Friday, December 3, 2010

ನೀನು ಸಾಯಿತಿ ಅಂತೆ .........?

ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.

ಮರು ದಿನ ಏಕೋ ಬಲ ಕೈ ಸ್ವಲ್ಪ ಕೆರೆತ ಶುರು ಆಯಿತು. ನಾನು ಕೈ ಕೆರೆಯುತ್ತಾ ಇದ್ದಾಗ, ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜ ಏನೋ ಕೈ ಕೆರೆತ ಚಾನ್ಸ್ ಅಂದ. ತುಂಬಾ ಕೆರೆತ ಆಗಿ ನಾನು ಒದ್ದಾಡುತ್ತಾ ಇದ್ದರೆ, ನೀನು ಚಾನ್ಸ್ ಅನ್ನುತ್ತೀಯ ಎಂದೆ. ಲೇ.. ಬಲ ಕೈ ಕೆರೆತ ಆದ್ರೆ ದುಡ್ಡು ಬರುತ್ತೆ ಕಣೋ ಅಂದ. ಒಳಗೊಳಗೆ ಸಂತೋಷದಿಂದ ಕುಣಿದಾಡಿದೆ. ಅವನ ಮುಂದೆ, ಹಾಗೆ ರೈಲು ಬಿಡುತ್ತೀಯಾ ಎಂದು ದಬಾಯಿಸಿದೆ. ಏ ನಿನಗೇನೂ ಗೊತ್ತು ಬಲ ಕೈ ಕೆರೆತ ಆದರೆ ದುಡ್ಡು ಖಂಡಿತ ಬರುತ್ತೆ ಅಂದ. ಮತ್ತೆ ಎಡ ಕೈ ಕೆರೆತ ಆದರೆ ದುಡ್ಡು ಖರ್ಚಾಗುತ್ತೆ ಅಂದ. ಎಡ ಕಣ್ಣು ಅದುರಿದರೆ ಅಶುಭ, ಬಲ ಕಣ್ಣು ಅದುರಿದರೆ ಶುಭ ಎಂದು ಹೇಳಿದ. ಲೇ... ಸುಮ್ಮನೇ ಹೇಳ ಬೇಡ ನಾನು ಕಾಲೇಜ್ ನಲ್ಲಿ ಇದ್ದಾಗ, ಒಂದು ಹುಡುಗಿ ನೋಡಿ ಬಲ ಕಣ್ಣು ಅದುರಿಸಿದ್ದೆ. ಆದರೆ ಅವಳು ನನ್ನ ಹಲ್ಲು ಉದಿರುಸುತ್ತೇನೆ ಎಂದು ಬೆದರಿಕೆ ಹಾಕಿದಳು . ಆಮೇಲಿಂದ ಯಾವತ್ತೂ ಕಣ್ಣು ಅದುರಲೆ ಇಲ್ಲ, ಎರಡು ಹಲ್ಲುಗಳು ತಾನಾಗಿಯೇ ಉದುರಿದವು ಎಂದು ಹೇಳಿದೆ. ಮನೋಜ ತುಂಬಾ ಜೋರಾಗಿ ನಕ್ಕೂ... ಅದು ತಾನಾಗಿಯೇ ಅದುರ ಬೇಕು ಕಣೋ ಎಂದು ಅಪಹಾಸ್ಯ ಮಾಡಿದ.

ಕಡೆಗೆ ನಾನು ಆಫೀಸ್ ಹೋದೆ. ಆದರೂ ಇನ್ನೂ ಕೈ ಕೆರೆತ ಇದ್ದೇ ಇತ್ತು. ಆಫೀಸ್ ಹೋದೊಡನೆ, ಬಾಸ್ ಕರೆದು ರೀ... ನಿಮ್ಮ ಅಪ್ರೇಸಲ್ ಈ ತಿಂಗಳು ಇದೆ ಅಲ್ವೇ ಎಂದರು. ಹೌದು.. ಹೌದು.. ಎಂದು ಖುಶಿಯಿಂದ ಕೈ ಕೆರೆಯುತ್ತಾ ಹೇಳಿದೆ. ಆಯಿತು ಹೋಗಿ ಎಂದು ಹೇಳಿ ಕಳುಹಿಸಿದರು. ನನಗೆ ಸಕತ್ ಖುಷಿ, ಲೇ ಹೊಡೆದೆ ಕಣೋ ಚಾನ್ಸ್ ಎಂದು ಅಂದು ಕೊಂಡು, ಮನೋಜಗೆ ಫೋನ್ ಮಾಡಿ ಹೇಳಿದೆ. ನಾನು ಹೇಳಿರಲಿಲ್ಲವಾ? ಎಂದ. ಆದರೆ ಕೈ ಕೆರೆತ ನಿಲ್ಲಲೇ ಇಲ್ಲ.

ಮರು ದಿನ ಕೈ ತುಂಬಾ ಬಾತು ಕೆಂಪಗೆ ಆಗಿತ್ತು. ಲೇ.. ಏನೋ ಇದು ಇಷ್ಟೊಂದು ಕೆರೆತ ಎಂದು ಮನೋಜಗೆ ಕೇಳಿದೆ. ಇದೇನೋ ಪ್ರಾಬ್ಲಮ್ ಕಣೋ, ಕೂಡಲೇ ಡಾಕ್ಟರ್ ಕಾಣು ಎಂದು ಹೇಳಿದ. ಡಾಕ್ಟರ್ ಬಳಿ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ. ಏನ್ರೀ ಇದು ಇಷ್ಟೊಂದು ಆಗೋವರೆಗೂ ಸುಮ್ಮನೇ ಕತ್ತೆ ಕಾಯುತ್ತಾ ಇದ್ದೀರಾ? ಎಂದು ಬೈದರು. ಸರ್ ಅದು .. ಅದು ... ಎಂದು ತಡವರಿಸಿದೆ. ಅವರು ನನಗೆ ಒಂದು ಆಯಂಟ್‌ಮೆಂಟ್ ಹಚ್ಚಿ, ಕೆಲ ಮಾತ್ರೆ ಬರೆದು ಕೊಟ್ಟರು. ಅಷ್ಟರಲ್ಲಿ ನನ್ನ ಮೊಬೈಲ್ ಗೆ ಒಂದು ಕರೆ ಬಂತು. ನಾನು ರಾಜೇಶ್ ಕಣೋ... ಎಂದು ಆ ಕಡೆಯಿಂದ ಧ್ವನಿ ಬಂತು. ನಾನು ಯಾರು? .... ರಾಜೇಶ್. ಓಕೆ ಹೇಳಿ ಏನು ಆಗಬೇಕು ಎಂದೆ. ನಾನು ಕಣೋ ನಿನ್ನ ಕ್ಲಾಸ್ ಮೇಟ್ ಅಂದ. ಇನ್ನೂ ಅವನ ಮುಖ ಚಹರೆ ಸ್ಮೃತಿಗೆ ಬರದಿದ್ದರೂ... ಓss.. ರಾಜೇಶ್ ಹೇಳು ಚೆನ್ನಾಗಿದ್ದೀಯ? ಎಂದು ಕೇಳಿದೆ. ಓss.. ನಾನು ಚೆನ್ನಾಗಿ ಇದ್ದೇನೆ ಎಂದ. ನೀನು ಸಾಯಿತಿ ಅಂತೆ ಎಂದು ಕೇಳಿದ. ನನಗೆ ತಡೆಯಲಾರದಷ್ಟು ಕೋಪ ಬಂದಿತು. ನಿನಗೆ ಯಾರು? ಹೇಳಿದರು ಎಂದು ಕೇಳಿದೆ. ನನಗೆ ಗೊತ್ತು, ನೀನು ಪಾರ್ಟೀ ಯಾವಾಗ ಕೊಡಿಸುತ್ತೀಯ ಎಂದು ಕೇಳಿದ. ನನಗೆ ಎಣ್ಣೆ ಪಾರ್ಟೀನೇ ಬೇಕು ಎಂದ. ಏನು ಸಾಯಿತಿ ಎಂದರೆ ಸುಮ್ಮನೇನಾ? ಎಂದ. ನನಗೆ ಸಕ್ಕತ್ ಕೋಪ ಬಂದಿತ್ತು. ಆದರೂ ತಡೆದುಕೊಂಡು ಮನಸಿನಲ್ಲೇ ಸಾಯುವ ಮೊದಲೇ ತಿಥಿ ಊಟ ಕೇಳೋ, ನಿನಗೆ ಹತ್ತಿಗೆ ಹೊಡೆಯುವ ಎಣ್ಣೇನೇ ಕೂಡಿಸುತ್ತೇನೆ ಮಗನೆ ಬಾ ಎಂದು ಬೈದುಕೊಂಡೆ. ನಿಮಗೆ ಯಾರು ಬೇಕಿತ್ತು ಎಂದು ಅನುಮಾನದಿಂದ ಕೇಳಿದೆ. ಲೇ ಗೋಪಾಲ್ ...ನೀನೆ ಕಣೋ ಕತ್ತೆ ಕಾಯುವನೆ ಎಂದ. ಕೋಪ ಇನ್ನಷ್ಟು ಉಕ್ಕಿ ಬಂತು ದನ ಕಾಯುವವನಿಗೆ ಕತ್ತೆ ಕಾಯುವವ ಎಂದರೆ ಬರದೇ ಇರುತ್ತೆ. ಇದೇನಾದರೂ ಮಂಜನ ಕಿತಾಪತಿ ಇರಲು ಬಹುದು ಎಂದು ಅನ್ನಿಸಿದ್ದು ನಿಜ. ಯಾರಾದರೂ ನಾನು ಆಸ್ಪತ್ರೆಗೆ ಬಂದಿದ್ದು ನೋಡಿದರಾ?. ಮಂಜ ಹೊರಗಡೆ ಇರಬಹುದಾ?. ನೋರೆಂಟು ಯೋಚನೆ ತಲೆಯೊಳಗೆ...ಅದು ನಾನು ಸಾಯುವ ವಿಷಯ ಗೊತ್ತಾಗಿದೆ ಎಂದರೆ ಇವನು ಯಮಧರ್ಮರಾಯನೆ? .... ಮತ್ತೆ ರಾಜೇಶ್ ಎಂದ. ಎಲ್ಲರಿಗೂ ಹೇಳಲು ಸುಲಭವಾಗಲಿ ಎಂದು ಹೆಸರು ಬದಲಿಸಿದನೆ? ತಿಳಿಯಲಿಲ್ಲ.

ಕೂಡಲೇ, ಹೊರಗಡೆ ಓಡಿದೆ. ಡಾಕ್ಟರ್ ಓಡುತ್ತಿರುವ ನನ್ನ ನೋಡಿ.. ಏsss.. ಕಲ್ಲಪ್ಪ, ಹಿಡಿ ಅವನನ್ನ ಎಂದು ತಮ್ಮ ಕಾಂಪೌಂಡರ್ ಗೆ ಕೂಗಿದರು. ಆದರೂ ತಪ್ಪಿಸಿಕೊಂಡು ಹೊರಗಡೆ ಹೋಗಿ, ಎಲ್ಲ ಕಡೆ ಕಣ್ಣು ಆಡಿಸಿದೆ. ಯಾರು ಪರಿಚಯದವರು ಕಾಣಲಿಲ್ಲ. ಮತ್ತೆ ಕಾಂಪೌಂಡರ್ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಕೊಂಡು ಡಾಕ್ಟರ್ ಬಳಿ ಬಂದು ನಿಲ್ಲಿಸಿದ. ನಾನು ಮೊಬೈಲ್ ನಲ್ಲಿ ಇದ್ದ ಮನುಷ್ಯನಿಗೆ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿದೆ. ನನಗೆ ಫೋನ್ ಮಾಡಿದ ವ್ಯಕ್ತಿ ಡಾಕ್ಟರ್ ಪರಿಚಯದವನೆ ಎಂದು ಯೋಚನೆ ಕೂಡ ಬಂತು. ಸರ್, ನಿಮಗೆ ರಾಜೇಶ್ ಗೊತ್ತಾ ಎಂದು ಕೇಳಿದೆ. ರೀ ಯಾರಿದ್ದರೆ ನನಗೆ ಏನ್ರೀ... ಅವನೇನು ನನಗೆ, ಮೊದಲು ಫೀಸ್ ಕೊಟ್ಟು ಮಾತಾಡಿ ಎಂದು ದಬಾಯಿಸಿದರು. ನನಗೆ ಆ ಕರೆಯ ಗದ್ದಲದಲ್ಲಿ ಮರೆತೇ ಹೋಗಿತ್ತು. ಸಾರಿ... ಸರ್ ಎಂದು ಹೇಳಿ ಫೀಸ್ ಕೊಟ್ಟು ಹೊರಗಡೆ ಬಂದೆ.

ಹೊರಗಡೆ ಬಂದೊಡನೆ ಮತ್ತೆ ಅದೇ ಮೊಬೈಲ್ ಗೆ ಫೋನ್ ಮಾಡಿದೆ. ಯಾರು? ನೀವು ಎಂದು ಕೇಳಿದೆ. ನಾನು ರಾಜೇಶ ಎಂದ. ಯಾವ ರಾಜೇಶ್ ಎಂದು ದಬಾಯಿಸಿದೆ. ಲೇss.. ನಾನು ಡಬ್ಬಾ-ಡುಬ್ಬೀ ಆಡುವಾಗ ನಿನಗೆ ಚೆಂಡಿನಿಂದ ಕೆನ್ನೆಗೆ ಬಾರಿಸಿದ್ದೆನಲ್ಲಾ ಎಂದ. ಕಡೆಗೆ ನೆನಪಿಗೆ ಬಂತು. ಅಗಲೆ ಏನೋ ಹೇಳುತ್ತಿದ್ದೆ ಅಲ್ಲ ಎಂದೆ. ಅದೇ ಕಣೋ, ನೀನು ದೊಡ್ಡ ಸಾಯಿತಿ ಅಂತೆ. ಕಥೆ, ಕವನ ಮತ್ತೆ ಆಸ್ಯ ಲೇಖನ ಬರೆಯುತ್ತೀಯಾ ಎಂದು ಕೇಳಿದ. ಆಗ ಅರ್ಥ ಆಗಿತ್ತು ಅವನು ಹೇಳಿದ್ದು ಸಾಹಿತಿ ಎಂದು. ನಾನೇನು ದೊಡ್ಡ ಸಾಹಿತಿ ಅಲ್ಲ ಮಹಾರಾಯ... ಬ್ಲಾಗ್ ಬರಹಗಳನ್ನು ಮಾತ್ರ ಬರೆಯುತ್ತೇನೆ ಎಂದು ಹೇಳಿದೆ. ಪೂರ್ತಿ ನೆನಪಿಗೆ ಬಂತು ಪಾಪ, ಅವನಿಗೆ ಹ ಕಾರ ಮಾತನಾಡಲು ಬರುವದಿಲ್ಲ. ಹ ಅಂದರೆ ಅ ಅನ್ನುತ್ತಾನೆ, ಹಾ ಎಂದರೆ ಆ .... ಹೀಗೆ. ಚಿಕ್ಕ ವಯಸಿನ್ನಲ್ಲಿ ನೋಡಿದ್ದು, ನಾವು ಅವನಿಗೆ ಹಂದಿ ಎಂದು ಕಾಡುತ್ತಿದ್ದೆವು. ಅವನು ಅದಕ್ಕೆ ನೀನೆ ಅಂದಿ ಅನ್ನುತ್ತಿದ್ದ ಪಾಪ. ಹೌದು ನಾನೇ ಅಂದಿದ್ದು, ನೀನೆ ಹಂದಿ ಎಂದೆಲ್ಲ ಕಾಡುತ್ತಿದ್ದೆವು. ಮತ್ತೆ ಎಲ್ಲಾ ಕ್ಷೇಮ ಸಮಾಚಾರ ವಿಚಾರಿಸಿ ಮನೆಗೆ ಬರುವಂತೆ ಹೇಳಿ ಫೋನ್ ಇಟ್ಟೆ.

ಮರುದಿನ ಮುಂಜಾನೆ ಬಾಸ್ ಮತ್ತೆ ಕರೆದು, ರೀ ನಿಮ್ಮದು ಮುಂದಿನ ತಿಂಗಳು ಅಪ್ರೇಸಲ್ ಅಲ್ಲವಾ, ಮತ್ತೆ ನನಗೆ ಹೇಳಿದ್ದು ಇದೆ ತಿಂಗಳು ಎಂದು ಕೇಳಿದರು. ನಾನು ನಿರಾಸೆಯ ಅಲೆಯಲ್ಲಿ ತೇಲುತ್ತ ಬಂದು ಕುಳಿತು, ಮಡದಿ ಫೋನ್ ಮಾಡಿ, ಆದ ವಿಚಾರನೆಲ್ಲ ಹೇಳಿದಾಗ ಅವಳಿಗೂ ಕೂಡ ನಗು ತಡೆಯಲು ಆಗಲಿಲ್ಲ.

5 comments:

  1. ನಮಸ್ಕಾರ್ ನಾನು ಈ ಮೊದ್ಲೇ ನಿಮ್ಮ ಬ್ಲಾಗ್ ಭೇಟಿ ನೀಡಿದ್ದೆ ಆದ್ರೆ ಕಾಮೆಂಟ್ ಮಾಡಿರಲ್ಲಿಲ್ಲ.ಗೋಪಾಲ್ ಹ ಕಾರ್ ಮತ್ತು ಆ ಕಾರ್ಡ್ ಅವಾಂತರ್ ಕೇಳಿದ್ದೇವೆ ನಿಮ್ಮ ಲೇಖನ ಆ ಪಟ್ಟಿಗೆ ಸೇರುತ್ತದೆ.ಚೆನ್ನಾಗಿದೆ ಆದ್ರೆ ಒಂದು ವಿಷಯ್ ಅಕ್ಷರ ಫಾಂಟ್ ದೊಡ್ಡದಾಗಿದ್ದರೆ ಚೆನ್ನಾಗಿತ್ತು

    ReplyDelete
  2. hha hha..

    chennaagide vivaraNe...

    anda haage nivu saayiti naa....?

    hha hhaa

    ReplyDelete
  3. Anonymous ಅವರೇ ತಮ್ಮ ಸಲಹೆ ಸೂಚನೆಗಳಿಗೆ ತುಂಬಾ ಧನ್ಯವಾದಗಳು. ಫಾಂಟ್ ದೊಡ್ಡದು ಮಾಡುತ್ತೇನೆ. ಆಗಾಗ ಬರುತ್ತಿರಿ. ಕೆಳಗೆ ತಮ್ಮ ನಿಜ ನಾಮಧೇಯ ನಮೊದಿಸಿದ್ದರೆ ಚೆನ್ನಾಗಿರುತಿತ್ತು.
    ಧನ್ಯವಾದಗಳು ಮತ್ತು ವಂದನೆಗಳು.:-)
    -----
    ದಿನಕರ ಸರ್ ಸ್ವಾಗತ್ ನಮ್ಮ ಬ್ಲಾಗ್ ಬಳಗಕ್ಕೆ... ಮೆಚ್ಚಿದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು.:-)

    ReplyDelete
  4. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್ :-).

    ReplyDelete