Friday, November 19, 2010

ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....

ನನ್ನ ಒಬ್ಬ ಗೆಳೆಯ ನರೇಂದ್ರ ಶಯನಾವಸ್ಥೆಯಲ್ಲಿ ಇದ್ದ. ಹೋಗಿ ಎಬ್ಬಿಸಿದೆ. ಆಸಾಮಿ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ. ಶಯನಾವಸ್ಥೆಯಿಂದ ಸೀದಾ ಶ್ವಾನಾವಸ್ಥೆಗೆ ತಿರುಗಿದ್ದ. ಸಧ್ಯ ಬೊಗಳಿದ, ಎಬ್ಬಿಸಿದ್ದಕ್ಕೆ ಕಚ್ಚಲಿಲ್ಲ. ಅವನ ಬಾಯಲ್ಲಿ ಬಂದ ಧಾರವಾಡ ಭಾಷೆ ನುಡಿ ಮುತ್ತುಗಳು, ನನ್ನ ಕರ್ಣಕ್ಕೆ ಕುಂಡಲಗಳ ಹಾಗೆ ಅಲಂಕರಿಸಿದ್ದವು. ನಾನು ಅವನನ್ನು ಇದು ಕಂಪ್ಯೂಟರ್ ಪರದೆ, ಸೊಳ್ಳೆ ಪರದೆ ಎಂದು ಕೊಂಡಿರುವೆ ಏನು? ಎಂದು ತಮಾಷೆ ಮಾಡಿದೆ. ವಯಸ್ಸು ಮೀರಿದ ಮೇಲೆ ನಿದ್ದೆ ಕಡಿಮೆ ಆಗುತ್ತೆ ಅಂತ ಹೇಳುತ್ತಾರೆ. ನೀನು ನೋಡಿದರೆ ವಯಸ್ಸು ಮೀರಿದ ಮೇಲೆ ಕೂಡ ಸಕತ್ ನಿದ್ದೆ ಹೊಡಿತ ಇದ್ದೀಯಾ? ಎಂದೆ. ಯಾರು ಹೇಳಿದ್ದು ವಯಸ್ಸು ಮೀರಿದೆ ಎಂದು. ನನ್ನದು ಇನ್ನೂ ಕನಸು ಕಾಣೋ ವಯಸ್ಸು ಕಣೋ ಅಂದ. ಇಷ್ಟೆಲ್ಲಾ ಆಗಿದ್ದು ಸರಕಾರದ ನೀತಿ ನಿಯಮದಿಂದನೆ ಎಂದ. ಏನಪ್ಪಾ ಅದು ಸರಕಾರದ ನೀತಿ ನಿಯಮ ಎಂದೆ. ಗಂಡಿಗೆ 21 ವರ್ಷ , ಹೆಣ್ಣಿಗೆ 18 ವರ್ಷ ಮದುವೆಗೆ ಎಂದು ಫಿಕ್ಸ್ ಮಾಡಿದ್ದು. ನಾವು 21 ವರ್ಷ ಆಗುವವರೆಗೆ ಮದುವೆಗೆ ಕಾಯಬೇಕು, ಆಮೇಲೆ 18 ವರ್ಷ ಆದ ಹುಡುಗೀನೆ ಹುಡುಕಬೇಕು ಮತ್ತು ಮದುವೆ ಆಗಬೇಕು. ಇದು ತಪ್ಪು ಅಲ್ಲವಾ? ಎಂದ. ಮನಸಿನಲ್ಲೇ... ಬಾಲ್ಯವಿವಾಹ ಬೇಕಾ? ಮಗನೆ ಎಂದು ಬೈದು, ನಾನು ಹೌದು.. ಹೌದು.. ಎಂದು ತಲೆ ಆಡಿಸಿದೆ. ಅದು ಬೇರೆ ಅಪ್ಪ, ಅಮ್ಮ ಕುಂಡಲಿ, ಜಾತಿ, ಒಳಜಾತಿ ಮತ್ತು ಮನೆತನ ಎಂದೆಲ್ಲಾ ನೋಡಿ, ಆಮೇಲೆ ಅವರು ಹಸಿರು ನಿಶಾನೆ ತೋರಿಸಿದ ಮೇಲೆ ನಾನು ನೋಡಿ ಒಪ್ಪಿಗೆ ಸೂಚಿಸಬೇಕು ಇದೆಲ್ಲಾ ಆಗುವದರೊಳಗೆ ನನ್ನ ತಲೆ ಕೂದಲು ಬೆಳ್ಳಗೆ ಆಗಿರುತ್ತವೆ. ಸಮ್ಮಿಶ್ರ ಸರಕಾರಕ್ಕೆ ಅವಕಾಶವೇ ಇಲ್ಲ ಎಂದ. ಅದು ಬೇರೆ ಈಗೀಗ ಹುಡುಗಿಯರ ಡಿಮ್ಯಾಂಡ್ ತುಂಬಾ ಜ್ಯಾಸ್ತಿ, ಸಂಬಳ, ಮನೆ, ಹೊಲ, ಮನೆತನ ಎಂದು ತುಂಬಾ ಕೇಳುತ್ತಾರೆ ಗೋಪಿ ಎಂದು ರಾಗವೇಳೆದ. ಈ ತುಳಸಿ ಲಗ್ನಕ್ಕೆ ನನಗೆ 34 ಸಂವತ್ಸರಗಳು ತುಂಬುತ್ತವೆ, ಅದರಲ್ಲಿ ನೀನೆ ಅದೃಷ್ಟವಂತ ಕಣೋ ಎಂದು ಹೇಳಿದ. ಈಗೀಗ ಹುಡುಗಿಯರ ಜನ ಸಂಖ್ಯೆ ಬೇರೆ ಕಡಿಮೆ ಎಂದು ಹೇಳುತ್ತಾರೆ. ಇನ್ನೂ ಸ್ವಲ್ಪ ದಿವಸ ತಡೆದರೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ತಿತಿ ಬರುತ್ತೆ ಎಂದು ಗೋಳಾಡಿದ. ಅದಕ್ಕೆ ಇನ್ನೂ ಮದುವೆ ಆಗಿಲ್ಲ. ಮದುವೆ ಮುಂಚೆ ಕಾಣೋ ಕನಸನ್ನೆ ಕಾಣುತ್ತಾ ಇದ್ದೇನೆ ಎಂದ.

ನಾನು ಸ್ವಲ್ಪ ಯೋಚನೆ ಮಾಡುತ್ತಾ ನಿಂತೆ. ನಿಜ ಅನ್ನಿಸಿತು ಮದುವೆ ಎಂದರೆ ಎಷ್ಟು ಕಷ್ಟ ಎಂದು. ಇದೆಲ್ಲಾ ಯೊಚಿಸಿರಲೇ ಇಲ್ಲ. ನೋಡಿದ ಮೊದಲನೆ ಹುಡುಗೀನೆ ಪಾಸ್ ಮಾಡಿದ್ದೆ. ಸಧ್ಯ ಪುಣ್ಯಕ್ಕೆ ಅವಳ ಕುಂಡಲಿ,ನನ್ನ ಕುಂಡಲಿ ಹೊಂದಿತ್ತು. ಇಲ್ಲದೇ ಹೋಗಿದ್ದರೆ?. ಇವನು ಹೇಳಿದ ರಾಮಾಯಣ, ನಾನು ಮಹಾಭಾರತ ಸ್ಟೈಲ್ ನಲ್ಲಿ ಹೇಳಬೇಕಿತ್ತು ಏಕೆಂದ್ರೆ, ನಾನು ಮಂಗ್ಯಾನ ಲಿಂಕ್ ಕ್ಷಮಿಸಿ.... ಅದೇನೋ ಮಂಗಲಿಕ, ಮಂಗಳ ದೋಸೆ... ಅಲ್ಲಲ್ಲ....ಮಂಗಳ ದೋಷದವನು ಎಂದು, ಮನೋಜ ನನ್ನ ಕುಂಡಲಿ ಪರೀಕ್ಷಿಸಿ ಮೊನ್ನೆ ಹೇಳಿದ್ದ. ಹಾಗೆ ಮಂಗಳ ದೋಷ ಇರುವ ಹುಡುಗರು ಮಂಗಳ ದೋಷ ಇರುವ ಹುಡುಗಿಯರನ್ನೇ ಮದುವೆ ಆಗಬೇಕು ಎಂಬ ನಿಯಮ ಇದೆ ಅಂತೆ. ಅವಳಿಗೂ ಮಂಗಳ ದೋಷ ಇತ್ತು. ಹೀಗಾಗಿ ಮದುವೆ ನೆರವೇರಿತು. ಅವಳನ್ನು ಧಿಕ್ಕರಿಸಿದ್ದರೆ, ನನಗೆ ಕೂಡ ಈ ನರೇಂದ್ರನ ಗತಿನೇ ಬರುತಿತ್ತು... ರಾಮ... ರಾಮ.... ಶ್ರೀ ರಾಮನನ್ನು ನೆನಸಿದ್ದು ಏಕೆ? ಎಂದು ತಿಳಿಯಿತು ತಾನೇ... (ನಾನು ಏನಿದ್ದರೂ ನನ್ನ ದೋಷದ ಮೊದಲೆರಡು ಅಕ್ಷರದ ರೂಪ ತಾನೇ?). ಇಷ್ಟೆಲ್ಲಾ ಯೋಚಿಸಿ ಮಡದಿಯ ಕಾಲ್ ನೆನಪು ಆಗಿ ಕ್ಷಮಿಸಿ.... ಮಿಸ್ ಕಾಲ್ ನೆನಪು ಆಗಿ ಹೋಗಿ ಅವಳಿಗೆ ಕರೆ ಮಾಡಿದೆ. ಏನ್ರೀ ಇಷ್ಟೊತ್ತು ಎಂದು ಗದರಿಸಿದಳು. ಏನಿಲ್ಲಾ ಕಣೇ, ನಿನ್ನ ಬಗ್ಗೆನೇ ಡೀಪ್ ಆಗಿ ಯೋಚನೆ ಮಾಡುತ್ತಾ ಇದ್ದೆ ಎಂದು ಹೇಳಿದೆ. ಓ .. ನಿಮ್ಮದು ಗೊತ್ತಿಲ್ಲವಾ?...ಎಂಬ ವ್ಯಂಗ್ಯ ಮಾತಿನೊಂದಿಗೆ, ಸಂಜೆ ಬರುತ್ತಾ ಸೇಬು ಹಣ್ಣು ತೆಗೆದುಕೊಂಡು ಬನ್ನಿ ಇವತ್ತು ಏಕಾದಶಿ ಎಂದು ಹೇಳಿದಳು. ಆಯಿತು ಕಣೇ ಎಂದು ಹೇಳಿ ಫೋನ್ ಕಟ್ ಮಾಡಿ ಮತ್ತೆ ನರೇಂದ್ರನ ಕಡೆಗೆ ಬಂದೆ.

ಮತ್ತು ಬಿಡದೆ ತನ್ನ ವರಸೆ ಶುರು ಹಚ್ಚಿಕೊಂಡ. ಮೊನ್ನೆ ಒಂದು ಹುಡುಗಿ ನೋಡುವುದಕ್ಕೆ ಹೋಗಿದ್ದೆ. ಆ ಹುಡುಗಿ ಕೆಲಸದಲ್ಲಿ ಇತ್ತು. ಮತ್ತೆ ತುಂಬಾ ಚೆನ್ನಾಗಿ ಇದ್ದಳು. ಆದರೆ ನನ್ನ ಕರ್ಮಕ್ಕೆ ಅವಳ ಸಂಬಳ ನನ್ನ ಸಂಬಳಕ್ಕಿಂತ ಸ್ವಲ್ಪ ಜ್ಯಾಸ್ತಿ ಇತ್ತು ಎಂದ. ಅದ್ದಕ್ಕೆ ಏನು? ಈಗ ಸುಮ್ಮನೇ ಒಪ್ಪಿಕೊಳ್ಳಬಾರದ? ಎಂದೆ. ಅವಳು ನನಗಿಂತ ಜ್ಯಾಸ್ತಿ ಬೇರೆ ಕಲೇತಿದ್ದಾಳೆ ಎಂದ.

ಇನ್ನೂ ಕೆಲ ಹುಡುಗಿಯರದು ಮಹಿಳಾ ಮೀಸಲಾತಿ ಎಂದ. ಹಾಗೆಂದರೆ ಎಂದು ಬಾಯೀ ತೆಗೆದೆ. ಲೇ ಅಷ್ಟು ಗೊತ್ತಿಲ್ಲವಾ ಲವ್ ಮ್ಯಾರೇಜ್ ಕಣೋ ಎಂದ. ನೀನು ಲವ್ ಮಾಡೋಕೆ ಪ್ರಯತ್ನ ಪಡಬೇಕಾಗಿತ್ತು ಎಂದೆ. ಅದನ್ನೇನೂ ಕೇಳುತ್ತಿ ಲವ್.. ಲವ್... ಅಂತ ಹೇಳಿ ಪೂರ್ತಿ ಕಾಲೇಜ್ ತುಂಬಾ ಲಬೊ...ಲಬೊ... ಎಂದು ಬಾಯೀ ಬಡಿದುಕೊಂಡಿದ್ದೆ, ನನ್ನ ಕರ್ಮಕ್ಕೆ ಒಂದು ಹುಡುಗೀನು ಮುಸುನೋಡಲಿಲ್ಲ ಎಂದು ಬೇಜಾರಿನಲ್ಲಿ ಹೇಳಿದ. ಗೋಪಿ ಬಾಯೀ ಮುಚ್ಚಿಕೊ ಸೊಳ್ಳೆ ಬಾಯಲ್ಲಿ ಹೋದರೆ ಕಷ್ಟ ಎಂದ.

ನಿನ್ನ ಕತೆ ಕೇಳಿ, ನಮ್ಮ ಫೇಮಸ್ ಡೈರೆಕ್ಟರ್ ಶ್ರೀ ಕಾಶೀನಾಥ ಅವರ ಹಾಡು ನೆನಪಿಗೆ ಬರುತ್ತೆ. ಆದರೆ ಕವಿತೆ ಸಾಲು ಉಲ್ಟಾ ಅಷ್ಟೇ ಎಂದೆ. ಅದು "ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಮತ್ತು ಮೀಸೆ ಹೊತ್ತ ಗಂಡಸಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು" ಎಂದೆ. ಹೌದು, ಅನ್ನು.. ಕಣೋ ಅನ್ನು... ಎಲ್ಲರೂ ಆಡಿಕೊಳ್ಳುವವರೇ ನನಗೆ ಎಂದು ಗೋಳಾಡಿದ. ಮತ್ತೆ ಯಾರು? ಆಡಿಕೊಳ್ಳುತ್ತಾರೆ ಎಂದು ಕೇಳಿದೆ. ಮತ್ತೆ ಆ ಪಂಚಾಮೃತ ಮನ್ಯಾ ನರೇಂದ್ರ ಎಂದು ಹೆಸರು ಇಟ್ಟುಕೊಂಡ ಕರ್ಮಕ್ಕೆ.. ನನಗೆ ಶ್ರೀ ವಿವೇಕಾನಂದ ಸ್ವಾಮಿಗಳಿಗೆ ಹೋಲಿಸುತ್ತಾನೆ, ಮಗ ದೇವೇಂದ್ರನಿಗೆ ಹೋಲಿಸೋಕೆ ಏನು? ಕಷ್ಟ ಎಂದ.

ಇಷ್ಟೆಲ್ಲಾ ಕೊರೆದ ಮೇಲೆಯೂ ಕೂಡ ಏನೋ? ಕನಸಿನ ಬಗ್ಗೆ ಹೇಳುತ್ತಾ ಇದ್ದೆ ಎಂದು ಕೇಳಿದೆ. ಕತ್ರಿನ ಕೈಫ್ ಮದುವೆ ಆಗುವ ತರಹ ಕನಸು ಕಾಣುತ್ತಿದ್ದೆ ಎಂದ. ಅವಳ ಮದುವೆಯಲ್ಲಿ ನೀನೇನೋ ಮಾಡುತ್ತಾ ಇದ್ದೆ ಎಂದು ಕೀಟಲೇ ಮಾತು ಆಡಿದೆ. ಊಟ ಬಡಿಸುತ್ತಾ ಇದ್ದೆ ಎಂದು ಕೋಪದಿಂದ ಉಲಿದ. ಕನಸಿನಲ್ಲೇ ನಾನು ಕೂಡ ಇದ್ದೇನಾ ಎಂದು ಕೇಳಿದೆ. ಹಾ ಇದ್ದೆ.... ನೀನೇ ಅಡಿಗೆ ಭಟ್ಟ, ಮತ್ತೆ ....ನನ್ನ ಮಗನೆ ಎಂದು ಉಸುರಿದ. ಆಯಿತು ಹೇಳಪ್ಪ ಎಂದೆ. ಕತ್ರಿನ ಕೈಫ್ ಜೊತೆ ನನ್ನ ಮದುವೆ ಆಗುವ ಹಾಗೇ ಕನಸು ಬಿತ್ತು ಕಣೋ, ಎಂದು ಮುಖ,ಕಣ್ಣು ಎರಡು ಅರಳಿಸಿ ಹೇಳಿದ. ಅದು ಹೇಗೆ? ಆಗುತ್ತೆ ಎಂದು ನಾನು ಕೇಳಿದೆ. ಯಾಕಪ್ಪಾ ಆಗೋಲ್ಲ ಅವಳೇನೂ ನಿನ್ನ ವೈಫಾ? ಎಂದು ದಬಾಯಿಸಿದ. ಹೆಂಡತಿ ಪಕ್ಕದಲ್ಲಿ ಇಲ್ಲದಿದ್ದರೂ.... ಸವಕಾಶ ಕಣೋ ಎಂದು ಹೇಳಿದೆ. ಅಷ್ಟರಲ್ಲೇ ಹೆಂಡತಿಯ ಮಿಸ್ ಕಾಲ್ ಮಿಂಚಿ ಮಾಯೆ ಆಯಿತು. ಈ ಹೆಂಡತಿಯರು ಮಿಸ್ಸಸ್ ಆದರೂ, ಮಿಸ್ ಕಾಲ್ ಕೊಡುವುದನ್ನು ಬಿಡುವುದಿಲ್ಲ ನೋಡು ಎಂದು ಹೇಳಿದೆ. ನಿನಗೂ ಇದೆ ಗತಿ ಕಣೋ, ಕಾಲು ಗ್ಯಾರಂಟೀ ಎಂದೆ. ಲೇ... ಸುಮ್ಮನಿರು ಇದು ಮಧ್ಯಾಹ್ನ ಬಿದ್ದ ಕನಸು ನನಸು ಆಗಬಹುದು ಎಂದ. ಸಧ್ಯ ಇದನ್ನು ಬೇರೆ ಯಾರಿಗೂ ಹೇಳಬೇಡ ಇಲ್ಲಿ ತುಂಬಾ ಜನ ಬ್ರಹ್ಮಚಾರಿಗಳು ಇದ್ದಾರೆ, ಮತ್ತೆ ಸಲ್ಲು ಮಿಯಾಗೆ ಏನಾದರೂ ತಿಳಿದರೆ ಖಲಾಸ್.... ಕತ್ರಿನ ಕೈಫ್ ಬದಲಿ, ಅವನ ಕೈಯಲ್ಲಿ ಕತ್ತರಿ ಮತ್ತು ನೈಫ್ ಇರುತ್ತೆ ಎಂದೆ. ಏ ಸುಮ್ಮನೇ ಇರಪ್ಪ ನಿನ್ನದೊಂದು ಎಂದು ಮುಖ ತಿರುಚಿದ. ಮತ್ತೆ ಐಶ್ವರ್ಯ, ಗಿಶ್ವರ್ಯ ಕನಸಿನಲ್ಲಿ ಬರುವುದಿಲ್ಲವಾ? ಎಂದು ಕೇಳಿದೆ. ಮದುವೆಗೆ ಮುಂಚೆ ಬರುತ್ತಿದ್ದಳು. ನಾನು ಮದುವೆ ಆದವರ ಸುದ್ದಿಗೆ ಹೋಗಲ್ಲ ಎಂದು ಹೇಳಿದ. ಲೇ ಕೆಲಸದ ಸಮಯದಲ್ಲಿ ಕೆಲಸ ಮಾಡುವದು ಬಿಟ್ಟು ಕನಸು ಕಾಣುತ್ತಾ ಇದ್ದೀಯಲ್ಲಲೇ ಎಂದು ದಬಾಯಿಸಿದೆ.

ಲೇ ನಾನು ಮಲಗಿಕೊಳ್ಳಬೇಕು, ಸುಮ್ಮನೇ ಹೋಗು ಎಂದು ಬೈದ. ಬಾಸ್ ಬಂದರೆ ಏನು? ಮಾಡುತ್ತೀ ಎಂದು ಕೇಳಿದೆ. ಎದುರಿಗೆ ಇರುವ ಕೆಲಸದ ಪಪೇರ್ ತೋರಿಸಿ, ಕೆಲಸದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಿದ್ದೆ ಎಂದು ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ.

ಇಷ್ಟೆಲ್ಲಾ ಆದರೂ ನನಗೆ ಒಂದು ಹನಿ ಕಣ್ಣೀರು ಕೂಡ ಬರಲಿಲ್ಲ, ಏಕೆಂದರೆ ಅನಾಮತ್ತಾಗಿ 3 ಘಂಟೆ ನೀರು ಕುಡಿಯಲು ಬಿಡದೆ ನೀರಿಳಿಸಿದ್ದ. ಅವನೇನೋ ನಿದ್ದೆಗೆ ಹೋದ, ಇವತ್ತು ರಾತ್ರಿ ನನಗೆ ನಿದ್ದೆ ಬರೋದು ಡೌಟ್. ನನಗು ಒಬ್ಬ ಗಂಡು ಮಗ ಇದ್ದಾನೆ ಸ್ವಾಮಿ...... ಮನೆಗೆ ಹೋಗುತ್ತಾ ಸೇಬು ಹಣ್ಣು ತೆಗೆದುಕೊಂಡು ಮನೆಗೆ ಹೋದೆ. ಹೆಂಡತಿ ಅಂದರೆ ಸಾಮಾನ್ಯನಾ... ಭಯ, ಭಕ್ತಿ ಇರಬೇಕು ತಾನೇ?.

2 comments: