Wednesday, November 3, 2010

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.

ನನ್ನ ಹೆಂಡತಿಗೆ ಹೇಳಿದೆ, ನಾಳೆ ಸಂಡೆ. ನಾನು ವಾಕಿಂಗ್ ಹೋಗಬೇಕು ಬೇಗ ಎಬ್ಬಿಸು ಎಂದು. ಮನೆಯಲ್ಲಿ ಇರುವ ಎಲ್ಲಾ ಘಡಿಯಾರಗಳಿಗೂ ಅಲಾರಾಂ ಇಡಲು ಅನುವಾದೆ. ಮಡದಿ ನನಗೆ ಬೈದು ನಾನು ಎಬ್ಬಿಸುತ್ತೇನೆ, ಆದರೆ ಅಲಾರಾಂ ಇಡಬೇಡಿ ನನಗು ಒಂದು ದಿವಸ ರೆಸ್ಟ್ ಬೇಡವೇ ಎಂದಳು. ತುಂಬಾ ಪ್ರಯತ್ನ ಪಟ್ಟು ಬೇಗ 6.50 ಕ್ಕೆ ಎದ್ದೆ. ಎದ್ದು ವಾಕಿಂಗ್ ಹೊರಡುವಾಗ, ಒಂದು ಕಪ್ಪು ಬೆಕ್ಕು ಅಡ್ಡ ವಾಕಿಂಗ್ ಮಾಡಿ ಹೋಯಿತು. ಬೆಕ್ಕು ಅಡ್ಡ ಬಂದರೆ ಕೆಲಸ ಕೆಡುತ್ತೆ ಎಂದು ಮತ್ತೆ ಹತ್ತು ನಿಮಿಷ ಬಿಟ್ಟು ಹೋದೆ. ಎದುರಿಗೆ ಟೀ ಅಂಗಡಿ ಕಾಣಿಸಿತು. ಟೀ ಕುಡಿದು ಮತ್ತೆ ಒಂದು ಘಂಟೆ ವಾಕಿಂಗ್ ಮಾಡಿದೆ. ನನ್ನಷ್ಟಕ್ಕೆ ನಾನೇ ವಾಹ್ "ಕಿಂಗ್" ಅಂದುಕೊಂಡು ಹೊಟ್ಟೆ ಕಡಿಮೆ ಆಗಿದೆಯಾ ಎಂದು ಹೊಟ್ಟೆ ನೋಡುತ್ತಾ ಬರುವ ಸಮಯದಲ್ಲಿ, ಎದುರಿಗೆ ಒಂದು ಆಕಳು ಕರುಗೆ ಡಿಕ್ಕಿ ಹೊಡೆದಿದ್ದೆ. ಸರ್ ಸಾವಕಾಶ ಎಂಬ ಶಬ್ದ ಕೇಳಿಸಿತು. ಅದೇ ಎದಿರು ಮನೆ ಪ್ರಸನ್ನ. ಕ್ಷೇಮ ಸಮಾಚಾರ ಆದ ಮೇಲೆ ತಾವು ಪ್ರತಿ ಸಂಡೆ ಕ್ರಿಕೆಟ್ ಆಡಲು ಹೋಗುತ್ತೇವೆ ಎಂದು ಹೇಳಿದರು. ಸರ್ ನಾನು ಬರುತ್ತೇನೆ ಎಂದು ಹೇಳಿದೆ. ಅವಶ್ಯವಾಗಿ ಬನ್ನಿ ಎಂಬ ಅಭಯವನ್ನಿತ್ತರು. ನಾನು ತುಂಬಾ ಖುಷಿಯಾದೆ.

ಮುಂದಿನ ಸಂಡೆ ನನ್ನ ಬೆಳಗಿನ ಜಾವದ ಕನಸು ಭಗ್ನ ಆದರೂ ಪರವಾಗಿಲ್ಲ ಎಂದು ಬೇಗನೆ ೬ ಘಂಟೆಗೆ ಎದ್ದೆ. ಬೇಗನೆ ಎದ್ದು ನಾನೇ ಟೀ ಮಾಡಿ ಕುಡಿದು ಎಲ್ಲರಿಗಿಂತ ಬೇಗನೆ ಮೈದಾನದಲ್ಲಿ ಇದ್ದೆ. ತುಂಬಾ ಜನ ಕ್ರಿಕೆಟ್ ಆಡುತ್ತಾ ಇದ್ದರು. ಆದರೆ ಪ್ರಸನ್ನ ಇನ್ನೂ ಪ್ರತ್ಯಕ್ಷವಾಗಿರಲಿಲ್ಲ. ಕೆಲ ಸಮಯ ಕಾದರೆ ಆಗುತ್ತೆ ಎಂದು ಕೆಲ ಸಮಯ ಅಲ್ಲೇ ತಿರುಗಾಡುತ್ತಾ ಇದ್ದೆ. ಒಂದು ಚೆಂಡು ನನ್ನ ಹತ್ತಿರ ಬರುತಿತ್ತು. ಅದನ್ನು ನಾನು ಹಿಡಿದು ಎತ್ತಿ ಕೊಡಬೇಕು ಎನ್ನುವ ಅಷ್ಟರಲ್ಲೇ ಫೀಲ್ಡಿಂಗ್ ನಿಂತ ಒಬ್ಬ ಹುಡುಗ ಅದನ್ನು ಎತ್ತಿ ಎಸೆದ. ಅದು ಬೇರೆಯವರು ಆಡುವ ಮ್ಯಾಚ್ ಚೆಂಡು ಆಗಿತ್ತು. ನನಗೆ ತುಂಬಾ ಕೋಪ ಬಂದಿತ್ತು. ಕೆಲ ಸಮಯದ ನಂತರ ಆ ಹುಡುಗ ತಾನು ಆಡುವ ಮ್ಯಾಚ್ ಚೆಂಡು ಫೀಲ್ಡಿಂಗ್ನಲ್ಲಿ ಬಿಟ್ಟಾಗ ಖುಷಿಯಾಗಿತ್ತು.

7 ಘಂಟೆ ಆದರೂ ಪ್ರಸನ್ನ ಬರಲೇ ಇಲ್ಲ. ನಾನು ಮತ್ತೆ ವಿವೇಕಾನಂದ ಗಾರ್ಡನ್ ಗೆ ವಾಕಿಂಗ್ ಮಾಡಲು ಹೋದೆ.ಎಲ್ಲರೂ ಓಡುತ್ತಾ ಇರುವದನ್ನು ನೋಡಿ ನಾನು ತುಂಬಾ ಜೋಷ್ ನಿಂದ ಓಡಿದೆ. ಎಲ್ಲರನ್ನೂ ಹಿಂದೆ ಹಾಕಿದೆ ಆದರೆ ಇನ್ನೂ ಅರ್ಧ ರೌಂಡ್ ಸುತ್ತಿರಲಿಲ್ಲ, ದಣಿವು ಶುರು ಆಯಿತು. ಎಲ್ಲರೂ ನನ್ನ ಹಿಂದಿಕ್ಕಿ ಹೊರಟು ಹೋಗಿದ್ದರು. ಓಡುತ್ತಿರುವಾಗ ನನ್ನ ಹೊಟ್ಟೆ ತಕ.. ತಕ.. ಎಂದು ಕುಣಿಯುತ್ತಾ ಇತ್ತು. ಮತ್ತೆ ಕೆಲ ಜನರು ವ್ಯಾಯಾಮ ಮಾಡುತ್ತಾ ಇದ್ದರು. ಅದನ್ನು ನೋಡಿ ನಾನು ಒಂದು ಮರದ ಕೆಳಗೆ ನಿಂತು ವ್ಯಾಯಾಮ ಮಾಡಲು ಅನುವಾದೆ. ಅಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದೆ ನಾಯಿ ಎದ್ದು, ನನ್ನ ನೋಡುತ್ತಾ ನಿಂತು ಬಿಟ್ಟಿತು. ನಾನು ಬಹುಶಃ ವಿಚಿತ್ರವಾಗಿ ವ್ಯಾಯಾಮ ಮಾಡುತ್ತಾ ಇದ್ದೇನೆ ಎಂದು ತಿಳಿಯಿತೋ ಹೇಗೆ ಎಂದು, ಬೇರೆ ವ್ಯಾಯಾಮ ಮಾಡಲು ಅನುವಾದೆ.ಅಷ್ಟರಲ್ಲಿ ನಾಯಿ ಜೋರಾಗಿ ನನ್ನ ನೋಡಿ ಬೊಗಳಲು ಶುರು ಮಾಡಿತು. ಏಕೆಂದರೆ ನಾನು ಕಾಲಿನಿಂದ ಒದ್ದ ಕಲ್ಲು ಅದಕ್ಕೆ ನಾಟಿತ್ತು. ಕಡೆಗೆ ಈ ಸಹವಾಸ ಸಾಕು ಎಂದು ಕೆಲ ಸಮಯ ವಾಕಿಂಗ್ ಮಾಡಿದೆ. ವಾಕಿಂಗ್ ಮಾಡಿ ಕೆಲ ಸಮಯ ಒಂದು ಬೆಂಚ್ ಮೇಲೆ ಕುಳಿತೆ. ಅಲ್ಲಿ ನಡೆಯುವ ಸಂಭಾಷಣೆ ಕೇಳಿ ಮನೆಗೆ ಬಂದೆ.

ಮನೆಗೆ ಬಂದು ಕೂಡಲೇ ಮಡದಿ ನೀವು ಹೋದ ಮೇಲೆ ಪ್ರಸನ್ನ ಫೋನ್ ಮಾಡಿದ್ದರು ಎಂದಳು. ಅವರು ಇವತ್ತು ಕ್ರಿಕೆಟ್ ಆಡಲು ಬರುವದಿಲ್ಲ ಎಂದು ಹೇಳಿದರು ಎಂದಳು. ಇವತ್ತು ಮನೆ ಸಾಮಾನು ತರಬೇಕು ಎಂದಳು ಮಡದಿ. ನಾನು ಆಯಿತು ಎಂದು ಸ್ನಾನಕ್ಕೆ ಹೋದೆ. ವಾಕಿಂಗ್ ಮಾಡಿ ಕೈ ಕಾಲು ಎಲ್ಲವೂ ಸಡಿಲವಾಗಿದ್ದವು. ಬಚ್ಚಲು ಮನೆಯಿಂದ ದಾಡಿ ಮಾಡಿಕೊಳ್ಳಲೋ ಬೇಡವೋ ಎಂದು ಕೇಳಿದೆ. ಏಕೆಂದರೆ? ನಾನು ಪ್ರತಿ ಹಬ್ಬ ಹರಿದಿನ ದಾಡಿ ಮಾಡಿಕೊಳ್ಳಬೇಡಿ ಎಂಬ ಆಜ್ಞೆ ಹೊರಡಿಸಿದ್ದಾಳೆ ನನ್ನ ಮಡದಿ. ಗಾಡಿ ಮೇಲೆ ಹೋಗೋಣ ಎಂದಳು. ನಾನು ನಕ್ಕೂ ... ಲೇ ದಾಡಿ ಎಂದೆ.ನಾನು ಬೇಡ ಅನ್ನಬಹುದು ಎಂದುಕೊಂಡರೆ, ಮಾಡಿಕೊಳ್ಳಿ ಎಂದಳು. ನಾನು ನಾಳೆ ಮಾಡಿಕೊಳ್ಳುತ್ತೇನೆ ಬಿಡೆ ಎಂದೆ. ನೋಡ್ರೀ ನನ್ನ ಜೊತೆ ಬರಬೇಕಾದರೆ, ಹೀಗೆ ಜೋಕುಮಾರ ತರಹ ಬರಬೇಡಿ ಎಂದಳು. ಕಡೆಗೆ ದಾಡಿ ಮಾಡಿಕೊಂಡು ಸ್ನಾನ ಮಾಡಿ ಬಂದೆ. ಮನೆ ಸಾಮಾನು ತೆಗೆದುಕೊಂಡು ಬರುವಾಗೇ ನೋಡಿ ಈಗ ಚೆನ್ನಾಗಿ ರಾಜ್‍ಕುಮಾರ್ ತರಹ ಕಾಣಿಸುತ್ತೀರಿ ಎಂದಳು.

ಮರುದಿನ ಕೈ,ಕಾಲು ಎಲ್ಲವೂ ಮಾತನಾಡುತ್ತಾ ಇದ್ದವು. ಆಗ ಅನ್ನಿಸಿತು ಆರೋಗ್ಯ ಎಂದರೆ ಆ + ರೋಗ(ನಿದ್ರೆ) + ಯೋಗ್ಯ ಎಂದು. "ಎಲ್ಲರೂ ಮಾಡುವದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ" ನಿಜ. ನಾನು ಮಾಡುತ್ತಾ ಇರುವದು ಹೊಟ್ಟೆಗಾಗಿಯೇ, ಆದರೆ ಗೇಣು ಬಟ್ಟೆ ನನ್ನ ಹಿಮಾಲಯ ಪರ್ವತ (ಹೊಟ್ಟೆ) ಮುಚ್ಛೊಕ್ಕೆ ಸಾಲಲ್ಲ :).

*****************************************************************

ಎಲ್ಲರಿಗೂ ದೀಪಾಳಿ ಹಬ್ಬದ ಶುಭಾಶಯಗಳು.

********************************************************


4 comments:

 1. Sakkat :)

  Tamagu shubhashayagalu.

  --Girish

  ReplyDelete
 2. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ದೀಪಾವಳಿ ಹಬ್ಬದ ಶುಭಾಶಯಗಳು.

  ReplyDelete
 3. ತಮ್ಮ ಹಾಸ್ಯ ಪ್ರಜ್ಞೆಗೆ ನಮೋನ್ನಮಃ
  ತಮಗೂ ದೀಪಾವಳಿ ಹಬ್ಬದ ಶುಭಾಷಯಗಳು.

  ReplyDelete
 4. ಧನ್ಯವಾದಗಳು ಮತ್ತು ವಂದನೆಗಳು ಸರ್ :-)ನಿಮ್ಮ ಅಭಿಮಾನಕ್ಕೆ ನಾನು ಚಿರ-ಋಣಿ . ದೀಪಾವಳಿ ಹಬ್ಬದ ಶುಭಾಷಯಗಳು.

  ReplyDelete