Thursday, February 10, 2011

ಗಂಡಾಂತರ....

ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ ಎಂಬ ಮೂರ್ಖರ ಪೆಟ್ಟಿಗೆಯಲ್ಲಿ ಬರುವ ಧಾರಾವಾಹಿ ಎಂಬ ಗಂಡಾಂತರಗಳ ಬಗ್ಗೆ ಹೇಳಿದ್ದು. ಧಾರಾವಾಹಿ ಎನ್ನುವುದಕ್ಕೆ ಬಹುಶಃ ಕಣ್ಣೀರ 'ಧಾರಾ' ಆ'ವಾಹ'ಯಾಮಿ ಇರಬಹುದೇನೋ....ನೀವು ಕೇಳಬಹುದು ಇದು ಲಿಂಗ ಹೇಗೆ ಬದಲಿಸಿತು ಎಂದು, ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯ. ಸಾಕಷ್ಟು ನಿದರ್ಶನಗಳು ಕೂಡ ಇವೆ....ದಿನ ಪತ್ರಿಕೆ,ಟಿ ವಿ ಯಲ್ಲಿ ನೋಡಿರಲೂಬಹುದು....ಆದರೂ ಹೆಚ್ಚು ಹೆಣ್ಣು ಮಕ್ಕಳೇ ನೋಡುವುದರಿಂದ ಇದನ್ನು ಧಾರಾವಾಹಿ ಎಂದು, ಅವರ ಸಹಾನುಭೂತಿಗೆ ಹೆಸರು ಬಂದಿರಲಿಕ್ಕೆ ಕೂಡ ಸಾಧ್ಯ ಉಂಟು.

ಬಹುಶಃ ಗಂಡಸರನ್ನು ಕಣ್ಣೀರ ಧಾರೆ ಹರಿಸಲಿಕ್ಕೆ ಬರುವುದಿಲ್ಲ ಎಂದು ಕಾಣುತ್ತೆ ಈ ಧಾರಾವಾಹಿಗಳಿಗೆ, ಅದಕ್ಕೆ ಅದನ್ನು ಹೆಣ್ಣುಮಕ್ಕಳಿಗೆ ಬಿಟ್ಟಿದ್ದು ಇರಲೂಬಹುದು(ಗಂಡಸರ ಕಣ್ಣೀರ ಧಾರೆ ಹರಿಸಲಿಕ್ಕೆ). ಅಲ್ಲಿ ಬರುವ ಧಾರಾವಾಹಿಗಳಲ್ಲಿನ ಸೀರೆ , ಒಡವೆ ನೋಡಿ ಹೆಣ್ಣು ಮಕ್ಕಳು ತುಂಬಾ ಆಕರ್ಷಿತರಾಗಿರುತ್ತಾರೆ. ಆಮೇಲೆ ಅಂತರ ಪಿಶಾಚಿ ಆದ ಗಂಡ ಬಂದ ಮೇಲೆ ಶಿಫಾರಸ್ಸು ಹೋಗಿರುತ್ತೆ. ಸಿಗದೆ ಹೋದರೆ ಇದ್ದೇ ಇದೆ.. 'ಧಾರಾ'ಳವಾಗಿ ಕಣ್ಣೀರ 'ಧಾರಾ' ಹರಿಸಲು ಮತ್ತು ಹೇಗಾದರೂ ಮಾಡಿ ಅದನ್ನು ಪಡೆಯಲು.

ಒಂದು ದಿನ ಊಟಕ್ಕೆ ಕುಳಿತ ಸಮಯದಲ್ಲಿ ನನ್ನ ಮಡದಿ ಧಾರಾವಾಹಿ ನೋಡುತ್ತಾ, ರೀ ಸ್ವಲ್ಪ ಒಳಗಡೆ ಹೋಗಿ ಒಂದು ಸೌಟು ತೆಗೆದುಕೊಂಡು ಬನ್ನಿ ಎಂದಳು. ದಿನವೂ ಆಫೀಸ್ ಹೋಗುವ ಸಮಯದಲ್ಲಿ ನನ್ನ ಸೂಟ್ ನ್ನು ಇಡುವುದನ್ನು ಮರೆತರು ಪರ್ವಾಗಿಲ್ಲ ಕಣೇ, ಈ ಸೌಟು ಮಾತ್ರ ನನಗೆ ತರಲು ಹೇಳಬೇಡ ಅಂದೆ. ಅದಕ್ಕೆ ಒಂದು ಕಾರಣವೂ ಇದೆ. ಒಮ್ಮೆ ಸೌಟು ತರಲು ಹೇಳಿದ್ದಳು, ಅದು ಏತಕ್ಕೆ ಎಂದು ತಿಳಿಯದೇ ನಾನು ಜಾರಲಿ(ಝಾರಿ) ಸೌಟು ತಂದೆ. ಇದರಲ್ಲಿ ಸಾರು ಹೇಗೆ ಬಡಿಸಲಿ ಎಂದು ಉಗಿದಿದ್ದಳು. ಮತ್ತೊಮ್ಮೆ ಹೀಗೆ ಅನ್ನದ ಸೌಟು ಬದಲು ಸಾರಿನ ಸೌಟು ತಂದಾಗ ಕೂಡ.

ಹೀಗೆ ಒಮ್ಮೆ ಧಾರಾವಾಹಿ ನಡುವೆ ಮೊಬೈಲ್ ಜಾಹೀರಾತು ಬರುತಿತ್ತು. ಲೇ ನಾನು ಹೊಸ ವೈಫೈ ಇದ್ದ ಮೊಬೈಲ್ ತೆಗೆದುಕೊಳ್ಳಬೇಕು ಎಂದೆ. ಹಾ... ಏನಂದಿರಿ ಎಂದು ಗದರಿಸಿದಳು. ಏಕೆಂದರೆ ಸ್ವಲ್ಪ ಇಂಗ್ಲೀಶ್ ಅವಳಿಗೂ ಗೊತ್ತು. ಕೆಲವೊಂದು ಸಾರಿ ಸೇಡು ತೀರಿಸಿಕೊಳ್ಳಬೇಕಾದಾಗ ದೊಡ್ಡ ದೊಡ್ಡ ಇಂಗ್ಲೀಷ್ ಪದ ಉಪಯೋಗಿಸಿ ಬೈದಿರುತ್ತೇನೆ. ಆಗ ಅವಳಿಗೆ ಅರ್ಥ ಆಗಿರುವುದಿಲ್ಲ. ಆದರೆ ಈಗ ಸಿಕ್ಕಿ ಹಾಕಿಕೊಂಡಿದ್ದೆ. ನಾನು ವೈಫೈ ಬಗ್ಗೆ ಒಂದು ದೊಡ್ಡ ಪಾಠ ಮಾಡಬೇಕಾಗಿಬಂತು. ಅಷ್ಟರಲ್ಲಿ ಧಾರಾವಾಹಿ ಶುರು ಆಯಿತು, ಇಲ್ಲದೆ ಇದ್ದರೆ ಕಣ್ಣೀರ ಧಾರಾ ನನಗೆ ಬರುತಿತ್ತು.

ಅವಳ ಧಾರಾವಾಹಿ ಮುಗಿದ ಮೇಲೆ ನಾನು ಮ್ಯಾಚ್ ಸ್ಕೋರ್ ನೋಡಬೇಕು ಎಂದು ಕುಳಿತಿದ್ದೆ. ನೀವಿಬ್ಬರೂ ಹೋಗಿ ಮಲಗಿಕೊಳ್ಳಿ ಎಂದು ನನಗೆ ಮತ್ತು ಸುಪುತ್ರನಿಗೆ ಆಜ್ಞೆ ಮಾಡಿದಳು. ಸುಪುತ್ರ ಹೋಗಲು ಒಪ್ಪಲಿಲ್ಲ. ಶಾಲೆ ರಜೆ ಇದ್ದಾಗ ಬೇಗ ಏಳುತ್ತಿ. ಶಾಲೆ ಇದ್ದಾಗೆ ಲೇಟ್ ಆಗಿ ಏಳುತ್ತಿ. ನೀನು ನಿನ್ನ ಅಪ್ಪನ ಹಾಗೆ ಉಲ್ಟಾ. ನಾಳೆ ಶಾಲೆ ಇದೆ ಹೋಗು ಎಂದು ಬೈದಳು. ನಾವಿಬ್ಬರು ಬೆಡ್ ರೂಮಿಗೆ ಹೋಗುವಾಗ ಮಗ ಎಡವಿ ಬಿದ್ದ. ಬಿದ್ದು ಅಮ್ಮ ನೋಡು ಅಪ್ಪ ನನ್ನ ಕೈ ಹಿಡಿದುಕೊಂಡು ಹೋಗುವುದಿಲ್ಲ ಎಂದು ನನ್ನ ಮಡದಿಗೆ ಅರುಹಿದ. ನಿಮ್ಮ ಅಪ್ಪ ಇಷ್ಟು ವರ್ಷ ಆದರೂ ನಾಚಿಕೆ ಇಂದ ನನ್ನ ಕೈನೇ ಹಿಡಿಯಲ್ಲ ಇನ್ನೂ ನಿನ್ನ ಕೈ ಎಂದು ಕುಹಕವಾಡಿದಳು. ಮತ್ತೆ ಮಗನಿಗೆ ನಿನಗೆ ನೋಡಿಕೊಂಡು ಹೋಗಲು ಬರುವುದಿಲ್ಲ ಎಂದು ಮಗನಿಗೆ ಬೈದಳು. ಈಗ ಸುಪುತ್ರ ಅಪ್ಪ ನೋಡು ಅಮ್ಮ ಬೈಯುತ್ತಾಳೆ ಎಂದ. ನನಗೆ ಅಷ್ಟೇ ಸಾಕಾಗಿತ್ತು. ನನಗೆ ಬೈಯುತ್ತಾಳೆ, ಇನ್ನೂ ನೀನು ಎಲ್ಲಿಯ ಲೆಕ್ಕ ಎಂದು ಹೇಳಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡು ಮಂದಹಾಸ ಬೀರಿ ಹೋಗಿ ಮಲಗಿಕೊಂಡಿದ್ದೆ.

ಮತ್ತೆ ಒಂದು ದಿನ ಕ್ಯಾಬೇಜ ಹೆಚ್ಚುತ್ತಾ ಟಿ ವಿ ನೋಡುತ್ತಲಿದ್ದಳು. ಲೇ ನೋಡಿಕೊಂಡು ಹೆಚ್ಚು ಹುಳ ಇರುತ್ತವೆ ಎಂದೆ. ನನಗೇನೂ ಕಣ್ಣು ಕಾಣುವದಿಲ್ಲವಾ, ನಾನೇನು ಮುದುಕಿ ಎಂದು ಕೊಂಡಿರಾ, ತೆಗೆದುಕೊಳ್ಳಿ ನೀವೇ ಹೆಚ್ಚಿ ಕೊಡಿ ಎಂದು ನನಗೆ ಕೊಟ್ಟಳು.

ಮತ್ತೆ ಯಾವತ್ತಾದರೂ ಟಿ ವಿ ನೋಡಲು ಬಿಡದೆ ಇದ್ದರೆ ನನಗೆ ಗಂಡಾಂತರ ತಪ್ಪಿದ್ದಲ್ಲ. ಕಣ್ಣೀರ ಧಾರೆ ಶುರು....ಬೇಕಾದರೆ ಚುಮು ಚುಮು ಚಳಿಯಲ್ಲಿ ಕೂಡ ತಣ್ಣೀರ ಸ್ನಾನ ಮಾಡಬಹುದು. ಆದರೆ ಈ ಕಣ್ಣೀರ ಧಾರೆ ಸಹಿಸಲು ಅಸಾಧ್ಯ. ಮತ್ತೆ ಧಾರಾವಾಹಿ ನೋಡುವ ಸಮಯದಲ್ಲಿ ಕರೆಂಟ್ ಏನಾದರೂ ಹೋದರೆ ಕೆ ಪಿ ಟಿ ಸಿ ಎಲ್ (ಕೆ ಈ ಬಿ) ಅವರಿಗೆ ಗಂಡಾಂತರ ತಪ್ಪಿದ್ದಲ್ಲ. ಸಧ್ಯ ನಾನು ತಂದ ಟಿ ವಿ ಇನ್ನೂ ಸರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲದೇ ಹೋದರೆ ಎಂತಹ ಟಿ ವಿ ತಂದಿದ್ದೀರಾ ಎಂದು ತಿವಿದಾಳು ನನ್ನ ಬೀವಿ....

4 comments:

 1. ತುಂಬಾ ಧನ್ಯವಾದಗಳು ಮತ್ತು ವಂದನೆಗಳು.
  ----
  ಪ್ರೀತಿಯಿಂದ ಗೋಪಾಲ್ ಮಾ ಕುಲಕರ್ಣಿ

  ReplyDelete
 2. ಸೀತಾರಾಮ. ಕೆ. sir ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
  ಪ್ರೀತಿಯಿಂದ ಗೋಪಾಲ್

  ReplyDelete