Saturday, December 25, 2010

ನೋಡಿ ಕಲಿತಿರುವ ನೀತಿ ಪಾಠ....

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.

ಮಡದಿಗೆ ಕಾಫೀ ಕೊಡು ಎಂದು ಹೇಳಿದೆ. ಪೇಪರ್ ಓದುತ್ತಾ ಕುಳಿತಿದ್ದ ನಾನು ಏನೇ? ಈರುಳ್ಳಿ ಬೆಲೆ ಗಗನಕ್ಕೆ ಏರಿದೆ ಅಲ್ಲೇ... ಎಂದೆ. ಭೂಮಿ ಕೆಳಗಡೆ ಬೆಳೆಯುವ ವಸ್ತುವಿಗೆ ಇಷ್ಟು ದುಬಾರಿ ಆದರೆ... ಇನ್ನೂ ಭೂಮಿ ಮೇಲೆ ಬೆಳೆಯುವ ಪದಾರ್ಥಗಳ ಗತಿ ಏನು ಎಂದೆ. ಖರ್ಚು ನೀಗಿಸುವ ಮೊದಲೇ ನಾನು ಭೂಮಿಯ ಒಳಗಡೆ ಹೋಗಿ ಕುಳಿತುಕೊಳ್ಳಬೇಕಾಗುತ್ತೆ ಎಂದೆ. ಯಾವುದೋ ವಿಷಯಕ್ಕೆ ಕೋಪ ಮಾಡಿಕೊಂಡಿದ್ದ ನನ್ನ ಮಡದಿ. ಹಾಗೆ ಆಗಬೇಕು ನಿಮಗೆ, ಇಷ್ಟು ದಿವಸ ನಮ್ಮನ್ನು ಅಳಿಸುತ್ತಿದ್ದಿರಿ, ಈಗ ನಿಮ್ಮ ಬಾರಿ ಎಂದಳು. ಈ ತಿಂಗಳಿಂದ ನಿನಗೆ ಐದು ನೂರು ಎಕ್ಸ್‌ಟ್ರಾ ಪಾಕೆಟ್ ಮನಿ ಕೊಡಬೇಕು ಎಂದು ಕೊಂಡಿದ್ದೆ. ಆದರೆ ಈಗ ನನ್ನ ಪರ್ಸ್ ಮಾರಿ ಈರುಳ್ಳಿ ತೆಗೆದುಕೊಳ್ಳುವ ಪರಿಸ್ತಿತಿ ಎಂದು ಹೇಳಿದೆ. ಹಾ... ಏನು?.. ಏನಂದ್ರಿ?.. ಎಂದು ಬಾಯಿ ತೆಗೆದು ಹೊರಗಡೆ ಬಂದು, ಹೌದು ನೋಡಿ ತುಂಬಾ ಕಷ್ಟ... ಕಷ್ಟ.. ಎಂದು ನನ್ನ ಕಷ್ಟಕ್ಕೆ ಸಾತ್ ನೀಡಿಡಳು.

ಅದಕ್ಕೆ ಇದನ್ನು ಸ್ವರ್ಣ ಗಡ್ಡೆ ಅನ್ನುವದು ಎಂದು ಹೇಳಿದಳು. ಸ್ವರ್ಣದ ಸ್ಪರ್ಧೆಗೆ ನಿಂತಿದೆ ಎಂದು ಕಾಣುತ್ತೆ ಎಂದಳು. ಇದು ಒಳ್ಳೇ ಕತೆ ಆಯಿತು, ಹುಲಿಗೂ ಬೆಕ್ಕಿಗೂ ಸ್ಪರ್ಧೆ ಹಾಗೆ ಎಂದು ಹಣಿ ... ಹಣಿ.. ಗಟ್ಟಿಸಿದೆ. ಮತ್ತೆ ಇದರ ಹೆಸರೇ ಸೂಚಿಸುವ ಹಾಗೆ ಇದನ್ನು ಕೇವಲ ಉಳ್ಳವರು ಮಾತ್ರ ಕೊಳ್ಳಬಹುದು. ಅದಕ್ಕೆ ಇದನ್ನು ಉತ್ತರ ಕರ್ನಾಟಕದ ಜನ ಉಳ್ಳಗಡ್ಡೆ ಎಂದು ಹೇಳುತ್ತಾರೆ ಎಂಬ ತನ್ನ ಅಪಾರ ಬುದ್ಧಿ ಮತ್ತೆ ಪ್ರದರ್ಶಿಸಿದಳು. ಮತ್ತೆ ಗೊತ್ತಾ? ಇದನ್ನು ಕೆಲ ಜನ ಕೃಷ್ಣ ಗಡ್ಡೆ ಎಂದು ಕೂಡ ಕರೆಯುತ್ತಾರೆ. ನಾನು ಕೃಷ್ಣ ಗಡ್ದೆ ಎಂದೆ. ಹಾ... ಹೌದು.. ರೀ... ಇದರ ಒಳಗಡೆ ಇರುವ ಚಕ್ರ ನೋಡಿದರೆ ಥೇಠ್ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇದೆ ಇಲ್ಲವ ಅದಕ್ಕೆ. ಚಕ್ರವ್ಯೂಹ ಭೇಧಿಸುವ ವಿದ್ಯೆ ಶ್ರೀ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು ಅದಕ್ಕೆ. ನಾನು ಹಾಗದೆರೆ ನಾವು ಈಗ ಒಳಗೆ ಸಿಕ್ಕಿ ಕೊಂಡು ಒದ್ದಾಡುವ ಸ್ತಿತಿ ಎಂದೆ. ಮತ್ತೆ ಅದನ್ನು ಹೆಚ್ಚಿದ ಮೇಲೆ ನಿಮಗೆ ಅದು ಚಕ್ರ.. ಚಕ್ರ.. ಆಗಿರುವದರಿಂದ ಸುದರ್ಶನ ಚಕ್ರಕ್ಕೆ ಹೋಲಿಸಿ ಕೃಷ್ಣ ಗಡ್ಡೆ ಅನ್ನುವರು ಎಂದು ತನ್ನ ಬುದ್ಧಿ ಮತ್ತೆಗೆ ಸ್ವಲ್ಪ ಒಗರಣೆ ಹಾಕಿದಳು. ಇಷ್ಟೆಲ್ಲಾ ಕತೆ ಹೇಳಿ ಮುಗಿದ ಮೇಲೆ ಮಡದಿ ಅಡುಗೆ ಮನೆಗೆ ಹೊರಟು ಹೋದಳು.

ಆಗ ಸುರೇಶನಿಗೆ ನೋಡಪ್ಪ ಮದುವೆ ಆದರೆ ಇಷ್ಟೆಲ್ಲಾ ಕೇಳಬೇಕುಗುತ್ತೆ. ಇದಕ್ಕೆ ನೀನು ರೆಡೀ ಇದ್ದರೆ ಅದು ನಿನ್ನ ಕರ್ಮ ಎಂದೆ. ಮತ್ತೆ ಕೌನ್ ಬನೇಗ ಕರೋಡ್ ಪತಿಯಲ್ಲಿ ಕೂಡ ನಾಲ್ಕು ಲೈಫ್ ಲೈನ್ ಇರುತ್ತೆ ಆದರೆ ಇಲ್ಲಿ ಇರುವದು ಒಂದೇ ಲೈಫ್... ಅದುವೇ ನಿನ್ನ ವೈಫ್... , ಆಮೇಲೆ ನಿನ್ನ ಲೈನ್ ಚೇಂಜ್ ಆಗಿ ಹೋಗಿರುತ್ತೆ ಎಂದು ಹೇಳಿದೆ. ಮತ್ತೆ ಅವನಿಗೆ ನಾನು ನನ್ನ ಗೆಳೆಯನ ಬಗ್ಗೆ ಬರೆದಿರುವ ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು... ಓದು ಎಂದು ಕೊಟ್ಟೆ. ನೋಡಿ ನೀನು ಕಲಿತಿರುವ ನೀತಿ ಪಾಠ ಏನು? ಎಂದು ಕೇಳಿದೆ. ಹುಡುಗ ಅಷ್ಟೇ ತಾನೇ ಅಂಕಲ್, ಚಿಂತೆ ಮಾಡಬೇಡಿ, ನನಗೂ ಅಡುಗೆ ಮಾಡಲು ಬರುತ್ತೆ ಮತ್ತು ಏನೋ ಹುಡುಗಿಯರು ಹೇಳುವ ಪುರಾಣವನ್ನು ಒಂದು ಕೀವಿಲಿ ಕೇಳಿ ಎನ್ನೊಂದರಲ್ಲಿ ಬಿಟ್ಟಾರಾಯಿತು ಎಂದ. .

ಅಷ್ಟರಲ್ಲಿ ಮಡದಿ ಕಾಫೀ ತೆಗೆದುಕೊಂಡು ಬಂದಳು. ಇಬ್ಬರು ಕಾಫೀ ಹಿರಿ ಮುಗಿಸುವಷ್ಟರಲ್ಲೇ, ನನ್ನ ಮಡದಿ ಗೋಪಾಲ್ ರಾಯರೆ ಸ್ವಲ್ಪ ಕೃಷ್ಣ ಗಡ್ಡೆ ಹೆಚ್ಚಿ ಕೊಡಿ ಎಂದು ಹೇಳಿದಳು. ಪಾಪ ಸುರೇಶ ನನ್ನ ಪಿಕಿ ಪಿಕಿ ಕಣ್ಣು ಬಿಟ್ಟು ನೋಡುತ್ತಿದ್ದ.

ಅಂಕಲ್ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆ ಕೂಡ ಆಗಿದ್ದೇನೆ. ಆದರೆ ಜಾತಿ ಮಾತ್ರ ಬೇರೆ..ಬೇರೆ... ಇದನ್ನು ಅಪ್ಪನಿಗೆ ಹೇಳಿದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಾರೆ. ನೀವೇ ಏನಾದರೂ ಮಾಡಿ ಅಪ್ಪನಿಗೆ ಹೇಳಿ ಒಪ್ಪಿಸಬೇಕು ಎಂದು ಹೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ನಮ್ಮ ಮನೆಗೆ ಇರಲು ಎಂದು ಬಂದು, ಮದುವೆ ಕೂಡ ಆಗಿದ್ದಾನೆ. ಕಡೆಗೆ ಇವನ ಅಪ್ಪ ಒಪ್ಪದಿದ್ದರೆ ಇಲ್ಲೇ ಠಿಕಾಣಿ ಎಂದು ಯೋಚಿಸಿದೆ. ಕಡೆಗೆ ಅವರ ಅಪ್ಪನಿಗೆ ಕರೆ ಮಾಡಿ ತಿಳಿಸಿದೆ, ಒಪ್ಪಿದ ಆಸಾಮಿ, ಸಧ್ಯ ನಾನು ಬಚಾವ್....

2 comments:

  1. ಸೀತಾರಾಮ. ಕೆ. sir ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
    ಪ್ರೀತಿಯಿಂದ ಗೋಪಾಲ್

    ReplyDelete