Tuesday, November 23, 2010

ಡಾಕು ಮಂಗಲ್ ಸಿಂಗ್....

ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು ಬಿಟ್ಟಳು. ಎಲ್ಲಿದೆ ಜಿರಳೆ? ಎಂದಳು. ಅವಳಿಗಿಂತ ಜ್ಯಾಸ್ತಿ ಘಾಬರಿ ಆಗಿದ್ದು ನಾನು. ನಾನು ಕುರ್ಚಿಯಿಂದ ಟ್ಯಾಂಗ್ ಎಂದು ಜಿಗಿದೆ. ಕುರ್ಚಿ ಲಡಕ್ಕ್ ಎಂದು ಮುರಿದು, ಅದರ ಜೊತೆ ನಾನು ಬಿದ್ದೆ. ನಾನು ಅವಳಿಗೆ ಕೇಳಿದೆ ಎಲ್ಲಿದೆ ಜಿರಳೆ ಎಂದು. ನೀವು ತಾನೇ ಹಿಟ್ ಹುಡುಕುತ್ತಾ ಇರೋದು ಎಂದಳು. ನಾನು ತಲೆ ಜಜ್ಜಿಕೊಂಡು, ನಾನು ನೋಡುತ್ತಾ ಇರೋದು ನನ್ನ ಲೇಖನದ ಹಿಟ್ಸ್ ಗಳನ್ನ ಎಂದಾಗ, ಓ ಕರ್ಮ ನಿಮಗೆ ಒಂದು ಕೆಲಸ ಇಲ್ಲ ಎಂದರೆ, ಎಲ್ಲರೂ ಹಾಗೇನಾ? ಎಂದು ಬೈದು, ಮುಖ ತೊಳೆದುಕೊಂಡು ಬಂದು ಟೀ ಮಾಡಲು ಅನುವಾದಳು.

ನನಗು ಟೀ ಕೊಟ್ಟು, ತಾನು ಟೀ ತೆಗೆದುಕೊಂಡು ಹೊರಗೆ ಬಂದು ಪೇಪರ್ ಓದುತ್ತಾ ಕುಳಿತಳು. ನಾನು ಮತ್ತೆ ಕಂಪ್ಯೂಟರ್ ಪರದೆ ಮುಂದೆ ಟೀ ಹೀರುತ್ತ ಕುಳಿತೆ. ರೀ, ನೀವು ವಕ್ರತು೦ಡೋಕ್ತಿ ಓದಿದಿರಾ? ಎಂದು ಕೇಳಿದಳು. ನಾನು ದಿನಾಲೂ ಓದುತ್ತೇನೆ, ವಕ್ರತುಂಡ ಮತ್ತು ಶುಕ್ಲಾಂಬರ ಎರಡು ಓದುತ್ತೇನೆ. ಗಣೇಶನ ದಯೆ ಇಲ್ಲದೇ ಏನು ಸಾಧ್ಯ ಇಲ್ಲ ಎಂದು ಹೇಳಿದೆ. ರೀ, ನಾನು ಹೇಳಿದ್ದು ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದ ವಕ್ರತು೦ಡೋಕ್ತಿ. ಹಾ... ಹೇಳು ಏನು ಬರೆದಿದ್ದಾರೆ ಎಂದು ಕೇಳಿದೆ. "ಮನೆ ಕೆಲಸ ಮಾಡುವ ಗಂಡ ಎಂದಿಗೂ ಹೆಂಡತಿಯ ಅವಕೃಪೆಗೆ ಗುರಿಯಾಗಲಾರ" ನೀವು ನೋಡಿ ಬರೀ ಆ ಕಂಪ್ಯೂಟರ್ ಮುಂದೆ ಕುಳಿತು ಹಿಟ್ಸ್ ನೋಡುತ್ತಾ ಇದ್ದೀರಾ. ಮನೆಯಲ್ಲಿ ಗೋಧಿ ಹಿಟ್ಟು ಖಾಲಿಯಾಗಿ ಎರಡು ದಿನ ಆಯಿತು. ಒಮ್ಮೆಯಾದರು ಕೇಳಿದ್ದೀರಾ? ಎಂದು ಕೇಳಿದಳು. ಮತ್ತೆ ಇನ್ನೂ ಇದರ ಮುಂದೆ ಕುಳಿತರೆ ನನಗೆ ಹಿಟ್ಸ್ ಗ್ಯಾರಂಟೀ ಎಂದು ಯೋಚಿಸಿ ಆಫ್ ಮಾಡಿ ಹೊರಗೆ ಹೋಗಿ ಎರಡು ಕೆ ಜಿ ಗೋಧಿ ಹಿಟ್ಟು ತಂದು ಕೊಟ್ಟೆ.

ಮತ್ತೆ ಸುಮ್ಮನೇ ಇರಲಾರದೇ, ಟಿ ವಿ ಹಚ್ಚಿದೆ. ಟಿ ವಿ ಯಲ್ಲಿ ಬರುವ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಇದ್ದೆ. ನಾಚಿಕೆ ಆಗುವದಿಲ್ಲವಾ? ಪಕ್ಕದ ಮನೆ ಅಜ್ಜಿ ವಾಕಿಂಗ್ ಮಾಡುತ್ತಾ ಇದ್ದಾರೆ ಕಿಟಕಿ ಇಂದ ಕಾಣುತ್ತೆ ಎಂದಳು. ಅವರಿಗೆ ನಾನೆಲ್ಲಿ ಕರೆದೆ ನನ್ನ ಜೊತೆ ಡ್ಯಾನ್ಸ್ ಮಾಡೋಕೆ ಎಂದು ತಮಾಷೆ ಮಾಡಿದೆ.ತಲೆ ಜಜ್ಜಿಕೊಂಡು ಇದು ಒಂದು ಬಾಕಿ ಇತ್ತು ಎಂದು ಹೇಳಿ ಹೊರಟು ಹೋದಳು.

ನನಗೆ ಮತ್ತೆ ಟೀ ಕುಡಿಯಬೇಕು ಎಂದು ಅನ್ನಿಸಿದಾಗ, ಲೇ ಸ್ವಲ್ಪ ಟೀ ಇದ್ದರೆ ಕೊಡೆ ಅಡಿಗೆ ಮನೆಗೆ ಹೋಗಿ ಕೇಳಿದೆ. ಬರಿ ಕೆಟ್ಟ.. ಕೆಟ್ಟ.. ಚಟಗಳು ನಿಮಗೆ ಎಂದು ಬೈದಳು. ಮನುಷ್ಯನಿಗೆ ಚಟ ಇರಬೇಕು, ಇಲ್ಲ ಹಟ ಇರಬೇಕು. ಏನು ಇಲ್ಲಾ ಅಂದರೆ ಮುಂದೆ ಬರುವದಿಲ್ಲ. ನನ್ನ ಗೆಳೆಯ ಮಾಧವ ಏನು? ಹೇಳುತ್ತಾನೆ ಗೊತ್ತಾ, "ಚಟವೇ ಚಟುವಟಿಕೆಗಳ ಮೂಲ, ಚಟ ಇಲ್ಲದವನು ಚಟ್ಟಕ್ಕೆ ಸಮಾನ" ಎಂದು ಹೇಳಿದೆ. ನಿಮ್ಮ ಚಟ ಗೊತ್ತಿಲ್ಲವಾ?. ಒಂದು ಟೀ, ಮತ್ತೊಂದು ಆ ಕಂಪ್ಯೂಟರ್ ಎಂದಳು. ಆಡಿಕೊ... ಆಡಿಕೊ... ನಾನು ಮಾಡುತ್ತಾ ಇರೋದು ಪುಣ್ಯದ ಕೆಲಸ. ಒಬ್ಬರನ್ನು ಅಳಿಸೋದು ಸುಲಭ, ನಗಿಸುವದು ತುಂಬಾ ಕಷ್ಟ. ಬೇಕಾದರೆ ನಿನ್ನ ಈಗಲೇ ಅಳಿಸುತ್ತೇನೆ ಎಂದು ಒಂದು ತಲೆಗೆ ಹೊಡೆದೆ. ಕಿಟಾರನೇ ಚೀರಿ ... ಎಷ್ಟೇ ಆದರೂ ಡಾಕು, ಕಲ್ಲೂರ ಕಾಳ ಕ್ಷಮಿಸಿ ... ಕಲ್ಲೂರ ಕುಲ್ಕರ್ಣಿ ತಾನೇ? ಎಂದಳು. ಲೇ ನಮ್ಮ ಊರು ದ್ಯಾವನೂರು ಕಣೆ ಎಂದೆ.ತಡಿರಿ ಅತ್ತೆಗೆ ಕೇಳುತ್ತೇನೆ ಎಂದು ಫೋನ್ ಮಾಡಿದಳು. ಫೋನ್ ಇಟ್ಟು ಜೋರಾಗಿ ನಗ ಹತ್ತಿದಳು. ನಿಮ್ಮದು ದೇವನೂರು, ಸಧ್ಯ ದೆವ್ವನೂರು ಮಾಡಲಿಲ್ಲ ಎಂದು ಈ ದೇವನೂರು ಕುಲಕರ್ಣಿನ ಹೀಯಾಳಿಸಿದಳು.

ಕಡೆಗೆ ಟೀ ಕೊಟ್ಟು ಬೇಗ ಸ್ನಾನ ಮಾಡಿ ಆಫೀಸ್ ಲೇಟ್ ಆಗುತ್ತೆ ಎಂದಾಗ, ನಿನ್ನೆ ತಾನೇ ಬಾಸ್ ಹತ್ತಿರ ಸಹಸ್ರ ನಾಮಾವಳಿಗಳ ಸರಣಿ ನೆನಪು ಆಯಿತು. ಬೇಗನೆ ಟೀ ಕುಡಿದು ಸ್ನಾನಕ್ಕೆ ಹೋದೆ. ದಾಡಿ ಮಾಡಿ ಕೊಳ್ಳದಿದ್ದರೆ, ಬಾಸ್ ಬೇರೆ ಮಾಡಿಕೊಳ್ಳಲು ನಿನಗೇನೂ ಧಾಡಿ ಎಂದು ಬೈಯುತ್ತಾನೆ. ಟೈಮ್ ಬೇರೆ ತುಂಬಾ ಆಗಿತ್ತು. ಕಡೆಗೆ ನಿನ್ನೆ ನೋಡಿದ, ರಜನೀಕಾಂತ್ ಶಿವಾಜಿ ಸಿನೆಮಾ ನೆನಪು ಆಗಿ, ಇದ್ದ ಎರಡು ಸಲಿಕೆ ತೆಗೆದುಕೊಂಡು ಬೇಗ.. ಬೇಗ.. ಕೆರೆದು ಕೊಳ್ಳಲು ಅನುವಾದೆ. ಅಷ್ಟರಲ್ಲೇ ಎಡಗಡೆ ಚರ್ಮ ಕಿತ್ತು ರಕ್ತ ಬರಲು ಶುರು ಆಗಿತ್ತು. ಮುಂದೆ ಸಾವಕಾಶವಾಗಿ ಮಾಡುತ್ತಾ ಇದ್ದಾಗ, ಮತ್ತೊಂದು ಅನಾಹುತ ಆಯಿತು. ಮೀಸೆ ಕಟ್ ಆಗಿತ್ತು. ಮೀಸೆ ಪೂರ್ತಿ ತೆಗೆದು ಬಿಟ್ಟೆ. ಮೀಸೆ ಇದ್ದ ಮತ್ತು ಕೆತ್ತಿದ ಜಾಗ ಮುಚ್ಚಿ ಕೊಂಡು ಬಂದೆ. ಏನು? ಆಯಿತು ಕೈ ತೆಗೆಯಿರಿ ಎಂದಳು. ಕೈ ತೆಗೆದ ಮೇಲೆ ಜೋರಾಗಿ ನಗಹತ್ತಿದಳು. ಕಡೆಗೆ ಪೂಜೆ ಮಾಡಿ ಆಫೀಸ್ ಹೋಗಲು ಅನುವಾದಾಗ, ನನ್ನ ಮಡದಿ ನನ್ನ ಮುಖ ನೋಡಿ "ಡಾಕು ಮಂಗಲ್ ಸಿಂಗ್" ಹಾಗೆ ಕಾಣಿಸುತ್ತಾ ಇದ್ದೀರ ಎಂದು ಕುಹಕವಾಡಿದಳು. ಆದರೆ ಮೀಸೆ ಇರಬೇಕಿತ್ತು. ನಾನು ಕನ್ನಡಿ ಮುಂದೆ ಹೋಗಿ ನಿಂತೆ. ಈಗಲೇ ಚೆನ್ನಾಗಿ ಕಾಣಿಸುತ್ತಾ ಇದ್ದೇನೆ. ಸ್ವಲ್ಪ ಯಂಗ್ ಅನ್ನಿಸುತ್ತೇನೆ ಅಲ್ಲವಾ? ಎಂದೆ. ನಾನು ಅದಕ್ಕೆ ಮೀಸೆ ಇರಬೇಕಿತ್ತು ಎಂದಿದ್ದು ಎಂದಳು. ಮಡದಿ ಡಾಕು ಎಂದಿದ್ದು ಪರ್ವಾಗಿಲ್ಲ, ಎಷ್ಟೇ ಆದರೂ ನಾನು ಗೋಪಾಲ್ ಅಲ್ಲವೇ, ಪರಮಾತ್ಮ ಗೋಪಾಲ ಕೃಷ್ಣ ಜೈಲಿನಲ್ಲೇ ಜನ್ಮವೆತ್ತಿರಬಹುದು. ನಾನು ಜೈಲಿಗೆ ಹೋಗಿ ಬಂದಿರುವೆ ಎಂದು ಬಾಸ್ ಗೆ ಹೆದರಿಸಬಹುದು ಎಂದು ಯೋಚಿಸಿ, ಇನ್ನೂ ಸ್ವಲ್ಪ ಲೇಟ್ ಆಗಿ ಆಫೀಸ್ ಹೊರಟು ನಿಂತೆ.

ಆಫೀಸ್ ಹೋಗುತ್ತಾ ಬೈಕ್ ನಲ್ಲಿ ಏನಾದರೂ ಬರಿ ಬೇಕು ಎಂದು ಯೋಚಿಸುತ್ತಾ ಇದ್ದಾಗ, ನಿನ್ನೆ ಮಡದಿ ಹೇಳಿದ ಕಿಕ್ಕಿಂಗ್ ಕಾಲಂ ಎಂದು ಬರೆಯಿರಿ, ಎಂದು ಹೇಳಿದ್ದು ನೆನಪಾಯಿತು. ಸರಿ ಅನ್ನಿಸಿತು ಕಿಕ್ಕಿಂಗ್ ಕಾಲಂ ಎಂದರೆ ಕಿಕ್ಕಿಂಗ್ + ಕಾಲು + ಅಮ್ಮsss...... ಅಲ್ಲವೇ?.

2 comments: