ನಮ್ಮ ಮನೆ ಎದುರು ಒಂದು ಅಜ್ಜಿ ಇದ್ದಾರೆ. ಅವರ ಹೆಸರು ಶಾಂತಮ್ಮ ಕೇವಲ ನಾಮ ಮಾತ್ರಕ್ಕೆ ಶಾಂತಮ್ಮ. ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಅವರು ನನ್ನ ಹೆಂಡತಿ ಜೊತೆ ಹರಟುತ್ತ ಇರುತ್ತಾರೆ. ಅದೇನೆಂದು ನಾನು ತಲೆ ಕೆಡಿಸಿಕೊಂಡಿಲ್ಲ. ತಪ್ಪು ತಿಳೀಬೇಡಿ ತಲೆ ಕೆಡಿಸಿಕೊಂಡಿಲ್ಲ ಅಂದರೆ ಮನಸ್ಸಿಗೆ ಹಚ್ಚಿಕೊಂಡಿಲ್ಲ. ಅವತ್ತು ಇವರು ಏನು ಮಾತಾಡುತ್ತಾರೆ ಎಂದು ಹಾಗೆ ಅವರ ಮಾತಿಗೆ ಕಿವಿಗೊಟ್ಟೆ. ಅವರ ಒಂದು ಮಾತು ಕೂಡ ಅರ್ಥವಾಗಲಿಲ್ಲ. ಅಷ್ಟರಲ್ಲಿ ಶಾಂತಮ್ಮ ಯಾರದೋ ಹೆಸರು ಹೇಳಿ ಅವನಿಗೆ ಬೈಯಲು ಶುರು ಮಾಡಿಕೊಂಡಳು. ಅವನಿಗೆ ಎಲ್ಲ ಅಷ್ಟೋತ್ತರ, ಸಹಸ್ರನಾಮ ಎಲ್ಲವು ಮುಗಿದಿದ್ದವು. ಬರಿ ಬ್ಲಾಕ್ ಪೇಯಿಂಟ್ ಮಾಡುತ್ತಾನೆ ಎಂದು ಬೈಯುತ್ತ ಕುಳಿತಿದ್ದಳು. ಅವನು ಯಾರಪ್ಪ ಬ್ಲ್ಯಾಕ್ ಪೈಂಟ್ ಮಾಡುವವನು ಎಂದು ಯೋಚಿಸಿದೆ. ಮನೆಗೆ ಬ್ಲ್ಯಾಕ್ ಪೈಂಟ್ ಮಾಡಿದರೆ ಹೇಗೆ ಕಾಣುತ್ತೆ ಎಂದು ಯೋಚಿಸುತ್ತಾ ಕುಳಿತೆ. ಹಾಗೇನಾದರೂ ಆದರೆ ನನ್ನನ್ನು ನನ್ನ ಹೆಂಡತಿ ಕಂಡು ಹಿಡಿಯುವದು ಕಷ್ಟ ಎಂದು ಆ ಯೋಚನೆಗೆ ಇತಿಶ್ರೀ ಹಾಡಿ ವಾಸ್ತವಕ್ಕೆ ಬಂದೆ.ಅವರಿಬ್ಬರ ಅಬ್ಬರದ ಮಾತಿನಿಂದ, ನನ್ನ ಹೊಟ್ಟೆ ಅಬ್ಬರಿಸಿದ್ದು ಕೇಳದೆ ನನ್ನ ಮಡದಿ ಹರಟುತ್ತಿದ್ದಳು.
ಆಗ ನಾನೆ ಅವಲಕ್ಕಿ ತೆಗೆದು ಅವರಿಬ್ಬರಿಗೂ ಮಾಡಿ ಕೊಟ್ಟು ನಾನು ತಿನ್ನುತ್ತ ಟಿ.ವಿ ಮುಂದೆ ಬಂದು ಕುಳಿತೆ. ನಾನು ಮ್ಯಾಚ್ ನೋಡಲು ಚಾನೆಲ್ ಚೇಂಜ್ ಮಾಡಿದೆ. ಆಗ ಅಜ್ಜಿ ಚಾನೆಲ್ ಚೇಂಜ್ ಮಾಡಬೇಡಪ್ಪ ಈಗ ರಂಗೋಲಿ ಬರುತ್ತೆ ಎಂದರು. ಆಗ ನಾನು ರಂಗೋಲಿ ರವಿವಾರ ಮುಂಜಾನೆ ಮಾತ್ರ ಬರುತ್ತೆ ಅಜ್ಜಿ ಎಂದೆ. ಆಗ ಅಜ್ಜಿ ಇಲ್ಲಪ್ಪ ಪ್ರತಿದಿನ ೮ ಘಂಟೆಗೆ ಬರುತ್ತೆ ಎಂದರು. ನನಗೆ ಆಶ್ಚರ್ಯ ಇದು ಯಾವಾಗ ಚೇಂಜ್ ಆಯಿತು ಎಂದು. ನಾನು ಏನೋ ಟೈಮ್ ಚೇಂಜ್ ಆಗಿರಬೇಕು ಎಂದುಕೊಂಡು, ದೂರದರ್ಶನ ಚಾನೆಲ್ ಹಚ್ಚಿದೆ. ಆಗ ಅಜ್ಜಿ ಇದಲ್ಲ... ಉದಯ ಹಚ್ಚಿ ಎಂದರು. ಮತ್ತೆ ಮ್ಯಾಚ್ ನೋಡದೆ ಉದಯ ಹಚ್ಚಿದೆ. ಆ ಧಾರವಾಹಿ ಶುರು ಆದ ಮೇಲು ಅವರ ಮಾತಿನ ವರಸೆ ಮುಗಿದಿರಲಿಲ್ಲ. ಬಂದ ನೋಡು ..... ಮಗ ಎಂದು ಬಿಡಬೇಕೇ?. ನನಗೆ ಆಶ್ಚರ್ಯ. ಇವರ ಮಾತು ಕೇಳಿ ನನಗೆ ಕಸಿವಿಸಿಯಾದರು ಅವರು ಮಾತ್ರ ತಮ್ಮ ಬೈಗುಳಗಳ ಸುರಿಮಳೆ ನಡೆಸಿದ್ದರು. ಮತ್ತೆ ನೋಡು ಹೇಗೆ ಬ್ಲಾಕ್ ಪೇಯಿಂಟ್ ಮಾಡುತ್ತಾನೆ ಎಂದಾಗ ತಿಳಿಯಿತು ಅದು ಬ್ಲಾಕ್ ಮೇಲ್ ಎಂದು. ನಾನು ನೋಡಿ ಹುಸಿ ನಕ್ಕು ಮತ್ತೆ ಧಾರವಾಹಿ ಮುಗಿಯುವದನ್ನೇ ಕಾಯುತ್ತ ಕುಳಿತೆ. ಧಾರವಾಹಿ ಮುಗಿದಾಗ ನಾನು ಚಾನೆಲ್ ಚೇಂಜ್ ಮಾಡಬೇಕೆಂದಾಗ, ಮತ್ತೆ ಅಜ್ಜಿ ಜೋಗುಳ ಹಚ್ಚಪಾ ಎಂದು ವರಸೆ ಹಿಡಿದರು. ಅಲ್ಲೂ ಮಾತಿನ ಸುರಿ ಮಳೇನೆ. ಅವರು ಹೀಗೆ ಮಾಡಿದರು ಇವರು ಹೀಗೆ ಮಾಡಿದರು ಎಂದು. ಹಾಗೆ ಇಷ್ಟಕ್ಕೆ ಮುಗಿಯಲಿಲ್ಲ. ಮತ್ತೆ ಈ ಟಿವಿ ಯಲ್ಲಿ ಬರುವ ಮುತ್ತಿನ ತೋರಣ, ಮತ್ತೆ ಮುಕ್ತ ಮುಕ್ತ ಎಲ್ಲ ಧಾರವಾಹಿ ನೋಡಿದರು.
ಮತ್ತೆ ಮನೆಗೆ ಹೊರಟು ಹೋದರು. ಅಷ್ಟರಲ್ಲಿ ನಾನು ಕೂಡ ಅರ್ಧ ಘಂಟೆ ಜೋಗಳ ಹಾಡಿದ್ದೇ. ಎದ್ದು ತಡಬಡಿಸಿ ನಾನು ಮ್ಯಾಚ್ ಹಚ್ಚಿದೆ. ಆದರೆ ಮ್ಯಾಚ್ ಮುಗಿದಿತ್ತು. ಬರಿ ಜಾಹಿರಾತುಗಳು ಬರುತ್ತಿದ್ದವು. ಕಡೆಗೆ ಬೇಸರವಾಗಿ ಟಿ.ವಿ ಬಂದ್ ಮಾಡಿ ಊಟ ಮುಗಿಸಿ ಹಾಸಿಗೆ ಮೇಲೆ ಒರಗಿದೆ. ಆಗ ನಾನು ನೋಡುತ್ತಿದ್ದ ದೂರದರ್ಶನ ಧಾರವಾಹಿಗಳ ನೆನಪು ಬಂತು . ಅದರಲ್ಲೂ ಮಹಾಭಾರತ್ , ರಾಮಾಯಣ, ಗುಲ್ದಸ್ತ, ಮುಂಗೇರಿ ಲಾಲ ಕೆ ಹಸಿನ ಸಪ್ನೆ, ನುಕ್ಕಡ, ಹಮ್ ಪಂಚಿ ಏಕ್ ಚಾಲ್ ಕೆ, ಮತ್ತೆ ಸುಮಧುರ ಗೀತೆಗಳ ರಂಗೋಲಿ ಹೀಗೆ ತುಂಬಾ ಹಲವು. ಈಗ ಅವುಗಳ ಕಾಲ ಮುಗಿದಿದೆ ಈಗ ನೂರಾರು ಚಾನೆಲ್‍ಗಳು. ನೂರಾರು ಧಾರಾವಾಹಿಗಳು.
ನಮ್ಮ ಮನೆಯಲ್ಲಿ ಟಿ.ವಿ ಇರಲಿಲ್ಲ. ನನ್ನ ಗೆಳಯ ಆನಂದನ ಮನೆಗೆ ಹೋಗಿ ನೋಡುತ್ತಿದ್ದೆ. ಆನಂದನ ಮನೆ ಓನರ್ ಒಂದು ನಾಯಿ ಸಾಕಿದ್ದರು. ನನಗೆ ಮೊದಲಿಂದು ನಾಯಿ ಕಂಡರೆ ತುಂಬಾ ಭಯ. ಅದನ್ನು ಲೆಕ್ಕಿಸದೆ ಓಡಿ ಆನಂದನ ಅಡುಗಿ ಮನೆಗೆ ಹೊಕ್ಕು ಬಿಡುತ್ತಿದ್ದೆ. ನಾಯಿ ನನ್ನ ಬೆನ್ನು ಹತ್ತಿ ಬಂದು ಮತ್ತೆ ವಾಪಸ್ ಹೋಗಿ ಮಲಗಿ ಬಿಡುತ್ತಿತ್ತು. ಆ ಕ್ಷಣಗಳು ತುಂಬಾ ಸುಮಧುರವಾಗಿದ್ದವು. ಹಾಗೆ FM ಹಚ್ಚಿದೆ ಸುಮಧುರವಾದ ಗೀತೆ "ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ..". ಹಳೆಯ ಮಾಸೀದ ನೆನಪುಗಳೇ ಹಾಗೆ ತುಂಬಾ ಮನಸ್ಸಿಗೆ ಅಹ್ಲಾದವನ್ನು ಉಂಟು ಮಾಡುತ್ತಿರುತ್ತವೆ. ಮತ್ತೆ ಮಾತ್ತೊಂದು ಸುಮಧುರ ಗೀತೆ ಬಂತು " ದೋ ಲಫ್ಜೋ ಕೀ ಹೈ ದಿಲ್ ಕೀ ಕಹಾನಿ...". ಮತ್ತೆ ಮನಸು ಕುದುರೆಯ ಹಾಗೆ ಮೈಸೂರಿಗೆ ನೆಗೆಯಿತು ಮತ್ತೆ ಕಣ್ಣ ಮುಂದೆ ನನ್ನ ಹಳೆಯ ಸ್ನೇಹಿತರಾದ ಮಾಧವ, ವಿಠ್ಠಲ್ , ಪುರುಷೋತ್ತಮ ಎಲ್ಲರೂ ಬಂದು ಹೋದರು. ಹಾಗೆ ಹಳೆಯ ನೆನಪುಗಳನ್ನು ಮೇಲಕು ಹಾಕುತ್ತಿದ್ದಾಗ ನಾನು ನಿದ್ದೆಗೆ ಜಾರಿದ್ದೆ...ಆದರೆ ಆ ಹಾಡು ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ.." ಮಾತ್ರ ನಿತ್ಯ ಸತ್ಯ ಎಂದೆನಿಸಿತು. ನಮ್ಮ ಹಳೆಯ ಹೆಜ್ಜೆಗುರುತನ್ನು ನೆನಪಿಸುತ್ತಾ...
This comment has been removed by the author.
ReplyDeleteಗೋಪಾಲ್, ನಿಮ್ಮ ಮಾತು ಸತ್ಯ ಹಳೆಯ ನೆನೆಪುಗಳೇ ಹಾಗೆ.
ReplyDeleteಸವಿಸವಿ ನೆನೆಪುಗಳು ಮನಸ್ಸಿಗೆ ಮುದ ನೀಡುತ್ತವೆ.
nija sir, ಧನ್ಯವಾದಗಳು ಸರ್.
ReplyDeleteಕೆಳೆದ ದಿನದ ನೆನಪ ಮೆಲುಕು ಮಧುರ ಮಧುರ. ಆಪ್ತವಾದ ಬರಹ ಜೊತೆಗೆ ತಿಳಿಹಾಸ್ಯ!
ReplyDeleteಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್,ನಿಜ, ಹಳೆಯ ನೆನಪು ಸುಮಧುರ :).
ReplyDelete