Tuesday, July 31, 2012

ಭಾಷಣ ಕಾರ್ಯಕ್ರಮ....

ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ ಮನೆಗೆ  ಬಂದ್ರೆ,  ಏನು ತರುತ್ತೀರಾ?, ನಿಮ್ಮ  ಮನೆಗೆ ಬಂದ್ರೆ,  ಏನು ಕೊಡುತ್ತೀರ?" ಎಂದು ಕೇಳುತ್ತಿದ್ದ. ಒಂದು ನಯಾ ಪೈಸೇನು ಬಿಚ್ಚುತ್ತಿರಲಿಲ್ಲ. ಬಂದವನೇ ಕಾಫಿಗೆ ಆಹ್ವಾನಿಸಿದ. ನಾವು ಬೇಡ ಎಂದರು ಕೇಳದೆ ಕರೆದುಕೊಂಡು ಹೋದ. ತಾನೇ ದುಡ್ಡು ಕೊಟ್ಟು ಕಾಫಿ ಕುಡಿಸಿದ.  ಜ್ಯಾಸ್ತಿ ಮಾತನ್ನು ಆಡದ ಮನುಷ್ಯ, ಒಂದೇ ಸಮನೇ ಅರಳು ಹುರಿದ ಹಾಗೆ ಮಾತನಾಡುತ್ತಿದ್ದ. ನನ್ನನ್ನು ಮತ್ತು ಮಂಜನನ್ನು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ.

ನಾವಿಬ್ಬರು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಹೋದೆವು, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.  ಕಡೆಗೆ ವಿಶಾಲ ತನ್ನ ವಿಶಾಲವಾದ ಹೃದಯವಂತಿಕೆ ಪ್ರದರ್ಶಿಸಿ, ನನ್ನನ್ನು ದಂಗುಗೊಳಿಸಿದ್ದ.  ಅದೇನೆಂದರೆ ಮುಂದಿನ ವಾರದ ಭಾಷಣ ಗೋಪಾಲ್ ಅವರದ್ದು, ವಿಷಯ ಅವರೇ ಹೇಳುತ್ತಾರೆ ಎಂದ. ನಾನು ವಿಧಿ ಇಲ್ಲದೆ ಸ್ಟೇಜ್ಗೆ ಹೋಗಿ ಹಾಸ್ಯದ ಬಗ್ಗೆ ಭಾಷಣ ಎಂದು ಹೇಳಿ ಬಂದೆ. ಮಂಜ ಸಧ್ಯ ಬಚಾವ್ ಆಗಿದ್ದ. ನಾನು ಎಂದಿಗೂ ಭಾಷಣವನ್ನು ಮಾಡಿದವನಲ್ಲ, ಮನೆಯಲ್ಲಿ ಮಾಡಿದರೂ ಮಡದಿ, ಮಗ ಕಿವಿಯಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.  ಕಡೆಗೆ ಅಂತರ್ಜಾಲ ಮತ್ತು ಮಂಜನ ಸಹಾಯದಿಂದ ಒಂದಿಷ್ಟು ಜೋಕ್ ಮತ್ತು ಬ್ಲಾಗ್ ನಿಂದ ವಿಷಯಗಳನ್ನು, ಮತ್ತೆ ನಮ್ಮ ಗಂಗಾವತಿ ಬೀಚಿ ಎಂದೆ ಖ್ಯಾತ ರಾದ ಶ್ರೀ ಪ್ರಾಣೇಶ ಅವರ ಸಿ.ಡಿ ಖರೀದಿಸಿ, ಅದರಲ್ಲಿನ ವಿಷಯಗಳನ್ನು ಸೇರಿಸಿ ಭಾಷಣವನ್ನು ತಯಾರಿ ಮಾಡಿದೆ. ಅದನ್ನು ಮಡದಿಯ ಮುಂದೆ ಹೇಳಿದೆ. ಮಡದಿ ಎಲ್ಲಾ ಚೆನ್ನಾಗಿದೆ. ಆದರೆ, ಮೊದಲು ನೀವು ನಗುವುದನ್ನು ನಿಲ್ಲಿಸಿ, ಆಮೇಲೆ ಹೇಳಿ ಎಂದಳು. ಮಾಡುತ್ತಿರುವುದು ಹಾಸ್ಯದ ಬಗ್ಗೆ ಭಾಷಣ ಕಣೇ ಎಂದೆ. ಆದರೂ  ನೀವು ನಗುವುದನ್ನು ನಿಲ್ಲಿಸಿ ಹೇಳಿ ಎಂದಳು. ಅವಳ ಆಜ್ಞೆಯಂತೆ ಮತ್ತೊಮ್ಮೆ, ಅವಳ ಮುಂದೆ ಹೇಳಿದೆ. ಮಗ ಮಾತ್ರ ನನ್ನನ್ನು ಪಿಕಿ-ಪಿಕಿ ಎಂದು ಕಣ್ಣು ಬಿಟ್ಟು ನೋಡುತ್ತಿದ್ದ. ಮೊದ-ಮೊದಲು ನಗುತ್ತಿದ್ದ ನನ್ನ ಮಡದಿ, ಆಮೇಲೆ ನಗುವುದನ್ನೇ ನಿಲ್ಲಿಸಿ ಬಿಟ್ಟಳು. ಏಕೆ? ನಗು ಬರುತ್ತಿಲ್ಲವಾ? ಎಂದೆ. ಹಾಗೇನಿಲ್ಲ, ನೀವು ನನಗೆ ತುಂಬಾ ಸರತಿ ಹೇಳಿದ್ದರಿಂದ ನಗು ಬರುತ್ತಿಲ್ಲ. ಚೆನ್ನಾಗಿದೆ ನೀವು ಚೆನ್ನಾಗಿ ತಯಾರಿ ಮಾಡಿದ್ದೀರಾ ಹೇಳಿ ಎಂದಳು.

ಮರು ದಿನ ಭಾಷಣ ಇದ್ದರಿಂದ ನಿದ್ದೆ ಚೆನ್ನಾಗಿ ಬರಲಿಲ್ಲ. ಹಾಗು-ಹೀಗು ನಿದ್ದೆ ಮುಗಿಸಿ ಬೇಗನೆ ಎದ್ದು ಮತ್ತೊಮ್ಮೆ ಎಲ್ಲವನ್ನು ಕಂಠ ಪಾಠ ಮಾಡಿ ಮುಗಿಸಿದೆ. ನನ್ನ ಮಗನಿಗೆ ಆಶ್ಚರ್ಯ ನಾನು ಎಂದು ಓದಿದವನಲ್ಲ. ಆದರೂ, ಇಷ್ಟೊಂದು ಓದುತ್ತಿರುವುದು ಸೋಜಿಗವೇ ಅನ್ನಿಸಿತು. ನನ್ನ ಮಡದಿ ತನಗೆ ಅಷ್ಟೇ ಅಲ್ಲದೆ, ನನಗು ಕೂಡ ಪಾಠ ಹೇಳಿ ಕೊಡುತ್ತಾಳೆ ಎಂದು ಅರ್ಥೈಸಿ ಕೊಂಡು ಬಿಟ್ಟಿದ್ದ. ಅಮ್ಮ-ಮಗ ಇಬ್ಬರು ನನಗೆ ಆಲ್ ದಿ ಬೆಸ್ಟ್ ಎಂದು ಹೇಳಿ ಕಳುಹಿಸಿದರು. ನಾನು ಮಂಜನ ಮನೆಗೆ ಹೋದೆ. ಮಂಜ ತನ್ನ ತರ್ಲೆ ಬುದ್ಧಿ ತೋರಿಸಿ ಪರಾರಿ ಆಗಿದ್ದ. ಕಡೆಗೆ ವಿಧಿ ಇಲ್ಲದೆ ಒಬ್ಬನೇ ಹೋದೆ.

ನಮ್ಮ ವಿಶಾಲ ಪ್ರತಿ ಬಾರಿ ನಿಮಗೆ ಕ್ರಾಂತಿಕಾರಿಗಳ ಭಾಷಣ ಇರುತಿತ್ತು. ಆದರೆ ಈ ಸಾರಿ ನಿಮಗೆ ಒಂದು ವಿಭಿನ್ನವಾದ ಹಾಸ್ಯ ಭಾಷಣ ಇದೆ ಎಂದು ಹೇಳಿ, ನನ್ನನ್ನು ಸ್ಟೇಜ್ ಗೆ ಆಹ್ವಾನಿಸಿದ. ನಾನು ನಡುಗುತ್ತ ಮೈಕ್ ಹಿಡಿದು ನನ್ನ ಭಾಷಣವನ್ನು ಧಾರವಾಡ ಭಾಷೆಯಲ್ಲಿ ಶುರು ಮಾಡಿದೆ. ವಿಶಾಲ ಹಿಂದೆ ಹೋಗಿ ಕುಳಿತುಕೊಂಡ. ತುಂಬಾ ಹೊತ್ತು ಭಾಷಣ ಮಾಡಿದರೂ, ಯಾರೊಬ್ಬರ ಮುಖದಲ್ಲೂ ಮಂದಹಾಸ ಬಿರಲಿಲ್ಲ.  ಆದರೂ ಧಾರವಾಡದಿಂದ ಬಂದ ಇಬ್ಬರು ಮಾತ್ರ ನನ್ನ ಭಾಷಣ ಕೇಳಿ ನಗುತ್ತಿದ್ದಿದ್ದು, ನನಗೆ ಮಾತ್ರ ತುಂಬಾ ಖುಷಿ ಅನ್ನಿಸಿತು. ನಮ್ಮ ವಿಶಾಲ ಮಾತ್ರ ತನ್ನ ವಿಶಾಲ ಹೃದಯ ಪ್ರದರ್ಶಿಸಿದ್ದ, ಹಿಂದೆ ಕುಳಿತು ನಿದ್ದೆ ಹೋಗಿದ್ದ. ನಾನೇನು ಜೋಗುಳ ಹಾಡುತ್ತ ಇದ್ದೇನಾ?, ಎಂದು ಅನ್ನಿಸಿತು. ನನಗೆ ಕೋಪ ಬಂದರು ತೋರಿಸಿದೆ ಸುಮ್ಮನೆ ಭಾಷಣ ಮಾಡಿ ಮುಗಿಸಿದೆ. ಯಾರೋ ಒಬ್ಬರು ಭಾಷಣ ಮುಗಿದ ಮೇಲೆ ವಿಶಾಲನನ್ನು ಎಬ್ಬಿಸಿದರು. ಕಡೆಗೆ ಎದ್ದು ನಮ್ಮ ವಿಶಾಲ ನನಗೆ ಒಂದು ಪ್ರಮಾಣ ಪತ್ರ ಕೊಟ್ಟ. ಅದನ್ನು ತೆಗೆದುಕೊಂಡು ಮನೆ ಹಾದಿ ಹಿಡಿದೆ.

ಮನೆಯಲ್ಲಿ ನಮ್ಮ ಮಂಜ ಹಾಜರ ಆಗಿದ್ದ. ಅವನಿಗೆ ಕೋಪದಿಂದ ಎಲ್ಲಿ ಹಾಳಾಗಿ ಹೋಗಿದ್ಯೋ ಎಂದು ಬೈದೆ. ನಾನು ಬಂದಿದ್ದರೇ ಮುಂದಿನ ಭಾಷಣ ಮಂಜನದು ಎಂದು ವಿಶ್ಯ ಹೇಳಿ ಬಿಡುತ್ತಿದ್ದ ಎಂದ. ನನಗೆ ಹಾಗೆ ಕರೆದರೆ ಆಗುವುದಿಲ್ಲ ಅರಿಶಿಣ-ಕುಂಕುಮ ಕೊಟ್ಟು ಕರಿಬೇಕು ಗೊತ್ತ ಎಂದ. ಎಷ್ಟೊಂದು ಬುರುಡೆ ಬಿಚ್ಚುತ್ತಿ, ನೀನು ಭಾಷಣ ಮಾಡಬೇಕಪ್ಪ ಎಂದೆ. ನೋಡು ಅವು ಮನದಾಳದ ಮಾತುಗಳು ತನ್ನ ತಾನೇ ಬರಬೇಕು, ಕಂಠ ಪಾಠ ಮಾಡಿ ಒಪ್ಪಿಸಲು ನನಗೆ ಬರುವುದಿಲ್ಲ ಎಂದ. ಹೇಗಿತ್ತು ಭಾಷಣ ಎಂದ, ನಾನು ತುಂಬಾ ಚನ್ನಾಗಿತ್ತು ಎಂದೆ. ಸುಮ್ಮನೆ ಹೇಳಬೇಡ ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ ಎಂದು ಗೇಲಿ ಮಾಡಿದ.

ಮರುದಿನ ಪಾರ್ಕಿನಲ್ಲಿ ನಾನು ಮಂಜ ಹೋಗುತ್ತಿದ್ದಾಗ, ವಿಶಾಲ ತನ್ನ ಅದೇ ಗುಂಪಿನ ಜೊತೆ ಜೋರಾಗಿ "ಹಾ.. ಹಾ... " ಎಂದು ನಗುತ್ತಿದ್ದರು . ನೋಡು ನೀನು ಭಾಷಣ ಮಾಡಿದರೂ ನಗದ ಜನ  ಹೇಗೆ ನಗುತ್ತಿದ್ದಾರೆ ಎಂದು ಗೇಲಿ ಮಾಡಿದ. ಒಮ್ಮೆ ಗಾಂಧಿ ಬಜಾರಿನಲ್ಲಿ ನಾನು ಮತ್ತು ಮಂಜ ಹೋದಾಗ ಮತ್ತೆ ವಿಶಾಲ ಭೇಟಿಯಾದ, ಕೈಯಲ್ಲಿ  ಸಿ.ಡಿ ಗಳು ಇದ್ದವು, ಯಾವ ಸಿ.ಡಿ ಎಂದು ಕೇಳಿದೆ. ನೋಡು ತುಂಬಾ ಚೆನ್ನಾಗಿವೆ. ಶ್ರೀ ಪ್ರಾಣೇಶ ಅವರ ಹಾಸ್ಯ ಸಿ.ಡಿ ಗಳು ಎಂದು ತೋರಿಸಿದ. ಧಾರವಾಡ ಭಾಷೆಯಲ್ಲಿ ತುಂಬಾ ಚೆನ್ನಾಗಿ ಹಾಸ್ಯ ಸಿಂಚನ ಹರಿಸುತ್ತಾರೆ ಎಂದು ನನಗೆ ಒಂದು ದೊಡ್ಡ ಭಾಷಣ ಬಿಗಿದ. ಮಂಜ ಮಾತ್ರ ನನ್ನ ಮುಖ ನೋಡಿ ನಕ್ಕಿದ್ದೆ ನಕ್ಕಿದ್ದು.

2 comments: