Saturday, August 27, 2011

ಅತಿಥಿ ದೇವೋಭವ ....

ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ ಸ್ವಚ್ಚವಾಗಿ ಇಡಬೇಕಾ?, ಆಯಿತು ಬಿಡಿ ಹಾಗೆ ಬಿದ್ದಿರಲಿ ನನಗೇನೂ, ಎಷ್ಟೇ ಆದರೂ ಅವು ನಿಮ್ಮ ಸಂಬಂಧಿಕರು(ಗೆಸ್ಟ್) ಅಲ್ಲವೇ ಎಂದಳು. ಅಷ್ಟರಲ್ಲಿ ನನ್ನ ಪುಸ್ತಕದ ಒಳಗಿಂದ ಒಂದು ಜಿರಲೆ ತನ್ನ ಮೀಸೆ ತೋರಿಸುತ್ತ ಹೊರಗಡೆ ಬಂತು. ಪಾಪ ಅದಕ್ಕೂ ಕೇಳಿಸಿರಬೇಕು. ನಿಮಗಿಂತ ಇದೆ ವಾಸಿ ನೀವು ಪುಸ್ತಕ ತಂದು ಒಟ್ಟುತ್ತಿರಿ..ಅದನ್ನು ಓದಲು ಪಾಪ ನಿಮ್ಮ ಸಂಬಂಧಿ ಕಷ್ಟ ಪಡುತ್ತೇ ಎಂದು ವ್ಯಂಗದ ಮಾತು ಆಡಿ ಹೊರಟು ಹೋದಳು. ರಕ್ತ ಸಂಬಂಧಿ ಖಂಡಿತಾ ಅಲ್ಲ ನನ್ನ ರಕ್ತ ಕೆಂಪು ಅದರ ರಕ್ತ ಬಿಳಿ. ಬಿಳಿ ರಕ್ತ ಕಣಗಳು ಮನುಷ್ಯನಲ್ಲಿ ಇರುತ್ತವೆ ಎಂದು ಓದಿದ ನೆನಪು. ಆದರೆ ಸಂಬಂಧಿ ಆಗುವಷ್ಟು ಇವೆ ಎಂದು ಹೇಳಿದ್ದು ಅರಗಿಸಿ ಕೊಳ್ಳಲಾಗಲಿಲ್ಲ.

ಅದು ನಿರ್ಭಯದಿಂದ ನನ್ನ ಪುಸ್ತಕಗಳ ಮೇಲೆ ನಡೆದಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿ ಅದನ್ನು ಹೊಡೆಯಲು ಪೊರಕೆ ತೆಗೆದುಕೊಂಡು ಬರುವಷ್ಟರಲ್ಲಿ ಮಾಯವಾಗಿತ್ತು. ಕಡೆಗೆ ಎಲ್ಲ ಪುಸ್ತಕಗಳನ್ನು ಹೊಂದಿಸಿ ಇಟ್ಟೆ. ಮರೆಯಲ್ಲಿ ಇದ್ದ ಜಿರಲೆ ಮತ್ತೆ ಹೊರಬಂತು. ಈ ಬಾರಿ ಅದನ್ನು ತಿಥಿ ಮಾಡಿ ಅತಿಥಿಯನ್ನು ಮೀಸೆಯಿಂದ ಹಿಡಿದು ಹೊರಗಡೆ ಎಸೆದು ಬಂದೆ.

ಯಾವುದೇ ದೇವರು ಜಿರಳೆಯನ್ನು ವಾಹನ ಮಾಡಿಕೊಳ್ಳದೆ ಇದ್ದದ್ದಕ್ಕೆ, ನಾನು ಎಲ್ಲಾ ದೇವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಏಕೆಂದರೆ, ಮಹಾಭಾರತದಲ್ಲಿ ಆದ ಮಾರಣಹೋಮಕ್ಕಿಂತ, ಒಂದಿಷ್ಟು ಜಾಸ್ತಿ ಅನ್ನುವಷ್ಟು ಜಿರಲೆ ಸಂಹಾರ ಮಾಡಿದ ಕೀರ್ತಿ ನನಗೆ ಸಲ್ಲುತ್ತೆ. ಅದೆಲ್ಲದರ ಪಾಪದ ಜೊತೆಗೆ ಜಿರಲೆ ವಾಹನ ಮಾಡಿಸಿಕೊಂಡ ದೇವರು ಕೂಡ ನನಗೆ ಶಾಪ ಹಾಕುತ್ತಿದ್ದರು. ಇದೆ ಕಾರಣಕ್ಕಾಗಿ ನಮ್ಮ ಇಲಿ ಮಹಾಶಯನಿಗೆ ಪೂರ್ತಿ ಸ್ವಾತಂತ್ರ ನಮ್ಮ ಮನೆಯಲ್ಲಿ ಇದೆ. ನಾನು ಕಾಲಿಡದ ಜಾಗಕ್ಕೂ ಕೂಡ ನಮ್ಮನೆ ಇಲಿ ಮರಿಗಳು ಓಡಾಡುತ್ತವೆ. ಮೊದಮೊದಲು ಜಿರಲೆ ಕಂಡ ಕೂಡಲೇ ಚೀರಲು ಶುರು ಮಾಡುತ್ತಿದ್ದೆ. ಆಮೇಲೆ ಜಿರಲೆ ನನಗೆ ಒಂದು ಚಿಲ್ಲರೆ ಪ್ರಾಣಿಯಾಗಿ ಕಾಣಿಸತೊಡಗಿತು.


ನಾನು ಕಲಿತ ಕೆಲ ವಿಧ್ಯೆ ಪ್ರದರ್ಶಿಸಬೇಕು ಎಂದು ಮಡದಿಯ ಬಳಿ ಬಂದು ಜಿರಲೆಗೆ ಮೀಸೆ ಹೇಗೆ ಉಪಯೋಗಕ್ಕೆ ಬರುತ್ತೆ ಹೇಳು ಎಂದು ಕೇಳಿದೆ. ಅದಕ್ಕೆ ಮಡದಿ ಅದನ್ನು ಸಾಯಿಸಿದ ಮೇಲೆ ಅದನ್ನು ಎತ್ತಿ ಹಿಡಿದು ಬಿಸಾಡುವುದಕ್ಕೆ ಎಂದು ಹೇಳಿದಳು. ಅದಲ್ಲಾ ಕಣೇ ಏಕೆ? ಇರುತ್ತೆ ಹೇಳು ಎಂದೆ. ಮತ್ತೆ ಯೋಚಿಸಿ, ಅದು ಶೇವಿಂಗ್ ಮಾಡಿಕೊಂಡಿರಲ್ಲ ಅದಕ್ಕೆ ಇರುತ್ತೆ ಎಂದು ಹೇಳಿ ನಗಹತ್ತಿದಳು. ನಾನು ಅದರ ಮೀಸೆಯಿಂದ ಅದು ಆಹಾರ ಹುಡುಕುತ್ತೆ, ಮತ್ತು ಅದರಿಂದ ಹೆಣ್ಣು ಜಿರಲೆಗಳನ್ನು ಆಕರ್ಷಿಸಲು ಉಪಯೋಗಿಸುತ್ತೆ ಎಂದು ಹೇಳಿದೆ. ಓ ಹಾಗಾ.. ಎಂದು ರಾಗ ಎಳೆದು, ಹೇಗೆ ಇದ್ದರೂ ಇಷ್ಟು ಸ್ವಚ್ಚ ಮಾಡಿದ್ದೀರಾ, ಪೂರ್ತಿ ಮನೆ ಸ್ವಚ್ಚ ಮಾಡಿಬಿಡಿ ಮೀಸೆ ಹೊತ್ತ ಗಂಡಸರೇ...ನಾನು ಅಡುಗೆ ಮಾಡುತ್ತೇನೆ ಎಂದಳು ಮಡದಿ. ಪೂರ್ತಿ ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮತ್ತಷ್ಟು ಮಾರಣಹೋಮ ನಡೆಯಿತು. ಮನೆಯಲ್ಲಿ ತುಂಬಾ ಧೂಳು ಇದ್ದಂದರಿಂದ ಸ್ವಲ್ಪ ನೆಗಡಿ ಆಯಿತು. ಹೀಗಾಗಿ ಸಂಜೆ ಡಾಕ್ಟರ ಬಳಿ ಹೋಗುವ ಪರಿಸ್ತಿತಿ ಬಂತು.


ಡಾಕ್ಟರ ಎಲ್ಲ ಪರೀಕ್ಷಿಸಿ ಒಂದಿಷ್ಟು ಮಾತ್ರೆ ಕೊಟ್ಟರು. ತೆಗೆದುಕೊಂಡು ಮನೆಗೆ ಬಂದೆ. ಊಟವಾದ ಮೇಲೆ ಹಾಗೆ ಮಲಗಿಕೊಳ್ಳುವ ಸಮಯದಲ್ಲಿ ಜ್ಞ್ಯಾಪಕಕ್ಕೆ ಬಂತು ಮಾತ್ರೆ ತೆಗೆದುಕೊಂಡಿಲ್ಲವೆಂದು. ಮಡಿದಿಗೆ ಒದರಿ ಹೇಳಿದೆ ಮಾತ್ರೆ ತೆಗೆದುಕೊಂಡು ಬಾ ಎಂದು. ಅವಳು ಮಾತ್ರೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಹೋಯಿತು. ಅವಳು ತೆಗೆದುಕೊಂಡು ಬಂದು ಕೊಟ್ಟಳು. ಅದನ್ನು ಹಿಡಿದುಕೊಂಡು ಕುಳಿತಿದ್ದೆ. ಅವಳು ನೀರು ತರಲು ಹೋದಳು. ನೀರು ತಂದು ಕೊಟ್ಟಳು. ಅಷ್ಟರಲ್ಲಿ ಮತ್ತೆ ಕರೆಂಟ್ ಬಂತು. ಅವಳು ನನ್ನನು ನೋಡಿ ಜೋರಾಗಿ ನಗಹತ್ತಿದಳು. ನಾನು ನನ್ನ ಕೈಯಲ್ಲಿ ಇದ್ದದ್ದು ನೋಡಿ ನನಗೆ ಗಾಬರಿ, ಏಕೆಂದರೆ? ಅದು ಡಾಕ್ಟರ ಕೊಟ್ಟ ಮಾತ್ರೆ ಇರಲಿಲ್ಲ. ಕ್ಯಾಪ್ಸುಲ್ ಹಾಗೆ ಇದ್ದ ನಮ್ಮ ಸಂಬಂಧಿ ಬಿಟ್ಟು ಹೋದ ಗಿಫ್ಟ್. ಅದೇ ... ಅದರ ಕ್ಯಾಪ್ಸುಲ್ ಗಾತ್ರದ ಜಿರಳೆ ಮೊಟ್ಟೆ. ಸಧ್ಯ ಸ್ವಲ್ಪದರಲ್ಲೇ ಬಚಾವ ಅದನ್ನು ಬಿಸಾಡಿ ಮಾತ್ರೆ ತೆಗೆದುಕೊಂಡು, ನನ್ನ ಪ್ರೀತಿಯ ಶ್ರೀ ರಾಮನನ್ನು ನೆನೆದು ನಿದ್ದೆಗೆ ಜಾರಿದೆ.

No comments:

Post a Comment