Friday, December 17, 2010

ಕಾಯುವಿಕೆ ಅಂತ್ಯ ....

ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ ಬೇರೆ ಆಗಿ ಒಂದು ವಾರ ರಜೆ ತೆಗೆದುಕೊಂಡಿದ್ದಕ್ಕೆ, ನನ್ನ ಬಾಸ್ ಬೇರೆ ಕೋಪ ಮಾಡಿಕೊಂಡಿದ್ದರು. ಹೀಗಾಗಿ ನನ್ನ ಭವಿಷ್ಯ ಭಯದ ವಿಷಯವಾಗಿ ಪರಣಮಿಸಬಹುದು ಎಂದು ನಾನು ಎಣಿಸಿದ್ದೆ. ಹೇಗಿದ್ದರು ಭವಿಷ್ಯ ನಮ್ಮ ಮನೋಜನೆ ಬರೆಯೋದು ಚೆನ್ನಾಗೆ ಬರೆದಿರುತ್ತಾನೆ ಎಂದು ತೆಗೆದು ನೋಡಿದೆ. ನನ್ನ ರಾಶಿ ಮೀನಕ್ಕೆ ಕಣ್ಣು ಆಡಿಸಿದೆ. ಚೆನ್ನಾಗಿ ಬರೆದಿದ್ದ. ಖುಷಿಯಾಗಿ ನೋಡಿ ಪೇಪರ್ ಬಂದು ಮಾಡ ಇಡ ಹತ್ತಿದಾಗ, ಮಡದಿ ಏನ್ರೀ?. ನಿಮ್ಮ ಭವಿಷ್ಯ ಅಷ್ಟು ನೋಡಿದರೆ ಆಯಿತ?, ಥೂss.. ನಿಮ್ಮ ಎಂದು ಉಗಿದಳು. ಅವಳು ಉಗಿದ ಥೂ ಅನ್ನು ಸ್ವಲ್ಪೇ ಕ್ಯಾಚ್ ಮಾಡಿ, ಚಿಕ್ಕದಾದ ಥು ನನ್ನ ರಾಶಿಯ ಮಧ್ಯ ತೂರಿಸಿ, ಅವಳ ಭವಿಷ್ಯ ಓದಿದೆ(ಮಿಥುನ). ಅಷ್ಟಕ್ಕೇ ಬಿಡದೆ ಮಗನ ಭವಿಷ್ಯ ಕೂಡ ಓದಿಸಿದಳು. ಮಗನ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಎಂದು ಬರೆದಿತ್ತು. ಮನೋಜ ನಿಜವಾಗಿಯೂ ತ್ರಿಕಾಲ ಜ್ಞಾನಿ ಎಂದು ಅನಿಸಿತು. ಏಕೆಂದರೆ ಮಗನಿಗೆ ಬೇರೆ ಸ್ಚೂಲ್‌ನಲ್ಲಿ ಎಲ್ ಕೇ ಜಿ ಸೇರಿಸಬೇಕಿತ್ತು. ಅವಳು ಅಡಿಗೆ ಮನೆಗೆ ಕಾಫೀ ತರಲು ಹೋದಳು. ನಾನು ಪೇಪರ್ ಎತ್ತಿ ಇಟ್ಟೆ.

ಕಾಫೀ ಕಪ್ ತೆಗೆದುಕೊಂಡು ಬಂದು, ರೀ ಅಂದ ಹಾಗೆ ನಿಮ್ಮ ಭವಿಷ್ಯ ಓದಲೇ ಇಲ್ಲ ಎಂದಳು. ನನಗೆ ಕಾಫೀ ಕೊಟ್ಟು ತಾನೇ ಓದಲು ಶುರು ಮಾಡಿದಳು. ಮದುವೆ ಪ್ರಸ್ತಾಪ ಮತ್ತು ಕಾಯುವಿಕೆ ಅಂತ್ಯ ಎಂದು ಬರೆದಿತ್ತು. ರೀ ಇಲ್ಲಿ ಒಂದು ತಪ್ಪು ಆಗಿದೆ. ಮರು ಮದುವೆ ಎಂದು ಬರಬೇಕಿತ್ತು ಅಲ್ಲವೇ ಎಂದು ಅಪಹಾಸ್ಯ ಮಾಡಿದಳು. ಹೇಗಿದ್ದರು ಕಾಯುವಿಕೆ ಅಂತ್ಯ ಎಂದು ಇನ್ನೊಂದು ಭವಿಷ್ಯ ಸಾಕಾರ ಆಗಬಹುದು ಎಂದು ಎಣಿಸಿ, ನಾನು ಸ್ನಾನ ತಿಂಡಿ ಮುಗಿಸಿ ಆಫೀಸ್ ಹೊರಟೆ.

ಆಫೀಸ್ ತಲುಪಿದ ತಕ್ಷಣ ಬಾಸ್ ಫೋನ್ ಬಂತು. ಇವತ್ತು ನಾನು ಸ್ವಲ್ಪ ಬೇಗನೆ ಹೋಗಿದ್ದರಿಂದ ಬೈಸಿಕೊಳ್ಳುವುದಕ್ಕೆ ಅಲ್ಲ ಎಂದು ಫೋನ್ ಎತ್ತಿದೆ. ರೀ.. ಗೋಪಾಲ್ ಕ್ಯಾಬಿನ್ ಗೆ ಬನ್ನಿ ನಿಮ್ಮ ಜೊತೆ ಮಾತನಾಡುವುದಿದೆ ಎಂದರು. ನಾನು ಸಕ್ಕತ್ ಖುಷಿ. ಅಪ್ರೈಸಲ್ ಎಂದು ಒಳಗಡೆ ಹೆಜ್ಜೆ ಇಟ್ಟೆ. ಒಳಗಡೆ ಬಾಸ್ ಮತ್ತು ಆಡ್‌ಮಿನ್ ಇಬ್ಬರು ಕುಳಿತಿದ್ದರು. ಇಬ್ಬರ ಕೈಯಲ್ಲಿ ಪೇಪರ್ ಬೇರೆ ಇತ್ತು. ನನಗೆ ಸ್ವರ್ಗಕ್ಕೆ ಮೂರೇ ಗೇಣು. ಒಳಗೆ ಹೋದ ಕೂಡಲೇ ಬನ್ನಿ ಕುಳಿತುಕೊಳ್ಳಿ ಎಂದರು. ಕಾಫೀ ಬೇರೆ ತರಿಸಿದರು. ಕಾಫೀ ಕುಡಿದೆ. ಸಾವಕಾಶವಾಗಿ ಪೇಪರ್ ತೆಗೆದು ನೋಡಿ, ಗೋಪಾಲ್... ಈಗ ನಾಲ್ಕನೇ ಫ್ಲೋರ್ ಬೇರೆ ಶುರು ಆಗಿದೆ ಎಂದರು. ನಾನು ಹೌದು ಸರ್ ಎಂದೆ. ಸಧ್ಯ ನನ್ನ ಅಪ್ರೈಸಲ್ ಮಾಡಿ ನಾಲ್ಕನೇ ಫ್ಲೂರ್ಗೆ ಕಳುಹಿಸುತ್ತಾರೆ ಎಂದು ಇನ್ನೂ ಖುಷಿಯಾಗಿದ್ದೆ. ಪೇಪರ್ ನನ್ನ ಮುಂದೆ ಹಿಡಿದು ನಿಮ್ಮ ಕ್ಯೂಬಿಕಲ್ ಶಿಫ್ಟ್ ಮಾಡುತ್ತಾ ಇದ್ದೇವೆ, ನಿಮ್ಮ ಆಸನ ನೀವೇ ಆರಿಸಿಕೊಳ್ಳಿ ಎಂದರು. ನಾನು ದಿಕ್ಕುಗಳನ್ನು ಪರಿಶಿಸಿಲಿಸಿ, ಸರ್.. ನನಗೆ ಇದು ಬೇಕು ಎಂದು ಆರಿಸಿದೆ. ಮತ್ತೆ ಹಾಗೆ ಕುಳಿತಿದ್ದೆ. ಆಯಿತು ಗೋಪಾಲ್ ಎಂದು ಹೇಳಿ ಕೈ ಕುಲುಕಿದರು. ನನಗೆ ದಿಕ್ಕೇ ತೋಚಾದಾಗಿತ್ತು.

ಮತ್ತೆ ಎದ್ದು ಸಾವಕಾಶವಾಗಿ ಎದ್ದು ನನ್ನ ಆಸಾನಕ್ಕೆ ಬಂದು ಒರಗಿದೆ. ಸಂಜೆವರೆಗೂ ಕಾಯುತ್ತಾನೆ ಇದ್ದೆ. ಬಾಸ್ ಎರಡು ಬಾರಿ ಕರೆದು ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ವಿವರಣೆ ನೀಡಿದರು ಮಾತ್ರ. ಸಂಜೆ ಮತ್ತೆ ಕರೆದು ಸ್ಟೇಟಸ್ ಬೇರೆ ಕೇಳಿ ಮನೆಗೆ ಕಳುಹಿಸಿದರು. ಎಷ್ಟೇ ಆದರೂ ನಾನು ಬಸವಣ್ಣನವರ "ಕಾಯಕವೇ ಕೈಲಾಸ" ಎಂಬ ಆಜ್ಞೆ ಪಾಲಕನಿಗೆ ಇವತ್ತು ಬರೀ ಕಾಯುವಿಕೆಯ ಕೆಲಸ ಹತ್ತಿತ್ತು. ನಿರಾಸೆಯ ಅಲೆಯಲ್ಲಿ ತೇಲುತ್ತ ಮನೆಗೆ ಬಂದೆ.

ಕಾಫೀ ಕೊಡುತ್ತಾ ನನ್ನ ಕಳೆ ಗುಂದಿದ ಮುಖ ನೋಡಿ ಮಡದಿ ಏಕೆ? ಏನು? ಏನಾಯಿತು... ಎಂದು ಪ್ರಶ್ನಿಸಿದಳು. ನಾನು ನಡೆದ ವಿಚಾರ ಅವಳಿಗೆ ಹೇಳಿದೆ. ಸರಿ ಮತ್ತೆ ನಿಮ್ಮ ಕಾಯುವಿಕೆ ಅಂತ್ಯ ಆಯಿತು ಅಲ್ಲ ಎಂದಳು. ನೀವೇ ಹೇಳಿದ್ದು ತಾನೇ, ನಿಮ್ಮ ಕ್ಯೂಬಿಕಲ್ ಬಾಗಿಲ ಹತ್ತಿರ ಇದೆ, ಯಾರಾದರೂ ಒಳಗೆ ಬಂದರು, ನಿಮಗೆ ಕಾರ್ಡ್ ಸ್ವಾಪ್ ಮಾಡಿದ ಸೌಂಡ್ ಬರುತ್ತೆ ಅಂತ. ಮತ್ತೆ ನಿಮ್ಮನ್ನು ನೀವೇ ಕೆಲ ದಿನ ಸೆಕ್ಯೂರಿಟೀ ಗಾರ್ಡ್ ಎಂದು ಹೋಲಿಸಿಕೊಂಡಿದ್ದೀರಿ ನಿಜ ತಾನೇ? ಎಂದು ಗಹ ಗಹಿಸಿ ನಗುತ್ತಾ ಅಂದಳು. ಹಾ ...ಹೌದಲ್ಲ ಎಂದು ನನ್ನ ತಲೆಗೆ ನಾನೇ ಮೊಟಕಿದೆ. ನಿಜವಾಗಿಯೂ ನನ್ನ ಕಾಯುವಿಕೆ ಅಂತ್ಯವಾಗಿತ್ತು. ಸ್ವಲ್ಪ ನಗು ನನ್ನ ಮುಖದಲ್ಲಿ ಮೂಡಿತ್ತು. ಮನೋಜನ ಭವಿಷ್ಯ ಕೂಡ...

ಅಷ್ಟರಲ್ಲಿ ಮಗ ಏಕೆ? ಇಷ್ಟು ಮಳೆ ಬರುತ್ತಾ ಇದೆ ಅಪ್ಪ ಎಂದು ಕೇಳಿದ. ಅದು ಸೈಕ್ಲೋನ್ ಎಂದು ಹೇಳಿದೆ. ಮಗ ಅದನ್ನು ಸೈಕಲ್ ಎಂದು ಕೊಂಡು, ಅದನ್ನು ಹೇಗೆ ಹೊಡೆಯುವದು ಅಪ್ಪ ಎಂದು ಕೇಳಿದ. ನನಗೆ ನಗು ತಡೆಯಲು ಅಗಲೆ ಇಲ್ಲ... ಜೋರಾಗಿ ನಗಹತ್ತಿದೆ. ಮಗನಿಗೆ ಅಪಮಾನ ಆದ ಹಾಗೆ ಆಗಿತ್ತು. ಅವನು ಜೋರಾಗಿ ಅಳಹತ್ತಿದ. ಮತ್ತೆ ಅವನನ್ನು ಸಮಾಧಾನ ಮಾಡಿ, ಊಟ ಮುಗಿಸಿ, ಎಲ್ಲ ಕಹಿ ಮರೆತು ಸಿಹಿ ನಿದ್ದೆಗೆ ಜಾರಿದೆವು.

2 comments:

  1. ಗೋಪಾಲ್ ಬಹಳ ದಿನಗಳ ನಂತರ ನಿಮ್ಮಲ್ಲಿಗೆ...ಚನ್ನಾಗಿದೆ ನಿಮ್ಮ ಅವಾಂತರ..ಹೌದು ಮಕ್ಕಳು ಸೀರಿಯಸ್ಸಾಗಿ ಏನನ್ನೋ ಕೇಳಿದ್ರೆ ನಾವು ನಕ್ಕ್ರೆ ಅವ್ರುಗೆ ಅಳು ಬರುತ್ತೆ..ಅವ್ರು ನಗ್ತಾ ಕೇಳಿದ್ರೆ ನಾವೂ ನಕ್ಕರೆ ಅವೂ ನಗುತ್ವೆ..ಹೇಗೆ ನೋಡಿ...

    ReplyDelete
  2. ನಿಜ ಸರ್, ಮಕ್ಕಳ ಜೊತೆ ನಡೆಯುವ ಪ್ರತಿಯೊಂದು ಕ್ಷಣ ಕೂಡ ತುಂಬಾ ಸುಮಧುರವಾಗಿರುತ್ತೆ.
    ಧನ್ಯವಾದಗಳು ಮತ್ತು ವಂದನೆಗಳು. ಆಗಾಗ ಬರುತ್ತೀರಿ...:-).

    ReplyDelete