ನಮ್ಮ ಪಕ್ಕದ ಮನೆಯ ಪಾರ್ವತಮ್ಮನ ಮಗಳಿಗೆ ಒಂದು ವರ ಬಂದಿತ್ತು. ವರ ನೋಡಿ ಹೋದ ಮೇಲೆ. ವರನ ಬಗ್ಗೆ ನಮ್ಮ ಅಮ್ಮ ವಿಚಾರಿಸಿದಾಗ. ಹುಡುಗಿಯ ಅಮ್ಮ ತುಂಬ "ದೊಡ್ಡ ಮನುಷ್ಯರು" ಅವರು ಎಂದರು. ಯಾವ ಅರ್ಥದಲ್ಲಿ ಹೇಳಿದರು ತಿಳಿಯಲಿಲ್ಲ ಎಲ್ಲರು ಬಡಕಲಾಗೆ ಇದ್ದರು. ಅನಂತರ ಗೊತ್ತಾಗಿದ್ದು ದೊಡ್ಡ ಮನುಷ್ಯರು ಎಂದರೆ ದುಡ್ಡಿರುವವರು ಅಂತ. ದೇಹದಿಂದ ದೊಡ್ಡದಾಗಿ ಇದ್ದು, ದುಡ್ಡಿಲ್ಲದವರಿಗೆ ಏನು ಅನ್ನ ಬೇಕು ತಿಳಿಯಲಿಲ್ಲ. ಮತ್ತೆ ತಮ್ಮ ಮಾತಿನ ವರಸೆ ಪ್ರಾರಂಬಿಸಿದರು ಪಾರ್ವತಮ್ಮ "ಅವರ ಮನೆ ದೆವ್ವನಂತ ಮನೆ" ಎಂದರು. ಅಂದರೆ ದೆವ್ವ ವಿರುವ ಮನೆಯೋ ಅಥವಾ ದೆವ್ವಗಳು ಇರುವ ಮನೆಯ(ಅಂದರೆ ತುಂಬ ಅದ್ಭುತವಾದ ಮನೆ ಅಂತ ಅರ್ಥ). ಅವರ ಅತ್ತೆ, ಮಾವ ಬಂಗಾರದಂತವರು.(ನಿಜ ಕಂತೆ ಕಂತೆ ಬಂಗಾರವನ್ನು ಬಾಚಿಕೊಂಡ ಮೇಲೆ ಬಂಗಾರದಂತವರೆ ಆಗುತ್ತಾರೆ ಮನಸಿನಲ್ಲೇ ಅಮ್ಮ ಅಂದಿದ್ದರು ). ಇನ್ನು ವರನ ಬಗ್ಗೆ ಹೇಳುವದಾದರೆ ದೇವರಂತ ಮನುಷ್ಯ ಎಂದರು. ನಿಜ ಸಾಕ್ಷಾತ ಕೃಷ್ಣ ಪರಮಾತ್ಮನ ಪರಾವತಾರ. ನನ್ನ ಮಗಳ ತಿಂಡಿಯನ್ನು ತುಂಬಾ ಮೆಚ್ಚಿದರು ಎಂದರು. ಸರಿ ಕೆರೆತ ಬಂದರೆ ಒಳ್ಳೆಯದು ಎಂದು ಮನಸ್ಸಿನಲ್ಲೇ ಅಮ್ಮ ಗುನಗುಟ್ಟಿದ್ದರು. ಏಕೆಂದರೆ ಇವಳನ್ನು ನನ್ನ ಅಣ್ಣ ಸಂಜೀವನಿಗೆ ಕೊಡಬೇಕೆಂದು ನಾವು ಕೇಳಿದಾಗ ಅವರು ನಕಾರವೆತ್ತಿದ್ದರು. ನಮ್ಮ ಅಜ್ಜಿ ಊರಿನಿಂದ ನಮ್ಮ ಮನೆಗೆ ಬಂದಿದ್ದರು. ಅಜ್ಜಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುವದಿಲ್ಲವಾದ್ದರಿಂದ ಅವರನ್ನು ಹೊರಗೆ ನಾವು ಬಿಡುವದಿಲ್ಲ. ಅಜ್ಜಿ ತುಂಬ ನೇರವಾಗಿ ಮಾತನಾಡುವರು. ಹೀಗೆ ಒಂದು ದಿವಸ ಅಜ್ಜಿ ಮದುವೆಗೆ ಅಂತ ಹೋದವರು ಯಾರದೋ ತಿಥಿ ಮನೆಗೆ ಹೋಗಿ ಊಟ ಮಾಡಿ ಬರುವಾಗ ೧೦೦ ರೂಪಾಯಿಗಳನ್ನು ಅವರಿಗೆ ಕೊಟ್ಟು ಬಂದಿದ್ದರು. ಅದಾದ ಮೇಲೆ ನಮ್ಮ ಅಜ್ಜಿಯನ್ನು ನಾವು ಒಬ್ಬರೇ ಹೊರಗೆ ಹೋಗಲು ಬಿಡುವದಿಲ್ಲ. ಆದರು ನಮ್ಮ ಅಜ್ಜಿ ಹೊರಗೆ ಹೋಗುವದನ್ನು ಮಾತ್ರ ಬಿಟ್ಟಿಲ್ಲ.
ಕಣ್ಣು ಕಾಣದೆ ಇದ್ದರು, ನಮ್ಮ ಅಜ್ಜಿ ತುಂಬ ಗಡಿಬಿಡಿಯಿಂದ ತುಂಬ ಕೆಲಸಗಳನ್ನು ಮಾಡುತ್ತಾರೆ ಮತ್ತು ಎಲ್ಲರನ್ನು ತುಂಬ ಪ್ರೀತಿಯಿಂದ ಹಚ್ಚಿ ಕೊಳ್ಳುತ್ತಾರೆ. ಹೀಗೆ ಅಜ್ಜಿ ಪಕ್ಕದ ಮನೆ ಹುಡುಗಿ ಪ್ರೀತಿಯನ್ನು ತುಂಬ ಹಚ್ಚಿ ಕೊಂಡಿದ್ದರು. ಅನಂತರ ಕೆಲವು ದಿನಗಳಾದ ಮೇಲೆ ಪ್ರೀತಿಯ Engagement ಗೆ ನಮ್ಮ ಅಜ್ಜಿ ಯನ್ನು ಆಹ್ವಾನಿಸಿದ್ದರು. ಅದರೆ ಅಜ್ಜಿಯನ್ನು ನಾವು ಕಳುಹಿಸಲಿಲ್ಲ. Engagement ಆದ ಮೇಲೆ Engagement ಫೋಟೋ ಗಳನ್ನೂ ಪ್ರೀತಿ ನಮ್ಮ ಮನೆಗೆ ಕೊಟ್ಟು ಹೋದಳು. ಅಜ್ಜಿ ಫೋಟೋ ನೋಡಿ "ಏನೇ Engagement ದಿವಸ ಕರಡಿ ಜೊತೆ ಪೂಜೆ ಮಾಡಿಸ್ತಾರೆ ಏನು ಇಲ್ಲಿ ಕಡೆ ಜನ" ಎಂದು ಅಜ್ಜಿ ಅಮ್ಮನಿಗೆ ಕೇಳಿದಳು. ಆಗ ಅಮ್ಮ ಇದು ಕರಡಿ ಅಲ್ಲ ಪ್ರೀತಿಯ ಗಂಡ ಆಗುವವನು ಎಂದು ಹೇಳಿದಾಗ ಅಜ್ಜಿ ಹಾಗಾದರೆ ನಮ್ಮ ಸಂಜೀವನಿಗೆ ಏನು ಕಮ್ಮಿ ಎಂದು ಕೇಳಿದ್ದಳು. ಸಧ್ಯ ಪ್ರೀತಿ ಫೋಟೋ ತೋರಿಸಲು ಖುದ್ದಾಗಿ ಬಂದಿದ್ದರೆ ಗತಿ ಏನು ಎಂದು ಯೋಚಿಸಿದ್ದೆವು.
ಹೀಗೆ ಒಂದು ದಿವಸ ಬೆಂಗಳೂರಿನಲ್ಲಿ ನಮ್ಮ ಅಜ್ಜಿ ದಿನಸಿ ಸಾಮಾನು ತರಲು ಅಂಗಡಿಗೆ ಹೋದಾಗ. ಆ ಅಂಗಡಿಯವನಿಗೆ ತಿಳಿಯಲಿಲ್ಲ. ಹವಿಜ(ಕೊತಂಬರಿ ಬೀಜ) ಎಂದು ಎಷ್ಟು ಸರಿ ಹೇಳುವದು ಅಂತ ಅಂಗಡಿಯವನನ್ನು ಗದರಿಸುತ್ತಿದ್ದರು. ಮೊದಲೇ ಆ ಅಂಗಡಿ ಮಾಲೀಕ ಉಡುಪಿಯಾವ "ಮಂಡೆ ಬಿಸಿ ಮಹರಾಯ" ಈ ಅಜ್ಜಿಗೆ ಎಷ್ಟು ಹೇಳುವದು ಎಂದಾಗ. ಅಜ್ಜಿಯ ಪಿತ್ತ ನೆತ್ತಿಗೇರಿತ್ತು. ಅಜ್ಜಿಯನ್ನು ಹೇಗೋ ಸಂಧಾನ ಮಾಡಿ ನಾನು ಮನೆಗೆ ಕರೆತಂದಿದ್ದೆ.
ಪ್ರೀತಿಯ ಮದುವೆಯ ಕಾರ್ಯ ಮುಗಿದಿತ್ತು. ಅಜ್ಜಿಗೆ ಮದುವೆಗೆ ಹೋಗುವ ಮನಸ್ಸಿದ್ದರೂ ಅವಳನ್ನು ಕಳುಹಿಸಿರಲಿಲ್ಲ. ಒಂದು ದಿವಸ ಅತ್ತೆ ಮನೆಗೆ ಅಂತ ಬಂದಿದ್ದ ಪ್ರೀತಿಯ ಗಂಡ. ರಾತ್ರಿ ಕರೆಂಟ್ ಹೋಗಿತ್ತು. ಮೊದಲೇ ಕೃಷ್ಣವರ್ಣದ ಪ್ರೀತಿಯ ಗಂಡನನ್ನು ನೋಡದೆ ಹಿಂದಿನಿಂದ ಅಜ್ಜಿ ಡಿಕ್ಕಿ ಹೊಡೆದು ಬಿಟ್ಟರು. ಸಧ್ಯ ಅಜ್ಜಿಗೆ ಏನು ಆಗಿರಲಿಲ್ಲ. ನರಪೇತಲ ನಾರಾಯಣ ಪ್ರೀತಿಯ ಗಂಡ ಕೆಳಕ್ಕೆ ಬಿದಿದ್ದ.
ಅದಕ್ಕೆ ಅಜ್ಜಿ ಈಗ ಬೆಂಗಳೂರು ಸಹವಾಸನೆ ಬೇಡ ಅಂತ ಮತ್ತೆ ಧಾರವಾಡಕ್ಕೆ ಹೋಗಿದ್ದಾರೆ....ಪ್ರೀತಿಗಿಂತಲೂ ಚೆನ್ನಾಗಿರೋ ಹುಡುಗಿನ್ನೇ ತಂದು ನಿನಗೆ ಕಟ್ಟುತ್ತೇನೆ ಅಂದಿದ್ದಾರೆ ನಮ್ಮ ಸಂಜೀವನಿಗೆ. ಸಧ್ಯ ಕನ್ಯಾ ನೋಡಲು ಅಜ್ಜಿ ಸಂಜೆ ಹೋಗದಿರಲೆಂದು ದೇವರನ್ನು ಬೇಡುತ್ತೇನೆ.
No comments:
Post a Comment