Friday, August 28, 2009

ತರ್ಲೆ ಮಂಜ(ಗ)ನ ಎದಿರೇಟು....

ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.


ಒಂದು ದಿವಸ ಕ್ರಿಕೆಟ್ ಆಡುತ್ತಿದ್ದಾಗ ಮನೋಜನ ಟೀಂ, ಮಂಜನ ಟೀಂ ಮೊದಲ ಬಾರಿ ಸೋಲಿಸಿ ಬಿಟ್ಟಿತ್ತು. ಆಟದ ನಡುವೆ ಸ್ವಲ್ಪ ಜಿದ್ದಾ - ಜಿದ್ದಿನಿಂದ ಮಂಜನ ಜೊತೆ ಜಗಳ ಆಯಿತು .. ಮನೋಜನ ಗೆಲುವಿನ ಖುಷಿಗೆ ಪಾರವೇ ಇರಲಿಲ್ಲ. ತಮ್ಮ ಟೀಂ ಫೋಟೋ ತಗಿಸಿ ನೋಟೀಸ್ ಬೋರ್ಡ್ ಗೆ ಅಂಟಿಸಿದ್ದ. ಮಂಜನಿಗೆ ಎಲ್ಲಿಲ್ಲದ ಕೋಪ ಉಕ್ಕಿ ಹರಿದಿತ್ತು. ಇವನನ್ನು ಹೇಗಾದರೂ ಮಾಡಿ ಎದಿರೇಟು ಕೊಡಬೇಕಾಗಿತ್ತು. ಮನೋಜ ಆನಂತರ ಕ್ಷಮೇ ಕೇಳಿದನಾದರೂ ಪ್ರಯೋಜನವಾಗಿರಲಿಲ್ಲ....
6 ತಿಂಗಳ ಪರೀಕ್ಷೆಯ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಮಂಜ ಮತ್ತು ಮನೋಜನ ಸೀಟ್ ಹಿಂದೆ ಮುಂದೆಯೇ ಬರುತಿತ್ತು. ಮನೋಜನಿಗೆ ಪಾಸಾಗಲು ಸಹಾಯ ಮಾಡುವ ಏಕೈಕ ವೈಕ್ತಿ ನಮ್ಮ ಮಂಜ. ಅವನೇ ಕೈಕೊಟ್ಟಿದ್ದರಿಂದ ಮನೋಜನಿಗೆ ಪಾಸಾಗುವದು ಸಾಧ್ಯವೇ ಇರಲಿಲ್ಲ.


ಆವತ್ತು ವಿಜ್ಞಾನ ಪರೀಕ್ಷೆ ಇತ್ತು. ಮಂಜ ನಮ್ಮ ಹತ್ತಿರ ಬಂದು. "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಬೀಗಿದ. ಏನು ಮಾಡಿದೆ? ಎಂದು ನಾವೆಲ್ಲರೂ ಕೇಳಿದರು ಮಂಜ ಹೇಳಲಿಲ್ಲ. ರಿಸಲ್ಟ್ ಬರಲಿ ನಿನಗೆ ಗೊತ್ತಾಗುತ್ತೆ ಎಂದ. ಏನು ಮಾಡಿದ್ದ ಎಂದು ಯಾರಿಗೂ ತಿಳಿಯದಾಗಿತ್ತು.


ಮರುದಿನ ಕನ್ನಡ ಪೇಪರ್ ಇತ್ತು. ಮನೋಜ ಮಂಜನ ಕಾಲಿಗೆ ಬಿದ್ದು ಕ್ಷಮೇ ಕೇಳಿದ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು. ಕಡೆಗೆ ಮಂಜ ಮನೋಜನಿಗೆ ಸಹಾಯ ಮಾಡಲು ಒಪ್ಪಿದ. ಪರೀಕ್ಷೆಯ ಮುಂಚೆ ಮನೋಜನಿಗೆ ಮಂಜ "ಸೀದಾ ಸೀದಾ ನನ್ನ ಪೇಪರ್ ಕಾಪಿ ಮಾಡಬೇಡ ಸ್ವಲ್ಪ ತಿರುಚಿ ಬರಿ" ಎಂದು ತಕೀತ ಮಾಡಿದ್ದ .


ಪರೀಕ್ಷೆಯಲ್ಲಿ ನಿಜವಾಗಿಯು ಮಂಜ ಸಹಾಯ ಮಾಡಿದ್ದ. ಮನೋಜನಿಗೆ ತನ್ನ ತಪ್ಪಿನ ಅರಿವಾಗಿತ್ತು.


ಒಂದು ವಾರದ ನಂತರ ಎಲ್ಲರು ನೋಟೀಸ್ ಬೋರ್ಡ್ ಕಡೆಗೆ ಜಮಾಯಿಸಿದ್ದರು. ನೋಡಿದರೆ ಮನೋಜನ ವಿಜ್ಞಾನ ಪೇಪರ್ ನೇತಾಡುತಿತ್ತು. Alcohol ತಯಾರಿಸುವ ಹೊಸ ವಿಧಾನ ಕಂಡು ಹಿಡಿದವರು ಮನೋಜ್ ಎಂದು ಬರೆದಿತ್ತು. Alcohol ತಯಾರಿಸಲು ಬೇಕಾದ ಸಾಮಾನು ಏಲಕ್ಕಿ ಬಾಳೆ ಹಣ್ಣು, ಸಕ್ಕರೆ , ಹಾಲು, ಏಲಕ್ಕಿ, ತುಪ್ಪ ಮತ್ತು ಜೇನು ತುಪ್ಪ. ಎಲ್ಲ ಸಾಮಾನುಗಳ ಮಿಶ್ರಣ ಮಾಡಿ. ಅದನ್ನು ಒಂದು ಬಾಟಲಿಯಲ್ಲಿ ಹಾಕಿ ಅನಂತರ ಅದನ್ನು ನೆಲದಲ್ಲಿ ಮೂರೂ ದಿವಸ ಹುಗಿದು ಇಡಿ ಎಂದು ಬರೆದಿತ್ತು. ಮತ್ತೆ ಅವುಗಳ ಚಿತ್ರ ಬೇರೆ ಬರೆದಿತ್ತು.


ರಾಜಣ್ಣ ಮಾಸ್ತರ ಆಗಲೇ ಬಂದು "ಎಲ್ಲಿ ಮನ್ಯಾ ಎಂದು ಕೂಗಲಾರಮ್ಬಿಸಿದರು". "Alcohol ತಯಾರಿಸುವ ವಿಧಾನ ಬರೆಯಿರಿ ಎಂದರೆ ಪಂಚಾಮೃತ ಮಾಡ್ಯಾನ ಎಂದು" ಮನೋಜನಿಗೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.
ಅನಂತರ ತಿಳಿಯಿತು ಇದರಲ್ಲಿ ಮಂಜನ ಕೈವಾಡ ಇದೆ ಎಂದು. ಪರೀಕ್ಷೆಯ ದಿವಸ ಮನೋಜ ಮಂಜನಿಗೆ ಭೇಟಿಯಾಗಿ "ನೀನು ಪೇಪರ್ ತೋರಿಸದಿದ್ದರೂ ಪರವಾಗಿಲ್ಲ. ಯಾವ ಯಾವ ಪ್ರಶ್ನೆ ಬೀಳುತ್ತವೆ ಅದನ್ನಾದರೂ ಹೇಳು" ಎಂದು ಕೇಳಿದ್ದ . ಅದಕ್ಕೆ ಮಂಜ Alcohol ತಯಾರಿಸುವ ವಿಧಾನ ಗ್ಯಾರಂಟೀ ಬಿಳುತ್ತೆ ಎಂದು ಹೇಳಿದ್ದ. "ಅದು ಹೇಗೆ ಅಷ್ಟು ಖಚಿತವಾಗಿ ಹೇಳುತ್ತಿ?" ಎಂದು ಮನೋಜ ಕೇಳಿದಾಗ. ಮಂಜ ರಾಜಣ್ಣ ಮಾಸ್ತರ್ ನ ನಿನ್ನೆ ಶೆರೆ ಅಂಗಡಿ ಒಳಗೆ ನೋಡಿದೆ. ಅವರು ಗ್ಯಾರಂಟೀ ಅದನ್ನೇ ಕೊಡುತ್ತಾರೆ ಎಂದ. ಅದಕ್ಕೆ ಅದರ ತಯಾರಿಸುವ ವಿಧಾನವನ್ನು ಹೇಳು ಎಂದಾಗ. ಮಂಜ ಈ ತರ್ಲೆ ಮಾಡಿದ್ದ. ಅದಕ್ಕೆ ನಮಗೆ "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಹೇಳಿದ್ದು.


ಮತ್ತೆ ಮರುದಿನ ಕನ್ನಡ ಮಾಸ್ತರ ಬಂದು ಎಲ್ಲಿ ಆ "ಪಂಚಾಮೃತ ಮನ್ಯಾ". ಎಂದು ಎಲ್ಲರೆದುರು ಕೇಳಿದರು. ಮನೋಜನಿಗೆ ಅಳು ಉಕ್ಕಿ ಬಂದಿತ್ತು. ಮನೋಜನನ್ನು staff ರೂಮಿಗೆ ಕರೆದು ಕೊಂಡು ಹೋಗಿ ಮಾಸ್ತರ "ನೋಡು ಮನೋಜ ನೀನು ಹೊಸದಾಗಿ ತಯಾರಿಸಿರೋ Alcohol ನನಗೆ ಬೇಕು" ಎಂದು ಹೇಳಿದರು "ಇಲ್ಲ ಅಂದರೆ ನಿನ್ನ ಕನ್ನಡ ಪೇಪರ್ ನು ನೋಟೀಸ್ ಬೋರ್ಡ್ ಮ್ಯಾಲೆ ಇರ್ತದ" ಎಂದರು. ಅನಂತರ ಎಲ್ಲರು ಮನೋಜನನ್ನು "ಪಂಚಾಮೃತ ಮನ್ಯಾ" ಎಂದು ಅಂಕಿತ ನಾಮ ಕೊಟ್ಟು ಬಿಟ್ಟಿದ್ದರು.


ಮನೋಜನಿಗೆ ಅರ್ಥವೇ ಆಗಿರಲಿಲ್ಲ. ನಾನು ಕಾಪಿ ಹೊಡೆದದ್ದು ಮಂಜಂದು ಪೇಪರ್ ಅದು ಹೆಂಗ ತಪ್ಪು ಇರಲಿಕ್ಕೆ ಸಾಧ್ಯ? ಎಂದು ಪಂಚಾಮೃತ ತರದೇ ಸುಮ್ಮನೆ ಇದ್ದುಬಿಟ್ಟ.


ಮರುದಿವಸ ಮತ್ತೆ ಕನ್ನಡ ಪೇಪರ್ ನೋಟೀಸ್ ಬೋರ್ಡ್ ಮೇಲೆ. ಮನೋಜ ತಿರುಚಿ ಉತ್ತರ ಬರಿ ಎಂದು ಹೇಳಿದ್ದಕ್ಕೆ ಈ ವಾಕ್ಯವನ್ನು " ಭಾರತಿಗೆ ಮದುವೆ ಆಯಿತು. ಅನಂತರ 2 ಮಕ್ಕಳು ಜನಿಸಿದವು" ಎಂದು ಬರೆಯುವ ಬದಲು "ಭಾರತಿಗೆ ಮಕ್ಕಳು ಜನಿಸಿದವು. ಅನಂತರ 2 ಮದುವೆ ಆಯಿತು." ಎಂದು ತಿರುಚಿ ಬರೆದು ಬಿಟ್ಟಿದ್ದ. ಮತ್ತೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.


ಹೀಗೆ ಮಂಜ ತನ್ನ ಸೇಡನ್ನು ತಿರಿಸಿಕೊಂಡಿದ್ದ. ಅನಂತರ ಮನೋಜ ಯಾವತ್ತು ಮಂಜನ ತಂಟೆಗೆ ಹೋಗಲಿಲ್ಲ. ಮಂಜನ ಪಕ್ಕ ಭಂಟನಾಗಿ ಹೋದ....

2 comments:

  1. ನಿಮ್ಮ ಅಭಿಮಾನದ ಮಾತುಗಳಿಗೆ ನಾನು ಸದಾ ಚಿರಋಣಿ. ಧನ್ಯವಾದಗಳು ಮತ್ತು ವಂದನೆಗಳು.:)

    ReplyDelete