Thursday, October 7, 2010

ತಲೆ ಹರಟೆ ಶ್ಯಾಮ್ ರಾಯರು....

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ, ಅಥವಾ ಬೇರೆ ಮತ್ಯಾರಿಗೋ ಎಂದು ಹಿಂದೆ ನೋಡಿದೆ. ಯಾರು ಇಲ್ಲ. ನಾನೇ ಎಂದು ಖಾತರಿ ಆದ ಮೇಲೆ, ಏನು ಕಾಣಬೇಕಿತ್ತು ರಾಯರೆ ಎಂದೆ. ತುಂಬಾ ತಲೆ ತಿನ್ನೋ ಮನುಷ್ಯ. ಇದೆ ಡೈಲಾಗ್ ಏನಾದರೂ ನನ್ನ ಗೆಳೆಯರ ಸಂಗಡ ಆಗಿದ್ದರೆ, ಸಕ್ಕತ್ ತಮಾಷೆ ಆಗಿರೋದು. ಒಂದು ತರಹ ಕಾಶೀನಾಥ ಫಿಲ್ಮ್ ಡೈಲಾಗ್ ತರಹ. ಬೇಕಾದರೆ ಇನ್ನೊಮ್ಮೆ ಮೊದಲಿನಿಂದ ಓದಿ ನೋಡಿ.

ಮದುವೆ ಆಗಿಲ್ಲ. ಅದಕ್ಕೆ ಇರಬೇಕು ಅಷ್ಟು ಫ್ರೀ ಆಗಿ ಇರುತ್ತಾರೆ. ಯಾರಾದರೂ ಹರಟೆಗೆ ಸಿಕ್ಕರೆ ಸಾಕು ಎನ್ನುವಂತ ಪ್ರಾಣಿ. ಆದರೆ ಹೇಳುವದು ಕೂಡ ಪೂರ್ತಿ ಇರಲ್ಲ. ನಾನು ಸ್ವಲ್ಪ ಫ್ರೀ ಇದ್ದೇ. ಏಕೆಂದರೆ ಮಡದಿ ತವರು ಮನೆಗೆ ಹೋಗಿದ್ದಳು.

ನಿಮಗೆ ನಮ್ಮ ಅಳಿಯ ರೋಹಿತ್ ಗೊತ್ತಾ? ಎಂದರು.
ಇಲ್ಲ ಎಂದೆ.
ಏನು ಡೆಲಿವರೀ ಮಾಡುತ್ತಾನೆ ಗೊತ್ತಾ? ಎಂದರು.
ಓ ಹೇರಿಗೆ ಡಾಕ್ಟರ್ರಾ? ಎಂದೆ.
ಅಲ್ಲ ಕಣ್ರೀ, ಸೀರಿಯಲ್ ಆಕ್ಟರ್. ಏನ್ರೀ ಅವರೇ ಗೊತಿಲ್ಲ ಎಂದರೆ ನಿಮ್ಮ ಜೊತೆ ಮಾತನಾಡುವುದೆ ವೇಸ್ಟ್ ಎಂದರು.
ಸರಿ ಬಿಡಿ ನಾನು ಬರುತ್ತೇನೆ ಎಂದೆ.
ರೀ, ತಡಿರಿ, ಸಕ್ಕತ್ ಡೈಲಾಗ್ ಡೆಲಿವರೀ ಕಣ್ರೀ ಅವನದೂ ಎಂದು ಮಾತಿಗಿಳಿದರು.
ಆಯಿತಾ? ಎಂದು ಕೇಳಿದರು,
ಏನು ಆಯಿತು? ಎಂದು ಹೇಳಬೇಕು ಊಟನ, ತಿಂಡಿನ? ಮತ್ತಿನೇನೋ ತಿಳಿಯಲಿಲ್ಲ.
ಏನಪ್ಪಾ ಆಗಬೇಕು? ಎಂದಾಗ ಮದುವೆ ಎಂದು ಕೇಳಿದರು.

ಆಗಿದೆ ಎಂದು ಹೇಳಿದೆ. ಎಷ್ಟು ಎಂದು ಕೇಳಿಯಾರು? ಎಂದು, ನಾನೇ ಒಂದು ಮದುವೆ, ಒಂದು ಗಂಡು ಮಗು ಇದೆ ಎಂದು ಹೇಳಿದೆ.
ರೀ, ನನ್ನ ಅಳಿಯನಿಗೆ ಒಂದು ನೋಡಬೇಕು ನೀವು ಬರುತ್ತೀರಾ?. ಜೊತೆಯಾಗುತ್ತೆ ಎಂದರು.
ಏನು? ಸರ್ ಎಂದೆ.
ಹೆಣ್ಣು.. ಸರ್ ಹೆಣ್ಣು.. ನೋಡೋಕೆ ಎಂದರು.
ಒಳ್ಳೇ ಬಿಡಲಾರದ ಕರ್ಮ ಆಯಿತಲ್ಲಾ ಎಂದು ಮನಸಿನಲ್ಲೇ ಅಂದುಕೊಂಡೆ.
ನನಗೆ ತುಂಬಾ ಕೆಲಸ ಇದೆ ನನಗೆ ಬರಲು ಆಗುವದಿಲ್ಲ ಎಂದೆ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದರು. ಹೇಗೂ ನನ್ನ ಮಡದಿ ಊರಲ್ಲಿ ಇಲ್ಲ, ತಿಂಡಿ ಬೇರೆ ಮಾಡಿರಲಿಲ್ಲ ಹೀಗಾಗಿ ಬರುತ್ತೇನೆ ಎಂದೆ. ಆದರೆ ಅವರು ಅಲ್ಲಿ ಹೋದಾಗ ಏನು ಮಾತನಾಡುತ್ತಾರೆ ಎಂಬ ಕಸಿವಿಸಿ ಮನಸ್ಸಿನಲ್ಲಿ ಇದ್ದೇ ಇತ್ತು. ಅವರ ಮನೆಗೆ ಹೋದೆವು. ಹುಡುಗಿಯ ಅಣ್ಣ ನಮಗೆ ಕುಡಿಯಲು ನೀರು ತೆಗೆದುಕೊಂಡು ಬಂದ.
ಹುಡುಗಿಯ ಅಪ್ಪ, ಇವನು ನನ್ನ ಗಂಡಸ ಮಗ ರಾಜು ವಿಪ್ರೋನಲ್ಲಿ ಕೆಲಸ ಮಾಡುತ್ತಾನೆ ಎಂದರು.
ಅಷ್ಟರಲ್ಲಿ ಶ್ಯಾಮ್ ರಾಯರು, ಇವನು ಗಂಡಸು ಮಗಾನಾ? ಎಂದು ಬಿಡಬೇಕೆ.
ನನಗೆ ಕುಡಿದ ಗುಟುಕು ನೀರು ನೆತ್ತಿಗೆ ಹತ್ತುವ ಹಾಗೆ ಜೋರಾಗಿ ನಗು ಬಂದು ಬಿಟ್ಟಿತು.

ಹುಡುಗಿಯ ಅಮ್ಮ ನಮಗೆ ಉಪ್ಪಿಟ್ಟು ಮತ್ತು ಜಿಲೇಬಿ ತಂದು ಕೊಟ್ಟರು. ಹುಡುಗಿ ಅಪ್ಪ ತನ್ನ ಮಡದಿಗೆ ಇನ್ನೂ ಸ್ವಲ್ಪ ಜಿಲೇಬಿ ಹಾಕು ಎಂದು ಹೇಳಿದರು. ಜಿಲೇಬಿ ತುಂಬಾ.. ತುಂಬಾ.. ಚೆನ್ನಾಗಿತ್ತು. ಹೇಗಾದರೂ ಹಾಕಿ ಎಂದು ಹೇಳಿದ್ದಾರೆ, ಐದು ಜಿಲೇಬಿನಾದರೂ ತಿನ್ನಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ದೆ. ಜೆಲೇಬಿ ಹಾಕುವಾಗ ನಮ್ಮ ಶ್ಯಾಮ್ ರಾಯರು ನನಗೆ ಬೇಡ... ಬೇಡ... ಎಂದು ಕೈ ಅಡ್ಡ ತಂದರು. ನನಗೆ ಶ್ಯಾಮ್ ರಾಯರ ಮೇಲೆ ಸಕ್ಕತ್ ಕೋಪ ಬಂದಿತ್ತು. ಏಕೆಂದರೆ, ಕೈ ಅಡ್ಡ ತಂದಿದ್ದು ನನ್ನ ಪ್ಲೇಟ್ ಮೇಲೆ. ಶ್ಯಾಮ್ ರಾಯರ ಪ್ಲೇಟ್ ಗೆ ಎರಡು ಜೆಲೇಬಿ ಹಾಕಿ ಹುಡುಗಿ ಅಮ್ಮ ಹೋಗಿಬಿಟ್ಟರು. ಹೇಗಿದ್ದರು ಬೇಡ ಎಂದಿದ್ದಾರೆ. ನನಗೆ ಕೊಡಬಹುದು ಎಂದು ಯೋಚನೆ ಮಾಡುತ್ತಿದ್ದರೆ, ಆಸಾಮಿ ಅದನ್ನು ತಿಂದು, ಜೆಲೇಬಿ ತುಂಬಾ ಚೆನ್ನಾಗಿವೆ ಎಂದು ಹೊಗಳಿ, ಎರಡು ಜೆಲೇಬಿ ಮನೆಗೆ ಕಟ್ಟಿಸಿಕೊಂಡರು.

ಹಾಗೂ ಹೀಗೂ ಎಲ್ಲ ಶಾಸ್ತ್ರ ಮುಗಿಸಿಕೊಂಡು ಮನೆಗೆ ಬಂದೆವು.

ಮತ್ತೆ ಒಂದು ದಿವಸ ಶ್ಯಾಮ್ ರಾಯರು ನಮ್ಮ ಮನೆಗೆ ಬಂದಿದ್ದರು. ನನ್ನ ಮಡದಿ ಊರಿನಿಂದ ಬಂದಿದ್ದಳು. ಪಾಪ ಹಿರಿಯರು ಬಂದಿದ್ದಾರೆ ಎಂದು, ನಾನು ಬಾಳೆ ಹಣ್ಣನ್ನು ಕೊಡಲು ಹೋದೆ. ನಾನು ಯಾವಾಗಲಾದರೂ ಬಾಳೆ ಹಣ್ಣನ್ನು ತಿನ್ನುವದನ್ನು ನೋಡಿದ್ದೀರಾ? ಎಂದರು. ಇದು ಒಳ್ಳೇ ಕರ್ಮ ಆಯಿತಲ್ಲ ನನಗೆ, ಇವರು ಏನು ತಿನ್ನುತ್ತಾರೆ, ಏನು ಇಲ್ಲ ಎಂದು ನೋಡುವುದು ಎಂದು ಮನಸಿನಲ್ಲೇ ಅಂದುಕೊಂಡೆ. ರೀss ನಿಮಗೆ ಬಾಳೆ ಹಣ್ಣು ಇಷ್ಟ ಇಲ್ಲ ಎಂದು ಮೊದಲೇ ಗೊತ್ತಿದ್ದರೆ, ನಾನೇಕೆ ಅದನ್ನು ನಿಮಗೆ ಕೊಡಲು ಬರುತ್ತಿದ್ದೆ ಎಂದು ಹೇಳಬೇಕು ಅಂದು ಕೊಂಡರು ಹೇಳಲಿಲ್ಲ. ಶ್ಯಾಮ್ ರಾಯರು ನನ್ನ ಮಡದಿಗೆ, ನಿಮಗೆ ಗೊತ್ತಾ, ನಿಮ್ಮ ಮನೆಯವರನ್ನೂ ಕರೆದುಕೊಂಡು ಹೆಣ್ಣು ನೋಡಲು ಹೋಗಿದ್ದೆವು ಎಂದರು. ಮುಂದಿನದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ಅವರ ಫೋನ್ ರಿಂಗ್ ಆಯಿತು. ಮಾತನಾಡುತ್ತಾ ಎದ್ದು ಹೋಗಿಬಿಟ್ಟರು. ಮತ್ತೆ ವಾಪಸ್ ಬರಲೇ ಇಲ್ಲ. ನಾನು ನನ್ನ ಹೆಂಡತಿಗೆ ತಿಳಿ ಹೇಳಿದೆ. ಆದರೆ, ಅದನ್ನು ನಾನು ಅವರ ಬಾಯಿಂದನೆ ಕೇಳಿ, ಆಮೇಲೆ ಖಚಿತ ಪಡಿಸಿಕೊಳ್ಳುತ್ತೇನೆ ಎಂದು ಕೋಪ ಮಾಡಿಕೊಂಡು ಮೌನ ಗೌರಿ ಆಗಿದ್ದಳು. ಹಿರಿಯರು ಹೇಳಿದ್ದಾರೆ "ಮೌನಂ ಸಮ್ಮತಿ ಲಕ್ಷಣಂ" ಅಂತ, ಆದರೆ ನಮ್ಮ ಮನೇಲಿ ಮಾತ್ರ "ಮೌನ ಯುದ್ಧಮ್ ನಿರಂತರಂ". ಅವಳನ್ನು ಒಲಿಸುವ ಸಲುವಾಗಿ "ನಿನ್ನಾ ಸವಿನೆನಪೆ ಮನದಲ್ಲಿ ಆರಾಧನೆ.... ಪ್ರೀತಿಯ ಸವಿಮಾತೆ ಉಪಾಸನೆ" ಎಂದು ಹಾಡಿದೆ. ಅವಳು ಅದೇ ರಾಗದಲ್ಲಿ "ಇಂದು ನಿಮಗೂ ಕೂಡ ಉಪವಾಸನೆ..." ಎಂದು ಹಾಡಿದಳು. ವಾತಾವರಣ ತಿಳಿ ಆಗುವ ಯಾವ ಲಕ್ಷಣ ಕೂಡ ಕಾಣಲಿಲ್ಲ. ಇನ್ನೂ, ನನ್ನನ್ನು ಶ್ಯಾಮ್ ರಾಯರೆ ಕಾಪಾಡಬೇಕು ಎಂದು. "ಕಾಪಾಡು ಶ್ರೀ ಸತ್ಯ ನಾರಾಯಣ..." ಎಂದು ಹಾಡುತ್ತಾ ಶ್ಯಾಮ್ ರಾಯರ ಮನೆ ಕಡೆಗೆ ಹೋದೆ. ಶ್ಯಾಮ್ ರಾಯರ ಮನೆ ಎದುರು ಸಕ್ಕತ್ ಜನ ಜಂಗುಳಿ. ನನಗೆ ಏನಪ್ಪಾ ಬಂತು ಕರ್ಮ. ಶ್ಯಾಮ್ ರಾಯರು .... ಛೇ! ಛೇ! ಹಾಗೆಲ್ಲಾ ಆಗಿರಲಿಕ್ಕಿಲ್ಲ ಎಂದು ಅವರ ಮನೆ ಒಳಗೆ ಹೋದೆ. ಶ್ಯಾಮ್ ರಾಯರ ಅಳಿಯನ ಎಂಗೇಜ್ಮೆಂಟ್ ಇದೆ ಎಂದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟೆ. ಶ್ಯಾಮ್ ರಾಯರು ಮನೆಯವರನ್ನ ಕರೆದುಕೊಂಡು ಬನ್ನಿ ಎಂದು ಹೇಳಿದರು. ಸಕ್ಕತ್ ಖುಶಿಯಿಂದ ಮನೆಗೆ ಬಂದು ನೋಡೇsss ನನ್ನ ಮೇಲೆ ಅನುಮಾನ ಪಡುತ್ತಿದ್ದೆ. ಇವತ್ತು ಅವರ ಅಳಿಯನ ಎಂಗೇಜ್ಮೆಂಟ್ ಕರೆಯುತ್ತಲಿದ್ದಾರೆ ಬಾ ಎಂದೆ.

ಹೋದ ಮೇಲೆ ನನ್ನ ಮಡದಿ "ಇವನ ಎಂಗೇಜ್ಮೆಂಟ್ ಗೆ ಕರೆದು ಕೊಂಡು ಹೋಗಿದ್ದೀರಾ ನಮ್ಮ ಮನೆಯವರನ್ನ" ಎಂದು ಕೇಳಿ ತಿಳಿದ ಮೇಲೆ ನನ್ನ ಮೇಲಿನ ಕೋಪಕ್ಕೆ ತಿಲಾಂಜಲಿ ಹಾಡಿದ್ದಳು .

7 comments:

 1. ಚೆನ್ನಾಗಿದೆ ಶ್ಯಾಮರಾಯರ ಸಹವಾಸ.

  ReplyDelete
 2. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್ :).

  ReplyDelete
 3. very nice

  --girish

  ReplyDelete
 4. ಧನ್ಯವಾದಗಳು ಮತ್ತು ವಂದನೆಗಳು Santhosh and Girish

  ReplyDelete
 5. ಗೋಪಾಲ್ ಅವರೇ,
  ನಿಮ್ಮ ಬ್ಲಾಗಿನ ಲೇಖನವಂತೂ ನಿಜಕ್ಕೂ ನಕ್ಕುನಗಿಸುವ ಸವಿ ಸಕ್ಕರೆ!
  ತುಂಬಾ ಚೆನ್ನಾಗಿವೆ ಲೇಖನಗಳು. ಧನ್ಯವಾದಗಳು.

  ReplyDelete
 6. SSK ಅವರೇ ,
  ಸವಿ ಸಕ್ಕರೆ ಮೆಚ್ಚಿದ್ದಕ್ಕೆ ಧನ್ಯವಾದಗಳು ಮತ್ತು ವಂದನೆಗಳು.

  ReplyDelete