Friday, September 24, 2010

ಹಲ್ಲುಕಿರಿ (ಹಲಕಾ ರೀ...)....ಎಂಬ ಕಿರಿ ಕಿರಿ

ಬೆಳಿಗ್ಗೆ ಬೇಗನೆ ಎದ್ದು, ಬಚ್ಚಲ ಮನೆಗೆ ಹಲ್ಲು ಉಜ್ಜಲು ಹೋದೆ. ನನಗಿಂತಲೂ ಬೇಗನೆ ಎದ್ದು ಚಿಕ್ಕ ಚಿಕ್ಕ ನೊರ್ಜಗಳು(ನೊಣಗಳು) ನನ್ನ ಟೂತ್ ಬ್ರಶ್ ನಿಂದ ಹಲ್ಲು ಉಜ್ಜುತ್ತಿದ್ದವು. ಈ ನೊರ್ಜಗಳಿಗೆ ನನ್ನ ಬ್ರಶ್ ಅಂದರೆ ಎಷ್ಟು ಪ್ರೀತಿ. ನನ್ನ ಬ್ರಶ್ ಬಳೀನೆ ಇಟ್ಟಿರುವ ನನ್ನ ಮಗನ ಮತ್ತು ಮಡದಿಯ ಬ್ರಶ್ ಬಿಟ್ಟು ನನ್ನ ಬ್ರಶ್ ಮೇಲೆ ಯಾಕೆ? ಕಣ್ಣು ಎಂದು ಮನಸಿನಲ್ಲೇ ಬೈದು ಬ್ರಶ್ ತೊಳೆದು ಹಲ್ಲು ಉಜ್ಜಿ ಬಂದೆ. ನನ್ನ ಮಡದಿ ಆಗಲೇ ಎದ್ದು ಸ್ನಾನ ಮುಗಿಸಿ ಶ್ರೀರಾಮ ರಕ್ಷಾ ಹೇಳುತ್ತಿದ್ದಳು. ನಾನೇ ಹೋಗಿ ಕಾಫೀ ಮಾಡಲು ಇಟ್ಟು ಪಡಸಾಲೆಗೆ ಬಂದು ಕುಳಿತೆ. ಅಷ್ಟರಲ್ಲಿ ನನ್ನ ಮಡದಿ ತನ್ನ ಎಲ್ಲ ಮಂತ್ರಗಳನ್ನು ಮುಗಿಸಿ ಬಂದು ನನಗೆ ಮಂಗಳಾರತಿ ಮಾಡಲು ಶುರು ಮಾಡಿದಳು. ರೀ ನೀವು ಹಲ್ಲು ಉಜ್ಜಿದ ಮೇಲೆ ಬ್ರಶ್ ಚೆನ್ನಾಗಿ ತೊಳೆಯುವದು ತಾನೇ ಹಾಗೆ ಸ್ವಲ್ಪ ಪೇಸ್ಟ್ ಇರುತ್ತೆ. ನೋಡಿ ಅದರಿಂದ ಎಷ್ಟು ನೊರ್ಜ ಬಂದು ಕೂಡುತ್ತವೆ, ನಿಮ್ಮ ಬ್ರಶ್ ಮೇಲೆ ಎಂದು ನನಗೆ ಬೈದಳು. ಅವಳಿಗೆ ಕೀಟಲೆ ಮಾಡಲೆಂದು, ಲೇ ನಾನು ಒಬ್ಬನೇ ಬ್ರಶ್ ಮಾಡಿದರೆ ಹೇಗೆ, ಪಾಪsss ಅವುಗಳು ನನ್ನ ಬ್ರಶ್ ನಿಂದ ಹಲ್ಲು ಉಜ್ಜಲಿ ಬಿಡು. ಎಲ್ಲರೂ ಶುಚಿಯಾಗಿ ಇದ್ದರೆ ತಾನೇ ಒಳ್ಳೆಯ ವಾತಾವರಣ ಸೃಷ್ಟಿ ಆಗುವದು. ಅವುಗಳು ಪೇಸ್ಟ್ ಎಲ್ಲಿಂದ ತರಬೇಕು ನನ್ನ ಅತ್ತೆ ಮನೆಯಿಂದನಾ? ಎಂದೆ. ಇಲ್ಲ ನನ್ನ ಮಾವನ ಮನೆಯಿಂದ ಎಂದು ಹುಸಿ ಕೋಪದಿಂದ ಅಂದಳು. ನೀವು ಹೀಗೆ ಮಾಡುತ್ತಾ ಇದ್ದರೆ ಒಳ್ಳೆಯ ವಾತಾವರಣ ಸೃಷ್ಟಿ ಆಗುವದಿಲ್ಲ ನಾಥಾವರಣ ಸೃಷ್ಟಿ ಆಗುತ್ತೆ ಎಂದಳು. ಏನೋ? ನಿನ್ನೆ ಆಫೀಸ್ ಹೋಗುವ ಆವಸರದಲ್ಲಿ ಹೀಗೆ ಆಯಿತು ನಾನೇನು ಬೇಕು ಅಂತ ಮಾಡುತ್ತೇನಾ? ಎಂದು ಅವಳಿಗೆ ಸಮಾಧಾನ ಮಾಡಿ ಕಾಫೀ ತೆಗೆದುಕೊಂಡು ಹೀರುತ್ತ ಕುಳಿತೆ.
ಹೇಗಿದ್ದರು ಪಕ್ಕದ ಮನೆ ಪೂಜ ಏಳುವದು ಲೇಟ್ ಎಂದು ನನಗೆ ಗೊತ್ತು. ಕಾಫೀ ಆದ ಮೇಲೆ ಪಕ್ಕದ ಮನೆ ಪೂಜ ತರಿಸುವ ಪೇಪರ್ ಬೇಗನೆ ಎದ್ದ ನಾನು ಹಾಗೆ ನೋಡಿ ಮತ್ತೆ ಅದೇ ಜಾಗದಲ್ಲಿ ಇಟ್ಟು ಬಂದು ಬಿಡುತ್ತಿದ್ದೆ. ಆದರೆ ಇವತ್ತು ಏನೋ ಗ್ರಹಚಾರ ಕೆಟ್ಟಿತ್ತು. ಪೇಪರ್ ತೆಗುದು ಕೊಂಡೆ, ಅಷ್ಟರಲ್ಲೇ ಪೂಜ ಬಾಗಿಲು ತೆಗೆದು ಬಿಟ್ಟಳು. ನಾನು ಪೇಪರ್ ಅವಳಿಗೆ ಕೊಟ್ಟು ಹಾಗೆ ಹಲ್ಲು ಕಿರಿದೆ. ಹಲ್ಲು ಕಿರಿದಿದ್ದು ನಾನೇ ಆದರೂ ಹಾವಿನಂತೆ ಬುಸುಗುಟ್ಟಿದ್ದು ಅವಳು.
ನನಗೆ ಕೋಪ ಬಂದಿತ್ತು. ಅವಳು ಬುಸುಗುಟ್ಟಿದ್ದಕ್ಕೆ ಅಲ್ಲವೇ ಅಲ್ಲ. ಅವಳು ಬುಸುಗುಟ್ಟಿದನ್ನು ನನ್ನ ಮಡದಿ ನೋಡಿದ್ದಕ್ಕೆ. ಈಗ ನಗುವ ಸರದಿ ನನ್ನ ಮಡದಿಯದು, ನಾನು ಎಷ್ಟು ಬಾರಿ ಹೇಳಿಲ್ಲ ಅವಳ ಪೇಪರ್ ನೋಡ ಬೇಡಿ ಎಂದು. ಮನೆಗೆ ಪೇಪರ್ ಹಾಕಿಸ ಬರದೇ ಎಂದು ಅಂದಳು. ಅದಕ್ಕೆ ವೇದಾಂತಿಯ ಹಾಗೆ ಅದಕ್ಕೆ ಹೇಳೋದು "ಪ್ರಥಮ ಚುಂಬನಮ್ ದಂತ ಭಗ್ನಮ್" ಎಂದು ಅಂದಳು. ಎಷ್ಟು ಚೆನ್ನಾಗಿ ನನ್ನ ಅರ್ಥ ಮಾಡಿಕೊಂಡಿದ್ದೀಯೆ ನನ್ನ ರಾಣಿ ಎಂದು ಗಹ ಗಹಿಸಿ ನಗಹತ್ತಿದೆ. ಅವಳಿಗೆ ಅರ್ಥ ಆಗಲಿಲ್ಲ. ಏನು ನಗುತ್ತೀರಾ?. ನಿಮ್ಮ ಹಳದಿ ಹಲ್ಲು ಕಾಣಿಸುತ್ತಾ ಇವೆ ನೋಡಿ ಎಂದಳು. ನಗಬೇಕಮ್ಮ ನಗಬೇಕು ಎಲ್ಲರ ನಗಿಸುತ ನಗಬೇಕು ....ಇದೆ ತಾನೇ ಜೀವನ. ನಗೋಕೆ ಬೇಕಾಗಿಲ್ಲ ನಗ-ನಾಣ್ಯ. ನಗದ ಮನುಷ್ಯನಿಗೆ ಏನೋ ದೊಡ್ಡ ಕಾಯಿಲೆ ಇದ್ದ ಹಾಗೆ ಗೊತ್ತಾ ಎಂದು ಹೇಳಿದೆ. ಡಾ ರಾಜ‍ಕುಮಾರ್ ಅವರ ಹಾಡು ಕೇಳಿಲ್ಲವಾ "ನಗು ನಗುತಾ ನಲಿ ನಲಿ" ಎಂದು.ಮತ್ತೆ ಡಿ.ವಿ.ಜಿ ಅವರು ಹೇಳಿಲ್ಲವೇ

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।

ನಾನು ಹಲ್ಲು ಕಿರಿದರು ಕೆಲ ಜನ ಅಪಾರ್ಥ ಮಾಡಿ ಕೊಳ್ಳುತ್ತಾರೆ. ನಾನು ಧಾರವಾಡದಲ್ಲಿ ಇರುವಾಗ ಹಾಗೆ ನಗುತ್ತಾ ದಾರಿಯಲ್ಲಿ ಬರುತ್ತಿದ್ದೆ. ಆಗ ಪಕ್ಕದ ಬೀದಿಯ ಸುನೀತ ನನ್ನನ್ನೇ ನೋಡಿ ನಗುತ್ತಿದ್ದಾನೆ ಎಂದು ಭಾವಿಸಿ, ಅವರ ಅಪ್ಪನನ್ನು ಕರೆದು "ನೋಡು ಅಪ್ಪ ಆ ಹುಡುಗ ನನ್ನ ನೋಡಿ ಹಲ್ಲು ಕಿರಿಯುತ್ತಿದ್ದಾನೆ" ಎಂದು ಹೇಳಿದ್ದಳು. "ಏನೋsss ಹಲಕಾ ನನ್ನ ಮಗಳ ನೋಡಿ ಹಲ್ಲು ಕಿರಿತಿ" ಎಂದು ಬೈದು ಬಿಟ್ಟಿದ್ದ. ಹಲ್ಲು ಕಿರಿದು ಹಲಕಾ ಎಂದು ಬೈಸಿ ಕೊಂಡುವನು ನಾನೇ ಮೊದಲನೆಯವನು. ಏನು ನಿಮ್ಮ ಮಗಳು ಏನು ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಮಂಗವೊ ಎಂದು ಕೇಳಬೇಕೆಂದು ಕೊಂಡರು ಕೇಳಲಿಲ್ಲ. ಮುಂದೆ ಕೆಲ ದಿನಗಳ ನಂತರ ಬ್ಯಾಡರ ಒಣಿ ಉಡಾಳ್ ರಾಜಾ ಜೊತೆ ಅಲ್ಲೇ, ಇಲ್ಲೇ ಹಲ್ಲು ಕಿರೀತಾ ತಿರುಗುತ್ತಾ ಇದ್ದಳು ಸುನೀತ.
ಪಾರ್ಕ್ ನಲ್ಲಿ ಕೆಲವರು ಮುಂಜಾನೆ ಎದ್ದ ಕೂಡಲೇ ಹ್ಹ ಹ್ಹ ಹ್ಹ ಎಂದು ನಗುವ ವ್ಯಾಯಾಮ ಮಾಡುತ್ತಾರೆ.ಆದರೆ ಉಳಿದ ಸಮಯದಲ್ಲಿ ಮಾತ್ರ ಮುಖ ಸಿಂಡರಿಸಿಕೊಂಡೆ "ಆನೆ ದಂತ ತೋರಿಸೋಕೆ ಬೇರೆ , ತಿನ್ನೋಕೆ ಬೇರೆ" ತರಹ ಇರುತ್ತಾರೆ. ಅದನ್ನು ನೋಡಿ ನಮ್ಮ ಬೀದಿ ನಾಯಿ ಓsss....ಎಂದು ತಾನು ನಗುತ್ತದೆ ಕ್ಷಮಿಸಿ ಅಳುತ್ತದೆ.

ನಿಮಗೆ ಕೆಲಸದಲ್ಲಿ ಸೀರೀಯಸ್ ನೆಸ್ ಸ್ವಲ್ಪಾನೂ ಇಲ್ಲ ಎಂದು ನಾನು ಹಳೆಯ ಕಂಪನೀಯ ಬಾಸ್ ಬಳಿ ಬೈಸಿಕೊಂಡಿದ್ದು ಎಷ್ಟು ಬಾರಿ ನನಗೆ ಲೆಕ್ಕವಿಲ್ಲ. ಸೀರೀಯಸ್ ಆಗಿ ಕೆಲಸ ಮಾಡಿದರೆ ಪರಿಣಾಮ ಚೆನ್ನಾಗಿ ಇರುತ್ತೆ ಎನ್ನುವ ನಂಬಿಕೆ ನನಗೆ ಇಲ್ಲ. ಅದು ನಮ್ಮ ಬಾಸ್ ಹೇಗೆ ತಿಳೀಬೇಕು. ಗೂಬೆ ಮುಂಡೇದು ಯಾವತ್ತೂ ಮುಖ ಸಿಂಡರಿಸಿಕೊಂಡೆ ಇರುತಿತ್ತು ಎಂದೆ. ನನ್ನ ಹಳೆಯ ಪೂರಾಣವನ್ನು ಕೇಳಿ ಒಂದು ಮುಗುಳ್ನಗೆ ಬೀರಿ ಅಡುಗೆ ಮನೆಗೆ ಹೊರಟು ಹೋದಳು ನನ್ನ ಮಡದಿ.

ಲೇ ಇವತ್ತು ಡ್ರಮ್ ಸ್ಟಿಕ್ ಹಾಕಿ ಸಾಂಬಾರ್ ಮಾಡೇ ಎಂದೆ. ಡ್ರಮ್ ಹಾಕಿ ಚಿಕ್ಕ ಪಾತ್ರೆಲಿ ಸಾಂಬಾರ್ ಮಾಡೋಕೆ ಬರಲ್ಲ. ಬೇಕಾದರೆ ನೀರು ಕಾಯಿಸಲು ಇಟ್ಟ ಸ್ಟಿಕ್ ಹಾಕಿ ಮಾಡುತ್ತೇನೆ ಎಂದು ತರಲೆ ಮಾತು ಆಡಿದಳು.ಅದು ಬೇರೆ ನಿಮಗೆ ಸಾಂಬಾರ್ ನಾಳೆ ಬಿಸಿ ಬೇಳೆ ಬಾತ್ ಮಾಡೋಕ್ಕೆ ಬೇಕಾಗುತ್ತೆ ಎಂದಳು.

ಲೇ ಸ್ವಲ್ಪ ಬಿಸಿಲು ಕಾಯಿಸೋಕೆ ಹೋಗುತ್ತೇನೆ ಎಂದೆ. ಬಿಸಿಲು ನೀವೇನೂ ಕಾಯಿಸೋದು ಮೊದಲು ನೀರು ಕಾಯಿಸಿ ಎಂದಳು. ಅವಳು ಹೇಳಿದ ಮಾತು ಕೇಳಿ ನನ್ನ ಗೆಳೆಯ ಹೇಳುವ " ಆಜ್ ಧೂಪ್ ಖಾನಾ ಹೈ" ಎಂಬ ಮಾತು ನೆನಪು ಆಯಿತು. ಅವನು ಬಿಸಿಲು ಹೇಗೆ ತಿನ್ನುತ್ತಾನೆ ಎಂದು.

4 comments:

  1. "ಆನೆ ದಂತ ತೋರಿಸೋಕೆ ಬೇರೆ , ತಿನ್ನೋಕೆ ಬೇರೆ" ಚೆನ್ನಾಗಿದೆ... :-)

    ReplyDelete
  2. ದಿನನಿತ್ಯದ ಮನೆಯಲ್ಲಿನ ಸರಸ ವಿರಸಗಳನ್ನ ಸ್ವಾರಸ್ಯಗಳನ್ನ ನವಿರು ಹಾಸ್ಯಗಳ ಲೇಪನದಲ್ಲಿ ತೀಡಿ ಇಡುವ ನಿಮ್ಮ ಲೇಖನಗಳು ಓದುಗರಿಗೆ ಖುಷಿ ನೀಡುತ್ತವೆ.

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete