ಸರಿ ಹೊಂದಲ್ಲಾ ಎಂದು ಸಂಗೀತ ಶಾಲೆ ಬಿಡಿಸಿ ಬಿಟ್ಟರು. ಮಂಜ ಖುಷಿಯಿಂದ ಕೇಕೆ ಹಾಕಿದ್ದ.

ಮಂಜನ ಅಪ್ಪನಿಗೆ ಮಾತ್ರ ಅವನನ್ನು ಸಂಗೀತ ಪ್ರವೀಣ ಮಾಡಬೇಕೆಂಬ ಅದಮ್ಯ ಆಸೆ ಮಾತ್ರ ಮನಸಿನಲ್ಲಿ ಹಾಗೆ ಉಳಿದಿತ್ತು. ಮತ್ತೆ ಅವನನ್ನು ಕೊಳಲು ಕ್ಲಾಸ್ ಗೆ ಹಚ್ಚಿದರು. ಮಂಜ ತುಂಬಾ ಶೃದ್ಧೆ ಇಂದ ಕ್ಲಾಸ್ ಹೋಗುತ್ತಿದ್ದ. ಇದೇನೋ ಪಿಳ್ಳನ್ಗೊವಿ ನಿನಗೆ ಸೂಟ್ ಆಗಲ್ಲಾ ಕಣೋ ಎಂದು ಸುಬ್ಬ ಹೇಳಿದ ಅಷ್ಟೇ, ಕೊಳಲು ಕ್ಲಾಸ್ ಕೂಡ ಬಿಟ್ಟು ಬಿಟ್ಟ. ಅಪ್ಪ ನನಗೆ ತಬಲಾ ಕ್ಲಾಸ್ ಹಚ್ಚು ಎಂದು ಕೇಳಿದ. ಕಡೆಗೆ ಅವನನ್ನು ತಬಲಾ ಕ್ಲಾಸ್ ಹಚ್ಚಿದರು. ತಬಲಾ ಹಲಿಗೆ ತರಹ ಬಾರಿಸುತ್ತಿದ್ದ. ಮತ್ತೆ ಅದರ ಟೆಕ ಹಿಡಿಯುವ ಸಲುವಾಗಿ ಸುತ್ತಿಗೆ ಬಳಸಿ ಅದನ್ನು ಸರಿ ಮಾಡುವ ವಿಧಾನ ನೋಡಿ ತಾನು ಸರಿ ಮಾಡಲು ಹೋಗಿ ಎರಡು ತಬಲಾಗಳನ್ನು ತಬ್ಬಲಿ ಮಾಡಿ ಬಿಟ್ಟಿದ್ದ.

ಅವರ ಅಪ್ಪ ಅವನಿಗೆ ಒಬ್ಬ ಸಂಗೀತ ಪ್ರವೀಣ ಮಾಡಬೇಕೆಂದು ಕೊಂಡಿದ್ದರು. ಒಂದು ದಿನ ಶಾಲೆ ಕಾರ್ಯಕ್ರಮದಲ್ಲಿ ರಾಜೀವ್ ಗಿಟಾರ್ ಬಾರಿಸಿದ್ದ. ಶಾಲೆಯ ಎಲ್ಲ ಹುಡುಗರು,ಹುಡುಗಿಯರು ಮತ್ತು ಉಪಾಧ್ಯಾಯರು ಅವನನ್ನು ಹೋಗಳಿದ್ದೆ.. ಹೋಗಳಿದ್ದು. ಅದರಿಂದ ಮಂಜ ಮನೆಗೆ ಹೋಗಿ ಅಪ್ಪ ನಾನು ಗಿಟಾರ್ ಕಲೆಯುತ್ತೆನೆ ಎಂದು ಹೇಳಿದ. ಅಪ್ಪ ನೀನು ಕಲೆತಿದ್ದೆ ಸಾಕು ಎಂದರು ಕೇಳಲಿಲ್ಲ. ಅಪ್ಪನನ್ನು ಪೀಡಿಸ ಹತ್ತಿದ. ಆಗ ಅವರ ಅಪ್ಪ ಅವನಿಗೆ ಚಟಾರ ಎಂದು ಎರಡು ಕೆನ್ನೆಗೆ ಬಿಟ್ಟರು ಅಷ್ಟೇ, ಅಲ್ಲೇ ಮಂಜ ತನ್ನ ಸಂಗೀತ ಶುರು ಹಚ್ಚಿ ಕೊಂಡಿದ್ದ. ಹೀಗೆ ನಮ್ಮ ಮಂಜ ತನ್ನ ತರ್ಲೆಗಳಿಂದ ಅದರ ಸಾಂಗತ್ಯ ಅಂತ್ಯ ಗೊಳಿಸಿದ್ದ.

ಈಗ ಎಲ್ಲಾದರೂ ಸಂಗೀತ ಕಾರ್ಯಕ್ರಮ ಇದ್ದರೆ ತಪ್ಪದೇ ಹಾಜರ ಆಗುತ್ತಾನೆ. ನಾನು ಅಪ್ಪನ ಮಾತು ಕೇಳಬೇಕಿತ್ತು ಎಂದು ಗೊಣಗುತ್ತಾನೆ.

Wednesday, July 21, 2010

ಕೆನ್ನೆ ಮೇಲೆ ಪ್ರೇಮದುಂಗುರ ....

ರೀ ಇದೇನು ಇಷ್ಟು ಕೆಟ್ಟದಾಗಿ ಹಾಡುತ್ತೀರಿ? ಎಂದು ನನ್ನನ್ನು ವ್ಯಂಗ್ಯ ಮಾಡಿದಳು ನನ್ನ ಮಡದಿ. ನಾನೇನು ನಿನ್ನ ಹಾಗೇ ಲತಾ ಅಥವಾ ಆಶಾ ಅಂತ ಮಾಡಿದ್ದೀಯ ಎಂದು ಕೇಳಿದೆ.ಅಲ್ಲಾ ಹಾಡೋ ಹಾಡಿನ ಸಾಹಿತ್ಯನಾದರೂ ಸರಿಯಾಗಿ ಹಾಡಬೇಡವ ಎಂದಳು. ನಾನೇನು ತಪ್ಪು ಹಾಡಿದೆ ಎಂದು ಕೇಳಿದೆ. ಮತ್ತೆ ಏನು "ಕೋಗಿಲೆಯು ನಾಟ್ಯದಲ್ಲಿ ತಾನೇ ತಾನೆಂದಿತು" ಎಂದರೆ ಹೇಗೆ ಎಂದಳು. ಅದಕ್ಕೆ ಆನೆಯಂತಹ ನಾನೇ ನಾಟ್ಯ ಮಾಡುವಾಗ ಖುಶಿಯಿಂದ ಇದ್ದಾಗ ಕೋಗಿಲೆ ನಾಟ್ಯ ಮಾಡಬಾರದ. ಏನು ನಾಟ್ಯ ಅನ್ನುವದು ಬರಿ ನವಿಲೀಗೆ ಮತ್ತು ನನ್ನವಳಿಗೆ ಮಾತ್ರ ಸಂಭಂದಿಸಿದ್ದ ಎಂದು ಕೇಳಿದೆ. ನಾನು 9 ವರ್ಷದ ಹಿಂದೆ ಹಾಡಿದರೆ ನನ್ನ ಜೊತೆ ಸಾತ ಕೊಡುತ್ತಿದ್ದಳು ಪಕ್ಕದ ಮನೆ ಪ್ರೇಮ ಎಂದೆ. ನಿನಗೆ ರಾಗ ತಾಳ ಬಿಟ್ಟು ನನ್ನ ಮೇಲೆ ರಾಗ ದ್ವೇಷದಿಂದ ನೋಡುತ್ತೀ ಎಂದೆ.

ಆಯಿತು ಬಿಡಿ ನೀವು ಕಿಶೋರ್ ಕುಮಾರನೇ ಎಂದು ಅಡುಗೆ ಮನೆಗೆ ಹೋದಳು. ಈ ಕಿಶೋರ್ ಕುಮಾರನ ಕಿಶೋರಾವಸ್ಥೆಯಲ್ಲಿ ನಡೆದ ಘಟನೆ ನೆನಪಾಗಿ ನಾನೊಬ್ಬನೇ ನಗುತ್ತಿದ್ದೆ. ನನ್ನ ಮತ್ತೆ ಪ್ರೇಮ ಮನೆ ಅಕ್ಕ ಪಕ್ಕ ಮತ್ತೆ ಬಾತ್ ರೂಮ್ ಕೂಡ ಪಕ್ಕ್ ದಲ್ಲೇ ಇತ್ತು. ನಾನೊಬ್ಬ ಬಾತ್ ರೂಮ್ ಸಿಂಗರ್. ನಾನು ಹಾಗೆ ಒಂದು ದಿವಸ "ಹಾಡು ಯಾವ ಹಾಡು..." ಎಂದು ಹಾಡುತ್ತಿದ್ದೆ. ಮತ್ತೆ ಪಕ್ಕದ ಮನೆ ಪ್ರೇಮ ಬಾತ್ ರೂಮಿನಿಂದ "ಅನುರಾಗ ತುಂಬಿದ ಹಾಡು" ಎಂದು ವಾಪಸ ಉತ್ತರ ಬಂತು. ನನ್ನ ಮತ್ತೆ ಅವಳ ಹಾಡುಗಳು ತುಂಬಾ ದಿವಸ ನಡೆಯಿತು. ನಮ್ಮ ಅಪ್ಪ, ಅಮ್ಮ ಇವನು ಒಂದು ಘಂಟೆ ಹೊತ್ತು ಬಾತ್ ರೂಮ್ ನಲ್ಲಿ ಏನು ಮಾಡುತ್ತಾನೆ? ಎಂದು ಆಶ್ಚರ್ಯ ಪಟ್ಟಿದ್ದರು.

ಕಡೆಗೆ ಒಂದು ದಿವಸ ತುಂಬಾ ಚಳಿ ಚಳಿ...ತಾಳೆನು ಈ ಚಳಿಯ ಎಂದು ಹಾಡುತ್ತಿದ್ದೆ. ಅಲ್ಲಿಂದ ಏನು ಉತ್ತರ ಬರಲಿಲ್ಲ. ಮತ್ತೆ ಅದನ್ನೇ ಹಾಡಿದೆ ಏನು ಉತ್ತರ ಇಲ್ಲ. ಕಡೆಗೆ ನಮ್ಮಪ್ಪ ಲೇ ಚಳಿ.. ಚಳಿ ಅಂದುಕೊಂಡು ಎಷ್ಟೊತ್ತು ಬಾತ್ ರೂಮ್ ನಲ್ಲಿ ಇರುತ್ತಿ ಬೇಗ ಬಾ ಎಂದು ಬೈದು ಬಿಟ್ಟರು. ಮತ್ತೆ ನಾಳೆ ನೋಡಿದರೆ ಆಯಿತು ಎಂದು ಹೊರ ಬಂದೆ. ಮರು ದಿನ "ನೀರಿನಲ್ಲಿ ಅಲೆಯ ಉಂಗುರ" ಎಂದೆ. ಅಲ್ಲಿಂದ "ಭೂಮಿ ಮೆಲೆ ಹೂವಿನುಂಗುರ" ಎಂದು ಉತ್ತರ ಬಂತು. ತುಂಬಾ ಖುಷಿಯಾಗಿ "ಕೆನ್ನೆ ಮೇಲೆ ಪ್ರೇಮದುಂಗುರ" ಎಂದು ಹಾಡಿ ಕುಪ್ಪಳಿಸಿದ್ದೆ.

ಪ್ರೇಮಾನ ಜೊತೆ ಹಾಡಿರುವ ಡುಯೆಟ್ ಗಳೆಷ್ಟೋ. ಕಡೆಗೆ ಅವಳಿಗೆ ಒಂದು ಪ್ರೇಂ ಪತ್ರ ಕೊಡಬೇಕು ಎಂದು ತೀರ್ಮಾನಕ್ಕೆ ಬಂದು. ಮಂಜನಿಂದ ಒಂದು ಪ್ರೇಮ ಪತ್ರ ಬರೆದು ಅವಳಿಗಾಗಿ ಬಸ್ ಸ್ಟಾಪ್ ಹತ್ತಿರ ಹೋಗಿ ನಿಂತೆ. ಅಷ್ಟರಲ್ಲಿ ಅವಳು ಬಂದಳು. ನಾನು ನೋಡಿ ನಕ್ಕೆ. ಯಾರು ಬರುತ್ತಿಲ್ಲ ಎಂದು ಖಾತರಿ ಆದ ಮೇಲೆ ಅವಳ ಹತ್ತಿರ ಹೋಗಿ "ಐ ಲವ್ ಯೂ" ಎಂದು ಪ್ರೇಂ ಪತ್ರ ಕೈಯಲ್ಲಿ ಇಟ್ಟೆ. ಅಷ್ಟೇ.... ತೆಗೆದು ಎರಡು ಬಿಟ್ಟೆ ಬಿಟ್ಟಳು. ಕೆನ್ನೆ ಕೆಂಪಾಗಿ ಹೋಗಿತ್ತು.

ಆನಂತರ ಕೆಲ ದಿನಗಳ ಮೇಲೆ ಪ್ರೇಮನ ಅಮ್ಮ ಪಾರ್ವತಮ್ಮ ಬಂದಿದ್ದರು. ನಿಮ್ಮ ಯಜಮಾನರು ತುಂಬಾ ಚೆನ್ನಾಗಿ ಹಾಡುತ್ತಾರೆ ಎಂದು ಅಮ್ಮನಿಗೆ ಹೇಳುತ್ತಿದ್ದರು ಆಗ ಅರ್ಥ ಆಗಿತ್ತು. ಆಗ ನಾನು ನಗುತ್ತಾ ಇದ್ದೇ. ಅಪ್ಪ ಅಮ್ಮ ಮತ್ತೆ ನಮ್ಮ ಮಂಜ ಸೇರಿ ನನಗೆ "ಕೆನ್ನೆ ಮೇಲೆ ಪ್ರೇಂದುಂಗುರ.." ಎಂದು ತುಂಬಾ ದಿನಗಳವರೆಗೆ ಕಾಡಿದ್ದರು.

ಅಷ್ಟಕ್ಕೇ ನಮ್ಮ ಮಂಜ ಬಿಡಬೇಕಲ್ಲ "ಪ್ರೇಮವೆಂಬ ಪಂದ್ಯದಲ್ಲಿ ನೀನು ಗೆಲ್ಲಲಿಲ್ಲ" ಎಂದು ಕೂಡ ಸತಾಯಿಸುತ್ತಿದ್ದ. ಇನ್ನೂ ಒಂದಿಷ್ಟು ದಿನ ಹಾಗೆ ಹಾಡಿದ್ದರೆ ಫೋಟೋ ಫ್ರೇಮ್ ಆಗುತ್ತಿದ್ದೆ ಎಂದು ಅನಿಸಿತ್ತು.

ಅಷ್ಟರಲ್ಲಿ ನನ್ನ ಮಡಿದಿ ಬಿಸಿ ಬಿಸಿ ಕಾಫೀ ತೆಗೆದುಕೊಂಡು ಬಂದು ನನ್ನ ತೊಡಯೆಮೇಲೆ ಇಟ್ಟಾಗ ಆ ಲೋಕದಿಂದ ಹೊರಬಂದಿದ್ದೆ. ಕಾಫೀ ಹೀರುತ್ತ ಎಫ್ ಎಂ ನಲ್ಲಿ ಬರುತ್ತಿದ್ದ "ನೆನಪುಗಳ ಮಾತೆ ಮಧುರ... " ಎಂಬ ಹಾಡು ಆಲಿಸಿದ್ದೆ.

Sunday, July 18, 2010

ವಿದಾಯದ ಲೇಖನ..

ಏನೋ?. ಇದು ನೀನು ಲೇಖನ ಬರೆದು ಅದನ್ನು ತಿಳಿ ಹಾಸ್ಯ ಎನ್ನುವ ವರ್ಗಕ್ಕೆ ಸೇರಿಸಿದ್ದೀಯಾ? ಎಂದು ನನ್ನ ಗೆಳೆಯ ಸಂದೀಪ ಫೋನ್ ಮಾಡಿದ್ದ. ಏನೋ, ಏನಾದರೂ ತಪ್ಪಾಯಿತೇನೋ ಎಂದು ಕೇಳಿದೆ. ಮತ್ತೆ ಏನು? ಹಾಸ್ಯ ಎಂದರೆ ಏನು?. ನೀನು ಬರೆದ ಮೇಲೆ ನಾವು ತಿಳಿದು ಕೊಳ್ಳಬೇಕೇನು? ಎಂದು ಕೇಳಿದ. ಆಗ ಅರ್ಥ ಆಯಿತು ಅವನು ಏನು ಹೇಳುತ್ತಿದ್ದಾನೆ ಅಂತ. ನಿನ್ನ ಲೇಖನದಲ್ಲೇನು ವಿಶೇಷ ಇಲ್ಲ. ನಿನ್ನ ಲೇಖನ ಬೆಂಗಳೂರು ಭಾಷೆಯಲ್ಲಿ ಇರುತ್ತೆ. ಅದು ನನ್ನ ಹಾಗೆ ಇರುವ ಧಾರವಾಡ ಜನಕ್ಕೆ ಹೇಗೆ ಅರ್ಥ ಆಗಬೇಕು ಎಂದ. ಯಾಕೆ ನೀನು ಚಲನ ಚಿತ್ರ ಮತ್ತೆ ಧಾರಾವಾಹಿ ನೋಡುವದಿಲ್ಲವಾ? ಎಂದು ಕೇಳಿದೆ. ಹಾಗೇನಿಲ್ಲ ನೋಡುತ್ತೇನೆ ಆದರೆ ನೋಡುವದು ಬೇರೆ , ಲೇಖನ ಬೇರೆ ಎಂದ. ಆಗ ಇವನು ಹೇಳುವದು ಸ್ವಲ್ಪ ನಿಜ ಎನ್ನಿಸಿ ನಾನು ಲೇಖನ ಬರೆಯುವದನ್ನು ನಿಲ್ಲಿಸಬೇಕು ಎಂದು ತೀರ್ಮಾನಕ್ಕೆ ಬಂದೆ. ಇನ್ನೂ ಮುಂದೆ ಬರೆದರು ತಿಳಿ ಹಾಸ್ಯ ಎಂದು ವರ್ಗಕ್ಕೆ ಸೇರಿಸುವ ದುಃಸಾಹಸಕ್ಕೆ ಕೈ ಹಾಕುವದಿಲ್ಲ ಎಂದು ತೀರ್ಮಾನಕ್ಕೆ ಬಂದೆ.

ಆಯಿತು ಇನ್ನೂ ಬರೆಯುವದಿಲ್ಲ ಮಹಾರಾಯ. ಮತ್ತೆ ಏನು ವಿಶೇಷ? ಎಂದು ಕೇಳಿದೆ. ಏನು ಇಲ್ಲ ಹಾಗೆ ಫೋನ್ ಮಾಡಿದ್ದು ಎಂದ. ಆಗ ನೀನು ಮಂಜನ ಬಗ್ಗೆ ತುಂಬಾ ಬರೆದಿದ್ದೀಯ. ಹೀಗೆ ಮಾಡಿದರೆ ನಿನಗೆ ಅವನು ಮಾನ-ನಷ್ಟ ಮೊಕದ್ದಮೆ ಹಾಕುತ್ತಾನೆ ಎಂದು ಹೆದರಿಸಿದ. ಅಯ್ಯೋ ದಾರಿಯಲ್ಲಿ ಹೋಗುವ ಮಾರಿ ಕರೆದು ತಂದು ಮನೆಯಲ್ಲಿ ಕೂಡಿಸಿದ ಹಾಗೆ ಆಯಿತು ಎಂದು ಅನ್ನಿಸಿತು. ನಾನು ಮೊದಲು ಮಂಜನ ಪರ್ಮಿಶನ್ ಕೇಳಬೇಕಿತ್ತು. ಆದರೆ ಕೇಳಲಿಲ್ಲ. ಅದಕ್ಕೆ ಏನು ತಪ್ಪು ಎಂದೆ. ಅಷ್ಟರಲ್ಲಿ ಜೋರಾಗಿ ನಗುವ ಶಬ್ದ.... ಮಂಜ ಕೂಡ ಅವನ ಬಳಿ ಇದ್ದ. ಇದು ಇವನದೇ ಕರಾಮತ್ತು ಎಂದು ನನಗೆ ತಿಳಿದಿತ್ತು.

ಮತ್ತೆ ಏನು ಇಲ್ಲ ಮಹಾರಾಯ ಇನ್ನೊಂದು ಬಾರಿ ಹಾಗೆ ಬರೆಯುವ ಮುಂಚೆ ನಮಗೆ ತಿಳಿಯಾಗಿ ಪಾರ್ಟೀ ಕೊಡಿಸಬೇಕು ಎಂದು ಇಬ್ಬರು ಫೋನಿನಲ್ಲಿ ಹೇಳಿದರು. ನಿನ್ನನ್ನ ಹೀರೊ ಮಾಡಿದಕ್ಕೆ ನನಗೆ ಸಿಗಬೇಕಾಗಿದ್ದೆ ಈ ಶಿಕ್ಷೆ ಎಂದು ಅಂದುಕೊಂಡು ಒಪ್ಪಿಗೆ ಸೂಚಿಸಿ ಆಯಿತು. ಮತ್ತೆ ಮಂಜ ಇನ್ನೂ ಮುಂದೆ ಏನಾದರೂ ಬರೆದರೆ ಅದನ್ನು ತಿಳಿ ಸಾರು ಮತ್ತೆ ತಿಳಿ ಮಜ್ಜಿಗೆ ವರ್ಗಕ್ಕೆ ಸೇರಿಸು ಎಂದು ಆಜ್ಞೆ ಮಾಡಿ ಫೋನ್ ಇಟ್ಟರು.

ತಿಳಿ ಹಾಸ್ಯ. ಕೆಲವರಿಗೆ ಮಾತ್ರ ಅರ್ಥವಾಗುವುದು ತಿಳಿಯಾದ ಹಾಸ್ಯ. ಉಳಿದವರಿಗೆ ಅದು ತಿಳಿಯದ ಹಾಸ್ಯ. ಎಂದು ಎಲ್ಲೋ ಬ್ಲಾಗ್‌ನಲ್ಲಿ ಓದಿದ ನೆನಪು. ಹಾಗೆ ಏನಾದರೂ ಆಗಿದೆ ಎಂದು ಫೋನ್ ಬಂದಾಗ ತುಂಬಾ ಘಾಬರಿ ಪಟ್ಟಿದ್ದೆ.

ಅವನು ಮಾತನಾಡಿದ್ದು ಬೆಂಗಳೂರು ಭಾಷೆಯಲ್ಲೇ ಅಲ್ಲವೇ, ಹಾಸ್ಯ ಬರೆಯುವ ನೆಪದಲ್ಲೇ ನಾನೇ ಅಪಹಾಸ್ಯವಾಗಿ ಬಿಟ್ಟೆನೇ ಎಂದು ನನ್ನ ಪೆದ್ದು ತಲೆಗೆ ಎರಡು ಮೊಟಕಿದೆ. ನೋಡುವಾ ಧಾರವಾಡ ಭಾಷೆಯಲ್ಲಿ ಏನಾದರೂ ಬರೆಯಲು ಹೊಳೆಯುವುದೇ ಎಂದು.

ಎಲ್ಲರೂ ಇದನ್ನು ವಿದಾಯದ ಲೇಖನ ಎಂದು ತಪ್ಪಾಗಿ ತಿಳಿದಿದ್ದೀರಾ. ಇದು ನನ್ನ ಮತ್ತು ಮಂಜನ ನಡುವೆ ಪಾರ್ಟೀ ಕೊಡಿಸುವ ಬಗ್ಗೆ ಇರುವ ವಿವಾದ ಲೇಖನ. ಏಕೆ? ಎಂದಿರೋ. ಈಗ ಫೈನಾನ್ಸ್ ಖಾತೆ ನನ್ನಲ್ಲಿ ಇಲ್ಲ. ಅದು ೫ ವರ್ಷದ ಹಿಂದೆ ನನ್ನಿಂದ ನನ್ನ ಹೆಂಡತಿಗೆ ವರ್ಗಾವಣೆ ಆಗಿದೆ. ಹೋಮ್ ಮಿನಿಸ್ಟ್ರೀ , ಆಹಾರ ಖಾತೆ ಎಲ್ಲವೂ ನನ್ನ ಬಳಿ ಇಲ್ಲ. ಆಹಾರ ಸರಬರಾಜು ಮತ್ತೆ ಸಾರಿಗೆ ಸಂಸ್ಥೆ ಮಾತ್ರ ನ‌ನ್ನಲ್ಲಿ ಉಳಿದಿದೆ. ಅವನ ತಿಳಿಯಾದ ಪಾರ್ಟೀ, ನನಗೆ ತಿಳಿಯಲಾರದು ಪೂರ್ತಿ. ಇನ್ನೂ ಅದನ್ನು ಅಪ್ರೂವ್ ಮಾಡಲು ಕಳುಹಿಸಿದರೆ ೩ ವರ್ಷ ಬೇಕು ಅದನ್ನು ಜಾರಿಗೆ ತರಲು. ಏಕೆಂದು ನಿಮಗೆ ಮೊದಲೇ ತಿಳಿದಿದೆ(ಕಾನೂನು ಮತ್ತೆ ಸಲಹೆ ಖಾತೆ ಕೂಡ ನನ್ನಲ್ಲಿ ಇಲ್ಲ).

ಇದನ್ನು ನೀವೆಲ್ಲರೂ ವಿವಾದದ ಮತ್ತು ವಿದಾಯದ ಲೇಖನದಂತೆ ಪರಿಗಣಿಸದೇ,ವಿನೋದದ ಲೇಖನ ಎಂದು ಪರಿಗಣಿಸಿ. ಈ ಪೀಡಿಯನ್ನು ಧಾರವಾಡ ಪೇಡಾದಂತೆ ಸ್ವೀಕರಿಸುತ್ತೀರಿ ಎಂದು ...

ಎಲ್ಲರಿಗೂ ಕ್ಷಮೆ ಕೋರುತ್ತ ...:):). ನಿಮ್ಮ ಒದೆಗಳನ್ನು(ಪ್ರತಿಕ್ರಿಯೆಗಳನ್ನು) ನಿರೀಕ್ಷಿಸುತ್ತಾ. ನಿಮ್ಮ ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ ಎಂದು ಹಾರೈಸುತ್ತಾ.

ಈ ಲೇಖನದ ವಿದಾಯದೊಂದಿಗೆ ಮಾತ್ರ ....:):)

ಇಂತಿ ನಿಮ್ಮ
ವಿಧೇಯ

Thursday, July 15, 2010

ಆಹಾ ಶ್ಯಾಮ್ ಮದುವೆ ಅಂತೆ ...

ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.) ಆಗುತ್ತೆ ಎಂದು ಅವರ ಮನೆಯಲ್ಲಿ ಯಾರು ಎಣಿಸಿರಲಿಲ್ಲ. ಅವನ ಅಜ್ಜಿ ಮಾತ್ರ ಅವನಿಗೆ ಪೀಡಿಸುತ್ತಲೇ ಇದ್ದರು. ಮದುವೆ ಆದರೇನೇ ಸುಖದಿಂದ ಇರಬಹುದಾ?. ಇಲ್ಲದಿದ್ದರೆ ಇಲ್ಲವಾ ಎಂದು ನನಗೆ ಶ್ಯಾಮ್ ಕೇಳಿದ. ನಾನು ಏನು? ಹೇಳಬೇಕು ಎಂದು ಯೋಚಿಸಹತ್ತಿದೆ. ಅದಕ್ಕೆ ಅವರ ಅಜ್ಜಿ ನೀನಾದ್ರೂ ತಿಳಿ ಹೇಳಿ ಇವನಿಗೆ ಎಂದರು. ಮೊದಲೇ ನನ್ನ ಮತ್ತು ನನ್ನ ಮಡದಿಯ ಜಗಳವಾಗಿ ಮಾತು ಬಿಟ್ಟು ಒಂದು ವಾರ ಆಗಿದೆ ಎಂದು ಮೊದಲೇ ಶ್ಯಾಮ್ ಗೆ ಗೋತ್ತಿತ್ತು.

ಶ್ಯಾಮ್ ನಿನಗೆ ಮದುವೆ ಏಕೆ ಬೇಡಪ್ಪ ಎಂದೆ.
ಮದುವೆಗೆ ವಧು ಬೇಕು ತಾನೇ ಎಂದ. ಶ್ಯಾಮ್ ಅಂತ ಹೆಸರು ಇಟ್ಟ ಮಾತ್ರಕ್ಕೆ ಹೆಣ್ಣುಗಳು ಏನು ತರಕಾರಿ ಅಂಗಡಿಯಲ್ಲಿ ಸಿಗುವ ತರಕಾರಿನಾ?. ಮತ್ತೆ ನೋಡಿ ಅಜ್ಜಿ ಬರಿ ಮದುವೆ ಆಗು... ಮದುವೆ ಆಗು ... ಎಂದು ಪೀಡಿಸಿದರೆ ಎಂದ.
ನನಗೆ ಏನು ಹೇಳಬೇಕೋ ತಿಳಿಯದಾಗದೆ ಗರಬಡಿದವನಂತೆ ನಿಂತೆ. ಅಷ್ಟರಲ್ಲಿ ಮಂಜ ಬಂದ.
ಮಂಜ ಏನು? ಏನೋ ತುಂಬಾ ಯೋಚಿಸುತ್ತಾ ಇದ್ದಿ ಎಂದ.
ಶ್ಯಾಮನ ಮದುವೆ ಬಗ್ಗೆ ಹೇಳಿದೆ.
ಒಂದು ವಧು ಇದೆ. ಮದುವೆ ಸಿದ್ಧತೆ ಮಾಡಿಕೊಳ್ಳಿ ಎಂದ ಮಂಜ.
ಆದರೆ ಅವಳನ್ನೊಮ್ಮೆ ನೋಡಬೇಕಲ್ಲ ಎಂದ ಶ್ಯಾಮ್.
ಓ... ಅದಕ್ಕೇನಂತೆ ನಾಳೆನೇ ಹೆಣ್ಣು ನೋಡುವ ಶಾಸ್ತ್ರ ಎಂದ.
ನೋಡೋದು ಮುಖನಾಲ್ಲಾ ಮೂದೇವಿ, ಅವಳ ಗುಣ. ನಾವೆಲ್ಲ ನೋಡುತ್ತೇವೆ ನೀನು ಸುಮ್ಮನೇ ಹೂಂ... ಅನ್ನು ಎಂದು ಅಜ್ಜಿ ಗದರಿಸಿದಳು.
ಆದರೆ ಒಂದು ವಿಷಯ ಮದುವೆ ಮಾಡಿಕೊಂಡು ನೀವೇನೂ? ಖುಶಿಯಿಂದ ಇದ್ದಿರೋ?. ಎಂದು ಪ್ರಶ್ನೆ ಕೇಳಿದ ಶ್ಯಾಮ್.
ಯಾಕೆ ಅನುಮಾನನಾ? ಎಂದ ಮಂಜ.
ಅನುಮಾನ ಅಲ್ಲ. ನೀವುಗಳು ಪಡುತ್ತಿರುವ ಕಷ್ಟ ನೋಡಿ ಕೇಳಿದೆ ಎಂದ.
ಕಷ್ಟ ಎಂದರೆ ಕಷ್ಟ, ಸುಖ ಎಂದರೆ ಸುಖ. ನಿನ್ನ ಹಾಗೆ ಯೋಚನೆ ಮಾಡ್ತಾ ಇದ್ದರೆ ಭಾರತದ ಜನ ಸಂಖೆ ಇಷ್ಟು ಇರುತ್ತ ಇರಲಿಲ್ಲ. ಮತ್ತೆ ನೋಡು ಎಷ್ಟೊಂದು ಮದುವೆ ಕಾರ್ಡ್ ಗಳು ಬಂದಿವೆ ಮನೆಗೆ ಎಂದ ಮಂಜ.
ಎಷ್ಟೆಲ್ಲಾ ಹೇಳಿದ ಮೇಲೆ ಒಲ್ಲೆ ಎನ್ನಲು ಆಗಲಿಲ್ಲ. ಶ್ಯಾಮ್ ಹಸಿರು ನಿಶಾನೆ ಕೊಟ್ಟ.
ಹೆಣ್ಣು ನೋಡುವ ಶಾಸ್ತ್ರಕ್ಕೆ ಮಂಜ ಮತ್ತು ಅಜ್ಜಿ ಹೋದರು. ಆದರೆ ಅಜ್ಜಿ ಮಾತ್ರ ಶ್ಯಾಮ ಕರೆದು ಕೊಂಡು ಹೋಗುವದು ಬೇಡ ಎಂದು ಹೇಳಿದಳು.
ಮತ್ತೆ ಹೆಣ್ಣು ನೋಡಿದ ಮೇಲೆ ಫೋಟೋ ತೆಗೆದುಕೊಂಡು ಬಂದು ಶ್ಯಾಮ್ ಗೆ ತೋರಿಸಿದರು. ಹೆಣ್ಣು ಮಹಾಲಕ್ಷ್ಮಿ ತರಹ ಇದ್ದಾಳೆ ಬೇಗ ಮದುವೆ ಆಗು ಎಂದು ಅಜ್ಜಿ ಹೇಳಿದಳು. ಫೋಟೋ ನೋಡಿ ಅಜ್ಜಿ ಹೇಳಿದ್ದು ನಿಜ ಎಂದು ಅನ್ನಿಸಿತು. ಶ್ಯಾಮ ಒಪ್ಪಿಗೆ ಸೂಚಿಸಿದ. ಅವನಿಗೆ ಕೂಡ ಹೆಣ್ಣು ನೋಡಿ ನೋಡಿ ಸಾಕಾಗಿತ್ತು.

ಮದುವೆ ತಯಾರಿ ಬರ್ಜರಿ ಇಂದ ಸಾಗಿತ್ತು. ಊರಿಗೆಲ್ಲ ಕಾರ್ಡ್ ಹಂಚಿದ್ದ ಶ್ಯಾಮ್. ಮದುವೆ ದಿನ ಬಂದೆ ಬಿಟ್ಟಿತು. ಮದುವೆ ದಿನ ಹೆಣ್ಣು ನೋಡಲು ನಾಚಿಕೊಳ್ಳುತ್ತ ಹಸೆ ಮಣೆಯಲ್ಲಿ ಕುಳಿತಿದ್ದ ಶ್ಯಾಮ್. ಕಡೆಗೆ ಆಚಾರ್ಯರು "ಸುಮುಹೂರ್ತೆ ಸಾವಧಾನ..." ಎಂದು ಮಂತ್ರ ಹೇಳಿ ಶ್ಯಾಂಗೆ ತಾಳಿ ಕಟ್ಟಲು ಹೇಳಿದರು, ಆಗ ಶ್ಯಾಮ್ ಮುಖ ಬೇರೆಡೆ ಮಾಡಿ ತಾಳಿ ಕಟ್ಟಲು ಹೋದ ಅವಳ ಕತ್ತು ಅವನಿಗೆ ಸಿಗಲಿಲ್ಲ.. ಕೈ ಸಿಕ್ಕಿತು. ಕೈಗೆ ಕಟ್ಟಲು ಅಣಿಯಾದ. ನಾನು ಲೇ ಕೊರಳಿಗೆ ಕಟ್ಟೋ ಎಂದು ಹೇಳಿದೆ. ಮತ್ತೆ ಸ್ವಲ್ಪ ಮೇಲೆ ಕೈ ಮಾಡಿ ಕಟ್ಟಲು ಹೋದ. ಆಗ ಸಿಕ್ಕಿದ್ದು ಅವಳ ಭುಜ . ಆಗ ಅವನ ಅಜ್ಜಿ ಬೈದು ನೋಡಿ ಕಟ್ಟೋ ಎಂದು ಜೋರು ಮಾಡಿದಾಗ ಮುಖ ಎತ್ತಿ ಅವಳ ಕಡೆ ನೋಡಿದ, ಅಷ್ಟೇ ಮೂರ್ಛೆ ತಪ್ಪಿ ಬಿದ್ದು ಬಿಟ್ಟ. ಮತ್ತೆ ನೀರು ಸಿಂಪಡಿಸಿ ಎಬ್ಬಿಸಿ, ನಿಂತು ತಾಳಿ ಕಟ್ಟು ಎಂದು ಹೇಳಿ ತಾಳಿ ಕಟ್ಟಿಸಿದೆವು. ನನಗೆ ಮತ್ತೆ ಮಂಜನಿಗೆ.. ಲೇ ಬಿಜಾಪುರ್ ಹೆಣ್ಣು ಅಂತ ಹೇಳಿ ನನಗೆ ಗೋಲ್ ಗುಂಬಜ್ ತಂದು ಕಟ್ಟಿದ್ದೀರೇನೋ ಎಂದು ಬೈದುಕೊಳ್ಳುತಿದ್ದ. ಮುಖ ಮಾತ್ರ ಹರಳೆಣ್ಣೆ ಕುಡಿದ ಹಾಗೆ ಕೂಡ ಆಗಿತ್ತು. ಮಂಜ ನೋಡು ಅವಳ ಗುಣ ನೋಡು ಅಪರಂಜೀ ಕಣೋ ಇಂತಹ ಹೆಣ್ಣು ನಿನಗೆ ಭೂಲೋಕದಲ್ಲೇ ಸಿಗೋಲ್ಲ. ಅವಳ ಮುಖ ನೋಡು ಎಷ್ಟು ಮುದ್ದಾಗಿದೆ. ಏನೋ ಪ್ರೀತಿಯಿಂದ ಬೆಳಸಿದ್ದಾರೆ ಅಷ್ಟೇ ಎಂದು ಹೇಳಿದ. ವಧು ನಗುತ್ತಾ ಖುಷಿ ಖುಷಿ ಯಾಗಿ ಇದ್ದಳು. ಆದರೆ ಶ್ಯಾಮ ಮಾತ್ರ ಅಳುತ್ತಾ ಕುಳಿತ ಹಾಗೆ ಅನ್ನಿಸಿತು.

ಅಷ್ಟರಲ್ಲಿ ಪಂಡಿತರು ಎಲ್ಲಾ ದೊಡ್ಡವರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯಿರಿ ಎಂದು ಹೇಳಿದರು. ಶ್ಯಾಮ್ ಬಗ್ಗಿ ಬಗ್ಗಿ ನಮಸ್ಕಾರ ಎಲ್ಲರಿಗೂ ಮಾಡಿದ. ಮಂಜನಿಗೆ ನಮಸ್ಕಾರ ಮಾಡಿದ ಮೇಲೆ ವಧು ಅವನನ್ನು ನೋಡಿ ಅಳಲಾರಂಬಿಸಿದಳು. ಏಕೆ? ಎಂದು ನಾನು ಕೇಳಿದಾಗ ಅವಳು ಮಂಜನ ಕಾಕನ ಮಗಳು ಎಂದು ಹೇಳಿದ

ಮದುವೆ ಎಲ್ಲಾ ಮುಗಿದ ಮೇಲೆ ನಮ್ಮಿಬ್ಬರ ಮೇಲೆ ತುಂಬಾ ಕೋಪಗೊಂಡಿದ್ದ ಶ್ಯಾಮ್. ಕಡೆಗೆ ಉಟಕ್ಕೆ ಕುಳಿತಾಗ ಉಂಡಿಯನ್ನು ತಿನ್ನಿಸಿ ಎಂದು ಹೇಳಿದ್ದಾಗ. ಶ್ಯಾಮ ಎದ್ದು ನಿಂತು ತಿನ್ನಿಸುವ ಪರಿ ನೋಡಿ ಎಲ್ಲರೂ ನಗುವವರೇ. ಕಡೆಗೆ ಅವಳೇ ಇವನ ಸ್ತಿತಿ ನೋಡಿ ಬಗ್ಗಿ ತಿನ್ದಳು. ಮದುವೆ ಮುಗಿದ ಮೇಲೆ ಒಂದು ದಿವಸ ಶ್ಯಾಮ್ ಮತ್ತು ಅವನ ಹೆಂಡತಿ ಪಾರ್ಕಿನಲ್ಲಿ ನೋಡಿ ನನಗೆ ನಗು ತಡಿಯಲು ಆಗಲೆ ಇಲ್ಲ. ಮಳೆಯಲ್ಲಿ ಶ್ಯಾಮ ಹೆಂಡತಿ ಕೊಡೆ ಹಿಡಿದು ಕೊಂಡು ಅವನನ್ನು ತನ್ನ ಮಗನ ಹಾಗೆ ರೆದುಕೊಂಡು ಹೋಗುತ್ತಿದ್ದಳು. .

ಅನಂತರ ಕೆಲ ತಿಂಗಳ ಮೇಲೆ ಶ್ಯಾಮ ನಮ್ಮ ಮನೆಗೆ ಬಂದಿದ್ದ. ಅವಳನ್ನು ಹೋಗಳಿದ್ದೆ ಹೋಗಳಿದ್ದು. ಮಹಾಲಕ್ಷ್ಮಿನೇ ಆಗಿದ್ದಳು ಶ್ಯಾಮ್ ಮಡದಿ. ಅಷ್ಟರಲ್ಲಿ ಮಂಜ ನಮ್ಮನೆಗೆ ಬಂದ. ಆಗ ಶ್ಯಾಮ್ ಅವನ್ನನ್ನು ನೋಡಿ ತುಂಬಾ ಅವಸರದಿಂದ ಅವನಡೆಗೆ ಹೋದ ಮಂಜನಿಗೆ ಹೆದರಿಕೆಯಿಂದ ಘಾಬರಿಯಾಗಿ ಓಡುತ್ತಲಿದ್ದ .... ಅವನ ಹಿಂದ ಶ್ಯಾಮ್ ಭಾವ... ಭಾವ... ಎಂದು ಕೂಗುತ್ತಾ ತಿನ್ನುತ್ತಿದ್ದ ಉಂಡಿ ಹಿಡಿದುಕೊಂಡು ಬೆನ್ನು ಹತ್ತಿದ್ದ..:):)

Friday, July 2, 2010

ತರ್ಲೆ ಮಂ(ಗ)ಜನ (ನವ) ಗೃಹ ಪ್ರವೇಶ ....

"ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು ಕೊಂಡರೆ ಅದು ನಮ್ಮ ಸುಬ್ಬನ ಫ್ಲೈಟ್ (2012 ರ ಸುಬ್ಬನ ಫ್ಲೈಟ್.... ) ಹಾಗೆ ಆಕಾಶದಲ್ಲಿ ನೇತ ನಾಡೂವದು ಬೇಡ ಎಂದು ಕಡೆಗೂ ಹುಬ್ಬಳ್ಳಿಯಲ್ಲಿ ಒಂದು ಮನೆ ಖರೀದಿ ಮಾಡಿದ. ಅದಕ್ಕೆ ನಮ್ಮ ಸುಬ್ಬ ಮಂಜನಿಗೆ ಹುಂಬ ಕಡೆಗೂ ಹುಂಬ ಹಳ್ಳಿಲಿ ಮನೆ ಖರೀದಿ ಮಾಡಿದ ಎಂದು ಸತಾಯಿಸುತ್ತಿದ್ದ. ಲೇ ಅದು ಹುಂಬ ಹಳ್ಳಿ ಅಲ್ಲ ಎಂದರೆ, ನಮ್ಮ ಸುಬ್ಬ ಮೊದಲು ಅದು ಹೂ ಬಳ್ಳಿ ಅಂತ ಇತ್ತು. ಈಗ ನಮ್ಮ ಮಂಜ ಹೋದ ಮೇಲೆ ಅದು ಹುಂಬ ಹಳ್ಳೀನೇ ಎಂದ.

ಮನೆಯ ಇಂಟೀರಿಯರ್ ಸಲುವಾಗಿ ಒಬ್ಬ ತಮಿಳು ಮನುಷ್ಯನನ್ನು ನೇಮಕ ಮಾಡಿದ್ದ. ಮಂಜನಿಗೆ ತಮಿಳು ಅರ್ಥ ಆಗುತ್ತಿರಲಿಲ್ಲ. ಅವನಿಗೆ ಕನ್ನಡ ಹೀಗಾಗಿ ಇಬ್ಬರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆ ತಮಿಳು ಮನುಷ್ಯನಿಗೆ ಅಷ್ಟು ಚೆನ್ನಾಗಿ ಹಿಂದಿ ಬರುತ್ತಿರಲಿಲ್ಲ. ಅವನು ಸ್ವಲ್ಪ ಹಿಂದಿ ತನ್ನ ಮಗಳಿಂದ ಕಲಿತಿದ್ದ. ಮಂಜುಗೆ ಧಾರವಾಡಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಲು "ಆಪ ಧಾರವಾಡ ಕಾಬಾ ಆ ರಹಿ ಹೇ" ಎಂದು ಕೇಳುತ್ತಿದ್ದ. ಅವನು ಎಲ್ಲದಕ್ಕೂ ಆಮಾ ಆಮಾ ಎನ್ನುತಿದ್ದ. ಇದೇನು ನನಗು ಅಮ್ಮ ಅಮ್ಮ ಅನ್ನುತ್ತಾನೆ ಎಂದು ಬಂದು ಮಂಜ ನನಗೆ ಕೇಳಿದ್ದ. ಅದು ಆಮಾ ಎಂದರೆ "ಹೌದಾ" ಎಂದ ಹಾಗೆ ಎಂದಾಗ ಬಿದ್ದು ಬಿದ್ದು ನಕ್ಕಿದ್ದ ಮಂಜ.

ಒಂದು ದಿನ ಮಂಜ ಅವನ ಕೆಲಸ ನೋಡಲು ಧಾರವಾಡಕ್ಕೆ ಬಂದ. ಅವನಿಗೆ ಎಲ್ಲ ಕಪಾಟುಗಳು ಟೀಕ್ ವುಡ್ ನಿಂದ ಮಾಡಿದ್ದು ಬೇಕಾಗಿತ್ತು. ಮಂಜ ಹೋದಾಗ ಆ ತಮಿಳು ಮನುಷ್ಯನ ಜೊತೆ ಕೆಲಸಕ್ಕೆ ಅವನ ಹೆಂಡತಿನೂ ಬಂದಿದ್ದಳು. ಆಗ ಮಂಜ "ಎ ಟೀಕ್ ನಾಹಿ ಹೈ" ಎಂದು ಆ ಕಟ್ಟಿಗೆ ಟೀಕ್ ವುಡ್ ನಿಂದ ಮಾಡಿದ್ದು ಅಲ್ಲ ಎಂದು ಕೇಳಿದ್ದಾನೆ. ಆಗ ಆ ಮನುಷ್ಯ "ಎ ಠಿಕ ಹೈ" (ಚೆನ್ನಾಗಿದೆ) ಎಂದಿದ್ದಾನೆ. ಹೀಗೆ ಇಬ್ಬರು ಟೀಕ್ ನಾಹಿ - ಠಿಕ ಎಂದು ತಲೆ ಜಜ್ಜಿಕೊಂಡಿದ್ದಾರೆ. ಕಡೆಗೆ ಮಂಜ ಎ ಲಕಡಿ ಠಿಕ ನಾಹಿ ಹೈ ಎಂದ. ಅಷ್ಟೇ ಮಂಜನ ಕಪಾಳಿಗೆ ಆ ತಮಿಳು ಮನುಷ್ಯ ಎರಡು ಎಟು ಕೊಟ್ಟುಬಿಟ್ಟ. ಏಕೆ ಎಂದು ಕೇಳಿದರೆ ತುಮ್ "ಮೇರೆ ಬೀವಿಕೋ ಐಸಾ ಬೊಲ್ತಿ ಹೈ" (ನೀನು ನನ್ನ ಹೆಂಡತಿಗೆ ಹೀಗೆ ಹೇಳುತ್ತಿ ). ಮಂಜ ತಲೆ ಜಜ್ಜಿ ಕೊಳ್ಳುತ್ತಿದ್ದ. "ಮೈ ಕ್ಯಾ ಕಹಾ"( ನಾನೇನು ಹೇಳಿದೆ ಎಂದ). ಆಪ ಮೇರೆ ಬೀವಿ ಕೋ ಲಡಕಿ ಅಚ್ಚಾ ನಾಹಿ ಬೋತಿ ಹೈ" ( ನೀವು ನನ್ನ ಹೆಂಡತಿಗೆ ಹುಡುಗಿ ಚೆನ್ನಾಗಿಲ್ಲ ಎಂದಿರಲ್ಲ ) ಎಂದಾಗ ಮಂಜನಿಗೆ ತಿಳಿಯಿತು. ಕಡೆಗೆ ಅವನಿಗೆ ಒಂದು ದೊಡ್ಡ ನಮಸ್ಕಾರ ಮಾಡಿ, ಅವನ ಅಕೌಂಟ್ ಕ್ಲಿಯರ್ ಮಾಡಿ, ಅವನಿಗೆ ಮನೆಗೆ ಕಳುಹಿಸಿ ಬೇರೆ ಕನ್ನಡದ ಬಡಿಗ(ಬಡಿಗಿ) ನನ್ನು ಗೊತ್ತು ಮಾಡಿಕೊಂಡು ಕೆಲಸ ಪೂರ್ತಿ ಮಾಡಿಸಿ ಮುಗಿಸಿದ.ಅದರಲ್ಲೋ ಒಂದು ಗದ್ದಲ ಮಾಡಿದ್ದ ಮಂಜ ಆಕಸ್ಮಾತಾಗಿ ಅವನಿಗೆ "ಗೌಡ್ರೇ" ಇನ್ನೂ ಆಗಿಲ್ಲ ಕೆಲಸ ಎಂದಿದ್ದ. ಆಗ ನಮ್ಮ ಅಪ್ಪ,ಅಮ್ಮ ನನಗೆ ರಂಜೀತ ಎಂದು ಹೆಸರಿಟ್ಟಿದ್ದಾರೆ ನೀವೇನೂ ನನಗೆ ಗೌಡ್ರೇ ಎನ್ನುವದೆ, ತುಂಬಾ ಮಂಡೆ ಬಿಸಿ ಮಾರಾಯ್ರೆ ಎಂದು ತಲೆ ತಿಂದಿದ್ದ. ಆಗಿನಿಂದ ಅವನನ್ನು ರಂಜೀತ ಸರ್ ಎಂದು ಸಂಭೋದಿಸುತ್ತಿದ್ದ.

ಆಗ ಮಂಜ ಕಡೆಗೋ ಎಲ್ಲ ಕೆಲಸ ಮುಗಿದ ಮೇಲೆ ಗೃಹ ಪ್ರವೇಶದ ಮುಹೂರ್ತ ಫಿಕ್ಸ್ ಆಯಿತು. ಮಂಜನ ಮಡದಿ ಅವನಿಗೆ ಕಾಯಿ-ಪಲ್ಯ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ತೆಗೆದುಕೊಂಡು ಬನ್ನಿ ಎಂದು ಹೇಳಿದಳು. ಆಗ ಮಂಜ ಕಾಯಿ -ಪಲ್ಯ, ಡ್ರೈ ಫ್ರೂಟ್ಸ್, ತೆಗೆದು ಕೊಂಡು ಬರುವೆ ಆದರೆ, ನಟ್ಸ್ ಬೇಕಾದರೆ ನನ್ನ ಬೈಕ್ ಚಕ್ರದಲ್ಲಿ ಇವೆ ತೆಗೆದು ಕೋ ಎಂದು ತಮಾಷೆ ಮಾಡಿದ. ಮಂಜನ ಮಡದಿ ಮಂಗಳಾರತಿ ಮಾಡಿ ಪೇಟೆಗೆ ಕಳುಹಿಸಿದಳು.

ಕಡೆಗೆ ಕಾಯಿ ಪಲ್ಯ ತೆಗೆದು ಕೊಳ್ಳುವ ಕಡೆ ಹೋಗಿ ಚವಳಿ(ಜವಳಿ) ಕಾಯಿಗೆ ಗೋರೇ ಕಾಯಿ ಎಂದು ಬೆಂಗಳೂರು ಭಾಷೆಯಲ್ಲಿ ರೇಟ್ ಕೇಳಿದ. ಆಗ ಅವಳು ಇವನನ್ನು ಯಾವದೋ ಆದಿ ಮಾನವ ಬಂದಿದ್ದಾನೆ ಎನ್ನುವ ಹಾಗೆ ಮೇಲಿಂದ ಕೆಳಕ್ಕೆ ನೋಡಿದಳು. ಮತ್ತೆ ರೇಟ್ ಹೇಳಿದ ಮೇಲೆ "ಇಷ್ಟೇನಾ ರೇಟ್ ಬೇಡ ಎಂದು" ಮುಂದೆ ಹೋದ. ಆಗ ಆ ಮುದುಕಿ "ಎ ಮೂದೇವಿ ಎಂದು" ಬೈದು ಬಿಟ್ಟಳು.

ತರಲೆ ಮಾಡುತ್ತ ಗೃಹ ಪ್ರವೇಶದ ದಿನ ಊಟ ಮಾಡುವಾಗ "ಹೆಂಗಸರು ಚಿತ್ರಾವತಿ ಇಡಬೇಡಿ(ಅಂದರೆ ಊಟ ಚೆಲ್ಲಬೇಡಿ)" ಎಂದಾಗ ಎಲ್ಲ ಹೆಂಗಸರು ಸೇರಿ ಮಂಜನನ್ನು ತರಾಟೆಗೆ ತೆಗೆದುಕೊಂಡರು. ಆಗ ಮಂಜನಿಗೆ ಅವನ ಹೆಂಡತಿ ನೀವು ಸುಮ್ಮನೇ ಇರುವದು ಬಿಟ್ಟು "ಉಡದಾರ ತೆಗೆದು ಉರ್ಲು ಹಾಕಿ ಕೊಳ್ಳುವವರು" ನೀವು ಎಂದು ಬೈದು ಬಿಟ್ಟಿದ್ದಳು.

ಮಂಜನಿಗೆ ತನ್ನ ಗೃಹ ಪ್ರವೇಶ ಇದೆಯೋ ಅಥವಾ ತನ್ನ ಜೀವನದಲ್ಲೇ ನವ ಗೃಹ ಪ್ರವೇಶ ಆಗಿದೆಯೋ ತಿಳಿಯದಾಗಿತ್ತು.....