"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದುಕು ಜಟಕಾ ಬಂಡಿ" ಮತ್ತು "ಇದು ಕಥೆಯಲ್ಲ ಜೀವನ" ದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಈ ಸಂಶಯ ನನ್ನ ಮನಸಿನಲ್ಲಿ ಮನೆ ಮಾಡಿದೆ. ಗಂಡಸು ತನ್ನ ಇಚ್ಛೆಯಂತೆ 2-3 ಮದುವೆಯಾಗಿರುವದು ನೋಡಿ ತುಂಬಾ ಅಸಹ್ಯವೆನಿಸುತ್ತದೆ ಮತ್ತು ಅವನು ಕೊಡುವ ಕಿರುಕಳ ನೋಡಿ ಇವನ್ಯಾರೋ ಉತ್ತರ ಕುಮಾರನೇ ಇರಬೇಕು. ಗಂಡಸೊಂದಿಗೆ ಜಗಳವಾಡಲು ಬರಲಾರದೆಂಬ ವಿಷಯ ಅರಿತು ಹೆಂಡತಿಯೊಂದಿಗೆ ಯುಧ್ಧ ಸಾರುವ ಹುನ್ನಾರ. ಒಂದು ಮದುವೆ ಮೊದಲೇ ಆಗಿದ್ದರು ಎರಡು ಹೆಂಡತಿ ನನಗೆ ಬೇಕು ಎನ್ನುವ ಇಂತಹ ಗಂಡಸಿನ ಕ್ಷುಲ್ಲಕ ಬುದ್ಧಿಗೆ ಏನು ಹೇಳುವದು. ಈ ಜೀವನದಲ್ಲಿ ಸಿಗುವ ಎಲ್ಲ ಭೋಗಗಳು ಇವನ ಸೊತ್ತೋ ಗೊತ್ತಿಲ್ಲ?. ನಮ್ಮ ಜೀವನದ ನಿಜವಾದ ಸಾರ್ಥಕತೆ ಏನು? ನಾವು ಹುಟ್ಟಿರುವದು ಏತಕೆ? ಎಂಬುದನ್ನು ಯಾರು ವಿಚಾರ ಮಾಡಲು ಹೋಗುವದಿಲ್ಲ. ನನ್ನ ಅಹಂ ಮತ್ತು ನನ್ನ ಸುಖ ಎರಡೇ ಜೀವನದಲ್ಲಿ ಎಂಬ ಕತ್ತಲೆಯಲ್ಲಿ ಬದುಕುವ ಜನ ತುಂಬಾ ಇದ್ದಾರೆ.
ಹೋಗಲಿ ಬಿಡಿ ಇದೆಲ್ಲ ನಮಗ್ಯಾಕೆ ನಮ್ಮದೇನಿದ್ದರೂ ಬ್ಲಾಗ್ ಬಳಗವೆಂಬ ಪುಟ್ಟ ಪ್ರಂಪಚದಲ್ಲಿ ನಮ್ಮ ಸುಖ,ದುಖ ಎಲ್ಲವನ್ನು ನಾವು ಹಂಚಿಕೊಂಡು ಆನಂದದಿಂದ ಇರುವದು. ಅದೇ ನಮ್ಮ ಸೌಭಾಗ್ಯ.
ಭಾವ, ಬಂಧನ, ಬೆಸುಗೆ ಅಂತೆಲ್ಲ ಬರೆದು ತುಂಬಾ ತಲೆ ಕೊರಿತ ಇದ್ದಾನಲ್ಲಪ್ಪ ಅಂದ್ಕೋಬೇಡಿ. ನಿಜವಾಗಿಯೂ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ.ನನ್ನ ಗೆಳೆಯ Engineering 4 Semester ಇದ್ದಾಗಲೇ ಮನೆ ಎದುರಿಗೆ ಇರುವ ಹುಡುಗಿಯನ್ನು ಪ್ರೀತಿಸಿ ಹೆತ್ತವರನ್ನು ಕಡೆಗಣಿಸಿ ಮದುವೆಯಾಗಿದ್ದ. ಅವನ ಜೊತೆ ಅವನ ಹೆಂಡತಿಯನ್ನು ಸಾಕುವ ಕಷ್ಟ ಅವರ ಅಮ್ಮನಿಗೆ ಬಿದ್ದಿತ್ತು.
ಈ ಪ್ರಿತಿಯೇ೦ದರೆನೆ ಹೀಗೆ ಕಣ್ರೀ ಯಾರು? ಯಾರನ್ನ? ಯಾವಾಗ? ಪ್ರೀತಿಸುತ್ತಾರೆ ಅಂತ ಹೇಳೋಕಾಗೋದಿಲ್ಲ.ನಾನು ಪ್ರೀತಿಸಿದ್ದೆ ಆದರೆ ಅ೦ಜಪುಕಲ ಹೇಳಲಾಗದೆ, ಮನಸಿನಲ್ಲಿಯೇ ಅವಳನ್ನು ಆರಾಧಿಸಿದ್ದೆ. ಹೋಗಲಿ ಅದೆಲ್ಲ ಹಳೆಯ ಅಳಿದು ಉಳಿದ ಮಾತು. ಈಗೇನಿದ್ದರೂ ನನ್ನ ಹೆಂಡತಿನೇ ನನಗೆ ಸರ್ವಸ್ವ.
ಹೀಗೆ ನನ್ನ ಒಬ್ಬ ಗೆಳೆಯ ಶ್ರೀಧರ ಸವಿತಾಳಿಗೆ ಗಾಳ ಹಾಕಿದ್ದ. ಅವಳೋ ಮುಂಬಯಿಯಲ್ಲಿ ಬೆಳೆದವಳು ಇವನೋ ಧಾರವಾಡ - ಹುಬಳ್ಳಿ ಬಿಟ್ಟು ಬೇರೇನೂ ನೋಡದ ಹುಡುಗ. ಅದೇನೋ ಪ್ರತಾಪ ಮಾಡಿ ತೋರಿಸಿದ್ದನೋ ಗೊತ್ತಿಲ್ಲ. ಕನ್ನಡ ಬರದ ಸವಿತಾಳಿಗೆ ಕನಕಾಂಬರಿ ತೊಡಿಸಲು ಸಿದ್ದವಾಗಿದ್ದ. ಜೋಡಿನು ಪಸಂದಾಗೆ ಇತ್ತು. ಲೋರ್ರೆಲ್ ಹಾರ್ಡಿ ತರಹ(ಬಡಕಲು ಶ್ರೀಧರ, ಡುಮ್ಮಿ ಸವಿತಾ).
ಆಗ ತಾನೆ ನಮ್ಮ ಮದುವೆಯಾಗಿತ್ತು . ನನ್ನ ಹೆಂಡತಿಯನ್ನ ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೆಂದು ಅಕ್ಕ ಪಕ್ಕದವರು ಪೀಡಿಸುತ್ತಿದ್ದರು. ಅವಳಿಗೂ ಒಡುಪುಗಳ ಸಂಭ್ರಮ. ತನ್ನ ಎಲ್ಲ ಗೆಳತಿಯರು ಮತ್ತು ಸಂಭoದಿಕರಿಂದ ಕೇಳಿ ಒಡುಪುಗಳನ್ನು ಮನನ ಮಾಡಿ ಸುಂದರವಾಗಿ ಹೇಳುತ್ತಿದ್ದಳು.
* ಸರಸ್ವತಿಯ ವಾಹನ ನವಿಲು. _______ರಾಯರ ಹೆಸರು ಹೇಳುವೆನು ಇದೆ ಮೊದಲು.
* ಸಕಲ ಮಂಗಳ ಕಾರ್ಯಕ್ಕೂ ಗಜಾನನೇ ಪೂಜ್ಯ, ಭಕ್ತರು ಯುಕ್ತಿಯಿಂದ ಪೂಜೆ ಮಾಡಲು ಒಲಿದು ಕೊಡುವನು ಇಷ್ಟ ಸ್ವರಾಜ್ಯ.________ ರಾಯರ ಪಾದ ಸೇವೆಯ ಸೌಭಾಗ್ಯವೆ ನನಗೆ ಪರಮ ಪೂಜ್ಯ.
* ವಸಂತ ಮಾಸದಲ್ಲಿಚಿಗಿಯುವುದು ಮಾವಿನ ಮುಗುಳು. .________ ರಾಯರ ಹೆಸರು ಹೇಳುವೆನು ________ರವರ ಮಗಳು.
* ಈಶ್ವರನಿಗೆ ಏರಿಸುವದು ಮೂರುದಳದ ಪತ್ರಿ .________ ರಾಯರ ಹೆಸರು ಹೇಳುವೆನು .________ ಅವರ ಪುತ್ರಿ.
* ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದು ಯುಕ್ತಿಯಿಂದ .________ ರಾಯರ ಹೆಸರು ಹೇಳುವೆನು ಭಕ್ತಿಯಿಂದ.
* ರುಕ್ಮಿಣಿಯು ಶ್ರೀಕೃಷ್ಣನಿಗೆ ಓಲೆ ಬರೆಯುವಾಗ ಮುತ್ತು ಸುತ್ತು ಮಾಡಿದಳು ಮಸಿ. _________ರಾಯರ ಹೆಸರು ಹೇಳುವೆನು _______ಅವರ ಸೊಸಿ.
* ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯ. _________ರಾಯರು ಪತಿಯಾಗಿ ದೊರೆತದ್ದು ನನ್ನ ಪೂರ್ವ ಜನ್ಮದ ಪುಣ್ಯ.
* ಸಖಿ ಸಖಿಯರಲ್ಲಿ ಸಖಿಯಾದ _________ ಮಗಳಾದೆ _______ರಾಯರ ಕೈ ಹಿಡಿದು _______ಅವರ ಸೊಸೆಯಾದೇ.
* ಕೈಯಲ್ಲಿ ಕೈಕೊಟ್ಟು ಸಪ್ತಪದಿಯಲ್ಲಿ ನಿಂತೆ, ಹಿಂದೆ ಸಾಗುವೆ ನಿಮ್ಮ ನೆರಳಿನಂತೆ. _________ರಾಯರೆ ನನ್ನನ್ನು ಕೈ ಹಿಡಿದು ನಡಿಸಿರಿ ನಾಲ್ಕು ಜನ ನಮ್ಮನ್ನು ಹೊಗಳುವಂತೆ.
* ರಾಮ ಲಕ್ಷ್ಮಣರು ಶೃಂಗವೇರಪುರಕ್ಕೆ ಬಂದ ಮೇಲೆ ಆಯಿತು ಗುಹನ ಸ್ನೇಹ, ನನಗೆ ಸದಾ ಇರಲಿ _________ರಾಯರ ಸ್ನೇಹ.
* ಶ್ರೀಕೃಷ್ಣನು ಗೋವರ್ಧನ ಗಿರಿಯಲ್ಲಿ ಗೋಪಿಯರೊಡಗೂಡಿ ಸೂರೆ ಮಾಡಿದನು ಹಾಲು ಮೊಸರು, ಇವತ್ತು ಪ್ರೀತಿಯಿಂದ ಹೇಳುವೆನು ನಾನು _________ ರಾಯರ ಹೆಸರು.
* ಲಗ್ನಕ್ಕೆ ಮೊದಲು ಮಾಡುವರು ಯಾದಿ, _________ರಾಯರ ಹೆಸರು ಹೇಳುವೆನು ಬಿಡಿರಿ ಹಾದಿ.
* ತವರಿಂದ ದೂರಾದೆ ಹೊಸಮರಕೆ ಬೇರಾದೆ _________ರಾಯರ ಕೈ ಹಿಡಿದು ಧನ್ಯಳಾದೆ.
* ಒಂದೊಂದು ಉ೦ಗುರಕ್ಕೂ ಒಂದೊಂದು ಹರಳು ಅದರಿಂದ ಶೋಭಿಸುವದು ಕೈ ಬೆರಳು _______ರಾಯರೇ ನನ್ನ ಮಾoಗಲ್ಯದ ಹರಳು.
* ಸಿರಿತನವಿರಲಿ ಬಡತನವಿರಲಿ _________ರಾಯರ ಪಾದಸೇವೆ ಕೊನೆತನಕವಿರಲಿ.
* ನೋಡಲ್ಲಿ ವಿಶ್ವದಾ ಮರದಡೆಯಲ್ಲಿ ತೂಗುತಿದೆ ಉಯ್ಯಾಲೆ ಅದರಲ್ಲಿ ನಡೆಯುತಿದೆ ಮಾನವನ ಜೀವನದ ಜೋಕಾಲೆ ______ ರಾಯರ ಕೈ ಹಿಡಿದು ನಾನಾದೆ ಸುಮಂಗಲೆ
* ಹತ್ತಾವತಾರದಲಿ ಮೊದಲನೇ ಅವತಾರವೇ ಮತ್ಸ್ಯ. ______ರಾಯರ ಹೆಸರು ಹೇಳುವೆನು ಕನ್ನಡದಲ್ಲಿ ಸ್ವಚ್ಚ.
* ನದಿಗಳು ಎಷ್ಟೇ ಹರಿದರು ಕೊನೆಗೆ ಸೇರುವದು ಸಮುದ್ರವನ್ನ. ನನ್ನ ಮನವು ಸೇರುವದು _____ ರಾಯರ ಹೃದಯವನ್ನ.
* ಕಲ್ಲಾಗಿ ಬಿದ್ದಿದ್ದ ಅಹಲ್ಯಯನ್ನ ಉಧಾರ ಮಾಡಿದ ಶ್ರೀರಾಮ ತನ್ನ ಪಾದ ಸ್ಪರ್ಶದಿಂದ _______ರಾಯರ ಹೆಸರು ಹೇಳುವೆನು ಪ್ರೇಮ ಭಾವದಿಂದ.
* ಶ್ರೀ ಕೃಷ್ಣನು ಶೇಷಶಯನದ ಮೇಲೆ ಮಲಗಿರುವಾಗ ಬ್ರುಗು ಮುನಿಯು ತಾಡಣನ ಮಾಡಿದ್ದೂ ವೃಕ್ಷ ಸ್ಥಳ ________ ರಾಯರ ಚರಣ ಸೇವೆಯೇ ನನ್ನ ಮೋಕ್ಷ ಸ್ಥಳ.
* ಸಿರಿವಂತರ ಸೊಬಗು ಧನದಿಂದ ________ರಾಯರನ್ನು ಪೂಜಿಸುವೆನು ತನು ಮನದಿಂದ.
* ಸೂರ್ಯ ನಾರಾಯಣನಿಂದಲೇ ಲೋಕಕ್ಕೆ ಆರೋಗ್ಯ ______ ರಾಯರಿಂದಲೇ ಸಕಲ ಸೌಭಾಗ್ಯ.
* ಬ್ರಾಹ್ಮಣರಿಗೆ ಪವಿತ್ರ ಜನಿವಾರ ________ ರಾಯರೇ ನನ್ನ ಜೀವನದ ಆಧಾರ.
* ಆಕಾಶಕ್ಕೆ ಶೋಭಿಸುವದು ನಕ್ಷತ್ರವಲ್ಲಿ ಅಂಗಳಕ್ಕೆ ಶೋಭಿಸುವದು ರಂಗವಲ್ಲಿ ______ ರಾಯರ ಹೆಸರು ಹೇಳುವೆನು ಗುರು-ಹಿರಿಯರ ಸಮ್ಮುಖದಲ್ಲಿ.
* ಗಾಂಧೀಜಿಯವರು ಸತ್ಯಾಗ್ರಹ ಮಾಡಿದ್ದೂ ಲೋಕಕಲ್ಯಾಣಕ್ಕಾಗಿ _______ರಾಯರ ಹೆಸರು ಹೇಳುವೆನು ಕೇಳಿದ ಕಾರಣಕ್ಕಾಗಿ.
* ಕಣ್ಣಿಗೆ ಕಾಡಿಗೆ ಆಸೆ, ಹೆಣ್ಣಿಗೆ ಗಂಡಿನ ಆಸೆ ______ರಾಯರ ಹೆಸರು ಗೊತ್ತಿದ್ದರೂ ನಿಮಗೆಲ್ಲರಿಗೂ ಕೇಳುವ ಆಸೆ.
ಒಂದೊಂದು ಒಡಪುಗಳು ಮತ್ತೊಂದನ್ನು ಮೀರಿಸುವಂತವು. ಇನ್ನು ಊಟಮಾಡುವಾಗ, ನಮಸ್ಕರಿಸುವಾಗ ಬೇರೆ ಬೇರೆ ಒಡಪುಗಳು.
* ಉಡುಪಿಯಲ್ಲಿ ಇರುವದು ಕನಕನ ಕಿಂಡಿ _________ರಾಯರಿಗೆ ತಿನಿಸುವೇನು ಉಂಡಿ.
ಉಂಡಿ ಒಂದೇ ಇದ್ದರೆ ಪರವಾಗಿಲ್ಲ, ಎರಡೆರಡು ಉಂಡಿ ಇದ್ದರೆ ಬೇರೆ ಬೇರೆ ಒಡಪು ಹಾಕಿಯೇ ಹೇಳಬೇಕು. ಮತ್ತೆ ಕೇಳಿಯೇ ಬಿಟ್ಟರು
* ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ __________ರಾಯರಿಗೆ ತಿನಿಸುವೇನು ಉಂಡಿ.
ಹೀಗೆ ನಮಸ್ಕರಿಸುವಾಗ .....ಒಲವೆ ಜೀವನ ಸಾಕ್ಷಾತ್ಕಾರ ________ರಾಯರಿಗೆ ಮಾಡುವೆನು ನಮಸ್ಕಾರ.
ಇದು ಸವಿತಾನಿಗು ಬಿಡದ ಕರ್ಮ. ಅವಳು ಮದುವೆಯಾದ ಮೇಲೆ ಒಡಪು ಹೇಳಲೇಬೇಕು. ಅದಕ್ಕೆ ನನ್ನ ಹೆಂಡತಿಗೆ ಗಂಟು ಬಿದ್ದಳು ಹೇಳಿ ಕೊಡು ಎಂದು. ಅವುಗಳನ್ನು ಹಿಂದಿಯಲ್ಲಿ ಬರೆದು ಕೊಡುವ ಕೆಲಸ ನನ್ನದಾಗಿತ್ತು. ನನ್ನ ಹೆಂಡತಿ ಎಲ್ಲಿ _____ ಇದೆ ಅಲ್ಲಿ ಗಂಡ ಹೆಸರು ಹೇಳಬೇಕು ಎಂದು ತಾಕಿತ ಮಾಡಿದ್ದಳು. ಮತ್ತೆ ಎರಡು _____ ಇದ್ದರೆ ಅಪ್ಪನ ಹೆಸರೋ, ಅತ್ತೆ ಯವರ ಹೆಸರು ಇರುತ್ತದೆ ಎಂದು ಹೇಳಿದ್ದಳು. ಹಾಗು ಹೀಗು ಮನನ ಮಾಡಿದ್ದಳು ಸವಿತಾ.
ಮದುವೆಯಾದ ಮೇಲೆ ಒಂದೊಂದಾಗಿ ಒಡಪು ಹೇಳಲು ಶುರುಮಾಡಿದಳು. ಎಲ್ಲ ಹೆಂಗಸರು "ವಾಹ್ ವಾಹ್" ಎಂದು ಬೆನ್ನುತಟ್ಟಿದರು. ಈ ಹಿಂದಿ ಹುಡುಗಿ ಎಷ್ಟು ಚೆನ್ನಾಗಿ ಒಡಪು ಹೇಳುತ್ತಾಳೆ ಅಂತ. ಸವಿತಾಳಿಗೆ ಆನಂದದ ಪರಿವೆ ಇಲ್ಲದ ಹಾಗೆ ಆಕಾಶಕ್ಕೆ ಏಣಿ ಹಾಕ್ಕಿದ್ದಳು. ಆಮೇಲೆ ಖುಷಿಯಿಂದ ಶ್ರೀಧರರಾಯರ ಎನ್ನುವ ಬದಲು ಗೋಪಾಲರಾಯರ ಎಂದು ಬಿಡಬೇಕೇ. ನನ್ನ ಗೆಳೆಯ ಶ್ರೀಧರ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಕೊಲ್ಲುವ ಹಾಗೆ ದುರುಗುಟ್ಟಿದ್ದ. ಸಾರೀ.... ಸಾರೀ..... ಎಂದು ಮತ್ತೆ ತಿದ್ದಿ ಶುರು ಹಚ್ಚಿ ಕೊಂಡಳು.
ಇನ್ನೇನು ಆಗಲಿಕ್ಕಿಲ್ಲ ಎಂದುಕೊಂಡ ನಾನು ಮತ್ತು ನನ್ನ ಹೆಂಡತಿ ಅಂದುಕೊಂಡಾಗಲೇ ಶ್ರೀಧರರಾಯರ ಮಗಳು ಎಂದು ಬಿಟ್ಟಿದ್ದಳು. ನಾವು ಕಲಿಸಿದ ಗಿಳಿಪಾಠ ಕೈ ಕೊಟ್ಟಿತ್ತು. ಇನ್ನು ಮುಗಿದಿರಲಿಲ್ಲ ನನ್ನ ಗೆಳೆಯನ ಮಡದಿಯ ಪ್ರತಾಪ. ಊಟಕ್ಕೆ ಕುಳಿತಾಗ "ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ ಶ್ರೀಧರರಾಯರಿಗೆ ತಿನಿಸುವೇನು ಹಿಂಡಿ". ಹಿಂಡಿ ತಿನ್ನಿಸಿದಳೋ ಅಥವಾ ಉಂಡಿ ತಿನ್ನಿಸಿದಳೋ ಗೊತ್ತಿಲ್ಲ. ಕಿವಿ ಹಿಂಡಿ ನನ್ನ ಗೆಳೆಯನನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡು. ಒಡಪು ಹೇಳಿ ಓಡಿಸಿಕೊಂಡು ಹೋಗಿದ್ದಾಳೆ. ಏನೇ ಇರಲಿ ಮದುವೆ ಮಾತ್ರ ಜನುಮ ಜನುಮದ ಅನುಭಂದ ಅನ್ನುವದು ಮಾತ್ರ ನಿಜ.
ನನಗೆ ರವಿಚಂದ್ರನ/ಹಂಸಲೇಖ ಜೋಡಿ ಚಿತ್ರದ ಈ ಹಾಡು ನೆನಪಿಸುತ್ತದೆ.
"ಯಾರ ಯಾರ ಚೆಲುವೆ ಎಲ್ಲಿಹಳೋ
ಯಾರ ಯಾರ ಒಲವು ಎಲ್ಲಿಹದೋ
ಒಂದೊಂದು ಕಾಳಿನ ಅನ್ನದಲು ತಿನ್ನೋರ ಹೆಸರು ಕೆತ್ತಿಹದೋ "
ತನ್ನ ಒಡಪುಗಳಿಂದ ನನ್ನ ಮನ ಸೆರೆ ಹಿಡಿದ ನನ್ನ ಮಡದಿ ನನ್ನ ಪ್ರೀತಿಯ ಮನೆ ಒಡತಿ.
ಯಾವ ಹೂವು... ಯಾರ ಮುಡಿಗೋ..? ಯಾರ ಒಲವು.. ಯಾರ ಕಡೆಗೋ? ಎಂಬುದಂತೂ ನಿಜ.............
No comments:
Post a Comment