Wednesday, July 4, 2012

ದಂತದ ಗೊಂಬೆ....

ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು ವಿಚಾರಿಸಿದರು. ಅದಕ್ಕೆ ಮಂಜ ಹುಡುಗಿ ದಂತದ ಗೊಂಬೆ ಹಾಗೆ ಇದ್ದಳು, ಸೌಂದರ್ಯ ದೇವತೆ ಆದರೆ, ನನಗೆ ಅವಳ ಖರ್ಚನ್ನು ತೂಗಿಸಲು ಆಗುವುದಿಲ್ಲ ಎಂದ. ಹಾಗೇನಾದರು ಮದುವೆ ಆದರೆ, ಒಂದು ಬ್ಯಾಂಕ್ ಲೂಟಿ ಮಾಡಬೇಕು ಅಷ್ಟೇ ಅಂದ. ಅಲ್ಲೇ ಇದ್ದ ಸುಧೀರ್ ಸುಮ್ಮನಿರದೆ ಹಾಗಾದರೆ, ನನಗೆ ಅವಳನ್ನು ತೋರಿಸು ಎಂದ. ಏಕೆಂದರೆ, ಸುಧೀರ್ ನಿಗೆ ತಲೆ ಇಲ್ಲದಿದ್ದರೂ ತಲೆತಲಾಂತರದಿಂದ ಬಂದ ಅಸ್ತಿಗೇನು ಕಡಿಮೆ ಇರಲಿಲ್ಲ. ಅದನ್ನು ಕೇಳಿದ ಅವರ ಅಮ್ಮ ಇದೇನೋ? ಕಪಿ ಚೇಷ್ಟೆ ಎಂದು ಬೈದರು. ಬೈದರೂ ಬೆಂಬಿಡದ ಬೇತಾಳದಂತೆ ಕಾಡಿ ಅವರ ಮನೆ ವಿಳಾಸ ಮತ್ತು ಕುಂಡಲಿ ಕೇಳಿ ಪಡೆದ. ಹೆಣ್ಣು ಗಂಡಿನ ಮನೆಯಲ್ಲೇ ನೋಡುವ ಶಾಸ್ತ್ರ ಇದ್ದರು, ಅವರಿಗೆ ಕರೆ ಮಾಡಿ ನಾವೇ ಹೆಣ್ಣು ನೋಡಲು ಬರುತ್ತೇವೆ ಎಂದು ಶಾಸ್ತ್ರಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ಅಮ್ಮ ಬೇಡವೆಂದರೂ ಕೇಳದೆ ಹೇಳಿದ. ಅವರ ಮನೆಯವರು ಬರುವವರನ್ನು ಬೇಡವೆನ್ನಲು ಆಗದೆ ಬನ್ನಿ ಎಂದರು. ಸುಧೀರ್ ನ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಬೇಡ ಬೇಡ ಎಂದರು ಕೇಳದೆ ಪಾರ್ಟಿ ಕೊಡಿಸಿದ್ದ. ಎಲ್ಲರು ನನ್ನ ಸುಲವಾಗಿ ದೇವರಲ್ಲಿ ಪ್ರಾರ್ಥಿಸಿ ಎಂದು ಕುಡಿದ ಅಮಲಿನಲ್ಲಿ ವಿನಂತಿಸಿದ್ದ. ಮಂಜ ಸುಧೀರನಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ಹೇಳಿದ್ದ.

 ಮರುದಿನ ಎಲ್ಲರೂ ಮಂಜನ ಸಮೇತವಾಗಿ ಹೆಣ್ಣಿನ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗಿತ್ತು. ನಾವು ಹೋಗಿರುವಷ್ಟು ಜನರನ್ನು ನೋಡಿ ಹೆಣ್ಣಿನ ಮನೆಯವರು ಗಾಬರಿ ಆಗಿದ್ದರು. ನಾವು ನಿಶ್ಚಿತಾರ್ಥ ಮುಗಿಸಿಕೊಂಡೆ ಹೋಗುತ್ತೇವೆ ಎಂದು ತಿಳಿದುಕೊಂಡಿದ್ದರು. ಸುಧೀರ ಹೆಣ್ಣು ನೋಡಿ ನಾಚಿ ನೀರಾಗಿದ್ದ. ಹೆಣ್ಣು ನಿಜವಾಗಿಯು ದಂತದ ಗೊಂಬೆ ಹಾಗೆಯೇ ಇದ್ದಳು. ಅವಳ ಸಿಂಗಾರ ಕೂಡ ಅಷ್ಟೇ ಭರ್ಜರಿ ಆಗಿತ್ತು. ಸುಧೀರ ಮರು ಮಾತಿಲ್ಲದೆ ಒಪ್ಪಿ ಬಿಟ್ಟ. ಮದುವೆ ನಿಶ್ಚಿತಾರ್ಥ ಕೂಡ ನಿರ್ಧರಿಸಿದರು. ಆದರೆ ಹೆಣ್ಣಿನ ತಂದೆ ನಿಮ್ಮ ಬಳಗ ತುಂಬಾ ದೊಡ್ಡದು ಎಂದು ಕಾಣುತ್ತೆ ಎಂದರು. ಹಾಗೇನಿಲ್ಲ ಮಾವಾ ಇವರೆಲ್ಲಾ ನನ್ನ ಗೆಳೆಯರು ಎಂದು ಹೇಳಿ ಸುಮ್ಮನಾಗಿಸಿದ್ದ.

 ಒಂದು ದಿನ ಸುಧೀರ ಅವಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಏನು? ಮಾತನಾಡಬೇಕು ಹೇಳು ಎಂದು ಮಂಜನ ತಲೆ ತಿಂದಿದ್ದ. ಹೋಗಿ ಅವಳ ಹೆಸರು ಕೇಳಬೇಡ ಎಂದ. ಅದಕ್ಕೆ ಸುಧೀರ ನನಗೇನು ಅಷ್ಟು ತಲೆ ಇಲ್ಲವೇ ಅವಳ ಹೆಸರು ಪ್ರತಿಮಾ ಅದು ನನಗೆ ಗೊತ್ತು. ಮತ್ತೆ ಏನಾದರು ಹೇಳು ಎಂದು ಕೇಳಿದ್ದ. ಮಂಜ ಅವನಿಗೆ ಭೀತಿಯಿಂದ ವರ್ತಿಸಬೇಡ, ನಿನ್ನ ಹೆಸರು ಸುಧೀರ ನೆನಪಿರಲಿ ಎಂದು ತಾಕೀತ್ ಮಾಡಿದ್ದ. ಮತ್ತು ಒಂದು ಚಾಕಲೇಟ್ ತೆಗೆದುಕೊಂಡು ಹೋಗು ಎಂದು ಹೇಳಿದ್ದ. ಮರುದಿನ ಸುಧೀರನ ತುಟಿಗೆ ದೊಡ್ಡದಾದ ಗಾಯ ಆಗಿತ್ತು. ಏನೋ? ಇದು ಎಂದು ಕೇಳಿದರೂ ಯಾರಿಗೂ ಹೇಳಲಿಲ್ಲ.

ಮದುವೆ ನಿಶ್ಚಿತಾರ್ಥ ದಿವಸ ಮಂಜ ಸುಧೀರನಿಗೆ ಟೀ-ಶರ್ಟ್ ಹಾಕಿಕೋ ಎಂದು ಹೇಳಿದ್ದ. ಸುಧೀರ ಮಂಜನ ಮಾತಿನಂತೆ ಟೀ-ಶರ್ಟ್ ಹಾಕಿಕೊಂಡು ಮಣೆ ಮೇಲೆ ಕೂಡುತ್ತಿದ್ದಾಗ, ಎಲ್ಲರೂ ಸುಧೀರನನ್ನು ನೋಡಿ ನಗಲು ಶುರು ಮಾಡಿದರು. ಏಕೆಂದರೆ? ಸುಧೀರ್ ಬನಿಯನ್ನು ತೋಳು ಅವನ ಟೀ-ಶರ್ಟ್ ಕಿಂತ ದೊಡ್ಡದು ಇತ್ತು. ಅದನ್ನು ನೋಡಿ ಕೆಳ ಮಾರಿ ಮಾಡಿ ಕುಳಿತಿದ್ದ ಹೆಣ್ಣು ಕೂಡ ನೋಡಿ ನಕ್ಕಾಗ, ನಮಗೆ ಅವಳ ನಿಜವಾದ ದಂತ ದರ್ಶನ ಆದ ಮೇಲೆ, ದೂರ ದೂರ ಇರುವ ದೊಡ್ಡ ಚೂಪಾದ ದಂತಿ ಪಂಕ್ತಿಗಳು. ಸುಧೀರನಿಗೆ ಏನಾಗಿತ್ತು? ಎಂದು ಗೊತ್ತಾಗಿತ್ತು. ಆದರೆ ಇದರಲ್ಲಿ ಪಾಪ ಮಂಜನದು ಏನು? ತಪ್ಪು ಇರಲಿಲ್ಲ, ಏಕೆಂದರೆ ಅವನಿಗೆ ಆ ವಿಷಯ ತಿಳಿದಿದ್ದೆ ಅವಾಗ. ಸುಧೀರ್ ತಲೆ ಎತ್ತುವ ಧೈರ್ಯ ಮಾಡಲಿಲ್ಲ. ಕಡೆಗೆ ಮಂಜ ಅವನಿಗೆ ಟೀ-ಶರ್ಟ್ ಹೇಳಿದ್ದೆ ತಪ್ಪಾಯಿತು ಎಂದೆನಿಸಿ, ಅವನಿಗೆ ಶರ್ಟ್ ಹಾಕಿಕೊಂಡು ಬರಲು ಹೇಳಿದ. ಮತ್ತೆ ನಿಶ್ಚಿತಾರ್ಥ ಮುಗಿಸಿದರು. ಆಗ ಮದುಮಗಳ ತಂದೆ ನಾವು ನಮ್ಮ ಪುಟ್ಟಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಏನೂ ಕಡಿಮೆ ಮಾಡಿಲ್ಲ. ಚೆನ್ನಾಗಿ ನೋಡಿಕೋ ಎಂದು ಹೇಳಿದರು.

 ಮದುವೆ ಆಗುವವರೆಗೂ ನಾವು ಸುಧೀರನಿಗೆ "ಪ್ರತಿಮಾ ಚುಂಬನಂ ದಂತ ಭಗ್ನಂ" ಮತ್ತು ಅವನೇ ಅವಸರ ಮಾಡಿಕೊಂಡು ಅಪಘಾತ ಮಾಡಿಕೊಂಡ ಎಂದು ತುಂಬಾ ದಿವಸ ಅವನ ತುಟಿ ನೋಡಿ ಕಾಡಿದ್ದೆವು. ಆದರೂ ಏನು ಮಾಡಲು ಸಾಧ್ಯವಿರಲಿಲ್ಲ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನೆ ಇದ್ದ. ಮದುವೆ ವಿಚಾರವಾಗಿ ಅವನ ಮಾವ ಬಂದಾಗ, ನನ್ನ ಹಲಕಟ ಮಾವ ಬಂದಿದ್ದ ಎಂದು ಹಲ್ಲು ಕಡಿಯುತ್ತಿದ್ದ.ಅದನ್ನು ತಿಳಿದು ಅವನ ಮಾವ ಅವಳ ಹಲ್ಲುಗಳನ್ನ ಸರಿ ಮಾಡಿಸಿದ್ದರು.

ಮದುವೆಯಲ್ಲಿ ಅವಳು ಪ್ರತಿ ಮಾತಿಗೂ ನಗುತ್ತಿದ್ದಳು. ಮದುವೆ ಆದ ಮೇಲೆ ತಿಳಿಯಿತು ಅವರ ಅಪ್ಪ ಅವಳಿಗೆ ಚಿಕ್ಕವಳಿದ್ದಾಗ ತುಂಬಾ ಚಾಕ್ಲೇಟ್ ತಂದು ಕೊಡುತ್ತಿದ್ದರು. ಅದಕ್ಕೆ ಹಲ್ಲುಗಳು ಬೇಗನೆ ಹುಳುಕು ಆಗಿ ಬಿದ್ದು, ದೊಡ್ಡವಾಗಿ ಬಂದಿದ್ದವು ಎಂದು.ಈಗ ಮಂಜನನ್ನು ದಿನವು ಹೊಗಳುತ್ತಾ ಇರುತ್ತಾನೆ. ಮತ್ತು "ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ.."ಅನ್ನುವ ಬದಲು ಅಡುವ ಸಮಯದ ಗೊಂಬೆ ಮಾವನ ಎಂದು ಹಾಡುತ್ತ ಅವಳ ಕೈಯಲ್ಲಿ ಆಡುವ ಸಮಯದ ಗೊಂಬೆ ಆಗಿದ್ದಾನೆ.

2 comments:

  1. "ಪ್ರತಿಮಾ ಚುಂಬನಂ ದಂತ ಭಗ್ನಂ" .....hahaha...Chennagide nimma kathe....

    ReplyDelete
  2. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...
    ಅಕ್ಕರೆಯಿಂದ ಗೋಪಾಲ್

    ReplyDelete