Wednesday, July 21, 2010

ಕೆನ್ನೆ ಮೇಲೆ ಪ್ರೇಮದುಂಗುರ ....

ರೀ ಇದೇನು ಇಷ್ಟು ಕೆಟ್ಟದಾಗಿ ಹಾಡುತ್ತೀರಿ? ಎಂದು ನನ್ನನ್ನು ವ್ಯಂಗ್ಯ ಮಾಡಿದಳು ನನ್ನ ಮಡದಿ. ನಾನೇನು ನಿನ್ನ ಹಾಗೇ ಲತಾ ಅಥವಾ ಆಶಾ ಅಂತ ಮಾಡಿದ್ದೀಯ ಎಂದು ಕೇಳಿದೆ.ಅಲ್ಲಾ ಹಾಡೋ ಹಾಡಿನ ಸಾಹಿತ್ಯನಾದರೂ ಸರಿಯಾಗಿ ಹಾಡಬೇಡವ ಎಂದಳು. ನಾನೇನು ತಪ್ಪು ಹಾಡಿದೆ ಎಂದು ಕೇಳಿದೆ. ಮತ್ತೆ ಏನು "ಕೋಗಿಲೆಯು ನಾಟ್ಯದಲ್ಲಿ ತಾನೇ ತಾನೆಂದಿತು" ಎಂದರೆ ಹೇಗೆ ಎಂದಳು. ಅದಕ್ಕೆ ಆನೆಯಂತಹ ನಾನೇ ನಾಟ್ಯ ಮಾಡುವಾಗ ಖುಶಿಯಿಂದ ಇದ್ದಾಗ ಕೋಗಿಲೆ ನಾಟ್ಯ ಮಾಡಬಾರದ. ಏನು ನಾಟ್ಯ ಅನ್ನುವದು ಬರಿ ನವಿಲೀಗೆ ಮತ್ತು ನನ್ನವಳಿಗೆ ಮಾತ್ರ ಸಂಭಂದಿಸಿದ್ದ ಎಂದು ಕೇಳಿದೆ. ನಾನು 9 ವರ್ಷದ ಹಿಂದೆ ಹಾಡಿದರೆ ನನ್ನ ಜೊತೆ ಸಾತ ಕೊಡುತ್ತಿದ್ದಳು ಪಕ್ಕದ ಮನೆ ಪ್ರೇಮ ಎಂದೆ. ನಿನಗೆ ರಾಗ ತಾಳ ಬಿಟ್ಟು ನನ್ನ ಮೇಲೆ ರಾಗ ದ್ವೇಷದಿಂದ ನೋಡುತ್ತೀ ಎಂದೆ.

ಆಯಿತು ಬಿಡಿ ನೀವು ಕಿಶೋರ್ ಕುಮಾರನೇ ಎಂದು ಅಡುಗೆ ಮನೆಗೆ ಹೋದಳು. ಈ ಕಿಶೋರ್ ಕುಮಾರನ ಕಿಶೋರಾವಸ್ಥೆಯಲ್ಲಿ ನಡೆದ ಘಟನೆ ನೆನಪಾಗಿ ನಾನೊಬ್ಬನೇ ನಗುತ್ತಿದ್ದೆ. ನನ್ನ ಮತ್ತೆ ಪ್ರೇಮ ಮನೆ ಅಕ್ಕ ಪಕ್ಕ ಮತ್ತೆ ಬಾತ್ ರೂಮ್ ಕೂಡ ಪಕ್ಕ್ ದಲ್ಲೇ ಇತ್ತು. ನಾನೊಬ್ಬ ಬಾತ್ ರೂಮ್ ಸಿಂಗರ್. ನಾನು ಹಾಗೆ ಒಂದು ದಿವಸ "ಹಾಡು ಯಾವ ಹಾಡು..." ಎಂದು ಹಾಡುತ್ತಿದ್ದೆ. ಮತ್ತೆ ಪಕ್ಕದ ಮನೆ ಪ್ರೇಮ ಬಾತ್ ರೂಮಿನಿಂದ "ಅನುರಾಗ ತುಂಬಿದ ಹಾಡು" ಎಂದು ವಾಪಸ ಉತ್ತರ ಬಂತು. ನನ್ನ ಮತ್ತೆ ಅವಳ ಹಾಡುಗಳು ತುಂಬಾ ದಿವಸ ನಡೆಯಿತು. ನಮ್ಮ ಅಪ್ಪ, ಅಮ್ಮ ಇವನು ಒಂದು ಘಂಟೆ ಹೊತ್ತು ಬಾತ್ ರೂಮ್ ನಲ್ಲಿ ಏನು ಮಾಡುತ್ತಾನೆ? ಎಂದು ಆಶ್ಚರ್ಯ ಪಟ್ಟಿದ್ದರು.

ಕಡೆಗೆ ಒಂದು ದಿವಸ ತುಂಬಾ ಚಳಿ ಚಳಿ...ತಾಳೆನು ಈ ಚಳಿಯ ಎಂದು ಹಾಡುತ್ತಿದ್ದೆ. ಅಲ್ಲಿಂದ ಏನು ಉತ್ತರ ಬರಲಿಲ್ಲ. ಮತ್ತೆ ಅದನ್ನೇ ಹಾಡಿದೆ ಏನು ಉತ್ತರ ಇಲ್ಲ. ಕಡೆಗೆ ನಮ್ಮಪ್ಪ ಲೇ ಚಳಿ.. ಚಳಿ ಅಂದುಕೊಂಡು ಎಷ್ಟೊತ್ತು ಬಾತ್ ರೂಮ್ ನಲ್ಲಿ ಇರುತ್ತಿ ಬೇಗ ಬಾ ಎಂದು ಬೈದು ಬಿಟ್ಟರು. ಮತ್ತೆ ನಾಳೆ ನೋಡಿದರೆ ಆಯಿತು ಎಂದು ಹೊರ ಬಂದೆ. ಮರು ದಿನ "ನೀರಿನಲ್ಲಿ ಅಲೆಯ ಉಂಗುರ" ಎಂದೆ. ಅಲ್ಲಿಂದ "ಭೂಮಿ ಮೆಲೆ ಹೂವಿನುಂಗುರ" ಎಂದು ಉತ್ತರ ಬಂತು. ತುಂಬಾ ಖುಷಿಯಾಗಿ "ಕೆನ್ನೆ ಮೇಲೆ ಪ್ರೇಮದುಂಗುರ" ಎಂದು ಹಾಡಿ ಕುಪ್ಪಳಿಸಿದ್ದೆ.

ಪ್ರೇಮಾನ ಜೊತೆ ಹಾಡಿರುವ ಡುಯೆಟ್ ಗಳೆಷ್ಟೋ. ಕಡೆಗೆ ಅವಳಿಗೆ ಒಂದು ಪ್ರೇಂ ಪತ್ರ ಕೊಡಬೇಕು ಎಂದು ತೀರ್ಮಾನಕ್ಕೆ ಬಂದು. ಮಂಜನಿಂದ ಒಂದು ಪ್ರೇಮ ಪತ್ರ ಬರೆದು ಅವಳಿಗಾಗಿ ಬಸ್ ಸ್ಟಾಪ್ ಹತ್ತಿರ ಹೋಗಿ ನಿಂತೆ. ಅಷ್ಟರಲ್ಲಿ ಅವಳು ಬಂದಳು. ನಾನು ನೋಡಿ ನಕ್ಕೆ. ಯಾರು ಬರುತ್ತಿಲ್ಲ ಎಂದು ಖಾತರಿ ಆದ ಮೇಲೆ ಅವಳ ಹತ್ತಿರ ಹೋಗಿ "ಐ ಲವ್ ಯೂ" ಎಂದು ಪ್ರೇಂ ಪತ್ರ ಕೈಯಲ್ಲಿ ಇಟ್ಟೆ. ಅಷ್ಟೇ.... ತೆಗೆದು ಎರಡು ಬಿಟ್ಟೆ ಬಿಟ್ಟಳು. ಕೆನ್ನೆ ಕೆಂಪಾಗಿ ಹೋಗಿತ್ತು.

ಆನಂತರ ಕೆಲ ದಿನಗಳ ಮೇಲೆ ಪ್ರೇಮನ ಅಮ್ಮ ಪಾರ್ವತಮ್ಮ ಬಂದಿದ್ದರು. ನಿಮ್ಮ ಯಜಮಾನರು ತುಂಬಾ ಚೆನ್ನಾಗಿ ಹಾಡುತ್ತಾರೆ ಎಂದು ಅಮ್ಮನಿಗೆ ಹೇಳುತ್ತಿದ್ದರು ಆಗ ಅರ್ಥ ಆಗಿತ್ತು. ಆಗ ನಾನು ನಗುತ್ತಾ ಇದ್ದೇ. ಅಪ್ಪ ಅಮ್ಮ ಮತ್ತೆ ನಮ್ಮ ಮಂಜ ಸೇರಿ ನನಗೆ "ಕೆನ್ನೆ ಮೇಲೆ ಪ್ರೇಂದುಂಗುರ.." ಎಂದು ತುಂಬಾ ದಿನಗಳವರೆಗೆ ಕಾಡಿದ್ದರು.

ಅಷ್ಟಕ್ಕೇ ನಮ್ಮ ಮಂಜ ಬಿಡಬೇಕಲ್ಲ "ಪ್ರೇಮವೆಂಬ ಪಂದ್ಯದಲ್ಲಿ ನೀನು ಗೆಲ್ಲಲಿಲ್ಲ" ಎಂದು ಕೂಡ ಸತಾಯಿಸುತ್ತಿದ್ದ. ಇನ್ನೂ ಒಂದಿಷ್ಟು ದಿನ ಹಾಗೆ ಹಾಡಿದ್ದರೆ ಫೋಟೋ ಫ್ರೇಮ್ ಆಗುತ್ತಿದ್ದೆ ಎಂದು ಅನಿಸಿತ್ತು.

ಅಷ್ಟರಲ್ಲಿ ನನ್ನ ಮಡಿದಿ ಬಿಸಿ ಬಿಸಿ ಕಾಫೀ ತೆಗೆದುಕೊಂಡು ಬಂದು ನನ್ನ ತೊಡಯೆಮೇಲೆ ಇಟ್ಟಾಗ ಆ ಲೋಕದಿಂದ ಹೊರಬಂದಿದ್ದೆ. ಕಾಫೀ ಹೀರುತ್ತ ಎಫ್ ಎಂ ನಲ್ಲಿ ಬರುತ್ತಿದ್ದ "ನೆನಪುಗಳ ಮಾತೆ ಮಧುರ... " ಎಂಬ ಹಾಡು ಆಲಿಸಿದ್ದೆ.

6 comments:

  1. ಚೆನ್ನಾಗಿದೆ ಸರ್
    ಕೆನ್ನೆ ಮೇಲೆ ಉಂಗುರ ಸದ್ಯಕ್ಕೆ ತಪ್ಪಿತು ಅನ್ನಿ

    ReplyDelete
  2. ಹಹಹ.. ಮಜವಾಗಿದೆ.. ನಮ್ಮನ್ನೂ ನಿಮ್ಮ ನೆನಪ ಅಲೆಯಲ್ಲಿ ತೇಲಿಸಿ ನಗಿಸಿದ್ದಕ್ಕೆ ಧನ್ಯವಾದಗಳು..

    ReplyDelete
  3. ಧನ್ಯವಾದಗಳು ಹೆಗ್ಡೆ ಸರ್ ,

    ReplyDelete
  4. ಧನ್ಯವಾದಗಳು ದಿಲೀಪ್ ಸರ್,

    ReplyDelete
  5. ನಕ್ಕು ನಕ್ಕು ಸಾಕಾಯ್ತು ನಿಮ್ಮ ಮಾತ್ತು ಪ್ರೇಮಾಲ ಕ್ಷಮಿಸಿ ಅವರ ಅಮ್ಮನವರ ಜುಗಲ ಬಂದಿ ಕೇಳಿ.

    ReplyDelete
  6. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete