Friday, December 17, 2010

ಮರೆತೇನೆಂದರೆ ಮರೆಯಲಿ ಹ್ಯಾಂಗ!? ....

ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು ನಮ್ಮನ್ನು ಸದಾ ಕಾಡುವ ಭೂತ ಕಾಲದ ಬಗ್ಗೆ. ನನ್ನ ಕಳೆದ ಮಾಸಿದ ಮಧುರ ಅನುಭವಗಳನ್ನು ಮೆಲಕು ಹಾಕಿದ್ದೇನೆ. ನನಗೆ ತುಂಬಾ ಇಷ್ಟವಾಗುವ ಧಾರಾವಾಹಿ ಎಂದರೆ ವಿಕ್ರಮ್ ಬೆತಾಳ್. ಏಕೆಂದರೆ ಪ್ರತಿ ಬಾರಿ ನಾನು ಕಳೆದ ಮಧುರ ಕ್ಷಣಗಳ ಭೂತವನ್ನು ಹೊತ್ತು ತರುತ್ತೇನೆ. ಮತ್ತೆ ಅದರ ಜೊತೆ ಒಂದು ನೀತಿ ಪಾಠವನ್ನು ಕೂಡ ಕಲೆತಿರುತ್ತೇನೆ. ನಾನು ಅದನ್ನು ಬಿಟ್ಟು ಬಿಡುತ್ತೇನೆ. ಮತ್ತೆ ಅದರ ಹಿಂದೆ ಹೋಗಿ ಮತ್ತೊಂದು ಹೊಸ.. ಹೊಸ.. ಕಥೆಗಳನ್ನು ಹೊತ್ತ ಭೂತವನ್ನು ಹೆಗಲ ಮೇಲೆ ಕುಳ್ಳಿರಿಸಿ ಮುಂದೆ ನಡೆಯುತ್ತೇನೆ. ಇದು ನಿರಂತರವಾಗಿ ನಡೆಯುವ ಕ್ರಿಯೆ.

ಹೀಗೆ ಎರಡು ದಿನದಿಂದ ಏನಾದರೂ ಹಳೆಯ ನೆನಪುಗಳನ್ನು ಬರೀಬೇಕು ಎಂದು ಯೋಚಿಸುತ್ತಾ ತಲೆಕೆಡಿಸಿಕೊಂಡಿದ್ದೆ. ನಿನ್ನೆ ರಾತ್ರಿ ಬೇರೆ ಮಡದಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಎಲ್ಲ ಕೆಲಸ ನನ್ನ ಹೆಗಲ ಮೇಲೆ ಬಿದ್ದಿತ್ತು. ಮೊದಮೊದಲು ಯಾವುದೆ ಸ್ತ್ರೀ... ಕ್ಷಮಿಸಿ... ಇಸ್ತ್ರಿ ಮುಟ್ಟಲು ಹೆದರುತ್ತಿದ್ದೆ. ಮದುವೆ ಆದ ಮೇಲೆ ಈಗ ಸ್ವಲ್ಪ ಧೈರ್ಯ ಬಂದಿದೆ. ಅದಕ್ಕೆ ಅಪ್ಪ ಚಿಕ್ಕವಾನಿದ್ದಾಗ ಲೇ ನೀನು "ಅರಳಿ ಅಂಡಿಗೇ ಮೇಲೆ ಲಗಾಟಿ ಹೊಡೆಯುವ ನೀನು" ಅನ್ನುತ್ತಿದ್ದರು. ರಾತ್ರಿನೆ ಇಸ್ತ್ರಿ ಮಾಡಿ ಬಟ್ಟೆ ಎತ್ತಿ ಇಟ್ಟಿದ್ದೆ.

ಮುಂಜಾನೆ ಬೇಗ ಐದು ಘಂಟೆಗೆ ಎದ್ದು ಕಸ ಗುಡಿಸಿ, ಪಾತ್ರೆ ತೊಳೆದು ಹಾಗೆ ಲೇಖನದ ಯೋಚನೆಯಲ್ಲಿ ಟೀ ಮಾಡಿಕೊಂಡು ಬಂದು ಕುಳಿತೆ. ಲೇಖನದ ಗುಂಗಿನಲ್ಲಿ ಟೀ ಪಾತ್ರೆ ತೊಳೆಯೋಕೆ ಎಂದು ಲೈಟ್ ಆಫ್ ಮಾಡಿ, ಮುಂದಿನ ಬಾಗಿಲ ಮುಚ್ಚಿ ಹೋದೆ. ಟೀ ಪಾತ್ರೆ ತೊಳೆದ, ಕೆಲ ಸಮಯದ ನಂತರ "ಕಟ್.. ಕಟ್.." ಬಾಗಿಲ ಶಬ್ದ. ಇಷ್ಟು ಘಂಟೆಗೆ ಯಾರು? ಬಂದಿರಬಹುದು ಎಂದು ಯೋಚಿಸಿದೆ. ನಿನ್ನೆ ಮನೆ ಓನರ್ ಗೆ ಬಾಡಿಗೆಗೆ ಎರಡು ನೂರು ಚಿಲ್ಲರೆ ಇರದ ಕಾರಣ ನಾಳೆ ಕೊಡುತ್ತೇನೆ ಎಂದು ಹೇಳಿದ್ದೆ. ಪಾಪ ಒಳ್ಳೇ ಮನುಷ್ಯ, ಹಾಗೆಲ್ಲಾ ಬೆಳಿಗ್ಗೇನೇ ತೊಂದ್ರೆ ಕೊಡೋ ಆಸಾಮಿ ಅಲ್ಲ. ಬಹುಶಃ ಹಾಲಿನವನು ಬೇಗ ಬಂದನೆ ಎಂದು ಪಾತ್ರೆ ತೆಗೆದುಕೊಂಡೆ. ಹಾಗೆ ಬೈದುಕೊಳ್ಳುತ್ತ ಬಾಗಿಲು ತೆಗೆದು, ಪಾತ್ರೆ ಮುಂದೆ ಹಿಡಿದೆ. ಪಾತ್ರೆ ಕಸಿದು, ಬಾಗಿಲು ನುಕಿ, ಒಬ್ಬ ಸೀರೆ ಉಟ್ಟ ಮಹಿಳೆ ಒಳಗಡೆ ಬಂದಳು. ರೀss.. ಯಾರು? ಬೇಕು ನಿಮಗೆ ಎಂದು ದಬಾಯಿಸಿದೆ. ಲೈಟ್ ಆನ್ ಮಾಡಿದಳು ನನ್ನ ಮಡದಿ. ಏನೇ? ನೀನು ಇಷ್ಟು ಬೇಗ ಎದ್ದು ವಾಕಿಂಗ್ ಹೋಗಿದ್ಯಾ ಎಂದು ಆಶ್ಚರ್ಯವಾಗಿ ಕೇಳಿದೆ. ಮಾತು.. ಕಥೆ.. ಇಲ್ಲದೇ ಸಕ್ಕತ್ ಕೋಪ ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು. ತವರು ಮನೆ ಎಂದರೆ ನಾನು ಹೇಳಿದ್ದು ಅಡುಗೆ ಮನೆ... ಏಕೆಂದರೆ ಹೆಣ್ಣು ಮಕ್ಕಳ ಇಷ್ಟವಾದ ಜಾಗ ಅದೇ ಅಲ್ಲವೇ. ಟೀ ತೆಗೆದು ಕೊಂಡು ಬಂದು ಕೋಪದಿಂದ ಹೊರಗಡೆ ಬಂದು ಕುಳಿತಳು.

ಏಕೆ? ಏನು? ಆಯಿತು ನಿನ್ನೆ ತಾನೇ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದೆ ಎಂದು ಕೇಳಿದೆ. ಸಕ್ಕತ್ ಕೋಪದಿಂದ, ನಿಮ್ಮ ಮುಂದೆನೇ ಎದ್ದು ಥಳಿ.. ರಂಗೋಲಿ ಹಾಕೋಕೆ ಹೋದೆ. ಬೇಕು ಅಂತಾನೆ ಹೊರಗೆ ಹಾಕಿದ್ದು ಎಂದಳು. ನಾನು ಲೇಖನದ ಯೋಚನೆಯಲ್ಲಿ ಅವಳು ಎದ್ಡಿದ್ದು ಗಮನಿಸಿರಲಿಲ್ಲ. ಏನೇ?.. ಬೇಕು ಅಂತ ನಿನ್ನ ಹೊರಗೆ ಹಾಕೋಕೆ ಆಗುತ್ತಾ ಎಂದು ಡಬಲ್ ಮೀನಿಂಗ್ ಡೈಲಾಗ್ ಬಿಟ್ಟೆ. ಅರ್ಥ ಆಗಲಿಲ್ಲ, ಮತ್ತೆ ಬಚಾವ್. ನಾನು ಗಮನಿಸಿರಲಿಲ್ಲ ಕಣೇ? ಸಾರೀ ಎಂದು ಹೇಳಿದೆ.

ನಿಮ್ಮ ಲಕ್ಷ್ಯ ಎಲ್ಲಿ ಇತ್ತು ಎಂದು ಕೇಳಿದಳು. ಲೇ ಅದು ಒಂದು ಲೇಖನದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಾ ಇದ್ದೆ ಎಂದೆ. ಅಂತಹ ಗಾಡವಾದ ವಿಷಯ ಏನು? ಇತ್ತು ರಾಯರದು ಎಂದಳು. ಅದು ನನ್ನ ಹಳೆಯ ನೆನಪುಗಳ ಬಗ್ಗೆ ಒಂದು ಲೇಖನ ಬರಿಬೇಕು ಎಂದು ಕೊಂಡಿದ್ದೇನೆ ಎಂದೆ. ನಿಮಗೆ ನನ್ನ ಇರುವಿಕೆಯ ಅರಿವಿಲ್ಲ, ಇನ್ನೂ ನೀವು ಅಷ್ಟು ದೂರ ಹೋಗಿ ಬಿಟ್ಟರೆ ಅಷ್ಟೇ ಕಥೆ ಎಂದು ಹೀಯಾಳಿಸಿದಳು.

ನಿಮ್ಮ ಹಳೆಯ ಕಥೆಗಳು ಎಂದರೆ ಅದೇ ತಾನೇ ನೀವು ಹೇಳುತ್ತಿರುತ್ತೀರಲ್ಲ ಚಿಕ್ಕವರಿದ್ದಾಗ 10 ರೂಪಾಯಿಗೆ 1 ಕೆ ಜಿ ಅಕ್ಕಿ ಎಂದೆಲ್ಲ.... ನಿಮ್ಮ ತಂದೆಯ ಪಗಾರ ಆ ಸಮಯದಲ್ಲಿ 2000 ಇತ್ತು. ಅದು ಆ ಕಾಲಕ್ಕೆ ಹೊಂದಾಣಿಕೆ ಆಗುತಿತ್ತು. ಈಗ ನಿಮ್ಮ ಪಾಗಾರ ನೋಡಿ ಎಂದಳು. ಹಾ... ಅವಳು ಹೇಳಿದ್ದು ಸರಿ ಅನ್ನಿಸಿತು. ಮತ್ತೆ ನೀವು ಗೋಲ್ ಗುಂಬಜ್ ನೋಡಿದ್ದೀರಾ? ಎಂದು ಕೇಳಿದಳು. ಹಾ... ನೋಡಿದ್ದೇನೆ ಒಂದು ಸಾರಿ ಒದರಿದರೆ 7 ಸಾರಿ ಕೇಳಿಸುತ್ತೆ ಎಂದೆ. ಅಂತಹ ಒಂದು ಮಶೀನ್ ನಿಮಗೆ ಬೇಕು ಎಂದು ಹೀಯಾಳಿಸಿದಳು . ಮತ್ತೆ ಏನು? ನೋಡಿದಿರಿ ಅಲ್ಲಿ ಎಂದಳು. ನಾನು ಕೆಳಗಡೆ ಇರುವ ಜನ ಚಿಕ್ಕ ಚಿಕ್ಕದಾಗಿ ಸೇವಂತಿ ಹೂವಿನ ಪಕಳೆ ಹಾಗೆ ಕಾಣಿಸುತ್ತಿದ್ದರು ಎಂದೆ. ನೀವು ಕೆಳಗಡೆ ಹೋದರೆ ಅವಿರಿಗಿಂತ ಚಿಕ್ಕದಾಗಿ ಇದ್ದೀರಾ? ಗೊತ್ತಾ... ಕುಳ್ಳ ಮಹಾಶಯರೇ ಎನ್ನಬೇಕೆ. ಅವಳು ಅದೇ ನೀವು ಮಾಡೋ ತಪ್ಪು, ಮೇಲೆ ನೋಡಲಿಲ್ಲವೇ ನಮ್ಮ ಹತ್ತಿರಾನೇ ಬಂದು ಹೋಗೋ ವಿಮಾನ, ಹಕ್ಕಿ ಮತ್ತೆ ಆಕಾಶ ಎಂದೆಲ್ಲ ಕೇಳಿದಳು. ನಿಜ ಅನ್ನಿಸಿತು ನಾವು ಎಲ್ಲರೂ ಮಾಡುವದನ್ನು ಮಾತ್ರ ಗಮನಿಸುತ್ತೇವೆ ಮತ್ತೆ ಹೊಸತಾಗಿ ಯೋಚಿಸುವುದೆ ಇಲ್ಲ ಎಂದು. ಮತ್ತೆ ಗೋಪಿಕಾ ಸ್ತ್ರೀಯರು (ಹಳೆ ಗರ್ಲ್ ಫ್ರೆಂಡ್) ಏನಾದರೂ ನೆನಪಿಗೆ ಬಂದರಾ ಎಂದು ಹೇಳಿ, ಮನಸಿಗೆ ಕಚಗುಳಿ ಇಟ್ಟು, ನೋಡಿ ನೀವು ವರ್ತಮಾನದ ಬಗ್ಗೆ ಮಾತ್ರ ಯೋಚಿಸಿ ಬರೆಯಿರಿ. ನೀವು ಭೂತಕಾಲದ ಬಗ್ಗೆ ಯೋಚನೆ ಮಾಡುತ್ತಾ ಇದ್ದರೆ ಅಷ್ಟೇ ಕತೆ ಎಂದು ಒಂದು ಬಾಂಬ್ ಹಾರಿಸಿ, ಟೀ ಕುಡಿದು ಸ್ನಾನಕ್ಕೆ ಹೊರಟು ಹೋದಳು.

2 comments:

  1. ನೀವು ಗೋಲ್ ಗುಂಬಜ್ ನೋಡಿದ್ದೀರಾ?- ಎಂದಾಗ ಅದರ ಭವ್ಯತೆಯ ಬಗ್ಗೆ ಮಾತಡ್ತಾರೆನೋ ಅಂತ ಅಂದು ಕೊಂಡಿದ್ದೆ, ಆದ್ರೆ ಅದಕ್ಕಿಂತ ಉತ್ತಮ ಉಪಮೆ ನೀಡಿದ್ದು, ನಗು ತರಿಸಿತು. ಪ್ರಚಲಿಕ್ಕಿಂತ ಭೂತಗಲೇ ಖುಷಿ ನೀಡೋದು. ಸಾಗಲಿ ಪಯಣ..!

    ReplyDelete
  2. ಧನ್ಯವಾದಗಳು ಮತ್ತು ವಂದನೆಗಳು. ಆಗಾಗ ಬರುತ್ತೀರಿ...:-)).

    ReplyDelete