Wednesday, December 1, 2010

ಹೋಟೆಲ್ ಊಟ... ಹೊಟ್ಟೆಯಲ್ಲಿ ಆಟ...

ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು ಅಷ್ಟೇ. ನಿಮಗೆ ಬಿಳಿ ಗುಳಿಗೆ ಎಂದರೆ ಅರ್ಥ ಆಯಿತು ತಾನೇ?. ಇಡ್ಲಿ.. ಸಾರ್ ಇಡ್ಲಿ... ಯಾವುದೆ ಸಮಯದಲ್ಲಿ ಹೋದರು ಸಿಗುವದು ಇದೊಂದು ಮಾತ್ರೆ ಮಾತ್ರ. ಇಷ್ಟಕ್ಕೂ ಅದು ಇದು ಹಾಳು ಮೂಳೆ... ಕ್ಷಮಿಸಿ ಮುಳ್ಳು... ಆಯಾಯ್ಯೋ ಮತ್ತೊಮ್ಮೆ ಕ್ಷಮಿಸಿ... ಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಇಡ್ಲೀನೇ ತಿನ್ನು ಎಂದು ನನ್ನ ಮಡದಿ ತಾಕೀತ್ ಮಾಡಿ ಊರಿಗೆ ಹೋಗಿದ್ದಾಳೆ. ಇದಕ್ಕೆ ಜೊತೆಯಾಗಿ ಇನ್ನೊಂದು ಮಾತ್ರೆ ಬೇರೆ ಚಾಕ್ಲೇಟ್ ಕಲರ್ ಗುಳಿಗೆ ... ವಡೆ.

ಹೆಂಡತಿ ಮನೆಯಲ್ಲಿ ಇಲ್ಲ ಎಂದರೆ ಆಗುವ ಕಷ್ಟಗಳನ್ನು ಹೇಳುವುದು ನಿಮಗೆ ಬೇಕಿಲ್ಲ ಎಂದುಕೊಂಡಿದ್ದೇನೆ. ಈ ಇಡ್ಲಿ , ವಡೆ ಸಾಂಬಾರ ಮತ್ತು ಚಟ್ನಿ ಒಳಗೆ ಹೋದಂತೆ ತಮಷ್ಟಕ್ಕೆ ತಾವೇ ನಾದಮಯವಾಗಿ ಸಂಗೀತ ಕಛೇರಿ ಶುರು ಮಾಡಿದ್ದವು ಅಥವಾ ಜಗಳ ಮಾಡಲು ಶುರು ಮಾಡಿದ್ದವು ಎಂದೆನಿಸುತ್ತೆ. ಒಟ್ಟಿನಲ್ಲಿ ನನ್ನ ಹೊಟ್ಟೆಯಲ್ಲಿ ಗುದ್ದಾಟ ನಡೆಸಿದ್ದವು. ಏನಾದರೂ? ಮಾಡಲಿ ಆದರೆ ಅವಗಳನ್ನು ವಾಯು ವಿಹಾರಕ್ಕೆ ಮಾತ್ರ ಬಿಡಬಾರದು ಎಂದು ಯೋಚಿಸಿ, ಅರ್ಧ ಬಾಟಲ್ ನೀರು ಕುಡಿದು ಬಹಿರ್ದೆಶೆಗೆ ಹೋಗಿ ಬಂದು ನಿರಾತಂಕವಾಗಿ ಆಫೀಸ್ ಹೊರಡಲು ಅನುವಾದೆ. ಮತ್ತೆ ಗುದ್ದಾಟ ಶುರು ಆಯಿತು. ಮತ್ತೆ ಇನ್ನೊಂದು ಬಾರಿ ಬಹಿರ್ದೆಶೆಗೆ ಹೋಗಿ ಬಂದಾಗ, ಅವುಗಳನ್ನು ತಿಂದು ತೆಗಿದ ಪಾಪಕ್ಕೆ, ಏನೋ ಒಂದು ಆತಂಕ ನೀಗಿದ ಹಾಗೆ ಆಗಿತ್ತು.

ಮತ್ತೆ ಲೇಟ್ ಆಗಿ ಆಫೀಸ್ ಹೋದೆ. ಬಾಸಿನಿಂದ ಹೊಟ್ಟೆ ತುಂಬಿದ ಹಾಗೆ ಆಗಿದ್ದರು, ಬಿಸಿ.. ಬಿಸಿ... ಬೈಗುಳಗಳನ್ನು ತಿಂದು ತೇಗಿ ಸೀಟ್ ಮೇಲೆ ಒರಗಿದೆ.ಅಷ್ಟರಲ್ಲಿ ನನ್ನ ಗೆಳೆಯ ಮಾಧವ ಅಮೇರಿಕಾಕ್ಕೆ ಹೋಗಿದ್ದ ಅವತ್ತೇ ಬಂದ. ಬಂದೊಡನೆ ನನ್ನ ಬಡ ಹೊಟ್ಟೆ ವಿಚಾರಿಸದೇ, ಬಂದವನೇ ಏನೋ? ನಿನ್ನ ಗುರುತೇ ಸಿಗಲಿಲ್ಲ. ಮುಂದೆ ಬಂದ ಕೂಡಲೇ ಅನ್ನಿಸಿದ್ದು, ನೀನೆ... ಅಂತ. ಆದ್ರೆ ಶಿರಸ್ತ್ರಾಣ ಧರಿಸಿ ಏಕೆ? ಕುಳಿತಿದ್ದಾನೆ ಎಂದು ಅನ್ನಿಸಿತು. ನೀನು ನೋಡಿದರೆ ಆರೇ ತಿಂಗಳಲ್ಲಿ ಬೋಡ ಆಗಿದಿಯಲ್ಲೋ ಎಂದ. ಮತ್ತೊಂದು ಮದುವೆ, ಗಿದುವೆ ಆಗಿದ್ದೀಯೇನೋ?.. ಎಂದು ಹೀಯಾಳಿಸಿದ. ಪಕ್ಕದಲ್ಲಿ ಕುಳಿತಿದ್ದ ಪಂಕಜಾ ನನ್ನ ಕತೆ(ವ್ಯಥೆ) ಯನ್ನು ಅನುಭವಿಸಿದ ನನಗಿಂತಲೂ ರಸವತ್ತಾಗಿ ವಿವರಿಸಿದಳು. ಜೋರಾಗಿ ಗಹ ಗಹಿಸಿ ನಗುತ್ತಾ.... ನನಗೆ ಹೇಳಿದ್ದರೆ ಒಂದು ಒಳ್ಳೆಯ ವಿಗ್ ತರುತ್ತಿದ್ದೆ ಅಮೇರಿಕಾದಿಂದ ಎಂದ. ಮಗನೆ ನೀನೆ ಒಪ್ಪತ್ತು ತಿಂದು ದುಡ್ಡು ಉಳಿಸೋ ಮಗ, ಅದರಲ್ಲಿ ನನಗೆ ವಿಗ್ ತರುತ್ತೀಯಾ ಎಂದು ಮನಸಿನಲ್ಲೇ ಬೈದೆ. ನಡಿ ಹೋಗೋಣ ತಿಂಡಿಗೆ ಎಂದ, ಬೇಡ ನನ್ನದು ಆಗಿದೆ ಎಂದು ಹೇಳಿದೆ. ಆಯಿತು ಕಾಫೀ ಆದರೂ ತೆಗೆದು ಕೊಳ್ಳು ಬಾ ಮಹಾರಾಯ ಎಂದು ಕರೆದುಕೊಂಡು ಹೋದ. ನಾನು ಕಾಫೀ ಕುಡಿದೆ, ಅವನು ಅದೇ ಎರಡು ಬಿಳಿ ಗುಳಿಗೆ ತಿಂದ. ಓ ಸಾರೀ... ನಾನು ಪರ್ಸ್ ನೆನಪು ಹಾರಿ ಬಂದಿದ್ದೇನೆ. ಬಿಲ್ ನೀನೆ ಕೊಡು ಎಂದ. ಕಡೆಗೆ ನಾನೇ ಬಿಲ್ ಕೊಟ್ಟು ಬಂದೆ. ಬಿಲ್-ಕೂಲ್ ಮನಸ್ಸಿಲ್ಲದೇ ನಾನು ಬಿಲ್ ಕೊಟ್ಟ ಕೋಪದಲ್ಲಿ ಮದುವೆ ಯಾವಾಗ ಕಣೋ, ಮೂರು ಕತ್ತೆ ವಯಸ್ಸು ಆಯಿತು ಎಂದು ಅಚ್ಚ ಕನ್ನಡದಲ್ಲಿ ಕೇಳೋಣ ಎಂದುಕೊಂಡರೂ, ಏನು ಮೂರನೇ ಇನ್ನಿಂಗ್ಸ್ ಟೆಸ್ಟ್ ಆಡಬೇಕು ಎಂದು ಮಾಡಿದ್ದೀಯಾ ಎಂದು ಕೇಳಿದೆ. ಮಾಡಿಕೊಳ್ಳಬೇಕು ಮಹಾರಾಯ ಒಂದು ಒಳ್ಳೆಯ ಹುಡುಗಿ ಇದ್ದರೆ ನೋಡು ಎಂದು, ನನಗೆ ಫಾರ್ಮಾನು ಹೊರಡಿಸಿದ. ಕೇಳಿದ್ದೆ ತಪ್ಪು ಆಯಿತು ಎಂದು ನಾನು ಮನಸಿನಲ್ಲೇ ಅಂದು ಕೊಂಡೆ.

ಸಂಜೆ ಆರು ಘಂಟೆಗೆ ಬಾಸ್ ಬಂದು, ಇವತ್ತು ಏನು? ಕೆಲಸ ಇಲ್ಲ ಮನೆಗೆ ಹೋಗೋಣ ಎಂದ. ನಾನು ಹಾಗೂ.. ಹೀಗೂ.. ಹೆಂಡತಿ ಬರುವವರೆಗೆ ಒಂದು ವಾರ ಇಲ್ಲೇ ಊಟ ಮಾಡಿದರೆ ಆಯಿತು ಎಂದು ಪ್ಲಾನ್ ಮಾಡಿದ್ದೆ. ಎಲ್ಲವೂ ಹಾಳು ಆಯಿತು ಮನೆಗೆ ಹೋಗುವ ಸಮಯದಲ್ಲಿ, ಊಟದ ಬಗ್ಗೆ ಯೋಚಿಸುತ್ತಾ, ಒಂದು ಲಾರಿಯಿಂದ ಕೂದಲೇಳೆಯಲ್ಲಿ ... ಕ್ಷಮಿಸಿ ಕೂದಲೇ ಇಲ್ಲ ಅಲ್ಲವಾ?, ಸ್ವಲ್ಪದರಲ್ಲೇ ಬಚಾವ್ ಆದೆ. ಹೇಗಿದ್ದರು ಹೊಟೆಲ್ ಅನುಭವ ಆಗಿದ್ದರಿಂದ, ಮನೆ ಮುಟ್ಟಿದ ಮೇಲೆ ಏನು? ಅಡುಗಿ ಮಾಡಬೇಕು ಎಂದು ಯೋಚಿಸುತ್ತಿದ್ದೆ, ಆಗ ಕಾಣಿಸಿದ್ದು ಮ್ಯಾಗಿ ಪ್ಯಾಕೆಟ್ ಇದು ತುಂಬಾ ಸುಲಭ ಎಂದು ಯೋಚಿಸಿ ಅದನ್ನೇ ಮಾಡಿಕೊಂಡು ತಿಂದೆ.

ಮನೆಯಲ್ಲಿ ಅಡುಗಿ ಮಾಡಿದ ಸಂತೋಷಕ್ಕೆ ಮಡದಿಗೆ ಫೋನ್ ಮಾಡಿ, ನಾನೇ ಅಡುಗೆ ಮಾಡಿ ಊಟ ಮಾಡಿದೆ ಎಂದು ಹೇಳಿದೆ. ಹೆಂಡತಿ ಹಿರಿ ಹಿರಿ ಹಿಗ್ಗಿ ಏನು? ಮಾಡಿದಿರಿ ಎಂದು ಕೇಳಿದಳು. ನಾನು ಮ್ಯಾಗಿ ಎಂದಾಗ, ಅಷ್ಟೇನಾ.... ಎಂದು ರಾಗ ಎಳೆದಳು. ಮತ್ತೆ ನಾನು ಮ್ಯಾಗಿ ಪ್ಯಾಕೆಟ್ ಅಷ್ಟು ಖಾಲಿ ಮಾಡಿದ್ದಕ್ಕೆ ಬೈದು ಒಂದಿಷ್ಟು ಮ್ಯಾಗಿ ಪ್ಯಾಕೆಟ್ ತಂದು ಇಡಿ. ನಿಮ್ಮ ಮಗನಿಗೆ ಬೇಕಾಗುತ್ತೆ ಎಂದು ತಾಕೀತ ಮಾಡಿದಳು.

ಅನಂತರ ಪಾತ್ರೆ ತೊಳೆದು ಮುಗಿಸುವಷ್ಟರಲ್ಲೇ ಬೆನ್ನು ಬಿದ್ದು ಹೋಗಿತ್ತು. ಮತ್ತೆ ಅಡುಗಿ ಸಹವಾಸ ಸಾಕು ಎನ್ನುವಷ್ಟು. ಮತ್ತೆ ನಾಳೆಯಿಂದ ಮತ್ತೊಂದು ಹೋಟೆಲ್ ಹುಡುಕಿದರೆ ಆಯಿತು ಎಂದು ಯೋಚಿಸಿ ನಿದ್ದೆಗೆ ಜಾರಿದೆ. ಮತ್ತೆ ನಾಳೆಯಿಂದ ಹೊಟೆಲ್ ಊಟನೆ ಗತಿ.. ಆದರೆ ಹೊಟ್ಟೆಯಲ್ಲಿ ಆಟ ಆಗದಿದ್ದರೆ ಸರಿ.

2 comments: