ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ ಮೇಲೆನೇ ತಿಂಡಿ , ಊಟ ಎಲ್ಲಾ ಎಂದಳು. ಐದು ವರ್ಷದಲ್ಲಿ ಇರಲಾರದ ನೀತಿ ನಿಯಮ ಏನೇ ಇದು ಕರ್ಮ ಎಂದೆ. ನೀವು ಈ ನೀತಿ ನಿಯಮ ಮಾಡಲಾರದಕ್ಕೆ ನಿಮಗೆ ಹೀಗೆ ಆರೋಗ್ಯ ಸರಿ ಇರುವದಿಲ್ಲ ಎಂದಳು. ನಾನು ಏನು ತಿನ್ನದೇ ಇದ್ದರೆ ಆರೋಗ್ಯದ ಗತಿ ಏನು ಎಂದೆ. ಎಲ್ಲಾ ನಿಮ್ಮ ಆರೋಗ್ಯದ ದೃಷ್ಟಿಯಿಂದನೆ ಮಾಡುತ್ತಾ ಇರುವದು ಎಂದು ದಬಾಯಿಸಿದಳು. ಇವತ್ತು ಬೇರೆ ಶನಿವಾರ ಹೇಗಾದರೂ ಮಾಡಿ ಆಫೀಸ್ ಗೆ ಹೋಗಿಬಿಟ್ಟರೆ ಸಾಕು ತಾನೇ ಎಲ್ಲ ಸಿಗುತ್ತೆ ಎಂದು ಯೋಚಿಸಿ, ಇವತ್ತು ಸ್ವಲ್ಪ ಕೆಲಸ ಇದೆ ಆಫೀಸ್ ಹೋಗಬೇಕು ಎಂದೆ. ಸುಮ್ಮನೇ ರೈಲು ಬಿಡಬೇಡಿ ಎಂದಳು. ಹಳೆಯ ಒಂದು ಮಿಂಚಂಚೆ ತಾರೀಖು ಬದಲಿಸಿ ಅವಳಿಗೆ ತೋರಿಸಿದೆ. ಆಯಿತು ಹೋಗಿ ಬನ್ನಿ, ಆದರೆ ಆಫೀಸ್ ನಲ್ಲಿ ಏನು ತಿನ್ನ ಬೇಡಿ ಎಂದಳು. ಆಯಿತು ಎಂದು ಖುಶಿಯಿಂದ ನನ್ನ ಗಾಡಿ ಸ್ಟಾರ್ಟ್ ಮಾಡಿ ಆಫೀಸ್ ಹೋದೆ.
ಆಫೀಸ್ ತಲುಪಿ ನೋಡುತ್ತೇನೆ. ತುಂಬಾ ಜನ ಬಂದಿದ್ದರು. ನಾನು ಮೊದಲ ಬಾರಿ ಶನಿವಾರ ಆಫೀಸ್ ಬಂದಿದ್ದು ನೋಡಿ, ನಟರಾಜ್ ನನ್ನ ಬಳಿ ಬಂದು ಏನ ಸರ್ ಇವತ್ತು ಎಂದ. ಅಜಿತ್ ನಗುತ್ತಾ ಎಲ್ಲಾ ಸಂಸಾರಿಗಳ ಹಣೆ ಬರಹ ಇಷ್ಟೇ ಎಂದ. ಹಾಗೇನೂ ಇಲ್ಲ ಎಂದೆ. ಎಲ್ಲರೂ ತಿಂಡಿಗೆ ಹೊರಟರು. ನಾನು ಹೋಗಬೇಕು ಅನ್ನಿಸಿದರೂ, ಪಾಪ ನನ್ನ ಮಡದಿ, ನನ್ನ ಸಲುವಾಗಿ ಇಷ್ಟು ಕಷ್ಟ ಪಡುತ್ತಿದ್ದಾಳೆ ಎಂದು ಅನ್ನಿಸಿ ನಾನು ಹೋಗಲಿಲ್ಲ. ಎಲ್ಲರೂ ತಿಂಡಿ ಮುಗಿಸಿ ಬಂದರು. ಅಷ್ಟರಲ್ಲಿ ನನ್ನ ಕರ್ಮಕ್ಕೆ ಒಂದು ತುಂಬಾ ಅರ್ಜೆಂಟ್ ಕೆಲಸ ನನ್ನ ಮಿಂಚಂಚೆ ಯಲ್ಲಿ ಬಂದಿತ್ತು.
ಅದನ್ನೇ ಯೋಚನೆ ಮಾಡುತ್ತಾ ಕುಳಿತಿದ್ದೆ. ನಟರಾಜ ಬಂದು ತನ್ನ ಮೊಬೈಲ್ ಚಾರ್ಜರ್ ಮರೆತು ಬಂದಿದ್ದೇನೆ, ನಿಮ್ಮ ಚಾರ್ಜರ್ ಉಪಯೋಗಿಸುತ್ತೇನೆ ಎಂದು ಅವಸರದಲ್ಲಿ ಬಂದು ಅದರಲ್ಲಿ ಸಿಕ್ಕಿಸಿದ. ಅದು ಅದರಲ್ಲಿ ಹೋಗಲಿಲ್ಲ ಎಂದು ಅದನ್ನು ಉಲ್ಟಾ ಮಾಡಿ ಹಾಕಿದ. ಅವನ ಮೊಬೈಲ್ ಚಾರ್ಜ್ ಮಾಡುವ ಸಲುವಾಗಿ ಗುದ್ದಾಡಿದ, ಏನು ಪ್ರಯೋಜನ ಆಗಲಿಲ್ಲ. ನಾನು ಸ್ವಲ್ಪ ಕೆಲಸದ ಒತ್ತಡದಲ್ಲಿ ಇದ್ದಿದ್ದರಿಂದ ಅವನನ್ನು ಗಮನಿಸಲಿಲ್ಲ. ಅಷ್ಟರಲ್ಲಿ ಅಜಿತ ಬಂದು ಏನಪ್ಪಾ? ನಟರಾಜ ನಿಮ್ಮ ಹುಡುಗಿ ಕರೆ ಬರಲಿಲ್ಲವಾ ಎಂದ. ನಟರಾಜ ಗುದ್ದಾಡಿ ಇದು ನನ್ನ ಮೊಬೈಲ್ ಗೆ ಬರಲ್ಲಾ ಎಂದು ನನ್ನ ಚಾರ್ಜ್ ಗೆ ಮೊಬೈಲ್ ಸಿಕ್ಕಿಸಿದ. ಅಜಿತ್ ಹಾಗಲಕಾಯಿ ಚಿಪ್ಸ್ ತೆಗೆದು ಕೊಂಡು ಬಂದಿದ್ದ. ನಮಗೂ ಸ್ವಲ್ಪ ಕೊಟ್ಟ. ಅದು ತುಂಬಾ ಚೆನ್ನಾಗಿ ಇತ್ತು, ಸ್ವಲ್ಪ ಕೂಡ ಕಹಿ ಇರಲಿಲ್ಲ. ಅದನ್ನು ತಿನ್ನುತ್ತಾ ಕೆಲಸ ಮುಗಿದ ಮೇಲೆ ಅಜಿತನಿಗೆ ಅದನ್ನು ಮಾಡುವ ವಿಧಾನ ಕಳುಹಿಸು ಎಂದು ಹೇಳಿದೆ. ಅಷ್ಟರಲ್ಲಿ ನನಗೆ ಆಫೀಸ್ ಫೋನ್ ಗೆ ಒಂದು ಕರೆ ಬಂದಿತ್ತು. "ಎಲ್ರಿ ಹಾಳಾಗಿ ಹೋಗಿದ್ರೀ" ಎಂದು ನನ್ನ ಮಡದಿ ಕಿರುಚಿತ್ತ ಇದ್ದಳು. ಮೊಬೈಲ್ ಯಾಕೆ? ಸ್ವಿಚ್ ಆಫ್ ಮಾಡಿದ್ದೀರ ಎಂದು ಆಫ್ ಮೂಡಿನಲ್ಲಿ ಬೈದಳು. ನಾನು ಇಲ್ವಲ್ಲಾ ಎಂದು ನನ್ನ ಮೊಬೈಲ್ ನೋಡಿದೆ ನಿಜವಾಗಿಯೂ ಆಫ್ ಆಗಿತ್ತು. ಓ ಹೌದು ಕಣೇ ಆಫ್ ಆಗಿದೆ ಸಾರೀ ಎಂದೆ. ಮತ್ತೆ ಯಾರದು ಫೋನ್ ಎತ್ತಿದ ಹುಡುಗಿ ಎಂದು ದಬಾಯಿಸಿದಳು. ಕಡೆಗೆ ಅವಳು ನಮ್ಮ ಆಫೀಸ್ ರಿಸೆಪ್ಶನಿಸ್ಟ್ ಎಂದು ತಿಳಿಹೇಳಿದೆ.ಆದರೂ, ನನಗೇನೋ ಡೌಟು ಎಂದು ಕೋಪಿಸಿಕೊಂಡು ಫೋನ್ ಕಟ್ ಮಾಡಿದಳು.
ಅಷ್ಟರಲ್ಲಿ ಓಡಿ ಬಂದ ನಟರಾಜ, ಏನ್ರೀ ಸರ್ ನನ್ನ ಮೊಬೈಲ್ ಹಾಳು ಮಾಡಿಬಿಟ್ಟಿರಲ್ಲಾ ಸರ್ ಎಂದ. ಎಂತಹ ಚಲೋ ನನ್ನ ಹುಡುಗಿ ಕರೆ ಮಾಡುತ್ತಾ ಇತ್ತು. ಅದು ಐದು ವರ್ಷದ ಫೋನ್ ಎಂದ. ನನಗೆ ಆಶ್ಚರ್ಯ ನಾನೇನು ಮಾಡಿದೆ ಎಂದೆ. ನಿಮ್ಮ ಚಾರ್ಜರ ದೆಸೆಯಿಂದ ಅಂದ. ನಾನು ನನ್ನ ಮೊಬೈಲ್ ಆನ್ ಮಾಡಿದೆ, ಆದರೆ ಚಾರ್ಜಾರ್ ಕೆಟ್ಟು ಹೋಗಿತ್ತು. ಮತ್ತೆ ಅರ್ಧ ಘಂಟೆಯಲ್ಲಿ ಹೋಗಿ ಹೊಸ ಮೊಬೈಲ್ ಕೊಂಡು ಬಂದಿದ್ದ. ನನ್ನ ಮೊಬೈಲ್ ಚಾರ್ಜ್ ಇಟ್ಟರೆ ಸಾಕು ಮೊಬೈಲ್ ಆಫ್ ಆಗುತಿತ್ತು.
ಕಡೆಗೆ ಎಲ್ಲ ಕೆಲಸ ಮುಗಿಸಿ, ಮನೆ ದಾರಿ ಹಿಡಿದೆ. ಬರುವ ದಾರಿಯಲ್ಲಿ ಹಾಗಲಕಾಯಿ ತೆಗೆದು ಕೊಂಡು ಹೋದೆ. ನನ್ನ ಮಡದಿ ತುಂಬಾ ಕೋಪ ಮಾಡಿ ಕೊಂಡಿದ್ದಳು. ನಾನು ಹೋಗುತ್ತಲೇ "ಸತ್ಯ ಭಾಮೆ... ಸತ್ಯ ಭಾಮೆ... ಕೋಪವೆನೇ ನನ್ನಲಿ" ಎಂದು ಹಾಡುತ್ತಾ ಮನೆ ಒಳಗಡೆ ಕಾಲು ಇಟ್ಟೆ. ತುಂಬಾ ಕೋಪಗೊಂಡಿದ್ದಳು. ತುಂಬಾ ಹಸಿವೆ ಕಣೇ ಏನು ತಿಂದಿಲ್ಲಾ ಎಂದು ಹೇಳಿದಾಗ, ಇದ್ದ ಕೋಪವೇಲ್ಲಾ ಮರೆತು ಮತ್ತೆ ಶಾಂತ ರೀತಿಯಲ್ಲಿ ಊಟಕ್ಕೆ ಹಾಕಿದಳು. ಊಟ ಆದ ಮೇಲೆ ಸಾವಕಾಶವಾಗಿ, ನನ್ನ ಹತ್ತಿರ ಬಂದು ನಿಜ ಹೇಳಿ ಮೊಬೈಲ್ ಯಾಕೆ ಆಫ್ ಮಾಡಿದ್ದು. ನಿಜವಾಗಿಯೂ ಆಫೀಸ್ ನಲ್ಲಿ ಕೆಲಸ ಇತ್ತಾ ಅಥವಾ...? ಎಂದಳು. ನಾನು ನಡೆದ ವಿಚಾರನೆಲ್ಲಾ ಹೇಳಿ, ನಾನು ನಾಮ ಮಾತ್ರಕ್ಕೆ ಗೋಪಾಲ ಕಣೇ, ಏನೋ ಬೇಕಾದರೆ ಸ್ವಲ್ಪ ದನ ಕಾಯಬಹುದು ಎಂದೆ. ಅವಳು ಜೋರಾಗಿ ನಕ್ಕೂ ಸುಮ್ಮನಾದಳು.
ಸಂಜೆ, ಲೇ.. ಹಾಗಲಕಾಯಿ ಚಿಪ್ಸ್ ಮಾಡೇ ಎಂದು ಅದರ ಮಾಡುವ ವಿಧಾನದ ಪ್ರಿಂಟ್ ಅವಳಿಗೆ ಕೊಟ್ಟೆ. ಇದನ್ನು ಏಕೆ ತಂದಿರಿ ನಾನು ತಿನ್ನುವದಿಲ್ಲ ಎಂದಳು. ಏಕೆ? ಎಂದು ಕೇಳಿದಾಗ, ಚೊಚ್ಚಲ ಗಂಡು ಮಗ ಇದ್ದರೆ ತಿನ್ನ ಬಾರದು ಎಂದು ಹೇಳಿದಳು. ಆಯಿತು ನಮ್ಮಿಬ್ಬರಿಗೆ ಮಾಡು ಎಂದೆ. ಅದೆಲ್ಲ ಆಗೋಲ್ಲ ನೀವೇ ಮಾಡಿಕೊಳ್ಳಿ. ಅದನ್ನು ಚೊಚ್ಚಲ ಗಂಡು ಮಗನ ತಾಯಿ ಕತ್ತರಿಸಬಾರದು ಕೂಡ ಎಂದಳು. ಕಡೆಗೆ ನಾನೇ ಮಾಡಿದೆ. ಆಗ ಕರೆಂಟ್ ಹೋಯಿತು, ನಾನು ಅವಳ ಹಿಂದೆ ಬಂದು ನಿಂತೆ. ಅವಳು ಹೆದರಿ ಬಿಟ್ಟಳು. ಏನೇ ಏನು? ಆಯಿತು ಎಂದೆ. ನೀವೇ ಹೇಳಿದ್ದೀರಲ್ಲ ಪತಿಯೇ ಪರರ ದೈವ ಎಂದು. ನನಗೆ ದೆವ್ವ ತಾನೇ ಎಂದು ಹಿಯಾಳಿಸಿದಳು.
ಅಷ್ಟರಲ್ಲಿ ಪಕ್ಕದ ಮನೆ ಪ್ರಿಯ ಬಂದ ಸದ್ದು ಕೇಳಿಸಿತು. ನಾನು ಬೇಕು ಅಂತಲೇ " ಸತ್ಯಭಾಮ ಬಾರಮ್ಮ ನೀಡು ಒಂದು ಉಮ್ಮಾ .." ಎಂದು ಹಾಡುತ್ತಾ ಇದ್ದೆ. ಯಾಕೆ ರಾಯರು ಮಧ್ಯಾಹ್ನ ಏನೇನೋ ಹೇಳಿ ಮತ್ತೆ ನಿಮ್ಮ ವರಸೆ ಶುರು ಹಚ್ಚಿಕೊಂಡಿದ್ದೀರಾ ಎಂದಳು. ನಿನಗೆ ಹಾಡಿದ್ದು ಕಣೇ, ನೀನೆ ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ಎಂದು ಪುಸಲಾಯಿಸಿದೆ. ಮಗನ ಹೋಮ್ ವರ್ಕ್ ಮಾಡಿಸಿ ಎಂದು ಹೇಳಿದಳು. ಗುಡ್ ಮ್ಯಾನರ್ಸ್ ಚಾರ್ಟ್ ಅಂಟಿಸುವದು ಇತ್ತು. ಅದನ್ನು ನೋಡಿ, ನಿಮ್ಮ ಅಪ್ಪನಿಗೆ ಯಾವಾಗ? ಗುಡ್ ಮ್ಯಾನರ್ಸ್ ಬರುತ್ತೋ ನಾಕಾಣೆ ಎಂದು ಹೇಳಿ ಅಡಿಗೆ ಮನೆಗೆ ಹೊರಟು ಹೋದಳು.
nice!!
ReplyDeleteThank you sir :).
ReplyDelete