Wednesday, November 17, 2010

ತರ್ಲೆ ಮಂ(ಗ)ಜನ ತಮಾಷೆಗಳು ...

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.

ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.
ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.
ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.
ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.
ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.
ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.
ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.
ಈಗ ಮಂಜನ ತಂಗಿ ಶಾಂತಲಾ ಕೋಪ ತಾರಕಕ್ಕೆ ಏರಿತ್ತು. ಸುಮ್ಮನೇ ಯಾಕೆ ಕಾಡುತ್ತೀ ಮಗೂನಾ ಎಂದಳು. ಸಂಕೇತನ ಅಜ್ಜಿ, ಮಂಜನ ಹೆಂಡತಿ ಸೇರಿ ಮಂಗಳಾರತಿ ಮಾಡಿದರು. ಅಮ್ಮ, ನೀನು ಕೋಪ ಮಾಡಿಕೊಳ್ಳ ಬೇಡ ನಿನಗೆ ಮೊದಲೇ ಬ್ರೆಡ್ ಸ್ಪೆಶಲ್ ಎಂದ. ಹಾಗಂದರೆ ಎಂದು ನಾನು ಕೇಳಿದೆ, ಅದಕ್ಕೆ ಮಂಜ ಅಮ್ಮ ಬ್ಲಡ್ ಪ್ರೆಶರ್ ಗೆ ಬ್ರೆಡ್ ಪ್ರೆಶರ್ ಅನ್ನುತ್ತಾರೆ ಎಂದ. ನಾನು ಅದನ್ನು ಬ್ರೆಡ್ ಸ್ಪೆಶಲ್ ಮಾಡಿರುವೆ ಎಂದ. ಆಯಿತು ಬಿಡಪ್ಪ ನೀನು ಜಾಣ ಎಂದು ಮಂಜನ ಅಮ್ಮ ಕೋಪ ಮಾಡಿಕೊಂಡರು. ಅಷ್ಟರಲ್ಲಿ ಮಂಜನ ಮಡದಿ ಕೆಂಗಣ್ಣಿನಿಂದ ಮಂಜನನ್ನು ನೋಡಿದಳು. ಹೆಂಡತಿಗೆ ಹೆದರಿದರು ಕಾಡುವುದನ್ನು ಮಾತ್ರ ಬಿಡಲಿಲ್ಲ. ನಾವು ಹೋಗಲಿ ಬಿಡಪ್ಪ ಸುಮ್ಮನೇ ಎಂದರು ಕೇಳಬೇಕಲ್ಲ ಆಸಾಮಿ.
ಏ ಸುಮ್ಮನಿರು ನೀನು, ನಾನು ಕೇಳುತ್ತಾ ಇರೋದು ನನ್ನ ಅಳಿಯನಿಗೆ ಎಂದ. ಪುಟ್ಟ ನಿನಗೆ ಚ್ಯಾಕ್ಲೇಟ್ ಕೊಡಸುತ್ತೇನೆ ಎಂದ.
ಮತ್ತೆ ಶುರು ಹಚ್ಚಿಕೊಂಡ ಮತ್ತೆ ಏನೇನು ಹೇಳಿದ್ದಾರೆ ಎಂದ.
ಜೋನಿ ಜೋನಿ ಎಸ್ ಪಾಪ.. ಈಟಿಂಗ್ ಶುಗರ್ ನೋ ಪಾಪ.. ಟೆಲ್ಲಿಂಗ್ ಲೈ ನೋ ಪಾಪ.. ಓಪನ್ ಯುವರ್ ಮೌತ್ ಹಾ ಹಾ ಹಾ ಎಂದ.
ಸುಳ್ಳು ಹೇಳುವ ಕಲೆ ಎಷ್ಟು ಚಂದ ಹೇಳಿಕೊಟ್ಟಿದ್ದಾರೆ ಕಣೋ ಎಂದು ತಲೆ ಚಚ್ಚಿಕೊಂಡ.
ಮತ್ತೆ ಸಂಕೇತ ರೇನ್ ರೇನ್ ಗೋ ಅವೇ ಲಿಟ್ಲ್ ಜಾನೀ ವಾಂಟ್ಸ್ ಟು ಪ್ಲೇ ಎಂದು ಹೇಳಿದ.
ಲೇ ಇದನ್ನು ಯಾರಾದರೂ ಬರಗಾಲ ಪ್ರದೇಶದ ರೈತರು ಕೇಳಿದರೆ ನಿನಗೆ ನಿಮ್ಮ ಮಿಸ್ಗೆ ಸೇರಿ ಒದಿತಾರೆ.

ಮತ್ತೆ ಮಂಜ ಒಂದಿಷ್ಟು ಕನ್ನಡದ ರೈಮ್ಸ್ ಆನೆ ಬಂತೊಂದಾನೆ, ನಾಯಿಮರಿ ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇರುವೆ-ಇರುವೆ ಎಲ್ಲಿರುವೆಗಳಾದ ಎಲ್ಲವುಗಳನ್ನೂ ಸಂಕೇತಗೆ ಹೇಳಿದ. ಅದೆಲ್ಲವೂ ಕೇಳಿದ ಮೇಲೆ ಸಂಕೇತ ಮಂಜನಿಗೆ, ಮಾಮಾ ನಿನಗೆ ಯಾರು ಹೇಳಿದರು ಇವನೆಲ್ಲಾ ಎಂದು ಕೇಳಿದ. ಅದಕ್ಕೆ ಮಂಜ ನನ್ನ ಮಿಸ್ ಎಂದು ತನ್ನ ಮಡದಿಯನ್ನು ತೋರಿಸಿದ. ಅವಳು ಎಮ್ಮೆ(M.A) ಗೊತ್ತಾ ಎಂದ. ಯಾರಿಗೂ ತಿಳಿಯಲಿಲ್ಲ ಸಧ್ಯ.

ಮತ್ತೆ ಅವನಿಗೆ ತಪ್ಪು ತಪ್ಪಾಗಿ ಏ ಫಾರ್ ಅವರೆಕಾಯಿ , ಬೀ ಫಾರ್ ಬದಾನೆ ಕಾಯಿ, ಸೀ ಫಾರ್ ಚವಳಿಕಾಯಿ ಎಂದೆಲ್ಲ ಹೇಳುತ್ತಿದ್ದರೆ, ಎಲ್ಲರೂ ನಗುತ್ತಿದ್ದರು. ಅವನ ತಂಗಿ ತುಂಬಾ ಕೋಪ ಮಾಡಿಕೊಂಡಿದ್ದಳು. ನಾಳೆ ಪರೀಕ್ಷೆಯಲ್ಲಿ ಇದನ್ನೇ ಹೇಳುತ್ತಾನೆ ಎಂದು.ಎಲ್ಲರೂ ಊಟ ಮುಗಿಸಿದೆವು. ಊಟ ಮುಗಿದ ಮೇಲೆ ಸೀರಿಯಲ್ ಗಳ ಬಗ್ಗೆ ಚರ್ಚೆ ಶುರು ಆಯಿತು. ನಾನು ಕೌನ್ ಬನೇಗಾ ಕರೋಡ ಪತಿಯಲ್ಲಿ ಕೋಟಿ ಸೋತ ಮನುಷ್ಯನ ಬಗ್ಗೆ ಅನುಕಂಪದ ಮಾತು ಆಡಿದೆ. ಅದಕ್ಕೆ ನಮ್ಮ ಮಂಜ ಸರಿಯಾಗಿ ಮಾಡಿದ್ದಾನೆ ಗಣಪತಿ ಅವನಿಗೆ ಎಂದ. ಪಾಪ ಪ್ರತಿ ವರ್ಷ ಗಣಪತಿ ಇಟ್ಟು, ಕಡೆ ದಿನ ಅವನ ಮುಂದೆ ಡ್ಯಾನ್ಸ್ ಮಾಡುತ್ತಾ ಹೋಗಿ ನೀರಿನಲ್ಲಿ ಮುಳುಗಿಸುತ್ತಾನೆ, ಈಗ ಡ್ಯಾನ್ಸ್ ಮಾಡಿ ಮುಳುಗಿಸುವುದು ಗಣಪತಿಯ ಸರದಿ ಎಂದ. ಎಲ್ಲರೂ ಜೋರಾಗಿ ನಕ್ಕೆವು.

ಮಂಜನ ಹೆಂಡತಿ ನೋಡಿ ನಿಮ್ಮ ಗೆಳೆಯ ಗೋಪಾಲ್ ತಮ್ಮ ಹೆಂಡತಿಯ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಪ್ರೀತಿಯಿಂದ ಬರೀತಾ ಇರುತ್ತಾರೆ ಎಂದಳು. ನೀವು ಇದ್ದೀರಾ? ಯಾವುದಕ್ಕೂ ಉಪಯೋಗ ಇಲ್ಲ ಎಂದಳು. ಲೇ ನಾನು ಏನು? ಎಂದು ತಿಳಿದಿದ್ದೀಯಾ ನಾನು ಒಂದು ಸೀರಿಯಲ್ ತೇಗೆಯಬೇಕು ಎಂದು ಇದ್ದೇನೆ. ಸೀರಿಯಲ್ ಪೂರ್ತಿ ನಮ್ಮಿಬ್ಬರ ಬಗ್ಗೆ ಇರುತ್ತೆ ಗೊತ್ತಾ ಎಂದ. ಅದರ ಹೆಸರು ಏನು? ಗೊತ್ತಾ "ಸಂಸಾರಿ ಕ್ರೈಮ್ ಸ್ಟೋರಿ" ಎಂದ. ಅದಕ್ಕೆ ನಾವೆಲ್ಲರೂ ನಕ್ಕೆವು. ಥೇಟ ವಿಲನ್ ತರಹ ನಗುತ್ತೀರಿ ಎಂದಳು ಮಂಜನ ಮಡದಿ ಸಾವಿತ್ರಿ. ಅದಕ್ಕೆ ಮಂಜ ಕೋಪದ ಮುಖದಿಂದ ಇದ್ದ ಅವಳಿಗೆ "ಹಂಗ್ಯಾಕೆ ಮಾಡಿ ಮಾರಿ, ಕಾಮನಕಟ್ಟಿ ದಾರಿ" ಎಂದ. ಮಂಜನ ಮಡದಿ ತುಂಬಾ ಕೋಪ ಮಾಡಿಕೊಂಡು, ನೀವು ಇನ್ನೂ ಸ್ವಲ್ಪ ದಿವಸ ಹೀಗೆ ಆಡುತ್ತಿದ್ದರೆ, ನಾನು ನಿಜವಾಗಿಯೂ ಮನೆ ದಾರಿ ಹಿಡಿಯುತ್ತೇನೆ ಎಂದಾಗ ಮಂಜ ಸುಮ್ಮನಾಗಿದ್ದ. ಸಂಜೆಯವರೆಗೆ ಮಂಜನ ಮನೆಯಲ್ಲಿ ಇದ್ದು ಕಾಫೀ ಮುಗಿಸಿ ಮನೆಗೆ ಬಂದೆವು.

2 comments:

  1. ನಕ್ಕು ನಕ್ಕು ಸಾಕಾಯ್ತು. ತುಂಬಾ ಹಾಸ್ಯಮಯ ಲೇಖನ.

    ReplyDelete
  2. ನಿಮ್ಮ ಅಭಿಮಾನದ ಮಾತುಗಳಿಗೆ ನಾನು ಸದಾ ಚಿರಋಣಿ. ಧನ್ಯವಾದಗಳು ಮತ್ತು ವಂದನೆಗಳು.:)

    ReplyDelete