Thursday, June 21, 2012

ಕೋಟಿ ಕೊಟ್ಟರು ಸಿಗದ ಲಕ್ಷ್ಯ ....

ಏನು? ಎಂದು ಮಡದಿಗೆ ಕೇಳಿದೆ. ಅವಳು ಮತ್ತೆ ನನಗೆ ಏನು? ಎಂದು ಕೇಳಿದಳು. ಏನೋ ಅಂದ ಹಾಗೆ ಇತ್ತು ಎಂದೆ. ನಿಮ್ಮ ಪೂರ್ವಜರು ವಿಜಾಪುರದವರ ಎಂದು ಕೇಳಿದೆ ಎಂದಳು. ಏಕೆ? ಎಂದು ಕೇಳಿದೆ. ನಿಮಗೆ ಪ್ರತಿಧ್ವನಿ ಕೇಳುವವರೆಗೂ ಉತ್ತರಿಸುವುದಲ್ಲ ಎಂದು ಕುಹಕವಾಡಿದಳು. ನಿನ್ನೆ ಆಡಿದ ಮಾತು ಇವತ್ತು ಕೇಳಿಸಿದೆ ನಾನು ಸುಮ್ಮನೆ ಇದ್ದರು, ಕರೆದ ಹಾಗೆ ಆಯಿತು ಎಂದರೆ ಏನು ಹೇಳುವುದು ಎಂದಳು. ನಿನ್ನೆ ಅವಳು ಏನೋ ಹೇಳಲು ಬಂದಾಗ ನನ್ನ ಲಕ್ಷ್ಯ ಬೇರೆಲ್ಲೋ ಇತ್ತು. ಹೀಗಾಗಿ ಅವಳಿಗೆ ಉತ್ತರಸಲಿಲ್ಲ. ಹೀಗಾಗಿ ಮತ್ತೊಮ್ಮೆ ಏನು? ಎಂದು ಕೇಳಿದಾಗ ಏನು ಇಲ್ಲ ಎಂದು ಮುನಿಸಿಕೊಂಡಿದ್ದಳು.

ಒಮ್ಮೆ ಮೈಸೂರಿಗೆ ನಮ್ಮ ನಿರ್ದೇಶಕರು ಬ೦ದಿದ್ದರು. ಅವರು ಸ್ನಾನ ಮಾಡುತ್ತೇನೆ ಎ೦ದು ನನಗೆ ಹೇಳಿ ಹೋಗುತ್ತಿದ್ದಾಗ, ನಾನು ಏನೋ? ಯೋಚನೆ ಮಾಡುತ್ತ ಸ್ನಾನಕ್ಕೆ ಹೋಗು ಎಂದು ಹಾಗೆ ಅನ್ನಿಸಿ, ನಾನು ಸ್ನಾನಕ್ಕೆ ಹೊರಟುಹೋದೆ. ಪಾಪ ನಮ್ಮ ನಿರ್ದೇಶಕರು ನನ್ನ ಸ್ನಾನ ಮುಗಿಯುವರಗೆ ಟಾವೆಲ್ ಮೇಲೆ ಹಾಗೆ ನಿಂತಿದ್ದರು. ನಮ್ಮ ಆಫೀಸ್ ಡ್ರೈವರ್ ನಮ್ಮ ನಿರ್ದೇಶಕರ ಪರಿಸ್ತಿತಿ ನೋಡಿ ಒಳಗೊಳಗೇ ನಗುತ್ತಿದ್ದ.

ಒಮ್ಮೆ ಹಾಗೆ ನಾನು ನನ್ನ ಮಗನಿಗೆ ನಿದ್ದೆಯಿಂದ ಎದ್ದು ಬಂದ ಮೇಲೆ, ಏ ಪುಟ್ಟ ಬಾತ್ ರೂಂ ನಲ್ಲಿಯ ಫ್ಯಾನ್ ಬಂದ್ ಮಾಡು ಎಂದೆ. ನನ್ನ ಹೆಂಡತಿ ಮತ್ತು ಮಗ ಇಬ್ಬರು ನಗಲು ಶುರು ಮಾಡಿದರು. ನಿಮ್ಮಪ್ಪ ಲಕ್ಷ್ಯ ಅಷ್ಟೇ ಎಂದಳು. ಕೆಲವೊಮ್ಮೆ ಬೈಕ್ ಹೊಡೆಯುತ್ತ ಪ್ಯಾಂಟಿನಲ್ಲಿ ಬೈಕ್ ಕೀ ಎಲ್ಲಿ ಎಂದು ತಡಕಾಡಿದ್ದು ಇದೆ.

ಒಮ್ಮೆ ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮ ಲಕ್ಷ್ಯ ಬೇರೆ ಎಲ್ಲೋ ಇಟ್ಟು, ನನಗೆ "ಊಟ ಆದಮೇಲೆ ಊಟ ಮಾಡು" ಎಂದು ಹೇಳಿದ್ದಾಗ ನಮ್ಮ ಮನೆಯಲ್ಲಿಯ ಎಲ್ಲರು ನಗೆ ಗಡಲಿನಲ್ಲಿ ತೇಲಿ ಹೋಗಿದ್ದೆವು. ನಾನು ಇಷ್ಟು ಲೇಖನ ಬೇರೆಯುವುದಕ್ಕೆ ಅವಳೇ ಕಾರಣ. ಅವಳು ಅವತ್ತು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರೆ ನನಗೆ ಏನು? ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ನಾನು ಒಮ್ಮೆ ಸುಬ್ಬನ ಮನೆಗೆ ಹೋಗಿದ್ದೆ. ಅಲ್ಲೇ ಕುಳಿತಿದ್ದ ಸುಬ್ಬನ ಅಮ್ಮ ನನ್ನನ್ನು ಎಲ್ಲಿ ನಿಮ್ಮ ಸಾಥಿ ಎಂದು ಮಂಜನನ್ನು ವಿಚಾರಿಸಿದರು. ನಾನು ಮಂಜ ಮೋರಿಗೆ ಹೋಗಿದ್ದಾನೆ ಎಂದೆ. ಇಲ್ಲಿ ಯಾವ ಮೋರಿ ಯಾವಾಗ ತೆರೆದಿರುತ್ತೆ ತಿಳಿಯೋಲ್ಲ.. ಪಾಪ ಮಂಜ ಏನಾಯಿತೋ ಏನು? ಎಂದು ಬೈಯಲು ಶುರು ಮಾಡಿದರು. ನಾನು ಅದು ಒಂದು ಅಂಗಡಿಯ ಹೆಸರು ಎಂದು ಹೇಳಿದ ಮೇಲೆ, ನಿಟ್ಟುಸಿರು ಬಿಟ್ಟು ,ಅದೇನು ಅಂತ ಹೆಸರು ಇಡುತ್ತರೋ ಏನೋ? ಎಂದು ಅಂದರು. ನಮ್ಮ ಸುಬ್ಬ ನಮ್ಮ ಅಮ್ಮನ ಲಕ್ಷ್ಯ ಅಷ್ಟೇ... ಅವಳು ಏನೋ ಯೋಚನೆ ಮಾಡುತ್ತಿರುತ್ತಾರೆ. ನಮ್ಮ ಮಾತಿನ ಬಗ್ಗೆ ಲಕ್ಷ್ಯ ಇರುವುದಿಲ್ಲ ಎಂದ. ಅದಕ್ಕೆ ಅವರ ಅಮ್ಮ ಮತ್ತ್ಯಾರ ಬಗ್ಗೆ ಯೋಚಿಸಲಿ ನಿನ್ನ ಬಗ್ಗೆನೇ ಎಂದರು. ನಮ್ಮ ಬಗ್ಗೆ ಯೋಚನೆ ಮಾಡುತ್ತ , ನಮ್ಮ ಮಾತಿಗೆ ಅಲಕ್ಷ್ಯ ಮಾಡುತ್ತಿ ಎಂದು ಸುಬ್ಬ ನಕ್ಕ.

ಒಮ್ಮೆ ಹಾಗೆ ಹೋಗುತ್ತಿದ್ದಾಗ ಮಂಜನನ್ನು ನೋಡಲಿಲ್ಲ. ನಮ್ಮ ಮಂಜ ನನ್ನನ್ನು ಲಕ್ಷ್ಯಾದಿಪತಿಗಳೇ ಎಂದು ತಡೆದು, ಲಕ್ಷ್ಯದ ಬಗ್ಗೆ ಭಾಷಣ ಶುರು ಮಾಡಿದ. ಮಂಜ ನನಗೆ ಈ ಲಕ್ಷ್ಯ ಎನ್ನುವುದು ತುಂಬಾ ಮುಖ್ಯವಾದುದು. ನಾನು ತುಂಬಾ ಸಾರಿ ನೋಡಿದ್ದೇನೆ ನಿನ್ನ ಲಕ್ಷ್ಯ ನಿನ್ನ ಬಳಿ ಇರುವುದಿಲ್ಲ ಎಂದು ಹೇಳಿದ. ನಾವು ಅರೋಗ್ಯವನ್ನು ಅಲಕ್ಷ್ಯ ಮಾಡಿದರೆ ಅಷ್ಟೇ. ಮಾತುಗಳು ಅಷ್ಟೇ ಲಕ್ಷ್ಯವಿಟ್ಟು ಮಾತನಾಡಬೇಕು. ನಿನ್ನ ಲೇಖನಗಳಿಗೆ ಎಂದು ಲಲಿತ ಪ್ರಬಂದ ಎಂದು ಹಾಕಬೇಡ. ಏಕೆಂದರೆ ಲಲಿತ ಎಂಬ ಹೆಸರಿನ ವ್ಯಕ್ತಿ ಬಂದು ಅದು ನನ್ನ ಪ್ರಬಂದ ಎಂದರೆ ಕಷ್ಟ. ಆಮೇಲೆ ನೀನು ಕೋರ್ಟಿಗೆ ಹೋದರು ಪ್ರಯೋಜನ ಇಲ್ಲ. ಏಕೆಂದರೆ ಮೊದಲೇ ಕೋಟಿ-ಕೋಟಿ ಕೇಸ್ ಗಳ ನಡುವೆ ನಿನ್ನ ಕೇಸ್ ನಿರ್ಲಕ್ಷ್ಯ ಆಗುತ್ತೆ ಎಂದು ವ್ಯಂಗ್ಯವಾಡಿದ. ಮತ್ತೆ ನಿನಗೆ ಗೊತ್ತ ಮಹಾಲಕ್ಷ್ಮಿ ಬಳಿ ಹೋಗಿ ಕೋತಿ ಹಾಗೆ ಕೋಟಿ ಕೇಳುವ ನಾವು ಲಕ್ ಮತ್ತು ಲಕ್ಷ್ಯ ಕೇಳುವುದು ಸೂಕ್ತ. ಯಾವತ್ತು ಚೆನ್ನಾಗಿರುವವರನ್ನು ಎಷ್ಟು ಲಕ್ಷಣವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅದೇ ಚೆನ್ನಾಗಿ ಇರದವರನ್ನು ಕೋಟಿಯ ಉಪಮೆಯವಾದ ಕೋತಿ ಹಾಗೆ ಇದ್ದಾನೆ ಎಂದು ಹೇಳುವುದ ಉಂಟು. ಈ ಲಕ್ಷ್ಯ ಎನ್ನುವುದು ಕೋಟಿ ಕೊಟ್ಟರು ಸಿಗುವುದಿಲ್ಲ ತಿಳಿಯಿತಾ? ಎಂದು ಭಾಷಣ ಬಿಗಿದ.ಯಾವತ್ತು ಮನುಷ್ಯನ ಮನಸು ಮಗುವಾಗಿ ಇರಬೇಕು. ನಾವು ದೊಡ್ಡವರಾದಂತೆ ದಡ್ದರಾಗುತ್ತೇವೆ. ನಮ್ಮ ಲಕ್ಷ್ಯ ಲಕ್ಷ-ಕೋಟಿ ಕಡೆ ಹೊರಳಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ಮತ್ತೆ ನಾವು ಎಂತಹ ಜನ ಎಂದರೆ ನಿದ್ದೆ ನಿದ್ದೆ ಎಂದು ಸಾಯುತ್ತೇವೆ, ಸಾವು ಬಂದರೆ ಓಡುತ್ತೇವೆ ಎಂದ.

ಅಷ್ಟರಲ್ಲಿ ಮಂಜನ ಮಡದಿ ಕೋಪದಿಂದ ಬಂದು ಮಂಜನ ಬಳಿ ಇದ್ದ ಚೀಲವನ್ನು ಕಸಿದುಕೊಂಡು ಹೊರಟು ಹೋದಳು. ಮಂಜ "ನಿನ್ನ ಜೊತೆ ಮಾತನಾಡುತ್ತ ನಾನು ಹಾಲು ತರುವುದನ್ನೇ ಮರೆತಿದ್ದೆ. ಮಗನಿಗೆ ಸ್ಕೂಲ್ ಗೆ ಲೇಟ್ ಆಗುತ್ತೆ " ಎಂದು ಹೇಳಿ ಮಡದಿಯನ್ನು ಹಿಂಬಾಲಿಸುತ್ತಾ ಹೊರಟು ಹೋದ.

Tuesday, November 22, 2011

ಬರಿಬೇಕು.. ಬರಿಬೇಕು ..

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, 'ಬರ'ಹದಲ್ಲಿ 'ಬರ' ಇದೆ ಎಂದು ತಿಳಿದಿದ್ದೆ ಈ ಸಮಯದಲ್ಲಿ. ಈ ಕ್ಷಾಮಕ್ಕೆ ಪೂರ್ಣ ವಿರಾಮ ಹಾಡಿದರೆ ಕ್ಷೇಮ ಎಂದು, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.

ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು. ನೀವೇ ಬರೆದಿದ್ದೀರಿ ತಾನೇ ಪ್ರೆಸ್ ಎಂದು ನಿಮ್ಮ ಗಾಡಿ ಹಿಂದುಗಡೆ ಎಂದು ಹೇಳಿದ. ಅದನ್ನು ಕೇಳಿ ಅವಳಿಗೂ ನಗು ತಡಿಯಲು ಆಗಲಿಲ್ಲ, ಸುಮ್ಮನೆ ಹೊರಟು ಹೋದಳು. ಹೀಗೆ ಮತ್ತೊಮ್ಮೆ ಮಂಜನ ಮನೆಗೆ ಹೋಗಿದ್ದೆ. ನಾವು ಕಾಫಿ ಕುಡಿಯುತ್ತ ಇರುವಾಗ ಒಂದು ಜೇನು ಹುಳು ಬಂದಿತು. ಅದಕ್ಕೆ ಮಂಜ ಅಕ್ಕ-ಪಕ್ಕದ ಮನೆ ಬಿಟ್ಟು, ಇಲ್ಲೇ ಏಕೆ? ಬಂತು ಗೊತ್ತ ಎಂದು ನನಗೆ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ನನ್ನ ಸಿಹಿ ಮಡದಿಯ ಸಲುವಾಗಿ ಎಂದ. ಮಂಜನ ಮಡದಿ ಅವನನ್ನು ಸಿಟ್ಟಿನಿಂದ ನೋಡಿದಳು. ಏಕೆ? ತಂಗ್ಯಮ್ಮ ಹೊಗಳಿದರು ಕೂಡ ಸಿಟ್ಟು ಎಂದು ಕೇಳಿದೆ. ನಿನ್ನೆ ನನಗೆ ಸ್ವಲ್ಪ ಶುಗರ್ ಇದೆ ಎಂದು ಡಾಕ್ಟರ ಹೇಳಿದರು ಅದಕ್ಕೆ ಈ ಮಾತು ಎಂದಳು. ನನಗೆ ತುಂಬಾ ನಗು ಬಂತು. ಒಮ್ಮೆ ಮಂಜನ ಜೊತೆ ಹೋಟೆಲಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗಿ ತುಂಬಾ ಕಷ್ಟ ಪಟ್ಟು ಫೋರ್ಕ್ ನಿಂದ ದೋಸೆ ತಿನ್ನುತ್ತಿದ್ದಳು. ಅದನ್ನು ನೋಡಿ ಮಂಜ ನಗುತ್ತ ಇವಳು ಫೋರ್ಕಿನಿಂದ ಕಾಫಿ ಕುಡಿದರೆ ಹೇಗಿರುತ್ತೆ ಎಂದು ನನಗೆ ಕೇಳಿದ. ಹೀಗೆ ನನ್ನ ಮಗನಿಗೆ ಕಾರ್ಟೂನ್ ಧ್ಯಾನ... ನನಗೆ ಬರೆಯುವ ಹುಚ್ಚು.

ಹೀಗೆ ಒಮ್ಮೆ ಮಡದಿಗೆ ಬರೆದರೆ ಬೀಚಿ ಅವರ ಹಾಗೆ ಬರೀಬೇಕು ಕಣೇ ಎಂದು ಹೇಳಿದೆ. ಅದಕ್ಕೆ ಮಡದಿ ನೀವು ಏನಾದರು ಗೀಚಿ, ಆದರೆ ಓದು ಓದು ಎಂದು ನನ್ನ ತಲೆ ಮಾತ್ರ ತಿನ್ನಬೇಡಿ ಎಂದು ನನ್ನನ್ನು ತಲೆಯ ಹೇನಿಗೆ ಹೋಲಿಸುವ ಹಾಗೆ ಹೇಳಿದಳು.

ಅಷ್ಟರಲ್ಲಿ ಮಡದಿ ಕೂಗಿ "ಕಸಬರಿಗೆ ತಂದು ಕೊಡಿ" ಎಂದು ಕೂಗಿದಳು. ಕಸಬರಿಗೆ ತೆಗೆದುಕೊಂಡು ಹೋಗಿ ಅವಳ ಕೈಗೆ ಕೊಟ್ಟೆ. ಕೂಡಲೇ ಕಸಬರಿಗೆ ಕೆಳಗೆ ಒಗೆದು,ಕೋಪದಿಂದ ಕಸಬರಿಗೆ ಹೀಗೆ ಕೈಗೆ ಕೊಡುವುದಾ ಎಂದು ಬೈದಳು. ಮತ್ತೆ ಇನ್ನು ಹೇಗೆ ಕೊಡಬೇಕು ತಲೆ ಮೇಲೆ ಇಡಬೇಕಾ ಅಥವಾ ಕಾಲಿಗೆ ಎಂದೆ. ಹೀಗೆ ಕೈಗೆ ಕೊಟ್ಟರೆ ಜಗಳವಾಗುತ್ತೆ ಎಂದು ಕೋಪಮಾಡಿಕೊಂಡು ಜಗಳ ಶುರುಮಾಡಿದಳು. ಅದು ಯಾರು ಅವಳಿಗೆ ಹೀಗೆ ಭವಿಷ್ಯವಾಣಿ ಹೇಳಿದರೋ ನಾ ಕಾಣೆ ಜಗಳ ಆಗುತ್ತೆ ಎಂದು. ಅವರ ಏಳನೇ ಅರಿವು ಸಾಧಿಸಿರುವ ಭವಿಷ್ಯವಾಣಿಗೆ ಸಲಾಂ ಹೊಡೆದೆ(ನಿಜವಾಗಿಯೂ ಜಗಳ ಶುರು ಮಾಡಿದ್ದರಿಂದ). ಇನ್ನೊಮ್ಮೆ ಕಸ'ಬರಿ'ಗೆ ಉಸಾ'ಬರಿ'ಗೆ ಹೋಗುವುದು ಬೇಡ ಎಂದು ನಿರ್ಧರಿಸಿದೆ. ಆದರೂ ಎರಡಲ್ಲೂ ಬರಿ ಎಂಬ ಆಜ್ಞೆ ಮಾತ್ರ ಇತ್ತು.

ಕಸಗುಡಿಸಿದ ಮೇಲೆ ಬಂದು, ಏನು? ಅಷ್ಟು ಆಳವಾಗಿ ಯೋಚಿಸುತ್ತ ಇದ್ದೀರಾ ಎಂದಳು. ಏನಾದರು ಬರೀಬೇಕು ಕಣೇ ಎಂದೆ. ನೀವೇನು ಬರೆಯುವುದು, ಈಗಾಗಲೇ ಎಲ್ಲ ಖ್ಯಾತ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. ನೀವು ಅದನ್ನೇ ನಿಮ್ಮ ಧಾಟಿಯಲ್ಲಿ ಬರೆಯಬಹುದು ಅಷ್ಟೇ. ಅಥವಾ ಅವರು ಬಿಟ್ಟಿರುವ ಅಲ್ಪ ಸಲ್ಪ ಸಾಹಿತ್ಯ ಮಾತ್ರ ಬರೆಯಲು ಸಾಧ್ಯ ನೀವು ಖಾಲಿದಾಸರು ಎಂದು ಹಿಯಾಳಿಸಿದಳು.

"ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ...ಖಾಲಿ ದೋಸೆಗಿಂತ ಒಳ್ಳೆ ರುಚಿ ಇಲ್ಲರಿ" ಎಂದು ಹಾಗೆ ಹಾಡುತ್ತ ಕುಳಿತ್ತಿದ್ದಾಗ, ಇದೊಂದು ಗೊತ್ತು ನಿಮಗೆ ಹೋಗಿ ಬೇಗನೆ ನೀರು ಕಾಯಿಸಿ ಎಂದು ಕಳುಹಿಸಿದಳು. ಬೇಜಾರಿನಿಂದ "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ...." ಎಂದು ಹಾಡುತ್ತ, ನೀರು ಕಾಯಿಸಲು ಹೋದೆ. ಹಾಗೆ ಆಳವಾಗಿ ಯೋಚಿಸುತ್ತ ಕಟ್ಟಿಗೆ ಹಾಕುತ್ತ ಕುಳಿತಿರುವಾಗ ನನ್ನ ಕೈ ಒಳಗಡೆ ಹಾಕಿಬಿಟ್ಟಿದ್ದೆ. ನನ್ನ ಕೈಗೆ ಬರೆ ಬಿದ್ದಿತ್ತು. ಜೋರಾಗಿ ಕಿರುಚಲು ಮಡದಿ ಬಂದು, ಈಗ ಬರೆ ಸಿಕ್ಕಿತಲ್ಲ, ಅದಕ್ಕೆ ಹೇಳಿದ್ದು ನಿಮಗೆ ಬರಿಬೇಕು.. ಬರಿಬೇಕು .. ಎಂದು ಹೇಳಬೇಡಿ ಎಂದು, ಮೇಲೆ ಇರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ಬಿಟ್ಟಿದ್ದಾರೆ ಎಂದು ನಗುತ್ತ, ಇನ್ನೇನು ಬನ್ನಿ ಸಾಕು ಎಂದು ಹೇಳಿ ಕೈಗೆ ಬರ್ನೋಲ್ ಹಚ್ಚಿ ಮಲಗಲು ಹೇಳಿದಳು.

ಮರುದಿನ ಮಂಜ ಮತ್ತು ಅವನ ಮಡದಿ ಮನೆಗೆ ಬಂದಿದ್ದರು.ಮಂಜ ನನ್ನ ಕೈ ನೋಡಿ ಏನು? ಆಯಿತು ಎಂದ. ಅದಕ್ಕೆ ನನ್ನ ಮಡದಿ ನಿಮ್ಮ ಗೆಳೆಯನಿಗೆ ಬರೆ ಬೇಕಾಗಿತ್ತಂತೆ, ಅದಕ್ಕೆ ನಾನು ಕೊಟ್ಟೆ ಎಂದು ತಮಾಷೆ ಮಾಡಿದಳು. ಆಮೇಲೆ ಎಲ್ಲವನ್ನು ವಿಸ್ತಾರವಾಗಿ ಹೇಳಿ, "ಬರೆದಿದ್ದೆಲ್ಲಾ ಸಾಹಿತ್ಯ ಅಲ್ಲ, ಕೊರೆದಿದೆಲ್ಲ ವೇದಾಂತ ಅಲ್ಲ" ಎಂದು ಅಂದಳು. ಇದು ನಮ್ಮದೇ ಮುಖ ಸ್ತುತಿ ಎನ್ನಿಸಿ, ನಾನು ಮತ್ತು ಮಂಜ ಮುಖ.. ಮುಖ.. ನೋಡಿಕೊಂಡೆವು. ನನ್ನ ಮತ್ತು ಮಂಜನ ಮಡದಿ ನಗುತ್ತ ಅಡುಗೆ ಮನೆಗೆ ಹೋದರು.

Saturday, August 27, 2011

ಅತಿಥಿ ದೇವೋಭವ ....

ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ ಸ್ವಚ್ಚವಾಗಿ ಇಡಬೇಕಾ?, ಆಯಿತು ಬಿಡಿ ಹಾಗೆ ಬಿದ್ದಿರಲಿ ನನಗೇನೂ, ಎಷ್ಟೇ ಆದರೂ ಅವು ನಿಮ್ಮ ಸಂಬಂಧಿಕರು(ಗೆಸ್ಟ್) ಅಲ್ಲವೇ ಎಂದಳು. ಅಷ್ಟರಲ್ಲಿ ನನ್ನ ಪುಸ್ತಕದ ಒಳಗಿಂದ ಒಂದು ಜಿರಲೆ ತನ್ನ ಮೀಸೆ ತೋರಿಸುತ್ತ ಹೊರಗಡೆ ಬಂತು. ಪಾಪ ಅದಕ್ಕೂ ಕೇಳಿಸಿರಬೇಕು. ನಿಮಗಿಂತ ಇದೆ ವಾಸಿ ನೀವು ಪುಸ್ತಕ ತಂದು ಒಟ್ಟುತ್ತಿರಿ..ಅದನ್ನು ಓದಲು ಪಾಪ ನಿಮ್ಮ ಸಂಬಂಧಿ ಕಷ್ಟ ಪಡುತ್ತೇ ಎಂದು ವ್ಯಂಗದ ಮಾತು ಆಡಿ ಹೊರಟು ಹೋದಳು. ರಕ್ತ ಸಂಬಂಧಿ ಖಂಡಿತಾ ಅಲ್ಲ ನನ್ನ ರಕ್ತ ಕೆಂಪು ಅದರ ರಕ್ತ ಬಿಳಿ. ಬಿಳಿ ರಕ್ತ ಕಣಗಳು ಮನುಷ್ಯನಲ್ಲಿ ಇರುತ್ತವೆ ಎಂದು ಓದಿದ ನೆನಪು. ಆದರೆ ಸಂಬಂಧಿ ಆಗುವಷ್ಟು ಇವೆ ಎಂದು ಹೇಳಿದ್ದು ಅರಗಿಸಿ ಕೊಳ್ಳಲಾಗಲಿಲ್ಲ.

ಅದು ನಿರ್ಭಯದಿಂದ ನನ್ನ ಪುಸ್ತಕಗಳ ಮೇಲೆ ನಡೆದಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿ ಅದನ್ನು ಹೊಡೆಯಲು ಪೊರಕೆ ತೆಗೆದುಕೊಂಡು ಬರುವಷ್ಟರಲ್ಲಿ ಮಾಯವಾಗಿತ್ತು. ಕಡೆಗೆ ಎಲ್ಲ ಪುಸ್ತಕಗಳನ್ನು ಹೊಂದಿಸಿ ಇಟ್ಟೆ. ಮರೆಯಲ್ಲಿ ಇದ್ದ ಜಿರಲೆ ಮತ್ತೆ ಹೊರಬಂತು. ಈ ಬಾರಿ ಅದನ್ನು ತಿಥಿ ಮಾಡಿ ಅತಿಥಿಯನ್ನು ಮೀಸೆಯಿಂದ ಹಿಡಿದು ಹೊರಗಡೆ ಎಸೆದು ಬಂದೆ.

ಯಾವುದೇ ದೇವರು ಜಿರಳೆಯನ್ನು ವಾಹನ ಮಾಡಿಕೊಳ್ಳದೆ ಇದ್ದದ್ದಕ್ಕೆ, ನಾನು ಎಲ್ಲಾ ದೇವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಏಕೆಂದರೆ, ಮಹಾಭಾರತದಲ್ಲಿ ಆದ ಮಾರಣಹೋಮಕ್ಕಿಂತ, ಒಂದಿಷ್ಟು ಜಾಸ್ತಿ ಅನ್ನುವಷ್ಟು ಜಿರಲೆ ಸಂಹಾರ ಮಾಡಿದ ಕೀರ್ತಿ ನನಗೆ ಸಲ್ಲುತ್ತೆ. ಅದೆಲ್ಲದರ ಪಾಪದ ಜೊತೆಗೆ ಜಿರಲೆ ವಾಹನ ಮಾಡಿಸಿಕೊಂಡ ದೇವರು ಕೂಡ ನನಗೆ ಶಾಪ ಹಾಕುತ್ತಿದ್ದರು. ಇದೆ ಕಾರಣಕ್ಕಾಗಿ ನಮ್ಮ ಇಲಿ ಮಹಾಶಯನಿಗೆ ಪೂರ್ತಿ ಸ್ವಾತಂತ್ರ ನಮ್ಮ ಮನೆಯಲ್ಲಿ ಇದೆ. ನಾನು ಕಾಲಿಡದ ಜಾಗಕ್ಕೂ ಕೂಡ ನಮ್ಮನೆ ಇಲಿ ಮರಿಗಳು ಓಡಾಡುತ್ತವೆ. ಮೊದಮೊದಲು ಜಿರಲೆ ಕಂಡ ಕೂಡಲೇ ಚೀರಲು ಶುರು ಮಾಡುತ್ತಿದ್ದೆ. ಆಮೇಲೆ ಜಿರಲೆ ನನಗೆ ಒಂದು ಚಿಲ್ಲರೆ ಪ್ರಾಣಿಯಾಗಿ ಕಾಣಿಸತೊಡಗಿತು.


ನಾನು ಕಲಿತ ಕೆಲ ವಿಧ್ಯೆ ಪ್ರದರ್ಶಿಸಬೇಕು ಎಂದು ಮಡದಿಯ ಬಳಿ ಬಂದು ಜಿರಲೆಗೆ ಮೀಸೆ ಹೇಗೆ ಉಪಯೋಗಕ್ಕೆ ಬರುತ್ತೆ ಹೇಳು ಎಂದು ಕೇಳಿದೆ. ಅದಕ್ಕೆ ಮಡದಿ ಅದನ್ನು ಸಾಯಿಸಿದ ಮೇಲೆ ಅದನ್ನು ಎತ್ತಿ ಹಿಡಿದು ಬಿಸಾಡುವುದಕ್ಕೆ ಎಂದು ಹೇಳಿದಳು. ಅದಲ್ಲಾ ಕಣೇ ಏಕೆ? ಇರುತ್ತೆ ಹೇಳು ಎಂದೆ. ಮತ್ತೆ ಯೋಚಿಸಿ, ಅದು ಶೇವಿಂಗ್ ಮಾಡಿಕೊಂಡಿರಲ್ಲ ಅದಕ್ಕೆ ಇರುತ್ತೆ ಎಂದು ಹೇಳಿ ನಗಹತ್ತಿದಳು. ನಾನು ಅದರ ಮೀಸೆಯಿಂದ ಅದು ಆಹಾರ ಹುಡುಕುತ್ತೆ, ಮತ್ತು ಅದರಿಂದ ಹೆಣ್ಣು ಜಿರಲೆಗಳನ್ನು ಆಕರ್ಷಿಸಲು ಉಪಯೋಗಿಸುತ್ತೆ ಎಂದು ಹೇಳಿದೆ. ಓ ಹಾಗಾ.. ಎಂದು ರಾಗ ಎಳೆದು, ಹೇಗೆ ಇದ್ದರೂ ಇಷ್ಟು ಸ್ವಚ್ಚ ಮಾಡಿದ್ದೀರಾ, ಪೂರ್ತಿ ಮನೆ ಸ್ವಚ್ಚ ಮಾಡಿಬಿಡಿ ಮೀಸೆ ಹೊತ್ತ ಗಂಡಸರೇ...ನಾನು ಅಡುಗೆ ಮಾಡುತ್ತೇನೆ ಎಂದಳು ಮಡದಿ. ಪೂರ್ತಿ ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮತ್ತಷ್ಟು ಮಾರಣಹೋಮ ನಡೆಯಿತು. ಮನೆಯಲ್ಲಿ ತುಂಬಾ ಧೂಳು ಇದ್ದಂದರಿಂದ ಸ್ವಲ್ಪ ನೆಗಡಿ ಆಯಿತು. ಹೀಗಾಗಿ ಸಂಜೆ ಡಾಕ್ಟರ ಬಳಿ ಹೋಗುವ ಪರಿಸ್ತಿತಿ ಬಂತು.


ಡಾಕ್ಟರ ಎಲ್ಲ ಪರೀಕ್ಷಿಸಿ ಒಂದಿಷ್ಟು ಮಾತ್ರೆ ಕೊಟ್ಟರು. ತೆಗೆದುಕೊಂಡು ಮನೆಗೆ ಬಂದೆ. ಊಟವಾದ ಮೇಲೆ ಹಾಗೆ ಮಲಗಿಕೊಳ್ಳುವ ಸಮಯದಲ್ಲಿ ಜ್ಞ್ಯಾಪಕಕ್ಕೆ ಬಂತು ಮಾತ್ರೆ ತೆಗೆದುಕೊಂಡಿಲ್ಲವೆಂದು. ಮಡಿದಿಗೆ ಒದರಿ ಹೇಳಿದೆ ಮಾತ್ರೆ ತೆಗೆದುಕೊಂಡು ಬಾ ಎಂದು. ಅವಳು ಮಾತ್ರೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಹೋಯಿತು. ಅವಳು ತೆಗೆದುಕೊಂಡು ಬಂದು ಕೊಟ್ಟಳು. ಅದನ್ನು ಹಿಡಿದುಕೊಂಡು ಕುಳಿತಿದ್ದೆ. ಅವಳು ನೀರು ತರಲು ಹೋದಳು. ನೀರು ತಂದು ಕೊಟ್ಟಳು. ಅಷ್ಟರಲ್ಲಿ ಮತ್ತೆ ಕರೆಂಟ್ ಬಂತು. ಅವಳು ನನ್ನನು ನೋಡಿ ಜೋರಾಗಿ ನಗಹತ್ತಿದಳು. ನಾನು ನನ್ನ ಕೈಯಲ್ಲಿ ಇದ್ದದ್ದು ನೋಡಿ ನನಗೆ ಗಾಬರಿ, ಏಕೆಂದರೆ? ಅದು ಡಾಕ್ಟರ ಕೊಟ್ಟ ಮಾತ್ರೆ ಇರಲಿಲ್ಲ. ಕ್ಯಾಪ್ಸುಲ್ ಹಾಗೆ ಇದ್ದ ನಮ್ಮ ಸಂಬಂಧಿ ಬಿಟ್ಟು ಹೋದ ಗಿಫ್ಟ್. ಅದೇ ... ಅದರ ಕ್ಯಾಪ್ಸುಲ್ ಗಾತ್ರದ ಜಿರಳೆ ಮೊಟ್ಟೆ. ಸಧ್ಯ ಸ್ವಲ್ಪದರಲ್ಲೇ ಬಚಾವ ಅದನ್ನು ಬಿಸಾಡಿ ಮಾತ್ರೆ ತೆಗೆದುಕೊಂಡು, ನನ್ನ ಪ್ರೀತಿಯ ಶ್ರೀ ರಾಮನನ್ನು ನೆನೆದು ನಿದ್ದೆಗೆ ಜಾರಿದೆ.

Wednesday, August 24, 2011

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.

ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.

ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.

ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.

Friday, August 5, 2011

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.

ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.

ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.

ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.

ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು" ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.

ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.

Tuesday, July 12, 2011

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ!!!!

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗಲಾರದ ಮಡದಿ, ಮಗ ಇಬ್ಬರೂ, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.

ನಾವು ಚಿಕ್ಕವರಿದ್ದಾಗ ಕೂಡ ಕೆಲ ಹುಡುಗರು ಗ್ಯಾಸ್ ಬಿಡುತ್ತಿದ್ದರು. ಅದು ಶಬ್ಧ ಮಾಡಿ ಹೊರಬಂದರೆ ಎಲ್ಲರಿಗೂ ತಿಳಿಯುತ್ತಿತ್ತು, ಆದರೆ ಕೆಲವೊಮ್ಮೆ ನಿಶ್ಯಬ್ಧವಾಗಿ ಬಂದಾಗ, ಯಾರು ಜೋರಾಗಿ ನಗುತ್ತಾರೆ ಅವರೇ...ಅದರ ಕಾರಣ ಕರ್ತರೆಂದು ನಿರ್ಧಾರಕ್ಕೆ ಬಂದು ಬಿಡುತ್ತಿದ್ದೆವು. ಕೆಲವರಿಗೆ ಕೈಯಿಂದ ಸಿಳ್ಳೆ ಹೊಡೆಯಲು ಬಾರದಿದ್ದರೂ ಕೂಡ ಶಬ್ದ ಮಾಡಿ ಬರುತಿತ್ತು.

ಲೇ ಹೊಟ್ಟೆ ನೋವು ಕಣೇ ಎಂದು ಮಡದಿಗೆ ಹೇಳಿದೆ. ಲಗುಬಗೆಯಿಂದ ತನ್ನ ಕೈಯಲ್ಲಿ ಇದ್ದ ಮೊಬೈಲ್ ಟೇಬಲ್ ಮೇಲೆ ಇಟ್ಟು, ನನ್ನ ಮೊಬೈಲ್ ತೆಗೆದುಕೊಂಡು, ತನ್ನ ಡಾಕ್ಟರ ಗೆಳತಿಗೆ ಕರೆ ಮಾಡಿದಳು. ನನ್ನ ಎಲ್ಲ ಗೆಳೆಯರು ಇಂಜಿನಿಯರಿಂಗ್ ಓದಿದ್ದರಿಂದ ಮಿತ್ರ ದ್ರೋಹಿಗಳು ಎಂದು ಕೋಪ ಕೂಡ ಬಂತು. ಮಿತ್ರರು ಎಂದರೆ ಇವರು, ಒಬ್ಬರಿಗೆ.. ಒಬ್ಬರು.. ಸಹಾಯ ಮಾಡುವವರು ಎಂದು ಅನ್ನಿಸಿತು. ಅವರಿಬ್ಬರ ಸುಧೀರ್ಘ ಕ್ಷೇಮ ಸಮಾಚಾರವಾದ ಮೇಲೆ, ನನ್ನ ಬಡಪಾಯಿಯ ಹೊಟ್ಟೆಯ ಮುಖ್ಯಾ೦ಶಗಳು ಶುರು ಆದವು. ಹೊಟ್ಟೆ ನೋವು ನಮ್ಮ ಯಜಮಾನರಿಗೆ ಎಂದು ಹೇಳಿ, ಅವಳೇ ಎಲ್ಲವನ್ನು ಸವಿಸ್ತಾರವಾಗಿ ವಿವರಣೆ ಕೊಟ್ಟು, ಫೋನ್ ಕಟ್ ಮಾಡಿ, ಗಾಬರಿಯಿಂದ ನಡೆಯಿರಿ ಡಾಕ್ಟರ ಬಳಿ ಎಂದು, ಬೇಗನೆ ಡಾಕ್ಟರ ಬಳಿ ಕರೆದುಕೊಂಡು ಹೋದಳು.

ಡಾಕ್ಟರ ಬಳಿ ಹೋದ ಕೂಡಲೇ "ಡಾಕ್ಟರ ಬೇಗ ಪರೀಕ್ಷಿಸಿ" ಎಂದು ಹೇಳಿದಳು. ಅವಳ ಗಾಬರಿಯನ್ನು ನೋಡಿ, ಡಾಕ್ಟರ ಅವರ ಹೆಂಡತಿಗೆ ಪರೀಕ್ಷಿಸಲು ಹೇಳಿದರು. ನಾನು ಲೇಡಿ ಡಾಕ್ಟರ ಎಂದು ಖುಷಿಯಿಂದ ಮುಖ ಅರಳಿಸಿ ನಿಂತಿದ್ದೆ. ಬಂದವರೇ ನನ್ನ ಹೆಂಡತಿಯನ್ನು ಪರೀಕ್ಷಿಸಲು ಶುರು ಮಾಡಿದರು. ಹೆಂಡತಿ ನನಗೆ ಅಲ್ಲ, ನನ್ನ ಮನೆಯವರಿಗೆ ಎಂದಳು. ಓ ಅವರಾ ಪೇಶಂಟ್ ಎಂದು, ಲೇಡಿ ಡಾಕ್ಟರ ತಮ್ಮ ಗಂಡನಿಗೆ ಪರೀಕ್ಷೆ ಮಾಡಲು ಹೇಳಿ ಹೋಗಿ ಕುಳಿತರು. "ಮುಖ ನೋಡಿ ಮಣೆ ಹಾಕುವವರು" ಎಂದರೆ ಇದೆ ಎಂದು, ನನಗೆ ಆಗ ಅರ್ಥ ಆಗಿತ್ತು. ಡಾಕ್ಟರ ಪರೀಕ್ಷಿಸಲು ಶುರು ಮಾಡಿದರು. ಎಲ್ಲಿ ನೋವು ಎಂದರು, ನಾನು ಹೇಳುವ ಮೊದಲೇ, ನನ್ನ ಮಡದಿ ಬಲಗಡೆ ಎಂದಳು. ನಾನು ಇಲ್ಲಾ ಸರ್ ಎಡಗಡೆ ಎಂದೆ. ನಿಮಗೆ ಏನು ಆಗಿಲ್ಲ ಗ್ಯಾಸ್ ಆಗಿದೆ ಅಷ್ಟೇ ಎಂದು ಹೇಳಿ ಎರಡು-ಮೂರೂ ಮಾತ್ರೆ ಬರೆದುಕೊಟ್ಟು ಕಳುಹಿಸಿದರು.

ಹೊರ ಬಂದ ಮೇಲೆ, ಹೆಂಡತಿ ಜೋರಾಗಿ ನಗಲು ಶುರು ಮಾಡಿದಳು. ಏಕೆಂದು ಕೇಳಿದೆ. ಆಗ ನಿಮಗೆ ಎಡಗಡೆ ನೋಯುತ್ತಿದ್ದರು, ನನ್ನ ಬಲಗಡೆ ಎಂದು ತಿಳಿದು ನನ್ನ ಗೆಳತಿಗೆ ಹೇಳಿದ್ದೆ ಎಂದಳು. ಅದಕ್ಕೇನೀಗ ಎಂದೆ. ಅದಕ್ಕೆ ಅವಳ ಗೆಳತಿ ಎಡಗಡೆ ನೋಯುತ್ತಿದ್ದರೆ ಗ್ಯಾಸ್, ಬಲಗಡೆ ನೋಯುತ್ತಿದ್ದರೆ ಅಪೇ೦ಡಿಸ್ ತುಂಬಾ ಸಿರಿಯಸ್ ಎಂದು ಹೆದರಿಸಿ ತನ್ನ ಬುದ್ಧಿ ಮತ್ತೆ ಪ್ರದರ್ಶಿಸಿದ್ದಳು. ಅದಕ್ಕೆ ನಾನು ಗಾಬರಿಯಿಂದ ನಿಮ್ಮನ್ನು ಡಾಕ್ಟರ ಬಳಿ ಕರೆದುಕೊಂಡು ಬಂದೆ ಎಂದಳು. ಹೊಟ್ಟೆ ನೋವು ಎಂದು ಹೆರೆಗೆ ಆಸ್ಪತ್ರೆಗೆ ಹಾಕಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ನಗುತ್ತ ಮನೆಗೆ ಬಂದೆವು.

ಮರುದಿನ ಆಫೀಸ್ ಹೋಗುವ ಸಮಯದಲ್ಲಿ ಶೂ ಲೇಸ್ ನ್ನು ಲೇಸ್.. ಲೇಸ್.. ಎನ್ನುತ್ತಾ ಮನೆ ತುಂಬಾ ಹುಡುಕುತ್ತಿದ್ದೆ, ಅಷ್ಟರಲ್ಲಿ ಮಡದಿ ಅಡುಗೆಮನೆಯಿಂದ ಬಂದು ರೀ ನಿನ್ನೇನೆ ಗ್ಯಾಸ್ ಎಂದು ಒದ್ದಾಡುತ್ತಾ ಇದ್ದೀರಿ, ಆಗಲೇ ಲೆಯ್ಸ್ ಚಿಪ್ಸ್ ಬೇಕಾ? ಎಂದಳು. ನಾನು ಲೆಯ್ಸ್ ಚಿಪ್ಸ್ ಅಲ್ಲ ಲೇಸ್ ಎಂದು ಹೇಳಿದೆ. ಅವಳೇ ಹುಡುಕಿ ಕೊಟ್ಟಳು.

Sunday, June 12, 2011

ಚಹಾ ಗರಮ್ !!!!

ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ ಇಲ್ಲದೆ ಬಿಸಿ ಚಹಾ ಕೋಡುತ್ತಿದ್ದ ಮಡದಿ, ಈವತ್ತು ಸ್ವಲ್ಪ ಗರಮ್ ಅಗಿದ್ದಳು. ಕೆಲವರು ಹೆ೦ಡತಿಯ ಉಪದ್ರವ ತಾಳಲಾರದೆ ಕೆಲ ಗ೦ಡಸರು ಹೆ೦ಡ ಎ೦ಬ ದ್ರವದ ಉಪಾಸಕರಾಗಿರುತ್ತಾರೆ. ಸ೦ಜೆ ಸಮಯದಲ್ಲಿ ಚಹಾ ಸಿಗುವುದು ಸ್ವಲ್ಪ ಕಷ್ಟನೇ. ಆದರೂ ಹುಡುಕಿಕೊ೦ಡು ಹೊರಟೆ, ಅದೆ ಧಾರವಾಡದಲ್ಲಿ ಇದ್ದಿದ್ದರೆ ಯಾವುದಾದರು ಗೆಳೆಯರ ಮನೆಗೆ ಹೊಕ್ಕರೆ ಸಾಕು ಚಹಾ ಅನಾಯಾಸವಾಗಿ ಸಿಗುತ್ತಿತ್ತು. ಧಾರವಾಡದಲ್ಲಿ ಊರಿ ಬಿಸಿಲಲ್ಲೂ ಕೂಡ ಚಹಾ ಸರಾಗವಾಗಿ ಎಲ್ಲರೂ ಹೀರುತ್ತಾರೆ. ಟೂಥಪೆಸ್ಟ್ ತೆಗೆದುಕೊ೦ಡು ಬರುತ್ತೇನೆ ಎ೦ದು ನೆಪ ಹೇಳಿದೆ. ಮು೦ಜಾನೆ ಕೇಳಿದರೆ ಟೂಥಪೆಸ್ಟ್ ಕಲಿಯುಗದ ಅಕ್ಷಯ ಪಾತ್ರೆ ಅಲ್ಲಿ-ಇಲ್ಲಿ ಸ೦ದಿ ಗೊ೦ದಿಯಲ್ಲಿ ಸ್ವಲ್ಪ ಇದ್ದೆ ಇರುತ್ತೆ, ಇಷ್ಟರಲ್ಲೆ ಮುಗಿಸು ತಿ೦ಗಳ ಕೊನೆ ಎ೦ದಿರಿ ಅ೦ದಳು. ಮ೦ಜನ ಹತ್ತಿರ ದುಡ್ಡು ಕೇಳಿ ಇಸಿದುಕೊ೦ಡಿದ್ದೇನೆ ಎ೦ದು ಹೇಳಿ ಹೊರಬಿದ್ದೆ. ಅಷ್ಟರಲ್ಲಿ ಮ೦ಜ ಸಿಕ್ಕ. ಮ೦ಜನಿಗೆ ನಾನು ಏನು ಹೇಳದಿದ್ದರು, ಏನಪ್ಪ, ಚಹಾ ಅ೦ಗಡಿ ಹುಡುಕುತ್ತಾ ಇದ್ದೀಯಾ? ಎ೦ದ. ನನಗೆ ಆಶ್ಚರ್ಯ ಇವನಿಗೆ ಹೇಗೆ ತಿಳಿಯಿತು ಎ೦ದು.

ಅವನೇ ಒ೦ದು ಚಹಾ ಅ೦ಗಡಿಗೆ ಕರೆದುಕೊ೦ಡು ಹೋದ, ಚಹಾ ಹೀರುತ್ತಾ ಇದು ಮಹಿಳಾ ಮಣಿಗಳ ಸ೦ಘಟನೆ ಎ೦ದಾಗ ತಿಳಿಯಿತು. ಅದಕ್ಕೆ ನಾನು ನೀನು ಚಹಾ ಕೇಳಿ ಬೈಯಿಸಿಕೊ೦ಡೆ ಎ೦ದು ನಗ ಹತ್ತಿದೆ. ಅದಕ್ಕೆ ಮ೦ಜ ನಾನು ಚಹಾ ಮತ್ತು ಕಾಫಿ ಎರಡು ಕೇಳಿದ್ದೆ ಕಣೊ, ಆದರೆ ನಿಮ್ಮ ಅತ್ತಿಗೆ ಗೊತ್ತು ತಾನೆ, ಮತ್ತಷ್ಟು ಬೈದಳು ಎ೦ದ. ಎರಡು ಏನಕ್ಕೆ ಕೇಳಿದೆ ಎ೦ದೆ. ಅವಳು ಚಹಾ ಕೇಳಿದರೆ ನಿದ್ರೆ ಬರಲ್ಲ ಎ೦ದಳು. ಅದಕ್ಕೆ ಚಹಾ ಮತ್ತು ಕಾಫಿ ಎರಡೂ ಮಾಡು, ಎರಡು ಸೇರಿದರೆ ಚಾಪಿ ಅಗುತ್ತೆ, ಅಮೆಲೆ ತಾನೇ ನಿದ್ರೆ ಬರುತ್ತೆ ಎ೦ದೆ ಅ೦ದ. ಮತ್ತಷ್ಟೂ ನಗು ಬ೦ತು. ಆದರೆ ಈವನ ಬುದ್ಧಿಮತ್ತೆಗೆ ಭೇಷ್ ಎ೦ದೆ. ಮದುವೆ ಆದರೂ ನಮಗೆ ಈ ಹೋಟೆಲ್ ಚಹಾ ತಪ್ಪಲಿಲ್ಲ ಎ೦ದ ಮ೦ಜ. ಹೆ೦ಡತಿಗೆ ಅರ್ಧಾ೦ಗಿ ತು೦ಬಾ ಅನ್ವರ್ಥಕ ಅಗುತ್ತೆ ನೋಡು ಎ೦ದ. ಅ೦ದರೆ... ಎ೦ದೆ. ಅರ್ಧಾ೦ಗಿ ಎ೦ದರೆ ಅರ್ಧ ಅ೦ಗಿನೇ. ಯಾರಾದರು ಅರ್ಧ ಅ೦ಗಿ ಹಾಕಿ ಹೊರಗಡೆ ಬರುತ್ತಾರಾ ಎ೦ದ. ಅದಕ್ಕೆ ನೋಡು ಸೆಲೆಬ್ರಿಟೀಗಳು ಎರಡೆರಡು ಮದುವೆ ಅಗುತ್ತಾರೆ, ಆಗ ಅರ್ಧ ಮತ್ತೊ೦ದು ಅರ್ಧ ಸೇರಿ ಪೂರ್ತಿ ಅ೦ಗಿ ಅಗುತ್ತೆ ಅಲ್ಲವಾ ಎ೦ದು ಹೇಳಿದ. ನಮ್ಮ ನಗುವಿನ ಜೊತೆಗೆ ಒ೦ದು ಮತ್ತು ಇನ್ನು ಅರ್ಧ ಹೆಚ್ಚಿಗೆ ಅ೦ಗಿ ತೊಟ್ಟ ಹೊಟೇಲ್ ಮಾಲೀಕ ಕೂಡ ನಕ್ಕ.

ಕಡೆಗೆ ಚಹಾ ಕುಡಿದು, ಟೂಥಪೆಸ್ಟ್ ತೆಗೆದುಕೊ೦ಡು ಮನೆಗೆ ಬ೦ದೆ. ಮರುದಿನ ಬೇಗನೆ ಎಬ್ಬಿಸಿದ ಮಡದಿ ಚಹಾ ತೆಗೆದುಕೊಳ್ಳಿ ಎ೦ದು ಕೂಗುತ್ತ ಇದ್ದಾಗ, ಕನಸಿನಲ್ಲಿ ನಾನು ಫಾರಿನ್ಹನಲ್ಲಿ ಮಸಾಲೆ ದೋಸೆ ತಿನ್ನುತ್ತ ಇದ್ದೆ. ಇನ್ನು ಅರ್ಧ ತುತ್ತು ಬಾಯಿಗೆ ಬ೦ದಿರಲಿಲ್ಲ. ಎದ್ದು ಹಲ್ಲು ಉಜ್ಜಿ ಚಹಾ ಹೀರಿದೆ. ಎಕೋ ಸ್ವಲ್ಪ ಬೆನ್ನು ನೋವು ಶುರು ಆಯಿತು. ಬೆನ್ನು ನೋವು ಕಣೇ ಎ೦ದೆ. ನಿಮ್ಮ ಮಗನ ಕಡೆ ಮುರು ಬಾರಿ ಸ್ವಲ್ಪ ಒದಯಿಸಿಕೊಳ್ಳಿ ಹೊಗುತ್ತೆ ಎ೦ದಳು. ಹಾ.. ಏನ೦ದೆ ಎ೦ದು ಬಾಯಿ ಬಿಟ್ಟು ಕೇಳಿದೆ. ಕಾಲು ಮು೦ದು ಮಾಡಿ ಹುಟ್ಟಿದ ಮಕ್ಕಳಿ೦ದ ಒದಯಿಸಿಕೊ೦ಡರೆ ಹೊಗುತ್ತೆ. ಬೇಕಾದರೆ ನಾನು ಕೂಡ ಕಾಲು ಮು೦ದೆ ಮಾಡಿ ಹುಟ್ಟಿದ್ದು ಎ೦ದಳು. ಅರ್ಥ ಆಯಿತು ಬಿಡು ನೀವಿಬ್ಬರೂ ಹುಟ್ಟಿದ್ದೆ ನನ್ನ ಒದೆಯೊದಕ್ಕೆ ತಾನೇ ಎ೦ದೆ. ನೋಡಿ ಬೇಕಾದರೆ ಮಾಡಿಸಿಕೋಳ್ಳಿ ಇಲ್ಲಾ ಬಿಡಿ ಎ೦ದಳು.

ಆಫೀಸ್ ಲೇಟ್ ಆಗುತ್ತೆ ಎಂದು ಕಡೆಗೆ ಒದಯಿಸಿಕೊಂಡು ಹೊರಟೆ. ಸ್ವಲ್ಪ ಆರಾಮ ಅನ್ನಿಸಿದರೂ ಆಫೀಸ್ ಹೋದ ಮೇಲೆ ಮತ್ತಷ್ಟು ನೋವು ಶುರು ಆಯಿತು. ಕಡೆಗೆ ಆಫೀಸ್ ರಜೆ ಹಾಕಿ ಮನೆಗೆ ಬಂದೆ. ಕಡೆ ಪ್ರಯೋಗವಾಗಿ ಮಡದಿಯಿಂದ ಕೂಡ ಒದೆ ಪ್ರಯೋಗ ಆಯಿತು ಆದರೂ ಕಡಿಮೆ ಆಗಲಿಲ್ಲ. ಸಂಜೆ ಸ್ವಲ್ಪ ನೋವು ಜ್ಯಾಸ್ತಿ ಅನ್ನಿಸಿ ಮಡದಿ ಜೊತೆ ಆಸ್ಪತ್ರೆಗೆ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ ನಿಮಗೆ ಏನೋ ಆಗಿಲ್ಲ ಅಸಿಡಿಟೀ ಅಷ್ಟೇ ಎಂದರು. ತುಂಬಾ ಚಹಾ-ಕಾಫೀ ಕೂಡಿ ಬೇಡಿ ಎಂದು ಹೇಳಿದರು.

ಕಡೆಗೆ ಮನೆಗೆ ಬಂದ ಮೇಲೆ ಪಕ್ಕದ ಮನೆಯಲ್ಲಿ ಆಡುತ್ತಾ ಇದ್ದ ಮಗ, ಅಪ್ಪನಿಗೆ ಡಾಕ್ಟರ್ ಏನು? ಮಾಡಿದರು ಎಂದು ಕೇಳಿದ. ಅದಕ್ಕೆ ಮಡದಿ ಸ್ವಲ್ಪ ಒದ್ದರು ಎಂದು ಅಪಹಾಸ್ಯ ಮಾಡಿದಳು. ಅದಕ್ಕೆ ಮಗ ನಾನು ಒದೆಯುತ್ತೇನೆ ಎಂದು ಬಂದ. ನಾಳೆಯಿಂದ ನನ್ನ ಪ್ರಿಯವಾದ ಚಹಾಕ್ಕೆ ಬೈ ಬೈ....

Friday, May 20, 2011

ಸಮರ ಆರ೦ಭ ....

ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು ಹೋಗಿ. ನನಗೆ ಬೇಗ ಏಳೋಕೆ ಆಗಲ್ಲ ಎಂದು ಬೈದಿದ್ದಳು . ಸಮಾರಂಭದಲ್ಲಿ ಏನಾದರೂ ಸಿಗುತ್ತೆ, ನಾನು ಅಲ್ಲೇ ತಿನ್ನುತ್ತೇನೆ ಎಂದು ಹೇಳಿ ಸಮರದ ಅಂತ್ಯ ಹಾಡಿ ಬಂದಿದ್ದೆ.

ಸಮಾರಂಭದಲ್ಲಿ ಇದ್ದ ಉಪಿಟ್ಟು ನೋಡಿ, ಬೇಡ ಎಂದು ಕಾಫೀ ಕುಡಿದು ಬಂದು ಕುಳಿತೆ. ಆರಂಭಿಕ ಭಾಷಣ ಮಾಡುವವರು, ನನ್ನ ನೋಡಿ ಭಾಷಣ ಮಾತನಾಡುತ್ತಾ ಇದ್ದಾರೆ ಎಂದು ಅನ್ನಿಸಿತು. ಮೊದಲು ನಾನೊಬ್ಬನೇ ಇದ್ದೇನೆ ಎಂದು ಅಕ್ಕ ಪಕ್ಕ ನೋಡಿದೆ ತುಂಬಾ ಜನರಿದ್ದರು. ಪಕ್ಕದಲ್ಲಿ ಒಬ್ಬ ನಿದ್ದೆ ಹೊಡೆಯುತ್ತಿದ್ದ. ನಾನು ಅವನನ್ನೇ ನೋಡಿ ಭಾಷಣ ಮಾಡುತ್ತಿರಬೇಕು ಎಂದು ಎಬ್ಬಿಸಿದೆ. ಆಸಾಮಿ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಿ ಎದ್ದು ಹೋದ. ಮತ್ತೆ.. ಮತ್ತೆ ನನ್ನ ನೋಡಿ ಭಾಷಣ ಮಾಡುತ್ತ ಇದ್ದಿದ್ದರಿಂದ, ನನಗೆ ಇನ್ನಷ್ಟು ಸಂಶಯ ಬಂದು ಮೊದಲು ನನ್ನನ್ನು ನಾನು ಪೂರ್ತಿ ನೋಡಿಕೊಂಡೆ. ಕಡೆಗೆ ನಾನು ಹಾಕಿರುವ ಡ್ರೆಸ್ ಎಲ್ಲವು ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡೆ. ಆದರು ಭಾಷಣಕಾರ ನನ್ನ ಕಡೆನೇ ನೋಡಿ ಮಾತನಾಡುತ್ತಿದ್ದರು. ಹುರುಪಿನಿಂದ ಭಾಷಣ ಮುಗಿದ ಮೇಲೆ ಜೋರಾಗಿ ಚಪ್ಪಾಳೆ ತಟ್ಟಿದೆ. ಈಗ ಭಾಷಣಕಾರನಲ್ಲದೆ ಎಲ್ಲರು ನನ್ನನ್ನೇ ನೋಡಿದರು. ಸಧ್ಯ ಶಿಳ್ಳೆ ಹೋಡಿಲಿಲ್ಲ ಬಚಾವ ಅನ್ನಿಸಿತು.

ಆಮೇಲೆ ಸುಗಮ ಸಂಗೀತ ಶುರು ಆಯಿತು. ಆಗ ಕೂಡ ಸುಗಮ ಸಂಗೀತ ಹಾಡುವ ಮನುಷ್ಯ ಕೂಡ ನನ್ನ ಕಡೆನೆ ದೃಷ್ಟಿ ಹರಿಸಿ ತನ್ನ ಗಾನ ಸುಧೆಯನ್ನು ಹರಿಸಿದ. ಮತ್ತೆ ಕೆಲ ಸಮಯದ ನಂತರ "ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.." ಎಂದು ಹಾಡಬೇಕೆ?. ಅವನಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಯಿತು. ಮತ್ತೆ ಹೀಗೆಲ್ಲ ಆಗುವುದನ್ನು ನೋಡಿ ನನಗೆ ಮಂಜ ನೆನಪಿಗೆ ಬಂದ. ಅವನೇನಾದರೂ ಕಿತಾಪತಿ ಎಂದು ಛೆ... ಛೆ... ಅವನಿಗೆ ಹೇಗೆ ಗೊತ್ತು ನಾನು ಇಲ್ಲಿ ಬಂದಿರೋದು. ಅವನು ಇಲ್ಲಿ ಇಲ್ಲ ಬೇರೆ ಎಂದು ಯೋಚಿಸಿದೆ.

ಸಭಾಂಗಣಕ್ಕೆ ಹೋಗಿ ಕೇಳಿಯೇ ಬಿಡೋಣ ಎಂದು ಹೊರಟು ನಿಂತ ಸಮಯದಲ್ಲಿ, ಒಬ್ಬ ಈ ಸಮರ ಆರ೦ಭ ಆಯಿತು ಅಂದರೆ ಮುಗಿತು ನೋಡಿ ಎಂದರು. ನನಗೆ ಆಶ್ಚರ್ಯ ನಾನು ಸಮರ ಆರಂಭ ಮಾಡುವುದು ಸಹ ಇವರಿಗೆ ಹೇಗೆ ತಿಳಿಯಿತು ಎಂದು. ಬನ್ನಿ ಫ್ಯಾನ್ ಕೆಳಗಡೆ ಕುಳಿತುಕೊಳ್ಳೋಣ ಎಂದು ಮುಂದೆ ಹೊರಟಾಗ ತಿಳಿಯಿತು, ಅವರು ಅಂದಿದ್ದು ಇಂಗ್ಲಿಷ್ Summer ಎಂದು.

ಮುಂದೆ ಹೋಗುವ ಸಮಯದಲ್ಲಿ ಹಿಂದೆ ಒಮ್ಮೆ ಕಣ್ಣಾಡಿಸಿದೆ. ಹಿಂದೆ ಯಾರು ಇದ್ದಾರೆ ಎಂದು ನೋಡಿದ ಮೇಲೆ ನನಗೆ ಅರಿವಿಗೆ ಬಂದಿದ್ದು. ಒಬ್ಬ ಸುಂದರ ಚಿತ್ರ ನಟಿ, ಅವರು ಅವಳನ್ನು ನೋಡಿ ತಮ್ಮ ಭಾಷಣ ಮಾಡುತ್ತ ಇದ್ದರು ಎ೦ದು. ಅದು ನನ್ನ ಕುರ್ಚಿ ಹಿಂದೆ. ಹಿಂದೆ ನೋಡುತ್ತೇನೆ ಮಂಜ ಬೇರೆ ಬಂದುಬಿಟ್ಟಿದ್ದಾನೆ. ಅವನಿಗೆ ಇಂತಹ ಸಮಾರಂಭದಲ್ಲಿ ಎಂದಿಗೂ ನೋಡಿರಲೇ ಇಲ್ಲ. ಎದ್ದು ಅವನ ಬಳಿ ಹೋದೆ. ಮಂಜಣ್ಣ ನೀನು ಇಲ್ಲಿ ಎಂದೆ. ಏನು ಇಲ್ಲ ಮಹರಾಯ ಈ ನಟಿ ಬರುತ್ತಾಳೆ ಅಂತ ಪೇಪರ್ ನಲ್ಲಿ ಬಂದಿತ್ತು ಅದಕ್ಕೆ ಬಂದೆ ಅಂದ. ಕಾರ್ಯಕ್ರಮ ಮುಗಿದ ಮೇಲೆ ಗೊತ್ತಾಯಿತು ತುಂಬಾ ಜನ ಪರಿಚಯದವರು ಬಂದಿದ್ದಾರೆ ಎಂದು. ಮಂಜ ನಮ್ಮಿಬ್ಬರ ಹಳೆಯ ಗೆಳೆಯ ಶ್ರೀಕಾಂತ ಬಂದಿದ್ದನ್ನು ನೋಡಿ, ಅಲ್ಲಿ ನೋಡು ಗೋಪಿ.. ಡಾಕ್ಟರ ಶ್ರೀಕಾಂತ ಬಂದಿದ್ದಾನೆ ಎಂದ. ಹೋಗಿ ಮಾತನಾಡಿಸಿ ಬಂದೆವು. ಶ್ರೀಕಾಂತನ ಕಾರ್ ತುಂಬಾ ಚೆನ್ನಾಗಿತ್ತು. ಮನೆಗೆ ಬನ್ನಿ ಎಂದು ಕೈ ಮಾಡುತ್ತ ಹೋಗುತ್ತಿದ್ದಾಗ, ನಾನು ಮಂಜಣ್ಣ ಛೆ... ನೆನಪೇ ಹಾರಿ ಹೋಯಿತು ನೋಡು. ಅವನಿಗೆ ಸ್ವಲ್ಪ ಔಷಧಿ ಕೇಳಬೇಕು ಎಂದು ಹೊರಟೆ. ಮಂಜ ತಡೆದು, ಲೇ ಅವನು ಹೋಮಿಯೋಪತಿ ಅಂದ. ನನಗೆ ಹೋಮಿಯೋಪತಿ ಔಷಧಿ ನಡೆಯುತ್ತೆ ಎಂದು ಹೊರಟೆ. ತಡೆದು ನಗುತ್ತ ಲೇ ಹಂಗೆ ಅಂದರೆ "ಮನೆ ಅಳಿಯ" ಅಂತ ಅರ್ಥ ಎಂದ. ಅವನ ಮಾವ ಕೋಟ್ಯಾಧಿ ಪತಿ. ಇವನು ಅವನ ಮಗಳ ಕೋತಿಯಂತಹ ಹೋಮಿಯೋ ಪತಿ. ಕೆಲಸ ಏನು ಇಲ್ಲ ಎಂದ. ಸಕ್ಕತ್ ನಗು ಬ೦ತು. ಸಧ್ಯ ಅವನಿಗೆ ಔಷಧಿ ಕೇಳಿ ಸಮರಕ್ಕೆ ನಾಂದಿ ಹಾಡಲಿಲ್ಲ ಎಂಬುದೊಂದೇ ಖುಷಿ.

ಮನೆಗೆ ಹೋದೊಡನೆ ತುಂಬಾ ಹಸಿವು ಆಗಿತ್ತು. ಮತ್ತೆ ಅವಳಿಗೆ ಏನಾದರು ಕೇಳಿ ಬೈಯಿಸಿ ಕೊಂಡು ಸಮರಕ್ಕೆ ನಾಂದಿ ಹಾಡುವುದಕ್ಕಿಂತ ನಿನ್ನೆಯ ಇಡ್ಲಿ ವಾಸಿ ಎಂದು ಹಸಿವನ್ನು ನೀಗಿಸಿದೆ.

Saturday, April 30, 2011

ಹೆಸರಿನ ಹುಚ್ಚು ....

ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ. ಮತ್ತೆ ಕೆಲ ಸಮಯದ ನಂತರ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂಬ ಕೂಗು. ಆ ಹುಡುಗ ಬಂದು ಕ್ಲೀನ್ ಮಾಡಿ ಹೋದ. ಮಂಜ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದ. ಅದೇಕೋ ಗೊತ್ತಿಲ್ಲ ನನ್ನ ಹೆಸರಿನಲ್ಲಿರುವ ಜನರು ಬರೀ ಇಂತಹ ಕೆಲಸದಲ್ಲೇ ಇರುವುದೇಕೆ ಎಂದು ಯೋಚಿಸತೊಡಗಿದೆ. ಇನ್ನೂ ತುಂಬಾ ಸಿನೆಮಾಗಳಲ್ಲಿ ನನ್ನ ಹೆಸರಿನ ವಿಲನ್ ಇರುವುದನ್ನು. ಕಡೆಗೆ ನಾನೇ ತಪ್ಪಾಗಿ ಸಾಫ್ಟ್‌ವೇರ್ ಫೀಲ್ಡ್ ಗೆ ಬಂದೆನೇನೋ ಎಂದು ಕೂಡ ಅನ್ನಿಸಿದ್ದು ಉಂಟು. ಹೀಗೆ ಘಾಡವಾಗಿ ಯೋಚನೆಗೆ ಮುಣುಗಿದ ನನ್ನನ್ನು ಮಂಜ ಏನು ಯೋಚನೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದ. ಅವನಿಗೆ ನನ್ನ ಹೆಸರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಹೇಳಿದೆ.

ಲೇ ಹೆಸರಿಗೆ ಅನ್ವರ್ಥಕವಾಗಿ ನಿನಗೆ ಕೆಲಸ ಅಂತ ಬೇಕಾಗಿದ್ದರೆ ನೀನು ದನ ಕಾಯಲು ಹೋಗಬೇಕಿತ್ತು ಅಥವಾ ದನದ ಡಾಕ್ಟರ್ ಆಗಬೇಕಿತ್ತು ಎಂದು ಗಹ ಗಹಿಸಿ ನಕ್ಕ. ನಿನಗೆ ಹೇಗಿದ್ದರು ಒಂದು ಕೊಂಬು(ಗೋಪಾ"ಲ್") ಬೇರೆ ಇದೆ ಎಂದ. ನಾನು ಒಮ್ಮೆ "ಓಂ" ಸಿನಿಮಾ ನೋಡಿ ಬಂದು ಸಕ್ಕತ್ತಾಗಿದೆ ಎಂದು ಹೇಳಿದೆ. ಅದನ್ನು ಕೇಳಿಸಿಕೊಂಡು ಪಾಪ ಪಕ್ಕದ ಮನೆ ಅಜ್ಜಿ ಒಬ್ಬರು ಅದನ್ನು ದೇವರ ಸಿನಿಮಾ ಎಂದುಕೊಂಡು ಹೋಗಿ ನೋಡಿ ಬಂದಿದ್ದರು. ಹೆಸರಿಗೆ ಅನ್ವರ್ಥಕವಾಗಿ ಎಲ್ಲರೂ ಇರುವುದಿಲ್ಲ ಎಂದ.

ನಿನ್ನ ಹೆಸರು ಅಲ್ಲಿ ಬಳಕೆ ಆಗೋದಕ್ಕೆ ಕಾರಣ ಏನೆಂದರೆ, ಮೊದ ಮೊದಲು ಮಕ್ಕಳಿಗೆ ದೇವರ ಹೆಸರನ್ನು ಇಡುತ್ತಿದ್ದರು. ಹೀಗಾಗಿ ನನ್ನ ಹೆಸರು ಕೂಡ ತುಂಬಾ ಫೇಮಸ್. ನಿನ್ನ ಹೆಸರಿನ ಹಾಗೆ ನನ್ನ ಹೆಸರು ಕೂಡ ಬಳಕೆ ಆಗುತ್ತೆ ಎಂದ. ಗಲ್ಲಿ ಗಲ್ಲಿಗಳಲ್ಲಿ ಮಂಜುನಾಥ ಎಂಬ ಹೆಸರಿನ ಜನರಿದ್ದಾರೆ ಸುಮ್ಮನೇ ಯೋಚಿಸಬೇಡ ಎಂದ. ನಿನಗೆ ಗೊತ್ತಾ ಮಂಡ್ಯದಲ್ಲಿ ನನ್ನ ಗೆಳೆಯ ಮಾಧವನಿಗೆ ಮಹಾದೇವ ಎಂದು ಅನ್ನುತ್ತಿದ್ದರು ಎಂದ.

ಆದರೆ ನನ್ನ ಹೆಸರಿನಿಂದ ತುಂಬಾ ಜನ ವ್ಯಂಗ್ಯ ಕೂಡ ಮಾಡುತ್ತಾರೆ ಎಂದೆ. ಏನು ಅಂತ ಅಂದ. ಕೆಲ ಗೆಳೆಯರು "ಗೋಪಿ ಆಯಿತ ಕಾಫೀ" ಎಂದು ಹೇಳುತ್ತಿದ್ದ. ಅದರಲ್ಲಿ ಒಬ್ಬ ತುಂಬಾ ಅತಿರೇಕವಾಗಿ "ಗೋಪಿ ಉದುತ್ತಾನೆ ಪೀಪೀ" ಎಂದು ಹೇಳುತ್ತಿದ್ದ ಎಂದು ಬೇಜಾರಿನಲ್ಲಿ ಹೇಳಿದೆ. ಕೆಲ ಬಾರಿ ಗೋಪಾಲ್ ಜರ್ದ್, ಗೋಪಾಲ್ ಟೂತ್ ಪೌಡರ್ ಎಂದೆ.

ನೀನು ಸಿನಿಮಾ ಆಕ್ಟರ್ ಗಳು ಹೆಸರು ಬದಲಾಹಿಸಿದ ಹಾಗೆ ಬದಲಾಯಿಸಿಬಿಡು ಎಂದ. ನಾನು ಅದು ಹೇಗೆ ಸಾಧ್ಯ ಎಂದೆ. ಈಗ ಎಲ್ಲವೂ ಸಾಧ್ಯ ಒಂದು ಕೋರ್ಟ್ನಲ್ಲಿ ಅರ್ಜಿ ಗುಜರಾಯಿಸಿದರೆ ಸಾಕು. ಆಮೇಲೆ, ಒಂದು ಪೇಪರ್ ನಲ್ಲಿ ಜಾಹೀರಾತು ಕೊಟ್ಟರೆ ಸಾಕು ಎಂದ. ಮೊದಲನೆ ಬಾರಿ ನಿನ್ನ ಹೆಸರು ಕೂಡ ಲೈಮ್ ಲೈಟ್ ಗೆ ಬಂದ ಹಾಗಾಗುತ್ತೆ ಎಂದ.

ನಿನಗೆ, ಹೆಸರಿಗೆ ಆಗುವ ಶೋಷಣೆಯ ಒಂದು ರಸವತ್ತಾದ ಕತೆ ಹೇಳುತ್ತೇನೆ ಕೇಳು. ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಸೋಮಶೇಖರ ಎಂಬ ಗೆಳೆಯ ಇದ್ದ. ಅವನಿಗೆ ನಾವೆಲ್ಲರೂ ಸೋಮ ಎಂದು ಅನ್ನುತ್ತಿದ್ದೆವು. ಅವನು ಅವಳ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಅವಳು ಕೂಡ ಅವನನ್ನು ಪ್ರೀತಿಸುತ್ತಿದ್ದಳು. ಅವಳು ಅವನನ್ನು ಸೋಮ ಎಂದೆ ಸಂಭೋದಿಸುತ್ತಿದ್ದಳು. ಅವರಿಬ್ಬರಿಗೆ ಮದುವೆ ಆಯಿತು. ಅವಳು ಮದುವೆ ಆದ ಮೇಲೂ ಹಾಗೆ ಅನ್ನುತ್ತಿದ್ದಾಗ ಒಬ್ಬ ಹಿರಿಯರು ಹಾಗೆಲ್ಲಾ ಅನ್ನಬಾರದು, ರೀ ಹಚ್ಚಿ ಮಾತನಾಡಬೇಕು ಎಂದು ಹೇಳಿದರು. ಆಗಿನಿಂದ ಅವಳು ರೀ ಎಂದು ಸೇರಿಸಿ ಸೋಮನನ್ನು "ಸೋಮಾರಿ" ಮಾಡಿಬಿಟ್ಟಿದ್ದಳು. ಅವನು ಹೇಳುತ್ತಿದ್ದಂತೆ ಬಾಯಲ್ಲಿರುವ ಕಾಫೀ ಅನಯಾಸವಾಗಿ ಹೊರಗಡೆ ಬಂತು.

ಜನರಿಗೆ ವ್ಯಂಗ್ಯ ಮಾಡೋದಕ್ಕೆ ಒಂದು ವಿಷಯವಿದ್ದರೆ ಸಾಕು, ಅದಕ್ಕೆ ಹೆಸರು ತುಂಬಾ ಬಳಕೆ ಆಗುತ್ತೆ ಅಷ್ಟೇ ಎಂದು ಸಮಾಧಾನ ಹೇಳಿದ. ನನಗು ಅವನು ಹೇಳಿದ್ದು ಸರಿ ಅನ್ನಿಸಿತು. ಕಡೆಗೆ ಮಂಜ ಲೇ ಹಾಗೆ ಹೊರಟರೆ ಹೇಗೆ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂದು ವ್ಯಂಗ್ಯದ ಮಾತು ಆಡಿದ. ಕಾಫೀ ಮುಗಿಸಿ ಮನೆಗೆ ಬಂದೆವು.

ಒಮ್ಮೆ ನಾನು ಮತ್ತು ನನ್ನ ಮಡದಿ ದಾವಣಗೆರೆಗೆ ನೆಂಟರ ಮನೆಗೆ ಹೋಗಿದ್ದೆವು. ಆಗ ಒಬ್ಬ ಅಜ್ಜಿ ಪುಟ್ಟಿ ಎತ್ತಿ ತಾ ಎಂದರು. ನಾನು ಗಾಬರಿ ನನ್ನ ಹೆಂಡತಿಯನ್ನು ಹೇಗೆ ಎತ್ತಲಿ ಎಂದು. ಮತ್ತೆ ಸೆಗಣಿ ಪುಟ್ಟಿ ತಾ ಎಂದರು. ನನ್ನ ಹೆಂಡತಿಗೆ ಹೇಳುತ್ತಿದ್ದಾರೆ ಎಂದು ಸುಮ್ಮನೇ ಇದ್ದೆ. ನನ್ನ ಹೆಂಡತಿಗೆ ಚಿಕ್ಕಂದಿನಿಂದ ಪುಟ್ಟಿ ಎಂದೆ ಎಲ್ಲರೂ ಅನ್ನುತ್ತಾರೆ. ಕಡೆಗೆ ರೀ ಅದನ್ನು ಎತ್ತಿ ಕೊಡಿ ಎಂದು ಒಂದು ಪುಟ್ಟಿ(ಬುಟ್ಟಿ) ತೋರಿಸಿದಳು ಮಡದಿ, ನಾನು ಎತ್ತಿ ಕೊಟ್ಟೆ. ಆಮೇಲೆ ತಿಳಿಯಿತು ಅವರು ಬುಟ್ಟಿಗೆ ಪುಟ್ಟಿ ಅನ್ನುತ್ತಾರೆ ಎಂದು.