Friday, August 5, 2011

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.

ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.

ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.

ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.

ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು" ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.

ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.

4 comments:

  1. ತಿಳಿ ಹಾಸ್ಯ ಚೆನ್ನಾಗಿದೆ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು ಸರ್,
    --
    ಅಕ್ಕರೆಯಿಂದ ಗೋಪಾಲ್

    ReplyDelete
  3. ಸೀತಾರಾಮ. ಕೆ. sir ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
    ಪ್ರೀತಿಯಿಂದ ಗೋಪಾಲ್

    ReplyDelete