Saturday, October 30, 2010

ಗುಣವಂತನ ಗರುಡ ರೇಖೆ....

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.

ಮನೆ ಬಂದರು ಕವಿತೆಯ ಬಗ್ಗೆ ಯೋಚನೆ ಇನ್ನೂ ಮುಗಿದಿರಲಿಲ್ಲ. ರೀ ನಿಮ್ಮ ಗೆಳೆಯ ಮಾರುತಿ ಯಾವಾಗ ಧಾರವಾಡಕ್ಕೆ ಹೋಗುತ್ತಾನೆ ಎಂದು ಕೇಳಿದಳು. ನಾನು ವಿಜಯನಗರ ಇಲ್ಲ ರಾಗಿ ಗುಡ್ಡಕ್ಕೆ ಹೋಗೋಣ ಎಂದೆ. ಅವಳು ಕೇಳಿದ ಪ್ರಶ್ನೆಗೆ ನಾನು ಹೇಳುತ್ತಿರುವುದಕ್ಕೆ ಒಂದು ಸಂಭಂಧವೇ ಇರಲಿಲ್ಲ. ನನ್ನ ಹೆಂಡತಿಗೆ ರೇಗಿ ಹೋಗಿತ್ತು. ನಾನು ಕವಿತಾ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂದೆ. ಯಾರು ಆ ಕವಿತಾ ಎಂದು ಮತ್ತಷ್ಟು ರೇಗಿದಳು. ಕವನ ಎಂದರೆ ಮತ್ತೆ ತಪ್ಪು ಆದೀತು ಎಂದು ಕವಿತೆ ಎಂದು ಹೇಳಿದೆ. ನಿಮ್ಮ ಲಕ್ಷ್ಯ ಎಲ್ಲಿ? ಇರಬೇಕು. ರಾಣಿ ಹಾಗೆಲ್ಲಾ ಏನು ಇಲ್ಲ. ನೀನು ಯೋಚನೆ ಮಾಡುತ್ತಿರುವದು ಲಕ್ಷದ ಬಗ್ಗೆ ಆದರೆ, ನೀನು ನನಗೆ ಕೋಟಿಗೆ ಸಮ. ಅದಕ್ಕೆಂದೆ ನಿನ್ನೆ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!! ಎಂಬ ಲೇಖನ ಬರೆದಿದ್ದೇನೆ ಎಂದು ಪುಸಲಾಯಿಸಿದೆ. ಆದರೂ ನಿಮ್ಮದು ಬರೀ ಕವಿತೆ-ಲೇಖನ ಅತಿ ಆಯಿತು ಎಂದು ಹೀಯಾಳಿಸಿದಳು. ಅದು ಬೇರೆ ನಿಮಗೆ ನನ್ನ ಹೀಯಾಳಿಸಿ ಬರೆಯದೇ ಇದ್ದರೆ ತಿಂದ ಅನ್ನ ಹೇಗೆ ಅರಗಬೇಕು (ಕರಗಬೇಕು) ಎಂದಳು.

ಕೆಲ ಸಮಯದ ನಂತರ ಪುಸಲಾಯಿಸಿದ್ದರಿಂದ ಹೇಳಿ ಮತ್ತೆ ಏನೇನು? ಬರೆದಿದ್ದೀರ ಎಂದಳು. ನಳ ಪಾಕ್ .... ಮತ್ತು ಸ್ಪೆಶಲ್ ತಿಂಡಿ.... ಎಂಬ ಲೇಖನ ಕೂಡ ಬರೆದಿದ್ದೇನೆ ಎಂದೆ. ಮತ್ತೇನು? ಬಕಾಸುರನಿಗೆ ಅದೇ ಧ್ಯಾನ ಎಂದು ಮತ್ತೆ ಹೀಯಾಳಿಸಿದಳು. ನಾನು ನನ್ನ ಬಗ್ಗೆ ತುಂಬಾ ಕೊಚ್ಚಿಕೊಂಡು ತುಂಬಾ ಮಾತನಾಡಿಕೊಂಡೆ. ನನ್ನ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪಬ್ಲಿಶ್ ಆಗಿದೆ ಎಂದು. "ಓ ಗುಣವಂತ ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ಎಂದು ಹಾಡುತ್ತಾ ಅಡುಗೆ ಮನೆಗೆ ಹೋದಳು. ನಾನು ಹಾಡುತ್ತೇನೆ, ಆದರೆ ನನ್ನದು ಕಾಕ ಕಂಠ. ಆದರೆ ನನ್ನ ಮಡದಿಯದು ಕೋಗಿಲೆ ಕಂಠ. ನಾನು ಅವಳನ್ನು ಹಿಂಬಾಲಿಸಿ ಪದಗಳನ್ನು ಬೇಕಾದರೆ ನಾನು ಹೇಳುತ್ತೇನೆ. ನೀನು ಹೋಗಳುವುದನ್ನು ಮಾಡು ಎಂದೆ. ಮೊದಲು ಹೋಗಿ ಕೈ ಕಾಲು ತೊಳೆದು ಆಮೇಲೆ ಒಳಗಡೆ ಬನ್ನಿ ಎಂದು ಹೋಗಳಿ ಕಳುಹಿಸಿದಳು. ಅದೇಕೋ ಗೊತ್ತಿಲ್ಲ ಅರಳಿದ ಹೂವು ಮತ್ತು ಕೆರಳಿದ ಹೆಣ್ಣು ನೋಡೇಕೆ ತುಂಬಾ ಚೆನ್ನ.

ಕೈ ಕಾಲು ತೊಳೆದು ಬಂದು ಟೀ ಶರ್ಟ್ ಹಾಕಿಕೊಳ್ಳುತಿದ್ದೆ. ಕಾಫೀ ತೆಗೆದುಕೊಂಡು ಬಂದ ನನ್ನ ಮಡದಿ ಜೋರಾಗಿ ನಗುತ್ತಾ ಟೀ ಶರ್ಟ್ ಉಲ್ಟಾ ಹಾಕಿ ಕೊಳ್ಲುತ್ತ ಇದ್ದೀರ ಎಂದು ಅಂದಳು. ಕಾಫೀ ಕಪ್ ಕೊಟ್ಟು ಮತ್ತೆ ಏನು ಬರೆದಿದ್ದೀರಾ ರಾಯರು ಎಂದು ಕೇಳಿದಳು. ಸಿಹಿಮೊಗ್ಗೆ ಬಗ್ಗೆ ಬರೆದಿದ್ದೇನೆ ಎಂದೆ. ಹಾಗೆ ಅಂದರೆ ಎಂದು ನನ್ನ ಮುಖ ನೋಡಿದಳು. ಅದು ಸಿಹಿ ಮೊಗದ ಹುಡುಗಿಯ ಬಗ್ಗೆ ಎಂದು ಸುಮ್ಮನೇ ರೀಲು ಬಿಟ್ಟೆ. ಮತ್ತೆ ಕೋಪಿಸಿಕೊಂಡಳು. ಅದು ಶಿವಮೊಗ್ಗ ಬಗ್ಗೆ ಬರೆದ ಅನುಭವ ಕಥನ ಎಂದು ಹೇಳಿದೆ.

ಅಷ್ಟರಲ್ಲಿ ಪಕ್ಕದ ಮನೆ ಶಾಂತಮ್ಮ ಬಂದು ನಿಮ್ಮ ಯಜಮಾನರು ಇದ್ದಾರಾ ಎಂದು ಕೇಳಿಕೊಂಡು ಬಂದರು. ನಾನು ಇವರು ಏಕೆ ನನ್ನ ಕೇಳಿಕೊಂಡು ಬಂದಿದ್ದಾರೆ ಎಂದು ಆಶ್ಚರ್ಯ. ನಮ್ಮ ಮನೆಗೆ ಹಾವು ಬಂದಿದೆ ಪ್ಲೀಸ್ ಹಿಡಿ ಬನ್ನಿ ಎಂದರು. ಕೈ ನಡುಗಿ ಅರ್ಧ ಕಾಫೀ ಕೆಳಕ್ಕೆ ಉರಳಿತ್ತು. ನಿಮಗೆ ಯಾರು ಹೇಳಿದರು ನಾನು ಹಾವು ಹಿಡಿಯುತ್ತೇನೆ ಎಂದು ಕೇಳಿದೆ. ನಾನೇನು ಹಾವಡಿಗನ ಎಂದು ಕೇಳಿದೆ. ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ನಿಮ್ಮ ಮಡದಿ ಹೇಳಿದ್ದಾರೆ ಪ್ಲೀಸ್ ಬನ್ನಿ ನಮ್ಮನ್ನು ಕಾಪಾಡಿ ಎಂದರು.ನನಗೆ ತುಂಬಾ ಕೋಪ ಬಂದಿತ್ತು. ನಾನು ನನ್ನ ಮಡದಿಯ ಮುಖ ನೋಡಿದೆ. ನಡೀರಿ ಹೋಗೋಣ ಪಾಪ ಎಂದಳು. ಏನೇ ಇದು ನೀನು ಎಂದೆ. ಅವಳನ್ನು ಒಳಗಡೆ ಕರೆದು ನಾನು ಯಾವತ್ತಾದರೂ ನಿನಗೆ ನನ್ನ ಕೈ ಮೇಲೆ ಗರುಡ ರೇಖೆ ಇದೆ ಎಂದು ಹೇಳಿದ್ದೇನಾ? ಎಂದು ಕೇಳಿದೆ.ಇಲ್ಲ ಎಂದಳು. ಮತ್ತೆ ಏಕೆ? ಹೇಳಿದೆ ಎಂದೆ. ಮಂಜಣ್ಣ ಮದುವೆಗೆ ಮುಂಚೆ ನನಗೆ ಹೇಳಿದ್ದರು ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ಅಂದಳು. ಮಂಜ ನಿನಗೆ ಸುಳ್ಳು ಹೇಳಿದ್ದಾನೆ. ಹಿರಿಯರೇ ಹೇಳಿಲ್ಲವೇ, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎಂದು ಅಂದೆ. ಹಾಗಾದರೆ ಮತ್ತೆ ಇನ್ನೂ ಏನು ಸುಳ್ಳು ಹೇಳಿದ್ದೀರಾ? ಎಂದಳು. ಹೊರಗಡೆ ಶಾಂತಮ್ಮ ಒದರುತ್ತ ಇದ್ದರು. ನೋಡಿ ನೀವು ಒಂದು ಕೋಲು ತೆಗೆದುಕೊಂಡು ಹೋಗಿ ಓಡಿಸಲು ಪ್ರಯತ್ನಿಸಿ ಎಂದಳು. ಈಗ ಇಲ್ಲ ಎಂದರೆ ನಮ್ಮ ಮರ್ಯಾದೆನೇ ಹೋಗೋದು ಎಂದಳು. ಹೆಚ್ಚು ಕಡಿಮೆ ಆದರೆ ಜೀವಾ ಹೋಗುತ್ತೆ, ಆಮೇಲೆ ಮರ್ಯಾದೆ ಇಟ್ಟು ಕೊಂಡು ಒಗ್ಗರಣೆ ಹಾಕುತ್ತೀಯಾ? ಎಂದೆ. ನಾನು ನಿಮ್ಮ ಜೊತೆ ಇರುತ್ತೇನೆ ಬನ್ನಿ ಎಂದಳು. ನಡಿ ನೋಡೋಣ ಎಂದು "ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಎಂದು ಹರಳೆಣ್ಣೆ ಕುಡಿದ ಹಾಗೆ ಮುಖ ಮಾಡಿ ಹೊರಟು ನಿಂತೆ.

ಶಾಂತಮ್ಮ ಮನೆ ಕಡೆಗೆ ಹೊರಟು ನಿಂತೆವು. ನಾನು ಚಿಕ್ಕದು ಇದೇನಾ ದೊಡ್ಡದು ಇದೇನಾ ಎಂದು ಕೇಳಿದೆ. ದೊಡ್ಡದು ಎಂದರು. ಯಾವ ಕಲರ್ ಇದೆ ಎಂದು ಕೇಳಿದೆ. ಅದು ನಾಗರ ಹಾವು ಎಂದು ಕಾಣುತ್ತೆ ಕಂದು ಎಂದರು. ಈಗ ಮತ್ತಷ್ಟು ನಡುಕ ಶುರು ಆಯಿತು. ಯಾವಾಗ ಬಂತು ಎಂದು ಕೇಳಿದೆ. ಬಂದು ಅರ್ಧ ಘಂಟೆ ಆಗಿದೆ ಎಂದರು. ನೀವು ಓಡಿಸಲು ಪ್ರಯತ್ನಿಸಲಿಲ್ಲವೇ ಎಂದು ಕೇಳಿದೆ. ನಾನು ಪ್ರಯತ್ನ ಪಟ್ಟೇ ಆದರೆ ಏನು ಪ್ರಯೋಜನ ಆಗಲಿಲ್ಲ ಎಂದರು.

ಶಾಂತಮ್ಮನ ಮನೆ ಪ್ರವೇಶಿಸಿ ಆಗಿತ್ತು. ಮನೆಯಲ್ಲಿ ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಕಪಾಟಿನಲ್ಲಿ ಇದೆ ಎಂದು ಹೇಳಿದರು. ಕೈಯಲ್ಲಿ ಕೋಲು ಹಿಡಿದು ನಡುಗುತ್ತಾ ಹೊರಟೆ. ತಟ್ ಎಂದು ಹಿಂದಿನಿಂದ ಬೆಕ್ಕು ಮೇಲಿಂದ ಜಿಗಿದು ಕಾಲಿನ ಒಳಗಿಂದ ನುಸುಳಿ ಹೋಯಿತು. ಒಂದು ಕ್ಷಣ ಎದೆ ಬಡಿತ ನಿಂತು ಹೋಗಿತ್ತು. ಮತ್ತೆ ಮುಂದೆ ಹೋದೆ. ಕೋಲಿನಿಂದ ಕಟ್ ಕಟ್ ಶಬ್ದ ಮಾಡಿದೆ. ಹಾವು ಅಲುಗಾಡಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋಗಿ ಎಂದರು ಶಾಂತಮ್ಮ. ನನ್ನ ಕೊಲೆ ಮಾಡೋಕೆ ನೋಡುತ್ತಿದ್ದೀರ ಎಂದು ಮನಸಿನಲ್ಲೇ ಅಂದುಕೊಂಡೆ. ಏನೇ ಮಾಡಿದರು ಮುಂದೆ ಹೋಗಲು ಆಗಲಿಲ್ಲ.

ಅಷ್ಟರಲ್ಲಿ ಶಂತಮ್ಮ ಅವರ ಮೊಮ್ಮಗ ಕ್ರಿಕೆಟ್ ಆಡಿ ಮನೆಗೆ ಬಂದ. ಅಜ್ಜಿ ತಡೆದು ನಿಲ್ಲಿಸಿದರು. ಮನೇಲಿ ಹಾವು ಕಣೋ ನಿಲ್ಲು ಎಂದರು. ನಾನು ಕೋಲು ಹಿಡಿದು ಸಾವಕಾಶವಾಗಿ ಅದರ ಹತ್ತಿರ ಹೋಗಿದ್ದೆ. ಅದನ್ನು ನೋಡಿದ ಆ ಹುಡುಗ ಓಡಿ ಬಂದವನೇ ಆ ಹಾವನ್ನು ತೆಗೆದುಕೊಂಡು ಓಡಿ ಹೋಗಿ ಬಿಟ್ಟ. ನನಗಂತು ಎದೆ ಝಲ್ ಎಂದಿತ್ತು. ಅಜ್ಜಿ ಚಿರುತ್ತ ಇತ್ತು. ಪ್ಲೀಸ್ ನೋಡಿ ನನ್ನ ಮೊಮ್ಮಗನನ್ನು ಕಾಪಾಡಿ ಎಂದು ಗೋಗರೆದರು. ನಾನು ಬಚಾವಾದೆ ಎಂದು ಖುಷಿಪಟ್ಟರು. ಆ ಅಜ್ಜಿಯ ಅಳು ನೋಡಲು ಆಗಲಿಲ್ಲ.

ಕಡೆಗೆ ಆ ಹುಡುಗನನ್ನು ಬೆನ್ನು ಅಟ್ಟಿ ಕೊಂಡು ಹೋದೆ. ತುಂಬಾ ಚೂಟಿ ಹುಡುಗ ನಾನು ಬೆನ್ನು ಹತ್ತಿದಷ್ಟು ಜೋರಾಗಿ ಓಡ ಹತ್ತಿದ. ಕಡೆಗೂ ಸಿಕ್ಕಿ ಬಿಟ್ಟ. ಎಸೆ ಅದನ್ನು ಎಂದು ಹೇಳಿದೆ. ಇಲ್ಲ ನನಗೆ ಬೇಕು ಅಂದ. ಎಸೆ ಇಲ್ಲ ಎಂದರೆ ಹೊಡೆಯುತ್ತೇನೆ ಎಂದೆ. ನಾನು ದುಡ್ಡು ಕೊಟ್ಟು ತಂದಿದ್ದು ನಾನು ಎಸೆಯೋಲ್ಲ ಎಂದ. ನಾನು ಏನು ಮಾಡಬೇಕು ಎಂದು ತೋಚದಾಗದೆ ಜೋರಾಗಿ ನಗಹತ್ತಿದೆ. ಕಡೆಗೆ ಆ ಹುಡುಗನನ್ನು ಕೇಳಿದಾಗ ಅದು ರಬ್ಬರ್ ಹಾವು ಜಾತ್ರೆ ಇಂದ ತಂದಿದ್ದು ಎಂದು ಹೇಳಿದ.

ನಾನು ಮತ್ತು ನನ್ನ ಮಡದಿ ಜೋರಾಗಿ ನಗುತ್ತಾ ಇದ್ದೆವು. ಅಜ್ಜಿ ಮೊಮ್ಮಗನಿಗೆ ಬೈಯುತ್ತಾ ಇದ್ದಳು. ಹೇಳಬಾರದ ಮೊದಲೇ ಇದನ್ನು ಎಂದು. ನಾನು ನನ್ನ ಮಡದಿಗೆ ಇನ್ನೊಮ್ಮೆ ಹೀಗೆಲ್ಲ ನನ್ನ ಬಗ್ಗೆ ಜಂಭ ಕೊಚ್ಚಿ ಯಾರ ಮುಂದೆಯೂ ಹೇಳಬೇಡ ಎಂದು ತಾಕೀತ ಮಾಡಿ ಮನೆಗೆ ಬಂದೆವು. ನನ್ನ ಮಡದಿ ಮಾತ್ರ ನಗುವುದನ್ನು ನಿಲ್ಲಿಸಿರಲೇ ಇಲ್ಲ.

6 comments:

 1. ತಮ್ಮ ದೂರವಾಣಿ ಸಂಖ್ಯೆ ಕೊಟ್ಟಿರಿ ನಮ್ಮ ಸುತ್ತ ಮುತ್ತ ಹಾವು ಬಂದರೆ ಉಪಯೋಗಕ್ಕೆ ಬರುತ್ತೆ.. ಒಳ್ಳೆ ಕಥೆ ಗರುಡರೇಖೆಯವರದು..
  ಅಂದ ಹಾಗೇ ಮಂಜ ಈ ಸುಳ್ಳು ಯಾಕೆ ಹೇಳಿದ ಸಾವಿರ ಸುಳ್ಳಿನ ಮಧ್ಯೆ?? ಅದಕ್ಕೂ ಒಂದು ಕಥೆ ಹೊಸೆಯಿರಿ..

  ReplyDelete
 2. Good Joke! hha hha hhaa.....hh!

  ReplyDelete
 3. ಧನ್ಯವಾದಗಳು ಮತ್ತು ವಂದನೆಗಳು SSK ಸರ್,:):)

  ReplyDelete
 4. <>
  ಹಾವು ಬಂದಾಗ ತಿಳಿಸಿ, ತಮಗೆ ಮೇಲ್ ಮಾಡುತ್ತೇನೆ. :)

  <>
  ತಮ್ಮ ಪ್ರೋತ್ಸಾಹಕ್ಕೆ ಚಿರಋಣಿ. ಖಂಡಿತ ಪ್ರಯತ್ನಿಸುವೆ.


  <>
  ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್.

  ReplyDelete
 5. ತುಂಬಾ ಧನ್ಯವಾದಗಳು ಮತ್ತು ವಂದನೆಗಳು Girish sir.

  ReplyDelete