Tuesday, October 6, 2009

ತರ್ಲೆ ಮಂಜ(ಗ)ನಿಗೆ ದೇವರನಾಮ ....

ನಮ್ಮ ಶಾಲೆಗೆ ಶಂಭು ಎಂಬ ವಿದ್ಯಾರ್ಥಿ ಸೇರಿ ಕೊಂಡಿದ್ದ. ಶಂಭು ತನ್ನ ಬಗ್ಗೆ ಕೊಚ್ಚಿ ಕೊಳ್ಳುತ್ತಾ ತಿರುಗುತ್ತಿದ್ದ. ಅವನು ಬಾಯಿ ಎತ್ತಿದರೆ ಸಾಕು ಬರಿ ಬೈಗುಳಗಳು. ಒಂದು ದಿವಸ ನನಗೆ , ನಿಮ್ಮ ತಂದೆಗೂ ನನ್ನ ತಂದೇನೆ ಸಂಬಳ ಕೊಡುವುದು ಎಂದು ಬೂಸಿ ಬಿಟ್ಟಿದ್ದ. ನಾನು ಇದನ್ನೇ ಹೋಗಿ ನನ್ನ ತಂದೆಗೆ ಕೇಳಿದಾಗ, ನನ್ನ ತಂದೆ ಜೋರಾಗಿ ಬಿದ್ದು ಬಿದ್ದು ನಕ್ಕು ಬಿಟ್ಟಿದ್ದರು.

ಶಂಭು ಒಂದು ದಿವಸ ಆಟದ ಸಮಯದಲ್ಲಿ ಮಂಜನ ಜೊತೆ ಜಗಳ ಆಡಿ, ಅವನಿಗೆ ಕೆಟ್ಟ ಅವಾಚ್ಯ ಶಬ್ದಗಳಿಂದ ಚೆನ್ನಾಗಿ ಬೈದಿದ್ದ. ಅಷ್ಟರಲ್ಲಿ ಅವರ ಜಗಳ ನೋಡಿ ಮಾಸ್ತರ್ ಅವರಿಬ್ಬರನ್ನು ಕೇಳಿದಾಗ. ಮಂಜ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದ. ಆದರೆ ಶಂಭು ಏನು ಇಲ್ಲ? ಸರ್ ದೇವರನಾಮ ಹೇಳುತ್ತಿದ್ದೇನೆ ಎಂದು ಬಿಟ್ಟ. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ಒಂದು ದಿವಸ ಶಾಲೆಯಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮ ಇತ್ತು. ಅದರ ನಿರ್ವಹಣೆಯ ಕಾರ್ಯ ನಮ್ಮ ಮಂಜನದು. ಮಂಜನಿಗೆ ಮೊದಲೇ ಶಂಭು ಮೇಲೆ ಸಿಟ್ಟು ಇತ್ತು. ಕಾರ್ಯಕ್ರಮದಲ್ಲಿ ಅವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಮ್ಮೆಲ್ಲರಿಗೂ ಒಂದು ಐಡಿಯಾ ಹೇಳಿದ.

ಮತ್ತೆ ಕಾರ್ಯಕ್ರಮ ಶುರು ಆಯಿತು. ಮಂಜ ಆರಂಭಿಕ ಭಾಷಣ ಮುಗಿದ ಮೇಲೆ. "ಈಗ ಶಂಭು ಅವರಿಂದ ದೇವರನಾಮ" ಎಂದು ಬಿಟ್ಟ. ಶಂಭು ಮಾತ್ರ ತನ್ನ ಸೀಟ್ ಮೇಲಿಂದ ಏಳಲಿಲ್ಲ. ಮತ್ತೆ ಇನ್ನೊಂದು ಸಾರಿ ಮೈಕ್ ಮೇಲೆ ಕೂಗಿದ "ಶ್ರೀ ಶಂಭು ಅವರಿಂದ ದೇವರನಾಮ" ಎಂದು. ಶ್ರೀ ಶಂಬು ಎಂದಾಗ ನಾವೆಲ್ಲರೂ ಗೊಳ್ ಎಂದು ನಕ್ಕುಬಿಟ್ಟೆವು. ನಮ್ಮ ಪ್ಲಾನ್ ಪ್ರಕಾರ ನಾವೆಲ್ಲರೂ ಶಂಭುನ ತಲೆಯ ಮೇಲೆ ಹೊತ್ತುಕೊಂಡು. ಶಂಭು ಅವರಿಗೆ ಜಯವಾಗಲಿ ಎಂದು ಜೈಕಾರ ಹಾಕುತ್ತ ಬಂದು ಸಭಾಂಗಣದ ಮೈಕ್ ಮುಂದೆ ಬಿಟ್ಟು ಹೋದೆವು. ಶಂಭು ನಡುಗುತ್ತ ನಿಂತಿದ್ದ ಪೂರ್ತಿ ಮೈಯಲ್ಲ ಸ್ನಾನ ಮಾಡಿದ ಹಾಗೆ ಬೆವತು ಬಿಟ್ಟಿತ್ತು. ಏನು ತಿಳಿಯದೆ ಮಂಜನನ್ನು ಒಮ್ಮೆ ನೋಡಿದ. ಮಂಜ ಹಾಗೆ ಸುಮ್ಮನೆ ಬಿಟ್ಟಾನೆ ಬೈದು ದೇವರನಾಮ ಅನ್ನುವಷ್ಟು ಸೋಕ್ಕಲ್ಲ ನಿನಗೆ ಈಗ ಹೇಳು ದೇವರನಾಮ ಎಂದು ಹೇಳಿದ. ಕಡೆಗೆ ಶಂಭು ಕಾಪಾಡು ಎಂದು ಮಂಜನಿಗೆ ಬೇಡಿಕೊಂಡ. ಆಗ ಮಂಜ ಶಂಭುನಿಗೆ ಒಂದು ಸಿನಿಮ ಹಾಡು ಹಾಡು ಎಂದು ಸೂಚಿಸಿದ. ಮತ್ತೆ ಅದರ ಸಾಹಿತ್ಯ ಬರೆದು ಕೊಂಡು ಬಂದಿರುವೆ ತೆಗೆದುಕೋ ಎಂದು ಪೇಪರ್ ಅವನ ಕೈಯಲ್ಲಿ ಇಟ್ಟ. ಆನಂತರ ಮೈಕ್ ನಲ್ಲಿ ಹೇಳಿದ ಶಂಭು ಅವ್ರಿಗೆ ದೇವರನಾಮ ಹೇಳಲು ಮೂಡಿಲ್ಲ ಆದ್ದರಿಂದ ಅವರು ಸಿನಿಮ ಹಾಡು ಹಾಡಲಿದ್ದಾರೆ ಎಂದು. ಶಂಭು ಸಾವಕಾಶವಾಗಿ ನಡುಗುತ್ತ ಪೇಪರ್ ತೆಗೆದು ಹಾಡಲು ಶುರು ಹಚ್ಚಿಕೊಂಡ. "ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ.. ಗುರುಗಳು ಹೇಳಿದ ಮಾತುಗಳೆಲ್ಲ ಎಂದು ನಿಜವಲ್ಲ" ಎಂದು. ಅಲ್ಲಿ ಸಭೆಯಲ್ಲಿ ಕುಳಿತಿದ್ದ ಗುರುಗಳಿಗೆಲ್ಲ ಪಿತ್ತ ನೆತ್ತಿಗೇರಿತ್ತು. ನಾವೆಲ್ಲರೂ ಹಿಂದೆ ಕುಳಿತು ಶಿಳ್ಳೆ ಹೊಡಿದಿದ್ದೆ ಹೊಡದಿದ್ದು. ಪೂರ್ತಿ ಸಭಾಂಗಣ ಕೇಕೆ ಹಾಕುತಿತ್ತು. ಮತ್ತೆ ಕೆಲವರು ಡಾನ್ಸ್ ಸಹ ಮಾಡಲು ಶುರು ಮಾಡಿದ್ದರು. ಶಂಭು ತುಂಬ ಹುರುಪಿನಿಂದ ತಾನು ಡಾನ್ಸ್ ಮಾಡುತ್ತ ಹಾಡಿದ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರು ಶಂಭುನ ಹೊಗಳಿದ್ದ ಹೊಗಳಿದ್ದು... ಶಂಭು ಹಿರಿ ಹಿರಿ ಹಿಗ್ಗಿದ್ದ.

ಮರು ದಿನ ಶಂಭುನಿಗೆ ಅಟೆಂಡರ ಕರೆದು, ಮಾಸ್ತರ ಕರೆಯುತ್ತಿದ್ದಾರೆ ಎಂದು ಹೇಳಿದ. ಮಂಜ ಶಂಭುವಿಗೆ ಹುರುದುಂಬಿಸಿ ನಿನಗೆ ಬಹುಮಾನ ಕೊಡಬಹುದು ನೀನು ತುಂಬ ಚೆನ್ನಾಗಿ ಹಾಡಿದೆ. ಬೇಗ ಹೋಗು ಎಂದು ಹೇಳಿದ . ಶಂಭು ತುಂಬಾ ಖುಷಿಯಾಗಿ ಸ್ಟಾಫ್ ರೂಮಿಗೆ ಹೋದ. ತಕ್ಷಣ ಎಲ್ಲಾ ಮಾಸ್ತರರು ಸೇರಿ ಶಂಭುನಿಗೆ ಸಹಸ್ರನಾಮ, ಅಷ್ಟೋತ್ತರ ಹೀಗೆ. ಎಲ್ಲ ದೇವರನಾಮವನ್ನು ಕೇಳಿಸಿ ಬಿಟ್ಟಿದ್ದರು. ಮತ್ತೆ ಅವನಿಗೆ ನಿನ್ನ ತಂದೆಯನ್ನು ಕರೆದುಕೊಂಡು ಶಾಲೆಗೆ ಬಾ ಎಂದು ತಾಕಿತ್ ಮಾಡಿದ್ದರು. ಶಂಭುನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆದರು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ....ಅಳುತ್ತ ಬಂದು ಕುಳಿತ.

ಶಂಭು ತನ್ನ ತಂದೆಗೆ ಹೇಗೆ ಹೇಳುವದೆಂದು ಯೋಚಿಸಿ. ಅವರ ತಂದೆ ತುಂಬಾ ಕೋಪಿಷ್ಠ ಹೀಗಾಗಿ ಕಡೆಗೆ ಮಂಜನ ಸಹಾಯ ಕೇಳಿದ. ಮಂಜ ತನ್ನ ಅತ್ತೆಯ ಮಗನನ್ನು ಕರೆದು ತಂದು ಇವ ನಿನ್ನ ಅಣ್ಣ ಎಂದು ಹೇಳು ಎಂದು ಹೇಳಿದ. ಶಂಭು ಅವನನ್ನು ಕರೆದು ಕೊಂಡು ಹೋದ. ಮಾಸ್ತರ ಮುಂದೆ ಕೆನ್ನೆ ಕೆಂಪಾಗುವ ಹಾಗೆ ಸಿಕ್ಕಿದ್ದೇ ಚಾನ್ಸ್ ಎಂದು ಮಂಜನ ಅತ್ತೆ ಮಗ ಬಾರಿಸಿದ್ದ. ಮತ್ತೆ ಶಂಭು ಅವರಿಬ್ಬರಿಗೂ ಹೋಟೆಲ್ ನಲ್ಲಿ ಪಾರ್ಟಿ ಕೊಡಿಸಿದ.

ನಾವೆಲ್ಲರೂ ಅವನಿಗೆ ಶಿಕಾರಿ ಶಂಭು, ಶಂಭು ಮಹಾರಾಜ ಮತ್ತು ತೊಗರಿ ತಿಪ್ಪ ಎಂದೆಲ್ಲ ನಾಮಾಂಕಿತ ಮಾಡಿದ್ದೆವು. ಅವನು ಮತ್ತೆ ಯಾವತ್ತು ಬೂಸಿ ಬಿಡುವ ಗೋಜಿಗೆ ಹೋಗಲಿಲ್ಲ....ಮತ್ತೆ ತನ್ನ ಭಾಷಾ ಪ್ರಯೋಗ ಕೂಡ ಸುಧಾರಿಸಿ ಕೊಂಡಿದ್ದ.

4 comments:

  1. ಹಾ ಹಾ ಹಾ...

    "ಬೂಸಿ ಶಂಬು, ಖಾಲಿ ಚಂಬು", ಅನ್ಬೇಕಿತ್ತು.
    ತುಂಬಾ ಚೆನ್ನಾಗಿದೆ. ಧನ್ಯವಾದಗಳು.

    ReplyDelete
  2. ಆತ್ಮೀಯ ಲೋದ್ಯಾಶಿಯವರೇ
    ತುಂಬಾ ಚೆನ್ನಾಗಿದೆ "ಬೂಸಿ ಶಂಬು, ಖಾಲಿ ಚಂಬು", ಸೂಪರ್..
    ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    ReplyDelete
  3. ಗೋಪಾಲರವರೆ...

    ಮಸ್ತ್ ಆಗಿದೆ...

    ಬಾಲ್ಯದ ನೆನಪುಗಳು...
    ನನಗೂ ನನ್ನ ಬಾಲ್ಯ ನೆನಪಾಗುತ್ತಿದೆ...

    ಚಂದದ ಬರಹ...

    ಅಭಿನಂದನೆಗಳು...

    ReplyDelete
  4. ಪ್ರತಿಕ್ರಿಯೆಗೆ ಧನ್ಯವಾದಗಳು. ಈಗಷ್ಟೆ ನಿಮ್ಮ ಬ್ಲಾಗ್ನಲ್ಲಿ ಇದ್ದೆ. ತುಂಬಾ ಚೆನ್ನಾಗಿದೆ ನಿಮ್ಮ ಲೇಖನ. ಒಳ್ಳೆಯದು ಗೆದ್ದೇ ಗೆಲ್ಲುತ್ತೆ ಎನ್ನುವದನ್ನು ತೋರಿಸಿದಿರಿ. ನಿಮಗೆ ಧನ್ಯವಾದಗಳು.

    ReplyDelete