Friday, July 2, 2010

ತರ್ಲೆ ಮಂ(ಗ)ಜನ (ನವ) ಗೃಹ ಪ್ರವೇಶ ....

"ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು ಕೊಂಡರೆ ಅದು ನಮ್ಮ ಸುಬ್ಬನ ಫ್ಲೈಟ್ (2012 ರ ಸುಬ್ಬನ ಫ್ಲೈಟ್.... ) ಹಾಗೆ ಆಕಾಶದಲ್ಲಿ ನೇತ ನಾಡೂವದು ಬೇಡ ಎಂದು ಕಡೆಗೂ ಹುಬ್ಬಳ್ಳಿಯಲ್ಲಿ ಒಂದು ಮನೆ ಖರೀದಿ ಮಾಡಿದ. ಅದಕ್ಕೆ ನಮ್ಮ ಸುಬ್ಬ ಮಂಜನಿಗೆ ಹುಂಬ ಕಡೆಗೂ ಹುಂಬ ಹಳ್ಳಿಲಿ ಮನೆ ಖರೀದಿ ಮಾಡಿದ ಎಂದು ಸತಾಯಿಸುತ್ತಿದ್ದ. ಲೇ ಅದು ಹುಂಬ ಹಳ್ಳಿ ಅಲ್ಲ ಎಂದರೆ, ನಮ್ಮ ಸುಬ್ಬ ಮೊದಲು ಅದು ಹೂ ಬಳ್ಳಿ ಅಂತ ಇತ್ತು. ಈಗ ನಮ್ಮ ಮಂಜ ಹೋದ ಮೇಲೆ ಅದು ಹುಂಬ ಹಳ್ಳೀನೇ ಎಂದ.

ಮನೆಯ ಇಂಟೀರಿಯರ್ ಸಲುವಾಗಿ ಒಬ್ಬ ತಮಿಳು ಮನುಷ್ಯನನ್ನು ನೇಮಕ ಮಾಡಿದ್ದ. ಮಂಜನಿಗೆ ತಮಿಳು ಅರ್ಥ ಆಗುತ್ತಿರಲಿಲ್ಲ. ಅವನಿಗೆ ಕನ್ನಡ ಹೀಗಾಗಿ ಇಬ್ಬರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆ ತಮಿಳು ಮನುಷ್ಯನಿಗೆ ಅಷ್ಟು ಚೆನ್ನಾಗಿ ಹಿಂದಿ ಬರುತ್ತಿರಲಿಲ್ಲ. ಅವನು ಸ್ವಲ್ಪ ಹಿಂದಿ ತನ್ನ ಮಗಳಿಂದ ಕಲಿತಿದ್ದ. ಮಂಜುಗೆ ಧಾರವಾಡಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಲು "ಆಪ ಧಾರವಾಡ ಕಾಬಾ ಆ ರಹಿ ಹೇ" ಎಂದು ಕೇಳುತ್ತಿದ್ದ. ಅವನು ಎಲ್ಲದಕ್ಕೂ ಆಮಾ ಆಮಾ ಎನ್ನುತಿದ್ದ. ಇದೇನು ನನಗು ಅಮ್ಮ ಅಮ್ಮ ಅನ್ನುತ್ತಾನೆ ಎಂದು ಬಂದು ಮಂಜ ನನಗೆ ಕೇಳಿದ್ದ. ಅದು ಆಮಾ ಎಂದರೆ "ಹೌದಾ" ಎಂದ ಹಾಗೆ ಎಂದಾಗ ಬಿದ್ದು ಬಿದ್ದು ನಕ್ಕಿದ್ದ ಮಂಜ.

ಒಂದು ದಿನ ಮಂಜ ಅವನ ಕೆಲಸ ನೋಡಲು ಧಾರವಾಡಕ್ಕೆ ಬಂದ. ಅವನಿಗೆ ಎಲ್ಲ ಕಪಾಟುಗಳು ಟೀಕ್ ವುಡ್ ನಿಂದ ಮಾಡಿದ್ದು ಬೇಕಾಗಿತ್ತು. ಮಂಜ ಹೋದಾಗ ಆ ತಮಿಳು ಮನುಷ್ಯನ ಜೊತೆ ಕೆಲಸಕ್ಕೆ ಅವನ ಹೆಂಡತಿನೂ ಬಂದಿದ್ದಳು. ಆಗ ಮಂಜ "ಎ ಟೀಕ್ ನಾಹಿ ಹೈ" ಎಂದು ಆ ಕಟ್ಟಿಗೆ ಟೀಕ್ ವುಡ್ ನಿಂದ ಮಾಡಿದ್ದು ಅಲ್ಲ ಎಂದು ಕೇಳಿದ್ದಾನೆ. ಆಗ ಆ ಮನುಷ್ಯ "ಎ ಠಿಕ ಹೈ" (ಚೆನ್ನಾಗಿದೆ) ಎಂದಿದ್ದಾನೆ. ಹೀಗೆ ಇಬ್ಬರು ಟೀಕ್ ನಾಹಿ - ಠಿಕ ಎಂದು ತಲೆ ಜಜ್ಜಿಕೊಂಡಿದ್ದಾರೆ. ಕಡೆಗೆ ಮಂಜ ಎ ಲಕಡಿ ಠಿಕ ನಾಹಿ ಹೈ ಎಂದ. ಅಷ್ಟೇ ಮಂಜನ ಕಪಾಳಿಗೆ ಆ ತಮಿಳು ಮನುಷ್ಯ ಎರಡು ಎಟು ಕೊಟ್ಟುಬಿಟ್ಟ. ಏಕೆ ಎಂದು ಕೇಳಿದರೆ ತುಮ್ "ಮೇರೆ ಬೀವಿಕೋ ಐಸಾ ಬೊಲ್ತಿ ಹೈ" (ನೀನು ನನ್ನ ಹೆಂಡತಿಗೆ ಹೀಗೆ ಹೇಳುತ್ತಿ ). ಮಂಜ ತಲೆ ಜಜ್ಜಿ ಕೊಳ್ಳುತ್ತಿದ್ದ. "ಮೈ ಕ್ಯಾ ಕಹಾ"( ನಾನೇನು ಹೇಳಿದೆ ಎಂದ). ಆಪ ಮೇರೆ ಬೀವಿ ಕೋ ಲಡಕಿ ಅಚ್ಚಾ ನಾಹಿ ಬೋತಿ ಹೈ" ( ನೀವು ನನ್ನ ಹೆಂಡತಿಗೆ ಹುಡುಗಿ ಚೆನ್ನಾಗಿಲ್ಲ ಎಂದಿರಲ್ಲ ) ಎಂದಾಗ ಮಂಜನಿಗೆ ತಿಳಿಯಿತು. ಕಡೆಗೆ ಅವನಿಗೆ ಒಂದು ದೊಡ್ಡ ನಮಸ್ಕಾರ ಮಾಡಿ, ಅವನ ಅಕೌಂಟ್ ಕ್ಲಿಯರ್ ಮಾಡಿ, ಅವನಿಗೆ ಮನೆಗೆ ಕಳುಹಿಸಿ ಬೇರೆ ಕನ್ನಡದ ಬಡಿಗ(ಬಡಿಗಿ) ನನ್ನು ಗೊತ್ತು ಮಾಡಿಕೊಂಡು ಕೆಲಸ ಪೂರ್ತಿ ಮಾಡಿಸಿ ಮುಗಿಸಿದ.ಅದರಲ್ಲೋ ಒಂದು ಗದ್ದಲ ಮಾಡಿದ್ದ ಮಂಜ ಆಕಸ್ಮಾತಾಗಿ ಅವನಿಗೆ "ಗೌಡ್ರೇ" ಇನ್ನೂ ಆಗಿಲ್ಲ ಕೆಲಸ ಎಂದಿದ್ದ. ಆಗ ನಮ್ಮ ಅಪ್ಪ,ಅಮ್ಮ ನನಗೆ ರಂಜೀತ ಎಂದು ಹೆಸರಿಟ್ಟಿದ್ದಾರೆ ನೀವೇನೂ ನನಗೆ ಗೌಡ್ರೇ ಎನ್ನುವದೆ, ತುಂಬಾ ಮಂಡೆ ಬಿಸಿ ಮಾರಾಯ್ರೆ ಎಂದು ತಲೆ ತಿಂದಿದ್ದ. ಆಗಿನಿಂದ ಅವನನ್ನು ರಂಜೀತ ಸರ್ ಎಂದು ಸಂಭೋದಿಸುತ್ತಿದ್ದ.

ಆಗ ಮಂಜ ಕಡೆಗೋ ಎಲ್ಲ ಕೆಲಸ ಮುಗಿದ ಮೇಲೆ ಗೃಹ ಪ್ರವೇಶದ ಮುಹೂರ್ತ ಫಿಕ್ಸ್ ಆಯಿತು. ಮಂಜನ ಮಡದಿ ಅವನಿಗೆ ಕಾಯಿ-ಪಲ್ಯ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ತೆಗೆದುಕೊಂಡು ಬನ್ನಿ ಎಂದು ಹೇಳಿದಳು. ಆಗ ಮಂಜ ಕಾಯಿ -ಪಲ್ಯ, ಡ್ರೈ ಫ್ರೂಟ್ಸ್, ತೆಗೆದು ಕೊಂಡು ಬರುವೆ ಆದರೆ, ನಟ್ಸ್ ಬೇಕಾದರೆ ನನ್ನ ಬೈಕ್ ಚಕ್ರದಲ್ಲಿ ಇವೆ ತೆಗೆದು ಕೋ ಎಂದು ತಮಾಷೆ ಮಾಡಿದ. ಮಂಜನ ಮಡದಿ ಮಂಗಳಾರತಿ ಮಾಡಿ ಪೇಟೆಗೆ ಕಳುಹಿಸಿದಳು.

ಕಡೆಗೆ ಕಾಯಿ ಪಲ್ಯ ತೆಗೆದು ಕೊಳ್ಳುವ ಕಡೆ ಹೋಗಿ ಚವಳಿ(ಜವಳಿ) ಕಾಯಿಗೆ ಗೋರೇ ಕಾಯಿ ಎಂದು ಬೆಂಗಳೂರು ಭಾಷೆಯಲ್ಲಿ ರೇಟ್ ಕೇಳಿದ. ಆಗ ಅವಳು ಇವನನ್ನು ಯಾವದೋ ಆದಿ ಮಾನವ ಬಂದಿದ್ದಾನೆ ಎನ್ನುವ ಹಾಗೆ ಮೇಲಿಂದ ಕೆಳಕ್ಕೆ ನೋಡಿದಳು. ಮತ್ತೆ ರೇಟ್ ಹೇಳಿದ ಮೇಲೆ "ಇಷ್ಟೇನಾ ರೇಟ್ ಬೇಡ ಎಂದು" ಮುಂದೆ ಹೋದ. ಆಗ ಆ ಮುದುಕಿ "ಎ ಮೂದೇವಿ ಎಂದು" ಬೈದು ಬಿಟ್ಟಳು.

ತರಲೆ ಮಾಡುತ್ತ ಗೃಹ ಪ್ರವೇಶದ ದಿನ ಊಟ ಮಾಡುವಾಗ "ಹೆಂಗಸರು ಚಿತ್ರಾವತಿ ಇಡಬೇಡಿ(ಅಂದರೆ ಊಟ ಚೆಲ್ಲಬೇಡಿ)" ಎಂದಾಗ ಎಲ್ಲ ಹೆಂಗಸರು ಸೇರಿ ಮಂಜನನ್ನು ತರಾಟೆಗೆ ತೆಗೆದುಕೊಂಡರು. ಆಗ ಮಂಜನಿಗೆ ಅವನ ಹೆಂಡತಿ ನೀವು ಸುಮ್ಮನೇ ಇರುವದು ಬಿಟ್ಟು "ಉಡದಾರ ತೆಗೆದು ಉರ್ಲು ಹಾಕಿ ಕೊಳ್ಳುವವರು" ನೀವು ಎಂದು ಬೈದು ಬಿಟ್ಟಿದ್ದಳು.

ಮಂಜನಿಗೆ ತನ್ನ ಗೃಹ ಪ್ರವೇಶ ಇದೆಯೋ ಅಥವಾ ತನ್ನ ಜೀವನದಲ್ಲೇ ನವ ಗೃಹ ಪ್ರವೇಶ ಆಗಿದೆಯೋ ತಿಳಿಯದಾಗಿತ್ತು.....

4 comments:

  1. ತುಂಬಾ ಚೆನ್ನಾಗಿದೆ ನಿಮ್ಮ ಲೇಖನಗಳು. ಹಾಸ್ಯ ಹೂರಣವೇ ತುಂಬಿದೆ.

    ReplyDelete
  2. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete