Wednesday, November 10, 2010

ಹೆಂಡತಿ ಹೆಸರು ಬಸವ್ವ ....

ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್ನ ಮಡದಿ ರೀ ಅದರಲ್ಲಿ ಇರುವೆ ಇತ್ತು ಹಾಗೆ ಹಾಕಿದಿರಾ? ಎಂದಳು. ಇರಲಿ ಬಿಡೆ ಕಣ್ಣು ಸ್ವಚ್ಛ ಆಗುತ್ತೆ ಎಂದೆ. ಓss.. ಹಾಗಾ, ಟೀ ಕುಡಿದ ಮೇಲೆ, ಇರುವೆ ಕಣ್ಣು ಸ್ವಚ್ಛ ಆಗುತ್ತಾ?. ಅದಕ್ಕೆ ಇರಬೇಕು ನಾನು ಅದನ್ನು ಓಡಿಸಿದರು, ಅಲ್ಲೇ ಸಕ್ಕರೆ ಸವಿಯುತ್ತಾ ಇತ್ತು. ಲೇ ನಾನು ಹೇಳಿದ್ದು ನಮ್ಮ ಕಣ್ಣು ಸ್ವಚ್ಛ ಆಗುತ್ತೆ ಅಂತ ಎಂದೆ. ಅದು ಸರಿ ಅನ್ನಿ, ನಿಮ್ಮ ಕಣ್ಣು ಸ್ವಚ್ಛ ಆಗಬೇಕು. ನೀವು ಇರುವೆ ಹಾಕಿಕೊಂಡು ಟೀ ಮಾಡಿಕೊಳ್ಳಿ. ನಾನು ಬೇರೆ ಟೀ ಮಾಡಿಕೊಳ್ಳುತ್ತೇನೆ ಎಂದಳು. ಲೇ ನಾನು ಕೂಡ ಪ್ಯೂರ್ ವೆಜ್ ಎಂದೆ. ಪ್ಯೂರ್ ಮತ್ತು ಇಮ್‌ಪ್ಯೂರ್ ವೆಜ್ ಕೂಡ ಇರುತ್ತಾ? ಎಂದು ಕಿಚಾಯಿಸಿದಳು. ಕ್ರೀಮಿ ಕಿಟ ತಿನ್ನೋ ಕೋಳಿ ಮತ್ತು ಬರಿ ಸಸ್ಯ ತಿಂದು ಇರುವ ಕೋಳಿ ವ್ಯತ್ಯಾಸ ಇಲ್ಲವಾ? ಎಂದೆ. ರೀ ಏನು? ಇದು ಹಬ್ಬದ ದಿವಸ ಎಂದು ಕೋಪಮಾಡಿಕೊಂಡಳು. ಮತ್ತೆ ಇರುವೆ ಚೆಲ್ಲಿ ಬೇರೆ ಟೀ ಮಾಡಿದೆ.

ಟೀ ಕುಡಿಯುತ್ತಾ ಇದೇನು? ಸಕ್ಕರೆ ಪಾಕದ ಹಾಗೆ ಇದೆ, ಹಬ್ಬದ ಉಂಡೆಗೆ ಬೇಕಾಗುತ್ತೆ ಹಾಗೆ ಇಡಿ ಎಂದು ಕಿಚಾಯಿಸಿದಳು. ಲೇ ಎಷ್ಟು ಚೆನ್ನಾಗಿದೆ ಸುಮ್ಮನೇ ಏನೇನೋ ಹೇಳಬೇಡ, ನನಗೆ ಇನ್ನೂ ಸಕ್ಕರೆ ಕಾಯಿಲೆ ಬಂದಿಲ್ಲ ಎಂದೆ. ಸಮಾಧಾನಿಸಿ, ಇನ್ನೂ ಸ್ವಲ್ಪ ದಿವಸ ಮಾತ್ರ ಎಂಬ ಉತ್ತರ ಬಂತು. ಹಾಗಾದರೆ ಇನ್ನೂ ಮುಂದೆ ನೀವೇ ಟೀ ಮಾಡಿ, ಆದರೆ ಸ್ವಲ್ಪ ಕಡಿಮೆ ಸಕ್ಕರೆ ಹಾಕಿ ಎಂದಳು. ಹಬ್ಬಕ್ಕೆ ಏನು? ಅಡಿಗೆ ಮಾಡಲಿ ಎಂಬ ಅರ್ಜಿ ಗುಜರಾಯಿಸಿದಳು. ಏನಾದರೂ ಮಾಡು ಎಂದೆ. ಅವಳು ಪ್ರತಿ ಬಾರಿ ಕೇಳಿದಾಗಲು ನನ್ನ ಉತ್ತರ ಇದೆ ಇರುತ್ತೆ ಎಂದು ಗೊತ್ತಿದ್ದರು, ಅವಳು ಕೇಳುವುದನ್ನು ಬಿಟ್ಟಿಲ್ಲ. ನಿಮ್ಮದು ಬರೀ ಇದೆ ಆಯಿತು ಎಂದು ಗೋಧಿ ಕುಟ್ಟಿದ ಪಾಯಸ ಮಾಡುತ್ತೇನೆ ಎಂದು ಹೇಳಿ ಅಡಿಗಿಮನೆಗೆ ಹೊರಟು ಹೋದಳು. ಅವಳನ್ನು ಹಿಂಬಾಲಿಸಿ, ಲೇ ಪಾಯಸ ಬೇಡ ಕಣೆ ಎಂದೆ. ಅದು ನಿಮಗೆ ಅಲ್ಲ ಅದು, ದೇವರಿಗೆ ಸುಮ್ಮನಿರಿ ಎಂದಾಗ ಸಮಾಧಾನವಾಯಿತು. ಮತ್ತೆ ವಡೆ ಎಂದೆ. ಒದೆ ಮತ್ತು ಕಡಬು ಎರಡು ಇದೆ.ನಗುತ್ತಾ ಈಗಲೇ ಬೇಕಾ? ಎಂದಳು. ನಿರಾಸೆಯ ಅಲೆಯಲ್ಲಿ ತೇಲುತ್ತ ಹೊರಗಡೆ ಬಂದು ಕುಳಿತೆ.

ಮುಂಜಾನೆಯ ಆರತಿ, ಸ್ನಾನ , ಪೂಜೆ ಮತ್ತು ಮಂಗಳಾರತಿ ಆದ ಮೇಲೆ ಊಟಕ್ಕೆ ಕುಳಿತಾಗಲೇ ನನಗೆ ಗೊತ್ತಾಗಿದ್ದು, ಆ ಪಾಯಸ ನನಗೆ ಮಾಡಿದ್ದಾಳೆ ಎಂದು. ಮತ್ತೆ ಮುಂಜಾನೆ ದೇವರಿಗೆ ಎಂದೆ. ನೀವು ನನಗೆ ಪತಿ ದೇವರು ತಾನೇ ಎಂದು ಗಹ ಗಹಸಿ ನಗಹತ್ತಿದಳು. ನಾನು ರಾತ್ರಿ ಹೊಟೆಲ್ ಗೆ ಊಟಕ್ಕೆ ಹೋಗುವುದಾದರೆ ಮಾತ್ರ ತಿನ್ನುತ್ತೇನೆ ಎಂದೆ. ಆಯಿತು ಎಂದು ಹೇಳಿದ ಮೇಲೆ ಊಟ ಮಾಡಿದೆ.

ರಾತ್ರಿ ಊಟಕ್ಕೆ ಹೊರಗಡೆ ಹೋಗಿದ್ದೆವು. ಆ ಹೊಟೇಲಿನಲ್ಲಿ ಸರ್ವ್ ಮಾಡಲು ಸಹ ಹುಡುಗಿಯರು ಇದ್ದರು ಅದನ್ನು ನೋಡಿ ನನ್ನ ಮಡದಿ ಇದಕ್ಕೆ ನೀವು ಹೊರಗಡೆ ಊಟಕ್ಕೆ ಹೋಗೋಣ ಎಂದಿದ್ದಾ ಎಂದಳು. ನಾನು ಒಂದು ಸರ್ವ್ ಮಾಡುವ ಹುಡುಗಿಯ ಕಡೆ ಹೋಗಿ ವಾಶ್ ರೂಮ್ ಎಲ್ಲಿದೆ ಎಂದು ಕೇಳಲು ಹೋದೆ. ಅಷ್ಟರಲ್ಲಿ ಅವಳು ಒಬ್ಬ ಆಸಾಮಿಗೆ ಕಪಾಳಕ್ಕೆ ಬಿಟ್ಟು, ತಾನೇ ಅಳುತ್ತಾ ನಿಂತಿದ್ದಳು. ಇದೆಲ್ಲವೂ ಅರೆ ಕ್ಷಣದಲ್ಲಿ ನಡೆದು ಹೋಗಿತ್ತು. ನನಗೆ ಏನು ತೋಚದಾಗಿತ್ತು. ನಾನೇ ಅಲ್ಲೇ ಇದ್ದಿದ್ದರಿಂದ ನನ್ನ ಹೆಂಡತಿಗೆ ನನ್ನ ಮೇಲೇನೆ ಅನುಮಾನ. ಎಲ್ಲರೂ ನಮ್ಮ ಮುಂದೆ ಜಮಾಯಿಸಿದ್ದರು. ಆದರೆ ಯಾರು,ಯಾರಿಗೆ ಹೊಡೆದರೂ ಎಂದು ಸಹ ತಿಳಿದಿರಲಿಲ್ಲ. ಕೆಲ ಜನ ನಾನೇ ಹೊಡಿಸಿ ಕೊಂಡವನು ಎಂದು ತಿಳಿದಿದ್ದರು. ಕಡೆಗೆ ನಾನೇ ಆ ಹುಡುಗಿಗೆ ಏನು ಆಯಿತಮ್ಮಾ? ಎಂದು ಕೇಳಿದೆ. ನಾನು ಅವನಿಗೆ ಏನು? ಮಾಡಿದೆ ಎಂದು ಕೇಳಿದೆ. ನಾನು... ನಾನು.... ಏನು?. ಎಂದ. ಕನ್ನಡ ಬರುವುದಿಲ್ಲ ಎಂದು ಸನ್ನೆ ಮಾಡಿ ಹೇಳಿದ. ಆಗ ಆ ಹುಡುಗಿ ಅಳುತ್ತಾ ಇದ್ದವಳು ಜೋರಾಗಿ ನಗುತ್ತಾ ಹೊರಟು ಹೋದಳು. ಆಗ ನಾನು ಅವನಿಗೆ ಹಿಂದಿಯಲ್ಲಿ ಏನು? ಕೇಳಿದೆ ಎಂದು. ಅವನು ಮೈ ಮೈ "ನಮಕ್ ಪೂಚಾ" ಎಂದ. ಕನ್ನಡದಲ್ಲಿ ಹೇಳು ಎಂದಾಗ "ಉಪ್ಪಾ ಬೇಕು" ಎಂದ ನೆರೆದವರೆಲ್ಲ ಜೋರಾಗಿ ನಗಹತ್ತಿದರು.

ನನಗೆ ಅವನ ಮುಖ ಎಲ್ಲಿಯೋ ನೋಡಿದ ಹಾಗೆ ಅನ್ನಿಸಿತು. ಹೀಗಾಗಿ ಅವನ ಹಿಂದೆ ಹೋದೆ. ನಿಮ್ಮನ್ನ ಎಲ್ಲಿಯೋ ನೋಡಿದ್ದೇನೆ ಎಂದು ಇಂಗ್ಲೀಶ್ ನಲ್ಲಿ ಕೇಳಿದೆ. ಮತ್ತೆ ಕೆಲ ಸಮಯ ಯೋಚಿಸಿದ ಮೇಲೆ ತಿಳಿಯಿತು ಅವನು ವಿಲಾಸ್ ಎಂದು. ವಿಲಾಸನಿಗೆ ವಿಳಾಸ ತಿಳಿಸಿದ ಮೇಲೆ ಅವನು ಬೇರೆ ಊರಿಗೆ ಹೊರಟು ಹೋಗಿದ್ದ. ಯಾಕೋ? ಮಗನೆ ನಿನಗೆ ಕನ್ನಡ ಬರಲ್ಲವಾ? ಎಂದೆ. ಬರುತ್ತೆ, ಕಣೋ ಆದರೆ ನಮ್ಮ ಕಡೆ ಉಪ್ಪಿಗೆ ಉಪ್ಪಾ ಎಂದೆ ಹೇಳುತ್ತಾರೆ ಅದಕ್ಕೆ ಎಂದೆ ಅಂದ. ಬೇರೆ ಯಾರು ಅದಕ್ಕೆ ಕ್ಯಾತೆ ತೆಗೆದಿರಲಿಲ್ಲ ಎಂದ. ಈ ಹುಡುಗಿ ಬಹುಶಃ ಧಾರವಾಡದವಳು ಇರಬೇಕು ಎಂದೆ. ಮತ್ತೆ ಅವನನ್ನು ಮನೆಗೆ ಆಹ್ವಾನಿಸಿದೆವು. ಚಿಕ್ಕವಾನಿದ್ದಾಗ ವಿಲಾಸ್ ನಮಗೆ ಹೊಡೆದು ಓಡಿ ಹೋಗಿ ಮಾಳಿಗೆ ಮೇಲೆ ನಿಂತು, "ಎಷ್ಟು ಹೊಡೀತಿ ಹೊಡಿ, ಹೊಲಕ್ಕ ಹೋಗೋಣ ನಡಿ, ಬೆಕ್ಕು ಬಂತು ಉಶ್ಶಾ, ನಿನ್ನ ಹೆಂಡತಿ ಹೆಸರ ಬಸವ್ವ" ಎಂದು ಅಣಕಿಸುತ್ತಿದ್ದ. ನಾವೆಲ್ಲರೂ ಊಟ ಆದ ಮೇಲೆ ಕ್ಷೇಮ ಸಮಾಚಾರ ವಿಚಾರಿಸಿದೆವು. ಮತ್ತೆ ಅವನು ಮದುವೆ ಇನ್ನೂ ಆಗಿಲ್ಲ ಎಂದಾಗ, ನಾನು ಆ ಹೋಟೆಲ್ ಹುಡುಗಿ ಹೆಸರು ಬಸವ್ವ ನಾನು ಮಾತನಾಡಾಲೆ ಎಂದೆ. ಎಲ್ಲರೂ ನಕ್ಕೆವು ಮತ್ತೆ ವಿಲಾಸ್ ತನ್ನ ಮನೆ ವಿಳಾಸ ತಿಳಿಸಿ ಮನೆ ಹಾದಿ ಹಿಡಿದ.

4 comments:

  1. ದಿನನಿತ್ಯದ ಮಾತುಗಳಲ್ಲಿ ಹಾಸ್ಯ ಹುಡುಕಿಡುವ ತಮ್ಮ ಪರಿಗೆ ಮಾರುಹೋದೆ. ಚೆ೦ದದ ಪ್ರಸ೦ಗ.

    ReplyDelete
  2. ಧನ್ಯವಾದಗಳು ಮತ್ತು ವಂದನೆಗಳು ಸರ್ :-)ನಿಮ್ಮ ಅಭಿಮಾನಕ್ಕೆ ನಾನು ಚಿರ-ಋಣಿ

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು Girish.

    ReplyDelete