Monday, December 7, 2009

ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....

ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹೋಗದೇ ಆ ಸಂಜೆ ನೀಲಾಕಾಶ ನೋಡುತ್ತಾ ಕುಳಿತು ಬಿಟ್ಟೆ. ಆ ಸಂಜೆ ಆಕಾಶದ ಮೇಲೆ ಮೂಡಿರುವ ಛಾಯಾ ಚಿತ್ತಾರ ಅದೇನೋ ಒಂದು ಸುಮಧುರವಾದಂತ ಭಾವನೆಯನ್ನು ಮೂಡಿಸುತ್ತಿತ್ತು. ನೀಲಾಕಾಶದಲ್ಲಿ ಬರೆದಿರುವ ಬಿಳಿ ರಂಗೋಲಿ ಮನಸಿಗೆ ತುಂಬಾ ಮುದ ನೀಡುತಿತ್ತು. ಆ ಬಿಳಿ ಮೋಡಗಳ ಹಿಂದೆ ದೇವರು ಇರಬಹುದಾ? ಎಂಬ ಭಾವನೆ ಆಗಾಗ ಮೂಡುತ್ತಿತ್ತು. ದೇವರದೇ ಒಂದು ಸಾಮ್ರಾಜ್ಯ ಇರಬಹುದಾ?. ನಾವು ಓದಿರುವ ರಾಜ ಮಹಾರಾಜರ ಕಥೆಯ ಹಾಗೆ ತನ್ನದು ಒಂದು ಆಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿರಬಹುದಾ?. ಎಂಬ ಪ್ರಶ್ನೆಗಳನ್ನು ಮೆಲಕು ಹಾಕುತ್ತ ಕುಳಿತ್ತಿದ್ದೆ. ಸಂಜೆಯಾಗುತ್ತಲೇ ಆಗ ತಾನೆ ಇಣುಕುತ್ತಿರುವ ತಾರೆಗಳನ್ನು ವೀಕ್ಷಿಸುತ್ತಿದ್ದರೆ ಅದೇನೋ ಒಂದು ಮಹದಾನಂದ. ನಾನು ಇಷ್ಟೊಂದು ಆಳವಾಗಿ ಯೋಚಿಸಿಯೇ ಇರಲಿಲ್ಲ. ಆಗ ದೇವರು ಮುಂದೆ ಪ್ರತಕ್ಷ್ಯವಾದರೆ ಏನು ವರ ಕೇಳುವದು ಎಂಬ ಪ್ರಶ್ನೆಗೆ ನನ್ನ ನೇರವಾದ ದಿಟವಾದ ಉತ್ತರ "ಶಾಲೆ ಎಂಬುದೇ ಇರಬಾರದು" ಹಾಗೆ ಮಾಡು ಎಂದು.

ಆಗ ದೇವರು ಪ್ರತ್ಯಕ್ಷವಾಗಲಿಲ್ಲವಾದರೂ ಪ್ರತ್ಯಕ್ಷವಾಗಿದ್ದು ಮಂಜ ಮತ್ತೆ ಮನೋಜ. ಮಂಜನ ಮುಖದಲ್ಲಿ ಏನೋ ಕಸಿವಿಸಿ. ಮನೋಜ ಬಂದವನೇ "ಲೇ ಇವತ್ತು ಒಬ್ಬ ಹೊಸ ವಿದ್ಯಾರ್ಥಿ ನಮ್ಮ ಶಾಲೆಗೆ ಸೇರಿದ್ದಾನೆ ಕಣೋ" ಎಂದ. ಅವನ ಹೆಸರು ವಿಳಾಸ ಎಂದ.

ಅದಕ್ಕೆ ನಾನು ಮತ್ತೆ ಮಂಜ ಜೋರಾಗಿ ನಕ್ಕೆವು.

ಲೇ ಅದು ವಿಳಾಸ ಅಲ್ಲ ಕಣೋ ವಿಲಾಸ ಎಂದ ಮಂಜ.

ಏನೇ ಆಗಲಿ ಮಗ ಅವನಿಗೆ ಸರಿಸಾಟಿ ಯಾರು ಇಲ್ಲ ಎಂದು ಮನೋಜ ಹೊಗಳುತಿದ್ದ. ಅವ ಎಲ್ಲದರಲ್ಲೂ ನ೦ ೧ ಎಂದ . ಮಾಸ್ಟರ್‌ಗೆ ಪ್ರಶ್ನೆಹಾಕಿ ಪೇಚಿಗೆ ಬೀಳಿಸಿದ್ದ ಕಣೋ. ಮತ್ತೆ ಗೋಳಿ ಆಟದಲ್ಲೂ ಎಕ್ಸ್‌ಪರ್ಟ್ ಎಂದ.

ಅವನ ವರ್ಣನೆ ಕೇಳಿ ಮಂಜ ಮಾತ್ರ ಉರಿದುಬೀಳುವ ಹಾಗೆ ಮುಖ ಮಾಡಿದ್ದ.

ಆಗ ನಾನು ಹೌದೆನೋ ಮಂಜ ಎಂದು ಕೇಳಿದೆ.

ಅದಕ್ಕೆ ಮಂಜ ಈಗ ಮೊದಲನೆ ದಿವಸ ಮುಂದೆ ನೋಡೋಣ ಇವನ ಪ್ರತಾಪ ಎಂದ.

ಅದಕ್ಕೆ ಮನೋಜ "ಲೇ ಸುಮ್ನೇ ಹೊಟ್ಟೆ ಉರ್ಕೋ ಬೇಡ" ಅವ ಭಾಳ ಶ್ಯಾಣ್ಯ ಎಂದ.

ಇರಲಿ ಇರಲಿ ಎಂದು ಮಂಜ ಮನೆಗೆ ಹೋಗಿಬಿಟ್ಟ . ಮನೋಜ ಮಾತ್ರ ರಾತ್ರಿ ಪೂರ್ತಿ ಅವನ ವರ್ಣನೆ ಮಾಡಿದ್ದ. ನನಗು ಮರುದಿನ ಅವನನ್ನು ನೋಡುವ ಮತ್ತೆ ಗೆಳೆತನ ಬೆಳೆಸುವ ಆಸೆಯಾಗಿತ್ತು.

ಮರುದಿನ ಶಾಲೆಗೆ ಯಾವದೆ ತಕರಾರು ಇಲ್ಲದೇ ಶಾಲೆಗೆ ಹೊರಟು ನಿಂತಿದ್ದು ನೋಡಿ ಅಪ್ಪ ನನ್ನನ್ನು ನೋಡಿ ನಕ್ಕೂ ಆಶ್ಚರ್ಯದಿಂದ "ಏನ ರಾಜ ಮತ್ತೆ ಹೇಗಿದೆ? ನಿನ್ನ ಹೊಟ್ಟೆ ನೋವು ಎಂದು" ಕೇಳಿದರು.

ನಾನು ಇಲ್ಲ ಎಂದು ಗೋಣು ಆಡಿಸಿ ಶಾಲೆಗೆ ಹೋದೆ. ಮತ್ತೆ ನಾನು ಮನೋಜ ಎಲ್ಲರೂ ಮಂಜನ ಹಿಂದೆ ಬಿಟ್ಟು ವಿಲಾಸ್ ಹಿಂದೆ ಬಿದ್ದೆವು. ಮಂಜ ಮಾತ್ರ ಒಬ್ಬನೇ ಆಗಿಬಿಟ್ಟ. ಮಂಜ ಒಬ್ಬನೇ ಆದರೂ ವಿಲಾಸ್ ಬಗ್ಗೆ ತಿಳಿದು ಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದ. ಅದು ನಮಗೆ ಕಂಡರು ನಾವು ಸುಮ್ಮನೇ ಇದ್ದೆವು. ಒಂದು ದಿನ ಮಂಜ ವಿಲಾಸನನ್ನು ಹಿಂಬಾಲಿಸುತ್ತಿದ್ದ. ಆಗ ವಿಲಾಸನಿಗೆ ಒಂದು ಹಾವು ಸಿಕ್ಕಿದೆ ಅದನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ಹೆದರಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದ. ನಾವೆಲ್ಲರೂ ತುಂಬಾ ಹೆದರಿದ್ದೆವು. ಮಂಜ ಅವನನ್ನು ಮನೆಯವರಿಗೂ ಹಿಂಬಾಲಿಸಿದ. ಆಗ ಆ ಹಾವು ಹಿಂದೆ ತಿರುಗಿ ವಿಳಾಸನ ಹೆಬ್ಬರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು. ವಿಳಾಸ ಎಷ್ಟೇ ತಡಕಾಡಿದರು ಕೈ ಬಿಡಲಿಲ್ಲ.

ಆಗ ಇದೆ ಅವಕಾಶ ಕಾಯುತಿದ್ದ ಮಂಜ ಅವನಿಗೆ ಕಡೆ ಹೋಗಿ "ನಾನು ಬಿಡಿಸುತ್ತೇನೆ" ಎಂದು ಹೇಳಿ ಅವನನ್ನು ಪೂರ್ತಿ ಶಾಲೆಯಲ್ಲಾ ತಿರುಗಿಸಿ ಅವನ ಪ್ರತಾಪವನ್ನು ಎಲ್ಲರಿಗೂ ತೋರಿಸಿಬಿಟ್ಟಿದ್ದ.

ಆಗ ನಮ್ಮ ಮಾಸ್ಟರ್‌ ಇವನಿಗೆ "ಲೇ ಒಂದು ವರ್ಷ ಫೈಲಾಗಿ ಇಲ್ಲಿ ಬಂದು ಮತ್ತೆ ಅದೇ ವರ್ಸೆ ಹಚ್ಚಿ ಕೊನ್ಡಿದ್ದಿಯ ಎಂದು" ಉಗಿದಿದ್ದರು.

ಕಡೆಗೆ ಮಂಜ ಒಬ್ಬ ಹವಾಡಿಗನ ಹತ್ತಿರ ಕರೆದುಕೊಂಡು ಹೋಗಿ ಅವನನ್ನು ಹಾವಿನಿಂದ ಮುಕ್ತ ಗೊಳಿಸಿದ್ದ. ಮಂಜನಿಗೆ ಎಲ್ಲಿಲ್ಲದ ದಿಗ್ವಿಜಯ ಸಾಧಿಸಿದ ಹಾಗೆ ಹಿರಿ ಹಿರಿ ಹಿಗ್ಗಿದ್ದ. ಮತ್ತೆ ನಾವೆಲ್ಲರೂ ಸಾವಕಾಶವಾಗಿ ಮಂಜನಿಗೆ ಹತ್ತಿರವಾಗ ತೊಡಗಿದೆವು.

ಇಷ್ಟೆಲ್ಲಾ ಆದರೂ ತನ್ನ ಹೆರೆತನದ ಬುದ್ಧಿಮಾತ್ರ ಬಿಟ್ಟಿರಲಿಲ್ಲ ವಿಲಾಸ. ಮತ್ತೊಂದು ದಿನ ಒಬ್ಬ ಪೋಲೀಸ್ ಇನ್‌ಸ್ಪೆಕ್ಟರ್ ಬೈಕ್ ಕೆಟ್ಟಿತ್ತು. ಆ ಉರಿಬಿಸಿಲಲ್ಲಿ ಎಷ್ಟೇ ಕಿಕ್ ಹೊಡೆದರೂ ಗಾಡಿ ಶುರುವಾಗಲಿಲ್ಲ. ಪೂರ್ತಿ ಮೈಯಲ್ಲ ಬೆವರಿಸಿತ್ತು. ಇನ್‌ಸ್ಪೆಕ್ಟರ್ ಹಾಗೆ ಕಿಕ್ ಹೊಡೆಯುವಾಗ ನಾವೆಲ್ಲರೂ ಹೆದರಿ ಹಿಂದೆ ನಿಂತು ನೋಡುತ್ತಿದ್ದೆವು.

ಆದರೆ ವಿಲಾಸ್ ಅವರ ಬಳಿ ಹೋಗಿ ಹಿರೇ ಮನುಷ್ಯರ ಹಾಗೆ ಹಿಂದೆ ಕೈಕಟ್ಟಿ ನೋಡುತ್ತಾ ನಿಂತ ಆನಂತರ ಸ್ವಲ್ಪ ಸಮಯದ ನಂತರ "ಏನ ಸರ್ ಬೈಕ್ ಶುರು ಆಗವಲ್ಲದ?" ಎಂದು ಕೇಳಿದ . ಆಗ ಇನ್‌ಸ್ಪೆಕ್ಟರ್ ಗೆ ಮೊದಲೇ ಕಿಕ್ ಹೊಡೆದು ಹೊಡೆದು ತಲೆ ಕೆಟ್ಟಿತ್ತು. ಇವನನ್ನು ನೋಡಿ "ಸುಮ್ಮನೇ ಹೋಗುವೆಯೋ ಅಥವಾ ಬೇಕೋ ಕಪಾಳಕ್ಕೆ ಎರಡು?" ಎಂದು ಗದರಿಸಿ ಅವನ ಮೇಲೆ ಕೈ ಎತ್ತಿದಾಗ ನಾವೆಲ್ಲರೂ ನಕ್ಕ್ಕಿದ್ದೆ ನಕ್ಕಿದ್ದು.

ಆನಂತರ ಒಂದೇ ವರ್ಷದಲ್ಲಿ ಮತ್ತೆ ವಿಲಾಸ ಬೇರೆ ವಿಳಾಸಕ್ಕೆ ವರ್ಗಾಯಿಸಿಕೊಂಡು ಹೋಗಿಬಿಟ್ಟಿದ್ದ.

3 comments:

  1. ಸರ್,
    ವಿಲಾಸ್ ಗೆ ವಿಳಾಸ ಕೊಟ್ಟ ಮಂಜನ ಕಥೆ ಚೆನ್ನಾಗಿದೆ
    ಶಾಲಾ ದಿನಗಳು ಎಷ್ಟು ಮಜವಾಗಿರುತ್ತದೆ ಅಲ್ವ
    ಇಂತಃ ಎಷ್ಟೋ ಘಟನೆಗಳು ಮನಸ್ಸನ್ನು ಪ್ರಫುಲ್ಲ ಅಗಿಡುತ್ತವೆ
    ಆದರೆ ಒಮ್ಮೆ ನೌಕರಿ ಸೇರಿದರೆ ಹಳೆಯ ಎಲ್ಲ ನೆನಪುಗಳೊಂದಿಗೆ ಬದುಕುತ್ತೇವೆ, ಬದುಕು ಯಾಂತ್ರಿಕ ವಾಗಿಬಿಡುತ್ತದೆ

    ReplyDelete
  2. ಧನ್ಯವಾದಗಳು ಸರ್
    ನಿಜ, ನಮ್ಮಷ್ಟಕ್ಕೆ ನಾವು ಎಲ್ಲೋ ಕಳೆದು ಹೋಗುತ್ತೇವೆ. ನಮ್ಮತನ ಎನ್ನುವದು ನಿಜವಾಗಿಯೂ ಮರೆತುಬಿಡುತ್ತೇವೆ.
    ಬಾಲ್ಯದ ನೆನಪುಗಳು, ಸದಾ ಸವಿ ಸವಿ ಸಿಹಿಯಾದ ನೆನಪುಗಳು...

    ReplyDelete
  3. ಮ೦ಜ -ವಿಲಾಸನ ಸುತ್ತಲ ಬಾಲ್ಯದ ಚೆಲ್ಲುತನಗಳು ನನ್ನ ಬಾಲ್ಯದ ಹಲವು ಪ್ರಸ೦ಗಗಳನ್ನ ಜ್ನಾಪಿಸಿದವು.

    ReplyDelete