Saturday, March 6, 2010

ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ....

"ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ ಎದ್ದು ಯಾರನ್ನೋ ನೆನಸುತ್ತ ಇದ್ದ ಹಾಗೆ ಇತ್ತು ಎಂದೇ. ಮಹಾಭಾರತದ ಪಾತ್ರಗಳನ್ನಾ? ಎಂದೇ. ಅದಕ್ಕೆ ನಸು ನಕ್ಕು ಕುಂಭಕರ್ಣ ಮಹಾಭಾರತದಲ್ಲಿ ಯಾವಾಗ ಬಂದ ಎಂದಳು ನನ್ನಾಕೆ. ನಾನು ಕುಂಭ ರಾಶಿಯ ಕರ್ಣನ ಬಗ್ಗೆ ಅಂತ ತಿಳಿದುಕೊಂಡು ಕೇಳಿದೆ ಅಷ್ಟೇ ಎಂದು ಸುಮ್ಮನೆ ಮಾತು ಹಾರಿಸಿದೆ. ನಿಮಗೆ ಇದೊಂದು ಗೊತ್ತು, ಬರಿ ಮಾತು ಎಂದಳು. ನಿನ್ನ ಕಟ್ಟಿಕೊಂಡ ಮೇಲೆ ತತ್ವಜ್ಞಾನಿ ಆಗಲೇ ಬೇಕಲ್ಲ ಎಂದು ಅನ್ನಬೇಕು ಅಂದು ಕೊಂಡರು ಅನ್ನಲಿಲ್ಲ. ಇರುವ ಒಂದು ಭಾನುವಾರವಾದರೂ ಒಂದೊಳ್ಳೆ ರುಚಿ ತಿಂಡಿ ಕಳೆದುಕೊಳ್ಳುವ ಮನಸ್ಸಿಲ್ಲದೆ . ದಿನಾಲೂ ಹೋಟೆಲಿನಲ್ಲಿ ತಿಂದು ತಿಂದು ಬಾಯಿ ಕೆಟ್ಟುಹೋಗಿತ್ತು. ರೀ ಇವತ್ತೇನು ಬೇಗ ಬೇಗ ಸ್ನಾನ ಮುಗಿಸಿ, ಎಲ್ಲಾದರೂ ತಿಂಡಿ ತಿನ್ನಲು ಹೋಟೆಲ್ಗೆ ಹೋಗೋಣ ಎಂದಾಗ, ಇಂಗು ತಿಂದ ಮಂಗನಂತೆ ಅವಳನ್ನು ನೋಡಿದ್ದೇ.


ಟೀ ಪಾತ್ರೆ ಕುಕ್ಕುತ್ತ ಇದ್ದ ನನ್ನ ಮಡದಿನ ನೋಡಿ, ಇವಳ ಕೋಪ ಯಾಕೋ ಕಡಿಮೇ ಆಗುವ ಲಕ್ಷಣ ಕಂಡು ಬರಲಿಲ್ಲ. ಹೊರಗೆ ಹೋಗುವದನ್ನು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಇವತ್ತು ಹೋಳಿ ಕಣೆ ಯಾರಾದರು ಬಣ್ಣ ಗಿಣ್ಣ ಎರಚಿದರೆ ಕಷ್ಟ ಎಂದೇ. ಅದೇನು ಇಲ್ಲ, ಇದೇನು ಧಾರವಾಡನಾ?. ಅಷ್ಟರಲ್ಲಿ ಯಾಕೋ ಹೊಟ್ಟೆ ನೋವು ಕಣೆ ಎಂದು ಹಾಗೆ ಒಂದು ರೈಲು ಬಿಟ್ಟೆ. ಮತ್ತೆ "ಯಾಕೆ ರೀ ಏನಾಯಿತು ನಡೀರಿ ಹಾಸ್ಪಿಟಲ್ಗೆ " ಎಂದು ಗಂಟುಬೀದ್ದಳು. ಅದೆಲ್ಲ ಏನು ಇಲ್ಲ ಕಣೆ. ಸುಮ್ಮನೆ ಸ್ವಲ್ಪ ನೋಯುತ್ತಾ ಇದೆ ಟೀ ಕೊಡೆ ಎಂದೇ. ಎಲ್ಲಾ ಟೀ ಇಂದಾನೆ ಅಗಿದ್ದು, ಇದರ ಮನೆ ಹಾಳಾಗ ಎಂದು ಟೀ ನೆಲ್ಲಾ ವಾಶ್ ಬೇಸಿನಗೆ ಸುರಿದಳು. ತಡಿರಿ ಸ್ವಲ್ಪ ಕಷಾಯ ಮಾಡುತ್ತೇನೆ ಎಂದು ಕಷಾಯ ಮಾಡಿದಳು. ಅದೇಕೆ ಗೊತ್ತಿಲ್ಲ ಕಷಾಯ ಒಲ್ಲದ ಮನಸ್ಸಿನಿಂದ ಕುಡಿದು ಮುಗಿಸುವಷ್ಟರಲ್ಲಿ ಹೊಟ್ಟೆ ನೋವು ನಿಜವಾಗಿಯೂ ಶುರು ಹಚ್ಚಿ ಕೊಂಡಿತು. ಲೇ ತುಂಬಾ ನೋವು ಕಣೆ ನಡಿ ಯಾವುದಾದರು ಹಾಸ್ಪಿಟಲ್ಗೆ ಹೋಗೋಣ ಎಂದು ಹೇಳಿದೆ.


ಇಬ್ಬರು ಸ್ಕೂಟರ್ ಏರಿ ಹಾಸ್ಪಿಟಲ್ ದಾರಿ ಹಿಡಿದೆವು. ಸ್ವಲ್ಪ ದೂರ ಹೋಗುವಷ್ಟರಲ್ಲಿ ತುಂಬಾ ಟ್ರಾಫಿಕ್ ಜಾಮ್ ಆಗಿತ್ತು. ಸಿಗ್ನಲ್ ಇಲ್ಲದ ಜಾಗದಲ್ಲಿ ಇಷ್ಟೊಂದು ಟ್ರಾಫಿಕ್ ಎಂದು ನೋಡಿದಾಗ ತಿಳಿಯಿತು ಅಲ್ಲಿ ಒಬ್ಬ ಪಾಲಿಟಿಸಿಯನ್ ಬರುತ್ತಿದ್ದಾರೆ ಎಂದು. ನನ್ನ ಹೆಂಡತಿ ಮಾತ್ರ ಅವನಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಳು. ನನ್ನ ಹೆಂಡತಿಯನ್ನು ನೋಡಿ ಒಬ್ಬ ಮನುಷ್ಯ ನಕ್ಕು, ಅವರು ಹಾಗೆ ಮೇಡಂ, ಅವರು ಬಂದರೆ ನಮ್ಮ ಆಫೀಸಿಗೆ ಲೇಟ್. ಇನ್ನು ಯಾರದಾದರೂ ಪರೀಕ್ಷೆ ಇದ್ದರೆ ಅಧೋಗತಿ. ಇವರು ಪಾಲಿಟಿಸಿಯನ್ ಅಲ್ಲ ಪೋಲಿ-ಟಿಸಿಯನ್ ಎಂದಾಗ ನನ್ನ ಮಡದಿಯ ಮುಖದಲ್ಲಿ ಮಂದಹಾಸ ಮೂಡಿತ್ತು. ನನ್ನ ಮಡದಿಯ ಮುಖದಲ್ಲಿಯ ಕಳೆ ಕಂಡ ಮೇಲೆ, ಹೊಟ್ಟೆ ನೋವು ಸ್ವಲ್ಪ ಕಡಿಮೆ ಅನ್ನಿಸತೊಡಗಿತು. ಮನೆಗೆ ಹೋಗೋಣ ಕಣೆ ಈಗ ಸ್ವಲ್ಪ ಪರವಾಗಿಲ್ಲ ಎಂದರು ನನ್ನ ಹೆಂಡತಿ ಕೇಳಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ಮಾರುತಿ ಕಾರು ನನ್ನ ಸ್ಕೂಟರ್ ಪಕ್ಕ ಬಂದು ನಿಂತಿತು. ಹಾಗೆ ಕಣ್ಣು ಹಾಯಿಸಿದಾಗ ಹೆಲ್ಮೆಟ್ ಹಾಕಿಕೊಂಡು ಒಬ್ಬ ಮನುಷ್ಯ ಕಾರಿನೊಳಗೆ ಕುಳಿತ ಹಾಗೆ ಕಾಣಿಸಿತು, ನೋಡೇ ಅಲ್ಲಿ ಯಾರೋ ಹೆಲ್ಮೆಟ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದಾರೆ ಎಂದು ಹೇಳಿದೆ. ಆಗ ನನ್ನ ಹೆಂಡತಿ ಗಹ ಗಹಿಸಿ ನಗಲು ಶುರು ಮಾಡಿದಳು. ರೀ ನೋಡ್ರಿ ಅದು ಇಲಿಯ ಮೇಲಿನ ಗಣಪ ಎಂದಾಗ, ನಾನು ಕೂಡ ಮಂದಹಾಸ ಬಿರಿದೆ. ಆಗ ನನ್ನನ್ನು ಒಮ್ಮೆ ನಾನೆ ಅನಾಮತ್ತಾಗಿ ಪೂರ್ತಿ ನೋಡಿದಾಗ ತಿಳಿಯಿತು ನಾನು ಇಷ್ಟು ಅನಾಹುತವಾಗಿ ನನ್ನಷ್ಟಕ್ಕೆ ನಾನೆ ಘಾಬರಿ ಪಡುವಷ್ಟು ದಪ್ಪಗಾಗಿದ್ದೇನೆ ಎಂದು.


ಕ್ಲಿನಿಕ್ ಒಳಗೆ ಬಂದು ಕುಳಿತೆವು ಡಾಕ್ಟರ ಇನ್ನು ಬಂದಿರಲಿಲ್ಲ. ಯಾರು ಪೇಷೆಂಟ್ ಕೂಡ ಇರಲಿಲ್ಲ. ನಾವೇ ಮೊದಲು ಹೋಗಿದ್ದು. ರಿಸೆಪ್ಶನಿಷ್ಟ ಬಳಿ ಹೋಗಿ ಹೆಸರು ಹೇಳಿ ಬಂದೆವು. ಈ ಡಾಕ್ಟರಗೆ ಇಷ್ಟು ಸುಂದರವಾದ ರಿಸೆಪ್ಶನಿಷ್ಟ ಏಕೆ ಬೇಕು? ಎಂದು ಯೋಚಿಸುತ್ತಿರುವಾಗಲೇ, ಡಾಕ್ಟರ ಹಾಜರಾಗ ಬೇಕೇ. ಯೋಚಿಸುವದು ಬಿಟ್ಟು ಅವಳನ್ನು ಚೆನ್ನಾಗಿ ನೋಡಬಹುದಿತ್ತು. ಸ್ವಲ್ಪ ಸಮಯದ ನಂತರ ರಿಸೆಪ್ಶನಿಷ್ಟ ನನ್ನ ಹೆಸರು ಕೂಗಿದಳು. ಡಾಕ್ಟರ ತಿಂಡಿ ಮಾಡುತ್ತಿದ್ದರು. ವಾಸನೆ ತುಂಬಾ ಚೆನ್ನಾಗಿ ಬರುತಿತ್ತು. ತಿಂಡಿಯ ಚಮಚ ಹಿಡಿದು ನನ್ನ ಬಳಿ ಬಂದು ಎಲ್ಲಿ ಬಾಯಿ ತೆಗೆಯಿರಿ ಎಂದರು. ಬೇಡ ಡಾಕ್ಟರ ಹೊಟ್ಟೆ ನೋವು.... ಎಂದು ಮಕ್ಕಳು ಆಸೆ ಪಟ್ಟರು ದೊಡ್ಡವರ ಅನುಮತಿ ಪಡೆಯುವ ಹಾಗೆ ನನ್ನ ಮಡದಿಯ ಮುಖ ನೋಡಿದೆ. ಚಮಚದಲ್ಲಿಯ ತಿಂಡಿ ಬೇಗನೆ ತಿಂದು. (ಮನಸಿನಲ್ಲಿ ಬಕಾಸುರ ಎಂದುಕೊಂಡಿರಬಹುದು) ರೀ ಬಾಯಿ ತೆಗಿರಿ ನೋಡಬೇಕು ಎಂದರು. ನಾನು ಹಲ್ಲು ಚೆನ್ನಾಗೆ ಉಜ್ಜಿದ್ದೇನೆ ಡಾಕ್ಟರ ಎಂದೇ. ರೀ ನಿಮಗೆ ತಿಂಡಿ ತಿನಿಸೋಕು,ಹಲ್ಲು ಉಜ್ಜೋಕೆ , ಅಥವಾ ಹಲ್ಲು ಉಜ್ಜಿದ್ದು ನೋಡುವದಕ್ಕೆ ಅಲ್ಲ. ನಾನು ಹೇಳಿದಷ್ಟು ಮಾಡಿ ಎಂದರು. ಇದೆ ಮೊದಲ ಸರಿ ನಾ ಹೊಟ್ಟೆ ನೋವು? ಎಂದರು. ಈಗೀಗ ಸ್ವಲ್ಪ ಜ್ಯಾಸ್ತಿ ಡಾಕ್ಟರ ಎಂದೇ. ಈಗೀಗ ಎಂದರೆ ಒಂದೆರಡು ವರ್ಷದಿಂದ ಎಂದೇ. ಹೋಗಿ ತಮ್ಮ ಸಿಟ್ ಮೇಲೆ ಒರಗಿ, ಏನಾದರು ಹಾಳು-ಮುಳು ತಿನ್ದಿರೆನು? ಎಂದು ಕೇಳಿದರು. ನನಗೆ ಹಾಲು ಮೂಳೆ ಅಂದ ಹಾಗೆ ಅನ್ನಿಸಿ, ನನಗೆ ಹಾಲು ಇಷ್ಟ ಇಲ್ಲ ಡಾಕ್ಟರ, ಇನ್ನು ಮೂಳೆ ನಾನು ಮುಟ್ಟೋದೇ ಇಲ್ಲ ನಾನು ಸಸ್ಯಾಹಾರಿ ನೋಡಿ ಬೇಕಾದರೆ ಎಂದು ಜನಿವಾರ ತೋರಿಸಿದೆ. ಆಗ ಡಾಕ್ಟರ ನನ್ನ ಬಿಟ್ಟು ಹೆಂಡತಿಯ ಬಳಿ ಮಾತು ಆರಂಬಿಸಿದರು. ಏನು ತಿಂದರು ನಿಮ್ಮ ಯಜಮಾನರು. ಆಗ ನನ್ನ ಹೆಂಡತಿ ಅಪ್ಪ ಮಗನಿಗೆ ಅದೇ ಧ್ಯಾನ ಡಾಕ್ಟರ ಪಿಜ್ಜಾ.. ಪಿಜ್ಜಾ.. ಮತ್ತೆ ಆ ಚಿಪ್ಸ್ ಎಂದಳು. ನೋಡ್ರಿ ಯಾವತ್ತು ತಳಪಾಯ ಘಟ್ಟಿ ಇರಬೇಕು ಎಂದರು. ನಾನು ಘಾಬರಿ ಇವರೇನು ಡಾಕ್ಟರ ಅಥವಾ ಆಕ್ಟರ್?. ಏನಿದು ಡಬಲ್ ಮೀನಿಂಗ್ ಎಂದು ಮನಸಿನಲ್ಲೇ (ಅಂದುಕೊಂಡೆ ಅವರಂದ ಮಾತಿಗೆ ಹಿಂದೆ ನೋಡದೆ). ಮತ್ತೆ ನಿಮ್ಮ ದಿನಚರಿ ಏನು? ಎಂದು ನನ್ನನ್ನು ಕೇಳಿದರು. ಆಗ ನಾನು ಬೆಳಿಗ್ಗೆ ೭ ಘಂಟೆ ಏಳುವದು ಮತ್ತೆ ಟೀ, ಸ್ನಾನ , ತಿಂಡಿ, ಆಫೀಸ್, ಊಟ, ಮನೆ ಮತ್ತೆ ತಿಂಡಿ ಮತ್ತು ಟೀ ಅನಂತರ ರಾತ್ರಿ ಊಟ ಎಂದೇ. ಡಾಕ್ಟರ ೫ ವರ್ಷದ ಹಿಂದಿನ ದಿನಚರಿ ನೆನಪು ಮಾಡಿ ಹೇಳಿ ಎಂದರು. ಆಗ ಸ್ವಲ್ಪ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಸಂದ್ಯಾವಂದನೆ, ಸ್ನಾನ ನಂತರ ತಿಂಡಿ ಟೀ..... ಅಷ್ಟಕ್ಕೇ ತಡೆದು ನೋಡಿ ನೀವು ಆಗ ಹೇಗೆ ಇದ್ದೀರಿ. ಈಗ ಏನಾಗಿದೆ? ಎಂದು ನೀವೇ ಊಹಿಸಿಕೊಳ್ಳಿ. ನಾವು ನಮ್ಮ ಸಂಸ್ಕೃತಿಯ ಕೆಲವು ವಿಷಯಗಳನ್ನು ಎಂದು ಮರೆಯಬಾರದು. ನಾನು ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ, ಸಂದ್ಯಾವಂದನೆ, ಪ್ರಾಣಾಯಾಮ ಇವುಗಳನ್ನು ತಪ್ಪದೆ ಮಾಡುತ್ತೇನೆ. ಅಲ್ಲದೆ ದಿನಾಲೂ ಒಂದು ತುಳಸಿದಳ ತಿನ್ನುತ್ತೇನೆ. ಹೀಗೆ ಹತ್ತು ಹಲವಾರು ವಿಷಯಗಳನ್ನೂ ತಿಳಿ ಹೇಳಿದರು. ನಿಮ್ಮ ಆಲಸ್ಯತನವನ್ನು ಬಿಟ್ಟು ಮೊದಲಿನ ಹಾಗೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ ಮತ್ತೆ ಹಾಳು-ಮುಳು ತಿನ್ನುವದು ಬಿಟ್ಟು ಬಿಡಿ ಎಂದು ಹೇಳಿದರು. ಮಡದಿ ಇವರು ಯಾವಾಗಲು ಹೀಗೆ ತಲೆ ಇಲ್ಲ.... ಹೊಟ್ಟೆ ಇಲ್ಲ... ಕಣ್ಣು ಯಾವುದಾದರು ಒಂದು ನೋಯುತ್ತಿರುತ್ತದೆ. ಇವರಿಗೆ ಏನಾದರು ಒಳ್ಳೆಯ ಔಷಧ ಕೊಡಿ ಎಂದಳು. ಆಗ ಡಾಕ್ಟರ ನಮಗೂ ಬದುಕಲು ಬಿಡಿ ಮೇಡಂ ಎಂದು ಗಹ ಗಹಿಸಿ ನಕ್ಕು, ನೋಡಿ "ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ". ಎಂದರು. ನೋಡಿ ಯಾರಿಗೆ ಏನೂ ಆಗುವದಿಲ್ಲವೋ ಅವ್ರಿಗೆ ಒಮ್ಮೆ ಲೇ ಏನಾದರು ಆಗುತ್ತೆ ಎಂದರು. ಈ ವಾಕ್ಯ ನನಗೆ ತುಂಬಾ ಹಿಡಿಸಿತು. ನಾವು ಮಣಿದಾಗ ಮಾತ್ರ ಮತ್ತೆ ಸರಿ ಮಾಡಬಹುದು, ಆದರೆ ಮುರಿದೆ ಹೋದರೆ ...?. ಒಂದೆರಡು ಮಾತ್ರೆ ಕೊಟ್ಟರು.ಡಾಕ್ಟರ ಫೀಸ್ ಎಂದಾಗ, 10 ರುಪಾಯಿ ಮಾತ್ರ ತೆಗೆದು ಕೊಂಡರು.



ಪುಣ್ಯಾತ್ಮ ಎಂದು ಮನಸಿನಲ್ಲೇ ಅಂದುಕೊಂಡು ಹೊರಗೆ ಬಂದೆವು. ಅವರ ಮಾತುಗಳು ನನಗೆ ತಲೆಯಲಿ ಗುನುಗುಡುತಿತ್ತು. ಅದೇ ಗುಂಗಿನಲ್ಲಿ ಮತ್ತೆ ರಿಸೆಪ್ಶನಿಷ್ಟ ನೆನಪೇ ಹಾರಿ ಹೋಗಿದ್ದಳು ಛೆ.. ಛೆ... ನೋಡೋಣ ನಾಳೆ ಮತ್ತೆ ಚಾನ್ಸ್ ಸಿಗುತ್ತಾ ಅಂತ. ಆದರೆ ದಿನಚರಿ ಬದಲಿಸಬೇಕು ಎಂಬ ನಿರ್ಧಾರ ?......

2 comments:

  1. ಪ್ರಸಂಗ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್.

    ReplyDelete