Wednesday, December 29, 2010

ಸೀರೀಯಸ್‌ನೆಸ್ ....

ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು. ಇದನ್ನು ಮೊದಲನೆ ಬಾರಿ ಹೇಳಿದ್ದರೆ ಸ್ವಲ್ಪ ಸೀರೀಯಸ್ ಆಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇದು ಎಷ್ಟನೆ ಬಾರಿ ಎಂಬುದು ನನಗೆ ತಿಳಿದಿಲ್ಲ...ಅದಕ್ಕೆ ಅಂತ ಒಂದು ಕಂಪ್ಯೂಟರ್ ನೇಮಿಸಿದರು ಲೆಕ್ಕ ಸಿಗುವುದಿಲ್ಲ. ಮೊದ ಮೊದಲು ಅಪ್ಪ ಕೂಡ ಇದನ್ನೇ ಹೇಳುತ್ತಿದ್ದರು. "ಲೇ ಕತ್ತೆ ಅಷ್ಟು ವಯಸ್ಸು ಆಯಿತು, ಯಾವಾಗೆ ಬರುತ್ತೋ ಸೀರೀಯಸ್‌ನೆಸ್" ಅಂತ. ಅದೇನೋ ಗೊತ್ತಿಲ್ಲ ಇಂತಹ ಅಪವಾದಕ್ಕೆ ನಾನು ಗುರಿಯಾಗುತ್ತೇನೋ ಅಥವಾ ಅಪವಾದ ನನ್ನನ್ನು ಗುರಿ ಮಾಡಿ ಕೆಲಸ ಮಾಡುತ್ತೋ ಇದುವರೆಗೂ ಅರಿಯದ ಸಂಗತಿಯಾಗಿದೆ.

ಆದರೂ ಹೆಂಡತಿ ಹೇಳಿದ್ದು ನನಗೆ ಸರಿ ಬರಲಿಲ್ಲ. ಏಕೆ? ಎಂದರೆ ಸೀರೆ + ಎಸ್(Yes) + ನೆಕ್ಸ್ಟ್(Next ಏನು? ಬೇಕು ಹೇಳು) {ಸೀರೀಯಸ್‌ನೆಸ್} ಎಷ್ಟು ಬಾರಿ ತೋರಿಸಿಲ್ಲ. ಇದು ಅನ್ಯಾಯ ಅಲ್ಲವೇ...?. .ಈ ಸೀರೀಯಸ್‌ನೆಸ್ ಎಲ್ಲಿಯಾದರೂ ಕೆ.ಜಿ ಅಥವಾ ಲೀಟರ್ ಲೆಕ್ಕದಲ್ಲಿ ಕೊಳ್ಳಲು ಸಿಗುತ್ತಾ ಎಂದು ಅಂತರ್ಜಾಲ ಪೂರ್ತಿ ತಡಕಾಡಿದೆ. ಅದನ್ನು ಮಾರುವವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಬೇಡವೇ, ಅದರ ಜಾಹೀರಾತು ಹಾಕಬೇಕು ಎಂದು. ಕಡೆಗೆ ಸಿಗಲೇ ಇಲ್ಲ...:-(.

ನಾನು ಅರಿತ ಪ್ರಕಾರ ಸೀರೀಯಸ್‌ನೆಸ್ ಕಂಡಿದ್ದು ಬರಿ ಪೇಶೆಂಟ್ ಗಳಲ್ಲಿ ಮಾತ್ರ, ಅದು ಡಾಕ್ಟರ್ ಗೆ ಕೂಡ ಇರುತ್ತೆ, ಏಕೆಂದರೆ? ಅಂತವರನ್ನು ಅವರು ಗುಣ ಪಡಿಸುತ್ತಾರಲ್ಲ ಅದಕ್ಕೆ.

ನನಗೆ ಚಿಕ್ಕಂದಿನಿಂದಲೂ ಎಲ್ಲ ವಿಷಯಗಳನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುವ ಸ್ವಭಾವ. ಅದೇ "ಹುಟ್ಟಿದ ಗುಣ, ಸುಟ್ಟರೂ ಹೋಗುವುದಿಲ್ಲ" ಅನ್ನುತ್ತಾರೆ ಹಾಗೆ. ಅದು ಇನ್ನೂ ಹಾಗೆ ಇದೆ. ನನ್ನ ಸದಾ ನಗು ಮುಖ ಇರುವದರಿಂದ, ನನ್ನ ಒಬ್ಬ ಗೆಳೆಯ ಅದಕ್ಕೆ ನನ್ನನ್ನು ಹಸ್ಮುಖ ಎಂದು ಹೇಳುತ್ತಿದ್ದ ( ಗೋಪಾಲ್ ನಾಮಧೇಯಕ್ಕೆ ಅನುಗುಣವಾಗಿ ಹಸುವಿನ ಹಾಗೆ ಇರುವ ಮುಖ ಎಂದು ಭಾವಿಸಿರಲಿಲ್ಲ ಎಂದು ಅಂದುಕೊಂಡಿದ್ದೇನೆ). ನನ್ನ ಮದುವೆ ಸಮಯದಲ್ಲಿ, ಅದೇ ಗೆಳೆಯ ಈಗಾದರೂ ಸಲ್ಪ ಗಂಭೀರವಾಗಿ ಇರುವದನ್ನು ಕಲಿ ಎಂದು ತಿಳುವಳಿಕೆ ಅನುಗ್ರಹಿಸಿದ. ಅದು ಹೇಗೆಂದು ನನಗೆ ಅರ್ಥ ಆಗಲಿಲ್ಲ. ಮುಖ ಗಂಟಿಕ್ಕಿ ಮದುವೆ ಮಾಡಿಕೊಳ್ಳುವುದೇ ಎಂದು ಯೋಚಿಸಿದೆ.

"ಅಳುವ ಗಂಡನ್ನು ನಂಬಬಾರದು ಮತ್ತೆ ನಗುವ ಹೆಣ್ಣನ್ನು " ಎಂಬ ಗಾದೆ ಇದೆ. ನನ್ನ ನಗುವಿಗೆ ಒಬ್ಬ ಹುಡುಗಿ ಸಾತ್ ನೀಡಿದ್ದಳು. ಇವನಿಗೆ ಯಾವ ಸುಂದರಿ ಸಾತ್ ನೀಡಿದಳು,ಎಲ್ಲೋ ಪ್ರಾಣಿಸಂಗ್ರಹಾಲಯದಲ್ಲಿ ಇರಬಹುದು ಎಂದು ಅಂದುಕೊಂಡಿರ...ಸತ್ಯವಾಗಿ ಒಳ್ಳೇ ಸರಳ ಸಹಜ ಸುಂದರಿ.. ನಮ್ಮ ಮಂದಹಾಸ ಮಧುರವಾಗಿ ಬಹಳ ದಿನ ನಡೆದಿತ್ತು. ಅದೇನೋ ದೊಡ್ಡವರು ಅನ್ವೇಷಿಸಿದ ಗಾದೆಗೆ ವಿರುದ್ಧವಾಗಿ ನಡೆದರೆ ದೊಡ್ಡವರು ಬಿಡುತ್ತಾರೆಯೇ...ತಮ್ಮ ಗಾದೆ ಸತ್ಯವಾಗಿರಿಸಿ, ನನ್ನನ್ನು ಆ ಹುಡುಗಿಯ ತ'ಗಾದೆ'ಗೆ ಬರದಂತೆ ನೋಡಿಕೊಂಡರು.

ನನ್ನ ಒಬ್ಬ ಗೆಳೆಯನಿಗೆ ಎಲ್ಲರಿಗಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿದ್ದರು. ಮದುವೆ ಸಮಯದಲ್ಲಿ, ಅವರ ಅಪ್ಪ ನನಗೆ, ನೋಡು ಈಗ ನನ್ನ ಮಗ ದಾರಿಗೆ ಬರುತ್ತಾನೆ. ಮೊದಲೇ ಉಡಾಳ್.. ಈಗ ಸ್ವಲ್ಪ ಸೀರೀಯಸ್‌ನೆಸ್ ಬರುತ್ತೆ ಎಂದರು. ಮದುವೆ ಆದ ಮೇಲೆ ಸೀರೀಯಸ್‌ನೆಸ್ ಬಂತೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದೇ ವರ್ಷದಲ್ಲಿ ಅವನಿಗೆ ಅವಳಿ-ಜವಳಿ ಎರಡು ಮಕ್ಕಳು ಮಾತ್ರ ಬಂದವು.

ಒಮ್ಮೆ ಮೈಸೂರಿನಲ್ಲಿ ಇರುವಾಗ, ಅಲ್ಲಿ ಕೆಲಸ ಮಾಡುವ ಒಬ್ಬ ಅಕೌಂಟೆಂಟ್ ಬಂದು ಏನ್ರೀ? ಮಿಲ್ಕ್ ಬಿಲ್ಲು ತಪ್ಪಾಗಿ ಬಂದಿದೆ ಎಂದರು. ನಾನು ನಗುತ್ತಾ ಅಷ್ಟೇನಾ? ಎಂದೆ. ಅಷ್ಟಕ್ಕೇ ಅಪಾರ್ಥ ಮಾಡಿಕೊಂಡು ಹೋಗಿ ಮ್ಯಾನೇಜರ್ ಗೆ ಗೋಪಾಲ್ ಅವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಇಲ್ಲ ಎಂದು ಕಂಪ್ಲೇಂಟ್ ಮಾಡಿದ್ದರು. ಆಮೇಲೆ ಮ್ಯಾನೇಜರ್ ನನ್ನ ಮೇಲೆ ತಮ್ಮ ಅಧರದಿಂದ ಮಳೆ ಸುರಿಸಿ ಕಳುಹಿಸಿದ್ದರು.

ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಅಲ್ಲಿಯ ಮ್ಯಾನೇಜರ್ ನನಗೆ ಒಂದು ಕೆಲಸ ಮಾಡಲು ಹೇಳಿದರು ಮತ್ತು ಅದಕ್ಕೆ ಎಷ್ಟು ದಿವಸ ಬೇಕು ಎಂದು ಕೇಳಿದರು. ನಾನು ನಗುತ್ತಾ ಎರಡು ದಿವಸ ಎಂದೆ. ಅದಕ್ಕೆ ಆ ಮನುಷ್ಯ ಅದು ಕಡಿಮೆ ಆಯಿತು ಎಂದು ತಿಳಿದನೋ ಅಥವಾ ಜ್ಯಾಸ್ತಿಯೋ ತಿಳಿಯಲಿಲ್ಲ. ಮತ್ತೆ ಎರಡು ದಿವಸ ಎಂದು ಕೇಳಿದರು. ಅದಕ್ಕೆ ನಾನು ಒಂದು ಎಂದೆ. ಮತ್ತೆ ಅವರು ಒಂದು ದಿವಸ ಎಂದು ಕೇಳಿದರು. ನಾನು ಅರ್ಧ ದಿವಸ ಎಂದೆ. ಏಕೆಂದರೆ ನಾನು ನನ್ನ ಮೇಲಿನ ನಂಬಿಕೆಗಿಂತ ನನ್ನ ಪ್ರೀತಿಯ ಶ್ರೀ ರಾಮನ ಮೇಲೆ ಇರುವ ಅಪಾರ ನಂಬಿಕೆಯಿಂದ(ನೆಡೆಸುವವನು ಅವನು ತಾನೇ).... ಮತ್ತೆ ಅರ್ಧ ದಿವಸ ಎಂದರು. ಈಗಲೇ ಮಾಡಿ ಕೊಡುತ್ತೇನೆ ಎಂದೆ. ಅದೇನೋ ಗೊತ್ತಿಲ್ಲ ನನ್ನ ಜೊತೆ ಜಗಳವಾಡಿ ಹೊರಟು ಹೋದರು. ಮತ್ತೆ ಅದನ್ನು ಎರಡು ದಿನಗಳಲ್ಲಿ ಪೂರ್ತಿ ಗೊಳಿಸಿ ಅವರಿಗೆ ಹೇಳಿದ್ದೆ.

ಹಾಗೆಂದು ನನಗೆ ಸೀರೀಯಸ್‌ನೆಸ್ ಇಲ್ಲವೇ ಇಲ್ಲ ಎಂದು ಅಲ್ಲ...ನನಗೆ ತಿಂದಿದ್ದು ಅಜೀರ್ಣ ಆಗಿ ದಾರಿತಪ್ಪಿದಾಗ ಮಾತ್ರ ಸ್ವಲ್ಪ ಸೀರೀಯಸ್‌ನೆಸ್ ತಾನಾಗೇ ಬರುತ್ತೆ.

4 comments:

 1. ha ha ha... channagide sir.. :)

  Take it easy policy...

  ReplyDelete
 2. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...:-)).

  ReplyDelete
 3. ಸೀತಾರಾಮ ಸರ್ ನಮಸ್ಕಾರ .....ಧನ್ಯವಾದಗಳು ಮತ್ತು ವಂದನೆಗಳು :-)).

  ReplyDelete