Friday, December 10, 2010

ಚಪ್ಪಲ್ ಚನ್ನಿಗರಾಯ ....

ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ. ಆಗ ಮಂಜ ಮುಂದೆ ಮದುವೆ ಆದರೆ, ಲೇ ಇಬ್ಬರ ಹೆಸರು ಒಂದೇ ತರಹ ಇದ್ದರೆ ಮನೆಯಲ್ಲಿ ಕರೆಯುವದು ಕಷ್ಟ ಕಣೋ, ಅದಕ್ಕೆ ಅವಳ ಹೆಸರು ಅಮೃತಾ ಎಂದು ಮದುವೆ ಆದ ಮೇಲೆ ಬದಲಿಸು ಎಂದು ಹೇಳಿದ. ಅವಳು ಅವನಿಗೆ ತುಂಬಾ ಇಷ್ಟ ಪಡುತ್ತಿದ್ದಳು. ನಾವು ಒಳಗೊಳಗೆ ಅಮೃತಾ + ಅಂಜನ್ = ಅಮೃತಾಂಜನ್ ಎಂದು ಅವನನ್ನು ಆಡಿಕೊಂಡು ಅವನ ಹಿಂದೆ ನಗುತ್ತಿದ್ದೆವು.

ಕಡೆಗೆ ಒಂದು ದಿನ ಮಂಜ, ಲೇ ... ಅವಳನ್ನು ಮದುವೆ ಆದರೆ ನಿನಗೆ ಕಷ್ಟ ಕಣೋ ಏಕೆಂದರೆ? ಅವಳು ತುಂಬಾ ದುಡ್ಡು ಖರ್ಚು ಮಾಡುತ್ತಾಳೆ. ಈಗಿನ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆದರೆ ಕಷ್ಟ, ಅದು ಬೇರೆ ನೀನು ಲವ್ ಮ್ಯಾರೇಜ್ ಆಗುತ್ತಾ ಇದ್ದೀಯಾ ಮುಂದೆ ತುಂಬಾ ಕಷ್ಟ ಆಗುತ್ತೆ ಎಂದು ಹೇಳಿದಾಗ, ಅವಳು ಮಾತನಾಡಿಸಿದರು ಅವಳಿಗೆ ಯಾವದೆ ಸೊಪ್ಪು ಹಾಕಲಿಲ್ಲ. ಕಡೆಗೆ ಅವಳನ್ನು ಬಿಟ್ಟು ಬಿಟ್ಟ.

ನಾನು,ಮಂಜ ಮತ್ತು ಸುಬ್ಬ ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದ್ದೆವು. ಆಗ ಒಂದು ದಿವಸ ನನಗೆ ಫೋನ್ ಮಾಡಿದ್ದ. ಏನಪ್ಪಾ? ಏನು ಮಾಡುತ್ತಾ ಇದ್ದೀರ ತ್ರಿಮೂರ್ತಿಗಳು ಎಂದು ಕೇಳಿದ. ನಾನು ಬೆಂಗಳೂರಿಗೆ ಬರುತ್ತಾ ಇದ್ದೇನೆ. ನಿಮ್ಮ ರೂಮಿನಲ್ಲಿ ಇರುವುದಕ್ಕೆ ಅವಕಾಶ ಕೊಡು ಎಂದು ಕೇಳಿದ.ಲೇ.. ನಾನೇ ಮಂಜನ ರೂಮಿಗೆ ಬಂದಿದ್ದೇನೆ. ನೀನು ಮಂಜನಿಗೆ ಕೇಳು ಎಂದು ಹೇಳಿದೆ. ಕಡೆಗೆ ಅವರಿಬ್ಬರ ನಡುವೆ ಏನೋ ಒಪ್ಪಂದ ಆಯಿತು ಎಂದು ಅನಿಸುತ್ತದೆ. ಮರುದಿನ ಅಂಜನ್ ನಮ್ಮ ರೂಮಿನಲ್ಲಿ ಠಿಕಾಣಿ ಹೂಡಿದ್ದ.

ಏನೋ ಸುಧಾರಿಸಿರಬಹುದು ಎಂದು ನಾವೆಲ್ಲರೂ ಎಣಿಸಿದ್ದೆವು. ಆದರೆ ತಿಂಡಿ, ಊಟ ಆದಮೇಲೆ ದುಡ್ಡು ಕೊಡದೇ ಫೋನ್ ಬಂದಿದೆ ಅಥವಾ ಫೋನ್ ಮಾಡುವುದಿದೆ ಎಂದೆಲ್ಲ ನೆಪ ಹೇಳಿ, ನಮ್ಮದೇ ದುಡ್ಡಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ತ್ರಿಮೂರ್ತಿಗಳಾದ ನಮಗೆ ಮೂರು ನಾಮ ಇಟ್ಟಿದ್ದ. ಮಂಜ ಮತ್ತು ನಾವೆಲ್ಲರೂ ಎಷ್ಟು ಯೋಚನೆ ಮಾಡಿ, ರೂಮಿನಿಂದ ಹೊರ ಹಾಕ ಬೇಕೆಂದರು ಆಗಲಿಲ್ಲ. ಬಸ್ಸಿನಲ್ಲೂ ಸಹ ಅವನ ಚಪಲತೆ ಪ್ರದರ್ಶಿಸುತ್ತಿದ್ದ. ಅವನು ತುಂಬಿದ ಬಸ್ಸಿಗೆ ಮಾತ್ರ ಹತ್ತುತಿದ್ದ. ಒಂದು ದಿನ ಖಾಲಿ ಬಸ್ ಹತ್ತಿದ್ದ. ಮುಂದೆ ನಿಂತ ಹುಡುಗಿ ಅವನಿಗೆ ತನ್ನ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಅದನ್ನು ನೋಡಿದ ಮಂಜ, ಅವನಿಗೆ ಹೀಗೆಲ್ಲ ಮಾಡುವ ಹಾಗಿದ್ದರೆ ನೀನು ಬೇರೆ ಕಡೆಗೆ ಹೋಗು ಎಂದು ತಾಕೀತ್ ಮಾಡಿದ್ದ. ತಪ್ಪು ಆಯಿತು.. ಕ್ಷಮಿಸು.. ಎಂದು ಹೇಳಿ ಮುಂದಿನ ಬಾರಿ ಹಾಗೆ ಮಾಡುವುದಿಲ್ಲ ಎಂದು ಹೇಳಿದ. ಕಡೆಗೆ ಒಪ್ಪಿ ಇಟ್ಟು ಕೊಂಡೆವು. ಕೆಲ ದಿನ ಸುಧಾರಿಸಿದ ಹಾಗೆ ನಟಿಸಿ ಮತ್ತೆ ನಾಯಿ ಬಾಲ ಡೊಂಕು ಅನ್ನುವ ಹಾಗೆ ಮತ್ತೆ ತನ್ನ ವರಸೆ ಶುರು ಹಚ್ಚಿಕೊಂಡ.

ಮನೆಯವರಿಗೂ ಇವನ ಬಗ್ಗೆ ಅಸಡ್ಡೆ ಇತ್ತು. ಅವರ ಅಪ್ಪ ಅವನಿಗೆ ಮದುವೆ ಆದರೆ ಸುಧಾರಿಸುತ್ತಾನೆ ಎಂದು. ಹೆಣ್ಣು ನೋಡಲು ಶುರು ಮಾಡಿದರು. ಪ್ರತಿ ವಾರ ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದು ಕೊಂಡು ಹೋಗುತ್ತಿದ್ದ. ಅದು ಬರಿ 200 ಗ್ರ್ಯಾಮ್ಸ್ ಮಾತ್ರ. ಪ್ರತಿ ಬಾರಿ ಸಂಬಂದ ರಿಜೆಕ್ಟ್ ಆಗುತ್ತಿತ್ತು. ಅವನಿಗೂ ತಲೆ ಕೆಟ್ಟು ಹೋಗಿತ್ತು. ಒಂದು ದಿನ ಬೆಂಗಳೂರಿನಲ್ಲೇ, ಒಂದು ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದುಕೊಂಡು ಶಾಸ್ತ್ರಕ್ಕೆ ಹೋಗಿದ್ದ. ಆಗ ಹೆಣ್ಣು ನೋಡಿ ಚೆನ್ನಾಗಿಲ್ಲ ಎಂದು ಸ್ವೀಟ್ ಬಾಕ್ಸ್ ಕೊಡದೇ ವಾಪಸ ತಂದಿದ್ದ. ಅದನ್ನು ರೂಮಿಗೆ ತಂದು ನಮಗೆ ಕೊಡಲು ಓಪನ್ ಮಾಡಿದ. ನೋಡಿದರೆ ಅದರಲ್ಲಿ ಸ್ವೀಟ್ ಇರದೆ ಕೆಟ್ಟ ವಾಸನೆಯ ಹಳಸಿದ ಮ್ಯಾಗಿ ಇತ್ತು. ಅವನಿಗೆ ಸ್ವೀಟ್ ಅಂಗಡಿಯವನ ಮೇಲೆ ತುಂಬಾ ಕೋಪ ಬಂತು. ಲೇsss.. ಅದಕ್ಕೆ ಕಣೋ ಹೆಣ್ಣು ಮೊದಲು ಒಪ್ಪಿಗೆ ಸೂಚಿಸಿ, ಆಮೇಲೆ ರಿಜೆಕ್ಟ್ ಮಾಡುತ್ತಾ ಇರುವದು ಎಂದು ಹೇಳಿ, ಅದನ್ನು ತೆಗೆದು ಕೊಂಡು ಸ್ವೀಟ್ ಅಂಗಡಿಗೆ ಜಗಳಕ್ಕೆ ಹೋದ. ಮಂಜ ಮುಸಿ.. ಮುಸಿ.. ನಗುತ್ತಿದ್ದ. ಅವನೆ ಸ್ವೀಟ್ ತಿಂದು, ಹೀಗೆ ಮಾಡಿದ್ದಾನೆ ಎಂದು ನಮಗೆ ಖಾತ್ರಿ ಆಯಿತು. ಸ್ವೀಟ್ ಅಂಗಡಿ ಹೋಗಿ ಬಾಕ್ಸ್ ತೆಗೆದೊಡನೆ ಕೆಟ್ಟ ವಾಸನೆ ಬರುತಿತ್ತು. ಅದನ್ನು ನೋಡಿ ಕೆಲ ಗಿರಾಕಿಗಳು ಸಹಿತ ಏನು ತೆಗೆದು ಕೊಳ್ಳದೇ ಹೋಗಿ ಬಿಟ್ಟರು. ನೀವು ನನಗೆ ಮೋಸ ಮಾಡಿದ್ದೀರ ಎಂದು ಹೇಳಿ, ಸ್ವೀಟ್ ತರುತ್ತಾನೆ ಎಂದು ನಾವು ಎಣಿಸಿದರೆ, ಅವರ ಕಡೆ 500 ರೂಪಾಯಿಗಳನ್ನು ಕಿತ್ತುಕೊಂಡು ಬಂದಿದ್ದ.

ಮುಂದೆ ಮತ್ತೊಂದು ಹೆಣ್ಣು ನೋಡುವದಕ್ಕೆ ಹೋಗುವುದಿತ್ತು. ಈ ಹುಡುಗಿ ಕೂಡ ಬೆಂಗಳೂರಿನಲ್ಲೇ ಇದ್ದಳು. ಅವಳನ್ನು ನೋಡಲು ನನ್ನನ್ನು ಕರೆದು ಕೊಂಡು ಹೋದ. ನಾನು ಯಾವುದಾದರೂ ಹೋಟೆಲ್ ಹೋಗಿ ಮಾತನಾಡೋಣ ಎಂದು ಹೇಳಿದೆ. ಅಲ್ಲಿ ಯಾವುದೆ ಚಿಕ್ಕ ಹೋಟೆಲ್ ಕಾಣಲಿಲ್ಲ, ಕಡೆಗೆ ದೊಡ್ಡ ಮನಸು ಮಾಡಿ ಬರಿಸ್ಟಾಗೆ ಕರೆದು ಕೊಂಡು ಹೋದ. ನಾನು,ಅವನು ಮತ್ತೆ ಹುಡುಗಿ, ಹುಡುಗಿಯ ಗೆಳತಿ ಎಲ್ಲರೂ ಹೋದೆವು. ಅಲ್ಲಿ ಬರಿ ಕಾಫೀ ಆರ್ಡರ್ ಮಾಡುತ್ತಲಿದ್ದ. ನಾನು ಏನಾದರೂ ತಿನ್ನಲು ಎಂದು ನಾನೇ ಹುಡುಗಿಯರಿಗೆ ಕೇಳಿದೆ. ಅವರು ಏನು ತಿಂದು ಬಂದಿರಲಿಲ್ಲ ಎಂದು ಕಾಣುತ್ತೆ, ಅವರು ತಿಂಡಿ ಆರ್ಡರ್ ಮಾಡಿದರು. ಅವರ ಜೊತೆ ನನಗು ತಿಂಡಿ ಲಭಿಸಿತ್ತು. ಅಷ್ಟರಲ್ಲೇ ನಮ್ಮ ಮಂಜ ಸುಬ್ಬನನ್ನು ಕರೆದುಕೊಂಡು ಬಂದು ಬಿಟ್ಟ. ಬಂದವನೇ ತಾನೇ ಅವರ ಪರಿಚಯ ಮಾಡಿಕೊಂಡು. ಅಂಜನ್ ನಮ್ಮ ತುಂಬಾ ಆಪ್ತ ಗೆಳೆಯ ಎಂದೆಲ್ಲ ಹೇಳಿ ಸಿಕ್ಕಾಪಟ್ಟೆ ತಿಂದು ಎದ್ದು ಹೋಗಿ ಬಿಟ್ಟ. ಅಂಜನ್ ಏನು ಮಾಡಲಾರದೇ 2300 ಬಿಲ್ಲು ಕೊಟ್ಟು ಬಂದಿದ್ದ. ಅವನ ಮುಖ ಇಂಗು ತಿಂದ ಮಂಗನ ಹಾಗೆ ಆಗಿತ್ತು. ಆ ಹುಡುಗಿಯೂ ಅವನಿಗೆ ರಿಜೆಕ್ಟ್ ಮಾಡಿದ್ದಳು. ಕೆಲ ದಿನಗಳ ಬಳಿಕ ಮಂಜನ ತರಲೆಗಳು ಅರ್ಥ ಆಗಿ ತಾನೇ ಜಾಗ ಖಾಲಿ ಮಾಡಿದ.

ಅವನಿಗೆ ನಾವೆಲ್ಲರೂ ಚಪ್ಪಲ್ ಚೆನ್ನಿಗರಾಯ ಎಂದೆ ಸಂಭೋಧಿಸುತ್ತಿದ್ದೆವು. ಈಗ ಅವನಿಗೆ ಚಪ್ಪರ ಹಾಕುವ ಸಂದರ್ಭ ಒದಗಿ ಬಂದಿದೆ. ಏನು? ಮಾಡುತ್ತಾನೋ ನೋಡಬೇಕು.

4 comments:

  1. ಚೆನ್ನಾಗಿದೆ ಹಿಂದಿನ ಲೇಖನ ತುಂಬಾ ಚೆನ್ನಾಗಿತ್ತು
    ಈ ಲೇಖನದ
    ಕಥೆ ಹೇಳಿದ ಧಾಟಿ ಹಿಡಿಸಿತು

    ReplyDelete
  2. ಗೋಪಾಲ್ ಮಾ ಕುಲಕರ್ಣಿ ಸರ್ ನಿಮ್ಮ ಅನುಭವ ಚಪ್ಪಲ್ ಚನ್ನಿಗರಾಯರದ್ದು ಓದಿ ನಗು ಬಂತು.ಲೇಖನ ಚೆನ್ನಾಗಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. Good one ...

    --Girish

    ReplyDelete
  4. ಮೆಚ್ಚಿ ಪ್ರತಿಕ್ರಿಯಿಸಿದ ವಿನಾಯಕ ಸರ್ , ಬಾಲು ಸರ್ ಮತ್ತು ಗಿರೀಶ್ ಸರ್
    ಧನ್ಯವಾದಗಳು ಮತ್ತೆ ವಂದನೆಗಳು :-)))))).


    -- ಪ್ರೀತಿಯಿಂದ
    ಗೋಪಾಲ್

    ReplyDelete