Friday, August 28, 2009

ಜವಾನಿ ಜಾನೆ ಮನ ಮೇರಾ ಜೀನ್ಸ್ ....

ರೀ... ನಿಮಗೆ ಫ್ಯಾಷನ್ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತೀರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿದೆ.


ಒಂದು ದಿವಸ ಅರಿವೆ ಅಂಗಡಿಗೆ ಹೋದಾಗ ಜೀನ್ಸ್ ತೊಗೊ ಬೇಕು ಎಂದು ಹಠ ಹಿಡಿದಳು. ಮಗನು ಜೀನ್ಸ್ ಎಂಬ ಉದ್ಗಾರವೆತ್ತಿದಾಗ, ಆಯಿತು ಎಂದು ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳುವ ಅಂತ ನಿರ್ಧರಿಸಿದೆ. ನಾನು ಯಾವತ್ತು ಜೀನ್ಸ್ ಪ್ಯಾಂಟ್ ಧರಿಸಿದವನಲ್ಲ. ನಾನು ಏನಿದ್ದರು ಧರಿಸುವದು ಟೈಲರ್ ಬಳಿ ಹೋಗಿ ಅಳತೆ ಕೊಟ್ಟು ಆನಂತರನೆ ಪ್ಯಾಂಟ್ ಹೋಲಿಸೋದು. ಅಂಗಡಿಯವನಿಗೆ ಜೀನ್ಸ್ ತೋರಿಸು ಎಂದು ಹೇಳಿದೆವು. ಮತ್ತೆ ಪ್ಯಾಂಟ್ ಯಾವ ಸೈಜ್ ಬೇಕೆಂದು ಕೇಳಿದ ಆಗ ನಾನು ನನ್ನ ಟೈಲರ್ ಕೇಳಿ ಬರುತ್ತೇನೆ ಎಂದು ಅಂಗಡಿಯಿಂದ ಹೊರಗೆ ಹೊರಟೆ. ಅಂಗಡಿಯವ ತಡೆದು, ಅವನ ಟೈಲರ್ ಗೆ ಅಳತೆ ತೆಗೆದುಕೊ ಎಂದು ಹೇಳಿದ. ಅವನ ಟೈಲರ್ ಒಂದು ಹುಡುಗಿಯ ಅಳತೆ ತೆಗೆದು ಕೊಳ್ಳುತ್ತಿದ್ದ. ಒಮ್ಮೆಲೇ ನನ್ನ ಅಳತೆ ತೆಗೆದುಕೊ ಅಂದಾಗ ಅವನಿಗೆ ನುಂಗಲಾರದ ತುತ್ತಾಗಿತ್ತು. ರಂಭೆಯಂತಿರುವ ಹುಡುಗಿಯ ಅಳತೆ ಬಿಟ್ಟು ಈ ಕೋತಿಯ ಅಳತೆ ತೋಗೊ ಬೇಕಲ್ಲ ಅಂದು ಕೊಂಡು ನನ್ನ ಕಡೆ ಧಾವಿಸಿ ಹಾಗೆ ಹೀಗೆ ನಿನ್ನ ನಡ ಹೊಳ್ಳಿಸಿ, ಒಂದು ಟೇಪ್ ತಂದು ನನ್ನ ನಡುವಿನ ಸುತ್ತಳತೆ ತೆಗೆದು ೩೨ ಎಂದು ಹೇಳಿದ. ಆಗ ಅಂಗಡಿಯವ ಯಾವ ಬ್ರಾಂಡ್ ಬೇಕು ಎಂದು ಕೇಳಿದ. ನನಗೆ ಬ್ರಾಂಡ್ ಗಳ ಬಗ್ಗೆ ಪರಿಚಯವಿಲ್ಲದ್ದರಿಂದ ಯಾವದಾದರು ಬ್ರಾಂಡ್ ತೋರಿಸಿ ಎಂದೆ. ಅವನು ಒಂದು Reputed ಬ್ರಾಂಡ್ ಅಂತ ಹೇಳಿ ಪ್ಯಾಂಟ್ ಗಳನ್ನು ತೋರಿಸಲಾರoಬಿಸಿದ. ಪ್ಯಾಂಟ್ ಗಳ ಕಲರ್ ನೋಡಿ ಏನೇ ಇದು ಪಂಚರಂಗಿ ಕಲರ್ ಹಾಕಿದ್ದಾರೆ ಎಂದೆ ತಮಾಷೆಯಾಗಿ. ಆ ಪ್ಯಾಂಟ್ ಗಳ ರೇಟ್ ನೋಡಿ ತಲೆ ಸುತ್ತು ಬಂದಿತ್ತು. ಒಂದೊಂದು ಪ್ಯಾಂಟ್ ಬೆಲೆ ೧೦೦೦/- ದಿಂದ ೩೦೦೦/- ರೂಪಾಯಿಗಳ ಹತ್ತಹತ್ತಿರ ಇತ್ತು. ನಾನು ತಂದಿದ್ದು ೮೦೦/- ರುಪಾಯಿಗಳು ಮಾತ್ರ ಎಲ್ಲವನ್ನು ಇಲ್ಲೇ ಕೊಟ್ಟರೆ. ನನ್ನ ಗಾಡಿಯನ್ನ ತಳ್ಳಿ ಕೊಂಡು ಹೋಗಬೇಕಾಗುತ್ತದೆ ಎಂದು ಬೇಡವೆಂದೆ(ಪೆಟ್ರೋಲ್ ವಿಲ್ಲದ್ದರಿಂದ). ಪೆಟ್ರೋಲ್ ಇಲ್ಲದ ಗಾಡಿ ಯಾರಾದರು ಕಂಡು ಹಿಡಿದಿದ್ದರೆ ಎಷ್ಟು ಚೆನ್ನ ಎಂದು ಮನಸ್ಸಿನಲ್ಲೇ ಅಂದು ಕೊಂಡಿದ್ದೆ. ಆ ಅಂಗಡಿಯವನಿಗೆ ನನ್ನ ಮುಖ ನೋಡಿ ಏನು ತಿಳಿಯಿತೋ ಇನ್ನು ಕಡಿಮೆ ಬೆಲೆ ಇರುವದು ಇದೆ ತೋರಿಸುತ್ತೇನೆ ಎಂದು ೫೦೦/- ರೂಪಾಯಿಯ ಪ್ಯಾಂಟ್ ಗಳ್ಳನ್ನು ತೋರಿಸಲಾರoಬಿಸಿದ. ಅವನಿಗೂ ಅನ್ನಿಸಿರಬೇಕು ಈ ನನ್ನ ಮಗ ಜೀವನದಲ್ಲಿ ಜೀನ್ಸ್ ನೋಡಿದವನಲ್ಲ ಅಂತ. ಕಡೆಗೆ ಒಂದು ೪೫೦ ರೂಪಾಯಿಗಳ ಪ್ಯಾಂಟ್ ತೆಗೆದುಕೊoಡು ಬಂದೆವು.


ಮರುದಿನ ನಾನು ಜೀನ್ಸ್ ಪ್ಯಾಂಟ್ ಧರಿಸಿ ಆಫೀಸ್ ಗೆ ಹೋದೆ. ಜೀನ್ಸ್ ಮೇಲೆ ಟೀ ಶರ್ಟ್ ಹಾಕಿಕೊಂಡಿದ್ದೆ. ಟೀ ಶರ್ಟ್ ಗೆ ಕಿಸೆ ಇರಲಿಲ್ಲ ಹೀಗಾಗಿ ನನ್ನ Mobile ಮತ್ತು Purseನ್ನು ಬ್ಯಾಗಿನಲ್ಲಿ ಇಟ್ಟು ಕೊಂಡು ಹೋಗಿದ್ದೆ . ಹಾಗೇ mobile ತೆಗೆದುಕೊಳ್ಳುವದನ್ನು ಮರೆತಿದ್ದೆ . ನನ್ನ ಹೆಂಡತಿ ಅನಾಮತ್ತಾಗಿ 12 missed call ಕೊಟ್ಟಿದ್ದಳು . ಆಮೇಲೆ ಫೋನ್ ಮಾಡಿದಾಗ ಸಹಸ್ರನಾಮಾವಳಿ ಶುರು ಮಾಡಿದ್ದಳು. ಆಗ ಅನ್ನಿಸಿತ್ತು ಶರ್ಟ್ ,ಪ್ಯಾಂಟ್ ಧರಿಸಿದ್ದರೆ ಈ ಗತಿ ಬರುತ್ತಿರಲಿಲ್ಲವೆಂದು . ನಾನು ಗಾಡಿ ಹೊಡೆಯುವಾಗ ಸ್ವಲ್ಪ ತೊಂದರೆ ಅನ್ನಿಸಿತು. ಅನಂತರ ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಲು ಕೆರೆತ ಶುರು ಆಯಿತು. ಸ್ವಲ್ಪ ಕೆರೆದೆ, ಆದರೆ ಕೆರೆತ ಮಾತ್ರ ಕಡಿಮೆಯಾಗಲಿಲ್ಲ. ನನ್ನ ಉಗುರುಗಳು ಜೀನ್ಸ್ ಒಳಗಡೆ ಹೋಗುವದು ಸ್ವಲ್ಪ ಕಷ್ಟವೇ ಆಗಿತ್ತು. ಜೀನ್ಸ್ ಮೇಲೆ ಎತ್ತಿ ಪಬ್ಲಿಕ್ ನಲ್ಲಿ ಕೆರೆಯಲು ಸಾಧ್ಯವಿರಲಿಲ್ಲ. ಹೀಗೆ ತುಂಬ ಕೆರೆತ ಮುoದುವರೆದಾಗ ಗಾಡಿ ನಿಲ್ಲಿಸದೆ ಬೇರೆ ದಾರಿಯೇ ಇರಲಿಲ್ಲ. ಗಾಡಿ ನಿಲ್ಲಿಸಿ ಕೈ ಇಂದ ಜೋರಾಗಿ ಕೆರೆದೆ ಆದರು ಸಮಾಧಾನವಾಗಲಿಲ್ಲ. ಕಡೆಗೆ ಟೂಲ್ ಕಿಟ್(Tool Kit) ನಲ್ಲಿರುವ ಸ್ಕ್ರೂ ಡ್ರೈವರ್(Screw Driver) ತೆಗೆದು ಕೆರೆದಾಗ ಮನಸಿಗೆ ಹಿತವಾಗಿತ್ತು.


ಆಫೀಸ್ ಪ್ರವೇಶಿಸಿದೆ ಎಲ್ಲರು ನನ್ನನ್ನು ನೋಡಿ ಏನಪ್ಪಾ ಏನು ವಿಶೇಷ ಎಂದು ಕೇಳಿದರು. ಜೀನ್ಸ್ ಧರಿಸಿದ್ದಕ್ಕೆ ಪಾರ್ಟಿ ಬೇರೆ ಕೇಳಿದರು ಕೆಲವು ಗೆಳೆಯರು. ಅವರಿಗೇನು ಗೊತ್ತು ಹಾಸಿ ಮಲಗುವ ತಟ್ಟ (ಗೋಣಿ ಚೀಲ) ನೆ ಪ್ಯಾಂಟ್ ಮಾಡಿ ಹಾಕಿ ಕೊಂಡು ಬಂದ ಹಾಗೆ ಆಗಿತ್ತು. ನಿಲ್ಲುವದು, ಕುಳಿತುಕೊಳ್ಳುವದು, ಕೆರೆತ ಎಲ್ಲವೂ ಹರೋ ಹರ. ಇನ್ನು ಟಾಯ್ಲೆಟ್ ಗೆ ಏನಾದರು ಹೋದರೆ ಅಧೋ ಗತಿ.......


ಮತ್ತೆ ಒಬ್ಬ ಗೆಳೆಯ ನನಗೆ ಜೀನ್ಸ್ ಪ್ಯಾಂಟ್ ನ್ನು ಗಣಿಗಾರಿಕೆಯಲ್ಲಿ ಕೆಲಸಮಾಡುವವರು ಧರಿಸುತ್ತಿದ್ದರು ಎಂದು ಹೇಳಿದ ಹಾಗಿತ್ತು. ಈಗ ಅದನ್ನು ಧರಿಸುವವರೇ ಧನ್ಯ ಎಂದು ತಿಳಿದುಕೊಳ್ಳುತ್ತಾರೆ. ಈಗ ಅದೇ ಫ್ಯಾಷನ್.


ಇದನ್ನು ಬೆಸಿಗೆ ಕಾಲದಲ್ಲಿ ಧರಿಸಲು ಹೇಳಿದರೆ ಇದಕ್ಕೆ ಒಂದು A/c ಫಿಟ್ ಮಾಡಿ ಕೊಟ್ಟರೆ ಮಾತ್ರ ಅದನ್ನು ಧರಿಸುವೆ ಎಂದು ಖಡಾ ಖಂಡಿತವಾಗಿ ಹೇಳುತ್ತೇನೆ.


ಈಗ ನನ್ನ ಗೆಳೆಯರೆಲ್ಲರೂ ಜೀನ್ಸ್ ಧರಿಸುವವರೇ. ಎಂದೂ ಜೀನ್ಸ್ ಧರಿಸದ ನನ್ನ ಒಬ್ಬ ಗೆಳೆಯ ಕೂಡ ಜೀನ್ಸ್ ಧರಿಸಿ ಮೇಲೆ ಜುಬ್ಬಾ ಹಾಕಿಕೊಂಡು ಬಂದಿದ್ದ . ಆ ಜುಬ್ಬಾ ಹುಡುಗಿಯರ ಚೂಡಿ ಟಾಪ್ ಹಾಗೇ ಕಾಣಿಸುತ್ತಿತ್ತು .


ಹೀಗೆ ಏನೋ ದಿನ ಕಳೆದು ಮನೆ ತಲುಪಿದೆ. ಆಗಲೇ ನನ್ನ ಗೆಳೆಯ ಫೋನ್ ಮಾಡಿ ಮನೆಗೆ ತನ್ನ ಮಗನ ಹುಟ್ಟಿದ ಹಬ್ಬಕ್ಕೆ ಕರೆದ. ಇರಲಿ ಇಷ್ಟೊತ್ತು ಕಳೆದೆ ಇನ್ನು ಒಂದೆರಡು ಘಂಟೆ ತಾನೆ ಎಂದು. ಅದನ್ನೇ ಸಿಕ್ಕಿಸಿಕೊಂಡು ಹೋದೆ. ಏನೋ Buffet ಡಿನ್ನರ್ ಇರಬಹುದೆಂದರೆ ಅವರು ಊಟಕ್ಕೆ ಬಾಳೆ ಎಲೆ ಹಾಕಿ ಕೆಳಗೆ ಕೂಡಿಸುವ ವ್ಯವಸ್ಥೆ ಮಾಡಿದ್ದರು. ಏನೋ ಕಷ್ಟ ಪಟ್ಟು ಕೆಳಗೆ ಕೂತು ಊಟ ಮುಗಿಸುವಷ್ಟಕ್ಕೆ ಸಾಕು ಸಾಕಾಗಿ ಹೋಗಿತ್ತು. ಊಟಕಿಂತ ನನ್ನ ಜೀನ್ಸ್ ಮೇಲೆ ನನ್ನ ಕಣ್ಣು.


ಆಗ ಅನ್ನಿಸಿತು ಕಾಟನ್ ಜಿನ್ ನಲ್ಲಿ ಉಳಿದಿರೋ ಕಾಟನ್ ತೊಗೊಂಡು ಈ ಜೀನ್ಸ್ ಮಾಡಿರಬೇಕೆಂದು. ಜೀನ್ಸ್ ಕಂಡು ಹಿಡಿದ ಆ ಮಹಾಶಯನಿಗೆ ದೊಡ್ಡದೊಂದು ನಮಸ್ಕಾರ ಹೊಡೆದು. ಮನೆಗೆ ಹೋಗಿ ಲುಂಗಿ ಧರಿಸಿ ಆನಂದದಿಂದ ನಿದ್ದೆಗೆ ಹೋದೆನು..ಮತ್ತೆ ನಾಳೆ ಜೀನ್ಸ್ ಇಲ್ಲ ಏಕೆಂದರೆ ನನ್ನ ಬಳಿ ಇರುವದು ಒಂದೇ ಜೀನ್ಸ್.


ಕೈ ಕೆಸರಾದರೆ ಬಾಯಿ ಮೊಸರು. ಕಾಲು ಕೆರತವಾದರೆ ಅದೇ ಫ್ಯಾಷನ್. ಆದರು ಜೀನ್ಸ್ ಚೆನ್ನಾಗೆ ಕಾಣುತಿತ್ತು.

No comments:

Post a Comment