Tuesday, September 21, 2010

ಸ್ಪೆಶಲ್ ತಿಂಡಿ....

ನಮ್ಮ ನಾಟಿ ವೈದ್ಯರ ಕೃಪಾ ಕಟಾಕ್ಷ(ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....), ಕ್ಷಮಿಸಿ ಕಾಟದಿಂದ ನನ್ನ ಇದ್ದ ಎಲ್ಲ ಬಿಳಿ ಕೂದಲುಗಳು ಉದುರಿ ಬರಿ ಕರಿ ಕೂದಲುಗಳು ಉಳಿದಿದ್ದವು. ಇದ್ದ ಕರಿ ಕೂದಲುಗಳು ತುಂಬಾ ದೂರ ದೂರ ಗುಂಪು ಗುಂ‌ಪಾಗಿ ಇದ್ದವು. ಕೆಲವರು ನನ್ನನ್ನು ಅರ್ಚಕ ಎಂದು ತಿಳಿದು ಕೇಳಿದ್ದು ಉಂಟು. ಮತ್ತೆ ಕೆಲವರು ಏನಪ್ಪಾ ಈಗ ಮುಂಜಿವೆ ಆಯಿತಾ ಮದುವೆ ಆದ ಮೇಲೆ ಎಂದು ನನ್ನ ಕೆಲ ಮಿತ್ರರು ಅಪಹಾಸ್ಯ ಮಾಡಿದ್ದು ಉಂಟು. ಸಧ್ಯ ಯಾರು ಈಗ ಜವಳ ಆಯಿತಾ ಎಂದು ಕೇಳಲಿಲ್ಲ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಇದ್ದ ಕರಿ ಕೂದಲುಗಳನ್ನು ಉದ್ದವಾಗಿ ಬೆಳಸಿ, ಅದರಿಂದ ನನ್ನ ತಲೆಯಲ್ಲಿ ಇದ್ದ ಖಾಲಿ ಜಾಗಗಳನ್ನೂ ತುಂಬಿದ್ದೆ. ನಿಮಗೆ ಗೊತ್ತೇ ಇದೆ, ಬೆಂಗಳೂರಿನಲ್ಲಿ ಖಾಲಿ ಜಾಗ ಇದ್ದರೆ ತೊಂದರೆ ಏನು ಎಂದು(ಯಾರಾದರೂ ಸೈಟ್ ಮಾಡಿ ಮಾರಿದರೆ ಕಷ್ಟ ಎಂದು:)). ನನಗೆ ಖುಷಿಯೋ ಖುಷಿ ನನ್ನ ತಲೆಯಲ್ಲ ಕರಿ ಕೂದಲು ಎಂದು. ಆದರೆ ಗಡ್ಡ ಮತ್ತು ಮೀಸೆ ಮಾತ್ರ ಬಿಳಿ ಬಿಳಿಯಾಗೆ ಇದ್ದವು. ಅವುಗಳಿಗೂ ಮುಕ್ತಿ ಕೊಡಬೇಕು ಎಂದು, ಆ ನಾಟಿ ವೈದ್ಯರ ಔಷಧಿ ಹಚ್ಚಿ ಮಲಗಿದೆ. ಅವು ಹೋದರೆ ತುಂಬಾ ಚೆನ್ನಾಗಿ ಕಾಣುತ್ತೇನೆ ಎಂದು ಯೋಚಿಸಿದೆ. ರಾತ್ರಿಯೆಲ್ಲ ತಿಂಡಿ(ಕೆರೆತ) ಶುರು ಆಗಿತ್ತು. ಮರುದಿನ ಬೆಳಿಗ್ಗೆ ಶೆವಿಂಗ್ ಮತ್ತು ಸ್ನಾನ ಮುಗಿಸಿ ಬಂದಾಗ ಮುಖವೆಲ್ಲ ಕೆಂಪು ಕೆಂಪು. ರಾತ್ರಿಯೆಲ್ಲ ತಿಂಡಿ ಬಿಟ್ಟಿತ್ತು. ನನ್ನ ಮಡದಿ ಅದನ್ನು ನೋಡಿ, ರೀ ಇದೇನು ಮುಖ ಎಂದಳು. ಏನು ಇಲ್ಲ, ದಾಡಿ ಮಾಡಿಕೊಂಡಿದ್ದೇನೆ ಎಂದು ಸುಳ್ಳು ಹೇಳಿದೆ. ಏನು? ಈಳಿಗೆ ತೆಗೆದು ಕೊಂಡು ದಾಡಿ ಮಾಡಿಕೊಂಡಿರಾ ಎಂದು ಅಪಹಾಸ್ಯ ಮಾಡಿದಳು. ಕಡೆಗೆ ಸುಮ್ಮನಿರಲಾರದೇ ಆ ನಾಟಿ ವೈದ್ಯರ ಔಷಧಿ ಹಚ್ಚಿ ಕೊಂಡೆ ಎಂದು ಸತ್ಯ ನುಡಿದೆ. ರೀ ನೀವು ನಿಮ್ಮ ಜನ್ಮದಲ್ಲೂ ಆ ಔಷಧಿ ಮುಟ್ಟುವದಿಲ್ಲ ಎಂದು ಹೇಳಿದ್ದರಿಂದ ನಾನು ಅದನ್ನು ಖಾಲಿ ಮಾಡಿ, ಅದರಲ್ಲಿ ಶಾಂತಮ್ಮ ಕೊಟ್ಟ ಬೆಳ್ಳಿ ಪಾತ್ರೆ ತೊಳೆಯೋ ಲಿಕ್ವಿಡ್ ಹಾಕಿ ಇಟ್ಟಿದ್ದೆ ಎಂದಳು. ಸರಿ ಹೋಯಿತು ಬಿಡು ಎಂದು ನನ್ನ ತಲೆ ನಾನೇ ಜಜ್ಜಿಕೊಂಡೆ.

ಕಡೆಗೆ ಏನಾದರೂ ಸ್ಪೆಶಲ್ ತಿಂಡಿ ಮಾಡೇsss ಎಂದು ನನ್ನ ಮಡದಿಗೆ ಹೇಳಿದೆ. ನೀವು ಆಗಲೇ ಮಾಡಿ ಮುಗಿಸಿದ್ದೀರ ಎಂದು ಕೀಟಲೆ ಮಾತು ಆಡಿದಳು. ನೀವು ಈಗ ಹೇಳಿದರೆ ಹೇಗೆ?. ಮೊದಲೇ ಹೇಳಬೇಕು ಏನಾದರೂ ಮಾಡುತ್ತಿದ್ದೆ ಎಂದಳು. ಉಪ್ಪಿಟ್ಟು ರೆಡಿ ಮಾಡಿ ಆಗಿದೆ ತಿನ್ನಿ ಎಂದಳು. ಈ ಭಾನುವಾರ ಕೂಡ ಉಪ್ಪಿಟ್ಟು ಎಂದು ಮುಖ ಕಿಚಾಯಿಸಿದೆ. ಏನಾದರೂ ಹೊಟೆಲ್ ನಿಂದ ತರುತ್ತೇನೆ ಎಂದು ಹೇಳಿದೆ. ನನ್ನ ಮಡದಿಗೆ ಹೊಟೆಲ್ ಎಂಬ ಶಬ್ದ ಕೇಳಿ ತುಂಬಾ ಕೋಪ ಬಂದಿತ್ತು. ನೋಡಿ ಪಕ್ಕದ ಮನೆ ಪೂಜ ದಿನಾಲೂ ತಾನೇ ಮಾಡಿಕೊಂಡು ತಿನ್ನುತ್ತಾಳೆ ಹೊಟೇಲಿಗೆ ಹೋಗಿರೋದೇ ನೋಡಿಲ್ಲ ಎಂದಳು. ನನಗೆ ಕೂಡ ಹೊಟೆಲ್ ಹೋಗುವ ಇಷ್ಟ ಇಲ್ಲ, ಆದರೆ ಪೂಜ ತಾನು ಮಾಡಿದ ತಿಂಡಿ ನನಗೆ ಕೊಡಬೇಕಲ್ಲ ಎಂದೆ. ಇದು ಒಂದು ಬಾಕಿ ಇತ್ತು ಎಂದು, ನನ್ನ ಮಡದಿ ಕೋಪದಿಂದ ಅಡುಗೆ ಮನೆಗೆ ಹೊರಟು ಹೋದಳು.

ಅವಳನ್ನು ರಮಿಸಲು ಅಡುಗೆ ಮನೆಗೆ ಹೋದೆ. ಹೆಂಡತಿ ತನ್ನ ಓಘ ಬದಲಿಸಿ ಕೋಪದಿಂದ ಅಂದಳು .

ಮದುವೆ ಆಗಿ ಆಯಿತು ಐದು ವರ್ಷ
ಇನ್ನೂ ಕಾಣಲಿಲ್ಲ ಹೊಸ ಮನೆ ಹರ್ಷ

ನಾನು ಕೇಳುದ್ದು ಬರಿ ತಿಂಡಿ ಮಾತ್ರ ಎಂದು ಅವಳನ್ನು ಒಲಿಸುವ ಸಲುವಾಗಿ ಅಂದೆ...

ನನ್ನ ಹೃದಯ ಅರಮನೆ ಬೇಡವಾಗೀತೆ ಚಿನ್ನ
ಅದರಲ್ಲಿ ಇಟ್ಟು ಆರಾಧಿಸುವೆ ಅನುದಿನವೂ ನಿನ್ನ

ಚಿನ್ನ.. ರನ್ನ.. ಎಂದು ಮಸ್ಕಾ ಹೊಡೆದಿದ್ದು ಸಾಕು. ನಾನು ಹೋಗಿ ಏನಾದರೂ ತಿಂಡಿ ಮಾಡಿ ತರುತ್ತೇನೆ ಎಂದು ಅಡುಗೆ ಮನೆಗೆ ಹೊರಟು ಹೋದಳು. ನಾನು ಠೀವಿ ಇಂದ ಹೊರಬಂದು ಟಿ.ವಿ. ರಿಮೋಟ್ ತಿವಿದೆ. ಕೆಲ ಸಮಯದ ನಂತರ ನನಗೆ ಎಂದು ನನ್ನ ಮಡದಿ ಬಿಸಿ ಬೇಳೆ ಬಾತ್ ಮಾಡಿ ತಂದಳು. ತುಂಬಾ ಚೆನ್ನಾಗಿ ಇತ್ತು. ನನ್ನ ಹೆಂಡತಿಗೆ ಕೇಳಿದೆ ಇಷ್ಟು ಬೇಗ ತುಂಬಾ ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಹೋಗಳಿದೆ. ನನ್ನ ಮಡದಿ ಹಿರಿ ಹಿರಿ ಹಿಗ್ಗಿದ್ದಳು. ಅವಳನ್ನು ಇಂಪ್ರೆಸ್ ಮಾಡುವ ಸಲುವಾಗಿ ನಾನೇ ನೆಲವನ್ನು ಕ್ಲೀನ್ ಮಾಡಿದೆ. ಅಷ್ಟರಲ್ಲಿ ನನ್ನ ಮಡದಿ ನೀವು ಹೀಗೆ ಕ್ಲೀನ್ ಮಾಡಿದರೆ ನಾನು ಆ ತುದಿಗೆ ಹೋಗಬೇಕೆಂದರೆ ಒಂದು ದೋಣಿ ಬೇಕಾಗುತ್ತೆ ಎಂದು ತಮಾಷೆ ಮಾಡಿದಳು. ಏಕೆಂದರೆ ನಾನು ಅಷ್ಟು ನೀರು ಹಾಕಿ ಒರೆಸಿದ್ದೆ.

ಆಗ ನನ್ನ ಮಡದಿ ರೀssss... ಎಂದು ರಾಗ ಎಳೆಯ ತೊಡಗಿದಳು. ಏನು? ಎಂದಾಗ. ಶೆಟ್ಟರ ಅಂಗಡೀಲಿ ಒಂದು ಹೊಸ ಸೀರೆ ಬಂದಿದೆ. ನನಗೆ ಕೊಡಿಸಿ ಎಂದು ಹಟ ಹಿಡಿದಳು. ಆಯಿತು ನೀನು ಇಷ್ಟು ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಸಂಜೆಗೆ ಅವಳಿಗೆ ಸೀರೆ ಕೊಡಿಸಿಕೊಂಡು ಬರುವ ದಾರಿಯಲ್ಲಿ ಗೋಪಾಲನ್ ಮಾಲ್ ನೋಡಿದಳು. ರೀ ಗೋಪಾಲನ್ ಮಾಲ್ ಗೆ ಹೋಗೋಣ ಎಂದಳು. ಅದನ್ನು ಕೇಳಿ ನನ್ನ ಮಗ ಜೋರಾಗಿ ನಗಹತ್ತಿದ. ಅವನ ನಗು ನೋಡಿ ನಾವು ಕೂಡ ನಕ್ಕೆವು. ಕಡೆಗೆ ಗೋಪಾಲನ್ ಮಾಲ್ ಗೆ ಕರೆದು ಕೊಂಡು ಹೋಗಿ ಈ ಗೋಪಾಲನ ಕಿಸಿಯಲ್ಲಿರುವ ೧೦೦೦ ಮಾಲ್(ರೂ.) ಖಾಲಿ ಮಾಡಿ ಮನೆಗೆ ಬಂದೆವು.

ಅನಂತರ ಮನೆಗೆ ಬಂದ ಮೇಲೆ ನಿಮಗೆ ಒಂದು ವಿಷಯ ಗೊತ್ತಾ?. ನಾನು ಬೆಳಿಗ್ಗೆ, ನಿನ್ನೆ ಉಳಿದಿರೋ ಸಾರು,ಪಲ್ಯ ಮತ್ತು ಅನ್ನ ಹಾಕಿ ಬಿಸಿ ಬೇಳೆ ಬಾತ್ ಮಾಡಿದ್ದು ಎಂದಳು. ಹೇಗಿದೆ ನನ್ನ ಸ್ಪೆಶಲ್ ತಿಂಡಿ ಎಂದು ಹುಬ್ಬು ಹಾರಿಸಿದಳು.

ನಾನು ಫ್ರಿಡ್ಜ್ ಕಂಡು ಹಿಡಿದ ಮಹಾಶಯನಿಗೆ ಹಿಡಿ ಶಾಪ ಹಾಕಿದೆ. ಆದರೂ ಮಡದಿ ಮಾಡಿದ ಹೊಸ ರುಚಿ ಬಿಸಿ ಬೇಳೆ ಬಾತ್ ಚೆನ್ನಾಗೆ ಇತ್ತು. ಆದರೆ ಎರಡೆರಡು ಸ್ಪೆಶಲ್ ತಿಂಡಿ ತಿಂದ ನನಗೆ ಅವಳು ಮಾಡಿದ ಬಿಸಿ ಬೇಳೆ ಬಾತ್ ತಿನ್ನುವಾಗ ಮಾತ್ರ ಕಪಾಳ ಮತ್ತು ಗದ್ದ ಉರಿಯುತಿತ್ತು.

5 comments:

  1. ಹಹಹ... ತಿಂಡಿಯ ಸಿ(ಕ)ಹಿ ಮಜವಾಗಿದೆ....

    ReplyDelete
  2. ಸಕತ್ತಾಗಿದೆ ಸರಸ ಸಲ್ಲಾಪ..ಗೋಪಾಲ್ ಸರ್. ಧಾರವಾಡ್ ಮ೦ದಿ...ಅ೦ದೀರಿ...ನಿಮ್ಮ ಆಕ್ಸೆ೦ಟ್ ನಾಗೇ ಬರೀರಲಾ..ಓದ್ಲಿಕ್ ಛಲೋ ಇರ್ತದ..!

    ಶುಭಾಶಯಗಳು
    ಅನ೦ತ್

    ReplyDelete
  3. ಧನ್ಯವಾದಗಳು ಮೇಡಂ ಮತ್ತು ಅನಂತರಾಜ್ ಸರ್.
    ಖಂಡಿತ ಧಾರವಾಡ ಭಾಷೆಯಲ್ಲಿ ಬರೆಯಲು ಪ್ರಯತ್ನಿಸುವೆ.

    ReplyDelete
  4. ಗೋಪಾಲರೆ ತಮ್ಮ ಮಡದಿಯ ಸುತ್ತ ಹರಿವ ತಮ್ಮ ಲೇಖನಗಳು ಮಧ್ಯಮವರ್ಗದ ಕುಟುಂಬದ ಕೈಗನ್ನಡಿಗಳು. ತುಂಬಾ ಕುಶಿಯಾಗುತ್ತೆ. ನಮ್ಮದೆ ಅನ್ನುವಷ್ಟು ಆಪ್ತತೆಯಲ್ಲಿವೆ ಬರಹಗಳು.

    ReplyDelete
  5. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ತಮ್ಮ ಆಪ್ತತೆಗೆ ನಾನು ಶಿರಸಾ ನಾಮಾಮೀ.

    ReplyDelete