Thursday, September 27, 2012

ತಾಳಿದವನು ಬಾಳಿಯಾನು ....

ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ. ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದು ಇದೆ ಕತೆ ಆಯಿತು ಎಂದಳು. ಹೌದು ನನಗೆ ಯಾವುದೇ ಕೆಲಸವಾಗಲಿ ಕಡೆವರೆಗೂ ಅದನ್ನು ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ. ಅಷ್ಟರಲ್ಲಿ ಮಡದಿ ರೀ.. ಸ್ವಲ್ಪ ಕಣ್ಣು ಮುಚ್ಚಿ ಬಾಯಿ ತೆಗೆಯಿರಿ ಎಂದಳು. ಚೆಕ್ ಬುಕ್ ಏನಾದರು ಬಂತಾ ಎಂದು ಯೋಚಿಸಿದೆ. ಆದರು ಬಾಯಿ ಬೇರೆ ತೆಗೆಯಿರಿ ಎಂದಿದ್ದಾಳೆ, ಸುಮ್ಮನೆ ಕಣ್ಣು ಮುಚ್ಚಿದ ಹಾಗೆ ಮಾಡಿ ಬಾಯಿ ತೆಗೆದೆ. ಬಾಯಿಯಲ್ಲಿ ತಂದು ಸಿಹಿ ತಿಂಡಿ ಹಾಕಿದಳು. ಏನೇ ಇದು ಬೆಲ್ಲದ ಪುಡಿ ಹಾಗೆ ಇದೆ ಎಂದೆ. ಕೋಪದಿಂದ ರೀ.. ಅದು ಮೈಸೂರ್ ಪಾಕ, ಆದರೆ ಪುಡಿಯಾಗಿತ್ತು ಅಷ್ಟೇ ಎಂದಳು. ಅದಕ್ಕೆ ಮೈಸೂರ್ ಪುಡಿ ಎಂದರೆ ಹೇಗೆ ಎಂದೆ. ಮತ್ತಷ್ಟು ತಾರಕಕ್ಕೆ ಏರಿತು ಅವಳ ಕೋಪ. ನಾನು "ತಾಳಿದವನು ಬಾಳಿಯಾನು" ನಾಳೆ ಮಾಡುವೆಯಂತೆ ಬಿಡು ಕೋಪ ಏಕೆ? ಎಂದೆ. ಅದು ನಿಮಗೆ ಅನ್ವಯಿಸುತ್ತೆ ಅಲ್ಲಿ ಸ್ತ್ರೀಲಿಂಗ ಇಲ್ಲ ಎಂದಳು. ಇದನ್ನು ಯಾರೋ ಹೆಂಗಸರು ಸೇರಿ ಮಾಡಿದ ಗಾದೆ ಇರಬೇಕು, ಅದು "ತಾಳಿ ಇದ್ದವಳು ಬಾಳಿಯಾಳು" ಎಂದು ಆಗಬೇಕಿತ್ತು ಅಷ್ಟೇ ಎಂದೆ. ಹಾಗೇನಿಲ್ಲ ಹಾಗಾದರೆ ಮುಂ"ಗೋಪಿ" ಎಂದು ನಿಮ್ಮ ಹೆಸರನ್ನು ಸೇರಿಸಿ ಏಕೆ? ಹೇಳುತ್ತಾರೆ. ಅದಕ್ಕೆ ಅದು ತಾಳಿದವನು ಬಾಳಿಯಾನು ಸರಿ ಎಂದು ಕಿಚಾಯಿಸಿದಳು. ಅಷ್ಟರಲ್ಲಿ ನಮ್ಮ ಐದು ವರ್ಷದ ಸುಪುತ್ರ Tom & Jerry ಅಂದ. ಅನ್ನು,, ಅನ್ನು,, ನೀನೋಬ್ಬನು ಕಡಿಮೆ ಆಗಿದ್ದೆ ಅನ್ನುವವನು ಎಂದು ಅಂದೆ. ಅಪ್ಪ.. Tom & Jerry ಟಿ ವಿ ಯಲ್ಲಿ ಹಚ್ಚು ಎಂದ ಕೋಪದಿಂದ. ಅವನು ನಮ್ಮಿಬ್ಬರನ್ನು ನೋಡಿ ಅನ್ನುತ್ತಿದ್ದಾನೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೆ. ನಾನೇ ದೊಡ್ದವನಾದ್ದರಿಂದ Tom ನಾನೇ ಅನ್ನಿಸಿತು. Tom & Jerry ಯಲ್ಲಿ Tom ಗೆ Jerry ಏನೇ ಮಾಡಿದರು ಕೂಡ ಅದು ಚಿರಂಜೀವಿನೇ. ಅ೦ತಹ ಚಿರಂಜೀವಿಯನ್ನ ನನ್ನ ಜೀವಮಾನದಲ್ಲಿ ಎಲ್ಲಿಯೂ ಕಂಡಿಲ್ಲ. Jerry Tomನಿಗೆ ಎರಡು ಭಾಗ ಮಾಡಿದರು ಕೂಡ ಮತ್ತೆ ಕೂಡಿ ಕೊಂಡು Jerry ಯನ್ನು ಬೆನ್ನು ಹತ್ತುತ್ತೆ. ಆದರೆ ಇಲ್ಲಿ ಮಡದಿ ಕೋಪ ಮಾಡಿಕೊಂಡರು ಸಾಕು ನಾವು ಅವರ ಹಿಂದೆ ಕೋಪ ಕಡಿಮೆ ಮಾಡಲು ಹೋಗಬೇಕಷ್ಟೆ. ಕೋಪ ಕಡಿಮೆ ಆಗದಿದ್ದರೆ ಕತೆ ಮುಗಿಯಿತು ಅಷ್ಟೇ. ಕಡೆಗೆ ಮಗನಿಗೆ Tom & Jerry ಹಚ್ಚಿಕೊಟ್ಟೆ.


ಮಡದಿ ಕೋಪದಿಂದ, ಆಫೀಸ್ ನಿಂದ ಬರುತ್ತಾ ನಿಮ್ಮ ಅಪ್ಪನಿಗೆ ಇವತ್ತಾದರೂ ನಿನ್ನೆ ಹೇಳಿರುವ ಸಾಮಾನುಗಳನ್ನು ತೆಗೆದುಕೊಂಡು ಬರಲು ಹೇಳು ಎಂದಳು. ಕಡೆಗೆ ತಿಂಡಿ ತಿಂದು ಆಫೀಸ್ ಗೆ ಹೊರಟೆ. ನಾನು ದಿನಾಲೂ ಹೋಗುವ ದಾರಿಯಲ್ಲಿ ವಜ್ರಾಯುಧ ಹಿಡಿದು ಕೊಂಡು ರಸ್ತೆ ಕಡಿಯುವ ಯೋಧರು ನಿಂತಿದ್ದರು. ಮೊದಲು ನಾವು ಈ ಪಾತಾಳ ಲೋಕದಲ್ಲಿ ಸಂಜೀವಿನಿ ಮಣಿ ಇರುತ್ತೆ ಎಂದು ಕೇಳಿದ್ದೇವೆ. ನಾವು ಬಬ್ರುವಾಹನ ಚಲನ ಚಿತ್ರದಲ್ಲಿ, ಬಬ್ರುವಾಹನನಿಂದ ಹತನಾದ ತಂದೆಯಾದ ಅರ್ಜುನನನ್ನು ಬದುಕಿಸಲು ಪಾತಾಳ ಲೋಕಕ್ಕೆ ಹೋಗಿ ಸಂಜೀವಿನಿ ಮಣಿಯನ್ನು ತರುತ್ತಾನೆ. ಆದರೆ ಈಗ ಈ ಪಾತಾಳ ಲೋಕ್ಕಕ್ಕೆ ಹೋದರೆ, ಸಂಜೀವಿನಿ ಮಣಿ ಸಿಗದೇ ಹೋದರು ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ ಫೋಟೋ ಖಂಡಿತ ಬಂದಿರುತ್ತೆ. ಸೇರುವುದು ಖಂಡಿತವಾಗಿ ಸ್ವರ್ಗ ಲೋಕಕ್ಕೆ ಮಾತ್ರ. ಸರ್ ..ಹಾಗೆ ಹೋಗಿ ಎಂದು ಯೋಧರು ತಾಕಿತ್ ಮಾಡಿದರು. ಕಡೆಗೆ ಬೇರೆ ದಾರಿಯಿಂದ ಹೊರಟೆ, ಆಫೀಸ್ ಐದು ನಿಮಿಷ ಲೇಟಾಗಿ ತಲುಪಿದೆ, ಹೀಗಾಗಿ ಆಫೀಸ್ ಗೆ ಅರ್ಧ ದಿವಸ ರಜೆ ಹಾಕಿ, ಅವಳು ಹೇಳಿರುವ ಸಾಮಾನು ತೆಗೆದುಕೊಂಡು ಬಂದೆ.

ಮಡದಿಯ ಹತ್ತು missed calls ಇದ್ದವು. ನಾನು ಫೋನ್ ಮಾಡಿದೆ. ಅವಳು ಕೋಪದಿಂದ ಫೋನ್ ತೆಗೆದುಕೊಳ್ಳಲಿಲ್ಲ. ನಾನು ಮತ್ತೆ.. ಮತ್ತೆ.. ಫೋನ್ ಮಾಡಿ ಬೇಜಾರಿನಿಂದ ಕುಳಿತ್ತಿದ್ದೆ. ಅಷ್ಟರಲ್ಲಿ ನಮ್ಮ ಮಂಜ ಬಂದ. ಏನಪ್ಪಾ.. ಸಪ್ಪಗೆ ಇದ್ದೀಯಾ ಎಂದ. ಅದಕ್ಕೆ ನಾನು ಮಡದಿಗೆ ಫೋನ್ ಮಾಡಿದ್ದೆ ಎತ್ತಲಿಲ್ಲ ಎಂದೆ. ಹೌದಾ... ಕಾಲ್ ಎತ್ತಲಿಲ್ಲವೆ ಎಂದ. ನಾನು ಹೌದು ಕಾಲು ಎತ್ತಲಿಲ್ಲ. ಹೌದು ಬಿಡು ನಿನ್ನ ಮೇಲೆ ಕಾಲು ಎತ್ತಬೇಕಾಗಿತ್ತು, ನಾನು ಹೇಳುತ್ತೇನೆ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ನನ್ನ ಅಕ್ಕ-ಪಕ್ಕ ಕುಳಿತವರು ಕೂಡ ಜೋರಾಗಿ ನಗ ಹತ್ತಿದರು. ನನಗೆ ಇನ್ನಷ್ಟು ಕೋಪ ಬಂದಿತ್ತು. ಏನೋ ಬೇಜಾರಿನಿಂದ ಇದ್ದರೆ, ನಿನ್ನೋಬ್ಬನು ಉರಿಯೋ ಬೆಂಕಿಗೆ ತುಪ್ಪ ಸುರಿಯುವವನು. ದೇಶ ಕಟ್ಟುವವರು ಕಡಿಮೆ ಇಲ್ಲಿ ಉಪದೇಶ ಮಾಡುವವರು ಜ್ಯಾಸ್ತಿ ಎಂದೆ. ಅಷ್ಟರಲ್ಲಿ ಒಂದು ಫೋನ್ ಕಾಲ್ ಬಂತು. ಅದಕ್ಕೆ ಮಂಜ ನೋಡಿ ತಂಗ್ಯಮ್ಮನ ಕಾಲು ಇರಬೇಕು, ಬೇಗನೆ ತೆಗೆದುಕೋ ಇಲ್ಲದೆ ಹೋದರೆ ಚಪ್ಪಲಿ ಕೂಡ ಬಂದು ಬಿಟ್ಟರೆ ಕಷ್ಟ ಎಂದು ನಗುತ್ತಾ ಹೊರಟು ಹೋದ.

ಕಡೆಗೆ ನಾನೇ ಮನೆಗೆ ಹೋಗುವ ಸಮಯದಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಮನೆ ಕಡೆಗೆ ಹೊರಟೆ. ಆದರೆ ಅವಳು ಹೇಳಿರುವ ಸಾಮಾನುಗಳನ್ನೂ ಮಾತ್ರ ಆಫೀಸ್ ನಲ್ಲಿಯೇ ಬಿಟ್ಟು ಬಂದಿದ್ದೆ. ಮತ್ತೆ ಅರ್ಧ ದಾರಿಯಲ್ಲಿ ಇರುವಾಗ ಮಗನ ಫೋನ್ ಬಂತು. ಎಲ್ಲಿದ್ದೀರಾ? ಅಪ್ಪ ಎಂದ. ನಾನು ಬಸವನಗುಡಿ ಹತ್ತಿರ ಎಂದೆ. ಸಾಮಾನುಗಳನ್ನು ತೆಗೆದುಕೊಂಡು ಬಂದಿರುವೆಯೋ ಇಲ್ಲವೋ ಎಂದು ಕೇಳಿದ. ತಂದಿದ್ದೇನೆ ಎಂದು ಫೋನ್ ಕಟ್ ಮಾಡಿ,ತಕ್ಷಣ ನೆನಪಾಗಿ ಮತ್ತೆ ಆಫೀಸ್ ಕಡೆ ಗಾಡಿ ತಿರುಗಿಸಿದೆ. one way ಎಂದು ತಿಳಿಯದೆ ಪೋಲಿಸ್ ಮಾಮನಿಗೆ ದಕ್ಷಿಣೆ ಕೊಟ್ಟು ಆಫೀಸ್ ತಲುಪಿದೆ. ಮತ್ತೆ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ಹಾಜರ ಆದೆ.

ಏಕೆ? ಇಷ್ಟು ಲೇಟ್ ಅಪ್ಪ ಎಂದ ಮಗ. ಮತ್ತಿನೇನು ಕೋಲೆ ಬಸವನ ಹಾಗೆ, ಬಸವನಗುಡಿ ಸುತ್ತತ್ತ ಇದ್ದರು ಅನ್ನಿಸುತ್ತೆ ಎಂದು ಹುಸಿಕೊಪದಿಂದ ನುಡಿದಳು ಮಡದಿ. ಮಡದಿ ಎಲ್ಲ ಸಾಮಾನುಗಳನ್ನು ನೋಡುತ್ತಾ, ಹಣಿ ಹಣಿ ಗಟ್ಟಿಸಿಕೊಂಡಳು. ಏಕೆ? ಏನಾಯಿತು ಎಂದೆ. ನಿಮಗೆ ಏನೇನು ಹೇಳಿದ್ದೆ ಹೇಳಿ ಎಂದಳು. ನಾನು ಬರೆದುಕೊಂಡಿರುವ ಸಾಮಾನಿನ ಲಿಸ್ಟ್ ತೆಗೆದು, ಒಂದೊಂದಾಗಿ ಹೇಳಲು ಶುರು ಮಾಡಿದೆ. ೪ ಲೈನ್ ಇರುವ ಪುಸ್ತಕ, ಮತ್ತೆ ಬೆಳೆ, ಮತ್ತೆ ಒಂದು ರೂಪಾಯಿಯ ಚಾಕ್ಲೇಟ...ನಿಲ್ಲಿ.. ನಿಲ್ಲಿ.. ಎಂದು ನಿಲ್ಲಿಸಿದಳು ಮಡದಿ. ರೀ. ನಿಮ್ಮ ತಲೆಗಿಷ್ಟು, ಮನೆಯಲ್ಲಿ ಇಷ್ಟೊಂದು ಚಾಕ್ಲೇಟ ಇವೆ ಮತ್ತೆ ಏಕೆ? ತಂದಿರಿ ಎಂದು ಝಾಡಿಸಿದಳು. ಮತ್ತೆ ನೀನೇಕೆ? ಹೇಳಿದೆ ಎಂದು ಕೇಳಿದೆ. ರೀ... ನಾನು ಹೇಳಿದ್ದು ಚಾಕ್ ಪೀಸ್ ಎಂದಳು. ನಾನು ಮತ್ತೆ ಹೋಗಿ ಚಾಕ್ ಪೀಸ್ ತೆಗೆದುಕೊಂಡು ಬಂದು ಕೊಟ್ಟೆ.

ಮಡದಿ ಚೆಕ್ ಬುಕ್ ಬಂದಿದೆ ಎಂದು ಹೇಳಿದಳು. ನಾನು ತುಂಬಾ ಖುಷಿಯಾದೆ. ಮಡದಿ ಪ್ಲೇಟಿನಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಬಂದು ಕೊಟ್ಟಳು. ಲೇ... ಇದೆಂತಹ ಮೈಸೂರ್ ಪಾಕ್ ಕೊಟ್ಟಿದ್ದಾನೆ ಅಂಗಡಿಯನು, ಮೈಸೂರ್ ರಾಕ್ ಆಗಿದೆ ಎಂದು ಜೋರಾಗಿ ಬೈಯುತ್ತ ಇದ್ದೆ. ಆದರೆ ಮಡದಿ ನಾನು ತಂದಿರುವ ಮೈಸೂರ್ ಪಾಕ್ ಪ್ಯಾಕೆಟ್ ತೆಗೆಯದೆ. ತಾನೆ ಮಾಡಿರುವ ಮೈಸೂರ್ ಪಾಕ್ ತಂದು ಕೊಟ್ಟಿದ್ದಳು. ಮತ್ತಷ್ಟು ಕೋಪದಿಂದ ನನಗೆ ಮಾಡಲು ಬರುವುದಿಲ್ಲ ಎಂದು, ಹೀಯಾಳಿಸಲು ಇದನ್ನು ತಂದಿರುವಿರಿ ಏನು? ಎಂದು, ಅನ್ನುತ್ತ ನಾನು ತಂದಿರುವ ಮೈಸೂರ್ ಪಾಕ್ ನ್ನು ನನ್ನ ಮುಂದೆ ಇಟ್ಟು ಹೊರಟು ಹೋದಳು. ನಾನು ಮತ್ತೆ ಅವಳನ್ನು ಸಮಾಧಾನಿಸಲು, ಹಿಂದೆ ಬಾಲದಂತೆ ಹಿಂಬಾಲಿಸಿ, ಮನಸ್ಸಿನಲ್ಲಿ ನಿಜವಾಗಿಯೂ, ತಾಳಿದವನು ಬಾಳಿಯಾನು ಎಂದು ಅಂದುಕೊಂಡೆ.

4 comments:

 1. { ಸಂಜೀವಿನಿ ಮಣಿ ಸಿಗದೇ ಹೋದರು ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ ಫೋಟೋ ಖಂಡಿತ ಬಂದಿರುತ್ತೆ}

  haa haa...

  -- girish

  ReplyDelete
  Replies
  1. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...
   --ಅಕ್ಕರೆಯಿಂದ ಗೋಪಾಲ್.

   Delete
 2. Tumba chenagide sir

  ReplyDelete
  Replies
  1. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...
   --ಅಕ್ಕರೆಯಿಂದ ಗೋಪಾಲ್.

   Delete