Thursday, January 27, 2011

ಒಲವೆ ಜೀವನ ಸಾಕ್ಷಾತ್ ಖಾರ ....

ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ ದಾಡಿ ಮಾಡಿಕೊಳ್ಳುವುದಕ್ಕೆ. ರಕ್ತವಿಲ್ಲದೇ ನನ್ನ ಮುಖ ಕೂದಲುಗಳನ್ನು ಬಲಿ ಕೊಡುವುದು ನನಗೆ ಅಸಾಧ್ಯದ ಸಂಗತಿ. ಒಂದು ಸಲ ಹೀಗೆ ರಕ್ತ ನೋಡಿ ನನ್ನ ಮಡದಿ, ಇಷ್ಟು ರಕ್ತದಿಂದ ನಾಲ್ಕು ಜನ ರಕ್ತದ ಅವಶ್ಯಕತೆ ಇರುವವರನ್ನು ಬದುಕಿಸಬಹುದಿತ್ತು ಎಂದಿದ್ದಳು. ಸಕಾಲದಲ್ಲಿ ಮಳೆ ಬರದೇ ಎಷ್ಟೋ ಸಸ್ಯ, ಜೀವ ಜಂತುಗಳು ಬಳಲಿ ಬಲಿಯಾಗುತ್ತವೆ, ಆದರೆ ಈ ದಾಡಿ, ಮೀಸೆಗಳಿಗೆ ಅದರ ಪರಿವೆ ಇಲ್ಲದೇ ಸೊಂಪಾಗಿ ಬೆಳೆಯುತ್ತವೆ. ಒಣಗಿರುವ ಪೈರು ಸಹಿತ ಮತ್ತೆ ಚಿಗುರೊಡೆಯುವದು ನಮ್ಮ ಮುಖದಲ್ಲಿ ಮಾತ್ರ. ಅದರಲ್ಲೂ ಅರ್ಧ ಒಣಗಿರುವ(ಬಿಳಿ) ಮತ್ತು ಅರ್ಧ ಕರಿ ಇದ್ದರೆ ಅದರ ಕಷ್ಟ ಹೇಳಲು ಅಸಾಧ್ಯ. ನನ್ನ ಮುಖದಲ್ಲಿ ಕೂಡ ಇದೆ ತೆರನಾದ ಸಮಸ್ಯೆ ಮೀಸೆಗಳನ್ನು ಕತ್ತರಿಸಿ ಕೊಳ್ಳುವುದು. ಏಕೆಂದರೆ ಅರ್ಧ ಬಿಳಿ ಮತ್ತು ಅರ್ಧ ಕರಿ. ಬಿಳಿ ಮೀಸಿಗಳನ್ನು ತೆಗೆಯುವ ಸಮಯದಲ್ಲಿ ಕರಿ ಮೀಸೆಗಳನ್ನು ಅನ್ಯಾಯವಾಗಿ ಬಲಿ ತೆಗೆದುಕೊಂಡಿರುತ್ತೇನೆ. ಬಿಳಿ ಮೀಸೆ ಹುಡುಕಿ ತೆಗೆಯುವುದೇ ಒಂದು ದೊಡ್ಡ ಸಾಹಸ, ಅದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತೆ.

ಜಿರಳೆಗಳಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಅದು ತನ್ನ ಹೆಣ್ಣು ಜಿರಳೆಗಳನ್ನು ಆಕರ್ಷಿಸಲು ತನ್ನ ಮೀಸೆಯನ್ನು ಬಳಸುತ್ತೆ. ಮತ್ತು ಆಹಾರ ಹುಡುಕಲು ಕೂಡ ಅದು ನೇರವಾಗುತ್ತೆ. ನಾನು ಕೂಡ ಅದರ ಹಾಗೆನೆ, ಎರಡನೆ ಸಂಗತಿ ಬಿಟ್ಟು, ನನ್ನ ಮಡದಿಯನ್ನು ಆಕರ್ಷಿಸಲು ಉಪಯೋಗಿಸುತ್ತೇನೆ, ಅನ್ನುವದಕ್ಕಿಂತ ನಾನು ನಿನಗಿಂತ ಸ್ವಲ್ಪನಾದರೂ ಮೇಲೂ ಎಂದು ತೋರಿಸುವುದಕ್ಕೆ ಎಂದು ಹೇಳಬಹುದು. ಅದು ಬರಿ ತೋರಿಕೆಗೆ ಮಾತ್ರ ....

ಅವಳ ಸಮರಕ್ಕೂ ಕಾರಣವಿದೆ. ಮೊನ್ನೆ ಇವತ್ತಿನಿಂದ ಒಂದು ತಿಂಗಳಿಗೆ ಏನು? ವಿಶೇಷ ಇದೆ ಹೇಳಿ ಎಂದಳು. ನನಗೆ ಏನೆಂದು ಹೊಳಿಲೆ ಇಲ್ಲ. ಹೀಗೆ, ಅನಿರೀಕ್ಷಿತವಾಗಿ ಪರೀಕ್ಷೆಗೆ ಒಡ್ಡುವ ನನ್ನ ಮಡದಿ ನನ್ನನ್ನು ಪೇಚಿಗೆ ಸಿಕ್ಕಿಸಿರುತ್ತಾಳೆ. ಆಮೇಲೆ ಹೇಳದೇ ಇದ್ದರೆ ಮುನಿಸಿಕೊಂಡು ಬಿಡುತ್ತಾಳೆ. ಕಡೆಗೆ ಟಿ ವಿ ಯಲ್ಲಿ ಬರುವ ಜಾಹೀರಾತು ನೋಡಿ, ಒಂದು ತಿಂಗಳಿಗೆ ಕ್ರಿಕೆಟ್ ವರ್ಲ್ಡ್ ಕಪ್ ಇದೆ ಎಂದೆ. ಇದೊಂದು ಗೊತ್ತು ನಿಮಗೆ ಎಂದು ಕೋಪ ಮಾಡಿಕೊಂಡು ಹೋದಳು. ತುಂಬಾ ಪ್ರಯತ್ನ ಪಟ್ಟರು ಕೋಪ ಇಳಿಯಲೇ ಇಲ್ಲ. ಮತ್ತೆ ಊಟಕ್ಕೆ ಕುಳಿತ ಸಮಯದಲ್ಲಿ ಸಿಕ್ಕಾಪಟ್ಟೆ ತಿಂದು, ಅವಳನ್ನು ನಗಿಸಲು, ಈಗ ಹಸಿವೆ ಆಯಿತು ನೋಡು ಎಂದೆ. ದೇವರ ಗುಡಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಅವಳ ಬಾಯಲ್ಲಿ ಇರುವ ನೀರೆಲ್ಲಾ ಎದುರಿಗೆ ಕುಳಿತ ನನ್ನ ಮೇಲೆ. ಆದರೆ ಕೋಪ ಮಾತ್ರ ಇಳೀಲೆ ಇಲ್ಲ.

ಒಮ್ಮೆ ಅಮ್ಮ ಕರೆಯುತ್ತಾ ಇದ್ದಾಳೆ ಎಂದು ಮಗ ಹೇಳಿದ. ನಾನು ಒಳಗೆ ಹೋಗಿ ಕೇಳಿದೆ. ಅವಳು ಪೂರಿ ಹಾಗೆ ಮುಖ ಉಬ್ಬಿಸಿ, ಪೂರೀನೆ ಕರೆಯುತ್ತಾ ಇದ್ದಳು. ಉತ್ತರ ಮಾತ್ರ ಬರಲಿಲ್ಲ. ಮತ್ತೆ ಕೆಲ ಸಮಯದ ನಂತರ ಮಗ ಬಂದು ನಾನು, ನೀನು 'ಬು' ಹೋಗೋಣ. ಅಮ್ಮ ಬೇಡ ಅಂದ. ಅದಕ್ಕೆ ನಾನು ಪಾಪ ಅಮ್ಮನು ಬರಲಿ ಬಿಡು ಎಂದೆ. ನಿಮ್ಮ ಪಾಪ ಮತ್ತು ಸೀಮೆಎಣ್ಣೆ ಮಾಪ ಎರಡು ನಿಮ್ಮ ಬಳೀನೆ ಇಟ್ಟುಕೊಳ್ಳಿ ಎಂದು ಹೇಳಿದಳು.

ಸಂಜೆ ಟಿ ವಿ ಯಲ್ಲಿ ಬರುವ ಲಗೇ ರಹೊ ಮುನ್ನ ಭಾಯಿ ಚಲನ ಚಿತ್ರ ನೋಡುತ್ತಾ ಇದ್ದೇ. ಪ್ರತಿ ಬಾರಿ ಇದೆ ಸಿನೆಮಾ ನೋಡುತ್ತೀರಿ ಬೇರೆ ಹಚ್ಚಿ ಎಂದಳು. ಲೇ ಇದು ತುಂಬಾ ಸೈಂಟಿಫಿಕ್ ಮೂವೀ ಕಣೆ ಅದರಲ್ಲಿರುವ ನೀತಿ ಪಾಠ ನೋಡಿ ಕಾಲಿಬೇಕು ಎಂದೆ. ಅದೆಲ್ಲ ಗೊತ್ತಿಲ್ಲ ಅದು ಸಿನಿಮಾ ಅಷ್ಟೇ. ನೀವು ಹೇಳೋ ಹಾಗೆ ಆಗಿದ್ದರೆ ಅಡ್ವರ್ಟೈಸ್ಮೆಂಟ್ ನಲ್ಲಿ ಕ್ರೀಮ್ ,ಪೌಡರ್ ಹಚ್ಛ್ಕೊಂಡರೆ ನೌಕರಿ ಸಿಗುವುದು ಎಲ್ಲಾ ಆಗುತ್ತೆ ಅದೆಲ್ಲ ಖರೆ ಆಗುತ್ತಾ, ಸುಮ್ಮನೇ ಚೇಂಜ್ ಮಾಡಿ ಎಂದು ರಿಮೋಟ್ ಕಸಿದುಕೊಂಡು ಚೇಂಜ್ ಮಾಡಿದಳು.

ಮಗನಿಗೆ ಅಭ್ಯಾಸ ಮಾಡಿಸುವಾಗ ಪೆನ್ಸಿಲ್ ನೋಡಿ ಇದು ನಿಮ್ಮ ಅಪ್ಪನ ಹಾಗೆ ಮಂಡ ಇದೆ ನೋಡು ಎಂದು ಹೇಳಿ ನಗುತ್ತಲಿದ್ದಳು. ಮತ್ತೆ ತರಕಾರಿ ಹೆಚ್ಚುವಾಗ ಕೂಡ... ಇಳಿಗೆಗೆ.

ರಾತ್ರಿ ಊಟವಾದ ಮಲಗುವ ಸಮಯದಲ್ಲಿ ನಾನು ರೇಡಿಯೋ ಕೇಳುತ್ತಾ ನಿದ್ದೆ ಮಾಡುತ್ತಾ ಇದ್ದೇ. ಅದನ್ನು ನೋಡಿ ರೀ ಆ ರೇಡಿಯೋ ಆಫ್ ಮಾಡಿ ಎಂದಳು. ನೋಡು ರಿದಂ ಇದ್ದರೆ ಬೇಗನೆ ನಿದ್ದೆ ಬರುತ್ತೆ ಎಂದೆ.ಮಕ್ಕಳಿಗೆ ಮಲಗಿಸುವಾಗ ಕೂಡ ಒಂದೇ ರಿದಂನಲ್ಲಿ ಬಡಿದರೆ ಹೇಗೆ ನಿದ್ದೆ ಬರುತ್ತೆ ಹಾಗೆ ಎಂದೆ. ಬೇಕಾದರೆ ನೀನು ಟ್ರೈ ಮಾಡು ಎಂದೆ. ಅದೆಲ್ಲ ಬೇಡ ನಿಮ್ಮ ಗೊಡ್ಡು ಫೀಲಾಸಫೀ. ನೀವೇನೂ ಸ್ವಾಮಿಗಳಲ್ಲ. ನನಗೆ ಮಾತ್ರ ನಿದ್ದೆ ಬರಲ್ಲ ಆಫ್ ಮಾಡಿ ಅದನ್ನು ಎಂದು ಉಗಿದಳು.

ಅಷ್ಟರಲ್ಲಿ ಮಂಜನ ಫೋನ್ ಬಂತು, ಲೇ ಹ್ಯಾಪೀ ಅನಿವರ್ಸರಿ ಎಂದ. ನಾನು ಇವತ್ತ? ಎಂದು ಯೋಚಿಸಿದೆ. ಅದು ಮುಂದಿನ ತಿಂಗಳು ಎಂದು ನೆನಪು ಆಯಿತು. ಕ್ಯಾಲಂಡರ್ ನೋಡಿದೆ. ಮತ್ತೆ ಬೆಳಿಗ್ಗೆ ಮಡದಿ ಕೇಳಿದ್ದು ಅದೇ ಇರಬೇಕು ಎಂದು ಹೊಳಿತು. ತುಂಬಾ ಖುಶಿಯಿಂದ "ಒಲವೆ ಜೀವನ ಸಾಕ್ಷಾತ್ ಖಾರ" ಎಂದು ತಮಾಷೆಯಾಗಿ ಹಾಡುತ್ತಾ ಬಂದು. ಲೇ ಇವತ್ತಿನಿಂದ ಮುಂದಿನ ತಿಂಗಳು , ನಮ್ಮ ೬ ನೇ ವರ್ಷದ ವಿವಾಹ ವಾರ್ಷಿಕೋತ್ಸವ ಎಂದು ಹೇಳೋಕೆ ಹೋದೆ,ಆದರೆ ಆಗಲೇ ನಿದ್ದೆಗೆ ಜಾರಿದ್ದಳು....

5 comments:

  1. ಗೋಪಾಲ್ ಮಾ ಕುಲಕರ್ಣಿ ಸರ್ ನಿಮ್ಮ "ಒಲವೆ ಜೀವನ ಸಾಕ್ಷಾತ್ ಖಾರ" ಚೆನಾಗಿ ಮೂಡಿಬಂದಿದೆ.ಅಲ್ಲಾ ಸ್ವಾಮೀ ವಿವಾಹ ವಾರ್ಷಿಕೋತ್ಸವ ಮರೆತರೆ ಯಾರ ಜೀವನ ಸಾಕ್ಷಾತ್ ಖಾರ ಆಗಲ್ಲಾ ಹೇಳಿ.ಬರಹದಲ್ಲಿ ಹಾಸ್ಯ ಹೊಮ್ಮಿಸುವ ಕಲೆ ನಿಮಗೆ ಸಿದ್ದಿಸಿದೆ.ನಿಮ್ಮ ಬ್ಲಾಗ್ ಹಿಂಬಾಲಿಸುತ್ತಿದ್ದೇನೆ. ಬನ್ನಿ ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. ಗೋಪಾಲ್ ಸರ್,
    ನನ್ನ ಕಥೆಯೂ ಇದೇನೇ..... ಆ ದಿನ, ತಾರೀಖು ನೆನಪಿಡೊದು ಕಷ್ಟ ಸಾರ್...... ಈಗ ಮೊಬೈಲ್ ಫೋನ್ ನಲ್ಲಿ ರಿಮೈಂಡರ್ ಇಟ್ಟು ನೆನಪಿಡೊದು ರೂಡಿಯಾಗಿದೆ....ಹ್ಹ ಹ್ಹ ..

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು ಬಾಲು ಸರ್ :-))
    -------------------------------
    ಹಾ ಹಾ ಹ್ಹ ,ಧನ್ಯವಾದಗಳು ಮತ್ತು ವಂದನೆಗಳು ದಿನಕರ ಸರ್ :-)).

    ಬಾಲು ಸರ್,ದಿನಕರ ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ನಾನು ಚಿರಋಣಿ....

    ReplyDelete
  4. nanna kathenu heegene aayithu...
    avala bday marete bittidde... kadige attige phone maadi heliddaga nenapaagi avalige phone maadi wish maadide (ddelhi yalli obbane bandu seridde). aaga eriddu naalkaaru dina bekaayitu ililikke...

    ReplyDelete
  5. ಸೀತಾರಾಮ. ಕೆ. sir nija ..kalavu mukhya vishayaglannu maretubidutteve ...ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
    ಪ್ರೀತಿಯಿಂದ ಗೋಪಾಲ್

    ReplyDelete