Thursday, February 3, 2011

ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....

ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳುವ ಗಂಡನ ಪ್ರತಾಪಗಳು ಮಡದಿಗೆ ಅರಿವಾಗಿರುತ್ತೆ. ಮಡದಿಗೆ ಮೊದಲು ಬಂದ ಮೇಲೆ ಗಂಡನನ್ನು ಅರಿಯುವ ಸಮಯದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಉತ್ತರಗಳನ್ನು ತಮ್ಮ, ತಮ್ಮ ಉತ್ತರ ಕುಮಾರರಿಂದ(ಗಂಡಂದಿರಿಂದ) ಪಡೆದಿರುತ್ತಾರೆ. ಹೀಗೆ ಮೆಚ್ಚಿಸುವ ಮತ್ತು ಹೋಗಳಿಕೆಯ ಕಾರ್ಯಕ್ರಮಕ್ಕೆ ನಾಂದಿ ಹಾಡಿ ಆಗಿರುತ್ತೆ.

ನಾನು ಮದುವೆ ಆದ ಹೊಸದರಲ್ಲಿ ಮಡದಿಯನ್ನು ಮೆಚ್ಚಿಸುವ ಸಂಪ್ರದಾಯಕ್ಕೆ ಬದ್ದನಾಗಿದ್ದೆ, ಅನ್ನುವುದಕ್ಕಿಂತ ಮೆಚ್ಚಿಸುವ ಭರದಲ್ಲಿ ಬುದ್ದನಾಗಿದ್ದೆ ಎಂದರೆ ಸೂಕ್ತ. ಮಡದಿ ಮೊದಮೊದಲು ಏನೇ ಕೆಲಸ ಹೇಳಿದರು ಪ್ರಾಮಾಣಿಕತೆ ಇಂದ ಮಾಡಿ ಮುಗಿಸುತ್ತಿದ್ದೆ. ಆದರೆ ಈಗ 'ಪ್ರಾಮಾಣಿಕ'ವಾಗಿ 'ಕತೆ' ಹೇಳಿ ಕೆಲಸದಿಂದ ಜಾರಿಕೊಳ್ಳುತ್ತೇನೆ. ಅದಕ್ಕೆ ಸಾಕ್ಷಿ ನಾನು ಬರೆದಿರುವ ಇಷ್ಟೊಂದು ಕತೆಗಳೇ...

ಒಮ್ಮೆ ಹೀಗೆ ಮದುವೆ ಆದ ಹೊಸದರಲ್ಲಿ ನಿನ್ನ ಕೈ ಉಪ್ಪಿಟ್ಟು ಸಕ್ಕತ್ ಆಗಿ ಇರುತ್ತೆ ಎಂದು ಹೇಳಿದ್ದೆ. ನಿಮಗೆ ಆಶ್ಚರ್ಯವಾಗಬಹುದು ಉಪ್ಪಿಟ್ಟು ಎಂದರೆ ಹರಿಹಾಯುವ ಸಕ್ಕತ್ ಜನರ ನಡುವೆ, ಇವನು ಯಾರಪ್ಪ? ಪರಲೋಕ ಪ್ರತಾಪಿ ಉಪಿಟ್ಟನ್ನು ಇಷ್ಟ ಪಡುವವನು ಎಂದು ಅಂದುಕೊಳ್ಳಬಹುದು. ಹೊಗಳಿಸಿಕೊಂಡ ಹೆಂಡತಿ ಏನೋ ಹಿರಿ ಹಿರಿ ಹಿಗ್ಗಿದಳು, ಆದರೆ ಅದರ ಫಲವನ್ನು ಈಗಲೂ ಅನುಭವಿಸುತ್ತಿದ್ದೇನೆ. ವಾರದಲ್ಲಿ ಮೂರು ದಿನ ಉಪ್ಪಿಟ್ಟು, ನನ್ನ ಉಪಸಂಹಾರಕ್ಕೆ.. ಕ್ಷಮಿಸಿ ಉಪಹಾರಕ್ಕೆ. ಮೊದಮೊದಲು ನನಗೆ ತಿಂಡಿ ಏನು? ಇವತ್ತು ಎಂದು ಕೇಳುತ್ತಿದ್ದ ನನ್ನ ಗೆಳೆಯರು ನನ್ನ ಕಪ್ಪಿಟ್ಟಿದ್ದ ಮುಖ ನೋಡಿಯೇ ತಿಳಿದುಕೊಂಡು ಬಿಡುತ್ತಾರೆ.

ಮತ್ತೊಮ್ಮೆ ಹೀಗೆ ನಾನು ಹೆಸರು ಹಿಟ್ಟಿನ ಉಂಡೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪುರಾಣ ಊದಿದೆ. ಮರುದಿನವೇ ನನ್ನನ್ನು ಮೆಚ್ಚಿಸಲು ಮಡದಿ ಮಾಡಿದಳು ಹೆಸರು ಹಿಟ್ಟಿನ ಉಂಡೆ, ಸಧ್ಯ ನಾನು ನನ್ನ ಹೆಸರು ಮರೆಯಲಿಲ್ಲ. ಏನೋ ಲೇಖನದಲ್ಲಿ ಬಂದಿದ್ದ ಒಂದೆರಡು ವಿಷಯ ಹೇಳಿ ನನ್ನ ಬುದ್ದಿವಂತಿಕೆ ಪ್ರದರ್ಶಿಸೋಣ ಎಂದು ಮಾಡಿಕೊಂಡಂತಹ ಅವಾಂತರ(ನನ್ನದೇ, ಕಾಶೀನಾಥನ ಸಿನಿಮಾ ಅಲ್ಲ). ಮುಂದೆ ಅಲ್ಲಿ.. ಇಲ್ಲಿ.. ಓದಿದ ವಿಷಯಗಳನ್ನ ನನ್ನ ಹೆಂಡತಿಯ ಮುಂದೆ ಊದಲಿಲ್ಲ.

ಒಮ್ಮೆ ಹೆಂಡತಿಯನ್ನು ಮೆಚ್ಚಿಸಲು ಎರಡು ಕೆ ಜಿ ಹಸಿ ಮೆಣಿಸಿನಕಾಯಿ ತಂದಿದ್ದೆ. ಏನು? ಹೆಂಡತಿಯನ್ನು ಮೆಚ್ಚಿಸಲು ಹಸಿಮೆಣಿಸಿನಕಾಯಿ ಎಂದು ಅನ್ನಬಹುದು. ಹಾ.. ಸ್ವಾಮಿ ... ಏಕೆಂದರೆ ನನಗೆ ಎರಡೆರಡು ದಿವಸಕ್ಕೆ, ನನ್ನ ಮಡಿದಿ ಒಂದು ರೂಪಾಯಿ ಹಸಿಮೆಣಿಸಿನಕಾಯಿ ತರಲು ಹೇಳುತ್ತಿದ್ದಳು. ಇದನ್ನು ನೋಡಿದ ನನ್ನ ಮಂಜ ಕೊಟ್ಟ ತರಲೆ ಐಡಿಯಾ. ಒಮ್ಮೆಲೇ ಎರಡು ಕೆ ಜಿ ತೆಗೆದುಕೊಡು ತುಂಬಾ ಖುಷಿಯಾಗುತ್ತಾಳೆ ಎಂದು ಹೇಳಿದ. ಹಾಗೆ ಮಾಡಿದೆ, ನಮ್ಮ ಮದುವೆಗೆ ಕೂಡ ಇಷ್ಟು ಮೆಣಸಿನಕಾಯಿ ತಂದಿರಲಿಲ್ಲ ಎಂದು ಹೇಳಿ ಉಗಿದಳು, ಇಷ್ಟು ತಂದರೆ ಒಣಗಿ ಹೋಗುತ್ತವೆ ಎಂದು, ಮರುದಿನ ಅವುಗಳನ್ನು ಉಪ್ಪು ಹಚ್ಚಿದ ಮೆಣಸಿನಕಾಯಿ ಮಾಡಲು ಮತ್ತಷ್ಟು ಸಾಮಾನು ತರಿಸಿ ನನಗೂ ಸಹಾಯ ಮಾಡಲು ಹೇಳಿದಳು .

ಒಮ್ಮೆ ಚಲನ ಚಿತ್ರದಲ್ಲಿ ಹೀರೊ ತನ್ನ ಮಡದಿಯನ್ನು ಮೆಚ್ಚಿಸುವ ಸಲುವಾಗಿ ಮೈಸೂರು ಪಾಕ ಮತ್ತು ಮಲ್ಲಿಗೆ ಹೂವು ತಂದು ಕೊಡುತ್ತಿದ್ದಿದ್ದನ್ನು ನೋಡಿ, ನಾನು ಹಾಗೆ "ನಾ ಮೆಚ್ಚಿದ ಹುಡುಗಿಗೆ ಕಾಣಿಕೆ ತಂದಿರುವೆ" ಎಂದು ಹಾಡುತ್ತಾ, ಮೈಸೂರು ರಾಕ್ ಕ್ಷಮಿಸಿ... ಪಾಕ ಮತ್ತು ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದೆ(ನನ್ನ ಮಡದಿಗೆ). ಅದಕ್ಕೆ ಧಾರವಾಡದಲ್ಲಿ ಇದ್ದು ಕೊಂಡು ಪೇಡಾ ಬಿಟ್ಟು ಈ ಕಲ್ಲಿನ ಹಾಗೆ ಇರುವ ಮೈಸೂರು ರಾಕ್ ತಂದಿದ್ದೀರ ಎಂದು ಉಗಿದಿದ್ದಳು.

ಹೊ'ಗಳಿಕೆ'ಯಲ್ಲಿ ಗಳಿಕೆ ಇದೆ ಎಂದು ಖ್ಯಾತ ಹಾಸ್ಯ ಬರಹಗಾರರಾದ ಶ್ರೀ ಡುಂಡಿರಾಜ ಹೇಳಿದ್ದಾರೆ. ಮತ್ತು ತೆ'ಗಳಿಕೆ'ಯಲ್ಲಿ ಕೂಡ ಎಂದು ಹೇಳಿದ್ದಾರೆ. ನನಗೆ ಮಾತ್ರ ಎರಡು ಸೇರಿ ಹೊತೆ ಗಳಿಕೆ ....

5 comments:

 1. ನಿಮ್ಮ ಬರಹ ಚೆನ್ನಾಗಿದೆ. ಬೇರೆ ಯಾರೂ ಓದುತ್ತಿಲ್ಲವೇ ??? ಅಚ್ಚರಿಯಾಗಿದೆ. ನೀವು ಮುಂದುವರೆಸಿ .

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 2. ತಮ್ಮ ನಿರಂತರ ಅಭಿಮಾನದ ಮಾತುಗಳೇ ನನಗೆ ಬೆರೆಯಲು ಪ್ರೇರಣೆ ಬಾಲು ಸರ್, ತುಂಬಾ ಧನ್ಯವಾದಗಳು ಮತ್ತು ವಂದನೆಗಳು.
  ----
  ಪ್ರೀತಿಯಿಂದ ಗೋಪಾಲ್ ಮಾ ಕುಲಕರ್ಣಿ

  ReplyDelete
 3. tumbaa chennaagide gopalji... yaaru ododilla ankobedi... naanatu huduki odtene ommele.
  anda haage naanu uppittu priya
  varada elu dina uppittu maadidaru astte utsahadalli tintene! haage avalakkinu... eradu iddare utanu madolla..

  ReplyDelete
 4. ನಿಮ್ಮದು ಓದುವಂತಹ ಬರಹವಲ್ಲ... ಓದಿಸಿಕೊಂಡು ಹೋಗುವಂಥಾ ಬರಹ... ನವಿರು ಹಾಸ್ಯದ ಕಲೆ ನಿಮಗೆ ಸಿದ್ದಿಸಿದೆ.

  ReplyDelete
 5. ಸೀತಾರಾಮ. ಕೆ. sir mattu ರಾಜಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
  ಪ್ರೀತಿಯಿಂದ ಗೋಪಾಲ್

  ReplyDelete