Thursday, October 28, 2010

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!!

ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ್ನಿ ಹಾಕಿಸಿಕೊಂಡು ಇಡ್ಲಿ ತಿಂದು ಹೋದ. ನನಗೆ ಆಶ್ಚರ್ಯ ಚಟ್ನಿ ತಿಂದರೆ ಬಾಯಾರಿಕೆ ಹೋಗುತ್ತಾ? ಎಂದು. ಕಡೆಗೆ ಅಲ್ಲೇ ಇದ್ದ ನೀರನ್ನು ಕುಡಿದ. ಮತ್ತೆ ಅವನ ಫೋನ್ ರಿಂಗ್ ಆದ ಹಾಗೆ ಆಯಿತು. "ಹಲ್ಲು" ಎಂದು ಮಾತನಾಡಿದ. ಅಲ್ಲಿಂದ ಉತ್ತರ ಬರಲಿಲ್ಲ. ಅದು ಕರೆ ಆಗಿರದೇ, ಅಲಾರಂ ಆಗಿತ್ತು. ತನ್ನ ಬಳಿ ವಾಚ್ ಇದ್ದರು ನನಗೆ ಟೈಮ್ ಎಷ್ಟು ಎಂದು ಕೇಳಿದ. ಮತ್ತೆ ಅವನಿಗೆ ಒಂದು ಫೋನ್ ಬಂದಿತು. ಅದರಲ್ಲಿ ಯಾವಾಗ ನಾಳೆ ಬರುತ್ತಿಯಾ? ಎಂದು ಕೇಳಿದ. ಬಹುಶಃ ಅವನ ಹೆಂಡತಿಯದು ಎಂದು ಕಾಣುತ್ತೆ. ತಡಬಡಿಸಿ ಹೊರಟು ಹೋದ. ಹೆಂಡತಿ ಅಂದರೆ ಭಯ-ಭಕ್ತಿ ಎಂದು ಕಾಣುತ್ತೆ. ನಾನು ತಿಂಡಿ ತಿಂದು ನನ್ನ ಸ್ಕೂಟರ್ ಏರಿದೆ.

"ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ... ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ " ಕ್ಷಮಿಸಿ ಹಾಳಾದಂತೆ ಎಂದು ಹಾಡುತ್ತಾ ಮನೆ ಕಡೆಗೆ ಹೊರಟೆ. ನನ್ನ ಮಡದಿ ನಗುತ್ತ ಕರೆದರೆ ಏನೋ ಒಂದು ದೊಡ್ಡ ಬಜೆಟ್ ಮಂಡನೆ ಇರುತ್ತೆ ನಮ್ಮ ಮನೇಲಿ ಎಂದು ಅರ್ಥ. ಮನೆ ತಲುಪಿದ್ದೆ. ಮನೆಗೆ ನಮ್ಮ ಎದಿರು ಮನೆ ಶ್ಯಾಮ್ ರಾಯರ ಅಳಿಯನ ಹೆಂಡತಿ ಬಂದಿದ್ದಳು. ತುಂಬಾ ಒಡವೆಗಳನ್ನು ತಂದು ತೋರಿಸುತ್ತಾ ಇದ್ದಳು. ಇದರ ಗೊಡವೆ ಬೇಡ ಎಂದು ನಾನು ಬೇರೆ ರೂಂಗೆ ಹೋದೆ. ರೀsss ಎಂದು ಕರೆದು. ಈ ನೆಕ್ಕ್ಲೆಸ್ ಎಷ್ಟು ಚೆನ್ನಾಗಿ ಇದೆ ಅಲ್ರೀ ಎಂದಳು ನನ್ನ ಮಡದಿ. ತುಂಬಾ ಚೆನ್ನಾಗಿದೆ ಎಂದೆ. ನನಗು ಒಂದು ಇದೆ ತರಹ ಇರುವ ನೆಕ್ಕ್ಲಸ್ ಕೊಡಿಸಿ ಎಂದು ಅರ್ಜಿ ಗುಜರಾಯಿಸಿದಳು. ನಾನು ನೋಡೋಣ ಎಂದು ಹೇಳಿದೆ. ಚಿನ್ನದ ಬೆಲೆ ಗಗನಕ್ಕೆ ಏರಿದೆ ಎಂದು ಗೊತ್ತಿದ್ದರು, ಈ ಹೆಣ್ಣು ಮಕ್ಕಳು ಆಕಾಶಕ್ಕೆ ಏಣಿ ಹಾಕುವುದನ್ನು ಬಿಡುವುದಿಲ್ಲ ಎಂದು ಮನಸಿನಲ್ಲೇ ಅಂದುಕೊಂಡೆ. ನಮ್ಮ ಯಜಮಾನರು ಒಂದು ಕಾಸಿನ ಸರ ಮಾಡಿಸಿದ್ದರು ೬ ವರ್ಷದ ಹಿಂದೆ, ಅದನ್ನು ಪಾಲಿಷ್ ಮಾಡಲು ಕೊಟ್ಟಿದ್ದೇನೆ ಎಂದಳು ನನ್ನ ಮಡದಿ. ಮದುವೆ ಆಗಿ ಇನ್ನೂ ಐದು ವರ್ಷ ಆಗಿಲ್ಲ ಆರು ವರ್ಷದ ಹಿಂದೆ ನಾನು ಏನು? ಕೊಟ್ಟಿದ್ದೆ ಎಂದು ಪೇಚಿಗೆ ಬಿದ್ದೆ. ಏನ್ರೀ ಎರಡು ತಿಂಗಳು ಆಯಿತು ಅದನ್ನು ಕ್ಲೀನ್ ಮಾಡಲು ಕೊಟ್ಟು ತೆಗೆದುಕೊಂಡು ಬನ್ನಿ ಎಂದಳು ನನ್ನ ಮಡದಿ. ಆಯಿತು ಎಂದು ಮತ್ತೆ ಒಳಗಡೆ ಹೋದೆ.

ಮೊಬೈಲ್ ನಲ್ಲಿ ಹಾಡು ಹಚ್ಚಿದೆ. ಈಗ ಟಿ ವಿ ನನಗೆ ಸಿಗುವದು ಕಷ್ಟ ಏಕೆಂದರೆ ತನ್ನ ಗಂಡನ ಎಲ್ಲಾ ಧಾರಾವಾಹಿಗಳನ್ನು ನನ್ನ ಮಡದಿಗೆ ಶ್ಯಾಮ್ ರಾಯರ ಅಳಿಯನ ಹೆಂಡತಿ ತೋರಿಸುತ್ತಾಳೆ. ಅದೇ ನನಗೆ ತುಂಬಾ ಇಷ್ಟವಾದ ಹಾಡು. ಅದ್ಯಾಕೋ ಗೊತ್ತಿಲ್ಲ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಹಾಡು ಎಂದರೆ ನನಗೆ ತುಂಬಾ ಇಷ್ಟ. ಅದನ್ನು ನಾನು ಅರ್ಥ ಮಾಡಿಕೊಳ್ಳುವ ರೀತಿ ಮಾತ್ರ ಬೇರೆ.. ಬೇರೆ ..

ಹೆಂಡತಿ ಯಾವತ್ತೂ ಒಬ್ಬಳೇ ಮನೆಯಲ್ಲಿ ಇರಬೇಕು ಇಲ್ಲ ಎಂದರೆ ಅಧೋಗತಿ. ತಪ್ಪು ತಿಳೀಬೇಡಿ ಅಕ್ಕ ಪಕ್ಕದವರ ಜೊತೆ ಇದ್ದರೆ ಎಂಬ ಅರ್ಥದಲ್ಲಿ ಹೇಳಿದ್ದು. ನೀವೇನೂ ಎರಡು ಮೂರು ಎಂಬ ಅರ್ಥದಲ್ಲಿ ಎಂದು ತಿಳೀದಿರೋ... ಅಲ್ಲಿ ನಡೆಯುವ ಚರ್ಚೆ ಸೀರೆ ಮತ್ತು ಒಡವೆಗಳ ಬಗ್ಗೆ ಇರುತ್ತೆ. ಇಲ್ಲದ ಒಡವೆಗಳನ್ನು ಇದೆ ಎಂದು ಸಾಧಿಸುವ ಮತ್ತು ಒಂದಕ್ಕೆ ಎರಡು ಪಟ್ಟು ರೇಟ್ ಏರಿಸುತ್ತಿರುತ್ತಾರೆ. ಅಕ್ಕ ಪಕ್ಕದವರ ಜೊತೆ ಇದ್ದರೆ ಗಂಡನ ಬಗ್ಗೆ ಇಲ್ಲದ ಗೌರವ ಕೂಡ ಸಿಕ್ಕಿರುತ್ತೆ.

ಹೆಂಡತಿಯೊಬ್ಬಳು ಮನೆಯೊಳಗೆ ಇದ್ದರೆ ಸಾಕು ಇಲ್ಲ ಎಂದರೆ, ಹೆಂಡತಿಯೊಬ್ಬಳು ಮನೆ ಹೊರಗೆ ಇದ್ದರೆ ನನಗದೆ ಕೋಟಿ ರುಪಾಯಿ ಖರ್ಚು. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲಾ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನ್ನ ಗೆಳಯರು ಕೂಡ ಮನೆಗೆ ಬರಲು ಹೆದರುತ್ತಾರೆ. ಬಂದರು ಎಣ್ಣೆ ಪಾರ್ಟೀಗೆ ಮಾತ್ರ ಕರಿಯೋದಿಲ್ಲ. ಮತ್ತು ಸಾಲ ಏನಾದರೂ ಕೊಟ್ಟಿದ್ದರು ಕೇಳುವದಿಲ್ಲ. ಮತ್ತು ನಮ್ಮ ಹತ್ತಿರ ಸಾಲ ಕೇಳುವದಿಲ್ಲ.

ಹಾಡು ಮುಗಿಯುತ್ತಿದ್ದಂತೆ ನನ್ನ ಮೂರು ವರ್ಷದ ಸುಪುತ್ರ ಅಮ್ಮ ಒಂದು ಕ್ಯಾಲ್ಶಿಯಮ್ ಗುಳಿಗೆ ಕೊಡು ಎಂದು ಕೇಳಿದ. ಅಪ್ಪ ರೂಮಿನಲ್ಲಿ ಇದ್ದಾರೆ ಅವರ ಹತ್ತಿರ ಕೇಳು ಎಂದು ಹೇಳಿದಳು. ನನ್ನ ಹತ್ತಿರ ಬಂದು ಕೇಳಿದ ನಾನು ಒಂದು ಗುಳಿಗೆ ಕೊಟ್ಟೆ. ಅಪ್ಪ ಉಲ್ಟಾ ಕೊಡುತ್ತಿದ್ದೀಯಲ್ಲ ಎಂದ. ನಾನು ಇದರಲ್ಲಿ ಉಲ್ಟಾ-ಸೀದಾ ಏನು ಇರುತ್ತೆ ಎಂದು ಕೇಳಿದೆ. ಗುಳಿಗೆಯ ಹೆಸರು ಇದ್ದ ಕಡೆ ಮೇಲೆ ಮಾಡಿ ಕೊಡಬೇಕು ಎಂದು ತಾಕಿತ ಮಾಡಿದ, ಆಯಿತು ಮುಂದಿನ ಬಾರಿ ಸರಿಯಾಗಿ ಕೊಡುತ್ತೇನೆ ಎಂದು ಹೇಳಿದೆ. ಅವನ ತಿಳುವಳಿಕೆಗೆ ನಾನು ಪೇಚು ಬಿದ್ದೆ. ಅಷ್ಟರಲ್ಲಿ ಶ್ಯಾಮ್ ರಾಯರ ಅಳಿಯನ ಹೆಂಡತಿ ಮನೆಗೆ ಹೊರಟು ಹೋದಳು. ರೀss ಎಂದು ನನ್ನ ಹೆಂಡತಿ ಉಲಿದಳು. ನಾನು ನನ್ನ ಜೇಬನ್ನು ಒಮ್ಮೆ ಮುಟ್ಟಿಕೊಂಡೆ. ಅಷ್ಟರಲ್ಲಿ ನನ್ನ ಖಾರದ ಕಾರ್ಡ್ ನನ್ನ ನೋಡಿ ನಗುವ ಹಾಗೆ ಅನ್ನಿಸಿತು

4 comments:

  1. chenngide sir,

    --girish

    ReplyDelete
  2. ಚೆನ್ನಾಗಿದೆ ನಿಮ್ಮ ಲಲಿತ ಪ್ರಭಂಧ..

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್

    ReplyDelete