Friday, August 28, 2009

ಅಡ್ಡ ಹೆಸರು ಪ್ಲೀಸ್ ...............

ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನೆಗಳನ್ನು ನೋಡಿ ಹಾಗೆ ಅoದಿರಬಹುದು. ಮನಸ್ಸು ಆಗಲೇ ಧಾರವಾಡಕ್ಕೆ ಹೋಗಿತ್ತು. ಧಾರವಾಡದಲ್ಲಿ ಅಡ್ಡ ಹೆಸರುಗಳು ಅಂದರೆ Surnameಗಳು ತುಂಬ ವಿಚಿತ್ರವಾಗಿ ಇರುತ್ತವೆ. ಹಂಚಿನಮನಿ,ಮೇಲಿನಮನಿ, ಕಡೆಮನಿ, ಹಿತ್ತಲಮನಿ ಹೀಗೆ etc etc ...


ಒಮ್ಮೆ ಸುಂದರರಾವ್ ಎನ್ನುವ ಪೋಸ್ಟ್ ಮ್ಯಾನ್ ಬೆಂಗಳೂರಿನಿಂದ ಧಾರವಾಡಕ್ಕೆ Transfer ಆಗಿ ಬಂದಿದ್ದರು. ಅವರಿಗೆ ಮೊದಲು ಅಂಗಡಿ ಶರಣಪ್ಪ ಎನ್ನುವವರಿಗೆ ಪತ್ರ ಕೊಡಬೇಕಿತ್ತು. ಅದನ್ನು ತೆಗೆದು ಕೊಂಡು ಹೋಗಿ ಒಬ್ಬ ದಾರಿಹೋಕನನ್ನು ಕೇಳಿದರು. ಅವನು ಸಿಡುಕ ಮೂತಿ ಸಿಂಗಾರಪ್ಪನೆ ಇದ್ದಿರಬೇಕು. ಹೆಂಡತಿಯಿಂದ ಬೈಸಿಕೊಂಡಿದ್ದನೋ ಗೊತ್ತಿಲ್ಲ. ಸುಂದರರಾಯರು ಕೇಳಿದರು ಸರ್ ಅಂಗಡಿ ಎಲ್ಲಿ ಎಂದು. ಆಗ ಆ ಮನುಷ್ಯ "ಇಲ್ಲಿ ಎಲ್ಲಿತ್ತ ಅಂಗಡಿ ಮುಂದ ಹೋಗ" ಇಲ್ಲಿ ಇದ್ದದ್ದು ಈ ಹಾಳ ಮನಿ ಮಾತ್ರ ಎಂದು ತನ್ನ ಮನೆಯನ್ನು ತೋರಿಸಿದನು. ಅನಂತರ ರಾಯರು ಪೂರ್ತಿ ಹೆಸರನ್ನೇ ಹೇಳಿ ಮನೆಯ ವಿಳಾಸವನ್ನು ಪಡೆದು ಪತ್ರ ತಲುಪಿಸಿದ್ದರು.


ಹೀಗೆ ಸುಂದರ ರಾವ್ ಅವರ ಮಡದಿ ದಿನಸಿ ಅಂಗಡಿಗೆ ಹೋಗಿ ಒಂದು ದಿವಸ ಅಕ್ಕಿ ಇಲ್ವಾ ಎಂದು ಕೇಳಿದಳು. ಆಗ ಅಂಗಡಿಯವ "ಈಗ ಹೋದನಲ್ಲ" ಎನ್ನಬೇಕೆ. ಆ ಅಂಗಡಿಯವನಿಗೆ ಅಕ್ಕಿ ಎಂಬ ಗೆಳೆಯನಿದ್ದ ಅವನು ಆಗಲೇ ಅವನ ಜೊತೆ ಮಾತನಾಡಿ ಮನೆಯ ಕಡೆಗೆ ಹೊರಟಿದ್ದ. ಆಗ ತಿನ್ನುವ ಅಕ್ಕಿ ಬೇಕು ಎಂದು ಕೇಳಿ ಕೊಂಡು ಬಂದಳು.


ಹೀಗೆ ಒಂದು ದಿವಸ ಕಡ್ಲೆ ಕಾಯಿ ಅಂದಾಗ ಅಂಗಡಿಯವ ಕಡ್ಲೆ ಕೊಟ್ಟಿದ್ದ. ಮತ್ತೆ ಎಲ್ಲಿ ವಾಪಾಸ್ ಕೇಳುವದು ಅಂತ ಸುಮ್ಮನಾಗಿದ್ದರು. ಹೀಗೆ ಸುಂದರ್ ರಾಯರು ಮತ್ತು ಅವನ ಹೆಂಡತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. (ಕೊತಂಬರಿ ಬೀಜ, ಕಡ್ಲೆ ಪುರಿ etc etc....).


ಮತ್ತೊಂದು ದಿವಸ ತುಂಬ ರುಚಿಯಾಗಿದೆ ಎಂದು ಮಿರ್ಚಿ ಮತ್ತು ಗಿರಮಿಟ್ಟ ತುಂಬ ತಿಂದಿದ್ದರು. ಆನಂತರ ನೋಡಬೇಕು ಅವರ ಅವಸ್ಥೆ.


ಇನ್ನು ಒಂದು ದಿವಸ ಸುಂದರರಾಯರು ನನಗೆ ಪತ್ರದ ವಿಳಾಸವನ್ನು ಕೇಳಿದರು. ಪತ್ರದ ವಿಳಾಸ ನೋಡಿ ತುಂಬಾ ನಕ್ಕಿದ್ದೆ. ಪತ್ರದ ಮೇಲೆ ನಾರಾಯಣ ಶ್ವಾನಭೋಗ ಎಂದು ಬರೆದಿರಬೇಕೆ. ಪಕ್ಕಾ ಬ್ರಾಹ್ಮಣ ನಮ್ಮ ಕಾಕಾ ನಾರಾಯಣ ಶಾನಭೋಗರು ಯಾವಾಗ ನಾಯಿಗಳನ್ನು(ಶ್ವಾನಗಳನ್ನ) ಭೋಗಿಸಲು (ತಿನ್ನಲು) ಕಲಿತಿದ್ದಾರೆ ಎಂದು ಯೋಚಿಸಿದೆ.


ನಮ್ಮ ಊರಲ್ಲಿ ತುಂಬಾ ಶ್ರೀಮಂತವಾದ ಪಾಟೀಲ ಕುಟುಂಬ ಇದೆ. ಆದರೆ ಮನೆ ಮುಂದೆ, ಹಿಂದೆ ಮಾತ್ರ ಸಗಣಿ ಇರುತಿತ್ತು. ಅದಕ್ಕೆ ಅವರಿಗೆ ಸಗಣಿಯವರ ಮನೆಯೆಂದು ಅಡ್ಡ ಹೆಸರು ಬಿತ್ತು. ಆಗ ಅವರ ಮನೆಯವರು ತಮನ್ನು ಸಗಣಿಯವರ ಮನೆಯೆಂದು ಅಡ್ಡ ಹೆಸರಿನಿಂದ ಕರೆಯಬಾರದೆಂದು ಊರಿಗೆಲ್ಲ ಹೋಳಿಗೆ ಮಾಡಿಸಿ ಊಟಕ್ಕೆ ಹಾಕಿದ್ದರು. ಆಗ ನಾನು ಮತ್ತು ರಂಗಣ್ಣ ಊಟ ಮಾಡಿ ಬರುತ್ತಿದ್ದಾಗ ದಾರಿಯಲ್ಲಿ ಬಸಪ್ಪ ಭೇಟಿಯಾದ. ಎಲ್ಲಿ ಹೋಗಿದ್ದಿರಿ ಎಂದು ನಮನ್ನು ಕೇಳಿದ. ನಾನು ಹೇಳುವದಕ್ಕೆ ಮುಂಚೆನೇ ರಂಗಣ್ಣ ತಟ್ಟನೆ ನಾವು "ಸಗಣಿಯವರ ಮನೆಗೆ ಊಟಕ್ಕೆ ಹೋಗಿದ್ದೆವು" ಎಂದು ಬಿಡಬೇಕೇ. ಇನ್ನು ಬಾಯಿಯಲ್ಲಿಯ ಬೀಡ ಮುಗಿದಿರಲಿಲ್ಲ.

ನನಗೆ ಒಬ್ಬ ಗೆಳಯನಿದ್ದಾನೆ ಅವನ ಹೆಸರು ರವಿ ಧರ್ಮಣ್ಣವರ ಅಂತ. ಅವನು ನನ್ನ ಜೊತೆನೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು Design Engineer, ಅಂದರೆ Machine ಗಳನ್ನು ಕಂಪ್ಯೂಟರ್ ನಲ್ಲಿ ಚಿತ್ರಿಸುವುದೇ ಅವನ ಕೆಲಸ. ನನ್ನದು ಅವನದು ತುಂಬ ಸಲಿಗೆ. ಹೀಗೆ ಸಲಿಗೆಯಿಂದ ಒಂದು ದಿವಸ ನಾನು "ರವಿ ಧರ್ಮಣ್ಣ ಕುಂಚದ ಕಲೆ ಬಲೆ ಸಾಕಾಗಿತೋ.." ಅಂತ ಚೇಷ್ಟೆಯಿಂದ ಹಾಡುತ್ತ ಅವನನ್ನು ಊಟಕ್ಕೆ ಕರೆಯಲು ಹೋದೆ. ಅವನಿಗೆ ಕೆಟ್ಟ ಕೋಪ ಬಂದಿತ್ತು. ಏಕೆಂದರೆ ಅವನು ಡಿಸೈನ್ ಮಾಡಿದ ಡ್ರಾಯಿಂಗ್ನಲ್ಲಿ ಏನೋ ತಪ್ಪು ಇತ್ತು ಅಂತ ಅವನ ಬಾಸ್ ಅವನಿಗೆ ಮಂಗಳಾರತಿ ಮಾಡಿದ್ದರು.

ಹೀಗೆ ನಮ್ಮೂರ ಭಾಷೆ ತುಂಬ ಅಪರೂಪದ ಹಾಸ್ಯ ಭಾಷೆ. ನಮ್ಮಲ್ಲಿಯ ಅಡ್ಡಹೆಸರುಗಳು ತುಂಬ ಹಾಸ್ಯಕರವಾಗಿ ಇರುತ್ತವೆ. ಉಳ್ಳಗಡ್ಡಿ , ಬೆಳ್ಳುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಕೊತಂಬರಿ, ಅಕ್ಕಿ, ಕಡ್ಲಿ etc etc.
ಇನ್ನು ಕೆಲವು ಇರುತ್ತವೆ ಕರಡಿ,ತಿಪ್ಪೆಗುಂಡಿ ಅಂತ. ಲಕ್ಕುಂಡಿ, ಮುಕ್ಕುಂಡಿ ....

ಹೀಗೆ ನನ್ನ ಒಬ್ಬ ಗೆಳೆಯನ ಅಡ್ಡ ಹೆಸರು ಪ್ರದೀಪ್ ಯತ್ತಿನಗುಡ್ಡ ಅಂತ. ಅದು ಅಪಾರ್ಥವಾಗಬಾರದೆಂದು ಪ್ರದೀಪ್. ವಾಯ ಅಂತ ಬರೆದರೆ ಏನೋ ಹೇಳುವದೋ ನೀವೇ ಹೇಳಿ.


ನಾವು ಮಾತುನಾಡುವಾಗ ಎಲ್ಲರಿಗೂ "ಯಾ" ಹಚ್ಚಿಯೇ ಮಾತನಾಡುವದು ಪ್ರದೀಪನಿಗೆ ....ಪದ್ಯ, ರಮೇಶ್ ನಿಗೆ ..ರಮ್ಯ ಹೀಗೇನೆ... ರಮ್ಯ ಎಂದರೆ ಹುಡುಗಿ ಎಂದು ತಿಳಿದುಕೊಂಡರೆ ಕಷ್ಟ.


ನನ್ನ ಪ್ರಯಾಣ ಮುಗಿದಿತ್ತು ನನ್ನ ಧಾರವಾಡದ ನೆನಪುಗಳೊಂದಿಗೆ. ಏನೇ ಇರಲಿ ನಮ್ಮ ಭಾಷೆ ನಮಗೆ ನಿಜವಾಗಿಯೂ ಅಂದದ.. ಚಂದದ.. ಸುಂದರ.. ಆಡು ಭಾಷೆ.

No comments:

Post a Comment