Friday, June 25, 2010

ವಟ ..ವಟ... ಸಾವಿತ್ರಿ

ಮಂಜ ತುಂಬಾ ವಧುಗಳನ್ನು ನೋಡಿದ್ದ. ಕೆಲವು ವಧುಗಳು ಇವನ ತರ್ಲೆ ಪ್ರಶ್ನೆಗಳಿಂದ ಇವನನ್ನು ವರಿಸಲಿಲ್ಲ. ಮತ್ತೆ ಕೆಲವನ್ನು ಇವನೇ ಬೇಡವೆಂದ. ಆದರೆ ಇವನು ಮಾತ್ರ ಹೆಣ್ಣು ನೋಡುವ ಶಾಸ್ತ್ರ ಮಾತ್ರ ಬಿಟ್ಟಿರಲಿಲ್ಲ. ಮತ್ತೊಂದು ದಿನ ಹೆಣ್ಣು ನೋಡಲು ಹೋಗಿದ್ದ. ಆ ದಿನ ಅವನಿಗೆ ಹೆಣ್ಣಿಗೆ ಏನು ಪ್ರಶ್ನೆ ಕೇಳಬೇಡ ಎಂದು ಅವರಪ್ಪ ತಕೀತ ಮಾಡಿದ್ದರು. ಎಲ್ಲರೂ ಹೆಣ್ಣಿನ ಮನೆಗೆ ಹೋದೆವು. ಮಂಜ ಮನೆ ಮುಂದೆ ನಿಂತ ಒಂದು ಕಾರ್ ಮೇಲೆ ಬರೆದ ಎನ್ನುವ ಸಂತೂವನ್ನು ಜಂತು ಎಂದು ಓದಿದ.ಆಗ ಅವರಪ್ಪ ಮತ್ತೆ ಅವನಿಗೆ ಎಚ್ಚರಿಸಿದರು.

ಮನೆ ಒಳಗೆ ಹೋದೆವು. ಮತ್ತೆ ವಧು ಪರೀಕ್ಷೆ ಶುರು ಆಯಿತು. ಮಂಜ ನಿನ್ನ ಹೆಸರು ಎಂದು ಕೇಳಿದ. ಆಗ ವಧು ಸಾವಿತ್ರಿ ಎಂದಳು. ನೀನು ಕಲೆತಿದ್ದು ಎಂದಾಗ, ನಾನು ಮೊದಲು ೭ ಪಬ್ಲಿಕ್ , ೧೦ ಪಬ್ಲಿಕ್ , ಪೀಯೂಸಿ , ಬೀ ಕಾಮ್ , ಎಮ್ ಕಾಮ್, ಕಂಪ್ಯೂಟರ್ ಕೋರ್ಸ್, ಅಡುಗೆ ಕ್ಲಾಸ್ , ಮೇಹಂದಿ ಕ್ಲಾಸ್ ... ಹೀಗೆ ಶುರು ಹಚ್ಚಿದಳು. ನಾನು ಮತ್ತೆ ಮಂಜ ಮುಖ ಮುಖ ನೋಡುತ್ತಾ ಕುಳಿತು ಬಿಟ್ಟೆವು. ನ‌ನ‌ಗೆ ನಗು ಬಂದರು ಸುಮ್ಮನೇ ಕುಳಿತಿದ್ದೆ. ಹಾಡು ಎನ್ನುತ್ತಿದ್ದಂತೆ ಬರೋಬ್ಬರಿ ೨ ಸುಗಮ ಸಂಗೀತ, ೨ ದಾಸರ ಪದಗಳು, ೨ ಸಿನಿಮಾ ಹಾಡು, ಇನ್ನೂ ತಡೆಯದೇ ಇದ್ದರೆ, ೨ ರಾಕ್ ಸಾಂಗ್ ಕೂಡ ಹೇಳುತಿದ್ದಳು. ಸಧ್ಯ ಎಲ್ಲಿ ಮಂಜ ಡ್ಯಾನ್ಸ್ ಎಂದು ಹೇಳುತ್ತಾನೆ ಎಂದು ಹೆದರಿಕೆ ಬರುತಿತ್ತು. ಮತ್ತೆ ಓದಲು ಪೇಪರ್ ಕೊಟ್ಟು ಓದಲು ಹೇಳಿದರೆ ಅನಾಮತ್ತಾಗಿ ೨ ಪೇಜ್ ಓದಿ ಮುಗಿಸಿದಳು. ಆಗ ಅವರಪ್ಪ ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ ಎಂದರು. ಮಂಜ ಅವರಪ್ಪನ ಮುಖ ನೋಡಿ ಸನ್ನೆ ಮಾಡಿದ ಅವರಪ್ಪ ಅವನಿಗೆ ಕೆಂಗಣ್ಣಿನಿಂದ ನೋಡಿದರು. ಕಡೆಗೂ ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ಮಂಜ ಒಪ್ಪಿಬಿಟ್ಟ. ಕಡೆಗೂ ಮಂಜನ ಮದುವೆ ನೆರವೇರಿತು.

ನನ್ನ ಮಡದಿ ತನ್ನ ಗೆಳತಿಯ ಮನೆಗೆ ಎರಡು ದಿವಸ ಹೋಗಿದ್ದರಿಂದ. ನನಗೆ ಮಂಜನ ಮನೆಯ ಆಹ್ವಾನ ಬಂದಿತ್ತು. ಬೇಡ ಎಂದರು ಮಂಜನ ಮಡದಿ ಸಾವಿತ್ರಿ ಕೇಳಬೇಕಲ್ಲ...

ಮಂಜಾನೆ ಎದ್ದ ಕೂಡಲೇ ಸಾವಿತ್ರಿ "ರೀ ನಾಳೆ ಹಬ್ಬ ನೇರಳೆ ಹಣ್ಣು ತೆಗೆದುಕೊಂಡು ಬನ್ನಿ" ಎಂದಳು ಮಂಜನಿಗೆ. ಮಂಜನಿಗೆ ಘಾಬರಿ ಆಯಿತು. ಏನೇ ಇದು ತಿಂಗಳಲ್ಲಿ ಎರಡು-ಮೂರು ಹಬ್ಬ ಎಂದ. ನೀವು ತರುತ್ತೀರೋ ಇಲ್ಲವೋ ಅದು ಹೇಳಿ ಎಂದಳು. ಹಾಗೆ ಜೇಬು ಮುಟ್ಟಿ ನೋಡಿ ಕೊಂಡ. ನಿನ್ನೆ ಬ್ರಿಗೇಡ್ ರೋಡ್ ನಲ್ಲಿ ಏನೋ ಬೇಕೋ ಎಲ್ಲವೂ ಸಿಗುತ್ತೆ ಎಂದು ಭಾಷಣ ಬಿಗಿದಿದ್ದ. ಹಾಗೆ ಹೇಳಿದ್ದೆ ಮಹಾ ಅಪರಾಧ ಆಯಿತು ಎಂದು ಸುಮ್ಮನೇ, ಆಯಿತು ಎಂದು ಮರು ಮಾತನಾಡದೇ ಮಗನಿಗೆ ಶಾಲೆ ಕಳುಹಿಸುವ ಜವಾಬ್ದಾರಿ ಕೂಡ ಅವನದೇ ಇದ್ದಿದ್ದರಿಂದ ಅವನನ್ನು ಶಾಲೆಗೆ ಬಿಟ್ಟು, ಆಫೀಸ್ ಹೊರಟ.

ನೇರಳೆ ಹಣ್ಣು ಎಲ್ಲಿ ಹುಡುಕುವದು ಎಂದು ಯೋಚಿಸುತ್ತಾ, ಬೈಕ್ ಓಡಿಸುತ್ತಿದ್ದ. ಮುಂದೆ ಬಂದ ನೇರಳೆ ಕಲರ್ ಒಮ್ನಿ ಕಾರ್ ಗೆ ಗುದ್ದಿ ಬಿಟ್ಟಿದ್ದ. ಮಂಜನಿಗೆ ಏನು ಆಗಿರಲಿಲ್ಲ. ಸಾರಿ ಹೇಳಿ ಹಾಗೆ ಸಾವಕಾಶವಾಗಿ ಆಫೀಸ್ ತಲುಪಿದ. ಆಫೀಸ್ ನಲ್ಲಿ ಕಾರ್ ಗೆ ಗುದಿದ್ದ ಸಮಾಚಾರ ನಟರಾಜನಿಗೆ ಹೇಳಿದ. "ರೀ ನನಗೆ ಒಂದು ಉಪಾಯ ಗೊತ್ತು. ನೀವು ಯಾರಿಗೂ ಗುದ್ದುವದಿಲ್ಲ, ನಿಮಗೆ ಯಾರು ಗುದ್ದುವದಿಲ್ಲ ಅಂತಹ ಉಪಾಯ ಎಂದರು. ಮಂಜನಿಗೆ ಅದನ್ನು ಕೇಳಿ ತುಂಬಾ ಸಂತೋಷದಿಂದ ಏನು? ಎಂದು ಕೇಳಿದಾಗ . ನೀವು ಸರಿಯಾದ ರೋಡು ಬಿಟ್ಟು ತೆಗ್ಗುಗಳಲ್ಲಿ ಮಾತ್ರ ಗಾಡಿ ಓಡಿಸಿ ಎಂದರು. ನಿಮ್ಮ ಹಿಂದೆ ಯಾರು ಬರುವದಿಲ್ಲ ಮತ್ತೆ ನಿಮ್ಮ ಮುಂದೆ ಯಾರು ಇರುವದಿಲ್ಲ ಎಂದರು. ಹಾಗೆ ಓಡಿಸುತ್ತಾ ದೊಡ್ಡ ಒಂದು ಖೆಡ್ಡದಲ್ಲಿ ಓಡಿಸಿದರೆ ನಾನು ಆಫೀಸ್ ಗೆ ಬರುವದಿಲ್ಲ ಎಂದು ಕೋಪದಿಂದ ಹೇಳಿ ಕಾಫೀ ಕುಡಿದು ಸುಧಾರಿಸಿಕೊಂಡು. ಆಫೀಸ್ ಕೆಲಸ ಶುರು ಮಾಡಿದ.

ಸಂಜೆ ಹುಡುಕಾಡಿ ನೇರಳೆ ಹಣ್ಣು ರೇಟ್ ಕೇಳಿದಾಗ ೧೦೦ ಗ್ರಾಂ ಗೆ ೨೦ ರೂಪಾಯಿ ಎಂದಾಗ, ಹೆಂಡತಿಯನ್ನು ಮತ್ತೆ ಫೋನ್ ಮಾಡಿ ಕೇಳಿ ಬೇಡವೆಂದಾಗ ಹಾಗೆ ಮನೆಗೆ ಬಂದ. ಊಟವಾದ ಮೇಲೆ ಯಾವದು ನಾಳೆಯ ಹಬ್ಬ ಎಂದು ಕೇಳಿದ. ಅದಕ್ಕೆ ಮಂಜನ ಹೆಂಡತಿ ನಿಮಗೆ ಸತ್ಯವಾನ ಸಾವಿತ್ರಿ ಗೊತ್ತು ತಾನೇ ಎಂದಾಗ, ನಾನು ಮೊನ್ನೆ ಟೀವೀಯಲ್ಲಿ ನೋಡಿದ್ದೆ ಸಿನಿಮಾ. ರಮೇಶ್ ನಟಸಿದ್ದು ತಾನೇ, ತುಂಬಾ ಚೆನ್ನಾಗಿದೆ ಎಂದ, ಸೀಡೀ ಕೂಡ ಸಿಗುತ್ತೆ ತೆಗೆದು ಕೊಂಡು ಬರೆಲೇನು ಎಂದಾಗ, ಅದಕ್ಕೆ ಮಂಜನ ಮಡದಿ ರೀ ಅದು ಅಲ್ಲ ಎಂದು ಸತ್ಯವಾನ್ ಸಾವಿತ್ರಿ ಕಥೆ ಹೇಳಿ, ಇದಕ್ಕೆ ವಟ ಸಾವಿತ್ರಿ ವೃತ ಅನ್ನುತ್ತಾರೆ ಎಂದಳು. ಸಾವಿತ್ರಿ ಸತ್ಯವಾನ ಬದುಕಿಸುವ ರೀತಿ ಕೇಳಿ, ಮಂಜ ಆ ರೀತಿ ಹೆಂಡತಿಯರು ಈಗಲೂ ಇರುತ್ತಾರೇನೇ? ಎಂದು ಪ್ರಶ್ನಿಸಿದಾಗ. ಮರುಮತನಾಡದೇ ಸುಮ್ಮನೇ ಮಲಗಿಕೊಳ್ಳಿ ಎಂದು ಹೇಳಿದಳು. ನಾನು ಸುಮ್ಮನೇ ನಗುತ್ತಿದ್ದೆ.

ನಾಳೆ ಬೇಗ ಎದ್ದೇಳಿ ಎಣ್ಣೆ ಸ್ನಾನ ಮಾಡಬೇಕು ಎಂದಳು. ಸಂಜೆಗೆ ಗೆಳೆಯನ ಜನ್ಮದಿನದ ಪಾರ್ಟೀ ಅಲ್ಲೇ ಮಾಡುತ್ತೇನೆ ಎಂದ ಮಂಜ, ಮಂಜನ ಮಡದಿಯ ಮುಖ ಕೆಂಪಾಗಿತ್ತು. ಸುಮ್ಮನೇ ಮಲಗಿಕೊಂಡೆವು.

ಮರುದಿನ ಮಂಜನಿಗೆ ೨೦೦ ಮಿಲಿ ಎಣ್ಣೆಯಿಂದ ಅಭಿಷೇಕ ಆಗಿತ್ತು. ನಾನು ಮುಸಿ ಮುಸಿ ನಗುತ್ತಿದ್ದೆ. ಕಡೆಗೆ ನನಗೂ ಎಣ್ಣೆ ಹಚ್ಚಿ ಸ್ನಾನ ಮಾಡಿ ಎಂದು ಹೇಳಿದಳು. ರೀ ಇವತ್ತು ವಟ ಸಾವಿತ್ರಿ ವೃತ "ನಾನು ತಂಗಳು ತಿನ್ನುವದಿಲ್ಲ" ನಿನ್ನೆ ಮಿಕ್ಕ ಅನ್ನ ನೀವೇ ತಿಂದು ಹೋಗಿ ಎಂದಳು ಮಂಜನಿಗೆ. ದಿನಾಲೂ ನಾನೇ ತಿನ್ನಬೇಕು ಎಂದು ಕೋಪದಿಂದ ಹೇಳಿ ಪ್ಲೇಟ್ ಕೈಗೆ ಕೊಟ್ಟಳು. ಲೇ ನಿನ್ನೆ ಅದೇನೋ ಕಥೆ ಹೇಳಿದ್ಯಲ್ಲೇ?. ಎಂದ ಮಂಜ ಕೋಪದಿಂದ ಇದೊಂದು ಗೊತ್ತು ನಿಮಗೆ ಎಂದು ಹೇಳಿ ನಮ್ಮಿಬ್ಬರನ್ನೂ ಆಫೀಸ್ ಗೆ ಹೋಗಿ ಎಂದು ಬೀಳ್ಕೊಟ್ಟಳು. ಆದರೂ ನಿನ್ನೆ ಮಾಡಿದ ಚಿತ್ರಾನ್ನ ಚೆನ್ನಾಗೆ ಇತ್ತು ಎಂದ ಮಂಜ. ನನಗೆ ಮಾತ್ರ ದೋಸೆ ಸಿಕ್ಕಿತ್ತು.

ಅವನ ಮಡದಿ ವಟ ..ವಟ... ಅನ್ನುವದನ್ನು ಬಿಟ್ಟರೆ, ತುಂಬಾ ಒಳ್ಳೆಯವಳು. ನಿಜವಾಗಿಯೂ ಸತ್ಯವಾನ್ ಸಾವಿತ್ರಿನೇ.

6 comments: