ಯಾ ದೇವಿ ಸರ್ವಭೂತೇಷು ನಿದ್ರಾ ರೂಪೇಣ ಸಂಸ್ಥಿತಾ||2||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್. ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ!
ಪ್ರತಿದಿನ ಮಲಗುವ ಮುನ್ನ ಶ್ರೀ ರಾಮ, ಸ್ಕಂದ, ಹನುಮಂತ,ಗರುಡ ಹಾಗು ಭೀಮನನ್ನು ಯಾರು ನೆನೆಯುತ್ತಾರೋ ಅವರಿಗೆ ಕೆಟ್ಟ ಕನಸು ಗಳು ಬೀಳುವುದಿಲ್ಲ ಎಂದು, ಮೇಲಿರುವ ಎರಡು ಶ್ಲೋಕಗಳನ್ನ ಎರಡು ಸಾರಿ ಅಂದು , ರಾತ್ರಿ ೨:೩೦ ಮಲಗಲು ಪ್ರಯತ್ನಿಸಿ ವಿಫಲವಾಗಿ ಎದ್ದು ಕುಳಿತೆ. ನನ್ನ ಮಡದಿಯ ಗೊರಕೆಯ ಶಬ್ದ ಮಾತ್ರ ನಿಂತಿರಲಿಲ್ಲ. ಈ ಗೊರಕೆ ನನಗೂ ಬರುತ್ತಾದರೂ, ಬೇರೆಯವರ ಗೊರಕೆ ಶಬ್ದ ಮಾತ್ರ ನನಗೆ ಅಸಹನೀಯ....ಮಲಗುವ ಭಂಗಿಯಲ್ಲಿ ಬದಲಾವಣೆ - ಸರಿಯಾದ ಭಂಗಿಯಲ್ಲಿ ಮಲಗದಿರುವುದೂ ಸಹ ಗೊರಕೆಗೆ ಕಾರಣವಾಗಬಹುದು. ಎಂದು ಓದಿದ್ದರಿಂದ ಮಡದಿಯ ಭಂಗಿ ಬದಲಾವಣೆ ಮತ್ತು ವಿಕ್ಸ್ ಹಚ್ಚಿದರು ಪ್ರಯೋಜನವಾಗಲಿಲ್ಲ... ಯಾವ ಕೆಲಸನಾದರೂ ಕೆಲ ನಿಯಮಿತ ಸಮಯ ಮಾಡಿದ ಮೇಲೆ, ಎಲ್ಲರಿಗೂ ಅದು ಬೋರ್ ಆಗುತ್ತೆ, ಆದರೆ ಈ ಗೊರಕೆ ಮಾತ್ರ ಅತಿ ಘೋರ, ಇದಕ್ಕೆ ಬೋರ್ ಯಾವತ್ತು ಆಗುವದಿಲ್ಲ...
ಮಂಜನನ್ನು ಮನಸಿನಲ್ಲೇ ಬಯುತ್ತ, ಹೊರಗಡೆ ಬಂದು ಮಲಗಿಕೊಂಡೆ. ಮಂಜನನ್ನು ಬಯ್ಯುವದಕ್ಕೂ ಒಂದು ಕಾರಣವಿದೆ... ಮದುವೆಗೂ ಮುಂಚೆ ನಾನು ನನ್ನ ಮಡದಿಯನ್ನು... ಕನ್ಯಾ ಪರೀಕ್ಷೆಯಲ್ಲಿ ಎಲ್ಲವನ್ನು ಕೂಲಂಕುಷವಾಗಿ ಪರೀಕ್ಷೆ ಮಾಡಲು ಹೇಳಿದ್ದ, ಆದರೆ ಇದೊಂದನ್ನು ಮಾತ್ರ ಮರೆತು ಬಿಟ್ಟಿದ್ದ. ಅಷ್ಟರಲ್ಲಿ ನನ್ನ ಕಿವಿಯ ಸಮೀಪ ಒಂದು ಸೊಳ್ಳೆ ಬಂದು ಹಾಡುತಿತ್ತು, ತನ್ನಅಷ್ಟಕ್ಕೆ ತಾನೇ ತಾನಸೇನ ಎಂದು ತಿಳಿದಿತ್ತೋ ಏನೋ, ತಾನಸೇನ ಹಾಡಿದರೆ ಮಳೆ ಬರುತಿತ್ತು , ದೀಪಗಳು ಹತ್ತುತ್ತಿದ್ದವು, ಈ ತಾನಸೇನ ಹಾಡಿ ತನ್ನೆಷ್ಟಕ್ಕೆ ತಾನೇ ಭಸ್ಮಾಸುರನ ಹಾಗೆ ಮರಣ ತಂದು ಕೊಂಡಿತು. ಇನ್ನು ಮತ್ತೇನು ಕಾದಿದೆ ಎಂದು ಹತ್ತಿ ಕಿವಿಯಲ್ಲಿ ತುರುಕಿಕೊಂಡು ನಿದ್ರೆಗೆ ಜಾರಿದೆ.
ಈ ಮನೆಯಿಂದ ಕೆಲಸ (wfh) ಶುರು ಆದಮೇಲೆ , ನನ್ನ ಜೀವನ ಶೈಲಿಯ ವೇಳಾಪಟ್ಟಿ ಬದಲಾಗಿ ಹೋಗಿದೆ. ಮೊದಲು ನಾನು ಅವಳಿಗಿಂತ ಬೇಗ ನಿದ್ರೆಗೆ ಜಾರುತ್ತಿದ್ದೆ, ಹೀಗಾಗಿ ಅವಳ ಗೊರಕೆ ನನಗೆ ಪರಿಣಾಮ ಬೀರಿರಲಿಲ್ಲ. ಮಡದಿಯ ದೂರದ ಅಜ್ಜಿ, ನಮ್ಮ ಯಜಮಾನ್ರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದಾಗ ಹಲ್ಲುಗಳೇ ಇಲ್ಲದ ಅಜ್ಜಿ ನನ್ನ ಮನಸಿನ ಮೇಲೆ ಹಲ್ಲೆ ಮಾಡುವಾಗ ಹಾಗೆ ನಕ್ಕಿದ್ದು ಮಾತ್ರ ಸತ್ಯ ...
ಗೊರಕೆ ತುಂಬಾ ಬೆರಕಿ ಎಂದು ಕಾಣುತ್ತೆ, ಅದು ಮಲಗಿದಾಗ ಮಾತ್ರ ಬರುತ್ತೆ. ಎದ್ದಾಗ ಬಂದರೆ ಒಂದು ಕೈ ನೋಡಿಕೊಳ್ಳಬಹುದಿತ್ತು. ಗೊರಕೆಗೆ ಲಿಂಗ ಭೇದವು ಇಲ್ಲ, ಗಂಡು -ಹೆಣ್ಣು.. ಎರಡು ಗೊರಕೆಗಳು ಒಂದೇ... ನನ್ನ ಮಡಿದಿಗೆ ಚೆನ್ನಾಗಿ ಹಾಡಲು ಬರುತ್ತಾದರೂ , ಗೊರಕೆಗೆ ಮಾತ್ರ ರಾಗ-ಭಾವ,ಸ್ವರ -ತಾಳದ ಪರಿವಿರಲಿಲ್ಲ.... ಇದರ ಸಾಮ್ಯತೆ ಬಸ್ ಶಬ್ದದ ಹಾಗೆ ಇದ್ದರು,ಬಸ್ಸಿನಲ್ಲಿ ಆರಾಮವಾಗಿ ನಿದ್ದೆ ಮಾಡಬಹುದು. ಗೊರಕೆ ಕೊಡುವಂತ ನಡು ವಿರಾಮದಿಂದ(ಬ್ರೇಕ್) ಕೊಡುವಂತ ಕಿರಿ ಕಿರಿ ಮಾತ್ರ ಘೋರ...
ಸುಮಾರು ಐದು ವರ್ಷ ಚಿಕವನಿದ್ದಾಗ ನಾನು ಲಕ್ಷ್ಮೇಶ್ವರಕ್ಕೆ ಮದುವೆಗೆ ಎಂದು ಹೋದಾಗ, ಗೊರಕೆ ಶಬ್ದ ಕೇಳಿ ನಾನು ಹುಲಿ ಬಂತು ಎಂದು ಅಳಲು ಶುರು ಮಾಡಿದ್ದೆ, ಪಾಪ ಅವರ ಅತ್ತೆ ನನ್ನನು ಒಳಗೆ ಮಲಗಲು ಹೇಳಿ ತಾವು ಹೊರಗಡೆ ಮಲಗಿದ್ದರು.
ಗೊರಕೆಯು ಕೂಡ ಅನುವಂಶೀಯ ಎಂದು ಕಾಣುತ್ತೆ, ನಮ್ಮ ಅತ್ತೆ ಕೂಡ ಭಯಂಕರ ಗೊರಕೆ ಹೊಡೆಯುತ್ತಾರೆ, ಆದರೆ ನಮ್ಮ ಮಾವ ಮಾತ್ರ ತುಂಬಾ ಪುಣ್ಯವಂತರು ಅವರಿಗೆ ಕಿವಿ ಸ್ವಲ್ಪ ಮಂದ. ಒಮ್ಮೆ ನಮ್ಮ ಭಾವ ಚಿಕವನಿದ್ದಾಗ, ನಮ್ಮ ಅತ್ತೆಗೆ ನೀನು ತುಂಬಾ ಗೊರಕೆ ಹೊಡೆಯುತ್ತಿ ಎಂದು ಹೇಳಿದರು ಒಪ್ಪಲಿಲ್ಲ, ಆಗ ಕ್ಯಾಸೆಟ್ಟುಗಳ ಕಾಲ , ಅತ್ತೆ ನಿದ್ದೆ ಮಾಡುತ್ತಿದ್ದಾಗ ಒಂದು ಕ್ಯಾಸ್ಸೆಟ್ಟನ್ನು ರೆಕಾರ್ಡ್ ಮಾಡಿದ ಭಾವ, ಮನೆಗೆ ಬಂದ ಎಲ್ಲರಿಗೂ ಇದನ್ನು ಕೇಳಿಸುತ್ತಿದ್ದ. ನಮ್ಮ ಅತ್ತೆಗೆ ಮಾತ್ರ ಇದನ್ನು ಕಂಡು ತುಂಬಾ ಕೋಪ, ಒಮ್ಮೆ ನಮ್ಮ ಅತ್ತೆ ಆ ಕ್ಯಾಸೆಟ್ಟು ಅನ್ನು ಎತ್ತಿ ಸುಪ್ರಭಾತ ಕ್ಯಾಸೆಟ್ಟ್ ನಲ್ಲಿ ಮುಚ್ಚಿ ಇಟ್ಟು ಬಿಟ್ಟಳು. ನಮ್ಮ ಮಾವ ಆ ಸುಪ್ರಭಾತ ಕ್ಯಾಸೆಟ್ಟು ನೋಡಿ ತುಂಬಾ ಖುಷಿಯಿಂದ, ಅದನ್ನು ತೆಗೆದುಕೊಂಡು ತಮ್ಮ ಮಂದಿರಕ್ಕೆ ತೆಗೆದು ಕೊಂಡು ಹೋಗಿ ಅದನ್ನು ಹಚ್ಚಿ ಬಿಟ್ಟರು, ಪಾಪ ಅವರಿಗೆ ಕಿವಿ ಮಂದ ಇದ್ದದರಿಂದ ಇದರ ಅರಿವು ಇರಲಿಲ್ಲ. ಮಂದಿರದಲ್ಲಿ ಬರುವ ಆ ಗೊರಕೆ ಶಬ್ದದಿಂದ ಪಕ್ಕದ ಮನೆಯವರು ಎದ್ದು ಬಂದು, ಏನಿದು ಎಂದು ನಮ್ಮ ಮಾವನಿಗೆ ಕೇಳಿದರು, ಪಾಪ, ನಮ್ಮ ಮಾವ ಹೇಗಿದೆ "ಹೊಸ ಸುಪ್ರಭಾತ" ಕ್ಯಾಸ್ಸೇಟ್ಟು ಎಂದರು. ಆಗ ಕ್ಯಾಸ್ಸೇಟ್ ನ್ನು ತೆಗೆದು ನಮ್ಮ ಮಾವನಿಗೆ ತಿಳಿ ಹೇಳಿದರು. ನಮ್ಮ ಮಾವನಿಗೆ ಭಾವನ ಮೇಲೆ ತುಂಬಾ ಕೋಪ ಬಂದಿತ್ತು.
ಬೆಳಿಗ್ಗೆ ಬೇಗ ಎದ್ದು ಪೊರಕೆ ಹಿಡಿದು ಕಸ ಹೊಡೆಯುತ್ತ ಕೋಪದಿಂದ ನಿಂತಿದ್ದಳು ನನ್ನ ಮಡದಿ, "ಏನ್ರೀ , ಎಷ್ಟು ಭಯಂಕರವಾಗಿ ಗೊರಕೆ ಹೊಡೆಯುತ್ತೀರಾ" ಎಂದು ನನ್ನನ್ನೇ ಬಯ್ಯಲಾರಂಭಿಸಿದಳು, ಸಧ್ಯ ಪೊರಕೆಯಿಂದ ಹೊಡೆಯಲಿಲ್ಲ. ನಾನೇ ಹೇಳಬೇಕು ಎಂದಿದ್ದ ವಿಷಯ ನನಗೆ ತಿರುಗು ಬಾಣವಾಗಿ ಬಂದಿದ್ದು ಮಾತ್ರ ವಿಷಾದನೀಯ..... ನೀವೊಬ್ಬರು ಪಕ್ಕದಲ್ಲಿಯಿದ್ದರೆ ಯಾವುದೇ ಅಲಾರಾಮ ಕೂಡ ಬೇಡ ಎಂದಳು. ನನ್ನ ಮತ್ತು ನನ್ನ ಮಡದಿಯ ನಡುವೆ ಒಂದು ಚಿಕ್ಕದಾದ ಜಗಳ ಕೂಡ ನಡೆಯಿತು.
ಮೊದಲೇ , ನಿದ್ರೆಯಿಂದ ವಂಚಿತನಾಗಿದ್ದರಿಂದ ಎದ್ದು ಸ್ನಾನ ಮುಗಿಸಿ , ಪೊಜೆ ಮಾಡಿ, ಹೊರಗಡೆ ಬಂದೆ. ಅಷ್ಟರಲ್ಲಿ ಮಡದಿ ಏನ್ರೀ ಇದು ದೇವರ ಮನೆಯಲ್ಲಿ ಕಲೆ ಎಂದಳು, ಪರಿಸ್ಥಿತಿಯನ್ನು ತಿಳಿಗೊಳಿಸಲು ಇದು ನನ್ನ ತಪ್ಪಂತೂ ಖಂಡಿತ ಅಲ್ಲ ಎಂದೆ... ಮತ್ತೆ ಯಾರ ತಪ್ಪು ಎಂದಳು, ಅದು ನಿಮ್ಮ ಮಾವನವರ ತಪ್ಪು ಎಂದೆ, ಏಕೆ? ಪಾಪ... ನಿಮ್ಮ ತಂದೆಯವರ ಮೇಲೆ ಹಾಕುತ್ತೀರಾ ಎಂದಳು. ನಮ್ಮ ಅಪ್ಪ ಕಲೆಗಾರ (ಶಿಲ್ಪಿ) ಅಲ್ಲವೇ ಅವರ ಸ್ವಲ್ಪ ಗುಣಗಳು ನನ್ನಲ್ಲಿ ಇವೆ , ಅದಕ್ಕೆ ಈ ಕಲೆಗಳು ಎಂದು ಮತ್ತೆ ಅವಳಿಂದ ಮಂಗಳಾರತಿ ಮಾಡಿಸಿಕೊಂಡು, ನಾನೇ ಸ್ವಚ್ಛ ಮಾಡಿ "ರವಿ ವರ್ಮನ ಕುಂಚದ ಕಲೆ ಭಲೇ ಸಾಕಾರವೋ" ಎಂದು ಹಾಡುತ್ತ ತಿಂಡಿ ತಿಂದು ಕೆಲಸವನ್ನು ಶುರು ಮಾಡಿದೆ.
ಗೊರಕೆಯ ಬಗ್ಗೆ ಸಂಶೋಧನೆ ಶುರು ಹಚ್ಚಿಕೊಂಡೆ, ಕೆಲವೊಂದು ವಿಷಯಗಳಂತೂ ಖಂಡಿತ ಪರಿಣಾಮಕಾರಿ ಆಗಬಹುದು ಅಂದುಕೊಂಡಿದ್ದೇನೆ... ಪ್ರಾಣಾಯಾಮ , ತೂಕ ಇಳಿಸುವುದು, ಏಲಕ್ಕಿ ನೀರನ್ನು ಸೇವುಸುವುದು ಹೀಗೇ ಅನೇಕ... ಅದರಲ್ಲಿ ತೀವ್ರತರವಾದ ಗೊರಕೆಯ ಚಿಕಿತ್ಸೆಗೆ ಸ್ಯೂಡೋಎಪೆಡ್ರಿನ್ ಹಾಗು ಡೊಮ್ಪೆರಿಡೋನ್ ನ ಮಿಶ್ರಣವು ಉತ್ತಮವಾದ ಪರಿಣಾಮವನ್ನು ಬೀರುತ್ತದೆ ಎಂದು ಸೂಚಿಸಲಾಗಿದೆ(ಸುಮಾರು 95%ರಷ್ಟು).
ಊಟ ಬಲ್ಲವನಿಗೆ ರೋಗವಿಲ್ಲ.. ಮಾತು ಬಲ್ಲವನಿಗೆ ಜಗಳವಿಲ್ಲ ... ಎನ್ನುವ ಹಾಗೆ ಮತ್ತೊಂದು ಸೇರಿಸಿ ... ಗೊರಕೆ ಇಲ್ಲದವನಿಗೆ ಕೂಡ ಜಗಳವಿಲ್ಲ ನೆಮ್ಮದಿಯ ನಿದ್ದೆ ಎಂದು ಅನ್ನಿಸತೊಡಗಿದೆ....
Great one...🤣🤣👍
ReplyDelete:) Thank you sir
Delete:) Thank you sir
ReplyDeleteEnjoyed reading.
ReplyDeleteThank you very much 😊
Delete👍👍👍👍👍👍👍👌👌👌👌👌👌
ReplyDeleteThank you very much! 😊
DeleteVery nice,👌👌👌👋👋👍👍👍😀😀😀
ReplyDeleteThank you very much :)
Delete