Thursday, December 23, 2010

ಸಮ್ಮಿಶ್ರ ಸಂಸಾರ ....

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.

ನಮ್ಮ ಸಮ್ಮಿಶ್ರ ಸರಕಾರಕ್ಕೆ ನಾಂದಿ ಹಾಡಿದ ಆ ಜೋತಿಷ್ಯ ಪಂಡಿತ ಯಾವ ಕವಡೆ ಕಾಸಿಗೋಸ್ಕರ ಕವಡೆ ಉರಿಳಿಸಿ ನಮ್ಮ ಜನ್ಮ ಕುಂಡಲಿಗಳನ್ನು ಸೇರಿಸಿದನೋ ನಾನು ಕಾಣೆ. ಪ್ರತಿ ವಿಷಯದಲ್ಲೂ ನಮ್ಮಿಬ್ಬರಲ್ಲಿ ಬಿನ್ನ ಅಭಿಪ್ರಾಯ ಖಂಡಿತ ಇರುತ್ತೆ. ಮತ್ತೆ ಇಷ್ಟೆಕ್ಕೆಲ್ಲಾ ಆಗ ತಾನೇ ಜೋತಿಷ್ಯ ಕಲೆಯುತ್ತಿದ್ದ ಮನೋಜ, ಮೂವತ್ತನೆ ವಯಸ್ಸಿನ ಒಳಗೆ ನಿನ್ನ ಮದುವೆ ಆಗದಿದ್ದರೆ, ಈ ಜನ್ಮದಲ್ಲಿ ಮದುವೆ ಆಗಲ್ಲ ಕಣೋ ಎಂದು ತನ್ನ ಕಲಿತ ವಿದ್ಯೆಯ ಪ್ರಯೋಗ ನನ್ನ ಮೇಲೆ ಮಾಡಿದ್ದು ಕೂಡ ಪರಿಣಾಮವಾಗಿ ಈ ಸರಕಾರ ಅಸ್ತಿತ್ವಕ್ಕೆ ಬಂತು.

ಒಂದು ದಿನ ಸೀರೆ ಅಂಗಡಿಗೆ ಹೋಗಿದ್ದೆವು. ರಾತ್ರಿ ಒಂಬತ್ತು ಆದರೂ ನಮ್ಮ ಸೀರೆ ಸೆಲೆಕ್ಶನ್ ಮುಗಿದಿರಲಿಲ್ಲ.ಅವಳಿಗೆ ನೀಲಿ ಬಣ್ಣ ಇಷ್ಟವಾದರೆ ನನಗೆ ಕೆಂಪು... ಕಡೆಗೆ ಸರ್ ಈಗ ಅಂಗಡಿ ಬಂದ್ ಮಾಡುವ ಸಮಯ ನಾಳೆ ಬನ್ನಿ ಎಂದ ಅಂಗಡಿಯವ. ನಾನು ನಾಳೆ ಬಂದರೆ ಆಗುತ್ತೆ ಎಂದು ಹೇಳಿದೆ. ಅದಕ್ಕೆ ಅವಳು ನೀವೇ ಒಂದು ಸೀರೆ ಸೆಲೆಕ್ಟ್ ಮಾಡಿ ಎಂದಳು. ಕಡೆಗೆ ನಾನು ಕೆಂಪು ಬಣ್ಣದ ಸೀರೆ ಸೆಲೆಕ್ಟ್ ಮಾಡಿದೆ. ಅವಳು ಬೇಡ ಅನ್ನುವ ಮೊದಲೇ ಅಂಗಡಿಯವ ಅದನ್ನು ತೆಗೆದು ಕೊಂಡು ಬಿಲ್ ಮಾಡಿಬಿಟ್ಟ. ಹೆಂಡತಿಯ ಮುಖಕ್ಕೂ ಆ ಸೀರೆಯ ಬಣ್ಣಕ್ಕೂ ಏನು ವ್ಯತ್ಯಾಸವೇ ಇರಲಿಲ್ಲ, ಅಷ್ಟು ಕೋಪ ಮಾಡಿಕೊಂಡು ಬಿಟ್ಟಿದ್ದಳು.

ಮನೆ ಬರುವವರೆಗೂ ಮೌನ ಗೌರಿಯ ಹಾಗೆ ಸುಮ್ಮನೇ ಕುಳಿತಿದ್ದು ನೋಡಿ ನನಗೆ ಆಶ್ಚರ್ಯ ಆಗಿತ್ತು. ಮನೆಗೆ ಬಂದವಳೇ ಅಡುಗೆ ಮನೆಗೆ ಹೊರಟು ಹೋದಳು. ಊಟಕ್ಕೆ ಕುಳಿತಾಗ ತಿಳಿಯಿತು ಅವಳು ತನ್ನ ಎಲ್ಲ ಬಿ ಪಿ ಸಾರಿನ ಮೇಲೆ ಪ್ರದರ್ಶನ ಮಾಡಿದ್ದಾಳೆ ಎಂದು. ಸಕ್ಕತ್ ಉಪ್ಪು ಸಾರು. ನಾನು ಲೇ.. ನೀನು ಇಷ್ಟು ಉಪ್ಪು ಹಾಕಿದರೆ ನನಗೆ ಬಿ ಪಿ ಬಂದರೆ ನಿನಗೆ ಕಷ್ಟ ಎಂದು ಹೇಳಿದೆ. ನಾನು ಬಿ ಪಿ ಹೆಚ್ಚಾಗಿ ಮತ್ತೆ ಗಂಡ ಹೊಡೆದರೆ ಪ್ರಸಾದ ಎಂದು ಸುಮ್ಮನೇ ಒಂದು ರೈಲು ಬಿಟ್ಟೆ. ಆದರೂ ಮೌನ ವ್ರತ ಮುರಿಯಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಎಂದು ಒಂದು ಹಾಗೆ ಸಣ್ಣದಾಗಿ ಹೊಡೆದೆ. ಆದರೂ ಏನು ಪ್ರಯೋಜನ ಆಗಲಿಲ್ಲ. ಮೊನ್ನೆ ಸ್ವೀಟ್ ತಂದಿದ್ದೆಯಲ್ಲ ಅದು ಚೆನ್ನಾಗಿತ್ತು ಕಣೇ ಎಂದೆ. ಆ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಕೇಳಿದೆ. ಏನು ಉತ್ತರ ಬರಲಿಲ್ಲ.

ಮೂರು ದಿನ ಮೌನ ವ್ರತ. ನನ್ನ ಹತ್ತಿರ ದುಡ್ಡು ಇರಲಿಲ್ಲ ಹೀಗಾಗಿ ಕಡೆಗೆ ಸೀರೆ ಕೊಡಿಸಬೇಕು ಎಂದು ಯಾರಿಗಾದರೂ ಸಾಲ ಕೇಳಬೇಕು ಎಂದು ಸುಬ್ಬನ ಮನೆಗೆ ಹೋದೆ. ಸುಬ್ಬನಿಗೆ ಐದು ಸಾವಿರ ಸಾಲ ಕೊಡು ಎಂದು ಕೇಳಿದೆ. ಕೇಳಿದ ಕೂಡಲೇ ಪೆನ್ನು ತೆಗೆದುಕೊಂಡ. ನಾನು ಖುಶಿಯಿಂದ ಚೆಕ್ ಕೊಡಬಹುದು ಎಂದು ಅಂದುಕೊಂಡರೆ, ಒಂದು ಪೇಪರ್ ತೆಗೆದುಕೊಂಡು ಅದರಲ್ಲಿ ತನ್ನ ತಿಂಗಳ ಖರ್ಚಿನ ಬಗ್ಗೆ ವಿವರಣೆ ಕೊಟ್ಟು, ಅರ್ಧ್ ಘಂಟೆ ತಲೆ ತಿಂದು, ಕಾಫೀ ಕೂಡಿಸಿ ಕಳುಹಿಸಿದ. ನನಗೆ ಈಗ ೨೦ ಸಾವಿರ ಬೇಕು. ನೀನು ೩೦ ಸಾವಿರ ಕೊಡು ನಾನು ನಿನಗೆ 5 ಸಾವಿರ ಕೊಡುತ್ತೇನೆ ಅಂದ. ನಾನು "ಉದುವದನ್ನು ಕೊಟ್ಟು ಬಾರಿಸುವದು ತೆಗೆದುಕೊಂಡ ಹಾಗಾಯಿತು" ಎಂದು ಏನು ಹಾನಿಯಾಗದ ಹಾಗೆ ಹಣಿ ಹಣಿ ಗಟ್ಟಿಸಿದೆ. ಮಂಜನ ಹತ್ತಿರ ಕೇಳಿದರೆ ಎಂದು ಯೋಚಿಸಿ ಅವನ ಮನೆಗೆ ಹೊರಟೆ. ನನ್ನ ಬೆನ್ನಿಗೆ ಬೇತಾಳದ ಹಾಗೆ ನನ್ನ ಹಿಂದೆ ಬಂದ. ನಾನು ಕೇಳುವ ಮೊದಲೇ ನನಗೆ 20 ಸಾವಿರ ಬೇಕು ಅಂದ. ಸಾರಿ... ಸಾರಿ ....30 ಸಾವಿರ ಎಂದು ನನ್ನ ಮುಖ ನೋಡಿ ನಗುತ್ತಾ ಹೇಳಿದ. ಮಂಜ ನನ್ನ ಹತ್ತಿರ ಇರುವದು ಬರೀ 8 ಸಾವಿರ ಅದರಲ್ಲಿ ಬೇಕಾದರೆ 6 ಸಾವಿರ ಕೊಡಬಲ್ಲೆ ಎಂದ. ಅದಕ್ಕೆ ತಕ್ಷಣ ನಾನು ನನಗೆ ಅವಶ್ಯಕತೆ ಇದೆ ಕೊಡು ಎಂದು ಕೇಳಿದೆ. ಇಲ್ಲದೇ ಹೋಗಿದ್ದರೆ ಅದನ್ನು ಸುಬ್ಬ ಇಸಿದುಕೊಂಡು ಬಿಡುತ್ತಿದ್ದ. ಕಡೆಗೆ ಮಂಜನ ಕಡೆ ಸಾಲ ಇಸಿದುಕೊಂಡು ಬಂದೆ. ಅವಳು ಮಾತು ಕೇಳದೇ 3 ದಿವಸ ಆಗಿದ್ದರಿಂದ, ಪಕ್ಕದ ಮನೆಯವರು ರೇಡಿಯೋ/ ಟಿ ವಿ ಹಚ್ಚಿದರು ಕೂಡ ಹೆಂಡತಿ ಕೂಗಿದ ಹಾಗೆ ಅನ್ನಿಸೋದು. ಕೆಲ ಬಾರಿ ಏನು? ಎಂದು ಕೇಳಿ ಬೆಪ್ಪನ ಹಾಗೆ ನಿರುತ್ತರನಾಗಿ ಕುಳಿತುಬಿಟ್ಟಿದ್ದೆ.

ಮರುದಿನ ನಾನು ಅದೇ ಸೀರೆ ಅಂಗಡಿಗೆ ಹೋಗಿ ಅವಳು ಮೆಚ್ಚಿದ ನೀಲಿ ಬಣ್ಣದ ಸೀರೆ ತೆಗೆದುಕೊಂಡು ಬಂದೆ. ಮತ್ತು ಬರುವ ದಾರಿಯಲ್ಲಿ ನನ್ನ ಮಡದಿಗೆ ಕೇಳಿದ ಸ್ವೀಟ್ ಅಂಗಡಿಯ ಬಾಕ್ಸ್ ಹಿಡಿದು ಕೊಂಡು, ಒಂದು ಹುಡುಗಿ ಹೊರಟಿತ್ತು. ನಾನು ಅವಳನ್ನು ನೋಡಿ ಅವಳ ಹಿಂದೆ ಹೋದೆ. ಅವಳು ಮತ್ತೆ ಇನ್ನಷ್ಟು ಜೋರಾಗಿ ಹೊರಟಳು. ನನಗೆ ಘಾಬರಿ. ಆದರೂ ಸ್ವೀಟ್ ಚೆನ್ನಾಗಿ ಇತ್ತು ಎಂದು ಅವಳ ಮುಂದೆ ಹೋಗಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವಳ ಅಪ್ಪ ಬಂದು ಬಿಟ್ಟ. ನನಗೆ ಇನ್ನೂ ಘಾಬರಿ ಇವಳನ್ನು ಬೆನ್ನು ಹತ್ತಿದ್ದಕ್ಕೆ, ಎಲ್ಲಿ ಎರಡು ಕೊಡುತ್ತಾನೆ ಎಂದು. ರೀ...ನಾವೊಬ್ಬರೇ ಅಷ್ಟೇ ಅಲ್ಲಾರಿ ಅಲ್ಲಿ ಕಸ ಹಾಕೋದು. ಎಲ್ಲರೂ ಹಾಕುತ್ತಾರೆ. ದುಡ್ಡು ನಮ್ಮ ಕಡೆ ಮಾತ್ರ ವಸೂಲಿ ಮಾಡಿದರೆ ಹೇಗೆ ಎಂದರು. ನಾನು ಪೆಕರನ ಹಾಗೆ ತಲೆ ಕೆರೆದು ಕೊಳ್ಳುತ್ತಿದೆ. ಮತ್ತೆ ನನ್ನಷ್ಟಕ್ಕೆ ನಾನೇ ನೋಡಿಕೊಂಡೆ. ಆಗ ಅರ್ಥ ಆಯಿತು. ನಾನು ಚ್ಯಾಕಲೇಟ್ ಕಲರ್ ಜ್ಯಾಕೆಟ್ ಹಾಕಿದ್ದು ನೋಡಿ ಬಿ ಬಿ ಎಂ ಪಿ ನೌಕರ ಎಂದು ಕೊಂಡಿದ್ದರು ಎಂದು. ಆಮೇಲೆ ಸರ್ ಬಿ ಬಿ ಎಂ ಪಿ ನೌಕರ ಅಲ್ಲ. ನೀವು ತೆಗೆದು ಕೊಂಡಿರುವ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಆ ಪ್ಯಾಕೆಟ್ ತೋರಿಸಿ ಕೇಳಿದೆ. ಆಗ ಅವರು ಅಂಗಡಿ ತೋರಿಸಿದರು. ಆಮೇಲೆ ಅವರು ಆ ಸ್ವೀಟ್ ಬಾಕ್ಸ್ ಕಸ ಚೆಲ್ಲಿ ಹೊರಟು ಹೋದರು.

ಮನೆಗೆ ಬಂದು ನೀಲಿ ಸೀರೆ ಮತ್ತು ಸ್ವೀಟ್ ಬಾಕ್ಸ್ ಕೈಗೆ ಇಟ್ಟಾಗ ಮೌನ ವೃತ ಮುರಿದಿದ್ದಳು. ನಡೆದ ಸ್ವೀಟ್ ಅಂಗಡಿ ವಿಳಾಸದ ವಿಷಯ ಕೇಳಿ ಸಕ್ಕತ್ ನಕ್ಕೂ ಇವತ್ತು ಉಪ್ಪೆ ಇಲ್ಲದ ಸಾರು ಮಾಡಿ... ಸಾರಿ.. ಎಂದು ಉಲಿದಳು. ಹಾಗೆಂದು ನಮ್ಮಿಬ್ಬರಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂದು ತಿಳಿಯಬೇಡಿ, ಇಬ್ಬರಿಗೂ ಮಿಸ್ಸಳ್, ಮಿಸ್ಸಳ್ ಭಾಜಿ ಇಷ್ಟ. ಮತ್ತು ಮಿಶ್ರ ಮಾಧುರ್ಯ ರೇಡಿಯೋ ಕಾರ್ಯಕ್ರಮ ಕೂಡ.

No comments:

Post a Comment