Friday, July 23, 2010

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....

ವಿಚಿತ್ರ ಸಂಗತಿಗಳಿಗೂ ನನಗು ಏನೋ ನಂಟು. ನನ್ನನ್ನೇ ಹುಡುಕಿ ಗಂಟು ಬೀಳುತ್ತವೆ. ಐದು ವರ್ಷದ ಹಿಂದೆ ನಾನು ಕೆಲಸ ಮಾಡುವ ಕಚೇರಿಯಲ್ಲಿ, ನನ್ನ ಹೆಸರಿನ ಮತ್ತೊಬ್ಬ ಆಸಾಮಿ ಗೋಪಾಲ್ ಕೃಷ್ಣ ಬೆಳ್ಳುಳ್ಳಿ ಎಂಬ ಹುಡುಗ ಸೇರಿಕೊಂಡ. ನನಗೆ ಅಲ್ಲಿಂದ ಶುರು ಆಯಿತು ಪೇಚಾಟ. ಎಲ್ಲಿ ಅವನು ತೆಗೆದುಕೊಂಡ ರಜೆಗಳು, ನನ್ನ ರಜೆ ಖಾತೆಯಿಂದ ಕಳೆದು ಬಿಡುತ್ತಾರೋ, ಅವನು ಊಟ ಮಾಡಿದ ದುಡ್ಡನ್ನು ನನ್ನ ಸಂಬಳದಲ್ಲಿ ಎಲ್ಲಿ ಹಿಡಿಯುತ್ತಾರೋ, ಅಥವಾ ಅವನು ಮಾಡಿದ ತಪ್ಪನ್ನು ನನ್ನ ಮೇಲೆ ಹೇರುತ್ತರೋ ಎಂಬ ಅಭೂತಪೂರ್ವ ಹೋರಾಟ ತಲೆಯಲ್ಲಿ ಹೊಳೆದಾಡಹತ್ತಿತ್ತು. ಅದಕ್ಕೆ ಪುಷ್ಟಿ ನೀಡಲು ನನ್ನದೇ ಅಡ್ಡ ಹೆಸರಿನ ಮತ್ತೊಬ್ಬ ಹುಡುಗ ಸಂದೀಪ್ ಕುಲಕರ್ಣಿ ಎಂಬ ಹುಡುಗ ಬೇರೆ ಸೇರ್ಪಡೆಯಾಗಿ ಬಿಟ್ಟ. ಆಗ ಶುರು ಆಗಿದ್ದು ನನ್ನ ತಲೆಯಲ್ಲಿ ಮಹಾಯುದ್ದವೇ. ಗೋಪಾಲ್ ಕೃಷ್ಣ ತುಂಬಾ ಚೆನ್ನಾಗಿ ಸವಿವರವಾಗಿ ಕಥೆ ಹೇಳುತ್ತಿದ್ದ. ಮತ್ತು ಸಿನೇಮಾ ಅಂದರೆ ಅವನಿಗೆ ಪಂಚಪ್ರಾಣ. ಅವನು ಸಿನೇಮಾ ಕಥೆಗಳನ್ನ ಬರೆದು ತನ್ನ ಪರೀಕ್ಷೆಗಳನ್ನ ಪಾಸಾದೆ ಎಂದು ಹೇಳುತ್ತಿದ್ದ. ಅದು ಹೇಗೆ ಎಂದು ನಾನು ಕೆಲವು ಬಾರಿ, ಅವನ ಜೊತೆ ವಾದಿಸಿದ್ದು ಇದೆ.

ನಾನು ಬೆಂಗಳೂರಿಗೆ ಬಂದು ಸೇರಿದೆ. ನನ್ನ ರಜೆ ದುಡ್ಡು ನನಗೆ ಬಂತು. ಮನಸಿಗೂ ಸ್ವಲ್ಪ ಸಮಾಧಾನ ದಕ್ಕಿತ್ತು. ತುಂಬಾ ಖುಷಿ ಪಟ್ಟೆ. ಹಾಗೆ ಮೊನ್ನೆ ಒಮ್ಮೆ ಗಾಂಧಿ ಬಜಾರ್ ನಲ್ಲಿ ಹೊರಟಿದ್ದಾಗ ವಿಚಿತ್ರ ಎಂಬಂತೆ, ಒಂದು ಪರಿಚಯದ ಸಚಿತ್ರ ಪ್ರಾಣಿ ನನ್ನ ಕಣ್ಣ ಮುಂದೆ ಬಂದು ನಿಂತಿತು. ಯಾರು? ಎಂದು ಸ್ವಲ್ಪ ಸಮಯ ಹೊಳೆಯಲಿಲ್ಲ. ಅದೇ ಗೋಪಾಲ್ ಕೃಷ್ಣ. ನಾನು ಗುರುತು ಹಿಡಿದೆ, ಅವನು ಮಾತ್ರ ನನ್ನ ಗುರುತು ಹಿಡಿಯಲಿಲ್ಲ. ಮೊನ್ನೆ ಬಂದ ನನ್ನ ಅಕ್ಕನಿಗೆ ನಾನು ಗುರುತು ಹಿಡಿಯಲಾರದಷ್ಟು ಬದಲಾಗಿದ್ದೀಯ ಎಂದು ಹೇಳಿದ್ದಳು. ಇನ್ನು ಇವನು ಕಂಡುಹಿಡಿಯುವುದು ಅಸಾಧ್ಯದ ಮಾತು. ನಾನೇ ಅವನಿಗೆ ಮಾತನಾಡಿಸಿ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ಮನೆಗೆ ಕರೆದುಕೊಂಡು ಹೋದೆ. ಅವನು ನನ್ನ ತಲೆಯ ಬಗ್ಗೆ ವಿಚಾರಿಸಿದಾಗ, ಎಲ್ಲವು ಬೆಳ್ಳಗೆ ಇರುವುದು ಬೇಕು.. ಬೇಕು.. ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ. ಹೆಂಡತಿ, ವಾಚ್, ಕಾರು...ಇದು ಅದರ ಪರಿಣಾಮ ಎಂದು ಒಗಟಿನ ಹಾಗೆ ಹೇಳಿದೆ. ಅರ್ಥ ಆಗಲಿಲ್ಲ. ಏನು? ಹಾಗೆಂದರೆ ಎಂದು ಕೇಳಿದ. ಅವನಿಗೆ ಅವನ ಸಿನೀಮಿಯ ಭಾಷೆಯಲ್ಲೇ ಹೇಳಿದರೆ ಚೆನ್ನ ಎಂದು ಶುರು ಮಾಡಿದೆ.

ಒಂದು ದಿನ "ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ "ಕಟ್... ಕಟ್.... " ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. "ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ". ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ.

ಯಾರು ಎಂದು ಕೇಳಿದಳು ನನ್ನ ಮಡದಿ. ಅದೇ ಪ್ರಿಯ ಪೇಪರ್ ನವನಿಗೆ ಹೇಳಬೇಕಂತೆ ಎಂದೆ. ಮನದಲ್ಲಿ ಮತ್ತೆ ಅದೇ ಯೋಚನೆ... ಅಂಕಲ್ ....?. ಹೋಗಿ ಕನ್ನಡಿ ಮುಂದೆ ನಿಂತೆ. ಪೂರ್ತಿಯಾಗಿ ಎಲ್ಲಡೆ ಕಣ್ಣು ಹಾಯಿಸಿ ನೋಡಿದೆ. ತಲೆ ಒಂದು ಬಿಟ್ಟು ಎಲ್ಲವೂ ಸರಿ ಇತ್ತು(ಕೂದಲು ಸರ್ ಮತ್ತೆ ನಿಮಾನ್ಸ್ ಗೆ ಹೇಳಿ ಬಿಟ್ಟೀರ? :) ). ಈ ಕೂದಲಿಗೆ ಏನು ಮಾಡುವದು ಎಂದು ಯೋಚಿಸುತ್ತಿದ್ದೆ. ಅಲ್ಲೇ ಬಿದ್ದ ಏಶಿಯನ್ ಕರಿ ಪೈಂಟ್ ನನ್ನ ನೋಡಿ "ಬಣ್ಣ ನನ್ನ ಒಲವಿನ ಬಣ್ಣ" ಎಂದು ಹಾಡುತ್ತಿದ್ದ ಹಾಗೇ ಅನ್ನಿಸಿತು. ಪೈಂಟ್ ಡಬ್ಬಿ ತೆಗೆದೆ ಸೀಮೆ ಎಣ್ಣೆ ವಾಸನೆ. ಒಯಿಕ... ಒಯಿಕ... ಎಂದು ಎರಡು ಸಾರಿ ಹೊಟ್ಟೆ ತೊಳಿಸುವ ಹಾಗೆ ಅನ್ನಿಸಿತು. ಎತ್ತಿ ಪಕ್ಕಕ್ಕೆ ಇಟ್ಟೆ. ನೀರು ಕಾಯಿಸಲು ಹೋದಾಗ ಇದ್ದಿಲು ಕಾಣಿಸಿತು. ಆ "ಯುರೇಕಾ....." ಎಂದು ಕಿರುಚೋಣ ಎಂದು ಕೊಂಡೆ. ಮಗ ಇನ್ನೂ ಎದ್ದಿರಲಿಲ್ಲ. ಕಿರುಚಿದರೆ ಅಷ್ಟೇ ನನ್ನ ಮಡದಿ ಪರಚಿ ಬಿಡುತ್ತಾಳೆ ಎಂದು ಸುಮ್ಮನಾದೆ. ಆದರೆ ಇದನ್ನು ಹಚ್ಚಿಕೊಂಡರೆ ಮಳೆ ಬಂದರೆ ಕಷ್ಟ. ಮತ್ತೆ ಆ ಐಡಿಯಾ ಕೂಡ ತಲೆ ಕೆಳಗಾಯಿತು.

ಸ್ನಾನ ಮುಗಿಸಿ ಬಂದ ಕೂಡಲೇ ... ಕಾಣಿಸಿದ್ದು ಕಾಡಿಗೆ ಡಬ್ಬಿ. ತೆಗೆದೆ ಅದು ಪೂರ್ತಿ ಖಾಲಿ ಆಗಿತ್ತು. ಮತ್ತೆ ನಿರಾಸೆಯ ಅಲೆಯಲ್ಲಿ ತೇಲುತ್ತ ತಿಂಡಿ ತಿಂದು ಆಫೀಸ್ ಹೋಗಲು ಅನುವಾದೆ. ಬೂಟ್ ಹಾಕಿಕೊಳ್ಳುವಾಗ ಕಾಣಿಸಿತು ನೋಡಿ. ನನ್ನ ಬೂಟ್ ಪಾಲಿಷ್. ಅದನ್ನೇ ಹಚ್ಚಿ ಕೊಳ್ಳೋಣ ಎಂದು ಬ್ರಶ್ ಎತ್ತಿದೆ. ನನ್ನ ಮಡದಿ ಒಳಗಿನಿಂದ ಬಂದು ರೀ ಹಾಲು ಕುಡಿದು ಹೋಗಿ ಎಂದಳು. ಮೊದಲೇ ಆ ಬಿಳಿ ಬಣ್ಣದ ಮೇಲೆ ಕೋಪವಿದ್ದಿದರಿಂದ. ಇವತ್ತು ನನಗೆ ಹಾಲುಬೇಡ ಕಣೆ ಎಂದೆ. ಏನು ಮಾಡುತ್ತಾ ಇದ್ದೀರ? ಎಂದು ಕೇಳಿದಳು ಮಡದಿ. ಏನು ಇಲ್ಲ, ಕಣೆ ಬೂಟ್ ಪಾಲಿಷ್ ಮಾಡುತ್ತಾ ಇದ್ದೇನೆ ಎಂದೆ. ಬೂಟ್ ತೆಗೆದು ಕೊಂಡೆ. ರೀ ನಾನು ಆಗಲೇ ಪಾಲಿಷ್ ಮಾಡಿ ಆಗಿದೆ ಎಂದಳು. ನೋಡು ಎಷ್ಟು ಕೊಳೆಯಾಗಿದೆ ಎಂದು ಪಾಲಿಷ್ ಮಾಡಲು ಅನುವಾದೆ. ನೋಡಿ ನನ್ನನ್ನು ಜೋರಾಗಿ ಕುಹಕವಾಡಿ ನಗಲು ಶುರು ಹಚ್ಚಿಕೊಂಡಳು. ನಾನು ಅರಿವಿಲ್ಲದೇ ಏಕೆ? ಎಂದು ದಬಾಯಿಸಿ ಕೇಳಿದಾಗ. ಮತ್ತೆ ಏನು ಬ್ರೌನ್ ಬೂಟ್ ಗೆ ಕರಿ ಪಾಲಿಷ್ ಎಂದು ಕುಹಕವಾಡಿದಳು. ನಾನು ಅದನ್ನು ನೋಡಿ ನನ್ನ ಬುದ್ದಿಗೆ ಮಲ.. ಮಲ.. ಮರಗಿ, ಅವಳು ಪಾಲಿಷ್ ಮಾಡಿದ ಕರಿ ಬೂಟ್ ಹಾಕಿಕೊಂಡು ಆಫೀಸ್ ಹೋಗಲು ಬಸ್ ಸ್ಟಾಪ್ಗೆ ಹೋದೆ. ಅಷ್ಟರಲ್ಲಿ ಒಬ್ಬ ಶಾಲೆಗೆ ಹೋಗುತ್ತಿದ್ದ ಒಂದು ಹುಡುಗಿ "ಅಂಕಲ್ ಟೈಮ್ ಎಷ್ಟು" ಎಂದು ಕೇಳಿದಳು. ಅವಳಿಗೆ ಟೈಮ್ ಹೇಳಿ ನಿಂತ ಎರಡೇ ನಿಮಿಷದಲ್ಲಿ ಬಸ್ ಬಂತು.

ಬಸ್ನಲ್ಲಿ ತುಂಬಾ ಜನ ಜಂಗುಳಿ ಇತ್ತು. ಮುಂದೆ ಹೋಗಿ ನಿಂತೆ. ಅಷ್ಟರಲ್ಲಿ ಒಬ್ಬ ಹುಡುಗ ಅಂಕಲ್ ನೀವು ಕುಳಿತು ಕೊಳ್ಳಿ ಎಂದು ತನ್ನ ಸೀಟ್ ನನಗೆ ಬಿಟ್ಟು ಕೊಟ್ಟ. ಮತ್ತೊಮ್ಮೆ ಅಂಕಲ್ ಎಂಬ ಶಬ್ದ ಕೇಳಿ, ಯಾರೋ ಕಲ್ಲಿನಿಂದ ಕಿವಿಗೆ ಬಂದು ಹೊಡೆದ ಹಾಗೆ ಆಯಿತು. ತಲೆಯಲ್ಲಿ ಅಂಕಲ್ ಎಂಬ ಶಬ್ದ ತುಂಬಾ ಗಾಯ ಮಾಡಿತ್ತು. ಕಡೆಗೆ ಶತಾಯುಗತಾಯ ಈ ಬಿಳಿ ಕೂದಲಿಗೆ ಏನಾದರೂ ಪರಿಹಾರ ಹುಡುಕಲೆ ಬೇಕು ಎಂದು ಆಫೀಸ್ ಹೋಗಿ ರಜೆ ಹಾಕಿ ಡಾಕ್ಟರ್ ಹುಡುಕಲು ಹೊರಟೆ. ಹೋದ ಕೂಡಲೇ ಸಿಗಬೇಕಲ್ಲ. ಒಂದೆರಡು ತಾಸು ತಿರುಗಿದ ಮೇಲೆ ಒಬ್ಬ ಡಾಕ್ಟರ್ ಕ್ಲಿನಿಕ್ ಸಿಕ್ಕಿತು. ಡಾಕ್ಟರ್ ಹೆಸರು ಕರಿಯಪ್ಪ. ತಕ್ಕ ಹೆಸರು ಎಂದು ಅಂದು ಕೊಂಡು ಕುಳಿತೆ. ಡಾಕ್ಟರ್ ಬಂದರು. ಆದರೆ ಡಾಕ್ಟರ್ ಕೂದಲು ಮಾತ್ರ ಪೂರ್ತಿ ಸಿಲ್ವರ್ ಕಲರ್. ಬೇಡ ಎಂದು ಎದ್ದು ಹೋಗಲು ಅನುವಾದೆ. ರೀ ಒಳಗೆ ಹೋಗಿ ಎಂದರು. ಏಕೆಂದರೆ ನಾನೇ ಮೊದಲನೆ ಪೇಶೆಂಟ್. ಮನಸ್ಸಿಲ್ಲದೆ ಒಳಗೆ ಹೋದೆ. ಏನು ಸಮಸ್ಯೆ ಎಂದರು ಡಾಕ್ಟರ್. ಸರ್ ನನ್ನ ತಲೆ .... ಎಂದೆ. ನಾನು ಸ್ಕಿನ್ ಸ್ಪೆಶಲಿಸ್ಟ್. ನಿಮ್ಮ ತಲೆ ನೋಡೋಕೆ ಬೇಕಾದರೆ ನಿಮಾನ್ಸ್ ಗೆ ಹೋಗಿ ಎಂದರು. ಸರ್ ಅದು ನನ್ನ ತಲೆಯಲ್ಲಿ ತುಂಬಾ ಬಿಳಿ ಕೂದಲು ಏನಾದರೂ ಔಷಧಿ ಕೊಟ್ಟು ಕರಿ ಮಾಡಿ ಎಂದೆ. ಸರ್ ನಿಮಗೆ ಬೇಕಾಗೋದು ಹಜಾಮತಿ ಅಂಗಡಿ. ಕಾರ್ನರ್ ಬಳಿ ಇದೆ ನೋಡಿ ಎಂದರು. ಸರ್ ನಾನು ಮೊದಲು ಅಲ್ಲೇ ಹೇರ್ ಡೈ ಮಾಡಿಸುತ್ತಾ ಇದ್ದೇ. ಆಗ ನನ್ನ ಕೂದಲು ಎರಡೋ ಮೂರೋ ಬಿಳಿ ಇದ್ದವು ಈಗ ನೋಡಿ ಎಂದೆ. ನನ್ನದು ಅದೇ ಕತೆ ಮಹಾರಾಯ ಎಂದರು ಡಾಕ್ಟರ್. ನಾನು ನಿಮಗೆ ಇನ್ನೊಬ್ಬ ಡಾಕ್ಟರ್ ಅಡ್ರೆಸ್ ಕೂಡುತ್ತೇನೆ. ಅವರು ನಾಟಿ ಔಷಧಿ ಕೊಡುತ್ತಾರೆ ಹೋಗಿ ಎಂದು ಹೇಳಿದರು.

ಆ ನಾಟಿ ಔಷಧಿ ಡಾಕ್ಟರ್ ಅಡ್ರೆಸ್ ಹುಡುಕಿ... ಹುಡುಕಿ... ಅರ್ಧ ಬೆಂಗಳೂರು ತಿರುಗಿದ್ದೆ. ಏಕೆಂದರೆ ಆ ಆಸಾಮಿ ತನ್ನ ಔಷಧಿ ಅಂಗಡಿಯನ್ನು ಒಂದು ಜಾಗದಲ್ಲಿ ಇಡುವದಿಲ್ಲ ಎಂದು ಎಲ್ಲರೂ ಹೇಳಿದರು. ಕಡೆಗೆ ಮನೆಗೆ ಹೋಗುವ ಮನಸಿಲ್ಲದೇ ಕಡೆಯ ಪ್ರಯತ್ನ ಎಂದು ಒಬ್ಬರು ಹೇಳಿದ ಅಡ್ರೆಸ್ ಬಳಿ ಹೋದೆ. ಆಸಾಮಿ ಸಿಕ್ಕೇ ಬಿಟ್ಟ. ಸರ್ ... ಎಂದು ಒಳಗೆ ಹೋದ ಕೂಡಲೇ ನಿಮ್ಮ ಸಮಸ್ಯೆ ಏನು ಎಂದು ಕೇಳದೇ. ಒಂದಿಷ್ಟ ಎಣ್ಣೆ ಕೈಗೆ ಕೊಟ್ಟ. ಸರ್ ಇದು ಏನು?. ಎಂದೆ. ನಿಮ್ಮ ತಲೆ ನೋಡಿ ಗೊತ್ತಾಗುತ್ತೆ?. ನೀವು ಏತಕ್ಕೆ ಬಂದಿದ್ದೀರಿ ಎಂದ. ಸರ್ ನೀವು ದೇವರು ಎಂದು ಹೇಳಿ. ಹೇಗಾದರೂ ಮಾಡಿ ಈ ಬಿಳಿ ಕೂದಲಿಗೆ ಅಂತ್ಯ ಕಾಣಿಸಿ ಎಂದೆ. ಡಾಕ್ಟರ್ ತಲೆ ಕೆರೆದು ಕೊಳ್ಳಲು ಶುರು ಮಾಡಿದರು. ಪಾಪ ಏನೋ ಸಮಾಧಾನ ಆಗಲಿಲ್ಲ ಅಂತ ಕಾಣುತ್ತೆ. ನೋಡ.. ನೋಡುತ್ತಲೇ.. ವೀಗ್ ತೆಗೆದು ಕೆರೆದುಕೊಂಡರು. ನಾನು ಘಾಬರಿ. ಏನು ಹೆದರ ಬೇಡಿ ಎಂದು ಹೇಳಿದರು. ಕೂದಲು ನನಗೆ ಹುಟ್ಟಾ ಇಲ್ಲ ಎಂದರು. ಅದಕ್ಕೆ ಇರಬೇಕು ಇಷ್ಟು ಜಾಣ ಡಾಕ್ಟರ್ ಎಂದು ಮನದಲ್ಲೇ ಅಂದು ಕೊಳ್ಳುತ್ತಿದ್ದಾಗ, ಒಬ್ಬ ವೀಗ್ ವ್ಯಾಪಾರ ಮಾಡುವ ಆಸಾಮಿ ಬಂದು, ಸರ್ ಎಷ್ಟು ವೀಗ್ ಕೊಡಲಿ ಎಂದು ಡಾಕ್ಟರ್ ನ್ನು ಕೇಳಿದ. ಮತ್ತೆ ಡಾಕ್ಟರ್ ನನಗೆ ಸಮಾಧಾನ ಮಾಡಿ ಅದು ನಿಮಗೆ ಅಲ್ಲ ಎಂದು ಹೇಳಿ. ನನಗೆ ಫೀಸ್ ಕೊಡಿ ಎಂದು ಹೇಳಿದರು. ಎಷ್ಟು ಎಂದು ಕೇಳಿದಾಗ. ಬರಿ ೨೦೦೦ ರೂಪಾಯಿ ಮಾತ್ರ ಎಂದರು.

ವಿಧಿ ಇಲ್ಲದೇ ಕೊಟ್ಟು ಮನೆಗೆ ಬಂದೆ. ದಿನವೂ ಔಷಧ ಲೇಪನ ಶುರು ಹಚ್ಚಿ ಕೊಂಡೆ. ನನ್ನ ಮಡದಿ ರೀ... ನಿಮ್ಮ ತಲೆ ವಾಸನೆ ಗೋಮೂತ್ರ ಹಾಗೆ ಬರುತ್ತೆ ಎಂದಳು. ಲೇ ಅದು ಫೇಮಸ್ ಡಾಕ್ಟರ್ ಕೊಟ್ಟ ಔಷಧಿ ಎಂದು ಹೇಳಿ ಸಮಾಧಾನ ಮಾಡಿದೆ. ಅಪ್ಪ ನೀನು ಹೊರಗೆ ಬಿದ್ದುಕೊ ಎಂದು ಮಗ ತಾಕಿತ ಮಾಡಿದ. ವಿಧಿ ಇಲ್ಲ ಎಂದು ಹೊರಗೆ ಮಲಗಿ ಕೊಂಡೆ. ಹತ್ತು ದಿನ ಹಾಗೆ ಲೇಪನ ಮಾಡಿದ್ದೆ ಮಾಡಿದ್ದು. ಮಡದಿ ಎಂದಳು ರೀ... ಮೇಹಂದಿ ಹಚ್ಚಿಕೊಳ್ಳಬಾರದೇ ಎಂದು ಹೇಳಿದರು ಕೇಳಲಿಲ್ಲ . ಒಂದು ತಿಂಗಳು ಆದರೂ ಒಂದು ಕೂದಲು ಕರಿ ಆಗಲಿಲ್ಲ.

ಕಡೆಗೆ ಒಂದು ದಿನ ನನ್ನ ಗೆಳೆಯ ಕೇಶವ್ ಕುಲ್ಕರ್ಣಿ ಕರೆ ಮಾಡಿದ್ದ. ನನ್ನ ಸಮಸ್ಯೆ ಹೇಳಿದೆ. ಅವನು ನೋಡು ಗೋಪಿ ದಿನಾಲೂ ರಾಗಿ ಹಿಟ್ಟು ಹಚ್ಚು ಎಂದು ಹೇಳಿದ. ಕಡೆಗೆ ದಿನವೂ ರಾಗಿ ಹಿಟ್ಟು. ಒಂದು ದಿನ ರಾಗಿ ಹಿಟ್ಟು ಹಚ್ಚಿ ಮಲಗಿ ಕೊಂಡಾಗ. ತಲೆಯಲ್ಲ ಕೆರೆತ ಮತ್ತು ಉರಿ ಎದ್ದು ನೋಡುತ್ತೇನೆ. ತಲೆ ತುಂಬಾ ಇರುವೆ. ನನ್ನ ಮಡದಿ ಸಿಹಿ ತಿಂಡಿಗೆ ಮಾಡಿದ ಸಿಹಿ ರಾಗಿ ಬಳೆದುಕೊಂಡಿದ್ದೆ.

ಮತ್ತೊಂದು ತಿಂಗಳು ಕಳೆಯಿತೇ ಹೊರತು. ಬಿಳಿ ಕೂದಲು ಕರಿ ಆಗಲಿಲ್ಲ. ಮತ್ತೆ ಅದೇ ನಾಟಿ ಡಾಕ್ಟರ್ ಹುಡುಕಿ ಹೋದೆ. ಮತ್ತೆ ಒಂದು ಸಾವಿರ ರೂಪಾಯಿ ಕೊಟ್ಟು ಮತ್ತೊಂದು ಔಷಧ ತಂದೆ. ಮತ್ತೆ ದಿನವೂ ಅದನ್ನು ಹಚ್ಚಿಕೊಂಡು ಮಲಗಿದೆ. ಒಂದೇ ತಿಂಗಳ ಪ್ರಯೋಗದ ನಂತರ ನನ್ನ ತಲೆಯಲ್ಲಿ ಎಲ್ಲ ಕೂದಲು ಕರಿ.... :-) ಆದರೆ ಇದ್ದ ಬಿಳಿ ಕೂದಲು ಎಲ್ಲವೂ ಬಿದ್ದು ಹೋಗಿದ್ದವು... :-(. ಈಗ ನನ್ನ ತಲೆ ನೋಡಿದರೆ ಬೆಂಗಳೂರಿನಿಂದ ಧಾರವಾಡದ ನಡುವೆ ಸಿಗುವ ಸ್ಟಾಪ್ ಗಳ ಹಾಗೆ ೨೦-೩೦ ಕಿಲೋ ಮೀಟರ್ ದೂರ..ದೂರ ಇವೆ.

ಈಗ ನಾನು ಯಾರಾದರೂ ಮತ್ತೆ ಕೂದಲು ಬರುವ ಹಾಗೇ ಮಾಡುವ ವೈದ್ಯರನ್ನು ಹುಡುಕುತ್ತಾ ಇದ್ದೇನೆ. ಬಿಳಿ ಕೂದಲು ಆದರೂ ಪರವಾಗಿಲ್ಲ. ಏಳು ಬಣ್ಣ ಸೇರಿ ತಾನೇ ಬಿಳಿ ಬಣ್ಣ ಆಗುವದು, ಎಂದು ಹೇಳಿ ಮುಗಿಸಿದ ಮೇಲೆ ಮನೆ ತುಂಬಾ ಹಾಸ್ಯದ ಹೊನಲು ಹರಿದಿತ್ತು.

ಕಡೆಗೆ ಊಟ ಮಾಡುತ್ತ ಇದ್ದಾಗ, ನಿನಗೆ ಯಾರಾದರು ವೈಧ್ಯರು ಗೊತ್ತ? ಎಂದು ಕೇಳಿದೆ. ಅದಕ್ಕೆ ಅವನು ನನಗೆ ಒಬ್ಬ ನಾಟಿ ವೈಧ್ಯರು ಗೊತ್ತು ಎಂದ. ಆ ನಾಟಿ ವೈಧ್ಯರು ನನ್ನ ಕೂದಲುಗಳನ್ನು ನಾಟಿ ಮಾಡುತ್ತಾರೋ? ಅಥವಾ ಇದ್ದಿರೋ ತಲೆಯನ್ನು ತೆಗೆದು ಬಿಡುತ್ತಾರೋ ಎಂದೆ. ಅವನು ನಗುತ್ತ, ಮಾಡುತ್ತಾರೆ ಕಣೋ? ಎಂದ. ಮತ್ತೆ ಇದು ನಿನ್ನ ತಪ್ಪಲ್ಲ, ನಿನ್ನ ಪೂರ್ವಿಕರು ಮಾಡಿದ ತಪ್ಪು. ನಿಮ್ಮ ಹೆಸರಿಗೂ ಮತ್ತು ನಿನ್ನ ಕೂದಲಿಗೂ ಅನ್ವರ್ಥಕವಾಗಿ ಇಟ್ಟಿದ್ದಾರೆ ಅಷ್ಟೇ ಎಂದ. ನಿನ್ನ ಹೆಸರು ಅದೇ ತಾನೇ ಎಂದೇ ಅದಕ್ಕೆ ನಾನು ಗೋಪಾಲ್ ಕೃಷ್ಣ....ಬರೀ ಗೋಪಾಲ್ ಅಲ್ಲ ಎಂದು ನಗುತ್ತ, ಕಡೆಗೆ ನಮ್ಮನ್ನು ಮನೆಗೆ ಆಹ್ವಾನಿಸಿ ತನ್ನ ಮನೆಗೆ ನಡೆದ.

8 comments:

  1. namma gopala ishtond cholo baritana anta gotta iddilla nodri..bhari cholo aiti..alla iva ganaka yantrad manashyana illa padya baryavan antaa sanshaya barakatteti nodri

    ReplyDelete
  2. ಹ ಹ ಆಹಾ ಚೆನ್ನಾಗಿದೆ ನಿಮ್ಮ ಕೂದಲು ಪ್ರಸಂಗ.

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete
  4. very very nice :):)

    -- girish

    ReplyDelete
  5. ತುಂಬಾ ಚೆನ್ನಾಗಿದೆ. ಟೈಟಲ್ ತುಂಬಾ ಇಷ್ಟಾ ಆಯ್ತು!

    ReplyDelete
  6. ಧನ್ಯವಾದಗಳು ಮತ್ತು ವಂದನೆಗಳು ಗುರುಪ್ರಸಾದ...

    ReplyDelete